ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕಡೆ ನಮ್ಮ ಸವಾರಿ ಸಾಗಿತ್ತು. ಶಂಕರ ಮಠದ ಹತ್ತಿರ ಯಾರನ್ನೊ ನೋಡಬೇಕಿದ್ದರಿಂದ ಮೊದಲು ಅಲ್ಲಿಗೆ ಹೋಗಿ ಆ ಕೆಲಸ ಮುಗಿಸಿ ಜೀಬಿ ಕಡೆ ಬರುತ್ತಿದ್ದೆ. ಸಿಗ್ನಲ್ ನಲ್ಲಿ ಕೆಂಪು ಬಣ್ಣದಲ್ಲಿ ಕಡಿಮೆಯಾಗುತ್ತಿರುವ ಎಣಿಕೆಯ ಸಂಖ್ಯೆಯನ್ನು ನೋಡುತ್ತಾ ಎಂದೋ ಓದಿದ್ದ ಮೈಕ್ರೊಕಂಟ್ರೊಲರ್ನ ಕೌಂಟರ್ ಪ್ರೊಗ್ರಾಮ್ ನೆನಪಿಸಿಕೊಳ್ಳುತ್ತಿದ್ದೆ. ಹಿಂದಿನಿಂದ ಭುಜಕ್ಕೆ ಗುದ್ದಿದ ಇವಳು ಆಕಾಶಕ್ಕೆ ಮುಖಮಾಡಿ ರೀ ಮಳೆ ಬರೊ ಹಾಗಿದೆ, ನಡೀರಿ ಮನೆಗ್ ಹೋಗಣ ಅಂದ್ಲು. ಜೀಮ್ಮೆ (GM) ಜೊತೆಗಿರುವಾಗ ಮಳೆ ಯಾವ ಲೆಕ್ಕ ಸುಮ್ಕೆ ಕೂರಮ್ಮಿ ಅಂದು ಹಸಿರು ದೀಪ ನೋಡಿ ಸೆಲ್ಪ್ ಸ್ಟಾರ್ಟ್ ಬಟನ್ ಅದುಮಿದೆ.
ಜೀ ಎಮ್ ಅಂದರೆ ಏನೆಂದು ಯೋಚಿಸುತ್ತಿದ್ದಿರಾ? (G)ಗುಡ್ (M)ಮಾರ್ನಿಂಗ್ ಅಂತು ಖಂಡಿತ ಅಲ್ಲ. ಜೀ ಎಮ್ ಅನ್ನುವುದು ಇವಳಿಗೆ ನಾನಿಟ್ಟಿರುವ ಹೆಸರು. ಜೀ ಎಮ್ ಗೆ ಬಹಳಷ್ಟು ಅಬ್ರಿವೇಷನ್ ಗಳಿದೆ, ಅದರಲ್ಲಿ ಕೆಲವೊಂದಿಷ್ಟು ಇಲ್ಲಿದೆ.
೧. (G)ಜೆನರಲ್ (M)ಮ್ಯಾನೆಜರ್ - ಇವಳೆ ನಮ್ಮನೆಗೆ
೨. (G)ಗುಂಡೂರಾಯರ (M)ಮಗಳು
೩. (G)ಗುಣವಂತೆ (M)ಮಡಿವಂತೆ
೪. (G)ಗೋಲ್ಡ್ (M)ಮನಿ - ನನ್ನ ಚಿನ್ನ ಬಂಗಾರ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲಾ ಇವಳೆ
೫. (G)ಗಾಳಹಾಕಿ (M)ಮನೆಗ್ ಕರೆತಂದವಳು - ಇದು (ಅಪ)ಅರ್ಥ ಆಗಿದ್ರೆ ಮುಂದಿನ ವಾಕ್ಯ ಓದಬೇಡಿ. ಅರ್ಥ ಆಗದವರಿಗೆ - ಹಾಗಂದ್ರೆ ತಾಳಿಕಟ್ಟಿ ಮನೆ ತುಂಬಿಸಿಕೊಂಡವಳು :P
ಇನ್ನು ಏನೆನೋ ಇದೆ, ಅದೆಲ್ಲ ಇಲ್ಲಿ ಬೇಡ. ಜೀ ಎಮ್ ಅಂತಂದುಬಿಟ್ಟರೆ ಇವಳು ಉಬ್ಬಿ ಹೋಗುತ್ತಾಳೆ, ಆಗಲೇ ಅಲ್ಲವಾ ನನ್ನ ಕೆಲಸಗಳು ಕ್ಷಣ ಮಾತ್ರದಲ್ಲಿ ಆಗುವುದು. ನಿಮಗೊಂದು ಗೊತ್ತಾ? ನಿಜ ಹೇಳ್ತಿದೀನಿ ಅಸಲಿಗೆ ಜೀ ಎಮ್ ಎಂದರೆ ಇದ್ಯಾವುದೂ ಅಲ್ಲ !!
ಹಾಗಿದ್ರೆ ಜೀ ಎಮ್ ಅಂದ್ರೆ ಏನಿರಬಹುದೆಂದು ಜಾಸ್ತಿ ಊಹಿಸಬೇಡಿ, ನಾನೇ ಹೇಳುತ್ತೇನೆ. ಜೀ ಎಮ್ ಅಂದರೆ (G)ಗುಡುಗು (M)ಮಿಂಚು ! ಯಾಕೆಂದರೆ ಇವಳು ಮನೆಯಲ್ಲಿ ಮತ್ತು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದಲ್ಲಿ ಒಂದೋ ಗುಡುಗುತ್ತಿರುತ್ತಾಳೆ (ಚರ್ಚೆ, ವಾದ-ವಿವಾದ, ಪರ-ವಿರೋಧ, ಮಾತುಕಥೆ, ಹರಿಕಥೆ, ಪುರಾಣ) ಇಲ್ಲ ಮಿಂಚುತ್ತಿರುತ್ತಾಳೆ (ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎಲ್ಲರೂ ನನ್ನ ಬಳಿ ಬಂದು ಎನ್ರಿ ನಿಮ್ಮೊರು ಮಿಂಚಿಂಗೋ ಮಿಂಚಿಂಗು ಅಂತ ಹೇಳೋರೆ). ಈ ಅಬ್ರಿವೇಷನ್ ನಿಮ್ಮಲ್ಲೆ ಇಟ್ಕೊಳಿ, ಇವಳು ಸಿಕ್ಕಾಗ ಅಪ್ಪಿ ತಪ್ಪಿ ಬಾಯ್ ಬಿಟ್ಬಿಟೀರ, ಗೊತ್ತಾದ್ರೆ ಇವಳು ನನ್ನ (G)ಗುಡಿಸಲು (M)ಮನೆ ಸೇರಿಸೋದು ಗ್ಯಾರಂಟೀ.
ವಿಷಯಾಂತರಕ್ಕೆ ಕ್ಷಮೆ ಇರಲಿ, ಸಿಗ್ನಲ್ ಲೈಟ್ ಗ್ರೀನ್ ಆದಂಗೆ ನಾನು ಸೀದಾ ಹೋದೆ. ಹಾಗೆ ಮಾಡದೆ ಬಲಕ್ಕೆ ತಿರುಗಿದ್ದರೆ ಮಳೆ ಬರುತ್ತಿರಲ್ಲಿಲ್ಲವೇನೋ? ಸಿಗ್ನಲ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಮಳೆ ಶುರುವಾಯಿತು. ಹತ್ತು ಸೆಕೆಂಡ್ ಗಳಲ್ಲೆ ಮಳೆ ಜೋರಾಗಿ ಗಾಡಿ ನಿಲ್ಲಿಸಿದೆ. ನಮಗೆ ಆಸರೆ ನೀಡಿದ್ದು ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ, ಇವಳೊ ಉರಿದು ಬೀಳುತ್ತಿದ್ದಳು. ಕಾರಣ ಸರ್ಕಾರದ್ದು ಅಂದರೆ ಇವಳಿಗೆ ಆಗಲ್ಲ, ಎರಡನೆಯದು ಹೆಣ್ಮಕ್ಕಳ ಶಾಲೆ, ನಾನು ಅತ್ತ ಕಡೆ ಸುಳಿಯಲೂ ಕೂಡದು ಎಂಬುದು ಇವಳ ಆಜ್ಞೆ. ನಾನು ಸುತ್ತೊದು ಬರೀ ಡಿಗ್ರೀ ಕಾಲೇಜಿನ ಮುಂದಷ್ಟೇ ಅಂತ ಹೇಳಿ ಆ ಕಡೆ ತಿರುಗಿದರೆ ಇವಳು ಮೂಲೆಲಿದ್ದ ಬೆಂಚಿನ ಮೇಲೇ ಆಸೀನಳಾಗಿದ್ದಳು. ಸದ್ಯ ನಾನು ಹೇಳಿದ್ದು ಕೇಳಿಸಿಲ್ಲ ಅಂತ ಮನಸಲ್ಲೆ ಮಂಡಿಗೆ ತಿನ್ನುತ್ತಾ ಅತ್ತ ನಡೆದರೆ ಇವಳ ವರಸೆ ಬದಲಾಗಿಬಿಟ್ಟಿತ್ತು. ರೀ ಐಸ್ ಕ್ರೀಮ್ ತಂದ್ಕೊಡ್ರಿ ಅಂದ್ಲು. ಅರೆಘಳಿಗೆ ದಪ್ಪ ಮಳೆಹನಿ ದಿಟ್ಟಿಸಿ ನೋಡುತ್ತಿದ್ದ ನನಗೆ, ರೀ ಹೋಗ್ರಿ ಏನಾಗಲ್ಲ ಅಂತ ದಬಾಯಿಸಿದಳು. ಅಂತೂ ಮಳೇಲಿ ನೆಂದು ಇವಳ ಐಸ್ ಕ್ರೀಮ್ ಆಸೆ ಪೂರೈಸಿದೆ. ಅರ್ಧ ಗಂಟೆ ಕಳೆದ ಮೇಲೆ ಮಳೆ ನಿಂತಿತು. ಶುರುವಾಯಿತು ನೋಡಿ ಇವಳ ಶಾಪಿಂಗು. ಕಾಲ್ ವರುಸ್ಕೊಳೊ ಕಾರ್ಪೆಟ್ ಯಿಂದ ಹಿಡಿದು ಇವಳು ತಲೆಗ್ ಹಾಕೊಳೊ ಕ್ಲಿಪ್ ತನಕ ಎಲ್ಲಾ ಕೊಂಡಳು. ನಾನು ರೈಲ್ವೇ ಸ್ಟೇಷನ್ನಿನ ಕೂಲಿ ತರ ಮೂರು ಕವರ್ ಚೀಲ ಹಿಡಿದು ಇವಳ ಹಿಂದೆ ಹಿಂದೆ ಹೋಗುತ್ತಿದ್ದೆ. ಅಂತೂ ಎಲ್ಲಾ ಮುಗಿದು (ನನ್ನ ಪರ್ಸಲ್ಲಿದ್ದ ದುಡ್ಡು ಸೇರಿ) ಮನೆ ಸೇರಿದಾಗ ರಾತ್ರಿ ಒಂಬತ್ತಾಗಿತ್ತು. ಊಟ ಮಾಡಿ ಮಲಗಿದೆವು.
ರಾತ್ರಿ ನಿದ್ದೆ ಹತ್ತಿದ್ದು ಗೊತ್ತಿಲ್ಲ ಆದರೆ ಬೆಳಗ್ಗೆ ಏಳಲು ಸಾಧ್ಯವಾಗುತ್ತಿಲ್ಲ ನನಗೆ, ಮೂಗು ಕಟ್ಟಿ ಉಸಿರಾಡಲು ಕಷ್ಟವಾಗುತ್ತಿದೆ. ತಲೆ ಸಿಡಿಯುತ್ತಿದೆ, ಜ್ವರ ಸುಡುತ್ತಿದೆ. ಇವಳು ತಲೆಗೊಂದು ಒದ್ದೆ ಬಟ್ಟೆ ಸುತ್ತಿ, ನಮ್ಮನೆ ಪಕ್ಕದಲ್ಲೇ ಇದ್ದ ಪ್ರಾಕ್ಟೀಸ್ ಡಾಕ್ಟರ್ ಪರಿಣಿತಳನ್ನ ಕರೆಸಿದಳು. ಪರಿಣಿತ ಬರೋಷ್ಟರಲ್ಲಿ ಇವಳು ಅಮ್ಮಗೆ ಕರೆ ಮಾಡಿ ನೋಡಿ ಅತ್ತೆ ಐಸ್ ಕ್ರೀಂ ತಿಂದಿದ್ದು ನಾನು ಆದ್ರೆ ಇವರು ಮಲ್ಕೊಬಿಟ್ಟಿದ್ದಾರೆ ಅಂತಿದ್ದಳು. ನಾನು ಹು ಐಸ್ ಕ್ರೀಂ ತಿಂದಿದ್ದು ಅವ್ಳು ಮಳೆಲಿ ನೆಂದಿದ್ದು ನಾನು ಅಂತ ಹೇಳಕ್ಕೆ ಫೋನ್ ಇಸ್ಕೊಲೋಷ್ಟರಲ್ಲಿ ಡಾಕ್ಟರು ಬಂದು ನನ್ನ ನೋಡಿ ಇಂಜೆಕ್ಷನ್ ಕೊಡಬೇಕಾದರೆ ನಾನು ಆ ಆ ಆ ನೋವು ಎಂದು ಚೀರುತ್ತಾ ಎದ್ದು ಕೂತೆ.
ನಾನು ಕೂಗಿದ ಸದ್ದಿಗೆ ಅಕ್ಕ ಏನಾಯ್ತೊ ಅಂತ ಬಂದಳು. ಏನಿಲ್ಲಕ್ಕ ಭಯಾನಕ ಕನಸು ಅಂದೆ, ಗುರುಗಳ್ ಆರಾಧನೆ ಅಂತ ರಾಯರ ಮಠದಲ್ಲಿ ಸರಿಯಾಗಿ ಬಾರಿಸಿ ಬಂದು ಮಲಗಿದರೆ ಮಧ್ಯಾನ್ಹನೂ ಕನಸು ಬೀಳತ್ತೆ ಬೆಳಗ್ಗೆನೂ ಬೀಳತ್ತೆ ಎದ್ದು ಮುಖ ತೊಳ್ಕೊ ಕಾಫಿ ಕೊಡ್ತೀನಿ ಅಂತ ಬೈದು ಅಡುಗೆ ಮನೆಗೆ ಹೋದಳು.
ನಾನು ಮುಖ ತೊಳೆದು ಕಾಫಿ ಕುಡಿದು ಕನಸು ನಿಜವಾದರೆಂಬ ಭಯದಿಂದ ಗಾಡಿ ತೆಗೆಯದೆ 3E ಬಸ್ ಹತ್ತಿ ನಾರ್ತ್ ರೋಡಲ್ಲಿ ಇಳಿದೆ. ಸ್ವಲ್ಪ ಹಿಂದೆ ಬಂದು ಸಿಗ್ನಲ್ ದಾಟಿ ಜೀಬಿ ಕಡೆ ಹೆಜ್ಜೆ ಹಾಕಿದೆ ಮಳೆ ಶುರುವಾಯಿತು. ಮಳೆ ಜೋರಾಗುತ್ತಲೆ ನಾನು ಆಸರಿಸಿದ್ದು ಅದೇ ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ. ಸುಮಾರು ಹೊತ್ತು ಟೆಂಪಲ್ ರನ್ ಆಡಿದೆ, ಅದು ಬೇಜಾರಾಗಿ ಕನಸನ್ನು ನೆನೆದು ಬೆಚ್ಚಿಬೀಳುವಾಗಲೇ ಮಳೆ ನಿಂತಿತ್ತು. ನನ್ನ ಗೃತ್ಸಮದನಿಗೆ ಹೊಸ ಇಯರ್ ಫೋನ್ ಕೊಳ್ಳಲು ಇಡೀ ಜೀಬಿ ಸುತ್ತಿದರೂ ಎಲ್ಲೂ ಒರಿಜಿನಲ್ ಸಿಗಲ್ಲಿಲ್ಲ, ನೀವು ಸರ್ವೀಸ್ ಸೆಂಟರ್ ಗೆ ಹೋಗಿ ಅಲ್ಲಿ ಸಿಗಬಹುದೆಂದು ೩-೪ ಅಂಗಡಿಯಲ್ಲಿ ಹೇಳಿದರು, ಗಾಡಿಯಿರಲ್ಲಿಲ್ಲ ಸಜ್ಜನ್ ರಾವ್ ಸರ್ಕಲ್ ತನಕ ನಡೆಯಲು ಮನಸಾಗಲ್ಲಿಲ್ಲ. A2B (ಆಡ್ಯಾರ್ ಆನಂದ ಭವನ) ತನಕ ಬಂದು ನನ್ನಿಷ್ಟವಾದ ಬೇಳೆ ಹೋಳಿಗೆಗೆ ತುಪ್ಪ ಹಾಕಿಸಿಕೊಂದು ಬಾದಾಮಿ ಹಾಲು ಸೇರಿಸಿ, ಕೆನರಾ ಬ್ಯಾಂಕ್ ಕಟ್ಟೆ ಮೇಲೆ ಕುಳಿತು ಬಿಸಿ ಬಿಸಿ ಹೋಳಿಗೆ ಸೇವಿಸಿದೆ. ತಿನ್ನುವಾಗ ಹಿಂದೆ ನಾವೆಲ್ಲಾ ಗೆಳೆಯರು ಅಲ್ಲಿ ದಿನಾ ಸೇರಿ ಗುಲ್ಲೆಬ್ಬಿಸುತ್ತಿದ್ದುದು ನೆನಪಾಗಿ ಕೊಂಚ ಬೇಜಾರಾದರೂ, ಕೆಲ ನಿಮಿಷದಲ್ಲೆ ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಖುಷಿಯಾಗಿದ್ದಾರೆ ಅನಿಸಿ ಮನಸಿಗೆ ಸಮಾಧಾನವಾಯಿತು. ಶನಿವಾರವಾದ್ದರಿಂದ ಕಾರಂಜಿ ದೇವಸ್ಥಾನಕ್ಕೆ ತೆರಳಿ ಹನುಮಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ದೇವರಿಗೆ ಅರ್ಚಿನೆ ಮಾಡಿಸಿ "ಓ ದೇವರೇ ಜೀವನ ಇದೇ ತರ ಇರ್ಲಿ" ಅಂತ ಬೇಡಿಕೊಳ್ಳುತ್ತಿರುವಾಗಲೇ ನಾನು ಹಿಂದೆ ಬರೆದಿದ್ದ "ಜೀವನ" ಚುಟುಕು ನೆನಪಾಗಿಬಿಟ್ಟಿತು.
ಶ್ರೀ ರಾಮನು ನನ್ನ ಬೇಡಿಕೆಗೆ ಅಸ್ತು ಅಂದಂತಾಗಿ ನಾನು ಆ ತರ ಬೇಡ ದೇವ್ರೆ ಅಂತ ಮತ್ತೊಮ್ಮೆ ಕರೆಕ್ಟ್ ವರ್ಶನ್ ಅಪ್ಲಿಕೇಶನ್ ನ ದೇವರಿಗೆ ಸಲ್ಲಿಸಿ ಮನೆ ಕಡೆ ಹೋಗಲು ಬಸ್ ಹಿಡಿಯಲು ಗಣೇಶ ಭವನ ಬಸ್ ಸ್ಟಾಪ್ ಗೆ ಬಂದು ನಿಂತೆ. ಪರಿಚಯವಿದ್ದ ಮೆಡಿಕಲ್ ಶಾಪಿನವನಿಗೆ ಹಲೊ ಅನ್ನೊಷ್ಟರಲ್ಲಿ 43E ನಂಬರ್ ಬಸ್ ಬಂದಾಗ, ಹತ್ತಿದೆ. ಕನಸಲ್ಲಿ ಅಷ್ಟೋಂದು ಶಾಪಿಂಗ್ ಮಾಡಿದ್ದು ಜ್ಞಾಪಕ ಬಂದು, ಬಾಟ ಶೋ ರೂಂ ಬಳಿ ಇಳಿದು, ಒಂದು ಜೊತೆ ಚಪ್ಪಲಿ ಖರೀದಿಸಿ ಮನೆ ಕಡೆ ಹೆಜ್ಜೆ ಹಾಕಿದೆ. ಬಾಗಿಲಲ್ಲಿರುವಾಗಲೆ ಅಕ್ಕ ನನ್ನ ಡೀಟೈಲ್ಸ್ ಫೋನಲ್ಲಿ ಹೇಳುತ್ತಿದ್ದಿದು ಕೇಳಿಸಿತು.
**************************************
super !!!!!
ReplyDeleteThank you @Bhagyashree :)
Deletechanda untu ;)
DeleteThank you Raj :)
DeleteGood one !!!
DeleteThanks Arun :)
Delete