Pages

Tuesday, December 31, 2013

ಜೋಚುಟುಕುಗಳು - ೪

ಜನವರಿ ಒಂದು
ಕುಣಿದು ಕುಪ್ಪಳಿಸದಿರಿ ಹಾದಿ ಬೀದಿಯಲಿ ಹೊಸ(?) ವರುಷದಿ
ಸೇವಿಸದಿರಿ ಮದ್ಯ ಮಾಂಸ ಕೇಕು ಪಿಜ್ಜಾ ಮಧ್ಯರಾತ್ರಿಯಲಿ
ಪಾಶ್ಚಿಮಾತ್ಯರ ಹೊಸವರ್ಷಕ್ಕಿಲ್ಲ ಯಾವುದೇ ತಳಹದಿ
ಉಳಿಸಿ ಬೆಳೆಸಿ ಭಾರತೀಯ ಸಂಸ್ಕೃತಿಯ ಸದಾಕಾಲದಲಿ
ಭಾರತೀಯರಿಗೆಲ್ಲ ಹೊಸವರ್ಷದ ಆರಂಭ ಯುಗಾದಿ

ತಾಮಸ ಕಾಲದಲ್ಲಿ ಯಾವುದೇ ಆರಂಭವಿಲ್ಲ ತಿಳಿದಿರಲಿ
ಅರುಣೋದಯಕ್ಕೆ ದಿನದ ಬದಲಾವಣೆ ನೆನಪಿರಲಿ
ಬಿಟ್ಟು ಹೋಗಬೇಡಿ ಹಿರಿಯರು ಹಾಕಿಕೊಟ್ಟ ಹಾದಿ
ನೀವಾಗಬೇಡಿ ಈ ಆಚರಣೆ ವಿರೋಧಿಗೆ ಪ್ರತಿವಾದಿ
ಪಂಚ್: ರಾತ್ರಿ ಆರಾಮಾಗಿ ಮಲಗಿ ಸಿಹಿಗನಸಿನಲಿ ತೇಲಿ 

ಶಾಸಕರ ವಿದೇಶ ಪ್ರವಾಸ
ಬಡಿದಿದೆ ಬರ ೯೦ಕ್ಕೂ ಹೆಚ್ಚು ತಾಲ್ಲೂಕುಗಳಿಗೆ
ಪ್ರಯಾಣ ಹೊರಟಿದ್ದಾರೆ ನಮ್ಮ ಶಾಸಕರು ವಿದೇಶಗಳಿಗೆ
ಕಿವಿಗೊಡದೆ ರಾಜ್ಯಪಾಲರ ಮಾತುಗಳಿಗೆ
ಅವರ್ಯಾಕೆ ತೆರಳಬಾರದು ಸ್ವಕ್ಷೇತ್ರಗಳಿಗೆ
ಸ್ಪಂದಿಸಬಾರದು ಜನರ ನೋವು ನಲಿವುಗಳಿಗೆ
ಬರದೇ ಸರಿಯಾದ ಬುದ್ದಿ ನಮ್ಮ ಜನಗಳಿಗೆ
ಓಟು ಕೊಟ್ಟರೆ ಇಂತಾ ಖದೀಮರುಗಳಿಗೆ
ಮತ್ತೂ ತುಂಬುವುದು ತೆರಿಗೆ ಹಣ ಅವರ ಜೇಬುಗಳಿಗೆ
ಪಂಚ್: 'ಕೈ'ಲಿದ್ದರೆ ಅಧಿಕಾರದ ಚುಕ್ಕಾಣಿ, ಖಜಾನೆ ಖಾಲಿಯಾಗಿ ತುಂಬುವುದು 'ಕೈ'ಯಲ್ಲಿರುವ ಜೋಳಿಗೆ!

ನ ಮೋ
ಕೋರ್ಟು ನೀಡಿದೆ ಮೋದಿಗೆ ಕ್ಲೀನ್ Chit
ಕೋಮು ಗಲಭೆ ದೋಷಾರೋಪಣೆಗಳಿಂದ ಮೋದಿ Exit
ಜಾಕಿಯ ಮತ್ತೆ ಸಲ್ಲಿಸಲಿದ್ದಾರಂತೆ Affidavit
ಇದರಿಂದಾಯಿತು ಮೋದಿ ಜನಪ್ರಿಯತೆ ಮತ್ತಷ್ಟು Hit
ಮೋದಿ ನಿರಪರಾಧಿಯೆಂದು ಕಾಂಗ್ರೆಸ್ ಮಾಡಿಕೊಳ್ಳಲಿ Admit

ಮೋದಿ ದ್ವೇಷಿಗಳು ಗುಜರಾತ್ ಗೆ ನೀಡಿ Visit
ಮತ್ತೂ ನಡೆಸಿರಿ ಯಾವುದೇ ಸರ್ಕಾರಿ ಕಚೇರಿ Audit
ಮೋದಿ ಮಾಡಿಸಿಲ್ಲ ಸರ್ಕಾರಿ ಪತ್ರಗಳ Edit
ಪಂಚ್: ಮೋದಿಯೊಬ್ಬರೆ ಪ್ರಧಾನಮಂತ್ರಿ ಪದವಿಗೆ Fit
*******

Saturday, December 28, 2013

ವಂದ ನಗಳು


ವಂದ (ವಂದನ)ಳೊಂದಿಗೆ ಹತ್ತಿದ್ದೆ ಬಸ್ಸು, ಊರಿಗೆ ಹೋಗಲು
ನೊಂದಜೀವಿಯಾಗಿದ್ದ ಅವಳು ಬಹಳ ಬೇಸರಿಸಿಕೊಂಡಿದ್ದಳು
ಮಾತಾದಡಿಸಿದಷ್ಟು  ಹೆಚ್ಚಾಗಿತ್ತು ಬಿಕ್ಕಿನ ಅಳು
ಕೇಳಿ ಸಾಕಾಗಿತ್ತು ನನಗೂ ಅವಳ ಗೋಳು
ಒಮ್ಮೆ ನಗಿಸಿದರೆ ಚೂರು ಸರಿಹೋದಾಳು -
ಎಂದೆಣಿಸಿ ತಡಕಾಡಿದೆ, ಜೋಕೊಂದು ಹೇಳಲು
ಆಗ ಕಂಡಿದ್ದೆ ರಾಜಹಂಸದಲ್ಲಿ ಬರೆದಿದ್ದ "ವಂದನಗಳು"
ಅದ ತೋರಿಸಿದಾಗ ಅವಳು ನಿಜವಾಗಿ ನಕ್ಕಳು

ಪಂಚ್ : ಅತ್ತ ಕನ್ನಡದ ಕೊಲೆ
            ಇತ್ತ ನಗುವಿನ ಅಲೆ
ನನಗಾಗಿತ್ತು ಸಂಕಟ ಸಂತೋಷ ಒಮ್ಮೆಲೆ
*******

Wednesday, December 25, 2013

ದೆಹಲಿ ರಾಜಕೀಯ


ಅಂದು: ಡಿ. ೦೮, ೨೦೧೩
'ಹರ್ಷ' ವರ್ಧಿಸಿದರೂ ಪೂರ್ತಿಯಾಗಿ ಅರಳದ ಕಮಲ
ತೊಳೆದರೂ ಪೂರ್ತಿ ಅಂಟು (ಎಂಟು!) ಹೋಗದ 'ಕೈ'ಗಂಟಿದ್ದ ಮಲ
'ಪೊರಕೆ'ಗಳು ಸಾಕಾಗಲ್ಲಿಲ್ಲ ಸ್ವಚ್ಛಗೊಳಿಸಲು ರಾಜಧಾನಿಯ ನೆಲ
ಕೈ, ಕಮಲದ ಹಂಗು ಬೇಡೆಂದ ಕೇಜ್ರೀವಾಲ!

ಇಂದು: ಡಿ. ೨೫, ೨೦೧೩
ದೆಹಲಿಯಲ್ಲಿ ವಾತಾವರಣ ಆಗಿತ್ತು ಬಹಳ ಶೀತಲ
ಅಧಿಕಾರದ ಬಿಸಿ ಏರಿಸಿಕೊಳ್ಳಲು AAP ಕೆಡಿಸಿಕೊಂಡಿತು ತನ್ನ ಕುಲ
'ಕೈ'ಯಲ್ಲಿ ಪೊರಕೆ ಹಿಡಿಸಲು ಸಫಲಳಾದಳು ಗೋಮುಖದ 'ಶೀಲ'
ಸಿದ್ದಗೊಳ್ಳುತ್ತಿದೆ 'ಅರವಿಂದ'ನ ಪ್ರಮಾಣಕ್ಕೆ ರಾಮ'ಲೀಲ'

ಪಂಚ್: ಮತದಾರರೇ
ಹೋಗಲಾಡಿಸಿ ನಿಮ್ಮ ಚಿತ್ತ ಚಂಚಲ
AAPಗೆ ಮತ ನೀಡಬೇಡಿ ಬರುವ ಸಲ (ಲೋಕಸಭೆ ಚುನಾವಣೆ)
ಎಲ್ಲೆಲ್ಲೂ ಅರಳಲಿ (Mission 272+) ಕಮಲ
'Modi'fy ಆದಾಗ ಭಾರತವಾಗುವುದು ಕೋಮಲ!
******* 

Tuesday, December 24, 2013

ಜೋಚುಟುಕುಗಳು - ೩


ಮೊಬೈಲ್ ಬಿಲ್ಲು

ಬಾರಿಸಿತ್ತು ನಮ್ಮ -
ಮನೆ ಕಾಲಿಂಗ್ ಬೆಲ್ಲು
ಬಂತು ಇವಳ ಮೊದಲ -
ಮೊಬೈಲ್ ಬಿಲ್ಲು
ತುಂಬಿತ್ತು ಅದರಲಿ -
ನಂ ನಂಬರ್ರೇ ಫುಲ್ಲು
ಒಳಗೊಳಗೆ ಹ್ಯಾಪಿ -
ಆಗಿತ್ತು ನಂ ದಿಲ್ಲು
ಮಾರನೆ ದಿನವೇ -
ಹೋದೆ ಕಟ್ಟಲು ಬಿಲ್ಲು
ದಾರಿಯಲ್ಲಿ ಬಿದ್ದೆ -
ಎಡವಿ ಪಾಯದ ಕಲ್ಲು
ದೇವರ ದಯೆ ಮುರಿಲ್ಲಿಲ್ಲ -
ಯಾವುದೇ ಹಲ್ಲು
ಪರ್ವಾಗಿಲ್ಲ, ಏನಾಗಿಲ್ಲ ಅನ್ಕೊತ -
ಹೋಗಿ ಸಾಲಿನಲಿ ನಿಲ್ಲು
ಮುಂದಿದ್ದವ ಹೊಡೆಯುತ್ತಿದ್ದ ಗಬ್ಬುನಾತ -
ಕುಡಿದಿದ್ದ ಅನ್ಸತ್ತೆ ಆಯಿಲ್ಲು
ಒಟ್ನಲ್ಲಿ ಬಿಲ್ ಕಟ್ಟಿ ಮನೆಗ್ -
ಬರೋಷ್ಟರಲ್ಲಿ ಆಗಿದ್ದೆ ನಾ ಡಲ್ಲು !!


(ವೋಲ್ವೋ ಬಸ್ ನಲ್ಲಿ ಪಕ್ಕ ಕೂತು ಮಾತನಾಡಿಸಲು ಅಂಜುತ್ತಿದ್ದ ಹುಡುಗನ ಬಗ್ಗೆ ಗೆಳತಿ! ಹೇಳಿದಾಗ ಬರೆದದ್ದು )

ಪಕ್ದಲ್ ಕೂತಿರೋ ಚೆಲ್ವ
ಯಾಕೋ ಮಾತಾಡುಸ್ತಿಲ್ಲ ಅಲ್ವ?
ನೀನೆ ಕೇಳು, ತಿಂತ್ಯ ಹಲ್ವ?
ಅಂದ್ರೆ ಅವ, ಕೊಡು ಮೆಲ್ವ (ಮೆಲ್ಲುವ)
ಆಗ ತೋರ್ಸು ನಿನ್ ಗಲ್ವ (ಗಲ್ಲವ)
ಯಾರ್ಗು ಕಾಣ್ಸೋಲ್ಲ, ಅದು ವೋಲ್ವ !!

10:50PM - 9:15PM = ??

ನಾನಂದೆ ನೂರು ಮಿನಿಟು
ಅವಳಂದಳು ತೊಂಬತೈದು ಮಿನಿಟು
ಶುರುವಾಯಿತು ನನ್ನದೊಂದು ಚುಟುಕು
ಲೆಕ್ಕದಲಿ ನಾ ಬಹಳ ವೀಕು
ಆಗಿರ್ಲ್ಲಿಲ್ಲ question paper ಲೀಕು
supervisor ಆಗಿದ್ದವ ಟಾಕು-ಠೀಕು
ಹಾಗಾಗಿ ಆಗಿದ್ದೆ exam hallನಲ್ಲಿ  ಲಾಕು
ಎಲ್ಲಾ ಗೊತ್ತಿರೋನ್ ತರ ಕೊಡ್ತಿದ್ದೆ ಪೋಸು, ಆದ್ರೆ ಅದು ಬರೀ ಫೇಕು
result ಬಂದಾಗ ಆಗಿದ್ದೆ ನಾ ಬಾರಿ ಜೋಕು
ಅಮೇಲ್ supplementary ಬರ್ದ್ ತೊಗೊಂಡೆ passing ಮಾರ್ಕು !!

ಪಂಚ್ : ನಂದ್ copy ಮಾಡಿದವ್ನ್ ಪಡ್ದಿದ್ದ Rank-u :P
                                               
*******

Wednesday, December 18, 2013

ಸುಧಾಮಂಗಳ

ಪೇಜಾವರ ವಿಶ್ವೇಶತೀರ್ಥ ಶ್ರೀಗಳ
ಮೂವತ್ತೆರಡನೇ ಸುಧಾ ಮಂಗಳ
ನಡೆದದ್ದು ವಿದ್ಯಾಪೀಠದ ಅಂಗಳ
ನೆರೆದಿತ್ತು ಜಾತ್ರೆಯ ಜನ ಜಂಗುಳ(ಳಿ)
ನಡೆದಿತ್ತು ಪರೀಕ್ಷೆ ವಿದ್ಯಾರ್ಥಿಗಳ
ಎಲ್ಲೆಲ್ಲೂ ಪಸರಿತ್ತು ನ್ಯಾಯಸುಧೆಯ ಪರಿಮಳ
ಜೊತೆಗೆ ಸಾಗಿತ್ತು ತತ್ವಜ್ಞಾನ ಸಮ್ಮೇಳ(ನ) -
ಮತ್ತು ಜನ್ಮಶತಮಾನೋತ್ಸವ ವಿದ್ಯಾಮಾನ್ಯ ಶ್ರೀಗಳ
ಶ್ರೀಗಳ ಇಚ್ಚೆಯಂತೆ ಮಾಡಿದರು ನಾರಾಯಣ ಮಂತ್ರದ ಜಪಗಳ
(ಇದರಿಂದಾಯಿತು ಕಲಿಗೆ ಉಪಟಳ!)
ಹಾಡಿ ಹೊಗಳಿದರು ವಿದ್ಯಾಮಾನ್ಯ ಗುರುಗಳ
ವರ್ಣಿಸಲಾಗದ ಆನಂದ-ಭಾಗವಹಿಸಿದವರೇ ಧನ್ಯ-ಇನ್ನಷ್ಟು ನಡೆಯಲಿ ಇಂಥ ಸುಧಾಮಂಗಳ!!




Friday, December 13, 2013

'ಹರಿ'ದ ಮನಸಿನ ವಿಚಾರ ಧಾರೆ


ಯಾರ್ಗೆ ಎಷ್ಟು ಅರ್ಥ ಆಗತ್ತೋ ಯಾರಿಗೂ ಗೊತ್ತಿಲ್ಲ!

ಮನಸ್ಸಿಗೆ ಅನ್ನಿಸಿದ್ದನ್ನು ಶೇಕಡ ೧೦೦ ರಷ್ಟು ಕಾರ್ಯಗತ ಮಾಡುವವನೇ ಮಹಾತ್ಮ . 

ಯಾವ ಕೆಲಸವೇ ಆದರೂ ಇಷ್ಟವಿಲ್ಲದೇ ಬಿಟ್ಟು ಹೋಗುವುದಕ್ಕೂ ಹೆದರಿ ಬಿಟ್ಟು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲವೇ? 

ಹೆಚ್ಚು ಮಾತು ಕಡಿಮೆ ಕೆಲಸ - ಮಾಡಿದರೆ ಆಗುವೆ ನೀ ಕಸ! 

ಯಾರಿಗೆ ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಇರುವುದೋ ಆ ಕೆಲಸ ಅವರೇ ಮಾಡಿದರೆ ಉತ್ತಮ. 

ಹಣ ಸಂಪಾದನೆ ಜೀವನೋಪಾಯಕ್ಕೇ ಹೊರತು, ಹಣ ಸಂಪಾದನಯೇ ಜೀವನವಲ್ಲ! ಈ ಸತ್ಯದ ಅರಿವು ನನಗೆ ಇಷ್ಟು ಬೇಗ ಆದದ್ದು ಸಂತೋಷದ ವಿಷಯವಾದರೂ ಅದು ವಿಪರ್ಯಾಸವೇ ಸರಿ. 

ಪರರಿಗೆ ಪರಿಚಯಿಸಿಕೊಡುವುದಕ್ಕೇ (ನಿನಗೆ ಬೇಡವಾಗಿದ್ದರೂ) ಹೆಸರು ಖ್ಯಾತಿ ಹೊಂದಿರು. 

ಅಹಂಕಾರ ಸ್ವಾಭಿಮಾನ - ಎರಡೂ ಬಿಟ್ಟಿರು!

ನೌಕರಿಯಲ್ಲಿ ಪದೋನ್ನತಿ ಪಡೆದರೆ ಪಾರ್ಟಿ.. ಆಧ್ಯಾತ್ಮಿಕದಲ್ಲಿ ಪದೋನ್ನತಿ (ಆಚಾರ್ಯರ ಒಂದು ಗ್ರಂಥದ ಮಂಗಳ ಮಾಡಿದರೆ) ಪಡೆದರೆ ಜೀವನ ಪಲ್ಟಿ! [ಜೀವ ನ ಸಾಧನೆಗಿಂತ ಜೀವ ನ ಸಂಪಾದನೆಯೇ ಅತಿ ಮುಖ್ಯ! ಆಲ್ವಾ? ]

ಜನರು ಪ್ರೀತಿಸುವುದು ನಿನ್ನ ಸ್ವಭಾವವನ್ನಲ್ಲ! ಅವರು ಪ್ರೀತಿಸುವುದು ಜ್ಞಾನ ಸಂಪತ್ತು ಅಥವಾ ವಿತ್ತ ಸಂಪತ್ತು. ನಿನ್ನಲ್ಲಿರುವ ಜ್ಞಾನದಿಂದ ವಿತ್ತ ಆರ್ಜನೆಯಾಗುತ್ತಿದ್ದರೆ ಮಾತ್ರವೇ ಆ ಜ್ಞಾನಕ್ಕೆ ಬೆಲೆ. ಹಾಗಾಗಿ ಹೆಚ್ಚಾಗಿ ಜನ ನಿನ್ನ ಮೆಚ್ಚುವುದು ನಿನ್ನಲ್ಲಿರುವ ವಿತ್ತ ಸಂಪತ್ತಿನ ಸಲುವಾಗಿಯೇ!

ಮನಸ್ಸು ಒಳ್ಳೆಯ ದಾರಿಯನ್ನು ತೋರುತ್ತದೆ ಹಾಗೆಯೇ ಕೆಟ್ಟ ದಾರಿಯನ್ನು ತೋರುತ್ತದೆ. ಒಳ್ಳೆ ಕಡೆ ಹೋಗೋದಕ್ಕೆ ಪ್ರಚೋದನೆಯನ್ನು ಕೊಡುತ್ತದೆ. ಆದರೆ ಸನ್ಮಾರ್ಗದಲ್ಲಿ ನಡೆಯಲು ಹಾತೊರೆದಾಗ, ಸುತ್ತಲಿನ ಬಂಧು ಮಿತ್ರರ ಕೈಯಲ್ಲಿ ಉಪದೇಶವೆಂಬ ಹಗ್ಗ ಕೊಟ್ಟು ನಿನ್ನನ್ನು ಹಿಂದಕ್ಕೆ ಎಳೆಸುತ್ತದೆ. 

ನಿನ್ನ ಬದುಕು ನಿನ್ನದಲ್ಲ, ಪರರದು - ಇದೇ ಇಂದಿನ ದಿನದ ಪರೋಪಕಾರಾರ್ಥಮಿದಂ ಶರೀರಂ!

ಗೂಡಲ್ಲಿ ಚೇಳಿದೆ, ಕೈ ಇಟ್ಟಲ್ಲಿ ಅದು ಕಚ್ಚುತ್ತದೆ ಎಂದು ಗೊತ್ತಿದ್ದರೂ ಮತ್ತೊಬ್ಬರ ಸಂತೋಷಕ್ಕಾಗಿ ಗೂಡಲ್ಲಿ ಕೈಯಿಟ್ಟು ಚೇಳು ಬಳಿ ಕುಟುಕಿಸಿಕೊಳ್ಳುವುದು ಮೂರ್ಖತನದ ಪರಮಾವಧಿಯಾದರೂ, ಅದೇ ಇಂದಿನ ಜೀವನ ಶೈಲಿ!! ಕಚ್ಚಿಸಿಕೊಂಡವ ಬಾಗುಂದಿ ಎಂದೇ ಹೇಳಬೇಕು! 

ಧರಿಸುವ ವಸ್ತ್ರ ಇರುವ ಜಾಗ ಬರುವ ಹಣ ಹುಟ್ಟುವ ಮಗು - ಸದಾ ಇದೇ ಚಿಂತೆ! ಇನ್ನೇಷ್ಟು ಜನ್ಮವೋ ಇದರಿಂದ ಹೊರಬರಲು??

ಎಲ್ಲವನ್ನೂ ಬಿಟ್ಟು ಹೋಗುವುದಕ್ಕೆ ಮಹಾಪರ್ವದ ವಿದ್ಯಾಧರನೊಬ್ಬನಿಂದಲೇ ಸಾಧ್ಯ![ಅದು ಧಾರಾವಾಹಿಯಲ್ಲಿ ಮಾತ್ರ]. 

ಜಾತಿ ಯಾವುದಾದರೇನು ರಾಶಿ ಬಲು ಮುಖ್ಯ!

ಕಾಲಿಗೆ ಬಿದ್ದಾದರೂ ಸರಿ ಕೆಲಸ ಗಿಟ್ಟಿಸುಕೋ - ಇಷ್ಟವಿದೆಯೋ ಇಲ್ಲವೋ ಕೇಳುವವರ್ಯಾರು ?

ತಂದೆ ತಾಯಿಯರ ವಚನವನ್ನು ಎಂದಿಗೂ ಕೇಳದೇ ಇರಬೇಡ. ಆ ಸಮಯಕ್ಕೆ ಅದು ನಿನಗೆ ಸರಿ ಕಂಡು ಬರದಿದ್ದರೂ ಭವಿಷ್ಯದಲ್ಲೊಂದು ದಿನ [ನನಗೆ ಸರಿಯಾಗಿ ಏಳು ವರ್ಷ ಬೇಕಾಯಿತು] ಅದು ಹೇಗೆ ಸರಿ ಎಂಬುದು ನಿನಗೆ ಅರ್ಥವಾಗುತ್ತದೆ! 

'Dell'ಲ್ಲಿಯಲ್ಲಿ ಅತಂತ್ರ ಸ್ಥಿತಿ!

(೧). ಯಸ್ಯಾಸ್ತಿ ವಿತ್ತಂ ಸ ನರಃ ಸ ಕುಲೀನಃ ..... (೨)..... ಆಯೆ ದುಃಖಮ್ ವ್ಯಯೇ ದುಃಖಮ್ ಧಿಕ್ ಅರ್ಥಃ ಕಷ್ಟಸಂಶ್ರಯಃ (೩) ಗಾಳಿ ಬಂದ ಕಡೆ ತೂರಿಕೋ 

ರಾಜ್ಯಪಾಲರಿಗಿರುವ ಬುದ್ದಿ ಹಂಸರಾಜರುಗಳಿಗೇಕಿಲ್ಲ ?

Last but not least,
ಜೀವನದ ಒಂದು ಘಟ್ಟದಲ್ಲಿ ನೀನು ಪರಾವಲಂಬಿ ಅರ್ಥಾತ್ ನಿನ್ನ ಯಾವ ಸ್ವಂತ ನಿರ್ಧಾರಕ್ಕೂ ಬೆಲೆಯಿರುವುದಿಲ್ಲ. [ಒಂದರ್ಥದಲ್ಲಿ ಇಡೀ ಜೀವನವೇ ಪರಾವಲಂಬನ - ಆ ಪರ ವ್ಯಕ್ತಿ ಭಗವಂತನಾಗಬೇಕೆಂಬುದೇ ನನ್ನಾಶಯ]

ಈಗ ಮತ್ತೊಮ್ಮೆ ಮೊದಲನೇ ವಾಕ್ಯ ಓದಿ !!

*******

Sunday, September 8, 2013

ಜೋಚುಟುಕುಗಳು - ೨

ಏನಿಲ್ಲ - ಗೊತ್ತಿಲ್ಲ

ಇವಳಿಗೆ ಏನು ಹೇಳೆಂದರೂ - ನಿಲ್ಲ
ಏನು ಕೇಳಿದರೂ - ಗೊತ್ತಿಲ್ಲ
ಇವಳನ್ನ ಕಟ್ಟಿಕೊಂಡು ನನಗೆ -
ಗೊದು ತಪ್ಪಿದ್ದಲ್ಲ :D

ಸಿಂಗಾರ 

ನನ್ನವಳು ಮಾಡ್ಕೊತಿದ್ಲು ಸಿಂಗಾರ
ಕರೆದೆ - ಬಾರೆ ಇಲ್ಲಿ ಮುದ್ದು ಬಂಗಾರ
(ಮನಸಿನಲಿ ಅನ್ಕೊತ )
ಎಷ್ಟ್ ಪೌಡರ್ ಬಳ್ಕೊಂಡ್ರು ನಿನ್ ಬಣ್ಣ ಅಂಗಾರ :P

ಬಾಳು - ಗೋಳು

ಸುಂದರವಾಗಿತ್ತು ನನ್ನ ಬಾಳು
ಅಂಟಿಸಿಕೊಂಡಿರಲ್ಲಿಲ್ಲ ಯಾವುದೇ ಗೀಳು
ಅವಳನ್ನು ಮದುವೆಯಾಗಿ ಆದೆ ಹಾಳು
ಈಗ ನಾನೇ ನಮ್ಮನೆ ಆಳು
ಆಗಿದೆ ಜೀವನ ಪೂರ್ತಿ ಗೋಳು !!

ಹೈಕು - ಲೈಕು

ದಿನಬೆಳಗಾದರೆ ಪೆಟ್ರೋಲ್ ಪ್ರೈಸಲಿ ಹೈಕು
ಆಗುತ್ತಿದ್ದರೆ ಓಡಿಸುವುದು ಹೇಗೆ ಕಾರು/ಬೈಕು
ಆದರೂ ಯಾಕೋ ಜನ ಮಾಡುತ್ತಿಲ್ಲ ಸ್ಟ್ರೈಕು
ಪ್ರತಿಭಟನಕಾರರು ಹಿಡಿಯುತ್ತಿಲ್ಲ ಮೈಕು
ಹೈಕು ಆಗುತ್ತಿರುವುದು ಸ್ಟ್ರೈಕು ಆಗದಿರುವುದು ನನಗಾಗುತ್ತಿಲ್ಲ ಲೈಕು !!

ಚಿನ್ನ - ಗುನ್ನ

(ಬೀದಿಯಲ್ಲಿ ಬುಗುರಿ ಬಿಡುತ್ತಿದ್ದ ಹುಡುಗ ಎದುರು ಮನೆ ಹುಡುಗಿಯನ್ನು ಕಂಡು)
ಚಿನ್ನ.....
ಅಂತ ಕರೆಯಲೇ ನಿನ್ನ!
ಆಕೆ: ಕೊಡ್ಲ ನಿನ್ ಬುಗ್ರೀಲೆ ಒಂದ್ ಗುನ್ನ !

ಆಚಾರ

ಆಕೆ: ನಿಮುಗ್ ಗೊತ್ತಿಲ್ಲ ಸುಮ್ನಿರಿ,.. ಅವ್ರ ಮನೇಲಿ ತುಂಬಾ ಆಚಾರ
ಈಕೆ : ಅಯ್ಯೋ ನಂಗ್ ಗೊತ್ತಿಲ್ವೇನು, ನೀವ್ ಸುಮ್ನಿರಿ,..  ತಿಳ್ಕೊಂಡಿಲ್ಲ ಅವ್ರು ಯಾವ್ದೇ ವಿಚಾರ
ನಾನಂದೆ : ನೀವಿಬ್ರು ಮಾಡ್ತಿರೋದು ಅನಾಚಾರ, ದುರಾಚಾರ  !! :P
ಇಬ್ಬರು ಒಟ್ಟಾಗಿ : ಕೆಟ್ಟಿದ್ಯ ನಿಂಗ್ ಗ್ರಹಚಾರ?
ನಂಗ್ ಯಾಕ್ ಬೇಕು ಅನ್ಕೊತ - ಅಲ್ಲಿಂದ ಕಾಲ್ಕಿತ್ತು ಹೊರಟೆ ನಾ ಸಂಚಾರ :D


****************************** 

Thursday, August 15, 2013

ಮೊದಲ ಭೇಟಿ


ಇಂದು ಬೇಗ ಮುಗಿಸಿ ಬಂದೆ ಡ್ಯೂಟಿ
ಆಗಲು ಅವಳನು ಮೊದಲನೇ ಭೇಟಿ
ಹಿರಿಯರು ವಿಧಿಸಿದ್ದ ನಿಯಮ ದಾಟಿ

ನೋಡಿರಲ್ಲಿಲ್ಲ ಅವಳು ಬೆಂಗಳೂರು ಪ್ಯಾಟಿ
ಹಿಗ್ಗಿದಳು ನೋಡಿ ಜಯನಗರದ ಬ್ಯೂಟಿ
ಅಂದಳು, ನಮ್ಮ MTR ಐಸ್ ಕ್ರೀಂಗೆ ಇಲ್ಲ ಸಾಟಿ
ಆಗಲೇ ತಿಳಿಸಿದೆ ಹಳೇ ಹುಡುಗಿಯರ ಐಡೆಂಟಿಟಿ
ಜೋರು ಮಳೆಯಲಿ ಇಬ್ಬರು ನೆಂದಿದ್ದು ಗ್ಯಾರಂಟಿ

ಬಲವಂತಕ್ಕೂ ತಿನ್ನಲ್ಲಿಲ್ಲ ನಮ್ಮನೆ ರೋಟಿ
ಮನೆಗೆ ಡ್ರಾಪ್ ಮಾಡುವಾಗ ಕಾರಿನವನಿಗಿರಲ್ಲಿಲ್ಲ ಹತೋಟಿ
ದೇವರ ದಯೆ, ಆಗಲ್ಲಿಲ್ಲ ಯಾವುದೇ ಆಕ್ಸಿಡೆಂಟಿ
ಲೇಟಾದರೂ ಮನೆಯಲಿ ಬೈಯಲ್ಲಿಲ್ಲ ಆಂಟಿ
ಹೊರಡುವಾಗ ಜಾರಿ ಬಿದ್ದೆ, ಸದ್ಯ ಮುರಿಯಲ್ಲಿಲ್ಲ ಬೋಟಿ

ಇಷ್ಟು ದಿನ ಆಗಿದ್ದೆ ನಾ ಒಂಟಿ
ಹಳ್ಳಕ್ಕೆ ಬೀಳ್ತಾಯಿದೀನಿ ಆಗುತ್ತಾ ಜಂಟಿ

Monday, July 29, 2013

(B)ಬದಲಾವಣೆ ತರಲು (J)ಜನರಿಗೊಂದು ಕುಟುಕಿನ (P)ಪದಮಾಲೆ


ನಿದ್ದೆ ಇಲ್ಲದೆ ದೇಶದ ಬಗ್ಗೆ ಚಿಂತಿಸುವ ನನ್ನಂತ(?) ಕೋಟ್ಯಾಂತರ ಜನರ (B)ಬೆಳಗಿನ (J)ಜಾವದ ಕುಟುಕಿನ (P)ಪದಮಾಲೆಯಿದು. ಆ ಕೋಟಿಯಲ್ಲಿ ನೀವು ಒಬ್ಬರಾ? 

- ಆಗಿದ್ದರೆ ಇದನ್ನು ನಿಮ್ಮ ಫೇಸ್ ಬುಕ್ ಗೋಡೆ ಮೇಲೆ ಹಚ್ಚಿಕೊಳ್ಳಿ / ಹಂಚಿಕೊಳ್ಳಿ, ಯಾಕೆಂದರೆ ಓದಿದ ಮೇಲೆ ನಿಮಗೆಷ್ಟು ಖುಷಿ ಆಗುವುದೆಂಬ ಅರಿವು ನನಗಿದೆ, ಆ ಖುಷಿ ನಿಮ್ಮಂತ ಇನ್ನು ನೂರಾರು, ಸಾವಿರಾರು ಜನರಿಗೂ ಸಿಗಲಿ. 

- ಆಗಿರದ್ದಿದ್ದಲ್ಲಿ ಇನ್ನು ಮುಂದಾದರೂ ಈ ಬಗ್ಗೆ ಎಚ್ಚರವಹಿಸಿ, ಯಾಕೆಂದರೆ ದೇಶದ ಭವಿಷ್ಯವೇ ನಮ್ಮ ಭವಿಷ್ಯ.                                                 **********

ಕಾಂಗ್ರೆ(S), (S)ಪಿ, ಬಿ(S)ಪಿ, ತೃಣಮೂಲ ಕಾಂಗ್ರೆ(S), ಜೆಡಿ(S) - ಇವರೆಲ್ಲಾ (Se)ಕ್ಯುಲಾರ್ ಗಳು, ಜಾತ್ಯಾತೀತರು. 
ಹೌದುರೀ.. ರಾಜಕಾರಣದಲ್ಲಿ ಇವರುಗಳೇ 'ಜಾತಿ'ಯನ್ನು 'ಅತಿ'ಯಾಗಿ 'ತರು'ವವರು.

ಅದಕ್ಕೆ ನಿಮಗೆಲ್ಲ ನನ್ನದೊಂದು ಕಿವಿಮಾತು:

(B)ಬಿಟ್ಟುಬಿಡಿ (J)ಜಾತಿ (P)ಪದ
ಆಗತ್ತೆ ಆಗ ನಿಜ
(B)ಭಾರತದ (J)ಜನನ (P)ಪುನಃ
ಮತ್ತು ಆಗತ್ತೆ
(B)ಬದಲಾವಣೆ (J)ಜೊತೆಗೆ (P)ಪುನರ್ನಿರ್ಮಾಣ
ನಮಗ್ಯಾಕ್ರಿ ಬೇಕು ಈ
(B)ಬೀದಿ (J)ಜಗಳದ (P)ಪಾಡು
ಎಂದು ನೀವು 'ಕೈ'ಕೊಟ್ಟರೆ
'ಕಾಂ'ಜಿಪೀಂಜಿ, ಅಯೋಗ್ಯರಿಗೆ ಅ'ಗ್ರೇಸ'ರರು, ('S'o)ಗಲಾಡಿ ('P'o)ರ್ಕಿ ಜನರು, ('B'i)ಕನಾಸಿ, ('S'o)ಮಾರಿ  ('P'i)ಳ್ಳೆಗಳು, ತಮ್ಮ 'ಎಡ'ಗೈಯಲ್ಲಿ (ಅಂಡು ತೊಳೆಯುವ ಕೈ ಎಂದು ಹೇಳಿದರೆ ನಮ್ಮ ಜನಕ್ಕೆ ಹೆಚ್ಹು ಅರ್ಥವಾದೀತು) ನಮ್ಮನ್ನು (ದೇಶದ ಜನರನ್ನು) ಬೀದಿಯಲ್ಲಿ ಬುಗುರಿ ಆಡಿಸಿದ ಹಾಗೆ ತಿರುಗಿಸುವುದು ಶತಃಸಿದ್ದ, ಭಾರತಮಾತೆಯ ಮೇಲಾಣೆ.

ಅರ್ಥವಾಗದವರು ಒಂದು ಬಾರಿ 'ನಮೋ' ನಮಃ ಅನ್ನಿ
ಮತ್ತು ಕಾದು ನೋಡಿ
ನರರಿಗೆ ಇಂದ್ರ, ದಾಮೋದರನಿಗೆ ದಾಸ ಮಾಡುವ ಮೋಡಿ

ಇನ್ನು ಅರ್ಥವಾಗದವರು ನಿಮ್ಮ 'ಕೈ' 'ಕಟ್' ಮಾಡ್ಕೊಂಡು ಬಾಯ್ಮೆಲ್ ಬೆರ್ಳ್ ಇಟ್ಕೊಂಡು, ಮತದಾನದ ದಿನ ಮನೆಲೇ ಮೂಲೆಲಿ ಕೂತಿರಿ, ನಿಮ್ ವೋಟಿಂದ ಯಾವನೂ 'ಉದ್ದಾ'ರ ಆಗೋದು ಬೇಡ.
                                                *******************

Tuesday, July 9, 2013

ಜೋಚುಟುಕುಗಳು - ೧

ಜೋಕಿನ ಚುಟುಕು - ಜೋಚುಟುಕು :) 
*************************

ನಾನೊಬ್ಬ ಆಶು ಕವಿ
ಬಡ್ಕೊಬೇಕು
ಅವ್ಳಿಗೆ ಕೇಳೋಲ್ಲ ಕಿವಿ

**********************

Ac ಬಾಯ್ ಗೆ Bc ಮುಟ್ಟಿಸಬೇಕಾದ್ರೆ  Cc ಲಿ ಮ್ಯಾನೇಜರ್ ಗೆ ಕಾಪಿ ಮಾಡಿ, ಆಗ ಅವ್ನು Dc ಶಾಕ್ ಹೊಡೆದವನ ತರ Ec ಸರ್ ಅಂತ ಬಂದು Ac ಸರಿ ಮಾಡಿ ಹೋಗ್ತಾನೆ.

**********************

ಚಾಟ್ ಲಿ ಹುಡುಗಿಗೆ ಹಾಕುತ್ತಿದ್ದೆ ಕಾಳು
ನಾನಿಲ್ಲದಾಗ
ಗೆಳೆಯ ಬಂದು ಮಾಡಿದ ಹಾಳು

**********************

ಗೊಂಬೆಗಳ ಲವ್ವು
ಸಿಂಪಲ್ಲಾಗ್ ಒಂದ್ ಲವ್ವು
ಕೃಷ್ಣನ ಲವ್ವು
ಬಂದರೂ ಸರಿ ಸಾಟಿಯಾಗಲ್ಲಿಲ್ಲ
ಜಗ್ಗೇಶನ ಡವ್ವು (ಗೆ)

**********************

ತಿನ್ಬೇಡ ಕಮ್ಮಿ ನೆಲಗಡಳೆಯ
ಜಾಸ್ತಿ ತಿನ್ನು ಗೋಡಂಬಿ ದ್ರಾಕ್ಷಿಯ
ನೋಡ್ದೆ ಇರ್ಬೇಡ ಫಿಲ್ಮ್ ಲೂಸಿಯ

***********************

ಗೋರಿ ಮೇಲೊಂದು ಗೋರಿ
ಮಾಡಲು ನಡೆಸಿದರು ತಯಾರಿ
ಶುರುವಾಯಿತು ಕಾಮಗಾರಿ
ಒಳಗಿಂದ ಎದ್ದ ಒಬ್ಬ ಅಘೋರಿ
ಕ್ಷಣದಲ್ಲಿ ಎಲ್ರೂ ಪರಾರಿ

************************

ನಾನಂದೆ, ಏ ಹುಡುಗಿ ಕಣ್ಣೀರು ಹಾಕಬೇಡ
ಕೇಳಲ್ಲಿಲ್ಲ ಅವಳು ಸುರಿಸಿದಳು ಬಡ(ಳ) ಬಡ(ಳ)
ತಮಿಳುನಾಡಿನವಳು ತಂದಳು ಖಾಲಿ ಕೊಡ

*************************


ಮೊಬೈಲಿಗೆ ಸಿಗಲ್ಲಿಲ್ಲ ಟವರ್
ಹುಡುಗಿಗೆ ಸಿಗಲಿಲ್ಲ ಲವರ್
ಹುಡುಗ ಈಗ ಬೆಟರ್

*************************

ಕನ್ನಡ ಫಿಲ್ಮ್ ಬರ್ತಿದೆ ಹೆಸ್ರು ಗಾಲಿ
ಅದಕ್ಕಿದೆ
ಅಶ್ಲೀಲ ಸಂಭಾಷಣೆಯ ಖಯಾಲಿ
ಯಾಕೆ ಹೀಗೆ ಅಂದರೆ
ಹೇಳುತ್ತಾರೆ ಈಗ ಇದು ಮಾಮೂಲಿ

************************

ಐವತ್ತಾದ ಮೇಲೂ ಶಿವಣ್ಣ ಆಗಿದ್ದ ರೆಡಿ
ಮಾಡಲು ಕಡ್ಡಿಪುಡಿ
ರಂಗಾಯಣ ರಘು ಮಾಡಿದ ಮೋಡಿ
ಸೂರಿ ಕೈ ಸುಟ್ಕೋಳ್ಳಿಲ್ಲ ಈ ಫಿಲ್ಮ್ ಮಾಡಿ

**************************

ನಿತೀಶ್ ಮಾಡಿದ ಆಲಕ್ಷ್ಯ
ಬಾಂಬ್ ಯಿಂದ ನಡುಗಿತು ಬುದ್ದ ಗಯ
ಕೇಕೆ ಹಾಕಿದ ದಿಗ್ವಿಜಯ
ಕಾಂಗ್ರೆಸ್ಸಿಗೆ ಕಾದಿದೆ ಅಪಜಯ

**************************

Sunday, July 7, 2013

ಶನಿವಾರದ ಸಂಜೆ

ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕಡೆ ನಮ್ಮ ಸವಾರಿ ಸಾಗಿತ್ತು. ಶಂಕರ ಮಠದ ಹತ್ತಿರ ಯಾರನ್ನೊ ನೋಡಬೇಕಿದ್ದರಿಂದ ಮೊದಲು ಅಲ್ಲಿಗೆ ಹೋಗಿ ಆ ಕೆಲಸ ಮುಗಿಸಿ ಜೀಬಿ ಕಡೆ ಬರುತ್ತಿದ್ದೆ. ಸಿಗ್ನಲ್ ನಲ್ಲಿ ಕೆಂಪು ಬಣ್ಣದಲ್ಲಿ ಕಡಿಮೆಯಾಗುತ್ತಿರುವ ಎಣಿಕೆಯ ಸಂಖ್ಯೆಯನ್ನು ನೋಡುತ್ತಾ ಎಂದೋ ಓದಿದ್ದ ಮೈಕ್ರೊಕಂಟ್ರೊಲರ್ನ ಕೌಂಟರ್ ಪ್ರೊಗ್ರಾಮ್ ನೆನಪಿಸಿಕೊಳ್ಳುತ್ತಿದ್ದೆ. ಹಿಂದಿನಿಂದ ಭುಜಕ್ಕೆ ಗುದ್ದಿದ ಇವಳು ಆಕಾಶಕ್ಕೆ ಮುಖಮಾಡಿ ರೀ ಮಳೆ ಬರೊ ಹಾಗಿದೆ, ನಡೀರಿ ಮನೆಗ್ ಹೋಗಣ ಅಂದ್ಲು. ಜೀಮ್ಮೆ (GM) ಜೊತೆಗಿರುವಾಗ ಮಳೆ ಯಾವ ಲೆಕ್ಕ ಸುಮ್ಕೆ ಕೂರಮ್ಮಿ ಅಂದು ಹಸಿರು ದೀಪ ನೋಡಿ ಸೆಲ್ಪ್ ಸ್ಟಾರ್ಟ್ ಬಟನ್ ಅದುಮಿದೆ.
 
ಜೀ ಎಮ್ ಅಂದರೆ ಏನೆಂದು ಯೋಚಿಸುತ್ತಿದ್ದಿರಾ? (G)ಗುಡ್ (M)ಮಾರ್ನಿಂಗ್ ಅಂತು ಖಂಡಿತ ಅಲ್ಲ. ಜೀ ಎಮ್ ಅನ್ನುವುದು ಇವಳಿಗೆ ನಾನಿಟ್ಟಿರುವ ಹೆಸರು. ಜೀ ಎಮ್ ಗೆ ಬಹಳಷ್ಟು ಅಬ್ರಿವೇಷನ್ ಗಳಿದೆ, ಅದರಲ್ಲಿ ಕೆಲವೊಂದಿಷ್ಟು ಇಲ್ಲಿದೆ.
೧. (G)ಜೆನರಲ್ (M)ಮ್ಯಾನೆಜರ್ - ಇವಳೆ ನಮ್ಮನೆಗೆ
೨. (G)ಗುಂಡೂರಾಯರ (M)ಮಗಳು
೩. (G)ಗುಣವಂತೆ (M)ಮಡಿವಂತೆ
೪. (G)ಗೋಲ್ಡ್ (M)ಮನಿ - ನನ್ನ ಚಿನ್ನ ಬಂಗಾರ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲಾ ಇವಳೆ
೫. (G)ಗಾಳಹಾಕಿ (M)ಮನೆಗ್ ಕರೆತಂದವಳು - ಇದು (ಅಪ)ಅರ್ಥ ಆಗಿದ್ರೆ ಮುಂದಿನ ವಾಕ್ಯ ಓದಬೇಡಿ. ಅರ್ಥ ಆಗದವರಿಗೆ - ಹಾಗಂದ್ರೆ ತಾಳಿಕಟ್ಟಿ ಮನೆ ತುಂಬಿಸಿಕೊಂಡವಳು :P 
ಇನ್ನು ಏನೆನೋ ಇದೆ, ಅದೆಲ್ಲ ಇಲ್ಲಿ ಬೇಡ. ಜೀ ಎಮ್ ಅಂತಂದುಬಿಟ್ಟರೆ ಇವಳು ಉಬ್ಬಿ ಹೋಗುತ್ತಾಳೆ, ಆಗಲೇ ಅಲ್ಲವಾ ನನ್ನ ಕೆಲಸಗಳು ಕ್ಷಣ ಮಾತ್ರದಲ್ಲಿ ಆಗುವುದು. ನಿಮಗೊಂದು ಗೊತ್ತಾ? ನಿಜ ಹೇಳ್ತಿದೀನಿ ಅಸಲಿಗೆ ಜೀ ಎಮ್ ಎಂದರೆ ಇದ್ಯಾವುದೂ ಅಲ್ಲ !!

ಹಾಗಿದ್ರೆ ಜೀ ಎಮ್ ಅಂದ್ರೆ ಏನಿರಬಹುದೆಂದು ಜಾಸ್ತಿ ಊಹಿಸಬೇಡಿ, ನಾನೇ ಹೇಳುತ್ತೇನೆ. ಜೀ ಎಮ್ ಅಂದರೆ (G)ಗುಡುಗು (M)ಮಿಂಚು ! ಯಾಕೆಂದರೆ ಇವಳು ಮನೆಯಲ್ಲಿ ಮತ್ತು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದಲ್ಲಿ ಒಂದೋ ಗುಡುಗುತ್ತಿರುತ್ತಾಳೆ (ಚರ್ಚೆ, ವಾದ-ವಿವಾದ, ಪರ-ವಿರೋಧ, ಮಾತುಕಥೆ, ಹರಿಕಥೆ, ಪುರಾಣ) ಇಲ್ಲ ಮಿಂಚುತ್ತಿರುತ್ತಾಳೆ (ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎಲ್ಲರೂ ನನ್ನ ಬಳಿ ಬಂದು ಎನ್ರಿ ನಿಮ್ಮೊರು ಮಿಂಚಿಂಗೋ ಮಿಂಚಿಂಗು ಅಂತ ಹೇಳೋರೆ). ಈ ಅಬ್ರಿವೇಷನ್ ನಿಮ್ಮಲ್ಲೆ ಇಟ್ಕೊಳಿ, ಇವಳು ಸಿಕ್ಕಾಗ ಅಪ್ಪಿ ತಪ್ಪಿ ಬಾಯ್ ಬಿಟ್ಬಿಟೀರ, ಗೊತ್ತಾದ್ರೆ ಇವಳು ನನ್ನ (G)ಗುಡಿಸಲು (M)ಮನೆ ಸೇರಿಸೋದು ಗ್ಯಾರಂಟೀ. 

ವಿಷಯಾಂತರಕ್ಕೆ ಕ್ಷಮೆ ಇರಲಿ, ಸಿಗ್ನಲ್ ಲೈಟ್ ಗ್ರೀನ್ ಆದಂಗೆ ನಾನು ಸೀದಾ ಹೋದೆ. ಹಾಗೆ ಮಾಡದೆ ಬಲಕ್ಕೆ ತಿರುಗಿದ್ದರೆ ಮಳೆ ಬರುತ್ತಿರಲ್ಲಿಲ್ಲವೇನೋ? ಸಿಗ್ನಲ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಮಳೆ ಶುರುವಾಯಿತು. ಹತ್ತು ಸೆಕೆಂಡ್ ಗಳಲ್ಲೆ ಮಳೆ ಜೋರಾಗಿ ಗಾಡಿ ನಿಲ್ಲಿಸಿದೆ. ನಮಗೆ ಆಸರೆ ನೀಡಿದ್ದು ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ, ಇವಳೊ ಉರಿದು ಬೀಳುತ್ತಿದ್ದಳು. ಕಾರಣ ಸರ್ಕಾರದ್ದು ಅಂದರೆ ಇವಳಿಗೆ ಆಗಲ್ಲ, ಎರಡನೆಯದು ಹೆಣ್ಮಕ್ಕಳ ಶಾಲೆ, ನಾನು ಅತ್ತ ಕಡೆ ಸುಳಿಯಲೂ ಕೂಡದು ಎಂಬುದು ಇವಳ ಆಜ್ಞೆ. ನಾನು ಸುತ್ತೊದು ಬರೀ ಡಿಗ್ರೀ ಕಾಲೇಜಿನ ಮುಂದಷ್ಟೇ ಅಂತ ಹೇಳಿ ಆ ಕಡೆ ತಿರುಗಿದರೆ ಇವಳು ಮೂಲೆಲಿದ್ದ ಬೆಂಚಿನ ಮೇಲೇ ಆಸೀನಳಾಗಿದ್ದಳು. ಸದ್ಯ ನಾನು ಹೇಳಿದ್ದು ಕೇಳಿಸಿಲ್ಲ ಅಂತ ಮನಸಲ್ಲೆ ಮಂಡಿಗೆ ತಿನ್ನುತ್ತಾ ಅತ್ತ ನಡೆದರೆ ಇವಳ ವರಸೆ ಬದಲಾಗಿಬಿಟ್ಟಿತ್ತು. ರೀ ಐಸ್ ಕ್ರೀಮ್ ತಂದ್ಕೊಡ್ರಿ ಅಂದ್ಲು. ಅರೆಘಳಿಗೆ ದಪ್ಪ ಮಳೆಹನಿ ದಿಟ್ಟಿಸಿ ನೋಡುತ್ತಿದ್ದ ನನಗೆ, ರೀ ಹೋಗ್ರಿ ಏನಾಗಲ್ಲ ಅಂತ ದಬಾಯಿಸಿದಳು. ಅಂತೂ ಮಳೇಲಿ ನೆಂದು ಇವಳ ಐಸ್ ಕ್ರೀಮ್ ಆಸೆ ಪೂರೈಸಿದೆ. ಅರ್ಧ ಗಂಟೆ ಕಳೆದ ಮೇಲೆ ಮಳೆ ನಿಂತಿತು. ಶುರುವಾಯಿತು ನೋಡಿ ಇವಳ ಶಾಪಿಂಗು. ಕಾಲ್ ವರುಸ್ಕೊಳೊ ಕಾರ್ಪೆಟ್ ಯಿಂದ ಹಿಡಿದು ಇವಳು ತಲೆಗ್ ಹಾಕೊಳೊ ಕ್ಲಿಪ್ ತನಕ ಎಲ್ಲಾ ಕೊಂಡಳು. ನಾನು ರೈಲ್ವೇ ಸ್ಟೇಷನ್ನಿನ ಕೂಲಿ ತರ ಮೂರು ಕವರ್ ಚೀಲ ಹಿಡಿದು ಇವಳ ಹಿಂದೆ ಹಿಂದೆ ಹೋಗುತ್ತಿದ್ದೆ. ಅಂತೂ ಎಲ್ಲಾ ಮುಗಿದು (ನನ್ನ ಪರ್ಸಲ್ಲಿದ್ದ ದುಡ್ಡು ಸೇರಿ) ಮನೆ ಸೇರಿದಾಗ ರಾತ್ರಿ ಒಂಬತ್ತಾಗಿತ್ತು. ಊಟ ಮಾಡಿ ಮಲಗಿದೆವು. 

ರಾತ್ರಿ ನಿದ್ದೆ ಹತ್ತಿದ್ದು ಗೊತ್ತಿಲ್ಲ ಆದರೆ ಬೆಳಗ್ಗೆ ಏಳಲು ಸಾಧ್ಯವಾಗುತ್ತಿಲ್ಲ ನನಗೆ, ಮೂಗು ಕಟ್ಟಿ ಉಸಿರಾಡಲು ಕಷ್ಟವಾಗುತ್ತಿದೆ. ತಲೆ ಸಿಡಿಯುತ್ತಿದೆ, ಜ್ವರ ಸುಡುತ್ತಿದೆ. ಇವಳು ತಲೆಗೊಂದು ಒದ್ದೆ ಬಟ್ಟೆ ಸುತ್ತಿ, ನಮ್ಮನೆ ಪಕ್ಕದಲ್ಲೇ ಇದ್ದ ಪ್ರಾಕ್ಟೀಸ್ ಡಾಕ್ಟರ್ ಪರಿಣಿತಳನ್ನ ಕರೆಸಿದಳು. ಪರಿಣಿತ ಬರೋಷ್ಟರಲ್ಲಿ ಇವಳು ಅಮ್ಮಗೆ ಕರೆ ಮಾಡಿ ನೋಡಿ ಅತ್ತೆ ಐಸ್ ಕ್ರೀಂ ತಿಂದಿದ್ದು ನಾನು ಆದ್ರೆ ಇವರು ಮಲ್ಕೊಬಿಟ್ಟಿದ್ದಾರೆ ಅಂತಿದ್ದಳು. ನಾನು ಹು ಐಸ್ ಕ್ರೀಂ ತಿಂದಿದ್ದು ಅವ್ಳು ಮಳೆಲಿ ನೆಂದಿದ್ದು ನಾನು ಅಂತ ಹೇಳಕ್ಕೆ ಫೋನ್ ಇಸ್ಕೊಲೋಷ್ಟರಲ್ಲಿ ಡಾಕ್ಟರು ಬಂದು ನನ್ನ ನೋಡಿ ಇಂಜೆಕ್ಷನ್ ಕೊಡಬೇಕಾದರೆ ನಾನು ಆ ಆ ಆ ನೋವು ಎಂದು ಚೀರುತ್ತಾ ಎದ್ದು ಕೂತೆ.

ನಾನು ಕೂಗಿದ ಸದ್ದಿಗೆ ಅಕ್ಕ ಏನಾಯ್ತೊ ಅಂತ ಬಂದಳು. ಏನಿಲ್ಲಕ್ಕ ಭಯಾನಕ ಕನಸು ಅಂದೆ, ಗುರುಗಳ್ ಆರಾಧನೆ ಅಂತ ರಾಯರ ಮಠದಲ್ಲಿ ಸರಿಯಾಗಿ ಬಾರಿಸಿ ಬಂದು ಮಲಗಿದರೆ ಮಧ್ಯಾನ್ಹನೂ ಕನಸು ಬೀಳತ್ತೆ ಬೆಳಗ್ಗೆನೂ ಬೀಳತ್ತೆ ಎದ್ದು ಮುಖ ತೊಳ್ಕೊ ಕಾಫಿ ಕೊಡ್ತೀನಿ ಅಂತ ಬೈದು ಅಡುಗೆ ಮನೆಗೆ ಹೋದಳು.

ನಾನು ಮುಖ ತೊಳೆದು ಕಾಫಿ ಕುಡಿದು ಕನಸು ನಿಜವಾದರೆಂಬ ಭಯದಿಂದ ಗಾಡಿ ತೆಗೆಯದೆ 3E ಬಸ್ ಹತ್ತಿ ನಾರ್ತ್ ರೋಡಲ್ಲಿ ಇಳಿದೆ. ಸ್ವಲ್ಪ ಹಿಂದೆ ಬಂದು ಸಿಗ್ನಲ್ ದಾಟಿ ಜೀಬಿ ಕಡೆ ಹೆಜ್ಜೆ ಹಾಕಿದೆ ಮಳೆ ಶುರುವಾಯಿತು. ಮಳೆ ಜೋರಾಗುತ್ತಲೆ ನಾನು ಆಸರಿಸಿದ್ದು ಅದೇ ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ. ಸುಮಾರು ಹೊತ್ತು ಟೆಂಪಲ್ ರನ್ ಆಡಿದೆ, ಅದು ಬೇಜಾರಾಗಿ ಕನಸನ್ನು ನೆನೆದು ಬೆಚ್ಚಿಬೀಳುವಾಗಲೇ ಮಳೆ ನಿಂತಿತ್ತು. ನನ್ನ ಗೃತ್ಸಮದನಿಗೆ ಹೊಸ ಇಯರ್ ಫೋನ್ ಕೊಳ್ಳಲು ಇಡೀ ಜೀಬಿ ಸುತ್ತಿದರೂ ಎಲ್ಲೂ ಒರಿಜಿನಲ್ ಸಿಗಲ್ಲಿಲ್ಲ, ನೀವು ಸರ್ವೀಸ್ ಸೆಂಟರ್ ಗೆ ಹೋಗಿ ಅಲ್ಲಿ ಸಿಗಬಹುದೆಂದು ೩-೪ ಅಂಗಡಿಯಲ್ಲಿ ಹೇಳಿದರು, ಗಾಡಿಯಿರಲ್ಲಿಲ್ಲ ಸಜ್ಜನ್ ರಾವ್ ಸರ್ಕಲ್ ತನಕ ನಡೆಯಲು ಮನಸಾಗಲ್ಲಿಲ್ಲ. A2B (ಆಡ್ಯಾರ್ ಆನಂದ ಭವನ) ತನಕ ಬಂದು ನನ್ನಿಷ್ಟವಾದ ಬೇಳೆ ಹೋಳಿಗೆಗೆ ತುಪ್ಪ ಹಾಕಿಸಿಕೊಂದು ಬಾದಾಮಿ ಹಾಲು ಸೇರಿಸಿ, ಕೆನರಾ ಬ್ಯಾಂಕ್ ಕಟ್ಟೆ ಮೇಲೆ ಕುಳಿತು ಬಿಸಿ ಬಿಸಿ ಹೋಳಿಗೆ ಸೇವಿಸಿದೆ. ತಿನ್ನುವಾಗ ಹಿಂದೆ ನಾವೆಲ್ಲಾ ಗೆಳೆಯರು ಅಲ್ಲಿ ದಿನಾ ಸೇರಿ ಗುಲ್ಲೆಬ್ಬಿಸುತ್ತಿದ್ದುದು ನೆನಪಾಗಿ ಕೊಂಚ ಬೇಜಾರಾದರೂ, ಕೆಲ ನಿಮಿಷದಲ್ಲೆ ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಖುಷಿಯಾಗಿದ್ದಾರೆ ಅನಿಸಿ ಮನಸಿಗೆ ಸಮಾಧಾನವಾಯಿತು. ಶನಿವಾರವಾದ್ದರಿಂದ ಕಾರಂಜಿ ದೇವಸ್ಥಾನಕ್ಕೆ ತೆರಳಿ ಹನುಮಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ದೇವರಿಗೆ ಅರ್ಚಿನೆ ಮಾಡಿಸಿ "ಓ ದೇವರೇ ಜೀವನ ಇದೇ ತರ ಇರ್ಲಿ" ಅಂತ ಬೇಡಿಕೊಳ್ಳುತ್ತಿರುವಾಗಲೇ ನಾನು ಹಿಂದೆ ಬರೆದಿದ್ದ "ಜೀವನ" ಚುಟುಕು ನೆನಪಾಗಿಬಿಟ್ಟಿತು. 


ಶ್ರೀ ರಾಮನು ನನ್ನ ಬೇಡಿಕೆಗೆ ಅಸ್ತು ಅಂದಂತಾಗಿ ನಾನು ಆ ತರ ಬೇಡ ದೇವ್ರೆ ಅಂತ ಮತ್ತೊಮ್ಮೆ ಕರೆಕ್ಟ್ ವರ್ಶನ್ ಅಪ್ಲಿಕೇಶನ್ ನ ದೇವರಿಗೆ ಸಲ್ಲಿಸಿ ಮನೆ ಕಡೆ ಹೋಗಲು ಬಸ್ ಹಿಡಿಯಲು ಗಣೇಶ ಭವನ ಬಸ್ ಸ್ಟಾಪ್ ಗೆ ಬಂದು ನಿಂತೆ. ಪರಿಚಯವಿದ್ದ ಮೆಡಿಕಲ್ ಶಾಪಿನವನಿಗೆ ಹಲೊ ಅನ್ನೊಷ್ಟರಲ್ಲಿ 43E ನಂಬರ್ ಬಸ್ ಬಂದಾಗ, ಹತ್ತಿದೆ. ಕನಸಲ್ಲಿ ಅಷ್ಟೋಂದು ಶಾಪಿಂಗ್ ಮಾಡಿದ್ದು ಜ್ಞಾಪಕ ಬಂದು, ಬಾಟ ಶೋ ರೂಂ ಬಳಿ ಇಳಿದು, ಒಂದು ಜೊತೆ ಚಪ್ಪಲಿ ಖರೀದಿಸಿ ಮನೆ ಕಡೆ ಹೆಜ್ಜೆ ಹಾಕಿದೆ. ಬಾಗಿಲಲ್ಲಿರುವಾಗಲೆ ಅಕ್ಕ ನನ್ನ ಡೀಟೈಲ್ಸ್ ಫೋನಲ್ಲಿ ಹೇಳುತ್ತಿದ್ದಿದು ಕೇಳಿಸಿತು. 
                                  **************************************

Thursday, July 4, 2013

ಫೇರ್ ವೆಲು


ಕೊಲೀಗ್ ನ ಫೇರ್ ವೆಲು
ಇಸ್ಕಾನು ಶ್ರೀಕೃಷ್ಣ ಟೆಂಪಲು
ಹೈಯರ್ ಟೇಸ್ಟ್ ಹೋಟೆಲು
ಅಲ್ಲೇ ಮಧ್ಯಾನ್ಹದ ಮೀಲು
ಆಮೇಲೆ ಒರಾಯನ್ ಮಾಲು
ಮಾಡಲು ಹೋದೆವು ಬೌಲು
ಅಲ್ಲಿತ್ತು ಬರೀ ತೂತಿದ್ದ ಬಾಲು
ಕೆಲವರು ಕುಡಿದರು ಆಲ್ಕೊಹಾಲು
ಮಳೆಯಲಿ ಮನೆ ಸೇರುವುದೇ ಆಗಿತ್ತು ಎಲ್ಲರ ಗೋಲು
ಮತ್ತೆ ಮನೆಯಲಿ ಅದೇ ಮಾಮೂಲು
ಆಗಿತ್ತು ನಿದ್ದೆ ತಾನಾಗೆ ಚಾಲು
                                       ********************


Monday, July 1, 2013

'ಗುಟ್ 'ಕಾ ಕಥೆ


೩೧ / ೦೫ / ೨೦೧೩

ಬಾಗ್ಮನೆ ತಂತ್ರಜ್ಞಾನ ಉದ್ಯಾನದ ಕಟ್ಟ ಕಡೆಯ ಕಟ್ಟಡದ ಎರಡನೇ ಮಹಡಿಯಲ್ಲಿ, ದ್ವಾರದಿಂದ ಸೀದಾ ಹೋದರೆ ಮೂರನೇ ಚೌಕದ  ಮೂಲೆಯಲ್ಲಿ ಕೂತಿದ್ದ ರಶ್ಮಿ ಇದ್ದಕ್ಕಿದ್ದ ಹಾಗೆ ಎದ್ದು ಮಹಡಿಯ ಮೆಟ್ಟಿಲ ಕಡೆ ಓಡಿದಳು. ಒಂದೇ ಸಮನೆ ಏದುಸಿರು ಬಿಡುತ್ತಾ ಮೆಟ್ಟಿಲುಗಳನ್ನು ಏರಿದ ರಶ್ಮಿ ಕಾವಲುಗಾರನ ತಡೆಯನ್ನು/ಅಪ್ಪಣೆಯನ್ನು ಮೀರಿ ಬಂದು ನಿಂತಿದ್ದು, ಹನ್ನೆರಡನೆ ಮಹಡಿಯ ಮೇಲಿರುವ ತಾರಸಿಯಲ್ಲಿ. ಪಶ್ಚಿಮದ ಆಗಸದಲ್ಲಿ ಸೂರ್ಯ ಇನ್ನೊಂದು ಕ್ಷಣದಲ್ಲಿ ಮುಳುಗಲಿದ್ದ. ಆಗಲೇ ಅವಳ ಮೊಬೈಲ್ ರಿಂಗಣಿಸಿತು. ಹತ್ತು ನಿಮಿಷದ ಕೆಳಗೆ ಕರೆ ಮಾಡಿದ್ದ ಆಕೆಯ ಗೆಳತಿ ಸೀಮಾ ಫೋನಿನಲ್ಲಿ ಏನು ಉಸುರಿದಳೋ? ಎರಡು ಸೆಕೆಂಡು ರಶ್ಮಿ ಕೈ ಕಟ್ಟಿ ತಲೆ ತಗ್ಗಿಸಿ ನಿಂತಿದ್ದಳು. ಅವಳು ಮತ್ತೆ ತಲೆ ಮೇಲೆತ್ತಿದಾಗ ಆಗಸದಲ್ಲಿ ಸೂರ್ಯ ಇರಲ್ಲಿಲ್ಲ, ಅದಾಗ ಉದಯಿಸುತ್ತಿದ್ದ ಚಂದ್ರ ತನ್ನನ್ನು ಕದ್ದು ನೋಡುತ್ತಿದ್ದಾನೇನೋ ಅನಿಸಿ ರಶ್ಮಿಯ ಮುಖ ಕಪ್ಪಿಟ್ಟಿತ್ತು. ತನ್ನನ್ನು ಕಾಡುತ್ತಿರುವ ಅಪರಾಧಿ ಪ್ರಜ್ಞೆಯಿಂದ ಮುಕ್ತಿಯಾಗಲು ನಡೆದಿರುವುದೆಲ್ಲವನ್ನು ಶಶಿಗೆ ಹೇಳಿಬಿಡಬೇಕೆಂದು ತೀರ್ಮಾನಿಸಿ ಕೆಳಗಿಳಿದು ಬಂದಳು.

                                                      *********************************

ನಾನು ರಶ್ಮಿ. ಹುಟ್ಟಿದ್ದು ಬೆಳೆದದ್ದು ಚಿನಾ ಹಳ್ಳಿಯ ಯಾವುದೋ ಒಂದು ಕುಗ್ರಾಮ. ಸುತ್ತ ಹತ್ತಾರು ಹಳ್ಳಿಗಳಿಗೆಲ್ಲ ಸೇರಿ ಇದ್ದಿದ್ದು ಒಂದೇ ಶಾಲೆ ಕಾಲೇಜು. ಎರಡು ಅಕ್ಕ ಪಕ್ಕದಲ್ಲೇ ಇತ್ತು. ನನ್ನ ಮನೆಗೂ ಶಾಲೆಗೂ ೨ ಕಿಮೀ ಅಂತರ. ನಾನು ಶಾಲೆಗೇ ಹೋಗಲು ಶುರು ಮಾಡಿದಾಗಿನಿಂದಲೂ ನನ್ನನ್ನು ಸೈಕಲ್ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದುದು ನನ್ನ ಪಕ್ಕದ ಮನೆಯ, ಅದೇ ಶಾಲೆಯ ನನಗಿಂತಲೂ ೨ ವರ್ಷ ಹಿರಿಯನಾದ ರವಿಕುಮಾರ. ನನ್ನ SSLCವರೆಗೂ ನಮ್ಮ ಸೈಕಲ್ ಮೆರವಣಿಗೆ ಸಾಗಿತು, ಆಮೇಲೆ ರವಿಕುಮಾರ ಡಿಗ್ರಿ ಕಾಲೇಜಿಗೆ ಅಂತ ಪಟ್ಟಣ ಸೇರಿದ. ಆದರೆ ಅಷ್ಟರಲ್ಲಾಗಲೇ ನಾವು ಪರಸ್ಪರ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೆವು. ನಾನು ಪಿಯುಸಿ ಓದುವಾಗ ಪಟ್ಟಣದಿಂದ ರವಿಕುಮಾರ ಬಂದಾಗಲೆಲ್ಲ, ನಾವಿಬ್ಬರೂ  ಕದ್ದು ಮುಚ್ಚಿ  ಭೇಟಿ ಮಾಡುತ್ತಿದ್ದೆವು. ಎರಡು ವರ್ಷ ಕಳೆದ್ದದ್ದೆ ಗೊತ್ತಾಗಲ್ಲಿಲ್ಲ. ಹೇಗೋ ಮಾಡಿ ಪಿಯುಸಿ ಪರೀಕ್ಷೆಯಲ್ಲಿ ನಾನು ಪಾಸಾಗಿದ್ದೆ. ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತೀನಿ ಎಂದು ಹಠ ಮಾಡಿದಾಗ, ನನ್ನ ರವಿಯ ಕಳ್ಳಾಟ-ಚೆಲ್ಲಾಟ ಕಂಡಿದ್ದ ನಮ್ಮಿಬ್ಬರ ಮನೆಯವರೂ, ನಮಗೆ ಮದುವೆ ಮಾಡಿಬಿಟ್ಟರು. ಆಗ ನನಗೆ ೧೮ ರವಿಗೆ ೨೦ ವಯಸ್ಸು.

ರವಿಕುಮಾರನ ಹೆಂಡತಿಯಾಗಿ ಮೊದಲ ಬಾರಿ ನಾನು ಪಟ್ಟಣಕ್ಕೆ ಕಾಲಿಟ್ಟಿದ್ದು ೨೦೦೫ರಲ್ಲಿ.  ಮಾವ ತೀರಿದ್ದ ಒಬ್ಬರೇ ವಾಸವಾಗಿದ್ದ ರವಿಯ ಸೋದರತ್ತೆ ಮನೆಯಲ್ಲಿ ನಾನು ಸಂಸಾರ ಮಾಡಲು ಶುರುಮಾಡಿದ್ದೆ. ಡಿಗ್ರಿ ಪಾಸಾದರೆ ಸಾಕು, ಲಂಚ ಕೊಟ್ಟು ಯಾವುದಾದರೂ ಸರ್ಕಾರಿ ಕೆಲಸಕ್ಕೆ ತಗಲಾಕೊಳದು ಅಷ್ಟೇ ಅಂತ ರವಿ ತೀರ್ಮಾನಿಸಿ ವರ್ಷಗಳೇ ಆಗಿದ್ದವು. ಹತ್ತು ಲಕ್ಷದವರೆಗೂ ಲಂಚ ಕೊಡಲು ಅವರಪ್ಪ ಕೂಡ ಹೂ ಅಂದಿದ್ದರು. ಹಾಗಾಗಿ ರವಿ ಮೂವೈತ್ತೈದಕ್ಕಿಂತ ಹೆಚ್ಚಿಗೆ ಪಡೆದವನೇ ಅಲ್ಲ.

ರವಿ ಡಿಗ್ರಿ ಪಾಸಾದ, ಅವನಂದುಕೊಂಡಂತೆ ೮ ಲಕ್ಷಕ್ಕೆ ಸರ್ಕಾರಿ ಕೆಲಸದ ಡೀಲ್ ಸಿಕ್ಕಿತು. ಡೀಲ್ ಕೊಡಿಸಿದವರ ಕಂಡಿಶನ್ ಇತ್ತು. ಅದು ಒಂದು ವರ್ಷ ಕಾಯುವುದು. ಒಂದೇ ವರ್ಷ ತಾನೇ ಹೇಗೋ ಕಳೆದು ಹೋಗತ್ತೆ ಅಂತ ರವಿ ಅಪ್ಪ ಒಪ್ಪಿದ್ದರು.  ಸರದಿ ಪ್ರಕಾರ  ಒಂದು ವರ್ಷವಾದಮೇಲೆ ನಿನಗೆ ಆರ್ಡರ್ ಕಳಿಸುತ್ತೇವೆ, ಆಗ ಬಂದು ಸೇರಿಕೋ ಎಂದು ಹೇಳಿ ಡೀಲ್ ಕೊಡಿಸಿದವರು ಕಳಿಸಿದ್ದರು, ಮತ್ತು ಆಗಾಗ ಕರೆ ಮಾಡಿ ಹೆಚ್ಚು ಹಣ ಕೊಟ್ಟರೆ ಮಾತ್ರ ಬೇಗ ಕೊಡಿಸೋಕೆ  ಸಾಧ್ಯ ಎಂದು ಇಪ್ಪತೈದು ಐವತ್ತು ಸಾವಿರ ತೊಗೊತಿದ್ದರು.

ಒಂದು ವರ್ಷ ಕಳೆಯುತ್ತಾ ಬಂದಿತ್ತು. ಇನ್ನೇನು ರವಿ ಸರ್ಕಾರಿ ಕೆಲಸಕ್ಕೆ ಸೇರುವನು ಎಂದು ಅವರಪ್ಪ ಹಳ್ಳಿಲಿ ಬಾಡೂಟ ಹಾಕಿಸಿದ್ದರು. ದುರಾದೃಷ್ಟ, ವರ್ಷ ತುಂಬೋಕೆ ಒಂದು ವಾರವಿದೆ ಅನ್ನೋವಾಗ ಡೀಲ್ ಕೊಡಿಸಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ, ಅವನ ಏಜೆಂಟ್ ತಲೆಮರೆಸಿಕೊಂಡಿದ್ದ. ಹತ್ತು ಲಕ್ಷ ಕೈತಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ರವಿ ಅಪ್ಪ ಹೃದಯಾಘಾತದಿಂದ ಸತ್ತರು. ರವಿ ಅಪ್ಪ ಮಾಡಿದ್ದ ಸಾಲ ತೀರಿಸಲು ಹಳ್ಳಿಲ್ಲಿದ್ದ ಹೊಲ ಗದ್ದೆ ಮನೆ ಎಲ್ಲ ಮಾರಬೇಕಾಯಿತು. ಬರಿಗೈಯಲ್ಲಿ ಅಮ್ಮನ್ನನ್ನು ಕರಕೊಂಡು ಪಟ್ಟಣ್ಣಕ್ಕೆ ಬಂದ.

ಮತ್ತೆ ಒಂದು ವರ್ಷ ರವಿ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಸುತ್ತಾಡಿದ, ಸಿಕ್ಕ ಸಣ್ಣ ಪುಟ್ಟ ಕೆಲಸ ನೆಟ್ಟಗೆ ಮಾಡದೆ ಆಚೆ ದಬ್ಬಿಸಿಕೊಂಡು ವಾಪಸಾದ. ಮನೆಯಲ್ಲಿ ಯಾರ ಮಾತು ಕೇಳುತ್ತಿರಲ್ಲಿಲ್ಲ. ನಾನು ಕೊನೆ ವರ್ಷ ಡಿಗ್ರಿಲಿದ್ದೆ ಜೊತೆಗೆ ಸೀಮಾಳ ಸಲಹೆಯಂತೆ ಕಂಪ್ಯೂಟರ್ ಕೋರ್ಸ್ ಮಾಡ್ತಿದ್ದೆ. ಹಾಗಾಗಿ ರವಿ ಬಗ್ಗೆ ಹೆಚ್ಚಾಗಿ ಗಮನ ಹರಿಸಲು ಸಾಧ್ಯವಾಗಲ್ಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನನಗೆ ಅವನ ಮೇಲೆ ಪ್ರೀತಿಯೇ ಇರಲ್ಲಿಲ್ಲ. ಪ್ರೀತಿ ಎಂದರೇನು ಅಂತಲೇ ತಿಳಿಯದ ವಯಸ್ಸಲ್ಲಿ ಬರೀ ಆಕರ್ಷಣೆಗೆ ಒಳಗಾಗಿ ಅವನನ್ನು ಮದುವೆಯಾಗಿದ್ದೆ.

ನಾನು ಡಿಗ್ರಿ ಪಾಸಾದ ಕೂಡಲೇ ಕಂಪ್ಯೂಟರ್ ಕಲಿತಿದ್ದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಹತ್ತು ಸಾವಿರ ರೂಪಾಯಿ ಸಂಬಳ. ರವಿ ಸಂತೋಷಪಡುವ ಬದಲು ಅಸೂಯೆ ಪಟ್ಟ. ಸಣ್ಣ ಪುಟ್ಟ ವಿಷಯಗಳಿಗೂ ನನ್ನನ್ನು ಪ್ರಶ್ನಿಸುತ್ತಿದ್ದ ಮತ್ತು ಅನುಮಾನಿಸುತ್ತಿದ್ದ. ಮೂರು ವರ್ಷಗಳ ಕಾಲ ಅವನ್ನನ್ನು ಸಹಿಸಿದೆ. ಅದೇ ಸಮಯದಲ್ಲಿ ರವಿ ಅಮ್ಮ ಮತ್ತೆ ಸೋದರತ್ತೆ ಸತ್ತಿದ್ದರು. ಯಾವಾಗಲೂ ಜಗಳದಲ್ಲಿ ನನ್ನ ಪರವಾಗಿ ನಿಲ್ಲುತ್ತಿದ್ದ ಅವರಿಬ್ಬರೂ ಈಗಿಲ್ಲ. ಹಾಗಾಗಿ ಮನೆಯಲ್ಲಿ ನನ್ನ ಗೋಳು ಕೇಳೋರಿಲ್ಲದೆ ಆಯಿತು. ಒಂದೊಂದು ಪೈಸಕ್ಕೂ ರವಿ ನನ್ನ ಜೀವ ಹಿಂಡುತ್ತಿದ್ದ.


೩೧ / ೦೫ / ೨೦೧೧

ನನಗಾಗ ೨೪. ರವಿಯ ಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಮತ್ತು ಅವನ ಆರೋಗ್ಯ ತೀರ ಹದಗೆಟ್ಟಿತ್ತು. ಅವನನ್ನು ಕಂಡರೆ ಅಸಹ್ಯವಾಗಿ ವಾಕರಿಕೆ ಬರುತ್ತಿತ್ತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಅವನಿಗೆ ವಿವಾಹ ವಿಚ್ಚೇದನ ನೀಡಲು ತೀರ್ಮಾನಿಸಿ ಅರ್ಜಿ ಸಲ್ಲಿಸಿದೆ. ಕೋರ್ಟಿನಲ್ಲಿ ತೀರ್ಪು ನನ್ನ ಪರ ಬಂದು ನಾನು ರವಿಗೆ ವಿಚ್ಚೇದನ ನೀಡಿದ್ದು ಮೂವತ್ತೊಂದು  ಮೇ ಎರಡು ಸಾವಿರದ ಹನ್ನೊಂದು.

ಸ್ವ ಇಚ್ಚೆಯಿಂದ ದಾದಿ ಕೆಲಸಕ್ಕೆ ಸೇರಿದ್ದ ಸೀಮಾ, ರವಿಯನ್ನು ನೋಡಿಕೊಳ್ಳಲು ಒಪ್ಪಿಕೊಂಡಳು. ತಿಂಗಳಿಗೆ ಐದು ಸಾವಿರ ಕೊಡುತ್ತಿದ್ದೆ ಅವಳಿಗೆ. ಆಗಷ್ಟೇ ನನಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಮೂವತ್ತೆರಡು ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ಸೀಮಾಳಿಗೆ, ಕೂರಲು ಏಳಲು ಮತ್ತೊಬ್ಬರ ಸಹಾಯ ಬೇಕಿದ್ದ ರವಿಯ ಪೂರ್ತಿ ಜವಾಬ್ದಾರಿ ವಹಿಸಿ  ನಾನು ಬೆಂಗಳೂರಿಗೆ ಬಂದು ಬಿಟ್ಟೆ.


೩೧ / ೦೫ / ೨೦೧೩

ಇಲ್ಲಿ ಕೆಲಸಕ್ಕೆ ಸೇರಿ ೨ ವರ್ಷವಾಯಿತು. ನನ್ನ ಜೊತೆ ಅತಿ ಸಲುಗೆ ಬೆಳೆಸಿಕೊಂಡಿರೋ ಶಶಿಗೆ ನಾನು ಹೇಳಿರೋದು ಕೇವಲ ನನ್ನ ಊರು ಮತ್ತು ನಾನೊಬ್ಬ ಅನಾಥೆ ಅವಿವಾಹಿತೆ  ಎಂದಷ್ಟೇ. ಇವತ್ತು ರವಿ ಸತ್ತಿದ್ದಾನೆ. ಈಗಲಾದರೂ ಎಲ್ಲಾ ವಿಷಯಗಳನ್ನು ಶಶಿಗೆ ಹೇಳಲೇಬೇಕು. ನಾನು ಬರುತ್ತೇನೆ.

                                              *******************************

ಹೇಳೋದಾದ್ರೆ ಪೂರ್ತಿ ಹೇಳು, ನಿನ್ನ ಮನಸ್ಸಿಗೆ ಸಮಾಧಾನವಾಗತ್ತೆ ಅಂತ ನಾನು ಕೇಳ್ತಾ ಇದ್ದೀನಿ, ಅದು ಅಲ್ದೆ ತಲೆಲ್ ಹುಳ ಬಿಟ್ಕೊಳಕ್ಕೆ ನನ್ ಕಥೆಗಳೇ ನಂಗೆ ಬೇಜಾನ್ ಇದೆ ಎಂದು ನಾನು ರಶ್ಮಿಗೆ ದಬಾಯಿಸಿದೆ.

ರಶ್ಮಿ ಮತ್ತೆ ಶುರು ಮಾಡಿದಳು... ರವಿ ಸತ್ತಿದ್ದು ಕ್ಯಾನ್ಸರ್ ಖಾಯಿಲೆಯಿಂದ. ಕ್ಯಾನ್ಸರ್ ಗೆ ಕಾರಣ ಆವ ನಾಕನೇ ಕ್ಲಾಸಿಂದಾನೆ ತಿನ್ನಲು ಶುರು ಮಾಡಿದ್ದ ಗುಟ್ಕಾ ಮತ್ತು ಹತ್ತನೇ ಕ್ಲಾಸಿಂದ ಶುರು ಮಾಡಿದ್ದ ಸಿಗರೇಟ್. ನಮ್ಮ ಮದುವೆಯಾದದ್ದು ೩೧ / ೦೩ / ೨೦೦೫. ಆ ದಿನ ಪಟ್ಟಣದ ಅವನ ಗೆಳೆಯರು ಮದುವೆಗೆ ವಿಶ್ ಮಾಡುವಾಗ ಹ್ಯಾಪಿ ಮ್ಯಾರೀಡ್ ಲೈಫ್ ಜೊತೆಗೆ ಹ್ಯಾಪಿ ಟೊಬ್ಯಾಕೊ ಡೇ ಮಗ ಅಂದಿದ್ದರು. ಅದೇನೆಂದು ನನಗಾಗ ಅರ್ಥ ಆಗಿರಲ್ಲಿಲ್ಲ. ಹತ್ತನೇ ಕ್ಲಾಸಲ್ಲಿ ಅವನು ಸಿಗರೇಟ್ ಸೇದುತ್ತಿದ್ದರೆ  ಸ್ವಲ್ಪ ದೂರದಲ್ಲಿ ಅವನಿಗೆ ಕಾಣದ ಹಾಗೆ ನಿಂತು ನನ್ನ ಗೆಳತಿಯರಿಗೆ ನಾನೇ ತೋರಿಸುತ್ತಿದ್ದೆ ನೋಡ್ರೆ ನಮ್ಮವರು ಹೇಗೆ ಹೊಗೆ ಬಿಡ್ತಾರೆ ಅಂತ.. ಆದ್ರೆ ಅದೇ ಅವನಿಗೆ ಹೊಗೆ ಹಾಕತ್ತೆ ಅಂತ ನನಗೆ ಗೊತ್ತಾದ ದಿನದಿಂದಲೂ ಅವನನ್ನು ಆ ಚಟದಿಂದ ದೂರಮಾಡಲು ಇನ್ನಿಲ್ಲದ ಪ್ರಯತ್ನಪಟ್ಟೆ. ನನ್ನ ಪ್ರಯತ್ನ ಸಫಲವಾಗಲ್ಲಿಲ್ಲ ಅವನು ಸತ್ತೇ ಹೋದ, ಈಗ ನನ್ನ ಪಾಲಿಗೆ ಉಳಿದಿರೋದು ಶಶಿ ಒಬ್ಬನೇ, ಅವನಿಗೆ ನಾನು ಎಲ್ಲವನ್ನು ಹೇಳಲೇ ಬೇಕು, ಬರ್ತೀನಿ ಎಂದು ನಡೆದೇ ಬಿಟ್ಟಳು.

೩೧ ಮೇ ೨೦೧೩ ರವಿ ಸತ್ತಿರೋದೆ ಒಂದು ವಿಶೇಷಾನ ಅಂತ ನೀವು ಯೋಚಿಸುತ್ತಿದ್ದರೆ, ಅಷ್ಟೇ ಅಲ್ಲ. ಕರ್ನಾಟಕ ಸರ್ಕಾರ ಅಂದಿನಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದೆ.

ಇಲ್ಲಿಗೆ ರಶ್ಮಿ ಹೇಳಿದ ಅವಳ  'ಗುಟ್ 'ಕಾ ಕಥೆ ಮತ್ತು ರವಿಯ ಗುಟ್ಕಾ ಕಥೆ ಮುಗಿಯಿತು. ಬರೆದದ್ದಕ್ಕೆ ನನಗೂ ಓದಿದ್ದಕ್ಕೆ ನಿಮಗೂ ಆಕೆ ಧನ್ಯವಾದ ತಿಳಿಸಿದ್ದಾಳೆ.

                                                     *****************************

Thursday, June 13, 2013

ಆಡ್ವಾಣಿ - ಬಿಸ್ಕತ್ತು :P


ಆಡ್ವಾಣಿಗೆ ಆಗಿತ್ತು ಬಿಜೆಪಿಯೇ ಇಡೀ ಜಗತ್ತು
ಲೋಕಸಭೆ ಸೀಟಿನ ಸಂಖ್ಯೆಯಲ್ಲಿ ಬಿಜೆಪಿ ತಲುಪಿತ್ತು  -
ಅವರ ಕಾಲದಲ್ಲಿ ಎರಡರಿಂದ ನೂರೆಂಬತ್ತು
ಅಂಥ  ಆಡ್ವಾಣಿಗೆ ಬಿಜೆಪಿಯಲ್ಲಿ ಇರಲ್ಲಿಲ್ಲ ಕಿಮ್ಮತ್ತು
ಅದಕ್ಕೆ ತಪ್ಪಿಸಿದರು ರಾಷ್ಟ್ರೀಯ ಕಾರ್ಯಕಾರಿಣಿ ಅಂತ ಎಲ್ಲರಿಗೂ ಗೊತ್ತು

ಇದೆ ಸಮಯದಲ್ಲಿ:
ರಾಜನಾಥ್ ಹಾಕಿದರು ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆಗೆ ಏಣಿ ಮತ್ತು -
ನರೇಂದ್ರ ಮೋದಿಗೆ ಹೇಳಿದರು, ಇದ ನೀ ಹತ್ತು
ಕುರ್ಚಿ ಸಿಕ್ಕಿದ್ದಕ್ಕೆ ಅಭಿಮಾನಿಗಳಿಗೆ ಮೋದಿ ಕೊಟ್ಟರು ಸಿಹಿ ಮುತ್ತು ( Plain Kiss :P )

ಆಡ್ವಾಣಿ ತಿಳಿದರು :
ಇನ್ಮುಂದೆ ನಡೆಯುತ್ತೆ ಬರೀ ಮೋದಿಯದೆ ಗಮ್ಮತ್ತು
ಹಾಗಾಗಿ ಪಕ್ಷದ ಹುದ್ದೆಗಳಿಗೆ ಕೊಟ್ಟಿದ್ದರು ರಾಜಿನಾಮೆ ಬೇಸತ್ತು
ಬ್ಲಾಗಿದರು, ಬಿಜೆಪಿಯಲ್ಲಿ ನನಗಾಗುತ್ತಿದೆ ಹಿಸುಕಿದ ಹಾಗೆ ಕತ್ತು

ಮೀಡಿಯ ಅಂದಿತು :
ಆಡ್ವಾಣಿ ಇಲ್ಲದ ಬಿಜೆಪಿ ಇದ್ದರೂ, ಅದು ಹೋದ ಸತ್ತು
ಲೋಕಸಭೆ ಚುನಾವಣೆಲಿ ಬಿಜೆಪಿಗೆ ಕಾದಿದೆ ಭಾರಿ ಆಪತ್ತು
ಜಾತ್ಯಾತೀತರಿಗೆ ಇಲ್ಲವೇ ಇಲ್ಲ ಯಾವುದೇ ವಿಪತ್ತು

ಹೀಗಿರುವಾಗಲೇ :
ಮಮತಾರ ತೃತೀಯ ರಂಗದ ಕನಸು ಚಿಗುರಿತ್ತು
ಫೆಡರಲ್ ಅಲಯನ್ಸ್ ನ ಕೂಗು ಮತ್ತೆ ಎದ್ದಿತ್ತು
ಕಾಂಗ್ರೇಸ್ ಅಂದಿತು ನಾವಾಗೋಲ್ಲ ತೃತೀಯ ರಂಗಕ್ಕೆ ಸುಲಭದ ತುತ್ತು
ಮುಲಾಯಂ ಅಸಹಕಾರದಿಂದ ತೃತೀಯ ರಂಗ ಮುರಿದುಬಿತ್ತು

ಅದೇ ಸಮಯದಲ್ಲಿ:
ಆಡ್ವಾಣಿಯವರನ್ನು ವಾಪಸ್ ತರಲು ಮಾಡಿದ್ದ ತಂತ್ರ ಫಲಿಸಿತ್ತು
ಮೋಹನ್ ಭಾಗವತ್ ರ ಒಂದೇ ಕರೆ ಮಾಡಿತು ಕರಾಮತ್ತು

ಇರಬಹುದೇನೋ ಇದು :
ಮೂಲೆಗುಂಪಾಗಿದ್ದ ಆಡ್ವಾಣಿ ಪ್ರಚಾರ ಗಿಟ್ಟಿಸಲು ಬೇಕಂತಲೇ ಹಾಕಿದ ಬಿಸ್ಕತ್ತು !!

Friday, May 31, 2013

On The Spot ಅವಾರ್ಡು



ಆಫೀಸಿನಲಿ ಪ್ರತಿದಿನ ಚೆನ್ನಾಗಿ ಕೆಲಸ ಮಾಡು, ವರ್ಕ್ ಹಾರ್ಡು
ಸಮಯದ ಅರಿವಿಲ್ಲದೆ ರಾತ್ರಿ ಹತ್ತು-ಹನ್ನೊಂದಾದ ಮೇಲೆ ಹೊರ್ಡು
ಹೊರಟಾಗ ಮರೆಯದೆ ಸ್ವೈಪ್ ಮಾಡು ID ಕಾರ್ಡು
ಜೊತೆಯಲೇ ಬರುವನು ಸೆಕ್ಯೂರಿಟಿ ಗಾರ್ಡು
(ರಾತ್ರಿ ಮನೆ ಸೇರಿದ ಮೇಲೆ )
ಯಾರೊಂದಿಗೂ ಆಡಬೇಡ ಒಂದು ವರ್ಡು
ರಾತ್ರಿ ಹೊತ್ತಲಿ ತಿನ್ನಬೇಡ ಕರ್ಡು
ಬೆಳಗ್ಗೆ ಎದ್ದು ನೆನೆಯಲೂ ಬೇಡ ಲಾರ್ಡು
ಪುನಃ ಆಫೀಸಿನಲಿ ಮಾಡು ವರ್ಕ್ ಹಾರ್ಡು
ಎಲ್ಲರಿಂದಲೂ ಅನಿಸಿಕೊ ಅವನು ಕಾವರ್ಡು
ಬಾಸ್ ಮಾತ್ರ ಅನ್ನುವರು, ಇದೆ ತರ ಕೆಲಸ ಮಾಡು ಆನ್ವರ್ಡು
(ಹೀಗೆ ಮಾಡುತ್ತಿದ್ದರೆ)
ಕೊನೆಗೊಮ್ಮೆ ಸಿಗುವುದು On The Spot ಅವಾರ್ಡು

                                            *************************************

Wednesday, May 29, 2013

SUmUಕತೆ : ಭಾಗ - ೭

ಡಾಕ್ಟರ್ ಜೊತೆ ನಾನು ಸಂಯುಕ್ತಾ ಸುಮಾರು ಹೊತ್ತು ಚರ್ಚಿಸಿದೆವು. ಪ್ರಾಣಕ್ಕೇನೂ ಅಪಾಯವಿಲ್ಲ, You Must Thank Mr. Ramesha, ಅವ್ರು ಪೇಷಂಟ್ ನ ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದರು. ಇನ್ನ ಹತ್ತು ಹದಿನೈದು ನಿಮಿಷ ತಡ ಆಗಿದ್ದರೂ ನಿಮ್ಮ ತಂದೆಯವರ ಬಾಡಿ ತೊಗೊಂಡು ಹೋಗಬೇಕಿತ್ತು ಇಷ್ಟೊತ್ತಿಗೆ. ಕುತ್ತಿಗೆ ಮತ್ತು ಬೆನ್ನಿನ ಮೂಳೆ ಫ್ರಾಕ್ಚರ್ ಆಗಿದೆ, ಕಾಲಿನ ಮೂಳೆ ಮುರಿದಿರೋದರಿಂದ ಕಬ್ಬಿಣದ ರಾಡ್ ಹಾಕಬೇಕಾಗುತ್ತದೆ. ಮೂರರಿಂದ ನಾಕು ತಿಂಗಳು ಬೆಡ್ ರೆಸ್ಟ್ ಮಾಡಬೇಕು.... ..... ... ಡಾಕ್ಟರ್ ಇನ್ನು ಹೇಳುತ್ತಲೇ ಇದ್ದರು. ಸಂಯುಕ್ತಾ ಅಳಲು ಶುರು ಮಾಡಿದ್ದಳು. ಅವಳನ್ನು ಸಮಾಧಾನ ಮಾಡಿ ಆಚೆ ಕೂಡಿಸಿ, ನಾನು ಮತ್ತೆ ಒಳಬಂದು, ಡಾಕ್ಟರ್, ಅಂದಾಜು ಎಷ್ಟು ಖರ್ಚಾಗಬಹುದು ಎಂದು ಕೇಳಿದೆ. ತಮ್ಮ ಕನ್ನಡಕವನ್ನು ಸಡಿಲಿಸಿ ನನ್ನ ಮುಖವನ್ನೊಮ್ಮೆ ನೋಡಿದ ಡಾಕ್ಟರ್, ಚೀಟಿಯಲ್ಲಿ ನಾಕೈದು ಲೈನ್ ಗೀಚಿ, ಚೀಟಿಯನ್ನು ನನ್ನ ಕೈಲಿಟ್ಟು , ಆಫೀಸಿನ ಅಕೌಂಟ್ ಸೆಕ್ಷನ್ ಗೆ ಹೋಗಿ ವಿಚಾರಿಸಿ ಎಂದರು. ಸಂಯುಕ್ತಾಳಿಗೆ ಅಲ್ಲೇ ಕೂತಿರಲು ಹೇಳಿ ಆಫೀಸಿನಲ್ಲಿ ವಿಚಾರಿಸಿದೆ. ಆಫೀಸಿನವರು ಚೀಟಿಯ ಹಿಂದುಗಡೆ ಏನೇನೋ ಗೀಚಿ ಮಾತ್ರೆ ಔಷಧಿ ಹೊರತುಪಡಿಸಿ ಸುಮಾರು ಹನ್ನೊಂದು ಲಕ್ಷವಾಗಬಹುದು ಎಂದು ಹೇಳಿ, ಯಾವ ಕಂಪನಿ ಇನ್ಸೂರೆನ್ಸ್ ಇದೆ ಎಂದು ಕೇಳಿದರು. ನಾನು ಯಾವುದು ಇಲ್ಲ ಸಾರ್, ಅಷ್ಟೊಂದು ದುಡ್ಡು ನಮಗೆ ಕೂಡಿಸುವುದು ಕಷ್ಟ ಸಾರ್ ಎಂದೆ. ಅವನು ಚೀಟಿ ಹಿಂಪಡೆದು ಏನೋ ಲೆಕ್ಕಾಚಾರ ಮಾಡಿ ಏಳರಿಂದ ಎಂಟು ಲಕ್ಷಕ್ಕೆ ಕಡಿಮೆ ಆಗೋದೇ ಇಲ್ಲ ಸಾರ್ ಎಂದು ಹೇಳಿ ಚೀಟಿ ವಾಪಸ್ಸು ಕೊಟ್ಟು ಅತ್ತ ಕಡೆ ತಿರುಗಿ ನನ್ನ ಯಾವುದೇ ಪ್ರೆಶ್ನೆಗೂ ಇನ್ನು ಉತ್ತರ ಕೊಡಲು ಸಿದ್ದರಿಲ್ಲ ತಾವು ಬ್ಯುಸಿ ಎಂಬಂತೆ ಕಂಪ್ಯೂಟರ್ ಸ್ಕ್ರೀನ್ ದಿಟ್ಟಿಸುತ್ತಾ ಕೂತರು.

ದುಡ್ಡು ಹೇಗೋ ಹೊಂದಿಸಿದೆವು. ಆಪರೇಶನ್ ಗಳು ಆದವು, ವೈದ್ಯರಿಗೆ ಲಕ್ಷಗಟ್ಟಲೆ ಫೀಸ್ ತುಂಬಿದ್ದು ಆಯಿತು. ನಾಕು ತಿಂಗಳು ಬೆಡ್ ರೆಸ್ಟು ಕಳೆಯಿತು. ಅಂಕಲ್ ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಗಿತ್ತು. ಕೆಲಸವೂ ಹೋಗಿತ್ತು. ಗಾಯಾಳುಗಳಿಗೆಂದು ಸರ್ಕಾರ ಕೊಟ್ಟಿದ್ದು ಕೇವಲ ಐವತ್ತು ಸಾವಿರ, ಅವರ ಚಿಕಿತ್ಸೆಗೆ ಖರ್ಚಾದದ್ದು ಬರೋಬ್ಬರಿ ಒಂಬತ್ತು ಕಾಲು ಲಕ್ಷ, ಮಗಳ ಮದುವೆಗೆಂದು ಕೂಡಿಟ್ಟಿದ್ದ ಐದು ಲಕ್ಷ, ಆಪದ್ಧನ ಎಂದು ಅತ್ತೆ ಬಚ್ಚಿಟ್ಟಿದ್ದ ಒಂದು ಲಕ್ಷ, ನನ್ನ ಹತ್ತಿರ ಸಾಲ ಎಂದು ಪಡೆದ ಮೂರು ಲಕ್ಷ. ಅಂಕಲ್ ಈಗ ಮನೆಪೂರ್ತಿ ಓಡಾಡಿಕೊಂಡಿದ್ದಾರೆ ಕೆಲಸವಿಲ್ಲದೇ. ಮಗಳ ಮದುವೆ ಮಾಡಬೇಕು ಆದರೆ ಹಣವಿಲ್ಲ, ಮಗಳ ಸಂಪಾದನೆಯಲ್ಲೇ ಜೀವನ, ಹಾಗು ಬೇಡವೆಂದರೂ ನನ್ನ ಸಾಲ ಮರುಪಾವತಿ. ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲದ ಕಾರಣ ಮುಂಚೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯವರು ಈಗ ಕೆಲಸ ಕೊಡುತ್ತಿಲ್ಲ.

ನಾನು ಇಲ್ಲಿ ಹೇಳುತ್ತಿರುವುದು ಒಬ್ಬರ ಕಥೆಯಲ್ಲ. ಭಯೋದ್ಪಾದಕರ ಬಾಂಬ್ ದಾಳಿ, ಲಾಠಿ ಚಾರ್ಜ್, ಮಾವೋವಾದಿಗಳ ದುಷ್ಕೃತ್ಯ ಇಂಥಾ ಇನ್ನು ಹಲವು ದುರ್ಘಟನೆಯಲ್ಲಿ ಸತ್ತ ಅಥವಾ ಗಾಯಗೊಂಡ ವ್ಯಕ್ತಿಗೆ ನಾವು ಏನು ಸಹಾಯ ಮಾಡಬಹುದು? ಸರ್ಕಾರ ಸತ್ತವರಿಗೆ ಒಂದು ಲಕ್ಷ, ಗಾಯಗೊಂಡವರಿಗೆ ಐವತ್ತು ಸಾವಿರ ಪರಿಹಾರ ಘೋಷಿಸಿ ಕೈ ತೊಳೆದುಕೊಂಡು ಬಿಡುತ್ತದೆ. ಪರಿಹಾರದ ಹಣ ಪಡೆಯಲೂ ತಿಂಗಳುಗಟ್ಟಲೆ ಅಲೆಯಬೇಕು ಮತ್ತು ಲಂಚ ಕೊಡಬೇಕು. ಹೋದ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಿಜ, ಆದರೆ ಸತ್ತು ಹೋದರೆ ಒಂತರ ನೆಮ್ಮದಿ, ಗಾಯಗೊಂಡು ಬದುಕಿ, ಸತ್ತ ಜೀವನ ಮಾಡುವವರನ್ನು ನೋಡಿದಾಗ ಎಂಥವರಿಗೆ ಆದರೂ ಅಯ್ಯೋ ಅನಿಸುತ್ತದೆ. ಸತ್ತ/ಗಾಯಗೊಂಡ ವ್ಯಕ್ತಿ ಒಬ್ಬನೇ ಮಗನೋ/ಮಗಳೋ ಆಗಿದ್ದರೆ, ಅಥವಾ ಅವನೊಬ್ಬನೇ ಮನೆಯಲ್ಲಿ ದುಡಿಯುತ್ತಿದ್ದರೆ, ಆ ಮನೆಯ ಗತಿ ಹೇಗಾಗುತ್ತೆ ಅಂತ ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಯಾವುದೋ ಸಂಸ್ಥೆ, ಮತ್ಯಾವುದೋ NGO ಮತ್ತಿನ್ಯಾರೋ ಅಂಥವರಿಗೆ ಸಹಾಯ ಮಾಡುತ್ತಾರೆ ನಿಜ. ಆದರೆ ಅವರ ಸಹಾಯ ಎಲ್ಲರಿಗೂ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಸರಿಯಾದ ಸಮಯಕ್ಕೆ ದೊರಕುವುದಿಲ್ಲ. ನಿಮ್ಮ ಸುತ್ತ ಮುತ್ತ ಅಂಥವರು ಯಾರಾದರೂ ಇದ್ದರೆ ದಯಮಾಡಿ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ನಿಮ್ಮಲ್ಲಿ ಪ್ರಾರ್ಥಿಸುವೆ.
                                                       ************************

ಕೆಲಸದ ಒತ್ತಡ ಹಾಗು ನನ್ನ ಜೀವನದ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಮಯ - ಇವೆರಡೂ ಸೇರಿರುವುದರಿಂದ ಆ ದಿನ ವಿಮಲ ಕರೆ ಮಾಡಿದ್ದರ ಕಥೆ ನಿಮಗೆ ತಿಳಿಸಲು ಆಗುತ್ತಿಲ್ಲ ಮತ್ತು SUmUಕತೆ ಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಸಮಯ ಸಿಕ್ಕಾಗ ವಿಮಲ ಕರೆ ಮಾಡಿದ್ದು ಮತ್ತು ನನ್ನ ಸಂಯುಕ್ತಾಳ ಮುಂದುವರೆದ ಕಥೆ - ಇವೆರಡನ್ನೂ ಬೇರೆ ಕಥೆಯೊಂದಿಗೆ ಹೇಳುವೆ.
ಇಂತಿ ನಿಮ್ಮ


 

Tuesday, May 28, 2013

SUmUಕತೆ : ಭಾಗ - ೬


ಕಾರು ಮನೆ ಮುಂದೆ ಬಂದು ನಿಂತಿತು. ಮನೆ ಬೇಗ ಹಾಕಿರುವುದನ್ನು ನೋಡಿದ ಅತ್ತೆ ನನ್ನ ಕಡೆ ತಿರುಗಿ ಏನೋ ಹೇಳುವುದರೊಳಗಾಗಿ ನಾನೇ, ಅಂಕಲ್ ಇವತ್ತು ಸ್ವಲ್ಪ ಲೇಟ್ ಆಗತ್ತಂತೆ ಬರದು, ಆಗ್ಲೇ ರಮೇಶ ಅವರು ಫೋನ್ ಮಾಡಿದಾಗ ಹೇಳಿದ್ದರು ಎಂದೆ. ಆಮೇಲೆ ನಾನೇ ಹೋಗಿ ಸೌಮ್ಯ ಆಂಟಿ ಮನೆಯಿಂದ ಬೀಗದ ಕೀ ಇಸ್ಕೊಂಡುಬಂದೆ. ಅವರ ಮನೆಗೆ ಹೋದಾಗ ಸೌಮ್ಯ ಆಂಟಿಗೆ ಸರಸು ಅತ್ತೆಗೆ ಏನೂ ಹೇಳಬೇಡಿ ಎಂದು ಸೂಕ್ಷ್ಮವಾಗಿ ತಿಳಿಸಿಬಂದೆ. ಬೀಗ ತೆಗೆದು ಮನೆ ಒಳಗೆ ಹೋದವನೇ ಅತ್ತೆಗೆ ಬಿಸಿ ಬಿಸಿ ಕಾಫಿ ಮಾಡಲು ಹೇಳಿ, ಸಂಯುಕ್ತಾಳಿಗೆ ಫ್ರೆಶ್ ಆಗು, ಎಲ್ಲೋ ಹೋಗೋದಿದೆ ಎಂದು ತಿಳಿಸಿ ನಾನು ಮುಖ ತೊಳೆದು ಸೋಫಾ ಮೇಲೆ ನಿಟ್ಟುಸಿರು ಬಿಡುತ್ತಾ ಕೂತೆ. ಹಾಗೆ ಕೂತ ಕ್ಷಣವೇ ಏನೋ ಹೊಳೆದಂತಾಗಿ ಎದ್ದೆ. ಅತ್ತೆ ಅಡುಗೆಮನೆಯಲ್ಲಿ ಕಾಫಿ ಮಾಡುತ್ತಿದ್ದರು. ಸಂಯುಕ್ತಾ ಬಚ್ಚಲು ಮನೆಯಲ್ಲಿದ್ದಳು. ಯಾರು ನನ್ನನ್ನು ನೋಡುತ್ತಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು TV ಹತ್ತಿರ ಹೋಗಿ, ಸೆಟ್ ಟಾಪ್ ಬಾಕ್ಸ್ ಯಿಂದ TVಗೆ ಕನೆಕ್ಟ್ ಆಗಿದ್ದ ೩ ಕೇಬಲ್ ಗಳಲ್ಲಿ ಎರಡನ್ನು ಲೂಸ್ ಕನೆಕ್ಟ್ ಮಾಡಿದೆ. TV ON ಮಾಡಿ No Signal ಬರುವುದನ್ನು ನೋಡಿದೆ.

ನಾನು ಸೋಫಾ ಮೇಲೆ ಕೂತೆ. ಅತ್ತೆ ಬಿಸಿ ಬಿಸಿ ಕಾಫಿ ತಂದರು. ಸಂಯುಕ್ತಾಳು ಬಂದಳು. ಮೂರು ಜನ ಕಾಫಿ ಕುಡಿತಾ ಕೂತಿದ್ದೆವು, ಅಷ್ಟರಲ್ಲಿ ಸೌಮ್ಯ ಆಂಟಿ ಬಂದರು. ಅತ್ತೆ ಅವರಿಗೆ ಚಿನ್ನದ ಪದಕ, ಸರ್ಟಿಫಿಕೇಟು ತೋರಿಸೋದಕ್ಕೆ ಬ್ಯಾಗ್ ತೊಗೊಂಡು ರೂಮಿಗೆ ಹೋದರು. ನಾನು ಕಾಫಿ ಕುಡಿದು, ಅತ್ತೆ ರಾತ್ರಿ ಇಲ್ಲಿಗೆ ಊಟಕ್ಕೆ ಬರ್ತೀನಿ, ತಿಳಿ ಸಾರು ಅನ್ನ ಸಾಕು, ಬೇರೇನೂ ಮಾಡಬೇಡಿ, ಈಗ ನಾನು ಸಂಯು ಸ್ವಲ್ಪ ಹೊರಹೋಗಿ ಬರ್ತೀವಿ ಎಂದು ಹೇಳಿ, ಗಾಡಿ ತೆಗೆದು ಅವಳನ್ನು ಹತ್ತಿಸಿಕೊಂಡು ಬನ್ನೇರುಘಟ್ಟ  ರಸ್ತೆಯ ಕಡೆ ಹೊರಟೆ. ದಾರಿಯಲ್ಲಿ ಸಂಯುಕ್ತಾ ಎಲ್ಲಿಗೆ ಎಲ್ಲಿಗೆ ಎಂದು ಎಷ್ಟು ಬಾರಿ ಕೇಳಿದರೂ, ಈಗ ಅಲ್ಲಿಗೆ ಹೋಗ್ತಿದೀವಲ ಗೊತ್ತಾಗತ್ತೆ ಬಾ ಅಂದು, ಸೀದಾ ಹೋಗಿ ಫೋರ್ಟಿಸ್ ಆಸ್ಪತ್ರೆಯ ಬಳಿ ಗಾಡಿ ನಿಲ್ಲಿಸಿದೆ.
ಯಾಕೋ ಇಲ್ಲಿಗ್ ಕರ್ಕೊಂಡು ಬಂದೆ ಅಂತ ಸಂಯುಕ್ತಾ ಒಂದೇ ಸಮನೆ ಪೀಡುಸುತ್ತಿದ್ದಳು, ನಾನು ರಮೇಶ ಅವರಿಗೆ ಕರೆ ಮಾಡಿದೆ. ಅವರು 3rd ಫ್ಲೋರ್ ICU ಹತ್ತಿರ ಬರೋದಕ್ಕೆ ತಿಳಿಸಿದರು.

ನನ್ನನ್ನು ನೋಡುತ್ತಿದ್ದಂತೆ ರಮೇಶ, ಹತ್ರ ಬಂದು, ನೋಡಪ್ಪ ನಾನು ಈಗಲೇ ಹೊರಡಬೇಕು. ಸಾಹೇಬರು ಕಾಲ್ ಮಾಡಿದ್ದರು. ಅಗೋ ಅಲ್ಲಿ ನಿಂತಿದ್ದಾರಲ್ಲ ಅವರೇ ಅಂಕಲ್ ನ ನೋಡುತ್ತಿರೋ ಡಾಕ್ಟರ್. ಡಾಕ್ಟರ್. ರಾಘವೇಂದ್ರ, ಅಲ್ಲಿ ಅವರ ಪಕ್ಕ ನಿಂತಿರೋರು ನರ್ಸ್, ಈಗ ಕಂಡಿಶನ್ ಪರವಾಗಿಲ್ಲ, ಚೇತರಿಕೆ ಕಾಣ್ತಿದೆ, ಪ್ರಾಣಕ್ಕೇನೂ ಅಪಾಯವಿಲ್ಲ ಅಂತ ಹೇಳಿದಾರೆ. ಏನಾದ್ರೂ ಹೆಲ್ಪ್ ಬೇಕಾದ್ರೆ ಕಾಲ್ ಮಾಡು, ನಾನು ಹೊರಡುತ್ತೀನಿ, ಜೋಪಾನ ಕಣಮ್ಮ ಅಂತ ಹೇಳಿ ಹೊರಟರು. ಏನ್ ನಡೀತಿದೆ ಅಂತ ಗೊತ್ತಾಗದೆ  ಕಂಗಾಲಾಗಿದ್ದ ಸಂಯುಕ್ತಾಳಿಗೆ ಬೆಳಗ್ಗೆ ರಮೇಶ ಕಾಲ್ ಮಾಡಿದಾಗಿನಿಂದ ನಡೆದಿದ್ದನ್ನು ವಿವರಿಸಿದೆ.

ಬೆಳಗ್ಗೆ ನೀನು ಮೆಡಲ್ ಸ್ವೀಕರಿಸಿದನ್ನು ಕ್ಲಿಕ್ಕಿಸಿದ ಮರುಕ್ಷಣವೇ ನನಗೊಂದು ಕರೆ ಬಂತು, ರಮೇಶ ಅಂಕಲ್ ಮಾಡಿದ್ದರು. ಇವತ್ತು ಬೆಳಗ್ಗೆ ಮಲ್ಲೇಶ್ವರದಲ್ಲಿ ಭಯೋದ್ಪಾದಕರು ಬಾಂಬ್ ಸ್ಪೋಟ ಮಾಡಿದ್ದಾರೆ. ಸುಮಾರು ೮-೧೦ ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಫ್ಯಾಕ್ಟರಿ ಹೊರಗಡೆ ಕಾಫಿ ಕುಡಿಯಲು ಪೆಟ್ಟಿ ಅಂಗಡಿಗೆ ಬಂದಿದ್ದರಂತೆ ಅಂಕಲ್. ಅವರಿಗೂ ತೀವ್ರ ಪೆಟ್ಟಾಗಿದೆ. ಪೆಟ್ಟಿ ಅಂಗಡಿಯ ಎದುರಿಗಿದ್ದ ಮರದ ಕೆಳಗೆ ನಿಲ್ಲಿಸಿದ್ದ ಬೈಕನ್ನೇ ಭಯೋದ್ಪಾದಕರು ಸ್ಪೋಟ ಮಾಡಿದ್ದಾರೆ. ಅದೃಷ್ಟ ಚೆನ್ನಾಗಿತ್ತು, ಯಾವಾಗಲೂ ಕಾಫಿ ಕುಡಿಯಲು ಮರದ ಕೆಳಗೆ ಹೋಗುತ್ತಿದ್ದ ಅಂಕಲ್ ಇವತ್ತು ಮಾತನಾಡಲು ಯಾರೋ ಸಿಕ್ಕಿದರೆಂದು ಅಲ್ಲೇ ನಿಂತರಂತೆ.

ಅಪ್ಪ... ಅಪ್ಪನಿಗೆನೂ ಆಗಿಲ್ಲ ತಾನೇ? ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಕೂತಳು ಸಂಯುಕ್ತಾ.

ಅಂಕಲ್ ಬೈಕಿಗೆ ವಿರುದ್ದವಾಗಿ ನಿಂತಿದ್ದರಿಂದ ಬೆನ್ನಿಗೆ, ಕುತ್ತಿಗೆಗೆ, ಕಾಲಿಗೆ ಪೆಟ್ಟಾಗಿದೆಯಂತೆ. ಸ್ಪೋಟಗೊಂಡ ಮರುಕ್ಷಣ ಜನ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಾಯಗೊಂಡವರು ಏಳೊದಿಕ್ಕೆ ಆಗದೆ ಅಲ್ಲೇ ಬಿದ್ದು ಒದ್ದಾಡಿದ್ದಾರೆ, ಅದರಲ್ಲಿ ಅಂಕಲ್ ಕೂಡ ಒಬ್ಬರು. ಸುಮಾರು ೧೫-೨೦ ನಿಮಿಷ ಕಳೆದ ಮೇಲೆ ಅಂಬುಲೆನ್ಸ್ ಬಂದಿದೆ. ಅಷ್ಟರಲ್ಲಿ ವಿಪರೀತವಾದ ನೋವಿನಿಂದ ಬಳಲಿದ್ದರು ಜೊತೆಗೆ ರಕ್ತ ಕೂಡ ಹೋಗಿತ್ತು , ಅಂಕಲ್ ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ. ಅವರನ್ನು ತಕ್ಷಣವೇ ಮಲ್ಲೇಶ್ವರಂನ KC ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಹೇಗಿರತ್ತೆ ಗೊತ್ತಲ? ಯಾರು ಕೇಳೋರೆ ಇರಲ್ಲಿಲ್ಲವಂತೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನಡೆಯದೆ ಇರೋದನ್ನ ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸಿದ್ದಾರೆ. ಮನೆಯಲ್ಲಿ TV ನೋಡುತ್ತಿದ್ದ ಸೌಮ್ಯ ಆಂಟಿ, ಆಸ್ಪತ್ರೆಯಲ್ಲಿ ಮಲಗಿದ್ದ ಅಂಕಲ್ ಅವರನ್ನು ಗುರುತಿಸಿ ತಕ್ಷಣವೇ ರಮೇಶ ಅಂಕಲ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆಗಲೇ ರಮೇಶ ಅವ್ರು ನನಗೆ ಕರೆ ಮಾಡಿದ್ದರು.

ರಮೇಶ ಅಂಕಲ್ : - ಭಯೋದ್ಪಾದನೆ... ಬಾಂಬು ... ಅಂಕಲ್ ... ಹೀಗಾಗಿಬಿಟ್ಟಿದೆ.
ನಾನು : - ಸಾರ್, ಅಂಕಲ್ ನ ಫಸ್ಟ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ. ಫೋರ್ಟಿಸ್ ಗೆ ಸೇರಿಸಿ ಅಥವಾ ಅಪೋಲೊ ಗೆ ಸೇರಿಸಿ. ಎಷ್ಟ್ ಖರ್ಚಾದ್ರು ಚಿಂತೆ ಇಲ್ಲ.
ರಮೇಶ ಅಂಕಲ್ : - ಖರ್ಚಿನ ಪ್ರಶ್ನೆ ಅಲ್ಲಪ್ಪ, ಭಯೋದ್ಪಾದನೆ ಕೇಸು, ಅಲ್ಲಿ ಅಡ್ಮಿಟ್ ಮಾಡ್ಕೊಬೇಕಲ?
ನಾನು : -  ಏನ್ ಅಂಕಲ್ ನೀವೇ ಹೀಗಂದ್ರೆ? ಅಕಸ್ಮಾತ್ ಸೇರುಸ್ಕೊಳಲ್ಲ ಅಂದ್ರೆ ನಿಮ್ಮ ಸಾಹೇಬರ ಕಡೆಯಿಂದ ಒಂದು ಮಾತು ಹೇಳಿಸಿ ನೋಡಿ.
ರಮೇಶ ಅಂಕಲ್ : -  ನಾನು ಪ್ರಯತ್ನ ಮಾಡ್ತೀನಿ, ನೀವು ಈ ಕ್ಷಣ ಹೊರಟು ಬನ್ನಿ.
ನಾನು : -  ನಾವು ಬರ್ತೀವಿ, ಅಂಕಲ್ ಪ್ರಾಣಕ್ಕೆನೂ ಅಪಾಯ ಇಲ್ಲ ತಾನೇ?
ರಮೇಶ ಅಂಕಲ್ : -  ಸದ್ಯಕ್ಕೆ ಏನು ಹೇಳೋಕು ಆಗಲ್ಲ, ಇಲ್ಲಿಯ ಡಾಕ್ಟರ್ ೫೦:೫೦ ಅಂತಿದಾರೆ.
ನಾನು : - ಅಯ್ಯೋ ದೇವರೇ, ನಿಮ್ನೆ ನಂಬಿದೀನಿ ಅಂಕಲ್, ನಾನು ತಕ್ಷಣ ಹೊರಟು ಬರ್ತೀನಿ , ಅಲ್ಲಿವರ್ಗು ನೀವು ಮ್ಯಾನೇಜ್ ಮಾಡಿ
ರಮೇಶ ಅಂಕಲ್ : -  ಆಯ್ತಪ್ಪ. ದೇವರನ್ನ ನಂಬಿದೀರ, ಅವನೇ ಕಾಪಾಡಬೇಕು.
ನಾನು : - ಸರಿ ಅಂಕಲ್ . ನಾನು ಹೊರಡೋ ಏರ್ಪಾಟು ಮಾಡ್ಕೊತೀನಿ. bye
ರಮೇಶ ಅಂಕಲ್ : -  bye


ಶಾಸಕರ PA ಆದ ರಮೇಶ ಅಂಕಲ್ ತಮ್ಮ ಪ್ರಭಾವ ಬಳಸಿ ನಿಮ್ಮ ಅಪ್ಪನ್ನ ಇಲ್ಲಿಗೆ ಸೇರಿಸಿದ್ದಾರೆ.

ನೀನು ಅಳು ನಿಲ್ಸು, ನಡೆದಿರೋ ಯಾವ ವಿಚಾರನೂ ನಿಮ್ಮಮ್ಮನಿಗೆ ಗೊತ್ತಾಗೋದು ಬೇಡ. ಸೌಮ್ಯ ಆಂಟಿಗೂ ಹೇಳಬೇಡಿ ಅಂತ ಹೇಳಿದೀನಿ. ಫ್ಯಾಕ್ಟರಿಯಲ್ಲಿ ಕೆಲಸ ಮಾಡೋವಾಗ ಮಷೀನ್ ಬಡಿದು ಸ್ವಲ್ಪ ಪೆಟ್ಟಾಗಿದೆ ಎಂದಷ್ಟೇ ಅತ್ತೆಗೆ ಹೇಳ್ತೀನಿ. ನೀನು ಹಾಗೆ ಹೇಳಬೇಕು, ಮನೆಯಲ್ಲಿ ಅಮ್ಮನ ಜೊತೆ ಸೇರಿ ಅಳುತ್ತಾ ಕೂತರೆ ನಿಮ್ಮನ್ನು ಸಮಾಧಾನ ಮಾಡೋಕೆ ನನ್ನಿಂದ ಸಾದ್ಯವಿಲ್ಲ. ಈಗಲೇ ಹೇಳಿದೀನಿ.

ಡಾಕ್ಟರ್ ಬಿಡುವಾಗಿರೋದನ್ನ ಕಂಡು ಸಂಯುಕ್ತಾಳನ್ನು ಕರೆದುಕೊಂಡು ಅವರ ಕ್ಯಾಬಿನ್ ಒಳಗೆ ಹೋಗಿ ಕೂತೆ.
                                                        **************************

Friday, May 24, 2013

SUmUಕತೆ : ಭಾಗ - ೫


ವಿಮಲಳ ಹೆಸರು ಮನಃಪಟಲದ ಮೇಲೆ ಮೂಡಿದ ಕ್ಷಣವೇ, ಆರಾಮಾಗಿ ನನ್ನ ಹೆಗಲ ಮೇಲೆ ನಿದ್ರಿಸುತ್ತಿದ್ದ ಸಂಯುಕ್ತಾ ಎಚ್ಚರಗೊಂಡಳು. ನಾನು ರೆಸ್ಟ್ ರೂಮಿಗೆ ಹೋಗಬೇಕು ಜಾಗಬಿಡು ಎಂದು ಕೈಸನ್ನೆ ಮಾಡುತ್ತಾ ಎದ್ದುನಿಂತಳು. ಅವಳು ಆ ಕಡೆ ಹೋಗೋವರೆಗೂ ಅವಳತ್ತಲೇ ನೋಡುತ್ತಿದ್ದ ನನಗೆ, ಸಾಕಿನ್ನು ಆ ಕಡೆ ತಿರುಗಿಕೋ ಎಂಬಂತೆ ಮುಖಮಾಡಿ ಸಂಯುಕ್ತಾ ಒಳಹೋದಳು. ತಾನು ಹತ್ತಿರವಿರುವಾಗ ವಿಮಲಳನ್ನು ನನ್ನ ಮನಸ್ಸಿನಲ್ಲಿಯೂ ಸುಳಿಯಲು ಬಿಡದ ಸಂಯುಕ್ತಾ, ಇನ್ನೂ ನಾನು ವಿಮಲಳನ್ನು ಇಷ್ಟಪಡುತ್ತಿದ್ದೀನಿ ಎಂದರೆ ಸುಮ್ಮನೆ ಬಿಡುವಳಾ? ಅನಿಸಿ, ಆ ತಂಪಾದ ACಯಲ್ಲೂ ಮುಖದಲ್ಲಿ ಬೆವರೂರಿತು.
ಅವಳು ಬರೋಷ್ಟರಲ್ಲಿ ಕರ್ಚಿಫ್ ತೆಗೆದು ಬೆವರೊರೆಸಿಕೊಂಡು, ಅವಳು ಕೂತಿದ್ದ ಮಧ್ಯದ ಸೀಟಿಗೆ ನಾನು ಶಿಫ್ಟ್ ಆದೆ. ಅತ್ತೆ ಕುಂಭಕರ್ಣನ ವಂಶದ ಕುಡಿಯೇನೋ ಅನಿಸಿ, ಒಂಥರಾ ವಿಚಿತ್ರವಾದ ಸಣ್ಣ ನಗೆ ಬೀರುತ್ತಾ ನೋಡುತ್ತಿದ್ದೆ. ಸಂಯುಕ್ತಾ ಬಂದು, ಅಮ್ಮ ಮಲಗಿರೋದನ್ನ ನೋಡಿ ನಗ್ತಿದ್ಯ ತಾನೇ ನೀನು? ಎಂದು ತಲೆಮೇಲೆ ಮೊಟಕಿದಳು. ನನ್ನ ಮನಸ್ಸಿನಲ್ಲಿರುವುದನ್ನು ಗಿಣಿ ಪಾಠ ಒಪ್ಪಿಸುವ ಹಾಗೆ ಹೇಗಮ್ಮ ಹೇಳ್ತ್ಯ ನೀನು ಅಂದರೆ, ನಿನ್ನ ಮನಸಿನ ಇಂಚು ಇಂಚನ್ನು ನಾನು ಬಲ್ಲೆ ಅಂದಳು.

ನಾನು:- ಹಾಗಾದರೆ ನನ್ನ ಮನಸ್ಸು ಸುಮಾರು ಎಷ್ಟ್ ಇಂಚ್ ಇದ್ಯೆ? :P
ಸಂಯುಕ್ತಾ:- ಆ.. ನೆಕ್ಸ್ಟ್ ಟೈಮ್ ನಿನ್ನ ಮನಸ್ಸನ್ನ ಓದೋವಾಗ ಒಂದ್ ಸ್ಕೇಲ್ ಕೊಡು, ಅಳ್ಕೊಂಡು ಬರ್ತೀನಿ.
ನಾನು:-  ನೀನ್ ಅಳ್ಕೊಂಡ್ ಬರೋದ್ ಬೇಡ, ಸರೀಗ್ ಅಳತೆ ತಂದ್ರೆ ಸಾಕು :P
ಸಂಯುಕ್ತಾ:- ಅಳತೆನೆ ನಾನು ಹೇಳಿದ್ದು. ಬರಿ PJ ಹೊಡೆಯೋದ್ರಲ್ಲಿ ಎತ್ತಿದ ಕೈ.
ನಾನು:- PJ ಹೊಡೆಯೋದು ಅಂದ್ರೆ ಸುಮ್ನೆನಾ... ನನ್ ಮನಸು ಎಷ್ಟ್ ಇಂಚಾದ್ರು ಇದ್ ಹಾಳಾಗ್ಲಿ, ನಿನ್ ತಲೆ .... 
ಸಂಯುಕ್ತಾ:- ಏ ಏ .. ಯಾಕೆ? ತಲೆ ಗಿಲೆ ಅಂದ್ರೆ.....
ನಾನು:- ಲೇ ಲೇ .. ತಡ್ಕೊಳೆ ಪೂರ್ತಿ ಹೇಳೋವರ್ಗು, ಕಾಯ್ತಿರ್ತಳೆ ಕಾಲ್ ಕೆರ್ಕೊಂಡು ಜಗಳ ತೆಗೆಯೋಕೆ.
ಸಂಯುಕ್ತಾ:- ನಾನೇನ್ ಜಗಳ ತೆಗಿತಿಲ್ಲ, ನೀನೆ ಶುರು ಮಾಡ್ತಿರದು.
ನಾನು:- ನಾನು ನಿನ್ ತಲೇಲಿ ಅಷ್ಟೊಂದು ಬುದ್ದಿ ಹೇಗೆ ತುಂಬಿಕೊಂಡಿ ಅಂತ ಕೇಳಕ್ ಹೊರಟಿದ್ದೆ.
ಸಂಯುಕ್ತಾ:-  ದಿನ ನಾಕ್ ನಾಕ್ ಸತಿ ಜೋಗದ ಗುಂಡೀಲಿ ಬಿದ್ದು ತುಂಬುಸ್ಕೊಂಡೆ :P
ನಾನು:- ಅದೇ ನಿಮ್ ಪ್ರೊಫೆಸರ್ ಅಜಿತ್ ಜೋಗಿ ಇದಾನಲ, ಅವ್ನ್ ಗುಂಡಿ ಬಿಚ್ ನಿಂತ್ಕೊತಿದ್ನಾ, ನೀವೆಲ್ಲಾ ಹೋಗಿ ಬೀಳೋಕೆ? :P
ಸಂಯುಕ್ತಾ:-  ಅಯ್ಯೋ ಅದೊಂದು ಗೂಬೆ... ಒಂದಿನನಾದ್ರು ಗುಂಡಿ ಇರೋ ಶರ್ಟ್ ಹಾಕಿದ್ರೆ ತಾನೇ... ಯಾವಾಗ್ ನೋಡು ಕಾಲರ್ ಇಲ್ದೆರೋ ಗ್ರಾಫಿಕ್ ಟಿ ಶರ್ಟ್ ಹಾಕಿರ್ತಾನೆ.
ನಾನು:- ನಿಮಗೆಲ್ಲ ಅವ್ನ ಚೆಸ್ಟು, ಸಿಕ್ಸ್ ಪ್ಯಾಕು ಚೆನ್ನಾಗ್ ಕಾಣ್ಲಿ ಅಂತಾನ?
ಸಂಯುಕ್ತಾ:- ಹ ಹ .. ಅಷ್ಟೊಂದ್ ಸೀನ್ ಇಲ್ಲ.. ಏನೋ ಸ್ವಲ್ಪ ಜಿಮ್ ಬಾಡಿ ಇದೆ ಅಷ್ಟೇ, ಸಿಕ್ಸ್ ಪ್ಯಾಕ್ ಎಲ್ಲ ನಾನ್ ನಿಂಗ್ ಕತೆ ಕಟ್ಟಿದ್ದಿದು :P
ನಾನು:- ನೀನ್ ಹೇಳ್ತಿದ್ದಿದು ಕೇಳಿ, ನೀನೆಲ್ಲೋ ಅವ್ನೆ ಕಟ್ಕೊಂಡು ಬರ್ತ್ಯ ಅಲ್ಲಿಂದ, ನನ್  ಜೀವನ ಸುಖಕರ ಆಗತ್ತೆ ಅಂತ ಸ್ಕೆಚ್ ಹಾಕಿದ್ದೆ ನಾನು :P
ಸಂಯುಕ್ತಾ:-  ಅವನಿಗೆ ನಮ್ಮಂತೋರು ಎಷ್ಟ್ ಜನಾನೋ? ಅಂದ್ರು ನನ್ ಮೇಲೆ ಒಂದ್ extra ಕಣ್ಣಿಟ್ಟಿದ್ದ.
ನಾನು:-  ಅವ್ನು ಚೆನ್ನಾಗಿ ನೋಡ್ಕೋತಾನೆ ಅಂತಾನೆ ಆಲ್ವಾ ನಾನು ನಿನ್ನ ಅಲ್ಲಿಗ್ ಕಳ್ಸಿದ್ದು :P
ಸಂಯುಕ್ತಾ:- ಹೌದಪ್ಪ .. ನಿನ್ನ ನಂಬಿಕೆನ ಉಳುಸ್ಕೊಂಡ ಅವನು.. ಹೋಗಲೊ.
ನಾನು:- ನೀನೆ ಪಕ್ಕ ಕೂತಿರೋವಾಗ ನಾನೆಲ್ಲಿಗೆ ಹೋಗಲಿ?
ಸಂಯುಕ್ತಾ:-  ಬೆಣ್ಣೆ ಹಚ್ಚೋಕೆ ಶುರು ಈಗ
ನಾನು:-  ಬೆಣ್ಣೆಗೆನೆ ಯಾರಾದ್ರು ಬೆಣ್ಣೆ ಹಚ್ಚಕ್ಕೆ ಸಾಧ್ಯಾನಾ?
ಸಂಯುಕ್ತಾ:-  ಹು.. ನೀನೆ ಇದ್ಯಲ.. ನಿನ್ನ ಮಾತಿಗೆ ಕರಗಿಹೋಗೋ ಬೆಣ್ಣೆ ನಾನು.
ನಾನು:-  ಸರಿ ತಾಯಿ .. ಕೈ ಕೊಡು
ಸಂಯುಕ್ತಾ:- ಯಾಕೋ?
ನಾನು:-  ಕೊಡಿಲ್ಲಿ ಸುಮ್ನೆ?
ಸಂಯುಕ್ತಾ:- ತೊಗೊ
ನಾನು:- [ಕೈ ಕುಲುಕುತ್ತಾ] Many Many Congratulations :)
ಸಂಯುಕ್ತಾ:- ಏನಿಕ್ಕೆ?
ನಾನು:-  3rd Rank ಅಂದ್ರೆ ಸುಮ್ನೆನಾ, ಅದು ಅಲ್ದೆ ೨ ಗೋಲ್ಡ್ ಮೆಡಲ್ ಜೊತೆಗೆ
ಸಂಯುಕ್ತಾ:- ಎಸ್ಟ್ ಸತಿ ಹೇಳಿದ್ನೇ ಹೇಳ್ತಿದ್ಯೋ.. ನನ್ ಕೈ ಹಿಡ್ಕೋಬೇಕು ಅನ್ಸಿದ್ರೆ ಡೈರೆಕ್ಟ್ ಆಗೇ ಕೇಳಬೇಕಿತ್ತು. ಅದು ಬಿಟ್ಟು ಇಪ್ಪತೆಂಟು ಸತಿ Congratulations Congratulations ಅಂತ ನಾಟಕ ಮಾಡ್ತ್ಯ :P
ನಾನು:-  ಆ.. ನಾಟಕಾನ? ನಂಗೆ ಅನ್ಸಿದ್ರೆ ನಿನ್ ಕೈಯೇನು, ಮೈನೆ ಹಿಡ್ಕೊತೀನಿ ಅಂದು ಬಲಗೈ ಎತ್ತಿ ಅವಳ ಹೆಗಲ ಮೇಲೆ ಹಾಕಿದೆ.
ಸಂಯುಕ್ತಾ:- [ನನ್ನ ಕಿವಿ ಹತ್ತಿರ ಬಂದು] ಅಮ್ಮ ಪಕ್ಕದಲ್ಲೇ ಇದಾರೆ ಅನ್ನೋದು ಮರಿಬೇಡ ಪುಟಾ..
ನಾನು:-  ಅವ್ರು ಇಲ್ ಎಲ್ ಇದಾರೆ, ಕುಂಭಕರ್ಣನ ಜೊತೆಗೆ...
ಸಂಯುಕ್ತಾ:- ಸಾಕ್ ಸಾಕು.. ಮುಂದೆ ಏನು ಹೇಳಬೇಡ, ನಂಗೊತ್ತು ನೀನ್ ಏನ್ ಹೇಳ್ತ್ಯ ಅಂತ.
ನಾನು:-  ಸರಿ ... I  am very happy ಸಂಯು, ೨ ವರ್ಷ ಎಷ್ಟ್ ಬೇಗ ಕಳೆದು ಹೋಯಿತು. ನಂಗಿನ್ನು ನೀನು ಹೋಗಲ್ಲ ಅಂತ ಹಠ ಮಾಡುತ್ತಿದ್ದುದು ಎಷ್ಟ್ ಚೆನ್ನಾಗಿ ಜ್ಞಾಪಕ ಇದೆ.
ಸಂಯುಕ್ತಾ:- ಎಷ್ಟ್ ಬೇಗಾನ? ನಂಗೆ ೨ ಯುಗ ಕಳೆದ ಹಾಗೆ ಆಗಿದೆ. ೨ ವರ್ಷದಲ್ಲಿ ಅಪ್ಪ ಅಮ್ಮನ ಒಂದೇ ಸತಿ, ನಿನ್ನ ಎರಡೇ ಸತಿ ನೋಡಿದ್ದು, ಸಾಕಪ್ಪ ಸಾಕು ಈ ವನವಾಸ, ನಾನಂತೂ ಇನ್ಮುಂದೆ ನಿಮ್ನೆಲ್ಲ ಬಿಟ್ಟು ಕದಲಲ್ಲ.
ನಾನು:- ಹಾಗಂದ್ರೆ ಹ್ಯಾಗೆ? ನಾನು ನೆಕ್ಸ್ಟ್ ವೀಕ್ ಜೋಹಾನ್ಸಬರ್ಗ್ ಹೋಗ್ತಿದೀನಲ.. ಆಗ ನೀನು ಬಿಟ್ಟಿರಲೇ ಬೇಕು.
ಸಂಯುಕ್ತಾ:- ವ್ಹಾಟ್ ? ಜೋಹಾನ್ಸಬರ್ಗ? ಯಾವಗ ?
ನಾನು:- ಹೇಳುದ್ನಲ... next week ಅಂತ
ಸಂಯುಕ್ತಾ:- ಹು ಹು ಹು... ಏನು ಹೇಳಲ್ಲ ನೀನು ನಂಗೆ.. ಇದು ಇಷ್ಟ್  ಬೇಗ ಯಾಕೆ ಹೇಳ್ದೆ ? ಹೊರಡೋ ಹಿಂದಿನ ದಿನ ಹೇಳ್ಬೇಕಿತ್ತು ? ಏನೋ ನೀನು ...
ನಾನು:-  ಇಷ್ಟ್ ಬೇಗ?? ನಂಗೆ ಗೊತ್ತಾಗಿದ್ದೆ ಇವತ್ತು ಬೆಳಗ್ಗೆ. ನಮ್ಮ ಮ್ಯಾನೇಜರ್ ಕಾಲ್ ಮಾಡಿದ್ದರು.  
ಸಂಯುಕ್ತಾ:- ಓಹ್.. ಸರಿ ಸರಿ.. ಎಷ್ಟ್ ದಿನ.. ಅದ್ಯಾವಗ್ಲೊ ಒಂದ್ ಆರ್ ತಿಂಗ್ಳು ಕೆಳಗೆ ಹೇಳ್ತಿದ್ದಲ ಅದೇ ಪ್ರೋಗ್ರಮಾ?
ನಾನು:-  ಹು ಕಣೆ ಅದೇ.. postpone ಆಗಿ ಆಗಿ ಈಗ ಬಂದಿದೆ. Just one month, ಹೀಗ್ ಹೋಗಿ ಹಾಗ್ ಬಂದುಬಿಡ್ತೀನಿ.
ಸಂಯುಕ್ತಾ:- ನಾನು ಬಂದು ಒಂದ್ ವಾರಾನು ಆಗಿರಲ್ಲ, ನೀನು ಹೋಗು
ನಾನು:-  ಹು .. ಹೇಯ್ ಯಾವತ್ತು joining date ನಿಂದು?
ಸಂಯುಕ್ತಾ:- ನಂದಿನ್ನು ೨ ವೀಕ್ಸ್ ಟೈಮ್ ಇದೆ. ನಾನ್ join ಆಗೋ ಟೈಮಿಗೆ ನೀನ್ ಇರೋದಿಲ್ಲ.
ನಾನು:-  ನಾನ್ ಇರೋದಿಲ್ಲ, ಜೊತೆಗೆ ನಿಮ್ಮ ಬ್ಯಾಚಿನ ಟ್ರೈನಿಂಗೆ ಕೂಡ ನಾನ್ ಬರೋದಿಲ್ಲ. 
ಸಂಯುಕ್ತಾ:-  ಅಬ್ಬ ಸದ್ಯ .. ಒಳ್ಳೇದೆ ಆಯ್ತು.. ನೀನ್ ಬಂದು ಎಲ್ರು ಮುಂದೇನೂ ಬೇಕೂನ್ತಾನೆ ನಂಗೆ questions ಕೇಳ್ತಿದ್ದಿ.
ನಾನು:-  ಹಹ.. ಅದು ಸರಿ.. ಸೆಲೆಕ್ಷನ್ ಆದ ಟೈಮಲ್ಲಿ ಏನೋ ಕತೆ ಆಯಿತು, ಅಮೇಲ್ ಹೇಳ್ತೀನಿ ಅಂದಿದ್ದಲ ಅವತ್ತು? ಏನದು?
ಸಂಯುಕ್ತಾ:- ಏನ್ ಕತೆನೊ ?
ನಾನು:-  ನೀನೆ ಆವತ್ ಫೋನಲ್ಲಿ ಹಾಗ್ ಅಂದಲೇ ?
ಸಂಯುಕ್ತಾ:- ಅಯ್ಯೋ ನಂಗ್ ಮರ್ತೋಗಿದೆ ಹೋಗೋ
ನಾನು:-  ಸರಿ ಬಿಡು
ಸಂಯುಕ್ತಾ:-  ಒಟ್ನಲ್ಲಿ ನಿಮ್ಮ ತೇಜಸ್ಸೋರು ನನ್ನ ತಲೆ ತಿಂದು ಕೊನೆಗೂ ಸೆಲೆಕ್ಟ್ ಮಾಡ್ಕೊಂಡ್ರಪ್ಪ..
ನಾನು:-  ನನ್ನ ಕಂಪನಿ ಬಿಟ್ಟು ನಿಂಗೆ ಬೇರೆ ಯಾವ್ದು ಸಿಗ್ಲಿಲ್ವಾ? ಇಲ್ಲೇ ಬರಬೇಕಿತ್ತಾ ನೀನುನೂ?
ಸಂಯುಕ್ತಾ:- ಬೇರೆ ಬೇಜಾನ್ ಇತ್ತು.. ಆದ್ರು ನಾನ್ ಇಲ್ಲೇ ಬರಬೇಕು ಅಂತಾನೆ ಬಂದೆ.
ನಾನು:- ಓಹೋ
ಸಂಯುಕ್ತಾ:-  ನೀನೆ ಕರ್ಕೊಂಡು ಹೋಗ್ತ್ಯ ಕರ್ಕೊಂಡು ಬರ್ತ್ಯ.. ನಾನ್ ಆರಾಮಾಗಿ ಹಿಂದೆ ಕೂತ್ಕೊಂಡು ಮಜಾ ಮಾಡಬಹುದು, ಬೇರೆ ಕಂಪನಿಗೆ ಸೇರಿದರೆ ಎಲ್ಲಿರತ್ತೆ ಆ ಮಜಾ?
ನಾನು:-  ಒಟ್ನಲ್ಲಿ ನನ್ನ ನಿನ್ನ ಚಾಲಕ ಮಾಡ್ಕೊಬೇಕು ಅಂತಿದ್ಯ.. 
ಸಂಯುಕ್ತಾ:- ಇರೋದೇನು.. ಮಾಡ್ಕೊಂಡು ಆಗಿದೆ ಆಗ್ಲೇ :P
ನಾನು:- ಏ .. ಇಲ್ಲಿನ ಚಾಲಕ ಏನೋ ಸೂಚನೆ ಕೊಡ್ತಿದಾನೆ ಕೇಳುಸ್ಕೊಳೆ..
ಸಂಯುಕ್ತಾ:-  .... ಹು .. ಇನ್ನೈದು ಹತ್ತು ನಿಮಿಷದಲ್ಲಿ ಲ್ಯಾಂಡ್ ಆಗ್ತಾನಂತೆ. ಅಮ್ಮನ ಎಬ್ಬಿಸು.

ಎಲ್ಲರೂ ಸೀಟ್ ಬೆಲ್ಟ್ ಧರಿಸಿ ಎಂದು ಪರಿಚಾರಿಕೆ ಹೇಳುತ್ತಿದ್ದಳು. ಸೈಲೆಂಟಾಗಿದ್ದ ವಿಮಾನದೊಳಗೆ ಈಗ ಗಿಜಿ ಗಿಜಿ ಸದ್ದು. ಎಲ್ಲರೂ ಆಸನದಲ್ಲಿ ಸರಿಯಾಗಿ ಕೂತು ಸೀಟ್ ಬೆಲ್ಟ್ ಧರಿಸಿದ್ದಾರೋ ಇಲ್ಲವೋ ಎಂಬುದನ್ನು ಪರಿಚಾರಕಿಯರು ಗಮನಿಸಿ ಹೋದರು.

ವಿಮಾನ ಲ್ಯಾಂಡ್ ಆಗಿ ಒಬ್ಬಬ್ಬರೇ ಕೆಳಗಿಳಿಯ ತೊಡಗಿದರು. ನಾವೂ ಕೆಳಗಿಳಿದು ಬರೋಷ್ಟರಲ್ಲಿ ಗಂಟೆ ಆರಾಗಿತ್ತು. ಲಗೇಜ್ ಎತ್ತಿಕೊಂಡು ಹೋಗುವಾಗ ಇವರಿಬ್ಬರ ಗಮನ ಯಾವುದೇ ಕಾರಣಕ್ಕೂ TV ಕಡೆ ಹೋಗಬಾರದೆಂದು ನಿಶ್ಚಯಿಸಿದ್ದೆ. ಆ ಸುದ್ದಿ ಬಿತ್ತರವಾಗುತ್ತಿದೆಯೋ ಇಲ್ಲವೋ? ನನಗೂ ಕುತೂಹಲ, ಆದರೂ ಇವರಿಗೆ ಅದರ ಕಡೆ ಗಮನಹೋಗದಂತೆ ಅದು ಇದು ಏನೇನೋ ಮಾತಾಡಿ, ಅವರನ್ನು ಆಚೆ ಕರೆತರುವಲ್ಲಿ ನಾನು ಯಶಸ್ವಿಯಾದೆ.

ಅವರಿಬ್ಬರನ್ನು ಆಚೆ ನಿಲ್ಲಿಸಿ, ನಾನು ವಾಶ್ ರೂಮಿಗೆ ಹೋಗಿ ಬರ್ತೀನಿ ಎಂದು ನೆಪ ಹೇಳಿ, ಬೆಳಗ್ಗೆ ನನಗೆ ಕರೆ ಮಾಡಿದ್ದ ವ್ಯಕ್ತಿಗೆ ಡಯಲ್ ಮಾಡಿ, ವಿವರ ಪಡೆದುಕೊಂಡೆ. ವಾಶ್ ರೂಮಿಂದ ವಾಪಸ್ ಬರೋವಾಗ ಕ್ಯಾಬಿನ ಡ್ರೈವರ್ ಅಣ್ಣಪ್ಪನಿಗೆ ಕರೆ ಮಾಡಿ, ಬೆಳಗ್ಗೆ ನಡೆದಿರುವ ಘಟನೆ ಬಗ್ಗೆ ಕಾರಲ್ಲಿ ಹೋಗೋವಾಗ ಮಾತಾಡಬಾರದು ಎಂಬ ಸೂಚನೆ ಕೊಟ್ಟೆ.

ಲಗೇಜ್ ಎಲ್ಲ ಕಾರಿಗೆ ಏರಿಸಿ, ವಿಮಾನದಲ್ಲಿ ಕಾಲು ಸರಿಯಾಗಿ ಚಾಚಲು ಆಗದೆ ಕಾಲು ನೋವು ಎನ್ನುತ್ತಿದ್ದ ಅತ್ತೆಯನ್ನು ಡ್ರೈವರ್ ಪಕ್ಕದ ಸೀಟಿನಲ್ಲಿ ಕೂಡಿಸಿ ನಾನು ಸಂಯುಕ್ತಾ ಹಿಂದೆ  ಒಬ್ಬರಿಗೊಬ್ಬರು ಅಂಟಿಕೂತೆವು.
                                              *************************************

Wednesday, May 22, 2013

SUmUಕತೆ : ಭಾಗ - ೪


ಅವತ್ತು ನಾವು ಮನೆಗೆ ಬಂದಾಗ ಹನ್ನೆರಡು ವರೆ, ಸರಸು ಅತ್ತೆ ಬಾಗಿಲು ತೆರೆದವರೆ, ಏನ್ರಿ ಇದು ವಾಕಿಂಗ್ ಹೋಗಿದ್ದೆ ಅಂತ ೧೦-೧೫ ನಿಮಿಷಕ್ಕೆ ವಾಪಸ್ಸಾಗೋ ನೀವು ಇಷ್ಟೊತ್ತಾದ್ರು ಮನೆಗ್ ಬರ್ಲ್ಲಿಲ್ಲ, ಎಷ್ಟ್ ಭಯ ಆಗಿತ್ತು, ಅವ್ನು ಜೊತೆಗಿದ್ದ ಅನ್ನೋ ಒಂದೇ ಸಮಾಧಾನ ನಂಗೆ, ಅದ್ಸರಿ ಇಷ್ಟೊತ್ತಂಕ ಎಲ್ಲಿಗೆ ಹೋಗಿದ್ರಿ, ಏನ್ ಮಾಡ್ತಿದ್ರಿ?
ಅಯ್ಯೋ ಯಾಕೆ ಹಾಗ್ ವಟ ವಟ ಅಂತ್ಯ, ನಾವ್ ಇಲ್ಲೇ ಆ ಸೇ.. ಸೇ .. ಪಕ್ಕದ ಬೀದಿ ಸೇತುಮಾಧವನ ಮನೆ ಹತ್ರ ಹೋಗಿದ್ವಿ, ಕರೆಂಟ್ ಇಲ್ಲ ಅಂತ ಅವ್ರು ಕಟ್ಟೆಮೇಲೆ ಹರಟೆ ಹೊಡಿತಾ ಕೂತಿದ್ರು, ನಾವು ಹಾಗೆ ಮಾತಾಡ್ಕೊಂಡು ಇದ್ವಿ ಭಾಳ ದಿನ ಆಗಿತ್ತು ಆತ ಸಿಕ್ಕಿ.. ಸರಿ ಸರಿ ಮಲ್ಗಣ ನಡಿ, ನೀನು ಇಲ್ಲೇ ಮಲ್ಕೋಳೋ ಬೆಳಗ್ಗೆ ಎದ್ದು ಹೋದರೆ ಆಯಿತು.
ಮನೆ ಬಾಗಿಲಿಗೆ ಬೇಗ ಹಾಕಿ ರೂಮಿನತ್ತ ನಡೆದ ಅಂಕಲ್ ನ ತಡೆದು, ಅತ್ತೆ ಬನ್ನಿ ಇಲ್ಲಿ ಅಂತ ಇಬ್ಬರನ್ನು ಕೂಡಿಸಿದೆ. ಸೇಟು ಮನೆಯಲ್ಲಿ ನಡೆದ್ದದ್ದನ್ನು ಅತ್ತೆಗೆ ತಿಳಿಸಿದೆ. ಆ ಶಾಲೆ ಬಿಡಿಸಿ ಮನೆ ಹತ್ತಿರದ ಸರ್ಕಾರಿ ಶಾಲೆಗೇ ಸೇರಿಸಿದರೆ ಅರ್ಧ ಪರಿಹಾರ ಆಗತ್ತೆ ಅಲ್ವೇನಪ್ಪ ಅಂದರು ಸರಸು ಅತ್ತೆ ನನ್ನ ಕಡೆ ತಿರುಗಿ.

ನೋಡಿ ಅಂಕಲ್, ನಾವು ಕತೆ ಕೇಳಿಕೊಂಡು ಬಂದೆವು, ಆದರೆ ಅತ್ತೆ ಕತೆ ಕೇಳಿ ಪರಿಹಾರನೂ ಸೂಚಿಸಿದರು.

ನಮ್ಮಲ್ಲೂ ಎಷ್ಟು ಜನ ಹೀಗೆ ಮಾಡೋದಿಲ್ಲ ಹೇಳಿ? ಇಂಥ ಸಮಸ್ಯೆಗಳನ್ನು ಅವಳಿಗೆ ಹೇಳಿದರೆ ಏನೂ ಪ್ರಯೋಜನವಿಲ್ಲ ಅಂತ ಎಷ್ಟು ಜನ ಗಂಡಂದಿರು ತಮ್ಮ ಹೆಂಡತಿಯರ ಬಗ್ಗೆ ತಾತ್ಸಾರ ಮನೋಭಾವ ಹೊಂದಿಲ್ಲ ಹೇಳಿ? ಇದರಿಂದ ಹೆಂಡತಿಯರೂ ಹೊರತಲ್ಲ. ಅಯ್ಯೋ ಇಂಥ ವಿಷಯಾನ? ನಮ್ಮನೆಯವರಿಗೆ ಅವರ ಕೆಲಸ ಬ್ಯುಸಿನೆಸ್ಸು ಬಿಟ್ಟರೆ ಬೇರೇನೂ ಅರ್ಥ ಆಗೋಲ್ಲ, ನಂಗ್ಗೊತ್ತಿಲ್ವಾ ಅವರ ಬುದ್ದಿ? ಅಂತ ಎಷ್ಟು ಜನ ಹೆಂಡತಿಯರು ತಮ್ಮ ಗಂಡಂದಿರ ಬಗ್ಗೆ ತಾತ್ಸಾರ ಮನೋಭಾವ ಹೊಂದಿಲ್ಲ ಹೇಳಿ? ಹೆಚ್ಚಿನ ಮನೆಗಳಲ್ಲಿ ಗಂಡ ಹೆಂಡತಿ ಕೂತು ಇಂಥಾ ಸಮಸ್ಯೆಗಳ ಬಗ್ಗೆ ಮಾತಾಡೋದೇ ಇಲ್ಲ. ಕೆಲವರು ಕೂತು ಮಾತಾಡಿದರೂ ಅಯ್ಯೋ ಪಕ್ಕದ ಮನೆಯವರ ಸಮಸ್ಯೆಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಅನ್ನುವವರೇ ಹೆಚ್ಚು. ಇಂದು ಪಕ್ಕದ ಮನೆಯ ಸಮಸ್ಯೆಯಾಗಿರೋದು ನಾಳೆ ನಮ್ಮನೆ ಸಮಸ್ಯೆಯಾಗಬಹುದೆಂಬ ಕನಿಷ್ಠ ಜ್ಞಾನವೂ ಕೆಲವರಿಗಿರೋದಿಲ್ಲ.

ಹೆಂಡತಿ ಹತ್ರ ಮಾತಾಡ್ಬಾರ್ದು ಅಂತೇನೂ ಇಲ್ಲಪ್ಪ... ಅಂತ ಏನೋ ಹೇಳಲು ಬಂದ ಅಂಕಲ್ ಅಷ್ಟಕ್ಕೇ ಸುಮ್ಮನಾದರು. ನಾನು ಹೇಳಿ ಅಂಕಲ್ ಏನ್ ಹೇಳ್ಬೇಕು ಅಂತಿದೀರಾ ಪೂರ್ತಿ ಹೇಳಿ ಅಂತ ಬಲವಂತ ಮಾಡಿದರೂ ಅವರು ಏನಿಲ್ಲಪ್ಪ ಏನಿಲ್ಲಪ್ಪ ಅಷ್ಟೇ ಅಷ್ಟೇ ಅಂದು ಸುಮ್ಮನಾಗಿಬಿಟ್ಟರು.

ಆಗ ನಾನು ಹೇಳಲು ಶುರುಮಾಡಿದೆ. ಇದೆ ನೋಡಿ ಅಂಕಲ್ ಸಮಸ್ಯೆ.ಅವಳ/ಅವರ ಹತ್ತಿರ ಕೆಲವೊಂದು ವಿಷಯಗಳನ್ನು ಮಾತಾಡಲು ಕೆಲವೊಮ್ಮೆ ಸಂಕೋಚ, ಕೆಲವೊಮ್ಮೆ ಸಂಕುಚಿತ ಮನೋಭಾವ ಅಡ್ಡ ಬರುತ್ತದೆ. ನೀವು ನಿಮ್ಮ ಮಕ್ಕಳನ್ನು ಬೆಳೆಸಿದಷ್ಟು ಸ್ವೇಚ್ಚಯಾಗಿ ನಿಮ್ಮನ್ನು ಬೆಳೆಸಿಲ್ಲ ನಿಮ್ಮ ತಂದೆ ತಾಯಿಯರು ... ಅದಕ್ಕೆ ಕಾರಣ ತುಂಬು ಕುಟುಂಬಗಳು ಇರಬಹುದು ಅಥವಾ ದೊಡ್ದವರಿಗೆ ಆ ವಿಷಯದ ಬಗ್ಗೆ ಇದ್ದ ಅಜ್ಞಾನವಿರಬಹುದು. ಹಾಗಂತ ನಾನು ದೊಡ್ಡವರನ್ನು ಬೈಯುತ್ತಿಲ್ಲ. ಅವರು ಆ ಕಾಲಕ್ಕೆ ತಕ್ಕಂತೆ ಜೀವನ ನಡೆಸಿದ್ದಾರೆ ಮತ್ತು ನಿಮ್ಮನ್ನೆಲ್ಲಾ ಬೆಳೆಸಿದ್ದಾರೆ. ಕಾಲ ಬದಲಾಗಿಲ್ಲ ಅಂಕಲ್, ಬದಲಾಗಿರೋದು ಈ ಜನ, ಬದಲಾಗಿರೋ ಈ ಜನಗಳ ಮಧ್ಯೆಯಲ್ಲಿ ಬಾಳಬೇಕಾದರೆ ನಾವು ಸ್ವಲ್ಪ ಬದಲಾಗಬೇಕಾಗುತ್ತದೆ, ಹಾಗಂತ ನಿಮ್ಮ ಆದರ್ಶಗಳನ್ನು ಮಣ್ಣುಪಾಲು ಮಾಡಿ ಎಂದು ನಾನು ಹೇಳುತ್ತಿಲ್ಲ. ಎಂಥದೇ ಸಮಸ್ಯೆ ಬಂದರೂ ಮುಚ್ಚಿಡದೆ, ಮುಕ್ತವಾಗಿ ಚರ್ಚಿಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕಷ್ಟೇ ಅಂಕಲ್.

ನಮ್ಮ ಎಲ್ಲಾ ಸಮಸ್ಯೆಗಳಿಗು ಒಂದೇ ಉತ್ತರ : ವಿಶ್ವಕೋಶ ತೆರೆ , ನಿಘ೦ಟು ತೆರೆ , ಮನಸ್ಸು ತೆರೆ !!

ಈ ವಿಷಯಗಳು ನಿಮಗೆ ತಿಳಿದಿಲ್ಲವೆಂದು ನಾನು ಹೇಳುತ್ತಿಲ್ಲ ಅಂಕಲ್, ಆದರೆ ತಿಳಿದ್ದಿದ್ದನ್ನ ಆಚರಣೆಯಲ್ಲಿಟ್ಟುಕೊಳ್ಳೋದು ಮುಖ್ಯ ಎಂಬುದಷ್ಟೇ ನನ್ನ ವಾದ. ಜಾಸ್ತಿ ಮಾತಾಡಿಬಿಟ್ಟೆ ಅಂಕಲ್, ದಯವಿಟ್ಟು ಕ್ಷಮಿಸಿ, ಅಂತ ನಾನು ಹೇಳಿದರೆ ಅಂಕಲ್ ನನ್ನನ್ನು ಅಭಿನಂದಿಸುತ್ತಾ ಎಷ್ಟ್ ವಿಷ್ಯ ತಿಳ್ಕೊಂಡಿದ್ಯಪ್ಪ, ನಮ್ ಸಂಯುಕ್ತಾ ಪುಣ್ಯ ಮಾಡಿದ್ದಳು ಅಂದು ಮಲಗಲು ತಯಾರಾದರು.
                                                                      *******

ನಾನು ಸೈಡಿಗೆ ತಿರುಗಿಕೊಂಡು ಮಲಗಬೇಕೆಂದುಕೊಳ್ಳುತ್ತಿರುವಾಗಲೇ, ಸಂಯುಕ್ತಾ ನನ್ನ ಹೆಗಲ ಮೇಲೆ ಜೋತು ಬಿದ್ದಳು.
ಗಡಿಯಾರ ನೋಡಿಕೊಂಡೆ ಇನ್ನು ನಾವು ಹೊರಟು ಅರ್ಧ ಗಂಟೆಯೂ ಆಗಿರಲ್ಲಿಲ್ಲ.

[ ಏನಪ್ಪಾ ಇವ್ನು.. ನಾಕು ಎಪಿಸೋಡ್ ಬರೆದಾದ ಮೇಲೂ ಇನ್ನು ಅರ್ಧ ಗಂಟೆ ಕಳೆದಿಲ್ಲ ಅಂತಿದಾನೆ ಅಂತ ಆಶ್ಚರ್ಯಪಡದಿರಿ, ಯಾಕೆಂದರೆ ಇಷ್ಟೆಲ್ಲಾ ವಿಷಯ ಮನಸಿನಲ್ಲಿ ಮೂಡಲು ಅರ್ಧ ಗಂಟೆನೂ ಜಾಸ್ತಿನೇ! ಆಲ್ವಾ? ನಿಮಗೂ ಇಂತಹ ಅನುಭವವಾಗಿರತ್ತೆ ಅನ್ಕೋತೀನಿ.. ಏನ್ ಅಂತೀರಾ?? ]

ನಾನು ಸುತ್ತ ಮುತ್ತ ಕಣ್ಣು ಹಾಯಿಸಿದೆ, ಬಹುತೇಕ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು, ಇನ್ನು ಕೆಲವರು ಮ್ಯಾಗಜಿನ್ ಓದುತ್ತಿದ್ದರು. ನಾನು ಮತ್ತೊಮ್ಮೆ ನೀರು ಕುಡಿದು ಕಣ್ಣುಮುಚ್ಚಿದೆ. 

ಅವತ್ತೊಂದಿನ ನಾನು ಆಫೀಸಿಂದ ಬರೋದು ರಾತ್ರಿ ಹನ್ನೊಂದಾಗಿತ್ತು. ಮನೆಗೆ ಬಂದವನೇ ಊಟ ಮಾಡುವ ಮೊದಲು ಸಂಯುಕ್ತಾಳಿಗೆ ಕರೆ ಮಾಡಿ ಮಾತಾಡಿದೆ. ಕೆಲಸದ ಒತ್ತಡದಲ್ಲಿ ಬೆಳಗ್ಗಿಂದ ಮಾತಾಡಲು ಆಗಿರಲ್ಲಿಲ್ಲ. ಅವಳಿಗೆ ಶುಭ ರಾತ್ರಿ ಹೇಳಿ ಊಟ ಮಾಡಿ ಹಾಸಿಗೆ ಹಾಸಿ CNBC TV18 ಚಾನೆಲ್ ನೋಡುತ್ತಾ ಕೂತಿದ್ದೆ. ಸುಮಾರು ಹನ್ನೆರಡು ಗಂಟೆ ಆಗಿತ್ತೇನೋ... ಸ್ಮೈಲೆರುವಂತೆ ಸರಾಸರಿ... ಲೈಕಾದಂತೆ ತರಾತುರಿ... ಡ್ರೀಮ್ಸಲ್ಲಿ ಏನೋ ಹೆಚ್ಚುವರಿ.. ಮೆಮೊರೀಸ್ ಎಲ್ಲಾ ವಿಲೇವಾರಿ ಅಂತಾ ಇನ್‌ಸ್ಟ್ರುಮೆಂಟಲ್ ರಿಂಗ್ ಟೋನ್ ಹೊರಹೊಮ್ಮಲು ಶುರುವಾಗಿತ್ತು ನನ್ನ ಮೊಬೈಲ್ ಗೃತ್ಸಮದನಿಂದ.. ನಾನು ಇಷ್ಟು ಹೊತ್ತಲ್ಲಿ ಯಾರಪ್ಪ ಅನ್ನುತ್ತಾ ಎದ್ದು ಹೋಗಿ TV ಪಕ್ಕ ಇಟ್ಟಿದ್ದ ಮೊಬೈಲ್ ತೆಗೆದರೆ, Incoming Call Vimala ಅಂತ ಅವಳ ಮುದ್ದಾದ ಮುಖದಮೇಲೆ ಮೂಡುತ್ತಿತ್ತು. 

Monday, May 20, 2013

SUmUಕತೆ : ಭಾಗ - ೩


ನಾನು ಅಂಕಲ್ ಊಟ ಮುಗಿಸಿ ಕೂತಿದ್ದೆವು, ಅತ್ತೆ ಇನ್ನೂ ಊಟ ಮಾಡುತ್ತಿದ್ದರು. ಗಂಟೆ ಹತ್ತಾಯಿತು ನಾನು ಹೊರಡುತ್ತೀನಿ ಅಂಕಲ್ ಅಂದೆ. ಏ ಕೂತ್ಕೊಲೋ ಏನ್ ಮಾಡ್ತ್ಯ ಇಷ್ಟ್ ಬೇಗ ಹೋಗಿ ಅಪರೂಪಕ್ಕೆ ಬಂದಿದ್ಯ ಅಂದ್ರು. ಅಪರೂಪ ಏನ್ ಅಂಕಲ್ ನಾಕೈದು ದಿನದ ಹಿಂದಷ್ಟೇ ಬಂದಿದ್ನಲ ಅಂದ್ರೆ, ಲೇ ಅವಳನ್ನು ಓದೋ ನೆಪದಲ್ಲಿ ದೂರ ಕಳುಸ್ದಿ, ನೀನು ಫ್ರೆಂಡ್ ಮದ್ವೆ ಮಾಡ್ಕೊಂಡ ಅಂತೇಳಿ ಈ ಮನೆ ಬಿಟ್ಟು ಅಕ್ಕನ ಮನೆ ಸೇರ್ಕೊಬಿಟ್ಟೆ. ಇಲ್ಲಿ ನಾವಿಬ್ರೇ ಆಗೊಗಿದೀವಿ..... ನಾನು ಅವರ ಮನೆಯಿಂದ ಹೊರಡುವಾಗಲ್ಲೆಲ್ಲ ಅಂಕಲ್ ರ ಈ ಮಾತುಗಳು ಸಾಮಾನ್ಯ. ಆಯ್ತು ಬಿಡಿ ಅಂಕಲ್ ಅಂತ ನಾನು ಕೂತ್ಕೊಳಕ್ಕೆ ಸರಿಯಾಗಿ ಸಂಯುಕ್ತಾ ಕರೆ ಮಾಡಿದಳು. ಅವಳ ಕರೆ ಕಟ್ ಮಾಡಿ ನಾನು ಮತ್ತೆ ಮಾಡಿದೆ.

ಎರಡು ಮೊಬೈಲ್ ಬಿಲ್ಲು ಕಟ್ಟೋನು ನೀನೆ, ಯಾಕಪ್ಪ ಕಟ್ ಮಾಡ್ತ್ಯ - ಈ ಡಯಲಾಗ್ ನ  ಪ್ರತಿದಿನ ೨-೩ ಬಾರಿ ಕೇಳಿಲ್ಲ ಅಂದ್ರೆ ನಂಗು ನಿದ್ದೆ ಬರಲ್ಲ ಹೇಳಿಲ್ಲ ಅಂದ್ರೆ ಅವಳಿಗೂ ನಿದ್ದೆ ಬರಲ್ಲ.
ಆಯ್ತೇನೆ ಊಟ? ಬಿಸಿ ಬಿಸಿ ಗರಂ ಗರಂ ರೋಟಿ ತಿಂದ? - ರಾತ್ರಿ ಹಾಸ್ಟಲ್ ಮೆಸ್ಸಲ್ಲಿ ದಿನ ಅದೇ ತಿನ್ನುತ್ತಿದ್ದ ಅವಳಿಗೆ ನಾನು ರೇಗಿಸುತ್ತಿದ್ದುದು ಹಾಗೆ.
ಹು.. ಮೃಷ್ಟಾನ್ನ ಭೋಜನ ಮುಗಿತಪ್ಪ..  ನಿಂದು ಆಯ್ತಾ  ಊಟ?
ನಂದು ಊಟ ಆಯಿತು ಕಣೆ ನಿ..  ಹಾ ಹಾ ಅಂತ ಆಕಳಿಸುತ್ತಾ ಹೇಳಿದೆ.
ಓಹ್.. ನಮ್ಮಲೇನೆ ಮಾಡ್ದ... ಸಿಹಿಕುಂಬಳಕಾಯಿ ಹುಳಿ ತಾನೇ? ನೀನ್ ಬಂದ್ರೆ ಅಮ್ಮ ಮಾಡೋದೇ ಅದು ಬಿಡು,,
ಏನ್ ಸಕತ್ತಾಗಿತ್ತು ಗೊತ್ತಾ... ಆಹಾ ಸಂಡಿಗೆಯಂತು ಸೂಪರ್ ...
ಲೇ ಸಾಕು ಸುಮ್ನಿರೋ ನಂಗ್ ಉರುಸ್ಬೇಕು ಅಂತಾನೆ ಹೇಳ್ತ್ಯ ....
ಯಾರಪ್ಪ ಫೋನು.. ನಮ್ ಸಂಯುನಾ? ಕೊಡಿಲ್ಲಿ ಅಂತ ಅತ್ತೆ ಫೋನ್ ಇಸ್ಕೊಂಡು ರೂಮು ಸೇರಿದರು.

ಅಷ್ಟರಲ್ಲಿ ಪವರ್ ಕಟ್ ಆಯಿತು. ಥು ತೆರಿಕೆ ಈಗಲೇ ಹೋಗಬೇಕಿತ್ತಾ ಕರೆಂಟು ಅನ್ಕೊತಾ ಮೊಂಬತ್ತಿ ಹಚ್ಚಿಟ್ಟ ಅಂಕಲ್, ಬಾ ಆಚೆ ಜಗುಲಿ ಮೇಲೆ ಕೂಡೋಣ ಅಂತ ಅಂದರು. ಸಮಯ ೧೦:೩೦ ಆಗಿತ್ತು. UPS ಇಟ್ಟುಕೊಂಡಿದ್ದೋರು (ಎಲ್ಲರೂ) ಬಿಗ್ ಬಾಸು, ಕ್ರೈಂ ಫೈಲು, ಹೀಗೂ ಉಂಟೆ, ಸಿನಿ ಜಗತ್ತು, ಹೆಡ್ ಲೈನ್ಸ್ ಟುಡೇ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. UPS ಇಲ್ಲದವರೆಂದರೆ ಅಂಕಲು ಮತ್ತೆ ಮೂಲೆ ಮನೆ ಮೇಷ್ಟ್ರು. ಮೇಷ್ಟ್ರಿಗೆ ಈಗ ಸರಿ ರಾತ್ರಿ, ಹಾಗಾಗಿ ಬೀದಿಯಲ್ಲಿ ನಾವಿಬ್ಬರೇ.
ಕಳೆದ ವಾರ ಬಂದಿರಲ್ಲಿಲ್ಲ ಈ ಕಡೆ ಊರಿಗೆ ಹೋಗಿದ್ದಾ? ಅಪ್ಪ ಅಮ್ಮ ಎಲ್ಲ ಹೇಗಿದಾರೆ?
ಹು ಅಂಕಲ್.. ಊರಿಗೆ ಹೋಗಿದ್ದೆ.. ಆಗ ಒಂದು ಚುಟುಕು ಬರ್ದಿದ್ದೆ ಕೇಳಿ , ಹೇಳಲಾ..
ನಾನು ಬೇಡ ಅಂದ್ರು ನೀನ್ ಬಿಡ್ತ್ಯ.. ಹೇಳು ಮತ್ತೆ

ವೀಕೆಂಡ್  ಮಾಮೂಲು 

ನಾನು ಹೇಳಲು ಶುರು ಮಾಡಿದಾಗಲೇ ಕಾರೊಂದು ತಿರುವಿನಲ್ಲಿ ಕಂಡಿತು. ನಾನು ಮುಗಿಸುವ ಹೊತ್ತಿಗೆ ಬರ್ರ್ ಎಂದು ಬಂದ ಮಾರುತಿ ವ್ಯಾನು, ಅಂಕಲ್ ಮನೆ ಎದುರಿಗೆ ಮೂರು ಮನೆ ಬಿಟ್ಟು ಇದ್ದ ಸೇಟು ಮನೆ (ಬಂಗಲೆ) ಮುಂದೆ ನಿಂತು, ಗಾಡಿಯಿಂದ ಯಾರನ್ನೋ ಹೊರದಬ್ಬಿ ಬಂದಷ್ಟೇ ವೇಗವಾಗಿ ಹೊರಟುಹೋಯಿತು. ೨- ೩ ನಿಮಿಷ ಕಳೆದರೂ ಸೇಟು ಮನೆಯಿಂದ ಯಾರೂ ಹೊರ ಬಾರದ್ದಿದ್ದಾಗ, ನಾನು ಅಂಕಲ್ ಅಲ್ಲಿ ಹೋದೆವು. ಏನಾಶ್ಚರ್ಯ! ಅವರು ಮನೆ ಮುಂದೆ ದೂಕಿ ಹೋಗಿದ್ದುದು ಯಾರನ್ನಾ? ನನ್ನ ಕಣ್ಣನ್ನು ನಾನೇ ಕೆಲ ಕ್ಷಣ ನಂಬಲು ಸಾಧ್ಯವಾಗಲ್ಲಿಲ್ಲ ........  ಅತ್ತ ಇತ್ತ ಕಣ್ಣಾಡಿಸಿ, ಯಾರು ನೋಡುತ್ತಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡು ಅವಳನ್ನು ಎತ್ತಿಕೊಂಡು ಸರ ಸರನೆ ಸೇಟು ಮನೆಯ ಕಾಂಪೌಂಡ್ ಒಳಗೋಡಿದೆ. ಹನ್ನೊಂದಾಗಿದ್ದರಿಂದ ಹಾಲಿನ ದೀಪವೊಂದು ಬಿಟ್ಟರೆ ಬೇರೆ ಯಾವ ದೀಪವೂ ಹತ್ತಿರಲ್ಲಿಲ್ಲ. ಅಂಕಲ್ ಅವರ ಮನೆ ಬಾಗಿಲು ಬಡಿದಾಗ, ಸೇಟುವಿನ ಸೊಸೆ ಬಾಗಿಲು ತೆರೆದರು. ನಾನು ಸೀದಾ ಒಳಹೋಗಿ ಅಲ್ಲೇ ಇದ್ದ ಸೋಫಾದ ಮೇಲೆ ಅವಳನ್ನ ಮಲುಗಿಸಿ, ನಿಮ್ಮಿ ಆಂಟಿ ಕಡೆ ತಿರುಗಿ ಏನ್ ಆಂಟಿ ಇದು ಎನ್ನುವನಂತೆ ಕೈ ಸನ್ನೆ ಮಾಡಿದೆ. ನಮಗೆ ಗೊತ್ತಾಗಿಬಿಡ್ತಲ್ಲಾ ಅಂತಾನೋ ಏನೋ, ಆಕೆ ಮುಖ ಸಿಂಡರಿಸಿಕೊಂಡು ಏನೂ ಮಾತಾಡದೆ ಬಾಗಿಲಿನ ಕಡೆ ಕೈ ತೋರಿಸಿದರು. ನಾವು ತಲೆ ತಗ್ಗಿಸಿ ಇನ್ನೇನು ಹೊರಡಬೇಕು, ಅನ್ನೋಷ್ಟರಲ್ಲಿ, ಸೇಟುವಿನ ಮಗ ಹಿತೇಶ ಒಂದ್ನಿಂಷ ಅನ್ನುತ್ತಾ   ಬಂದರು. ಬಾಗಿಲಿನ ಕಡೆ ತಿರುಗಿದ್ದ ನಾವು ಹಿತೇಶನ ಧ್ವನಿ ಕೇಳಿ ೧೮೦ ಡಿಗ್ರೀ ತಿರುಗಿ ನಿಂತೆವು. ಸಾರ್ ಬನ್ನಿ ಎನ್ನುತ್ತಾ ಹಿತೇಶ, ನಿರ್ಮಲರಿಗೆ ಮನೆ ಬಾಗಿಲ ಚಿಲಕ ಹಾಕಲು ಹೇಳಿ ನಮ್ಮನ್ನು ಅವರ ರೂಮಿಗೆ ಕರೆದೊಯ್ದು, ಕುರ್ಚಿ ತೋರಿಸಿ ಕೂಡಲು ಹೇಳಿದರು. ಚಿಲಕ ಹಾಕಿ ಬಂದ ನಿರ್ಮಲ, ರೂಮಿನ ಬಾಗಿಲ ಬಳಿ ಬಂದು ನಿಂತಿದ್ದನ್ನು ನೋಡಿದೆ. ಐದು ನಿಮಿಷದ ಮೌನದ ನಂತರ, ಕಣ್ಣೊರೆಸಿಕೊಳ್ಳುತ್ತಾ  ಹಿತೇಶ ಮಾತಾಡಲು ಶುರು ಮಾಡಿದರು.

ಈಗೆ ಒಂದು ತಿಂಗಳ ಕೆಳಗೆ ನನ್ನ ಪ್ಯಾಂಟಿನ ಜೇಬಲ್ಲಿದ್ದ ೫ ಸಾವಿರ ರೂಪಾಯಿ ಕಾಣೆಯಾಯಿತು. ಮನೆ ಕೆಲಸದವಳನ್ನ ಬಿಟ್ಟು ಬೇರಾರೂ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂದುಕೊಂಡು, ನಮ್ಮಮ್ಮ ಅವರಂತೂ ಉಪ್ಪು ತಿಂದ ಮನೆಗೆ ಕನ್ನ ಹಾಕ್ತ್ಯೇನೆ ಬೋಸುಡಿ ಅಂತ ಬೀದಿಯಲ್ಲೇ ಆಕೆ ಮರ್ಯಾದೆ ಮೂರಾಬಟ್ಟೆ ಮಾಡಿ ಕೆಲಸದಿಂದ ಓಡಿಸಿದರು. ೩೦ ವರ್ಷದಿಂದ   ನಮ್ಮನೆಯಲ್ಲಿ ದುಡಿಯುತ್ತಿದ್ದ ಆಕೆ, ಈ ಕೆಲಸ ಮಾಡಿರಲಿಕ್ಕಿಲ್ಲ ಅನಿಸಿದರೂ, ಆ ಕ್ಷಣಕ್ಕೆ ನನ್ನ ಬುದ್ದಿಯೂ ಮಂಕಾಗಿಹೋಗಿತ್ತು. ಅವತ್ತು ನಾವು ಸ್ವಲ್ಪ ವಿವೇಚನೆ ಮಾಡಿ ನೋಡಿದ್ದರೆ, ನಮ್ಮ ಮಗಳನ್ನು ನೀವು ಇವತ್ತು ಹೀಗೆ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ ಉದ್ಬವಿಸುತ್ತಿರಲ್ಲಿಲ್ಲ !!

ನಮ್ಮ ನಿಶಾಗೆ ಎಷ್ಟು ಸಾರ್ ವಯಸ್ಸು?? ಕೇವಲ ೧೫, ಇನ್ನು ೧೫ ತುಂಬಿಲ್ಲ. ೯ನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ನಮ್ಮ ಅಂತಸ್ತಿಕೆಗೆ ತಕ್ಕಂತೆ ಅವಳನ್ನು ಬಿಷಪ್ ಸ್ಕೂಲಿಗೆ ಸೇರಿಸಿದ್ವಿ, ಅದು ನಮ್ಮ ತಪ್ಪ ಸಾ... ಓದು ಬರ್ಯೋದ್ರಲ್ಲಿ ಎರಡು ಮಾತಿಲ್ಲ. ಎಲ್ಲಾದ್ರಲ್ಲೂ 1st ಕ್ಲಾಸ್ ತೆಗಿತಾಳೆ. ಅದ್ಯಾರು ಇವಳ ತಲೆ ಕೆಡುಸಿದ್ರೊ ಗೊತ್ತಿಲ್ಲ, ಇವತ್ತು ನನ್ ಮಗಳು ಡ್ರಗ್ ಅಡಿಕ್ಟ್ ಸಾ..
ಆ ೫ ಸಾವಿರ ಕಳ್ಳತನ ಮಾಡಿದ್ದು ನಮ್ಮ ನಿಶಾನೆ ಸಾ... ಆ ದಿನನೇ ಅಂತೆ ಅವಳು ಡ್ರಗ್ಸಿನ 1st ಚುಚ್ಚುಮದ್ದು ತೊಗೊಂಡಿದ್ದು. ನಾವು ಅವತ್ತೇ ಎಚ್ಚೆತ್ತುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ವಿನಾಕಾರಣ ಆ ಕೆಲಸದವಳನ್ನು ಓಡಿಸಿದೆವು. ಆ ಕೆಲಸದವಳು ನಮ್ಮ ಮನೆ ಬಿಟ್ಟು ಹೋಗಿದ್ದೆ ಬಂತು ನೋಡಿ, ಈ ಒಂದು ತಿಂಗಳಲ್ಲಿ ನಮ್ಮನೆ ನರಕವಾಗಿದೆ, ನನ್ನಮ್ಮ ಮಾಡ್ಲಿ ಆ ಕೆಲಸ ಅಂತ ಇವಳು, ನಾನ್ಯಾಕ್ ಮಾಡ್ಬೇಕು ಅವಳೇ ಮಾಡ್ಲಿ ಅಂತ ಅವರು. ಕೆಲಸದವಳಿದ್ದಾಗ ಇಬ್ಬರನ್ನೂ ಕೂಡಿಸಿ ಮಾಡುತ್ತಿದ್ದಳು, ಇವರು ಆರಾಮಾಗಿ ಇದ್ದರು, ನಾವಿಲ್ಲದಾಗ ಅತ್ತ ಅಂಗಡಿ ಕಡೆ ಬಂದು ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು. ಈಗ ಬ್ಯುಸಿನೆಸ್ಸು ಲಾಸು, ಮನೆಯಲ್ಲಿ ಜಗಳ. ೩ ಜನ  ಬೇರೆ ಕೆಲಸದವರು ಬಂದರೂ ವಾರದ ಮೇಲೆ ಯಾರು ಉಳಿಯಲ್ಲಿಲ್ಲ.

ಮನೆ ವಿಚಾರ ಹಾಗಿರ್ಲಿ ಸಾ... ನಿಶಾ ಡ್ರಗ್ಸ್ ತೆಗೆದುಕೊಳ್ಳೋಕೆ ಶುರು ಮಾಡಿಬಿಟ್ಟಿದ್ದಳು. ಮೊದಲ ಹದಿನೈದು ದಿನ ಅದು ನಮಗೆ ಗೊತ್ತೇ ಆಗಿರಲ್ಲಿಲ್ಲ. ಅವತ್ತೊಂದಿನ ನಿರ್ಮಲ, ಬಟ್ಟೆ ಒಗೆಯಲು ನಿಶಾಳ ಸ್ಕೂಲ್ ಯುನಿಫಾರ್ಮಿನ ಸ್ಕರ್ಟ್ ಅನ್ನು  ನೆನಸಿಡುವಾಗ ಮೂಗಿಗೆ ಸಿಗರೇಟ್  ವಾಸನೆ ಬಡಿದಂತಾಗಿ, ಅವಳು ಅದನ್ನು ಮತ್ತೆ ಮತ್ತೆ ಮೂಸಿ ನೋಡಿ ನನ್ನ ಬಳಿ ಬಂದು ರೀ ನಿಶಾಳ ಸ್ಕರ್ಟ್ ವಾಸನೆ ನೋಡಿ, ನನಗೆ ಸಿಗರೇಟ್  ವಾಸನೆ ಬರ್ತಿದೆ ಎಂದು ನನ್ನ ಕೈಗಿತ್ತಳು. ನಾನು ಮೂಸಿದಾಗ ಸಿಗರೇಟ್ ವಾಸನೆ ಬರುತ್ತಿದ್ದುದು ಖಚಿತವಾಯಿತು. ಮಗಳ ಮೇಲೆ ಅನುಮಾನಪಡೋದು ಬೇಡ, ನೀನು ಈ ವಿಚಾರ ಯಾರಿಗೂ ಹೇಳಬೇಡ ಮತ್ತು ನಿಶಾಳನ್ನು ಕೇಳಬೇಡ ಅಂತ ಹೆಂಡತಿಗೆ ಹೇಳಿ ನಾನು ಅವತ್ತಿಂದ ನಿಶಾಳ ಮೇಲೆ ಒಂದು ಕಣ್ಣಿಟ್ಟೆ ಸಾ..

ಅಮೇಲಿನ ಮೂರು ದಿವಸ ನಾನೇ ನಿಶಾಳನ್ನ ಸ್ಕೂಲಿಗೆ ಬಿಡುತ್ತಿದ್ದೆ ಮತ್ತೆ ಸಂಜೆ ಕರೆತರುತ್ತಿದ್ದೆ ಸಾ.. ನಾಕನೇ ದಿನ ಸಂಜೆ  ಅವಳು ಪಾರ್ಟಿ ಇದೆ ಪಪ್ಪಾ ಹೋಗ್ಬರ್ತೀನಿ  ಅಂದಾಗ ನಗುತ್ತಲೇ ಕಳುಹಿಸಿ, ನಾನು ಅವಳನ್ನು ಹಿಂಬಾಲಿಸಿದೆ. ಅಂದು ನಿಶಾ ಹೋದದ್ದು ಬ್ಲೂ ಐಸ್ ಲಾಂಜ್ ಬಾರ್ ಗೆ. ಅಲ್ಲಿ ಅವಳ ಸಹಪಾಠಿಗಳೇ ೮-೧೦ ಮಂದಿ ಇದ್ದರು. ಅದರಲ್ಲಿ ೬ ಜನ ಹುಡುಗಿಯರೇ. ೫-೧೦ ನಿಮಿಷ ಕಳೆಯುತ್ತಲೇ, ಜೇಬೊಳಗೆ ಕೈ ಹಾಕಿ ಎಂತದ್ದೋ ಪುಡಿ ತೆಗೆದು ಸಿಗರೇಟ್ ಒಳಗೆ ತುರುಕಿ ಎಲ್ಲರೂ ಸೇದತೊಡಗಿದರು. ನನ್ನ ಮಗಳು ಸಾ.. ನನ್ನ ಕಣ್ಣೆದುರೇ ಸಿಗರೇಟ್  ಸೇದೊದ್ನ ನೋಡಿದೆ ಸಾ.. ಕೆಲವರು ಅರೆವಳಿಕೆ ನೀಡುವ ಚುಚ್ಚು ಮದ್ದು ತೆಗೆದುಕೊಂಡರು. ನಿಶಾಳಿಗೆ ಕಪಾಳಕ್ಕೆ ಬಾರಿಸಿಬಿಡಲ ಅನ್ನೋಷ್ಟು ಕೋಪ ಬಂದಿತ್ತು, ನಾನು ಇನ್ನೇನು ಅವರ ಬಳಿ ತೆರಳಬೇಕು, ಅಷ್ಟರಲ್ಲಿ ಎಲ್ಲಾ ಓಡತೊಡಗಿದರು, ನನಗೆ ಅಲ್ಲೇನು ಆಗುತಿದೆ ಅಂತ ಅರಿವಾಗೊದ್ರೊಳಗೆ ಪೋಲೀಸರು ಅವರನ್ನೆಲ್ಲ ಹಿಡಿದ್ದಿದ್ದರು. ನಾನು ಸ್ವಲ್ಪ ಬುದ್ದಿ ಉಪಯೋಗಿಸಿ, ಆ ಪೋಲಿಸರಿಗೆ ಹತ್ತು ಸಾವಿರ ಲಂಚ ಕೊಟ್ಟು ನಿಶಾಳನ್ನ ಮತ್ತು ಅವಳ ಗೆಳತಿ ರೋಸಿಯನ್ನ ಬಿಡಿಸಿಕೊಂಡು ಬಂದೆ ಸಾ.. ಅವತ್ತು ನಮ್ಮ ಅದೃಷ್ಟ, ನಾವು ಆಚೆ ಬಂದು ಕಾರಲ್ಲಿ ಕೂತಮೇಲೆ, ರೈಡಾದ ಸುದ್ದಿ ತಿಳಿದ ಮೀಡಿಯಾದವರು ಬಂದರು.. ಇಲ್ಲವಾಗಿದ್ದರೆ ಅವತ್ತೆ ನಿಶಾ TV ಯಲ್ಲಿ ಬಂದಿರುತ್ತಿದ್ದಳು ಸಾ..

ಮತ್ತೆ ಮೂರು ದಿನ ನಿಶಾಳನ್ನ ಮನೆ ಬಿಟ್ಟು ಹೋಗಲು ಬಿಡಲ್ಲಿಲ್ಲ, ರೋಸಿಗೂ ಹಾಗೆ ಮಾಡಿದ್ದರು. ಮನೆಯಲ್ಲಿ ವಿಷಯ ಗೊತ್ತಾದ್ದರಿಂದ ಮತ್ತು ಸಮಯಕ್ಕೆ ಡ್ರಗ್ಸ್ ಸಿಗದ ಹತಾಶೆಯಿಂದ ರೋಸಿ ಸೂಸೈಡ್ ಮಾಡಿಕೊಂಡಳು. ಈ ನಿಶಾನು ಎಲ್ಲಿ ಆ ತರ ಮಾಡ್ಕೊಬಿಡ್ತಾಳೋ ಅಂತ, ಈಗೊಂದು ವಾರದಿಂದ ನಾನೇ ಅವಳಿಗೆ ದಿನಕ್ಕೆ ಐನೂರು ಸಾವಿರ ಕೊಡ್ತಿದೀನಿ ಸಾ... ಎಲ್ಲ ನಮ್ಮ ಕರ್ಮ ಸಾ.. ನೀವೇ ಹೇಳಿ ಸಾರ್  ಅವಳನ್ನು ಆ ಚಟದ ದಾಸ್ಯದಿಂದ ಮುಕ್ತಿಗೊಳಿಸೊದು ಹೇಗೆ ಅಂತ. ಇದು ನನ್ನ ಮಗಳೊಬ್ಬಳ ಸಮಸ್ಯೆ ಅಷ್ಟೇ ಅಲ್ಲ ಸಾ.. ಇಡೀ  ಬೆಂಗಳೂರಲ್ಲೇ ಸಾವಿರಾರು ಮಕ್ಕಳಿದ್ದಾರೆ ನಮ್ಮ ರಾಜ್ಯದಲ್ಲೇ ಲಕ್ಷಕ್ಕಿಂತ ಹೆಚ್ಚಿದ್ದಾರೆ, ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿದ್ದಾರೆ, ನಾನು ಲೆಕ್ಕ ಕೊಟ್ಟಿದ್ದು ಹೈ ಸ್ಕೂಲು ಪ್ರೈಮರಿ ಸ್ಕೂಲ್ ಮಕ್ಳುದ್ದು ಅಷ್ಟೇ.. ಇನ್ನು ಕಾಲೇಜ್ ಮಕ್ಕಳು ಎಷ್ಟು ಇದ್ದರೋ ಆ ದೇವರಿಗೆ ಗೊತ್ತು.

ನೀವ್ಯಾರಾದರೂ ಈ ಮಾದಕ ದ್ರವ್ಯ ಜಾಲವನ್ನು ನಿರ್ಮೂಲನೆ ಮಾಡುವ ಬಗ್ಗೆಯಾಗಲಿ ಅಥವಾ ಅದರ ದಾಸ್ಯಕ್ಕೆ ಬಲಿಯಾದ ಮಕ್ಕಳನ್ನು ಮುಕ್ತಿಗೊಳಿಸುವ ಬಗ್ಗೆಯಾಗಲೀ ಯೋಚಿಸಿದ್ದೀರಾ ???

ಇದನ್ನು ನೆನೆದು ಗಂಟಲು ಒಣಗಿದಂತಾಗಿ, ಪರಿಚಾರಿಕೆಯನ್ನು ಕರೆದು ನೀರು ಇಸ್ಕೊಂಡು ಕುಡಿದೆ. ಸಂಯುಕ್ತಾ ನನಗೂ ನೀರು ಕೊಡು ಎಂದಳು. ನೀರಿನ ಬಾಟಲಿಯನ್ನು ನೀಡಿ, ಅವಳ ಗಲ್ಲವನ್ನೊಮ್ಮೆ ಸವರಿ, ಮತ್ತೆ ಸೀಟಿಗೊರಗಿ ಕಣ್ಣು ಮುಚ್ಚಿದೆ.
                                                **********************************

Friday, May 17, 2013

SUmUಕತೆ : ಭಾಗ - ೨


ಹೌದು... ನೀವು ಅಂದುಕೊಂಡಿರುವುದು ನಿಜ. ನಾವು ಹೋಗಿದ್ದುದು IIT ಕಾನ್ಪುರದಲ್ಲಿ ನಡೆದ ಘಟಿಕೋತ್ಸವದ ಸಮಾರಂಭಕ್ಕೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲಾ ೭ IIT ಗಳೂ ಸೇರಿ ಘಟಿಕೋತ್ಸವದ ಸಮಾರಂಭ ಏರ್ಪಡಿಸಿದ್ದರು. ಕಳೆದ ಸಲ IIT ಗುವಾಹಟಿಯಲ್ಲಿ ನಡೆದಿತ್ತಂತೆ. ಈ ಬಾರಿ ಕಾನ್ಪುರದಲ್ಲಿ. B.Tech ಸೇರಿದಂತೆ ಉಳಿದೆಲ್ಲ ಡಿಗ್ರಿಯ ಘಟಿಕೋತ್ಸವ ಆಯಾ ಕಾಲೇಜಿನಲ್ಲೇ ನಡೆದರೆ, ಪೋಸ್ಟ್ ಗ್ರಾಜುಯೇಷನ್ ಕೋರ್ಸ್ ಆದ ಕೇವಲ M.Tech ಪದವಿಯದು ಮಾತ್ರ, ಘಟಿಕೋತ್ಸವದ ಸಮಾರಂಭ ಎಲ್ಲರೂ ಸೇರಿ ಮಾಡುವುದಂತೆ. ಹಾಗಾಗಿ ಸಂಯುಕ್ತ IIT ಖರಗ್ಪುರದ ವಿದ್ಯಾರ್ಥಿನಿಯಾದರೂ, ಘಟಿಕೋತ್ಸವದಲ್ಲಿ ಭಾಗವಹಿಸಲು ಕಾನ್ಪುರಕ್ಕೆ ಬಂದಿದ್ದಳು. ಸಂಯುಕ್ತ IIT ಖರಗ್ಪುರ ಕಾಲೇಜಿಗೆ ಪ್ರಥಮ ಬಂದಿದ್ದರೂ, ಒಟ್ಟಾರೆ (ಎಲ್ಲಾ ಕಾಲೇಜ್ ಸೇರಿ) ಮೂರನೇ ರ್‍ಯಾಂಕ್ ಪಡೆದ್ದಿದ್ದಳು. ಅದರ ಜೊತೆಗೆ ಎರಡು ಚಿನ್ನದ ಪದಕ ಕೂಡ ತನ್ನದಾಗಿಸಿಕೊಂಡಿದ್ದಳು. ಮಗಳ ಈ ವಿಶೇಷ ಸಾಧನೆಗೆ ಸನ್ಮಾನ ನಡೆಯುವುದನ್ನು ನೋಡಬೇಕೆಂಬ ಹಂಬಲ ಸರಸು ಅತ್ತೆಗೆ. ಆದರೆ ಅಲ್ಲಿಗೆ ಹೋಗಿ ಬರಲು ಖರ್ಚು ಕಡಿಮೆ  ಆಗುತ್ತದೆಯೇ? ಅದೂ ಅಲ್ಲದೆ ಅಂಕಲ್ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವುದಾದರೂ ಹೇಗೆ? ಏನೋ ಬೆಳಗ್ಗೆ ಹೋಗಿ ಸಂಜೆ ಬರುವ ಹಾಗೂ ಇಲ್ಲ.. ಕನಿಷ್ಠವೆಂದರೂ ೪-೫ ದಿನ ಬೇಕು ಹೋಗಿ ಬರುವುದಕ್ಕೆ. ಹಾಗಾಗಿ ಇಲ್ಲಿ ಬಂದು ನೋಡುವ ತಮ್ಮ ಆಸೆಯನ್ನು ಅವರು ಯಾರ ಬಳಿಯೂ ಹೇಳಿರಲ್ಲಿಲ್ಲ ಒಬ್ಬ ಸಂಯುಕ್ತಾಳ ಹೊರತಾಗಿ. ಅವಳ ಹತ್ತಿರಾನೂ ತಮಗೆ ಅಲ್ಲಿ ಬಂದು ನೋಡುವ ಬಲವಾದ ಅಪೇಕ್ಷೆಯಿದೆಯೆಂದು ಆಕೆ ಹೇಳಿರಲ್ಲಿಲ್ಲ, ಹೀಗೆ ಏನೋ ಫೋನಲ್ಲಿ ಮಾತಾಡೋವಾಗ, ನಮಗೆಲ್ಲಿ ಬರೋಕಾಗತ್ತೆ ಕಂದಾ ಅಲ್ಲಿ ತನಕ ಅಂದಿದ್ದರಂತೆ. ಅದನ್ನು ಸಂಯುಕ್ತಾ ನನ್ನ ಬಳಿ ಹೇಳಿದ್ದಳು. ನಾನು ಅಂಕಲ್ ನು ಒಪ್ಪಿಸಿದ್ದೆ, ರಜ ಸಿಕ್ಕರೆ ಖಂಡಿತ ಬರ್ತೀನಪ್ಪ ಅಂದಿದ್ದರು. ಆದರೆ ರಜೆ ಸಿಗದ ಕಾರಣ, ಅವರು ನಾನು ಬರೋದಿಕ್ಕೆ ಆಗಲ್ಲ ಅಂದಾಗ, ಇನ್ನು ನಾನು ಬಂದರೆ ಅವರಿಗೆ ಊಟ ತಿಂಡಿಯ ಗತಿ ಏನು ಎಂದು ಸರಸು ಅತ್ತೆ ನಾನು ಬರೋದಿಲ್ಲಪ್ಪ , ನೀನು ಖಂಡಿತ ಹೋಗಲೇಬೇಕು ಅಂದರು. ಅಂಕಲ್ ಗೆ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಿಕೊಡಲು ಪಕ್ಕದ ಮನೆಯ ಸೌಮ್ಯ ಆಂಟಿಗೆ ಒಪ್ಪಿಸಿದೆ. ಸೌಮ್ಯ ಆಂಟಿಯ ಗಂಡ ರಮೇಶ ಅಂಕಲ್ ಬಂದು, ನಾವು ನೋಡಿಕೊಳ್ಳುತ್ತೇವೆ ನೀವು ಹೋಗಿಬನ್ನಿ ಎಂದು ಧೈರ್ಯ ಹೇಳಿದೆ ಮೇಲೆ ಸರಸು ಅತ್ತೆ ಹೊರಟು ಬಂದದ್ದು. ನಾನು ಅವಳಮ್ಮನ್ನನ್ನು ಒಪ್ಪಿಸಿ ಕರೆ ತಂದಿದ್ದಕ್ಕೆ ಸಂಯುಕ್ತಾ ಗೆಸ್ಟ್ ಹೌಸ್ ನಲ್ಲಿದ್ದಾಗ ನನಗೊಂದು ಸಿಹಿ ಮುತ್ತಿನ ಲಂಚ ಕೊಟ್ಟಿದ್ದಳು.

ಯಡಿಯೂರಪ್ಪ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಕೆಳಗಿಳಿಯುವುದಿಲ್ಲ ಎಂದು ಎಷ್ಟು ಹಠ ಮಾಡಿದ್ದರೋ, ಅದಕ್ಕಿಂತ ದುಪ್ಪಟ್ಟು ಹಠ ಸಂಯುಕ್ತಾ M.Tech  ಸೇರಿಕೊಳ್ಳದೇ ಇರೊದಕ್ಕೆ ಮಾಡಿದ್ದಳು. ಅದಕ್ಕೆ ಬಲವಾದ ಕಾರಣವೂ ಇತ್ತು. ಮನೆಯಲ್ಲಿ ದುಡಿಯುತ್ತಿದ್ದುದು ವಯಸ್ಸು ಅರವತ್ತು ದಾಟಿದ್ದ ಅಪ್ಪ ಒಬ್ಬರೇ, ಇದ್ದುದು ಮೂರೆ ಮಂದಿಯಾದರೂ ಅವರ ದುಡಿಮೆ ಬೆಂಗಳೂರಿನಂತ ಮಹಾನಗರದಲ್ಲಿ  ಸಾಮಾನ್ಯ ಜೀವನ ನಡೆಸುವುದಕ್ಕೂ ಕೆಲವೊಮ್ಮೆ ಕಷ್ಟವಾಗುತ್ತಿತ್ತು. ಯಾವುದೋ ಪ್ರೈವೇಟ್ ಫ್ಯಾಕ್ಟರಿಯಲ್ಲಿ ಮಷೀನ್ ಮುಂದೆ ನಿಂತು, ಶಿಫ್ಟಿನ ಅರಿವಿಲ್ಲದೆ ದಿನಕ್ಕೆ ೧೦ ಗಂಟೆಗಳ ಕಾಲ ದುಡಿದರೂ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಮಾತ್ರ, ಅದೂ ಈಗ ಮೂರು ವರ್ಷದ ಹಿಂದಿನಿಂದ. ಅದಕ್ಕೂ ಮುನ್ನ ಎಂಟುವರೆ ಸಾವಿರ ಬರುತ್ತಿತ್ತಂತೆ, ಅದಕ್ಕೂ ಮುಂಚೆ ಇನ್ನೂ ಕಮ್ಮಿ. ಬರುವ ಹತ್ತು ಸಾವಿರದಲ್ಲಿ ಮೂರು ಸಾವಿರ ತಾವಿದ್ದ ಗೂಡಿಗೆ ಬಾಡಿಗೆ ಕಟ್ಟಿದರೆ, ಎರಡು ಸಾವಿರ ತಿಂಗಳ ರೇಶನ್ನಿಗೆ, ಮತ್ತೊಂದು ಸಾವಿರ ವಿದ್ಯುತ್ ಬಿಲ್ಲು, ವಾಟರ್ ಬಿಲ್ಲು, ನ್ಯೂಸ್ ಪೇಪರ್, TV ಕೇಬಲ್, ಹಾಲು-ಮೊಸರು ಹೀಗೆ.. ಉಳಿಯುತ್ತಿದ್ದುದು ಮೂರೋ ನಾಕೋ ಸಾವಿರ. ಅದರಲ್ಲೂ ಯಾರದೋ ಮುಂಜಿ, ಇನ್ಯಾರದೋ ಮದುವೆ, ಮತ್ತ್ಯಾರಿಗೋ ಅರವತ್ತರ ಶಾಂತಿ ಎಂದು ಸಣ್ಣ ಉಡುಗೊರೆ ಕೊಡಲೇಬೇಕು, ಅದು ಮರ್ಯಾದೆ ಪ್ರಶ್ನೆ, ಹಾಗಂತ ಹೋಗದೆ ಇರಲೂ ಸಾಧ್ಯವಿಲ್ಲ. ಬಂಧು ಬಳಗದವರು ಇವರ ಕಷ್ಟಕ್ಕೆ ಆಗುವುದು ಅಷ್ಟರಲ್ಲೇ ಇತ್ತು ಆದರೂ ಇವರಿಗೆ ನೆಂಟರ ಮೇಲಿನ ಪ್ರೀತಿಗೇನೂ ಕಮ್ಮಿ ಇರಲ್ಲಿಲ್ಲ.

ಮನೆಯ ಪರಿಸ್ಥಿತಿ ಹೀಗಿರುವಾಗ ಸಂಯುಕ್ತಾಳಿಗೆ ಮತ್ತೆರಡು ವರ್ಷ ಓದುವ ಯಾವ ಇರಾದೆಯೂ ಇರಲ್ಲಿಲ್ಲ. ಕ್ಯಾಂಪಸ್ ಸೆಲೆಕ್ಷನ್ ಆಗಿ ಎರಡು ಮೂರು ಆಫರ್ ಗಳು ಕೈಲಿದ್ದವು. ತಾನು ಕೆಲಸಕ್ಕೆ ಸೇರಿ ಅಪ್ಪನನ್ನು ಮನೆಯಲ್ಲಿ ಸುಖವಾಗಿರಸಬೇಕೆಂಬುದು ಅವಳ ಹೆಬ್ಬಯಕೆಯಾಗಿತ್ತು. ಅವರ ತಂದೆ ತಾಯಿಗೂ ಅದು ಬಹು ಮಟ್ಟಿಗೆ ಒಪ್ಪಿಯಾಗಿತ್ತು. ಆದರೆ ನಾನು ಬಲವಂತ ಮಾಡಿ ಅವಳನ್ನು M.Tech ಗೆ ಸೇರಿಸಿಬಿಟ್ಟಿದ್ದೆ. ಆಗೆಲ್ಲ ಒಮ್ಮೊಮ್ಮೆ ಅವರ ಮನೆಗೆ ಹೋದಾಗ, ಅವರಿಬ್ಬರ   ಮೌನದ ನಡುವಲ್ಲಿ ನಾನು ಸಿಕ್ಕಿಹಾಕಿಕೊಂಡಾಗ, ಸಂಯುಕ್ತಾಳನ್ನ M.Tech ಗೆ ಕಳುಹಿಸಿ ತಪ್ಪು ಮಾಡಿಬಿಟ್ಟೆನಾ? ಅನಿಸುತ್ತಿತ್ತು. ಆಗೆಲ್ಲ ಇನ್ನೆಷ್ಟು ದಿನ, ೨ ವರ್ಷ ಅಷ್ಟೇ ತಾನೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಾ ಅಲ್ಲಿಂದ ಬಹುತೇಕ ಕಾಲ್ತೆಗೆಯುತ್ತಿದ್ದೆ ಅಥವಾ ಅಂಕಲ್ ಮೂಡ್ ಚೆನ್ನಾಗಿದ್ದರೆ ಅವರೊಂದಿಗೆ ರಾಜಕೀಯ ಭಾಷಣ ಶುರು ಹಚ್ಚುತ್ತಿದ್ದೆ. ಹೌದಲ್ಲವಾ? ದಿನಗಳು ಎಷ್ಟು ಬೇಗ ಉರುಳುತ್ತಿದೆ. ಕುರ್ಚಿ ಇಳಿಯಲು ಗರ್ಜಿಸುತ್ತಿದ್ದ ಯಡ್ಡಿ, ಅದರಲ್ಲಿ ಸದಾ ಆನಂದರನ್ನು ಕೂಡಿಸಿದ ಹಾಗೆ ಮಾಡಿ ಈಗ ಶೆಟ್ಟರನ್ನ ಹತ್ತಿಸುತ್ತಿದ್ದಾರೆ.

ಯಾವನು ಮುಖ್ಯಮಂತ್ರಿಯಾದರೂ ಅಷ್ಟೇನಪ್ಪ, ಶೆಟ್ಟರ / ಬಟ್ಟರ ಯಾರಾದ್ರೇನು.. ಎಲ್ಲಾ ಪಕ್ಷದವರೂ ಅಲ್ಪ ಸಂಖ್ಯಾತರ ಮತ ಬ್ಯಾಂಕ್ ವೃದ್ದಿಸಿಕೊಳ್ಳಲು, ಅವರ ಓಲೈಸುವಿಕೆಗೆ ಮುಂದಾಗುವರೇ ಹೊರತು, ನಮ್ಮನ್ನು ಕೇಳೋರೆ ಇಲ್ಲ. ಅಕ್ಕಿ ಬೆಲೆ ನಲವತ್ತೈದಾಗಿದೆ, ಹುರುಳಿಕಾಯಿಯಂತೂ ಕಿಲೋ ನೂರಾಗಿದೆ. ಬೆಳಗಾಗ್ಗೆದ್ರೆ ಪೆಟ್ರೋಲ್ ಡೀಸೆಲ್ ದರ ಏರಿಕೆ, ವಿದ್ಯುತ್ ಪ್ರತಿ ಯೂನಿಟ್ ಗೆ ೨೦ ಪೈಸೆ ಏರಿಕೆ, ಬೆಂಗಳೂರಲ್ಲಿ ೪ ತಾಸು ಟ್ರಾಫಿಕ್ ಜಾಮ್, ದೆಹಲಿಯಲ್ಲಿ ಗ್ಯಾಂಗ್ ರೇಪ್, ಹಾಸನದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮುಂಬೈಯಲ್ಲಿ ಉಗ್ರರಿಂದ ಬಾಂಬ್ ಸ್ಪೋಟ.... ಇವರು ಅಧಿಕಾರದಲ್ಲಿದ್ದು ಮಾಡುತ್ತಿರುವುದೇನು? ಬರೀ ಸ್ವಾರ್ಥ ಜೀವನ ದ್ವೇಷ ರಾಜಕೀಯ. ಇಂಥವರು ನಮ್ಮನ್ನಾಳುತ್ತಿದ್ದಾರೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ. ಎಂತೆಂಥವರು ನಮ್ಮನಾಳಿದರು, ಕೃಷ್ಣದೇವರಾಯ, ಅಸ್ಟ್ ಹಳೆದ್ ಯಾಕೆ, ಮೊನ್ನೆ ಮೊನ್ನೆವರೆಗೂ ನಮ್ಮ ಮೈಸೂರಿನ ಮಹಾರಾಜರು ಹೇಗೆ ಆಡಳಿತ ನಡೆಸಿದರು.... ಅಂಕಲ್ ಭಾಷಣ ಶುರು ಮಾಡಿದರೆಂದರೆ ನನಗೆ ರಾತ್ರಿ ಊಟ ಅವರ ಮನೆಯಲ್ಲೇ ಎಂಬುದು ಎಂದಿನಿಂದಲೋ ಗೊತ್ತಿರುವ ವಿಷಯ. ನನಗೆಂದೂ ಅವರು ಕೊರೆಯುತ್ತಿದ್ದಾರೆ ಅನ್ನಿಸುತ್ತಿರಲ್ಲಿಲ್ಲ, ಅವರ ಮನಸಿನ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದರು ಅಷ್ಟೇ. ಆ ಸಮಯದಲ್ಲೇ  ಅವರ ಮಾತುಗಳ ಮಧ್ಯದಲ್ಲಿ ನಾನು ಗೀಚಿದ್ದು
೧. ರಾಜಕೀಯ 
೨. ಹಾಲಾಡಿ 
೩. 2G Scam  
೪. ವಾಹನ ದಟ್ಟಣೆ 
೫. ಅಂತೆ - ಕಂತೆ 

ಟರ್ಬುಲೆನ್ಸ್ ಜಾಸ್ತಿಯಾಗಿದೆ, ಸೀಟ್ ಬೆಲ್ಟ್ ಧರಿಸಿ ಎಂದು ವಿಮಾನ ಪರಿಚಾರಿಕೆ ಪ್ರಕಟಿಸುತ್ತಿದ್ದಳು. ಅತ್ತೆ ಸೀಟ್ ಬೆಲ್ಟ್ ತೆರೆದೇ ಇರಲ್ಲಿಲ್ಲ. ಸಂಯುಕ್ತಾಳ ತಲೆಯನ್ನು ಹೆಗಲ ಮೇಲಿಂದ ಅವಳ ಸೀಟಿಗೊರಗಿಸಿ, ಅವಳಿಗೆ ಸೀಟ್ ಬೆಲ್ಟ್ ಹಾಕಿದೆ. ನಾನು  ಬೆಲ್ಟ್ ಹಾಕಿಕೊಂಡು ಸೀಟಿಗೊರಗಿ ಕಣ್ಣು ಮುಚ್ಚಿ ಕೂತೆ.

                                                          **********************

Thursday, May 16, 2013

SUmUಕತೆ : ಭಾಗ - ೧


ಅದು ವಿಶಾಲವಾದ ವೇದಿಕೆ. ಅಷ್ಟು ದೊಡ್ಡ ಸ್ಟೇಜ್ ನಾನು ನೋಡೇ ಇರಲ್ಲಿಲ್ಲ, ಇದೆ ಮೊದಲ ಸಲ. ವೇದಿಕೆಯಲ್ಲಿ ಭಾರತದ ರಾಷ್ಟ್ರಪತಿಗಳು, ಉಪ-ರಾಷ್ಟ್ರಪತಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಅನೇಕ ಮಂತ್ರಿಗಳು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರೂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವಳು ವೇದಿಕೆ ಹತ್ತುತ್ತಾಳೆ. ನಾನು ವೇದಿಕೆಯ ಮುಂಭಾಗದಲ್ಲಿ ಕೈಯಲ್ಲಿ ಮೊಬೈಲ್ ಕ್ಯಾಮೆರಾ ಹಿಡಿದು ಆ ವಿಶೇಷ ಸನ್ನಿವೇಶವನ್ನು ಸೆರೆ ಹಿಡಿಯಲು ಕಾಯುತ್ತಿದ್ದೆನೆ. ರಾಷ್ಟ್ರಪತಿಗಳು ಪದಕ ತೊಡಿಸಲಿದ್ದಾರೆ ಅವಳಿಗೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾನು ಕಾತರನಾಗಿದ್ದೇನೆ. ಅಂತೂ ಆ ಸಮಯ ಬಂದೇ ಬಿಟ್ಟಿತು. ಅವಳು ವೇದಿಕೆ ಹತ್ತಿ ಪದಕ ಸ್ವೀಕರಿಸುತ್ತಿರುವ ದೃಶ್ಯ ಸೆರೆ ಹಿಡಿದ ಮರು ಘಳಿಗೆಯಲ್ಲೇ ನನ್ನ ಮೊಬೈಲ್ ರಿಂಗಣಿಸಿತು. ಅನಾಮಧೇಯ ನಂಬರ್ ಅದು. ನಾನು ಕರೆ ಸ್ವೀಕರಿಸಿದೆ. ಮೈಕಿನ ಅಬ್ಬರದಲ್ಲಿ ಮತ್ತು ಚಪ್ಪಾಳೆಯ ಸದ್ದಿನಲ್ಲಿ ಏನೂ ಸರಿಯಾಗಿ ಕೇಳಿಸುತ್ತಿರಲ್ಲಿಲ್ಲ. ಒಂದು ಕಿವಿಯನ್ನು ಗಟ್ಟಿಯಾಗಿ ಮುಚ್ಚಿ ಹಿಡಿದು, ವೇದಿಕೆಯ ಬಲಭಾಗದಲ್ಲಿ ಸ್ಪೀಕರ್ ಇಲ್ಲದ ಜಾಗದಲ್ಲಿ ನಿಂತು ಆಲಿಸಿದೆ. ಅತ್ತ ಕಡೆ ಧ್ವನಿ ನಡಗುತ್ತಾ 'ಬೆಳಗ್ಗೆ  ....  ಹೀಗಾಗಿ ಬಿಟ್ಟಿದೆ.. .. 'ಎಂದಿತು. ನಾವು ಈ ಕ್ಷಣ ಹೊರಟು ಬರ್ತೀವಿ, ಬರೋವರ್ಗು ದಯಮಾಡಿ ನೋಡಿಕೊಳ್ಳಿ ಎಂದು ಹೇಳಿ ಲೈನ್ ಕಟ್ ಮಾಡಿ ಅರೆಘಳಿಗೆ ತಟಸ್ಥನಾಗಿ ನಿಂತುಬಿಟ್ಟೆ, ನಂತರ ಸಾವರಿಸಿಕೊಂಡು, ವೇದಿಕೆಯ ಮುಂದುಗಡೆ ಮೊದಲ ಸಾಲಿನಲ್ಲೇ ಕುಳಿತಿದ್ದ ಅವಳಮ್ಮನ ಹತ್ತಿರ ಹೋಗಿ ನೀವು ಇಲ್ಲೇ ಇರಿ, ನಾನು ಈಗ ಬಂದೆ ಎಂದು ಹೇಳಿ ಹೊರಬಂದೆ.

ಹೊರ ಬಂದವನೇ ಆಟೋ ಹತ್ತಿದೆ.  ಕಿದರ್ ಸಾಬ್ ಅಂದವನಿಗೆ ಎಂ ಎಂ ರೋಡ್ ಜಾನ ಹೈ ಎಂದು ಹೇಳಿ, ನನ್ನ ಮೊಬೈಲ್ ಜಿಪಿಎಸ್ ಆನ್ ಮಾಡಿದೆ. ಏರ್ ಟಿಕೆಟ್ ಬುಕಿಂಗ್ ನಿಯರ್ಬೈ ಎಂದು ಸರ್ಚಿಸಿದೆ. ಗ್ಲೋಬಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ . 7/11 1st  ಫ್ಲೋರ್, 3rd  ಮೇನ್, 2nd  ಕ್ರಾಸ್  MM ರೋಡ್, ಕಾನ್ಪುರ್. Distance - 3 Kms ಫ್ರಮ್ ಹಿಯರ್. ನಾನು ಆಟೋದವನಿಗೆ ಇದರ್ ಲೆಫ್ಟ್ ಲೆಲೋ, ಉದರ್ ರೈಟ್ ಲೆಲೋ  ಅಂತ ಹೇಳುತ್ತಾ  ಗ್ಲೋಬಲ್ ಏವಿಯೇಷನ್ ಹತ್ತಿರ ಇಳಿದು ಸರ ಸರ ಮೆಟ್ಟಿಲುಗಳನ್ನು ಏರಿದೆ. ಬಾಗಿಲಲ್ಲಿ ಸೆಕ್ಯೂರಿಟಿ ಗಾರ್ಡ್ ತಡೆದು ನನ್ನ ಇಡೀ ದೇಹವನ್ನೊಮ್ಮೆ ಜಾಲಾಡಿದ. ಎಷ್ಟೇ ಅವಸರದಲ್ಲಿದ್ದರೂ ಅವನ ಕರ್ತವ್ಯ ಮಾಡಲಿ ಎಂದು ತಪಾಸಣೆಗೆ ಸಹಕರಿಸಿದೆ. ಒಳ ಬಂದೊಡನೆಯೇ ರಿಸೆಪ್ಶನಿಸ್ಟ್ ಹೌ ಕ್ಯಾನ್ ಐ ಹೆಲ್ಪ್ ಯು ಸರ್ ಅಂದಳು. ಐ ವಾಂಟ್ ಟು ಬುಕ್ ಟಿಕೆಟ್ಸ್ ಟು ಬೆಂಗಳೂರು ಅಂದೆ. ಪ್ಲೀಸ್ ಗೋ ಟು ಕೌಂಟರ್ ೭ ಅಂದಳು. ಅವಳತ್ತ ಕಿರುನಗೆ ಬೀರಿ ಥ್ಯಾಂಕ್ಯೂ ಹೇಳಿ ಕೌಂಟರ್ ೭ ರ ಹತ್ತಿರ ನಿಂತೆ. ನನ್ನ ಮುಂದೆ ನಿಂತಿದ್ದ ದಡೂತಿ ಮಹಿಳೆ, ನಾನೆಲ್ಲಿ ಮುನ್ನುಗ್ಗಿ ಬಿಡುವೆನೋ ಎಂದು ನನ್ನ ಕಡೆ ವಾರೆ ನೋಟ ಬೀರಿ ಮುಂದೆ ಮುಂದೆ ಜರುಗಿ, ಮುಂದೆ ನಿಂತಿದ್ದ ಯುವತಿಗೆ ತಾಗಿದಳು. ಅಷ್ಟಕ್ಕೇ ಆ ಯುವತಿ ಹಿಂದೆ ತಿರುಗಿ ಪ್ಲೀಸ್ ಮೈಂಟೈನ್ ಡಿಸ್ಟೆನ್ಸ್ ಅಂತ UK ಆಕ್ಸೆಂಟಿನಲಿ ಅರಚಿದಳು. ಅಂತೂ ಇವರಿಬ್ಬರ ಸರದಿ ಮುಗಿದು ನಾನು ಬಂದಾಗ ಮಧ್ಯಾನ್ಹ ೧೨ :೩೧ ಆಗಿತ್ತು.

ಪ್ಲೀಸ್ ಟೆಲ್ ಮಿ ಸರ್.
ಐ ವಾಂಟ್ ಟು ಬುಕ್ ೩ ಟಿಕೆಟ್ಸ್ ಟು ಬೆಂಗಳೂರು.
ಡೇಟ್ ಟೈಮ್ ಕ್ಯಾರಿಯರ್ ಸರ್?
ಟುಡೇ, ಐ ವಾಂಟ್ ಟು ಟ್ರಾವೆಲ್ ಇಮ್ಮಿಡಿಯಟ್ಲಿ, ಎನಿ ಫ್ಲೈಟ್ ಇಸ್ ಓಕೆ ಫಾರ್ ಮಿ.
ನೆಕ್ಸ್ಟ್ ಇಮ್ಮಿಡಿಯೆಟ್  ಫ್ಲೈಟ್ ಇಸ್ ಅಟ್ 3'o ಕ್ಲಾಕ್, ಕಿಂಗ್ ಫಿಷರ್ ಏರ್ಲೈನ್ಸ್, ಐ ಡೌಟ್ ಆನ್ ೩ ಅವೈಲಬಲ್ ಟಿಕೆಟ್ಸ್. ಪ್ಲೀಸ್ ಚೆಕ್, ಐ ವಾಂಟ್ ೩ ಆರ್ ಚೆಕ್ ಫಾರ್ ನೆಕ್ಸ್ಟ್ ಫ್ಲೈಟ್.
ಲೆಟ್ ಮಿ ಚೆಕ್ ಸರ್.
ಶ್ಯೂರ್.
ಯೂರ್ ಲಕ್, ಲಾಸ್ಟ್ ೩ ಅವೈಲಬಲ್.
ಪ್ಲೀಸ್ ಲಾಕ್ ದೊಸ್ ಫಾರ್ ಮಿ
ದೊಸ್ ಆರ್ ಫಾರ್ ಯು, ಕ್ಯಾಶ್ ಆರ್ ಕಾರ್ಡ್ ಸರ್
ಕಾರ್ಡ್
ಇಲವೆನ್ ಥೌಸಂಡ್ ಸೆವೆನ್ ಹಂಡ್ರೆಡ್ ಅಂಡ್  ಯೈಟಿಫೋರ್ ಇಂಕ್ಲುಡಿಂಗ್ ಟ್ಯಾಕ್ಸ್
ಫೈನ್
ಕಾರ್ಡ್ ಉಜ್ಜಿ ನನ್ನ ಸಹಿ ಪಡೆದವಳು, ಪ್ಲೀಸ್ ಮೇಕ್ ಶ್ಯೂರ್ ಯು ವಿಲ್ ಬಿ ದೇರ್ ಬೈ 2'o ಕ್ಲಾಕ್ ಸರ್
ಯಾ..ಎಂದು ಕಣ್ಣು ಮಿಟುಕಿಸುತ್ತಾ , ಐ ವಿಲ್ ಮ್ಯಾನೇಜ್. ಥ್ಯಾಂಕ್ಯು. ಎಂದೆ.
ಯೂರ್ ಟಿಕೇಟ್ ಸರ್ , ಏಕ ಗವಾಕ್ಷಿಯ ಕಿಂಡಿಯಿಂದ ಕೈ ಆಚೆ ಚಾಚಿ ನೀಡಿದಳು.

ನಾನು ಟಿಕೆಟ್ ಪಡೆದು, ಅಲ್ಲೇ ನಿಲ್ಲಿಸಿದ್ದ ಆಟೋ ಹತ್ತಿ ಕಾರ್ಯಕ್ರಮ ನಡಿತಿದ್ದ ಜಾಗ ತಲುಪಿದೆ. ನನ್ನ ಬಳಿ ಇದ್ದ VIP ಪಾಸ್ ತೋರಿಸಿ ಒಳ ಹೋದಾಗ ರಾಷ್ಟ್ರಪತಿಗಳ ಭಾಷಣ ಮುಗಿಯುವ ಹಂತ ತಲುಪಿತ್ತು. ಅವಳು ಅವಳಮ್ಮನ ಪಕ್ಕ ಕೂತಿದ್ದಳು. ಅದರ ಪಕ್ಕದ್ದೆ ನನ್ನ ಸೀಟು. ನಾನು ಅಲ್ಲಿ ಹೋಗಿ ಕೂರುತ್ತಿದ್ದಂತೆ, ಯೆಯ್ ಏನಾಯ್ತು? ಯಾಕೆ ನೀನು ಸಡನ್ ಆಗಿ ಆ ಕಡೆ ಹೋಗ್ಬಿಟ್ಟೆ? ನಾನ್ ಮೆಡಲ್ ತೊಗೊಂಡಿದ್ದು ನೋಡ್ಧೆ ತಾನೆ ಅಂತ ಪ್ರಶ್ನೆಗಳ ಸರಮಾಲೆ ಹಾಕಿದಳು, ಅವಳಮ್ಮನೂ  ಈಗ ಬರ್ತೀನಿ ಅಂದು ಎಲ್ಲಿ ಹೋಗಿದ್ದಪ್ಪ. ನಾನು ಇಬ್ಬರ ಮುಖವನ್ನು ಒಮ್ಮೆ ನೋಡಿ, ನಾನು ಫ್ಲೈಟ್ ಟಿಕೆಟ್ಸ್ ಬುಕ್ ಮಾಡಲು ಹೋಗಿದ್ದೆ. ಈಗ ಮೂರು ಗಂಟೆಗೆ ಫ್ಲೈಟ್, ಇಲ್ಲಿಂದ ಏರ್ಪೋರ್ಟ್ ಗೆ ಹೋಗಲು ಕನಿಷ್ಠ ೪೫ ನಿಮಿಷ ಬೇಕು, ಆದರಿಂದ ನಾವು ತಕ್ಷಣ ಹೊರಡಬೇಕು ಎಂದೆ. ಏನಪ್ಪಾ ಸಮಾಚಾರ ಎಲ್ಲಾರು ಕ್ಷೇಮ ತಾನೇ? ಯಾಕೆ ನಾವು ಈಗಲೇ ಹೊರಡಬೇಕು?.. ಯೆಹ್, ಏನೋ ಇದು, ನಾಳೆ ರಾತ್ರಿಗೆ ತಾನೇ ನಾವು ಟ್ರೈನ್ ಟಿಕೆಟ್ ಬುಕ್ ಮಾಡಿರದು? ಇನ್ನು JK ಟೆಂಪಲ್, ವಾಲ್ಮೀಕಿ ಆಶ್ರಮ ನೋಡೋದಿದೆ. ನಾನು ಖರಗ್ಪುರಕ್ಕೆ ವಾಪಸ್ ಹೋಗದೆ ಇರೋದ್ರಿಂದ ನನ್ನ ಫ್ರೆಂಡ್ಸ್ ಎಲ್ಲ ಸೇರಿ ರಾತ್ರಿ ಇಲ್ಲೇ ಪಾರ್ಟಿ ಅರೆಂಜ್ ಮಾಡಿದಾರೆ. ನೀನ್ ನೋಡುದ್ರೆ ಈಗಲೇ ಹೋಗಬೇಕು ಅಂತಿದ್ಯ, ಏನಾಯ್ತು ನಿಂಗೆ?

ನಾನು ಇಬ್ಬರನ್ನು ಎಬ್ಬಿಸಿಕೊಂಡು, ಗೆಸ್ಟ್ ಹೌಸ್ಗೆ ತೆರಳಿ ಲಗೇಜ್ ಪ್ಯಾಕ್ ಮಾಡಿಸಿದೆ. ನಡುವೆ ಸಿಟಿ ಟ್ಯಾಕ್ಸಿಗೆ ಕಾಲ್ ಮಾಡಿ ೧:೩೦ರ ಸುಮಾರಿಗೆ ಕಾಲೇಜ್ ಕ್ಯಾಂಪಸ್ ಬಳಿ ಬರಲು ತಿಳಿಸಿದೆ. ಸಂಯುಕ್ತಾಳಿಗೆ ಕಣ್ಣು ಹೊಡೆದು ಹೊರ ಕಳಿಸಿ, ಸರಸು ಅತ್ತೆಗೆ, ಅತ್ತೆ ಇಲ್ಲಿ ಯಾವುದೋ ಟೆರರಿಸ್ಟ್ ಅಟ್ಯಾಕ್ ಆಗೋ ಸಾಧ್ಯತೆಗಳಿದೆಯಂತೆ. ಹಾಗಾಗಿ ನಾವು ತಕ್ಷಣ ಹೊರಡುವುದು ಕ್ಷೇಮ, ನೀವೇನು ಚಿಂತಿಸಬೇಡಿ, ನಾನು ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಇನ್ನೈದು ನಿಮಿಷದಲ್ಲಿ ಕಾರು ಬರುತ್ತದೆ, ರೆಡಿ ಆಗಿ ಅಂತ ಹೇಳಿ ಅವರನ್ನು ಬಚ್ಚಲು ಮನೆಗೆ ಕಳುಹಿಸಿ, ಸಂಯುಕ್ತಾಳನ್ನು ಕರೆದು, ಹಣೆಗೊಂದು ಮುತ್ತು ಕೊಟ್ಟು ಅತ್ತೆಗೆ ಹೇಳಿದ್ದನ್ನೇ ಮತ್ತೆ ಹೇಳಿದೆ. ನಾನು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದರೂ, ನನ್ನ ಬಲಗೈಯನ್ನು ತನ್ನ ಎರಡು ಕೈಗಳ ಮಧ್ಯ ಹಿಡಿದು ಕಣ್ಣು ಮುಚ್ಚಿ ಮೆಲ್ಲಗೆ ತಲೆಯಾಡಿಸಿದಳು. ಹೊರಗಡೆ ಏನೂ ತಿನ್ನದ ಅತ್ತೆ, ಐದೇ ನಿಮಿಷದಲ್ಲಿ ಬುತ್ತಿ ತಂದಿದ್ದ ಚಪಾತಿ ಚಟ್ನಿಪುಡಿ ತಿಂದು ಮುಗಿಸಿ ರೆಡಿ ಆಗಿ ನಿಂತರು. ಕಾರು ಬಂದೊಡನೆ ಮೂರು ಬ್ಯಾಗ್ಗಳನ್ನ ತುರುಕಿ, ಭೈಯ್ಯ ತೀನ್ ಭಜೆ ಕಾ ಫ್ಲೈಟ್ ಹೈ, ಜಲ್ದಿ ಜಾನ ಹೈ ಅಂದೆ. ಫಿಕರ್ ಮತ್ ಕೀಜಿಯೇ ಸಾಬ್, ಆದ ಗಂಟಾ ಮೇ ಜಾಯೇಗ ಅಂದು ಬರ್ರ್ ಅಂತ ಕ್ಯಾಂಪಸ್ ಆಚೆ ಎಡಬದಿಗೆ ಗಾಡಿ ತಿರುಗಿಸಿದ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಮೇನ್ ರೋಡಿನ ಬಲತುದಿಯಲ್ಲಿ Airport 30 Kms ಎನ್ನುವ ದಾರಿ ಫಲಕ ಕಂಡಿತು. ಆ ಕ್ಷಣ ನಾನು ಗಡಿಯಾರ ನೋಡಿದಾಗ ಗಂಟೆ ಮಧ್ಯಾನ್ಹ  ೧:೪೫.

ಮಧ್ಯಾನ್ಹದ  ಸಮಯವಾದ್ದರಿಂದ ಟ್ರಾಫಿಕ್ ಇರಲ್ಲಿಲ್ಲ, ಸರಿಯಾಗಿ ೨:೧೫ಕ್ಕೆ ಏರ್ಪೋರ್ಟ್ ತಲುಪಿದ್ದೆವು. ಚೆಕ್ ಇನ್ ಮಾಡಿ ಬೋರ್ಡಿಂಗ್ ಪಾಸ್ ಪಡೆದೆ. ತಿನ್ನಲು ಹಾಳು-ಮೂಳು ತೊಗೊಂಡು, ಫ್ಲೈಟಿನ ಕಡೆ ಸೀಟಿನಲ್ಲಿ ಆಸೀನರಾದಾಗ ೨:೪೫ ಆಗಿತ್ತು. ನಾನು ಅಪ್ಸರೆಯಂತಿರುವ ಆ ಗಗನ ಸಖಿಯರನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದರೆ, ಸಂಯುಕ್ತಾ ಕೋತಿ ಅನ್ನುತ್ತಾ ನನ್ನ ತೊಡೆಗೆ ಜಿಗುಟಿದಳು. ನಾನು ಸ್ವಲ್ಪ ಜೋರಾಗೆ ಆಹ್ ಹ್ ಎಂದಾಗ ಹತ್ತಿರದಲ್ಲೆ ಇದ್ದ ತರುಣಿ ಆರ್ ಯು ಓಕೆ? ಅಂದಾಗ ಸಂಯುಕ್ತಾಳ ಮುಖ ನೋಡಬೇಕಿತ್ತು :P ಚಿಪ್ಸು, ಜ್ಯೂಸು, MTR ಅವಲಕ್ಕಿ ಮಿಕ್ಸು ಎಲ್ಲ ತಿಂದು ಹೊಟ್ಟೆ ತುಂಬಿದಾಗ, ಬೆಳಗ್ಗೆ ನಾಕಕ್ಕೆ ಎದ್ದಿದ್ದ ನಮ್ಮನ್ನು ಕಣ್ಣು  ನಿದ್ರಾಲೋಕಕ್ಕೆ ಕರೆಯುತ್ತಿತ್ತು. ಅಷ್ಟರಲ್ಲಾಗಲೇ ಅತ್ತೆ ಸೀಟಿಗೊರಗಿ ಕಣ್ಣು ಮುಚ್ಚಿದ್ದರು, ಸಂಯುಕ್ತಾ ನನ್ನ ಹೆಗಲ ಮೇಲೆ ತಲೆ ಇಟ್ಟು ಮೆಲ್ಲಗೆ ಏನಾಯಿತು ಎಂದಳು. ನಾನು ಏನಾಗಿಲ್ಲ, ನಥಿಂಗ್ ಟು ವರಿ ಡಿಯರ್, ನಿದ್ದೆ ಮಾಡು ಊರಿಗೆ ಹೋಗ್ತಿದೀವಲ ಎಲ್ಲ ಗೊತ್ತಾಗತ್ತೆ ಅಂದೆ. ಅವಳು ನಿದ್ರೆಗೆ ಜಾರಿದಳು, ನಾನು ಹೊರಗಣ್ಣು ಮುಚ್ಚಿದ್ದೆ,  ಆದರೆ ಒಳಗಣ್ಣು ಮನಃಪಟಲದ ಮೇಲೆ ಮೂಡುತ್ತಿದ್ದ ಚಿತ್ರವನ್ನು ನೋಡುತ್ತಿತ್ತು.

                                             *************************************





Tuesday, May 14, 2013

RCB ಪಂದ್ಯ

ಇಂದೇ ಹೊಡೀಬೇಕಿತ್ತಾ ಶತಕಾರ್ಧ ಗಿಲ್ಲಿ
ಎಲ್ಲರೂ ಫಾರ್ಮ್ಗೆ ಬರ್ತಾರೆ ಬೆಂಗಳೂರಲ್ಲಿ
ಚೆನ್ನಾಗಿ ಹೊಡುಸ್ಕೊತಿದಾನೆ ಆ ಕರಿ ಹಲ್ಲಿ
ಅಭಿಮಾನಿಗಳು ನಿರಾಶರಾಗಿದ್ದಾರೆ ಕೈಚೆಲ್ಲಿ
RCB ಕ್ವಾಲಿಫೈ ಆಗೋದು ಇನ್ನೆಲ್ಲಿ
ಕೈಯಲ್ಲಿರುವ ಗೆಲುವು ಬರುವುದಾ ಬಾಯಲ್ಲಿ
ಕೊನೆ ಪಂಚ್ : ಹೋಗ್ಲಿಬಿಡಿ, ಕಿಂಗ್ಸ್ ಇಲವೆನ್ ಅವ್ರೆ ಗೆಲ್ಲಿ
 

Monday, May 13, 2013

ಸಿದ್ದುಗೆ - ಗದ್ದುಗೆ

ಹಿಂದುಳಿದ ಕುರುಬರ ನಾಯಕ ಸಿದ್ದುಗೆ
ಕೈ ಪಕ್ಷ ನೀಡಿದೆ ಸಿಎಂ ಗದ್ದುಗೆ
ಎಲ್ಲರಿಗೂ ಆಗಿದೆ ಭಾರಿ ಮೆಚ್ಚುಗೆ
ಹೇಳೋಕೆ ಉಳಿದಿಲ್ಲ ಏನೂ ಹೆಚ್ಚಿಗೆ 
ಬೆಂಬಲಿಗರಿಗೆ ಸಿದ್ದು ನೀಡಿದರು ಅಪ್ಪುಗೆ
ಸದ್ಯ ಸಿಗಲ್ಲಿಲ್ಲ ಸಿಎಂ ಕುರ್ಚಿ, ಖರ್ಗೆಯಂತ ಬೆಪ್ಪುಗೆ

ಪಂಚ್:
ಸಿದ್ದು ಕಾರ್ಯವೈಖರಿ ತಿಳಿಯಲು :-
ನಾವು ಕಾದುನೋಡಬೇಕಿದೆ ತೆಪ್ಪುಗೆ


ವಿಧಾನ 'ಕೈ' ಲೋಕ 'ಕಮಲ'

ಕಾಯಿಗೆ ಇರಲ್ಲಿಲ್ಲ ಗೆಲ್ಲಲೇಬೇಕೆಂಬ ಛಲ
ಮತ ವಿಭಜನೆಯೊಂದೇ ಆಗಿತ್ತು ಅದರ ಗುರಿ ಅಚಲ
ನಿರೀಕ್ಷೆಯಂತೆ ಕಾಯಿ ಬಡಿದು ಛಿದ್ರಗೊಂಡಿತು ಕೆಸರಂಟಿದ್ದ ಕಮಲ
ತೆನೆ ಹೊತ್ತ ಮಹಿಳೆಗೆ ಇರಲೇ ಇಲ್ಲ ಜಂಘಾಬಲ, ಜನಬಲ
ಉಳಿದದ್ದೊಂದೇ, ಹಾಗಾಗಿ ಹಿಡಿದ ಮತದಾರ ಕೈ, ಅಂಟಿದ್ದರೂ ಮಲ
ಆದರೆ ಕೈ ಚಮಚಾಗಳoದರು, ಇದು ಪಕ್ಷದ ಶ್ರಮಕ್ಕೆ ಸಂದ ಫಲ
ಏನೇ ಅಂದರೂ ಇನ್ನೈದು ವರ್ಷ ಕೈಗೆ ಅಧಿಕಾರದ ಕಾಲ
ಎಲ್ಲಿತಂಕ ಹರಡತ್ತೋ ನೋಡುವ ಇವರ ಹಗರಣಗಳ ಜಾಲ

ಪಂಚ್ :- ಲೋಕಸಭಾ ಚುನಾವಣೆಯಲ್ಲಿ ನೀವು 'ಕೈ' ಬಿಡದ್'ಇರಿ'  ಕಮಲ

Wednesday, April 3, 2013

ಹೀಗೊಂದು ಕೆಟ್ಟ ಕನಸು


ಮನೆಯ ಮುಂದೆ ಎರಡು ಸಾಲು ಜಗುಲಿಗಳು. ಮೊದಲನೆಯದರಲ್ಲಿ ನಾನು ಮಲಗಿದ್ದೇನೆ. ಇನ್ನೊಂದರಲ್ಲಿ ಯಾರೋ ಮಲಗಿದ್ದಾರೆ. ಯಾರು ಅಂತ ನೆನಪಿಲ್ಲ. ನನ್ನ ಬಲಗೈ ಮಧ್ಯದ ಬೆರಳಿಗೆ ಹಾಗು ಬಲ ತೊಡೆಗೆ ಗುಂಡೇಟು ಬಿದ್ದಿದೆ. ಮಧ್ಯದ ಬೆರಳು ಊದಿಕೊಂಡಿರುವುದನ್ನು ನೋಡಿ, ಆ ಗುಂಡು ಅಲ್ಲೇ ಸಿಕ್ಕಿಹಾಕಿಕೊಂಡಿದೆಯೇನೋ  ಅನಿಸಿತು. ತೊಡೆಗೆ ಬಿದ್ದಿರುವ ಗುಂಡೇಟಿಗೆ ಯಾರೋ ಪುಣ್ಯಾತ್ಮರು ಬಟ್ಟೆ ಕಟ್ಟಿದ್ದಾರೆ, ಆದರೂ ರಕ್ತ ಹರಿಯುತ್ತಿದೆ. ನಾನು ಬೋರಲು ಬಿದ್ದಿದ್ದೇನೆ. ಅಲುಗಾಡಲು ಆಗುತ್ತಿಲ್ಲ. ಬೆಳಗ್ಗೆ ಆರರ ಸುಮಾರಿಗೆ ನಾಕಾರು ಜನ ನನ್ನ ಸುತ್ತ ಸೇರಿದ್ದಾರೆ. ಅವರು ಮಾತನಾಡುತ್ತಿರುವುದು ನನಗೆ ಕೇಳಿಸುತ್ತಿದೆ. ಏನಾದರಾಗಲಿ ಒಮ್ಮೆ ಡಾಕ್ಟರು ಬಂದು ಪರೀಕ್ಷಿಸಿ ಬಿಡಲಿ ಎನ್ನುತ್ತಿದ್ದಾರೆ. ಅವರೆಲ್ಲರೂ ನಾನು ಸತ್ತಿದ್ದೇನೆಂದೆ ತೀರ್ಮಾನಿಸಿ ಆಗಿದೆ. ನಾನು ನಿಶ್ಯಕ್ತನಾಗಿ ಕೈ ಕಾಲು ಅಲುಗಾಡಿಸಲಾಗದೆ ಬಿದ್ದಿದ್ದೇನೆ. ಅಷ್ಟರಲ್ಲಿ ಯಾರೋ ಡಾಕ್ಟರು ಬಂದರು ಅಂದರು. ಅವರು ಬಂದು ನನ್ನನ್ನು ಮುಟ್ಟಿ, ಇವ ಹೋಗಿ ಬಹಳ ಹೊತ್ತಾಗಿದೆ ಅಂದರು. ಇಲ್ಲವೋ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ನಾನು ಅರಚುವಂತೆ ಭಾಸವಾಯಿತು, ಆದರೆ ನಾನು ಏನೂ ಹೇಳಿರಲ್ಲಿಲ್ಲ.  ಅಷ್ಟೊತ್ತಿಗಾಗಲೇ ಆ ಜನರೆಲ್ಲಾ ಇನ್ನೊಂದು ಜಗುಲಿಯ ಮೇಲೆ ಮಲಗಿದ್ದವನ ಕಡೆ ಹೋಗಿದ್ದಾರೆ ಮತ್ತು ಡಾಕ್ಟರನ್ನು ಕರೆಯುತ್ತಿದ್ದಾರೆ ಅವನನ್ನೂ ಪರೀಕ್ಷಿಸಿ ಎಂದು. ಆ ಡಾಕ್ಟರ  ಬಂದೆ ಬಂದೆ ಎನ್ನುತ್ತಾ ಅತ್ತ ಕಡೆ ಸಾಗುತ್ತಲೇ ನಾನು ಮಲಗಿದ್ದ ಜಗುಲಿ ಮುಂದಕ್ಕೆ ವಾಲಿ (ಮಂಚವನ್ನು ಒಂದು ಕಡೆ ಹಿಡಿದು ಎತ್ತಿದ ಹಾಗೆ) ಕೆಳಗೆ ಬಿದ್ದು ಬಿಡುತ್ತೇನೆಂದು ಅಂದುಕೊಳ್ಳುತ್ತಿರುವಾಗಲೇ, ಆಶ್ಚರ್ಯವಾಗಿ ನಾನು ಕುಕ್ಕರಗಾಲಿನಲ್ಲಿ ನೆಲದ ಮೇಲೆ ಕೂತಿರುತ್ತೇನೆ ಮತ್ತು ಆಗಲೇ ವಾಕರಿಕೆ ಬಂದಂತಾಗಿ ಬಾಯಿಂದ ಗೀಜುಗದ ಬೀಜವೊಂದು ಆಚೆ ಬೀಳುತ್ತದೆ. ಇಷ್ಟಾದರೂ ನನ್ನ ಕಡೆ ಯಾರು ಸುಳಿಯುವುದಿಲ್ಲ. ಅತ್ತ ಕಡೆ ಆ ಡಾಕ್ಟರು ಅವನನ್ನು ಪರೀಕ್ಷಿಸಿ ಇವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎನ್ನುತ್ತಿದ್ದಾಗಲೇ, ಅವ ಮಲಗಿದ್ದವ ಸೀದಾ ಎದ್ದು ಅತ್ತ ಕಡೆ ಇದ್ದ ದೊಡ್ಡ ಚರಂಡಿ ಕಡೆ ಧಾವಿಸಿ ಉಚ್ಚೆ ಹೊಯ್ಯಲು ಕೂತ. ಅವ ಎದ್ದು ನಡೆದಾಡಿದ್ದು ನೋಡಿ ಡಾಕ್ಟರು ದಂಗಾಗಿ ಹೋದ. ಅರ್ಧ ಜನ ಹೆದರಿ ಓಡಿ ಹೋದರು.
ನಾನು ಮನೆಯ ಗೇಟಿನ ಸಮೀಪ ಬರುತ್ತಿದ್ದೆ. ಸುಮಾರು ಹತ್ತು ಅಡಿ ಉದ್ದದ ದೊಡ್ಡ ನಾಗರ ಹಾವೊಂದು ಎರಡು ಗೇಟಿನ ಸಂದಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅದರ ತಲೆ ಆಗಲೇ ಒಳಗೆ ತೂರಿತ್ತು. ನಾನು ಎರಡು ಗೇಟನ್ನು ಸಂದಿ ಬೀಳದಂತೆ ಒಂದಕ್ಕೊಂದು ಕೂಡುವಂತೆ ಬಲವಾಗಿ ಹಿಡಿದು ನಿಂತಿದ್ದೆ. ಆದರೂ ಆ ಹಾವು ಒಳಗೆ ನುಸುಳಿಬಿಟ್ಟಿತು. ಗೇಟನ್ನು ದಾಟಿ ಮನೆಯೊಳಗೇ ನುಗ್ಗಿದ ಹಾವನ್ನು ನೋಡಿ, ಮನೆಯ ಹಿಂಬದಿಯ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ನೆನಪಾಗಿ ನಾನು ಅತ್ತ ಕಡೆ ಓಡಿದೆ. ಹಿತ್ತಲ ಬಾಗಿಲು ಭದ್ರ ಮಾಡಿ, ಕಿಟಕಿಗಳನ್ನು ಮುಚ್ಚಿ, ಗೆಳೆಯನ ಜೊತೆ ಆಡುತ್ತಿದ್ದ ಪುಟ್ಟನಿಗೆ ನೀನು ಇಲ್ಲೇ ಆಟವಾಡುತ್ತಾ ಇರು, ಒಳಗೆ ಬರಬೇಡ, ನಾನೇ ಮತ್ತೆ ಬಂದು ಕರೆದೊಯ್ಯುತ್ತೇನೆ ಎಂದು ಹೇಳಿ ಸರ ಸರನೆ ಮನೆಯೊಳಗೇ ಬಂದೆ. ಅಷ್ಟರಲ್ಲಾಗಲೇ ಅಪ್ಪ ಒಂದು ದೊಡ್ಡ ಕೋಲನ್ನು ಹಿಡಿದು ಹಾವಿನ ಹಿಂದೆ ಹಿಂದೆ ಹೋಗುತ್ತಿದ್ದರು. ಹಾವು ರೂಮು ಸೇರಿತ್ತು. ಅಪ್ಪ ಹಾವನ್ನು ಆಚೆ ತೊಳ್ಳಲು ಯತ್ನಿಸುತ್ತಿದ್ದರೆ ವಿನಃ ಅದಕ್ಕೆ ಒಂದು ಏಟನ್ನೂ ಕೊಡುತ್ತಿರಲ್ಲಿಲ್ಲ. ನಾನು ಒಂದು ಕೋಲಿಗೆ ಚಾಕುವನ್ನು ಕಟ್ಟಿ ಆ ಹಾವನ್ನು ಕಚ ಕಚ ಎನಿಸಿಬಿಡಲೇ ಎಂದು ಯೋಚಿಸುತ್ತಿದ್ದೆ. ಯಾಕೋ ಹಾಗೆ ಮಾಡಲು ಮನಸ್ಸು ಬರಲ್ಲಿಲ್ಲ ಅಥವಾ ಹಾಗೆ ಮಾಡಲು ಅಪ್ಪನೂ ಬಿಡುತ್ತಿರಲ್ಲಿಲ್ಲವೇನೋ.
ಆಮೇಲೆ ಆ ಹಾವಿಗೆ ಏನಾಯಿತೋ ನೆನಪಿಲ್ಲ. ಸ್ವಲ್ಪ ಹೊತ್ತಿನ ನಂತರ ಕಾಲು ತೊಳೆಯಲು ಬಚ್ಚಲು ಮನೆಗೆ ಹೋದೆ. ನೀರು ತುಂಬಿಕೊಳ್ಳಲು ತೊಟ್ಟಿಗೆ ಬೋಸಿ ಹಾಕಿದೆ. ಬೋಸಿಗೆ ಸರಾಗವಾಗಿ ನೀರು ತುಂಬದೆ ಏನೋ ಅಡ್ಡ ಬಂದಂತೆ ಅನಿಸಿ ಬಗ್ಗಿ ನೋಡಿದೆ. ಅಲ್ಲಿ ನೋಡಿದರೆ ಮತ್ತೊಂದು ಹಾವು, ಪಂಚರ್ ಅಂಗಡಿಯ ಮುಂದೆ ಟೈರನ್ನು ಒಂದರ ಮೇಲೊಂದರಂತೆ ಜೋಡಿಸಿಟ್ಟಿರುವ ಹಾಗೆ ಸುರುಳಿ ಸುತ್ತಿಕೊಂಡು ಬಿದ್ದಿತ್ತು. ನಾನು ಕಿಟಾರನೆ ಕಿರುಚಿ ಅಣ್ಣನ್ನನ್ನು ಕರೆದೆ. ಅಣ್ಣ ಬಂದು ತೊಟ್ಟಿಯೊಳಗೆ ಇಣುಕಿ, ಕೈ ಹಾಕಿ ಒಂದರ ಮೇಲೊಂದು ಬಿದ್ದಿದ್ದ ನಾಕು ಟೈರಿನ ಟ್ಯೂಬನ್ನು ಆಚೆ ತೆಗೆದು, ಲೋ ಪುಟ್ಟ ಇದನ್ನು ಮತ್ತೆ ಇಲ್ಲಿ ಕಂಡ್ರೆ ನಿನ್ನ ಕೈಗೆ ಸಿಗದ ಹಾಗೆ ಅಟ್ಟಕ್ಕೆ ಎಸೆಯುತ್ತೇನೆ ಎಂದು ಹೊರನಡೆದ. ನಾನು ಕಾಲು ತೊಳೆದು ಹೊರಬಂದೆ.
ಹಾವಿನ ಕನಸು ಮುಂದುವರೆದಿತ್ತು. ಆದರೆ ಯಾವುದೂ ನೆನಪಿಲ್ಲ. 

ಬೆಳಗ್ಗೆ ಎದ್ದು ಅಮ್ಮನಿಗೆ ಕನಸಿನ ವಿಚಾರ ಫೋನ್ ಮಾಡಿ ವಿವರವಾಗಿ ಹೇಳಿದೆ. ಎಲ್ಲವನ್ನು ಕೇಳಿಸಿಕೊಂಡ ಅಮ್ಮ, ನೆನ್ನೆ ಫಾಲ್ಗುಣ ಷಷ್ಠಿ, ಪುಷ್ಯದ ಶಿರಿಯಾಳ ಷಷ್ಠಿ ದಿನ ಮನೆಗೆ ಬಾರೋ  ಹಬ್ಬ ಮಾಡುತ್ತಿದ್ದೇವೆ ಎಂದರೆ ಬರಲ್ಲಿಲ್ಲ. ಅಂದು ನಾಗರನಿಗೆ ತೆನೆ ಹಾಕಿ ಮನೆಯಲ್ಲಿ ಬ್ರಹ್ಮಚಾರಿಗಳಿಗೆ ದಕ್ಷಿಣೆ ಕೊಟ್ಟು ಊಟ ಮಾಡಿಸಿದ್ದೆವು. ಮಾಘದ ಷಷ್ಠಿಯಾದರೂ ಬಂದು ತೆನೆ ಹಾಕು ಎಂದರೂ ನೀನು ಬರಲ್ಲಿಲ್ಲ, ಉಳಿದ್ದದ್ದು ಫಾಲ್ಗುಣ ಷಷ್ಠಿ, ನನಗೂ ಹೇಳಲು ಮರೆತು ಹೋಯಿತು. ಈಗಲಾದರೂ ಹೊರಟು ಬಾ. ಬಂದು ನಾಗರನಿಗೆ ತೆನೆ ಹಾಕು. ನಾವು ಮರೆತರೂ ದೇವರು ಬಿಡೋದಿಲ್ಲ. ಏನು ಬರುತ್ತೀಯೋ ಇಲ್ಲವೋ ? ಎಂದರು. ಈಗಲೇ ಹೊರಟೆನಮ್ಮ ಎಂದು ಹೇಳಿ ಸ್ನಾನ ಮಾಡದೆ ಮುಖ ತೊಳೆದು ಕಾಫಿಯನ್ನೂ ಕುಡಿಯದೆ ಮನೆಯಲ್ಲಿ ಹೇಳಿ ಊರಿನ ಕಡೆ ಓಡಿದೆ.
                                           ***************************************