Pages

Monday, July 29, 2013

(B)ಬದಲಾವಣೆ ತರಲು (J)ಜನರಿಗೊಂದು ಕುಟುಕಿನ (P)ಪದಮಾಲೆ


ನಿದ್ದೆ ಇಲ್ಲದೆ ದೇಶದ ಬಗ್ಗೆ ಚಿಂತಿಸುವ ನನ್ನಂತ(?) ಕೋಟ್ಯಾಂತರ ಜನರ (B)ಬೆಳಗಿನ (J)ಜಾವದ ಕುಟುಕಿನ (P)ಪದಮಾಲೆಯಿದು. ಆ ಕೋಟಿಯಲ್ಲಿ ನೀವು ಒಬ್ಬರಾ? 

- ಆಗಿದ್ದರೆ ಇದನ್ನು ನಿಮ್ಮ ಫೇಸ್ ಬುಕ್ ಗೋಡೆ ಮೇಲೆ ಹಚ್ಚಿಕೊಳ್ಳಿ / ಹಂಚಿಕೊಳ್ಳಿ, ಯಾಕೆಂದರೆ ಓದಿದ ಮೇಲೆ ನಿಮಗೆಷ್ಟು ಖುಷಿ ಆಗುವುದೆಂಬ ಅರಿವು ನನಗಿದೆ, ಆ ಖುಷಿ ನಿಮ್ಮಂತ ಇನ್ನು ನೂರಾರು, ಸಾವಿರಾರು ಜನರಿಗೂ ಸಿಗಲಿ. 

- ಆಗಿರದ್ದಿದ್ದಲ್ಲಿ ಇನ್ನು ಮುಂದಾದರೂ ಈ ಬಗ್ಗೆ ಎಚ್ಚರವಹಿಸಿ, ಯಾಕೆಂದರೆ ದೇಶದ ಭವಿಷ್ಯವೇ ನಮ್ಮ ಭವಿಷ್ಯ.                                                 **********

ಕಾಂಗ್ರೆ(S), (S)ಪಿ, ಬಿ(S)ಪಿ, ತೃಣಮೂಲ ಕಾಂಗ್ರೆ(S), ಜೆಡಿ(S) - ಇವರೆಲ್ಲಾ (Se)ಕ್ಯುಲಾರ್ ಗಳು, ಜಾತ್ಯಾತೀತರು. 
ಹೌದುರೀ.. ರಾಜಕಾರಣದಲ್ಲಿ ಇವರುಗಳೇ 'ಜಾತಿ'ಯನ್ನು 'ಅತಿ'ಯಾಗಿ 'ತರು'ವವರು.

ಅದಕ್ಕೆ ನಿಮಗೆಲ್ಲ ನನ್ನದೊಂದು ಕಿವಿಮಾತು:

(B)ಬಿಟ್ಟುಬಿಡಿ (J)ಜಾತಿ (P)ಪದ
ಆಗತ್ತೆ ಆಗ ನಿಜ
(B)ಭಾರತದ (J)ಜನನ (P)ಪುನಃ
ಮತ್ತು ಆಗತ್ತೆ
(B)ಬದಲಾವಣೆ (J)ಜೊತೆಗೆ (P)ಪುನರ್ನಿರ್ಮಾಣ
ನಮಗ್ಯಾಕ್ರಿ ಬೇಕು ಈ
(B)ಬೀದಿ (J)ಜಗಳದ (P)ಪಾಡು
ಎಂದು ನೀವು 'ಕೈ'ಕೊಟ್ಟರೆ
'ಕಾಂ'ಜಿಪೀಂಜಿ, ಅಯೋಗ್ಯರಿಗೆ ಅ'ಗ್ರೇಸ'ರರು, ('S'o)ಗಲಾಡಿ ('P'o)ರ್ಕಿ ಜನರು, ('B'i)ಕನಾಸಿ, ('S'o)ಮಾರಿ  ('P'i)ಳ್ಳೆಗಳು, ತಮ್ಮ 'ಎಡ'ಗೈಯಲ್ಲಿ (ಅಂಡು ತೊಳೆಯುವ ಕೈ ಎಂದು ಹೇಳಿದರೆ ನಮ್ಮ ಜನಕ್ಕೆ ಹೆಚ್ಹು ಅರ್ಥವಾದೀತು) ನಮ್ಮನ್ನು (ದೇಶದ ಜನರನ್ನು) ಬೀದಿಯಲ್ಲಿ ಬುಗುರಿ ಆಡಿಸಿದ ಹಾಗೆ ತಿರುಗಿಸುವುದು ಶತಃಸಿದ್ದ, ಭಾರತಮಾತೆಯ ಮೇಲಾಣೆ.

ಅರ್ಥವಾಗದವರು ಒಂದು ಬಾರಿ 'ನಮೋ' ನಮಃ ಅನ್ನಿ
ಮತ್ತು ಕಾದು ನೋಡಿ
ನರರಿಗೆ ಇಂದ್ರ, ದಾಮೋದರನಿಗೆ ದಾಸ ಮಾಡುವ ಮೋಡಿ

ಇನ್ನು ಅರ್ಥವಾಗದವರು ನಿಮ್ಮ 'ಕೈ' 'ಕಟ್' ಮಾಡ್ಕೊಂಡು ಬಾಯ್ಮೆಲ್ ಬೆರ್ಳ್ ಇಟ್ಕೊಂಡು, ಮತದಾನದ ದಿನ ಮನೆಲೇ ಮೂಲೆಲಿ ಕೂತಿರಿ, ನಿಮ್ ವೋಟಿಂದ ಯಾವನೂ 'ಉದ್ದಾ'ರ ಆಗೋದು ಬೇಡ.
                                                *******************

Tuesday, July 9, 2013

ಜೋಚುಟುಕುಗಳು - ೧

ಜೋಕಿನ ಚುಟುಕು - ಜೋಚುಟುಕು :) 
*************************

ನಾನೊಬ್ಬ ಆಶು ಕವಿ
ಬಡ್ಕೊಬೇಕು
ಅವ್ಳಿಗೆ ಕೇಳೋಲ್ಲ ಕಿವಿ

**********************

Ac ಬಾಯ್ ಗೆ Bc ಮುಟ್ಟಿಸಬೇಕಾದ್ರೆ  Cc ಲಿ ಮ್ಯಾನೇಜರ್ ಗೆ ಕಾಪಿ ಮಾಡಿ, ಆಗ ಅವ್ನು Dc ಶಾಕ್ ಹೊಡೆದವನ ತರ Ec ಸರ್ ಅಂತ ಬಂದು Ac ಸರಿ ಮಾಡಿ ಹೋಗ್ತಾನೆ.

**********************

ಚಾಟ್ ಲಿ ಹುಡುಗಿಗೆ ಹಾಕುತ್ತಿದ್ದೆ ಕಾಳು
ನಾನಿಲ್ಲದಾಗ
ಗೆಳೆಯ ಬಂದು ಮಾಡಿದ ಹಾಳು

**********************

ಗೊಂಬೆಗಳ ಲವ್ವು
ಸಿಂಪಲ್ಲಾಗ್ ಒಂದ್ ಲವ್ವು
ಕೃಷ್ಣನ ಲವ್ವು
ಬಂದರೂ ಸರಿ ಸಾಟಿಯಾಗಲ್ಲಿಲ್ಲ
ಜಗ್ಗೇಶನ ಡವ್ವು (ಗೆ)

**********************

ತಿನ್ಬೇಡ ಕಮ್ಮಿ ನೆಲಗಡಳೆಯ
ಜಾಸ್ತಿ ತಿನ್ನು ಗೋಡಂಬಿ ದ್ರಾಕ್ಷಿಯ
ನೋಡ್ದೆ ಇರ್ಬೇಡ ಫಿಲ್ಮ್ ಲೂಸಿಯ

***********************

ಗೋರಿ ಮೇಲೊಂದು ಗೋರಿ
ಮಾಡಲು ನಡೆಸಿದರು ತಯಾರಿ
ಶುರುವಾಯಿತು ಕಾಮಗಾರಿ
ಒಳಗಿಂದ ಎದ್ದ ಒಬ್ಬ ಅಘೋರಿ
ಕ್ಷಣದಲ್ಲಿ ಎಲ್ರೂ ಪರಾರಿ

************************

ನಾನಂದೆ, ಏ ಹುಡುಗಿ ಕಣ್ಣೀರು ಹಾಕಬೇಡ
ಕೇಳಲ್ಲಿಲ್ಲ ಅವಳು ಸುರಿಸಿದಳು ಬಡ(ಳ) ಬಡ(ಳ)
ತಮಿಳುನಾಡಿನವಳು ತಂದಳು ಖಾಲಿ ಕೊಡ

*************************


ಮೊಬೈಲಿಗೆ ಸಿಗಲ್ಲಿಲ್ಲ ಟವರ್
ಹುಡುಗಿಗೆ ಸಿಗಲಿಲ್ಲ ಲವರ್
ಹುಡುಗ ಈಗ ಬೆಟರ್

*************************

ಕನ್ನಡ ಫಿಲ್ಮ್ ಬರ್ತಿದೆ ಹೆಸ್ರು ಗಾಲಿ
ಅದಕ್ಕಿದೆ
ಅಶ್ಲೀಲ ಸಂಭಾಷಣೆಯ ಖಯಾಲಿ
ಯಾಕೆ ಹೀಗೆ ಅಂದರೆ
ಹೇಳುತ್ತಾರೆ ಈಗ ಇದು ಮಾಮೂಲಿ

************************

ಐವತ್ತಾದ ಮೇಲೂ ಶಿವಣ್ಣ ಆಗಿದ್ದ ರೆಡಿ
ಮಾಡಲು ಕಡ್ಡಿಪುಡಿ
ರಂಗಾಯಣ ರಘು ಮಾಡಿದ ಮೋಡಿ
ಸೂರಿ ಕೈ ಸುಟ್ಕೋಳ್ಳಿಲ್ಲ ಈ ಫಿಲ್ಮ್ ಮಾಡಿ

**************************

ನಿತೀಶ್ ಮಾಡಿದ ಆಲಕ್ಷ್ಯ
ಬಾಂಬ್ ಯಿಂದ ನಡುಗಿತು ಬುದ್ದ ಗಯ
ಕೇಕೆ ಹಾಕಿದ ದಿಗ್ವಿಜಯ
ಕಾಂಗ್ರೆಸ್ಸಿಗೆ ಕಾದಿದೆ ಅಪಜಯ

**************************

Sunday, July 7, 2013

ಶನಿವಾರದ ಸಂಜೆ

ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕಡೆ ನಮ್ಮ ಸವಾರಿ ಸಾಗಿತ್ತು. ಶಂಕರ ಮಠದ ಹತ್ತಿರ ಯಾರನ್ನೊ ನೋಡಬೇಕಿದ್ದರಿಂದ ಮೊದಲು ಅಲ್ಲಿಗೆ ಹೋಗಿ ಆ ಕೆಲಸ ಮುಗಿಸಿ ಜೀಬಿ ಕಡೆ ಬರುತ್ತಿದ್ದೆ. ಸಿಗ್ನಲ್ ನಲ್ಲಿ ಕೆಂಪು ಬಣ್ಣದಲ್ಲಿ ಕಡಿಮೆಯಾಗುತ್ತಿರುವ ಎಣಿಕೆಯ ಸಂಖ್ಯೆಯನ್ನು ನೋಡುತ್ತಾ ಎಂದೋ ಓದಿದ್ದ ಮೈಕ್ರೊಕಂಟ್ರೊಲರ್ನ ಕೌಂಟರ್ ಪ್ರೊಗ್ರಾಮ್ ನೆನಪಿಸಿಕೊಳ್ಳುತ್ತಿದ್ದೆ. ಹಿಂದಿನಿಂದ ಭುಜಕ್ಕೆ ಗುದ್ದಿದ ಇವಳು ಆಕಾಶಕ್ಕೆ ಮುಖಮಾಡಿ ರೀ ಮಳೆ ಬರೊ ಹಾಗಿದೆ, ನಡೀರಿ ಮನೆಗ್ ಹೋಗಣ ಅಂದ್ಲು. ಜೀಮ್ಮೆ (GM) ಜೊತೆಗಿರುವಾಗ ಮಳೆ ಯಾವ ಲೆಕ್ಕ ಸುಮ್ಕೆ ಕೂರಮ್ಮಿ ಅಂದು ಹಸಿರು ದೀಪ ನೋಡಿ ಸೆಲ್ಪ್ ಸ್ಟಾರ್ಟ್ ಬಟನ್ ಅದುಮಿದೆ.
 
ಜೀ ಎಮ್ ಅಂದರೆ ಏನೆಂದು ಯೋಚಿಸುತ್ತಿದ್ದಿರಾ? (G)ಗುಡ್ (M)ಮಾರ್ನಿಂಗ್ ಅಂತು ಖಂಡಿತ ಅಲ್ಲ. ಜೀ ಎಮ್ ಅನ್ನುವುದು ಇವಳಿಗೆ ನಾನಿಟ್ಟಿರುವ ಹೆಸರು. ಜೀ ಎಮ್ ಗೆ ಬಹಳಷ್ಟು ಅಬ್ರಿವೇಷನ್ ಗಳಿದೆ, ಅದರಲ್ಲಿ ಕೆಲವೊಂದಿಷ್ಟು ಇಲ್ಲಿದೆ.
೧. (G)ಜೆನರಲ್ (M)ಮ್ಯಾನೆಜರ್ - ಇವಳೆ ನಮ್ಮನೆಗೆ
೨. (G)ಗುಂಡೂರಾಯರ (M)ಮಗಳು
೩. (G)ಗುಣವಂತೆ (M)ಮಡಿವಂತೆ
೪. (G)ಗೋಲ್ಡ್ (M)ಮನಿ - ನನ್ನ ಚಿನ್ನ ಬಂಗಾರ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲಾ ಇವಳೆ
೫. (G)ಗಾಳಹಾಕಿ (M)ಮನೆಗ್ ಕರೆತಂದವಳು - ಇದು (ಅಪ)ಅರ್ಥ ಆಗಿದ್ರೆ ಮುಂದಿನ ವಾಕ್ಯ ಓದಬೇಡಿ. ಅರ್ಥ ಆಗದವರಿಗೆ - ಹಾಗಂದ್ರೆ ತಾಳಿಕಟ್ಟಿ ಮನೆ ತುಂಬಿಸಿಕೊಂಡವಳು :P 
ಇನ್ನು ಏನೆನೋ ಇದೆ, ಅದೆಲ್ಲ ಇಲ್ಲಿ ಬೇಡ. ಜೀ ಎಮ್ ಅಂತಂದುಬಿಟ್ಟರೆ ಇವಳು ಉಬ್ಬಿ ಹೋಗುತ್ತಾಳೆ, ಆಗಲೇ ಅಲ್ಲವಾ ನನ್ನ ಕೆಲಸಗಳು ಕ್ಷಣ ಮಾತ್ರದಲ್ಲಿ ಆಗುವುದು. ನಿಮಗೊಂದು ಗೊತ್ತಾ? ನಿಜ ಹೇಳ್ತಿದೀನಿ ಅಸಲಿಗೆ ಜೀ ಎಮ್ ಎಂದರೆ ಇದ್ಯಾವುದೂ ಅಲ್ಲ !!

ಹಾಗಿದ್ರೆ ಜೀ ಎಮ್ ಅಂದ್ರೆ ಏನಿರಬಹುದೆಂದು ಜಾಸ್ತಿ ಊಹಿಸಬೇಡಿ, ನಾನೇ ಹೇಳುತ್ತೇನೆ. ಜೀ ಎಮ್ ಅಂದರೆ (G)ಗುಡುಗು (M)ಮಿಂಚು ! ಯಾಕೆಂದರೆ ಇವಳು ಮನೆಯಲ್ಲಿ ಮತ್ತು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದಲ್ಲಿ ಒಂದೋ ಗುಡುಗುತ್ತಿರುತ್ತಾಳೆ (ಚರ್ಚೆ, ವಾದ-ವಿವಾದ, ಪರ-ವಿರೋಧ, ಮಾತುಕಥೆ, ಹರಿಕಥೆ, ಪುರಾಣ) ಇಲ್ಲ ಮಿಂಚುತ್ತಿರುತ್ತಾಳೆ (ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎಲ್ಲರೂ ನನ್ನ ಬಳಿ ಬಂದು ಎನ್ರಿ ನಿಮ್ಮೊರು ಮಿಂಚಿಂಗೋ ಮಿಂಚಿಂಗು ಅಂತ ಹೇಳೋರೆ). ಈ ಅಬ್ರಿವೇಷನ್ ನಿಮ್ಮಲ್ಲೆ ಇಟ್ಕೊಳಿ, ಇವಳು ಸಿಕ್ಕಾಗ ಅಪ್ಪಿ ತಪ್ಪಿ ಬಾಯ್ ಬಿಟ್ಬಿಟೀರ, ಗೊತ್ತಾದ್ರೆ ಇವಳು ನನ್ನ (G)ಗುಡಿಸಲು (M)ಮನೆ ಸೇರಿಸೋದು ಗ್ಯಾರಂಟೀ. 

ವಿಷಯಾಂತರಕ್ಕೆ ಕ್ಷಮೆ ಇರಲಿ, ಸಿಗ್ನಲ್ ಲೈಟ್ ಗ್ರೀನ್ ಆದಂಗೆ ನಾನು ಸೀದಾ ಹೋದೆ. ಹಾಗೆ ಮಾಡದೆ ಬಲಕ್ಕೆ ತಿರುಗಿದ್ದರೆ ಮಳೆ ಬರುತ್ತಿರಲ್ಲಿಲ್ಲವೇನೋ? ಸಿಗ್ನಲ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಮಳೆ ಶುರುವಾಯಿತು. ಹತ್ತು ಸೆಕೆಂಡ್ ಗಳಲ್ಲೆ ಮಳೆ ಜೋರಾಗಿ ಗಾಡಿ ನಿಲ್ಲಿಸಿದೆ. ನಮಗೆ ಆಸರೆ ನೀಡಿದ್ದು ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ, ಇವಳೊ ಉರಿದು ಬೀಳುತ್ತಿದ್ದಳು. ಕಾರಣ ಸರ್ಕಾರದ್ದು ಅಂದರೆ ಇವಳಿಗೆ ಆಗಲ್ಲ, ಎರಡನೆಯದು ಹೆಣ್ಮಕ್ಕಳ ಶಾಲೆ, ನಾನು ಅತ್ತ ಕಡೆ ಸುಳಿಯಲೂ ಕೂಡದು ಎಂಬುದು ಇವಳ ಆಜ್ಞೆ. ನಾನು ಸುತ್ತೊದು ಬರೀ ಡಿಗ್ರೀ ಕಾಲೇಜಿನ ಮುಂದಷ್ಟೇ ಅಂತ ಹೇಳಿ ಆ ಕಡೆ ತಿರುಗಿದರೆ ಇವಳು ಮೂಲೆಲಿದ್ದ ಬೆಂಚಿನ ಮೇಲೇ ಆಸೀನಳಾಗಿದ್ದಳು. ಸದ್ಯ ನಾನು ಹೇಳಿದ್ದು ಕೇಳಿಸಿಲ್ಲ ಅಂತ ಮನಸಲ್ಲೆ ಮಂಡಿಗೆ ತಿನ್ನುತ್ತಾ ಅತ್ತ ನಡೆದರೆ ಇವಳ ವರಸೆ ಬದಲಾಗಿಬಿಟ್ಟಿತ್ತು. ರೀ ಐಸ್ ಕ್ರೀಮ್ ತಂದ್ಕೊಡ್ರಿ ಅಂದ್ಲು. ಅರೆಘಳಿಗೆ ದಪ್ಪ ಮಳೆಹನಿ ದಿಟ್ಟಿಸಿ ನೋಡುತ್ತಿದ್ದ ನನಗೆ, ರೀ ಹೋಗ್ರಿ ಏನಾಗಲ್ಲ ಅಂತ ದಬಾಯಿಸಿದಳು. ಅಂತೂ ಮಳೇಲಿ ನೆಂದು ಇವಳ ಐಸ್ ಕ್ರೀಮ್ ಆಸೆ ಪೂರೈಸಿದೆ. ಅರ್ಧ ಗಂಟೆ ಕಳೆದ ಮೇಲೆ ಮಳೆ ನಿಂತಿತು. ಶುರುವಾಯಿತು ನೋಡಿ ಇವಳ ಶಾಪಿಂಗು. ಕಾಲ್ ವರುಸ್ಕೊಳೊ ಕಾರ್ಪೆಟ್ ಯಿಂದ ಹಿಡಿದು ಇವಳು ತಲೆಗ್ ಹಾಕೊಳೊ ಕ್ಲಿಪ್ ತನಕ ಎಲ್ಲಾ ಕೊಂಡಳು. ನಾನು ರೈಲ್ವೇ ಸ್ಟೇಷನ್ನಿನ ಕೂಲಿ ತರ ಮೂರು ಕವರ್ ಚೀಲ ಹಿಡಿದು ಇವಳ ಹಿಂದೆ ಹಿಂದೆ ಹೋಗುತ್ತಿದ್ದೆ. ಅಂತೂ ಎಲ್ಲಾ ಮುಗಿದು (ನನ್ನ ಪರ್ಸಲ್ಲಿದ್ದ ದುಡ್ಡು ಸೇರಿ) ಮನೆ ಸೇರಿದಾಗ ರಾತ್ರಿ ಒಂಬತ್ತಾಗಿತ್ತು. ಊಟ ಮಾಡಿ ಮಲಗಿದೆವು. 

ರಾತ್ರಿ ನಿದ್ದೆ ಹತ್ತಿದ್ದು ಗೊತ್ತಿಲ್ಲ ಆದರೆ ಬೆಳಗ್ಗೆ ಏಳಲು ಸಾಧ್ಯವಾಗುತ್ತಿಲ್ಲ ನನಗೆ, ಮೂಗು ಕಟ್ಟಿ ಉಸಿರಾಡಲು ಕಷ್ಟವಾಗುತ್ತಿದೆ. ತಲೆ ಸಿಡಿಯುತ್ತಿದೆ, ಜ್ವರ ಸುಡುತ್ತಿದೆ. ಇವಳು ತಲೆಗೊಂದು ಒದ್ದೆ ಬಟ್ಟೆ ಸುತ್ತಿ, ನಮ್ಮನೆ ಪಕ್ಕದಲ್ಲೇ ಇದ್ದ ಪ್ರಾಕ್ಟೀಸ್ ಡಾಕ್ಟರ್ ಪರಿಣಿತಳನ್ನ ಕರೆಸಿದಳು. ಪರಿಣಿತ ಬರೋಷ್ಟರಲ್ಲಿ ಇವಳು ಅಮ್ಮಗೆ ಕರೆ ಮಾಡಿ ನೋಡಿ ಅತ್ತೆ ಐಸ್ ಕ್ರೀಂ ತಿಂದಿದ್ದು ನಾನು ಆದ್ರೆ ಇವರು ಮಲ್ಕೊಬಿಟ್ಟಿದ್ದಾರೆ ಅಂತಿದ್ದಳು. ನಾನು ಹು ಐಸ್ ಕ್ರೀಂ ತಿಂದಿದ್ದು ಅವ್ಳು ಮಳೆಲಿ ನೆಂದಿದ್ದು ನಾನು ಅಂತ ಹೇಳಕ್ಕೆ ಫೋನ್ ಇಸ್ಕೊಲೋಷ್ಟರಲ್ಲಿ ಡಾಕ್ಟರು ಬಂದು ನನ್ನ ನೋಡಿ ಇಂಜೆಕ್ಷನ್ ಕೊಡಬೇಕಾದರೆ ನಾನು ಆ ಆ ಆ ನೋವು ಎಂದು ಚೀರುತ್ತಾ ಎದ್ದು ಕೂತೆ.

ನಾನು ಕೂಗಿದ ಸದ್ದಿಗೆ ಅಕ್ಕ ಏನಾಯ್ತೊ ಅಂತ ಬಂದಳು. ಏನಿಲ್ಲಕ್ಕ ಭಯಾನಕ ಕನಸು ಅಂದೆ, ಗುರುಗಳ್ ಆರಾಧನೆ ಅಂತ ರಾಯರ ಮಠದಲ್ಲಿ ಸರಿಯಾಗಿ ಬಾರಿಸಿ ಬಂದು ಮಲಗಿದರೆ ಮಧ್ಯಾನ್ಹನೂ ಕನಸು ಬೀಳತ್ತೆ ಬೆಳಗ್ಗೆನೂ ಬೀಳತ್ತೆ ಎದ್ದು ಮುಖ ತೊಳ್ಕೊ ಕಾಫಿ ಕೊಡ್ತೀನಿ ಅಂತ ಬೈದು ಅಡುಗೆ ಮನೆಗೆ ಹೋದಳು.

ನಾನು ಮುಖ ತೊಳೆದು ಕಾಫಿ ಕುಡಿದು ಕನಸು ನಿಜವಾದರೆಂಬ ಭಯದಿಂದ ಗಾಡಿ ತೆಗೆಯದೆ 3E ಬಸ್ ಹತ್ತಿ ನಾರ್ತ್ ರೋಡಲ್ಲಿ ಇಳಿದೆ. ಸ್ವಲ್ಪ ಹಿಂದೆ ಬಂದು ಸಿಗ್ನಲ್ ದಾಟಿ ಜೀಬಿ ಕಡೆ ಹೆಜ್ಜೆ ಹಾಕಿದೆ ಮಳೆ ಶುರುವಾಯಿತು. ಮಳೆ ಜೋರಾಗುತ್ತಲೆ ನಾನು ಆಸರಿಸಿದ್ದು ಅದೇ ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ. ಸುಮಾರು ಹೊತ್ತು ಟೆಂಪಲ್ ರನ್ ಆಡಿದೆ, ಅದು ಬೇಜಾರಾಗಿ ಕನಸನ್ನು ನೆನೆದು ಬೆಚ್ಚಿಬೀಳುವಾಗಲೇ ಮಳೆ ನಿಂತಿತ್ತು. ನನ್ನ ಗೃತ್ಸಮದನಿಗೆ ಹೊಸ ಇಯರ್ ಫೋನ್ ಕೊಳ್ಳಲು ಇಡೀ ಜೀಬಿ ಸುತ್ತಿದರೂ ಎಲ್ಲೂ ಒರಿಜಿನಲ್ ಸಿಗಲ್ಲಿಲ್ಲ, ನೀವು ಸರ್ವೀಸ್ ಸೆಂಟರ್ ಗೆ ಹೋಗಿ ಅಲ್ಲಿ ಸಿಗಬಹುದೆಂದು ೩-೪ ಅಂಗಡಿಯಲ್ಲಿ ಹೇಳಿದರು, ಗಾಡಿಯಿರಲ್ಲಿಲ್ಲ ಸಜ್ಜನ್ ರಾವ್ ಸರ್ಕಲ್ ತನಕ ನಡೆಯಲು ಮನಸಾಗಲ್ಲಿಲ್ಲ. A2B (ಆಡ್ಯಾರ್ ಆನಂದ ಭವನ) ತನಕ ಬಂದು ನನ್ನಿಷ್ಟವಾದ ಬೇಳೆ ಹೋಳಿಗೆಗೆ ತುಪ್ಪ ಹಾಕಿಸಿಕೊಂದು ಬಾದಾಮಿ ಹಾಲು ಸೇರಿಸಿ, ಕೆನರಾ ಬ್ಯಾಂಕ್ ಕಟ್ಟೆ ಮೇಲೆ ಕುಳಿತು ಬಿಸಿ ಬಿಸಿ ಹೋಳಿಗೆ ಸೇವಿಸಿದೆ. ತಿನ್ನುವಾಗ ಹಿಂದೆ ನಾವೆಲ್ಲಾ ಗೆಳೆಯರು ಅಲ್ಲಿ ದಿನಾ ಸೇರಿ ಗುಲ್ಲೆಬ್ಬಿಸುತ್ತಿದ್ದುದು ನೆನಪಾಗಿ ಕೊಂಚ ಬೇಜಾರಾದರೂ, ಕೆಲ ನಿಮಿಷದಲ್ಲೆ ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಖುಷಿಯಾಗಿದ್ದಾರೆ ಅನಿಸಿ ಮನಸಿಗೆ ಸಮಾಧಾನವಾಯಿತು. ಶನಿವಾರವಾದ್ದರಿಂದ ಕಾರಂಜಿ ದೇವಸ್ಥಾನಕ್ಕೆ ತೆರಳಿ ಹನುಮಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ದೇವರಿಗೆ ಅರ್ಚಿನೆ ಮಾಡಿಸಿ "ಓ ದೇವರೇ ಜೀವನ ಇದೇ ತರ ಇರ್ಲಿ" ಅಂತ ಬೇಡಿಕೊಳ್ಳುತ್ತಿರುವಾಗಲೇ ನಾನು ಹಿಂದೆ ಬರೆದಿದ್ದ "ಜೀವನ" ಚುಟುಕು ನೆನಪಾಗಿಬಿಟ್ಟಿತು. 


ಶ್ರೀ ರಾಮನು ನನ್ನ ಬೇಡಿಕೆಗೆ ಅಸ್ತು ಅಂದಂತಾಗಿ ನಾನು ಆ ತರ ಬೇಡ ದೇವ್ರೆ ಅಂತ ಮತ್ತೊಮ್ಮೆ ಕರೆಕ್ಟ್ ವರ್ಶನ್ ಅಪ್ಲಿಕೇಶನ್ ನ ದೇವರಿಗೆ ಸಲ್ಲಿಸಿ ಮನೆ ಕಡೆ ಹೋಗಲು ಬಸ್ ಹಿಡಿಯಲು ಗಣೇಶ ಭವನ ಬಸ್ ಸ್ಟಾಪ್ ಗೆ ಬಂದು ನಿಂತೆ. ಪರಿಚಯವಿದ್ದ ಮೆಡಿಕಲ್ ಶಾಪಿನವನಿಗೆ ಹಲೊ ಅನ್ನೊಷ್ಟರಲ್ಲಿ 43E ನಂಬರ್ ಬಸ್ ಬಂದಾಗ, ಹತ್ತಿದೆ. ಕನಸಲ್ಲಿ ಅಷ್ಟೋಂದು ಶಾಪಿಂಗ್ ಮಾಡಿದ್ದು ಜ್ಞಾಪಕ ಬಂದು, ಬಾಟ ಶೋ ರೂಂ ಬಳಿ ಇಳಿದು, ಒಂದು ಜೊತೆ ಚಪ್ಪಲಿ ಖರೀದಿಸಿ ಮನೆ ಕಡೆ ಹೆಜ್ಜೆ ಹಾಕಿದೆ. ಬಾಗಿಲಲ್ಲಿರುವಾಗಲೆ ಅಕ್ಕ ನನ್ನ ಡೀಟೈಲ್ಸ್ ಫೋನಲ್ಲಿ ಹೇಳುತ್ತಿದ್ದಿದು ಕೇಳಿಸಿತು. 
                                  **************************************

Thursday, July 4, 2013

ಫೇರ್ ವೆಲು


ಕೊಲೀಗ್ ನ ಫೇರ್ ವೆಲು
ಇಸ್ಕಾನು ಶ್ರೀಕೃಷ್ಣ ಟೆಂಪಲು
ಹೈಯರ್ ಟೇಸ್ಟ್ ಹೋಟೆಲು
ಅಲ್ಲೇ ಮಧ್ಯಾನ್ಹದ ಮೀಲು
ಆಮೇಲೆ ಒರಾಯನ್ ಮಾಲು
ಮಾಡಲು ಹೋದೆವು ಬೌಲು
ಅಲ್ಲಿತ್ತು ಬರೀ ತೂತಿದ್ದ ಬಾಲು
ಕೆಲವರು ಕುಡಿದರು ಆಲ್ಕೊಹಾಲು
ಮಳೆಯಲಿ ಮನೆ ಸೇರುವುದೇ ಆಗಿತ್ತು ಎಲ್ಲರ ಗೋಲು
ಮತ್ತೆ ಮನೆಯಲಿ ಅದೇ ಮಾಮೂಲು
ಆಗಿತ್ತು ನಿದ್ದೆ ತಾನಾಗೆ ಚಾಲು
                                       ********************


Monday, July 1, 2013

'ಗುಟ್ 'ಕಾ ಕಥೆ


೩೧ / ೦೫ / ೨೦೧೩

ಬಾಗ್ಮನೆ ತಂತ್ರಜ್ಞಾನ ಉದ್ಯಾನದ ಕಟ್ಟ ಕಡೆಯ ಕಟ್ಟಡದ ಎರಡನೇ ಮಹಡಿಯಲ್ಲಿ, ದ್ವಾರದಿಂದ ಸೀದಾ ಹೋದರೆ ಮೂರನೇ ಚೌಕದ  ಮೂಲೆಯಲ್ಲಿ ಕೂತಿದ್ದ ರಶ್ಮಿ ಇದ್ದಕ್ಕಿದ್ದ ಹಾಗೆ ಎದ್ದು ಮಹಡಿಯ ಮೆಟ್ಟಿಲ ಕಡೆ ಓಡಿದಳು. ಒಂದೇ ಸಮನೆ ಏದುಸಿರು ಬಿಡುತ್ತಾ ಮೆಟ್ಟಿಲುಗಳನ್ನು ಏರಿದ ರಶ್ಮಿ ಕಾವಲುಗಾರನ ತಡೆಯನ್ನು/ಅಪ್ಪಣೆಯನ್ನು ಮೀರಿ ಬಂದು ನಿಂತಿದ್ದು, ಹನ್ನೆರಡನೆ ಮಹಡಿಯ ಮೇಲಿರುವ ತಾರಸಿಯಲ್ಲಿ. ಪಶ್ಚಿಮದ ಆಗಸದಲ್ಲಿ ಸೂರ್ಯ ಇನ್ನೊಂದು ಕ್ಷಣದಲ್ಲಿ ಮುಳುಗಲಿದ್ದ. ಆಗಲೇ ಅವಳ ಮೊಬೈಲ್ ರಿಂಗಣಿಸಿತು. ಹತ್ತು ನಿಮಿಷದ ಕೆಳಗೆ ಕರೆ ಮಾಡಿದ್ದ ಆಕೆಯ ಗೆಳತಿ ಸೀಮಾ ಫೋನಿನಲ್ಲಿ ಏನು ಉಸುರಿದಳೋ? ಎರಡು ಸೆಕೆಂಡು ರಶ್ಮಿ ಕೈ ಕಟ್ಟಿ ತಲೆ ತಗ್ಗಿಸಿ ನಿಂತಿದ್ದಳು. ಅವಳು ಮತ್ತೆ ತಲೆ ಮೇಲೆತ್ತಿದಾಗ ಆಗಸದಲ್ಲಿ ಸೂರ್ಯ ಇರಲ್ಲಿಲ್ಲ, ಅದಾಗ ಉದಯಿಸುತ್ತಿದ್ದ ಚಂದ್ರ ತನ್ನನ್ನು ಕದ್ದು ನೋಡುತ್ತಿದ್ದಾನೇನೋ ಅನಿಸಿ ರಶ್ಮಿಯ ಮುಖ ಕಪ್ಪಿಟ್ಟಿತ್ತು. ತನ್ನನ್ನು ಕಾಡುತ್ತಿರುವ ಅಪರಾಧಿ ಪ್ರಜ್ಞೆಯಿಂದ ಮುಕ್ತಿಯಾಗಲು ನಡೆದಿರುವುದೆಲ್ಲವನ್ನು ಶಶಿಗೆ ಹೇಳಿಬಿಡಬೇಕೆಂದು ತೀರ್ಮಾನಿಸಿ ಕೆಳಗಿಳಿದು ಬಂದಳು.

                                                      *********************************

ನಾನು ರಶ್ಮಿ. ಹುಟ್ಟಿದ್ದು ಬೆಳೆದದ್ದು ಚಿನಾ ಹಳ್ಳಿಯ ಯಾವುದೋ ಒಂದು ಕುಗ್ರಾಮ. ಸುತ್ತ ಹತ್ತಾರು ಹಳ್ಳಿಗಳಿಗೆಲ್ಲ ಸೇರಿ ಇದ್ದಿದ್ದು ಒಂದೇ ಶಾಲೆ ಕಾಲೇಜು. ಎರಡು ಅಕ್ಕ ಪಕ್ಕದಲ್ಲೇ ಇತ್ತು. ನನ್ನ ಮನೆಗೂ ಶಾಲೆಗೂ ೨ ಕಿಮೀ ಅಂತರ. ನಾನು ಶಾಲೆಗೇ ಹೋಗಲು ಶುರು ಮಾಡಿದಾಗಿನಿಂದಲೂ ನನ್ನನ್ನು ಸೈಕಲ್ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದುದು ನನ್ನ ಪಕ್ಕದ ಮನೆಯ, ಅದೇ ಶಾಲೆಯ ನನಗಿಂತಲೂ ೨ ವರ್ಷ ಹಿರಿಯನಾದ ರವಿಕುಮಾರ. ನನ್ನ SSLCವರೆಗೂ ನಮ್ಮ ಸೈಕಲ್ ಮೆರವಣಿಗೆ ಸಾಗಿತು, ಆಮೇಲೆ ರವಿಕುಮಾರ ಡಿಗ್ರಿ ಕಾಲೇಜಿಗೆ ಅಂತ ಪಟ್ಟಣ ಸೇರಿದ. ಆದರೆ ಅಷ್ಟರಲ್ಲಾಗಲೇ ನಾವು ಪರಸ್ಪರ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೆವು. ನಾನು ಪಿಯುಸಿ ಓದುವಾಗ ಪಟ್ಟಣದಿಂದ ರವಿಕುಮಾರ ಬಂದಾಗಲೆಲ್ಲ, ನಾವಿಬ್ಬರೂ  ಕದ್ದು ಮುಚ್ಚಿ  ಭೇಟಿ ಮಾಡುತ್ತಿದ್ದೆವು. ಎರಡು ವರ್ಷ ಕಳೆದ್ದದ್ದೆ ಗೊತ್ತಾಗಲ್ಲಿಲ್ಲ. ಹೇಗೋ ಮಾಡಿ ಪಿಯುಸಿ ಪರೀಕ್ಷೆಯಲ್ಲಿ ನಾನು ಪಾಸಾಗಿದ್ದೆ. ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತೀನಿ ಎಂದು ಹಠ ಮಾಡಿದಾಗ, ನನ್ನ ರವಿಯ ಕಳ್ಳಾಟ-ಚೆಲ್ಲಾಟ ಕಂಡಿದ್ದ ನಮ್ಮಿಬ್ಬರ ಮನೆಯವರೂ, ನಮಗೆ ಮದುವೆ ಮಾಡಿಬಿಟ್ಟರು. ಆಗ ನನಗೆ ೧೮ ರವಿಗೆ ೨೦ ವಯಸ್ಸು.

ರವಿಕುಮಾರನ ಹೆಂಡತಿಯಾಗಿ ಮೊದಲ ಬಾರಿ ನಾನು ಪಟ್ಟಣಕ್ಕೆ ಕಾಲಿಟ್ಟಿದ್ದು ೨೦೦೫ರಲ್ಲಿ.  ಮಾವ ತೀರಿದ್ದ ಒಬ್ಬರೇ ವಾಸವಾಗಿದ್ದ ರವಿಯ ಸೋದರತ್ತೆ ಮನೆಯಲ್ಲಿ ನಾನು ಸಂಸಾರ ಮಾಡಲು ಶುರುಮಾಡಿದ್ದೆ. ಡಿಗ್ರಿ ಪಾಸಾದರೆ ಸಾಕು, ಲಂಚ ಕೊಟ್ಟು ಯಾವುದಾದರೂ ಸರ್ಕಾರಿ ಕೆಲಸಕ್ಕೆ ತಗಲಾಕೊಳದು ಅಷ್ಟೇ ಅಂತ ರವಿ ತೀರ್ಮಾನಿಸಿ ವರ್ಷಗಳೇ ಆಗಿದ್ದವು. ಹತ್ತು ಲಕ್ಷದವರೆಗೂ ಲಂಚ ಕೊಡಲು ಅವರಪ್ಪ ಕೂಡ ಹೂ ಅಂದಿದ್ದರು. ಹಾಗಾಗಿ ರವಿ ಮೂವೈತ್ತೈದಕ್ಕಿಂತ ಹೆಚ್ಚಿಗೆ ಪಡೆದವನೇ ಅಲ್ಲ.

ರವಿ ಡಿಗ್ರಿ ಪಾಸಾದ, ಅವನಂದುಕೊಂಡಂತೆ ೮ ಲಕ್ಷಕ್ಕೆ ಸರ್ಕಾರಿ ಕೆಲಸದ ಡೀಲ್ ಸಿಕ್ಕಿತು. ಡೀಲ್ ಕೊಡಿಸಿದವರ ಕಂಡಿಶನ್ ಇತ್ತು. ಅದು ಒಂದು ವರ್ಷ ಕಾಯುವುದು. ಒಂದೇ ವರ್ಷ ತಾನೇ ಹೇಗೋ ಕಳೆದು ಹೋಗತ್ತೆ ಅಂತ ರವಿ ಅಪ್ಪ ಒಪ್ಪಿದ್ದರು.  ಸರದಿ ಪ್ರಕಾರ  ಒಂದು ವರ್ಷವಾದಮೇಲೆ ನಿನಗೆ ಆರ್ಡರ್ ಕಳಿಸುತ್ತೇವೆ, ಆಗ ಬಂದು ಸೇರಿಕೋ ಎಂದು ಹೇಳಿ ಡೀಲ್ ಕೊಡಿಸಿದವರು ಕಳಿಸಿದ್ದರು, ಮತ್ತು ಆಗಾಗ ಕರೆ ಮಾಡಿ ಹೆಚ್ಚು ಹಣ ಕೊಟ್ಟರೆ ಮಾತ್ರ ಬೇಗ ಕೊಡಿಸೋಕೆ  ಸಾಧ್ಯ ಎಂದು ಇಪ್ಪತೈದು ಐವತ್ತು ಸಾವಿರ ತೊಗೊತಿದ್ದರು.

ಒಂದು ವರ್ಷ ಕಳೆಯುತ್ತಾ ಬಂದಿತ್ತು. ಇನ್ನೇನು ರವಿ ಸರ್ಕಾರಿ ಕೆಲಸಕ್ಕೆ ಸೇರುವನು ಎಂದು ಅವರಪ್ಪ ಹಳ್ಳಿಲಿ ಬಾಡೂಟ ಹಾಕಿಸಿದ್ದರು. ದುರಾದೃಷ್ಟ, ವರ್ಷ ತುಂಬೋಕೆ ಒಂದು ವಾರವಿದೆ ಅನ್ನೋವಾಗ ಡೀಲ್ ಕೊಡಿಸಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ, ಅವನ ಏಜೆಂಟ್ ತಲೆಮರೆಸಿಕೊಂಡಿದ್ದ. ಹತ್ತು ಲಕ್ಷ ಕೈತಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ರವಿ ಅಪ್ಪ ಹೃದಯಾಘಾತದಿಂದ ಸತ್ತರು. ರವಿ ಅಪ್ಪ ಮಾಡಿದ್ದ ಸಾಲ ತೀರಿಸಲು ಹಳ್ಳಿಲ್ಲಿದ್ದ ಹೊಲ ಗದ್ದೆ ಮನೆ ಎಲ್ಲ ಮಾರಬೇಕಾಯಿತು. ಬರಿಗೈಯಲ್ಲಿ ಅಮ್ಮನ್ನನ್ನು ಕರಕೊಂಡು ಪಟ್ಟಣ್ಣಕ್ಕೆ ಬಂದ.

ಮತ್ತೆ ಒಂದು ವರ್ಷ ರವಿ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಸುತ್ತಾಡಿದ, ಸಿಕ್ಕ ಸಣ್ಣ ಪುಟ್ಟ ಕೆಲಸ ನೆಟ್ಟಗೆ ಮಾಡದೆ ಆಚೆ ದಬ್ಬಿಸಿಕೊಂಡು ವಾಪಸಾದ. ಮನೆಯಲ್ಲಿ ಯಾರ ಮಾತು ಕೇಳುತ್ತಿರಲ್ಲಿಲ್ಲ. ನಾನು ಕೊನೆ ವರ್ಷ ಡಿಗ್ರಿಲಿದ್ದೆ ಜೊತೆಗೆ ಸೀಮಾಳ ಸಲಹೆಯಂತೆ ಕಂಪ್ಯೂಟರ್ ಕೋರ್ಸ್ ಮಾಡ್ತಿದ್ದೆ. ಹಾಗಾಗಿ ರವಿ ಬಗ್ಗೆ ಹೆಚ್ಚಾಗಿ ಗಮನ ಹರಿಸಲು ಸಾಧ್ಯವಾಗಲ್ಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನನಗೆ ಅವನ ಮೇಲೆ ಪ್ರೀತಿಯೇ ಇರಲ್ಲಿಲ್ಲ. ಪ್ರೀತಿ ಎಂದರೇನು ಅಂತಲೇ ತಿಳಿಯದ ವಯಸ್ಸಲ್ಲಿ ಬರೀ ಆಕರ್ಷಣೆಗೆ ಒಳಗಾಗಿ ಅವನನ್ನು ಮದುವೆಯಾಗಿದ್ದೆ.

ನಾನು ಡಿಗ್ರಿ ಪಾಸಾದ ಕೂಡಲೇ ಕಂಪ್ಯೂಟರ್ ಕಲಿತಿದ್ದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಹತ್ತು ಸಾವಿರ ರೂಪಾಯಿ ಸಂಬಳ. ರವಿ ಸಂತೋಷಪಡುವ ಬದಲು ಅಸೂಯೆ ಪಟ್ಟ. ಸಣ್ಣ ಪುಟ್ಟ ವಿಷಯಗಳಿಗೂ ನನ್ನನ್ನು ಪ್ರಶ್ನಿಸುತ್ತಿದ್ದ ಮತ್ತು ಅನುಮಾನಿಸುತ್ತಿದ್ದ. ಮೂರು ವರ್ಷಗಳ ಕಾಲ ಅವನ್ನನ್ನು ಸಹಿಸಿದೆ. ಅದೇ ಸಮಯದಲ್ಲಿ ರವಿ ಅಮ್ಮ ಮತ್ತೆ ಸೋದರತ್ತೆ ಸತ್ತಿದ್ದರು. ಯಾವಾಗಲೂ ಜಗಳದಲ್ಲಿ ನನ್ನ ಪರವಾಗಿ ನಿಲ್ಲುತ್ತಿದ್ದ ಅವರಿಬ್ಬರೂ ಈಗಿಲ್ಲ. ಹಾಗಾಗಿ ಮನೆಯಲ್ಲಿ ನನ್ನ ಗೋಳು ಕೇಳೋರಿಲ್ಲದೆ ಆಯಿತು. ಒಂದೊಂದು ಪೈಸಕ್ಕೂ ರವಿ ನನ್ನ ಜೀವ ಹಿಂಡುತ್ತಿದ್ದ.


೩೧ / ೦೫ / ೨೦೧೧

ನನಗಾಗ ೨೪. ರವಿಯ ಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಮತ್ತು ಅವನ ಆರೋಗ್ಯ ತೀರ ಹದಗೆಟ್ಟಿತ್ತು. ಅವನನ್ನು ಕಂಡರೆ ಅಸಹ್ಯವಾಗಿ ವಾಕರಿಕೆ ಬರುತ್ತಿತ್ತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಅವನಿಗೆ ವಿವಾಹ ವಿಚ್ಚೇದನ ನೀಡಲು ತೀರ್ಮಾನಿಸಿ ಅರ್ಜಿ ಸಲ್ಲಿಸಿದೆ. ಕೋರ್ಟಿನಲ್ಲಿ ತೀರ್ಪು ನನ್ನ ಪರ ಬಂದು ನಾನು ರವಿಗೆ ವಿಚ್ಚೇದನ ನೀಡಿದ್ದು ಮೂವತ್ತೊಂದು  ಮೇ ಎರಡು ಸಾವಿರದ ಹನ್ನೊಂದು.

ಸ್ವ ಇಚ್ಚೆಯಿಂದ ದಾದಿ ಕೆಲಸಕ್ಕೆ ಸೇರಿದ್ದ ಸೀಮಾ, ರವಿಯನ್ನು ನೋಡಿಕೊಳ್ಳಲು ಒಪ್ಪಿಕೊಂಡಳು. ತಿಂಗಳಿಗೆ ಐದು ಸಾವಿರ ಕೊಡುತ್ತಿದ್ದೆ ಅವಳಿಗೆ. ಆಗಷ್ಟೇ ನನಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಮೂವತ್ತೆರಡು ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ಸೀಮಾಳಿಗೆ, ಕೂರಲು ಏಳಲು ಮತ್ತೊಬ್ಬರ ಸಹಾಯ ಬೇಕಿದ್ದ ರವಿಯ ಪೂರ್ತಿ ಜವಾಬ್ದಾರಿ ವಹಿಸಿ  ನಾನು ಬೆಂಗಳೂರಿಗೆ ಬಂದು ಬಿಟ್ಟೆ.


೩೧ / ೦೫ / ೨೦೧೩

ಇಲ್ಲಿ ಕೆಲಸಕ್ಕೆ ಸೇರಿ ೨ ವರ್ಷವಾಯಿತು. ನನ್ನ ಜೊತೆ ಅತಿ ಸಲುಗೆ ಬೆಳೆಸಿಕೊಂಡಿರೋ ಶಶಿಗೆ ನಾನು ಹೇಳಿರೋದು ಕೇವಲ ನನ್ನ ಊರು ಮತ್ತು ನಾನೊಬ್ಬ ಅನಾಥೆ ಅವಿವಾಹಿತೆ  ಎಂದಷ್ಟೇ. ಇವತ್ತು ರವಿ ಸತ್ತಿದ್ದಾನೆ. ಈಗಲಾದರೂ ಎಲ್ಲಾ ವಿಷಯಗಳನ್ನು ಶಶಿಗೆ ಹೇಳಲೇಬೇಕು. ನಾನು ಬರುತ್ತೇನೆ.

                                              *******************************

ಹೇಳೋದಾದ್ರೆ ಪೂರ್ತಿ ಹೇಳು, ನಿನ್ನ ಮನಸ್ಸಿಗೆ ಸಮಾಧಾನವಾಗತ್ತೆ ಅಂತ ನಾನು ಕೇಳ್ತಾ ಇದ್ದೀನಿ, ಅದು ಅಲ್ದೆ ತಲೆಲ್ ಹುಳ ಬಿಟ್ಕೊಳಕ್ಕೆ ನನ್ ಕಥೆಗಳೇ ನಂಗೆ ಬೇಜಾನ್ ಇದೆ ಎಂದು ನಾನು ರಶ್ಮಿಗೆ ದಬಾಯಿಸಿದೆ.

ರಶ್ಮಿ ಮತ್ತೆ ಶುರು ಮಾಡಿದಳು... ರವಿ ಸತ್ತಿದ್ದು ಕ್ಯಾನ್ಸರ್ ಖಾಯಿಲೆಯಿಂದ. ಕ್ಯಾನ್ಸರ್ ಗೆ ಕಾರಣ ಆವ ನಾಕನೇ ಕ್ಲಾಸಿಂದಾನೆ ತಿನ್ನಲು ಶುರು ಮಾಡಿದ್ದ ಗುಟ್ಕಾ ಮತ್ತು ಹತ್ತನೇ ಕ್ಲಾಸಿಂದ ಶುರು ಮಾಡಿದ್ದ ಸಿಗರೇಟ್. ನಮ್ಮ ಮದುವೆಯಾದದ್ದು ೩೧ / ೦೩ / ೨೦೦೫. ಆ ದಿನ ಪಟ್ಟಣದ ಅವನ ಗೆಳೆಯರು ಮದುವೆಗೆ ವಿಶ್ ಮಾಡುವಾಗ ಹ್ಯಾಪಿ ಮ್ಯಾರೀಡ್ ಲೈಫ್ ಜೊತೆಗೆ ಹ್ಯಾಪಿ ಟೊಬ್ಯಾಕೊ ಡೇ ಮಗ ಅಂದಿದ್ದರು. ಅದೇನೆಂದು ನನಗಾಗ ಅರ್ಥ ಆಗಿರಲ್ಲಿಲ್ಲ. ಹತ್ತನೇ ಕ್ಲಾಸಲ್ಲಿ ಅವನು ಸಿಗರೇಟ್ ಸೇದುತ್ತಿದ್ದರೆ  ಸ್ವಲ್ಪ ದೂರದಲ್ಲಿ ಅವನಿಗೆ ಕಾಣದ ಹಾಗೆ ನಿಂತು ನನ್ನ ಗೆಳತಿಯರಿಗೆ ನಾನೇ ತೋರಿಸುತ್ತಿದ್ದೆ ನೋಡ್ರೆ ನಮ್ಮವರು ಹೇಗೆ ಹೊಗೆ ಬಿಡ್ತಾರೆ ಅಂತ.. ಆದ್ರೆ ಅದೇ ಅವನಿಗೆ ಹೊಗೆ ಹಾಕತ್ತೆ ಅಂತ ನನಗೆ ಗೊತ್ತಾದ ದಿನದಿಂದಲೂ ಅವನನ್ನು ಆ ಚಟದಿಂದ ದೂರಮಾಡಲು ಇನ್ನಿಲ್ಲದ ಪ್ರಯತ್ನಪಟ್ಟೆ. ನನ್ನ ಪ್ರಯತ್ನ ಸಫಲವಾಗಲ್ಲಿಲ್ಲ ಅವನು ಸತ್ತೇ ಹೋದ, ಈಗ ನನ್ನ ಪಾಲಿಗೆ ಉಳಿದಿರೋದು ಶಶಿ ಒಬ್ಬನೇ, ಅವನಿಗೆ ನಾನು ಎಲ್ಲವನ್ನು ಹೇಳಲೇ ಬೇಕು, ಬರ್ತೀನಿ ಎಂದು ನಡೆದೇ ಬಿಟ್ಟಳು.

೩೧ ಮೇ ೨೦೧೩ ರವಿ ಸತ್ತಿರೋದೆ ಒಂದು ವಿಶೇಷಾನ ಅಂತ ನೀವು ಯೋಚಿಸುತ್ತಿದ್ದರೆ, ಅಷ್ಟೇ ಅಲ್ಲ. ಕರ್ನಾಟಕ ಸರ್ಕಾರ ಅಂದಿನಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದೆ.

ಇಲ್ಲಿಗೆ ರಶ್ಮಿ ಹೇಳಿದ ಅವಳ  'ಗುಟ್ 'ಕಾ ಕಥೆ ಮತ್ತು ರವಿಯ ಗುಟ್ಕಾ ಕಥೆ ಮುಗಿಯಿತು. ಬರೆದದ್ದಕ್ಕೆ ನನಗೂ ಓದಿದ್ದಕ್ಕೆ ನಿಮಗೂ ಆಕೆ ಧನ್ಯವಾದ ತಿಳಿಸಿದ್ದಾಳೆ.

                                                     *****************************