ಜುಲೈ ೧೦..
ಸಂಜೆ ಆರು ಮೂವತ್ತಾಗಿತ್ತು... ಕೆಲಸ ಸ್ವಲ್ಪ ಜಾಸ್ತಿನೇ ಇದ್ದಿದ್ದಿಕ್ಕೋ ಏನೋ, ಅವಳು ಕರೆಯುತ್ತಿದ್ದ ಹಾಗಾನಿಸಿ ಆದಾಗಲೇ ಮನೆಗೆ ಹೋಗಬೇಕೆನಿಸುತ್ತಿತ್ತು. (ಸಾಮಾನ್ಯವಾಗಿ ನಾನು ಒಂಬತ್ತರ ಕಮ್ಮಿ ಆಫೀಸಿಂದ ಹೊರಡುವುದು ಅಪರೂಪ). ಅಷ್ಟೇನೂ ಮುಖ್ಯವಲ್ಲದ ಆದರೂ ನಾನಿರಲೇಬೇಕಾದ ಒಂದು ಕಾಲ್ ಸರಿಯಾಗಿ ಏಳಕ್ಕೆ ಇತ್ತು. ಕೆಫೆಟೇರಿಯಾಗೇ ಹೋಗಿ ಒಂದು ಕಪ್ ಕಾಫಿ ಹೀರಿ ಬರುವಷ್ಟರಲ್ಲಿ ಗಂಟೆ ಏಳಾಗಿತ್ತು. ಕಾನ್ಫರೆನ್ಸ್ ರೂಮ್ ಹೊಕ್ಕು ನಂಬರ್ ಡಯಲ್ ಮಾಡಿ ಹಲೋ ಅಂದೆ.. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.... ಮತ್ತೊಂದೆರಡು ಸಲ ಹಲೋ ಹಲೋ ಅನ್ನುವಾಗ ಆ ಕಡೆಯಿಂದ ಗೊರ ಗೊರ ಧ್ವನಿ ಕೇಳಿಸಿತು.. ಸರಿಯಾಗಿ ಮಾತು ಕೇಳಿಸದು, ಕಾಲ್ ಕಟ್ ಮಾಡಿ ಆ ಕಡೆಯವರ ಪ್ರತಿಕ್ರಿಯೆಗೆ ಕಾದೆ... ಟೆಕ್ನಿಕಲ್ ಪ್ರಾಬ್ಲಾಮಿಂದ ಕಾಲನ್ನು ನಾಳೆಗೆ ಮುಂದೂಡಲಾಗಿದೆ ಅನ್ನೋ ಮೆಸೇಜು ಸಿಕ್ಕಿತು. ಬಹಳ ಖುಷಿಯಾಗಿ ಹೊರಬರಲು ಎದ್ದೆ.. ಅದೇ ಸಮಯಕ್ಕೆ ಮೊಬೈಲ್ ರಿಂಗಣಿಸಿತು. ಐದಾರು ತಿಂಗಳ ಬಳಿಕ ಗೆಳತಿ ಕಾಲ್ ಮಾಡಿದ್ದಳು. ಅವಳ ಜೊತೆ ಹಾಗೆ ಹರಟುತ್ತಾ ಅಲ್ಲೇ ಕುಳಿತೆ. ಅವಳ ಜೊತೆ ಮಾತಾಡುತ್ತಿರುವಾಗಲೇ 7:30ರ ಹೊತ್ತಿಗೆ ನನ್ನ ಮೊಬೈಲ್ ಕೀ ಕೀ ಅಂದಿತು.. ಒಂದು ವರ್ಷದಿಂದ ಪತ್ತೇನೆ ಇರದ ಗೆಳೆಯ ಚನ್ನೈ ನಿಂದ ಕಾಲ್ ಮಾಡಿದ್ದ. ಗೆಳತಿಗೆ ನಿನಗೆ ಮತ್ತೊಮ್ಮೆ ಕಾಲ್ ಮಾಡುವೆ ಅಂತ ಕಟ್ ಮಾಡಿ ಅವನ ಕಾಲ್ ರಿಸಿವ್ ಮಾಡಿದೆ... ಹಳೆ ಕಂಪನಿ, ಈಗಿನ ಕೆಲ್ಸಾ, ಮದುವೆ ವಿಚಾರ..ಅದು ಇದು ಮಾತುಕತೆ ಮುಗಿಯೋ ಹೊತ್ತಿಗೆ ಗಂಟೆ ಎಂಟಾಗಿತ್ತು... ಒಟ್ಟಿನಲ್ಲಿ ಒಂದು ಗಂಟೆಯ ಸಮಯ ಕಾಲಲ್ಲೇ ಕಳೆಯಬೇಕೆಂದು ನಿಶ್ಚಯವಾಗಿತ್ತೇನೋ?? ತಪ್ಪಿಸಲು ಸಾಧ್ಯವಾಗಲ್ಲಿಲ್ಲ.... ಸುಮಾರು 8:15ರ ಹೊತ್ತಿಗೆ ಗಾಡಿ ಏರಿ ಮನೆ ಕಡೆ ಹೊರಟೆ...ಯಾವುದೋ ವಿಚಾರವಾಗಿ ಮನಸ್ಸಿನಲಿ ಲೆಕ್ಕ ಹಾಕುತ್ತಾ ತೀರಾ ಅಲ್ಲದ್ಡಿದ್ದರೂ ಸ್ವಲ್ಪ ಜಾಸ್ತಿನೇ ಯೋಚನೆ ಮಾಡುತ್ತಾ ಮನೆ ಸೇರುವಷ್ಟರಲ್ಲಿ 9:15 ಆಗಿತ್ತು..
ಹೊಟ್ಟೆ ತಾಳ ಹಾಕುತ್ತಿತ್ತು.. ಊಟ ಮಾಡಿ ಸೋಫ಼ಾದಾ ಮೇಲೆ ಕೂತು ಅಕ್ಕನ ಮಗ ಪರಿ ಬಿಡಿಸಿದ್ದ ಚಿತ್ರ ನೋಡುತ್ತಿರುವಾಗಲೇ ಅವಳು ಮತ್ತೊಮ್ಮೆ ಕರೆದಳು... ಒಂದು ನಿಮಿಷ ಬಂದೆ ತಡಿ ಅನ್ನುತ್ತಾ, ಅಲ್ಲೇ ಆಡುತ್ತಿದ್ದ ಪರಿಯನ್ನು ಕರೆದುಕೊಂಡು ರೂಮಿಗೆ ಹೋದೆಯಷ್ಟೇ... ರೂಮಿನ ಒಳಗೆ ಕಾಲಿಡುತ್ತಲೇ ಪರಿ ಇರುವುದನ್ನೂ ಗಮನಿಸದ ಅವಳು ನನ್ನನ್ನು ಮೈಮೇಲೆ ಎಳೆದುಕೊಂಡು ಅಪ್ಪಿಕೊಂಡು ಬಿಟ್ಟಳು. 15-20 ನಿಮಿಷ ಕಳೆದಿರಬಹುದು... ನನ್ನ ಮೊಬೈಲ್ ರಿನ್ಗಣಿಸಿತು. ಅವಳನ್ನು ಪಕ್ಕಕ್ಕೆ ಸರಿಸಿದ್ದೆ ತಡ.. ಮುನಿಸಿಕೊಂಡಳು.. ಅಮ್ಮ ಕಾಲ್ ಮಾಡಿದ್ದರು...ಎರಡು ವರ್ಷದ ಅಣ್ಣನ ಮಗ ನನ್ನ ಜೊತೆ ಮಾತಾಡಬೇಕೆಂದೂ ಅಜ್ಜಿಯ ಕೈಲಿ ಫೋನ್ ಮಾಡಿಸಿದ್ದ...ಕೇಶಿ ಚಿಕ್ಕಪ್ಪ ನಂಗೆ ರೆಡ್ ಸೈಕಲ್ ಬೇಕು ಅಂತ ತನ್ನ ಮುದ್ದು ಮುದ್ದಾದ ಭಾಷೆಯಲಿ ಕೇಳುತ್ತಿದ್ದ... ಏನ್ ಮಾಡ್‌ತ್ಯೋ ಸೈಕಲ್ ತೊಗೋನ್ಡು ಅಂತ ನಾನು ಕೇಳಿದರೆ.. ತುಳೀತಿನಿ ಅಂತ ಜೋರಾಗಿ ಹೇಳಿದ.. ಫೋನ್ ಇಡೊಶ್ಟರಲ್ಲಿ 10 ನಿಮಿಷವಾಗಿತ್ತು.. ಮುನಿಸಿಕೊಂಡು ದೂರ ಸರಿದಿದ್ದ ಅವಳನ್ನು ಬೆಣ್ಣೆ ಹಚ್ಚಿ ಹತ್ತಿರ ಕರೆದೆ.. ಬಂದು ಮತ್ತೆ ಅಪ್ಪಿಕೊಂಡಳು. 30 ನಿಮಿಷ ಕಳೆದಿರಬಹುದು... ಕೈ ಚಾಚಿ ಅತ್ತಿತ್ತ ಆಡಿಸಿದರೆ ಪರಿ ಸಿಗುತ್ತಿಲ್ಲ.. ಧಡಾರನೆ ಎದ್ದು ಕೂತೆ... ಅವಳು ಸಿಟ್ಟಾದಳು, ನಿನಗೆ ಕೊಬ್ಬು ಎಂದು ಹಂಗಿಸಿದಂತಿತ್ತು ಅವಳ ನೋಟ.... ಪರಿಯನ್ನ ಅವರ ಅಪ್ಪ ಕರೆದುಕೊಂಡು ಹೋಗಿದ್ದಾರೆ ಅಂತ ಗೊತ್ತಾಯಿತು... ಪುನಃ ಅವಳಿಗಾಗಿ ತಡಕಾಡಿದೆ... 10-15 ನಿಮಿಷವಾದರೂ ಅವಳ ಪತ್ತೆ ಇಲ್ಲ... ಆಮೇಲೆ ಅದೇನೆನಿಸಿತೋ.. ಅವಳಾಗೆ ಬಂದು ಮೆತ್ತಿಕೊಂಡಳು. ಬಾಹ್ಯ ಪ್ರಪಂಚದ ಪ್ರಜ್ಞೆಯೇ ಇಲ್ಲದೇ ಅವಳೊನ್ದಿಗೆ ಸರಸವಾಡುತ್ತಿದ್ದೆ.
ಜುಲೈ ೧೧
ಗಂಟೆ 12 ಆಗಿರಬಹುದು.. ಇಂಗ್ಲೀಷಿನವರ ಪ್ರಕಾರ ಜುಲೈ ತಿಂಗಳಿನ 11 ನೇ ದಿನ ಆದಾಗ ತಾನೇ ಉದಯವಾಗಿತ್ತು. ನನ್ನ ಮೊಬೈಲ್ ಸುಮಾರು ಸಲ ರಿಂಗಣಿಸುತ್ತಿದ್ದರೂ, ಅವಳ ಸನಿಹದ ಅಪ್ಪುವಿಕೆ ಆ ಶಬ್ದವನ್ನು ಕೇಳಲು ಬಿಡಲ್ಲಿಲ್ಲ... ಮನೆಯ ಕಾಲಿಂಗ್ ಬೆಲ್ಲಿನಿಂದ 90 ಡೆಸಿಬೆಲ್ ನ ಜ್ಯಾಕ್ ಹ್ಯಾಮರ್ ನಂತೆ ಹೊರಹೊಮ್ಮಿದ ಶಬ್ದಕ್ಕೆ ಅವಳು ನನ್ನಿಂದ ದೂರ ಸರಿದಳು..ಮನೆಯವರೆಲ್ಲ ಎದ್ದು ಬಾಗಿಲು ತೆರೆದರು.. ನನ್ನ ಗೆಳೆಯರ ಬಳಗ ಕೈಲಿ ಕೇಕ್ ಹಿಡಿದು ಬಾಗಿಲ್ಲಲ್ಲಿ ನಿಂತಿದ್ದರು... ನಿನಗೂ ವಯಸ್ಸಾಗುತ್ತಿದೆಯೆಂದು ಜ್ಞಾಪಿಸಲು ಎಲ್ಲರೂ ಬಂದಿದ್ದರು.. ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದೆ.. (ಈ ಬಾರಿ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಬಾರದೆಂದು ಅಂದುಕೊಂಡಿದ್ದೆ.. ಆದರೆ ರಾತ್ರಿ 12ರಲ್ಲಿ ಅಷ್ಟು ದೂರದಿಂದ ಬಂದಿದ್ದ ಅವರಿಗೆಲ್ಲ ನೋವುಂಟು ಮಾಡಬಾರದೆಂಬ ಕಾರಣಕ್ಕೆ ಕಟ್ ಮಾಡಿದೆ.. ಖಂಡಿತ ಮುಂದಿನ ವರ್ಷದಿಂದ ಹುಟ್ಟು ಹಬ್ಬದಂದು ಕೇಕ್ ಕತ್ತರಿಸದಿರಲು ಈಗಲೆ ನಿರ್ಧಾರ ಮಾಡಿದ್ದೇನೆ.) ಎಲ್ಲರಿಗೂ ಕೇಕ್ ತಿನ್ನಿಸಿ, ಗಿಫ್ಟ್ ಇಸ್ಕೊಂಡು ಅವರನ್ನೆಲ್ಲ ಬೀಳ್ಕೊಟ್ಟು ಮನೆ ಒಳಗೆ ಬಂದೆ.. ಮನೆಯವರೆಲ್ಲ ಮಲಗಿದ್ದರು... ನಾನು ರೂಮು ಸೇರಿ ಅವಳಿಗಾಗಿ ತಡಕಾಡಿದೆ... ಅವಳ ಸುಳಿವೇ ಇಲ್ಲ.. ಎಷ್ಟು ಹೊತ್ತಾದರೂ ಪತ್ತೇನೆ ಇಲ್ಲ.. ಎಷ್ಟೇ ಪ್ರಯತ್ನ ಪಟ್ಟರೂ ಅವಳು ಬರಲು ಒಪ್ಪಲೇ ಇಲ್ಲ...3-4 ಸಲ ಪಕ್ಕಕ್ಕೆ ಸರಿಸಿ ಹೋಗಿದ್ದಕ್ಕೆ ತಕ್ಕ ಶಾಸ್ತಿ ಮಾಡಿದ್ದಳು...ಇಡೀ ರಾತ್ರಿ ಅವಳು ಮರಳಿ ಬರಲೇ ಇಲ್ಲ.. ಧನ್ಯವಾದದ ಜೊತೆಗೆ ಅವಳನ್ನು ನನ್ನಿಂದ ದೂರ ಓಡಿಸಲು ನೀವೇ ಕಾರಣ ಕರ್ತರು ಅಂತ ಗೆಳೆಯರಿಗೆ ಮೆಸೇಜು ಮಾಡಿದರೆ, ಆಮೀಕೊಂಡು ಮಲ್ಕೊಳಪ್ಪ ಅಂತ ರಿಪ್ಲೈ ಮಾಡಿದರು.
ಮಧ್ಯಾಹ್ನ 2 ಗಂಟೆ:
ರಾತ್ರಿ ಎಷ್ಟು ಗೋಗರೆದು ಕರೆದರೂ ಬರದ ಅವಳು ಈಗ ಮೈಮೇಲೆ ಬೀಳುತ್ತಿದ್ದಾಳೆ.. ಆಫೀಸಿನಲಿ ಬೇಡ ಸುಮ್ಮನಿರೆ ಎಂದರೂ ಬಿಡುತ್ತಿಲ್ಲ... ಅವಳಿಂದ ಬಿಡಿಸಿಕೊಂಡು ಇದನ್ನ ಬರೆಯೋಅಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಹುಟ್ಟುಹಬ್ಬದ ಕಾರಣ ನೀಡಿ, ಅರ್ಧ ದಿನ ರಜ ಹಾಕಿ, ಅವಳನ್ನು ಕರೆದುಕೊಂಡು ಮನೆಗೆ ಹೋಗೋಣ ಅಂದುಕೊಂಡೆ.. ಬೇಡವೆನಿಸಿ, ಅವಳಿಗೆ ರಾತ್ರಿ ನಿನ್ನ ಬಳಿ ಬೇಗ ಬರುತ್ತೇನೆ ಎಂದು ಸಮಾಧಾನಪಡಿಸಿ, ಹೇಗೋ ಒಪ್ಪಿಸಿ ಕಳುಹಿಸಿದೆ.
ನಾನು ಅತಿ ಹೆಚ್ಚು ಪ್ರೀತಿಸುವ ಅವಳನ್ನು ಅಂದರೆ ನಿದ್ರಾದೇವಿಯನ್ನು ಹಾಗೆ ಕಳುಹಿಸಿದ್ದಕ್ಕೆ ಮನಸ್ಸಿಗೆ ಬಹಳ ಖೇದವಾಯಿತು.
*********************************
ha ha ha ha Excellent sir.....
ReplyDeleteDhanyavaadagalu madam :D :) (Sir anta anbedi kanri :D)
DeleteNice,romantic feel kodthu
DeleteThank you :)
DeleteThis comment has been removed by the author.
ReplyDelete