Pages

Monday, April 2, 2012

ಅವಳ ಕಾಲ್ ಬರುತ್ತಾ?? - ಭಾಗ ೪

ಹರನ ಹಾರನ ಆಹಾರನ ಸುತನ ಸ್ವಾಮಿಯ ಕಡುವೈರಿಯ ಅನುಜನ ಪ್ರೇಯಸಿಯು ನನಗೆ ಒಲಿದುಬಿಟ್ಟಿದ್ದಳು. (ಹರ - ಶಿವ, ಶಿವನ ಹಾರ - ಹಾವು, ಹಾವಿನ ಆಹಾರ - ಗಾಳಿ, ವಾಯು, ವಾಯುಸುತ - ಆಂಜನೇಯ, ಆಂಜನೇಯನ ಸ್ವಾಮಿ - ರಾಮ, ರಾಮನ ಕಡುವೈರಿ - ರಾವಣ, ರಾವಣನ ಅನುಜ - ಕುಂಭಕರ್ಣ, ಕುಂಭಕರ್ಣನ ಪ್ರೇಯಸಿ - ನಿದ್ರಾದೇವಿ). ಹೊಟ್ಟೆ ಚುರುಗುಟ್ಟಿದಾಗಲೇ ಎಚ್ಚರವಾದ್ದದ್ದು. ಟೈಟನ್ ಗೋಡೆ ಗಡಿಯಾರದಲ್ಲಿ ಚಿಕ್ ಮುಳ್ಳು ಐದರ ಮೇಲೂ ದೋಡ್ ಮುಳ್ಳು ೧೧-೧೨ರ ಮಧ್ಯೆ ನಿಂತಿದ್ದನ್ನು ಕಣ್ಣು ಪೂರ್ತಿ ತೆರೆಯದೇ ನೋಡಿದೆ. ಹತ್ತು ತಾಸುಗಳ ದೀರ್ಘನಿದ್ದೆ. ಹಾಗೆ ಏಳಲು ಅರ್ಧ ಎದ್ದವನು ಮತ್ತೆ ಮಲಗಿ ಬಲ ಮಗ್ಗುಲಿಗೆ ತಿರುಗಿ ಎದ್ದು ಕೂತೆ.  ಮೈ ಕೈ ಮುರಿದು ಕಣ್ಣುಜ್ಜಿಕೊಂಡು ನಿಧಾನವಾಗಿ ಕಣ್ಣು ಬಿಟ್ಟೆ.

ಟೇಬಲ್ ಮೇಲಿಟ್ಟಿದ್ದ ಅವಳ ನಗುಮೊಗದ ಫೋಟೋ ನನ್ನನ್ನೇ ನೀರೀಕ್ಷಿಸುತ್ತಿರುವಂತೆ ಗುಡ್ ಈವ್ನಿಂಗ್ ಅಂದಿತು. ಟೇಬಲ್ ಗೆ ಗಲ್ಲ ಆನಿಸಿ ನಿನ್ನ ಈ ಫೋಟೋ ನನ್ನ ಬಳಿ ಬಂದದ್ದಾದರೂ ಹೇಗೆ ನಿನಗೆ ಗೊತ್ತೇನೆ? ಅಂದೆ. ಒಬ್ಬನೇ ಮಾತಾಡಿಕೊಳ್ಳುತ್ತಿದ್ದೇನೆ, ನನಗೇನು ಹುಚ್ಚು ಹಿಡಿದಿದೆಯೇ ಅನಿಸಿತು. ತಕ್ಷಣ ಮೊಬೈಲ್  ನೆನಪಾಗಿ ದಿಂಬಿನ ಕೆಳಗಿದ್ದ ಮೊಬೈಲ್ ನ ತೆಗೆದು ನೋಡಿದೆ. ಮಾಸ್ಟರ್ ಸಿಮ್: ೭ ಮಿಸ್ಡ್ ಕಾಲ್ಸ್ ಅನ್ನೋ ಟೆಕ್ಸ್ಟ್ ಮೊಬೈಲ್ ನ ಆ ಮೂಲೆಯಿಂದ ಈ ಮೂಲೆಗೆ ಓಡುತ್ತಿತ್ತು. ಏಳರಲ್ಲಿ ಒಂದಾದರೂ ಅವಳದಾ??

ಮಿಸ್ಡ್ ಕಾಲ್ಸ್ ಲಿಸ್ಟ್ ಓಪನ್ ಮಾಡಿದೆ. ೩ ಕಾಲ್ಸ್ ಅಮ್ಮ ಮಾಡಿದ್ದಳು. ೨:೦೦PM ೨:೦೫PM ೪:೩೦PM. ಅಮ್ಮ ಕಾಲ್ ಮಾಡಿದಾಗ ನಾನು ರಿಸೀವ್ ಮಾಡದ್ದಿದ್ದರೆ ನಾನೇ ಫೋನ್ ಮಾಡುವರೆಗೂ ಮತ್ತೊಮ್ಮೆ ಮಾಡುವುದಿಲ್ಲ. ಮಗ ಏನೋ ಕಡಿದು ಕಟ್ಟೆ ಹಾಕುತ್ತಿದ್ದಾನೆಂದೆ ಅಮ್ಮನ ನಂಬಿಕೆ. ತಕ್ಕ ಮಟ್ಟಿಗೆ ಅದು ನಿಜವಾದರೂ ಸದಾ ನಾನೇನು ಅಮ್ಮ ಎಣಿಸಿದಷ್ಟು ಬ್ಯುಸಿ ಇರುವುದಿಲ್ಲ.  ಅಂತದರಲ್ಲಿ ಇಂದು ಅಮ್ಮ ೩ ಬಾರಿ ಮಾಡಿದ್ದಾಳೆ ಅಂದರೆ?ತಕ್ಷಣ ಅಮ್ಮನಿಗೆ ಕಾಲ್ ಮಾಡಿದೆ. ರಾಘವೇಂದ್ರ ಗುರು ರಾಜರ ಸೇವಿಸಿರೋ ಸೌಖ್ಯದಿ ಜೀವಿಸಿರೋ ರಾಘವೇಂದ್ರ ಗುರು....  ರಾಯರೆ ಎಲ್ಲಾ ಕ್ಷೇಮ ತಾನೇ?

ಅಮ್ಮ ಕಾಲ್ ರಿಸೀವ್ ಮಾಡಿದಳು. ಏನಮ್ಮಾ ಸಮಾಚಾರ ಅಂದೆ. ೪ ದಿನ ಏನೋ ಕೆಲ್ಸಾ ಇದೆ, ಶನಿವಾರ ಬೆಳಗ್ಗೆನೆ ಊರಿಗೆ ಬರ್ತೀನಿ ಅಂದಿದ್ದಲೊ? ಮಧ್ಯಾನ್ಹವಾದ್ರೂ ಬರ್ಲಿಲ್ವಲ? ಊಟಕ್ಕೆ ಕಾಯ್ತಾ ಇದ್ದೆ. ಗಂಟೆ ೨ ಆದ್ರೂ ನೀನ್ ಬರ್ದೇ ಇದದ್ದು ನೋಡಿ ೨ ಸಲಿ ಕಾಲ್ ಮಾಡಿದೆ. ಯಾಕೋ ನಂಗೂ ಊಟನೆ ಸೇರ್ಲ್ಲಿಲ್ಲ. ನಿಂದು ಊಟ ಆಯ್ತಾ? ಎನ್ ಮಾಡ್ತಿದ್ದಿ? ಅಮ್ಮ ಒಂದೇ ಉಸಿರಿಗೆ ಎಲ್ಲ ಹೇಳಿಬಿಟ್ಟಳು. ನಾನು ಇಲ್ಲ ಹೂ ಅಂತ ತಡವರಿಸಿದೆ. ನಂಗೋತ್ತು ನೀನು ಊಟ ಮಾಡಿಲ್ಲ, ಹೋಗು, ಏನಾದ್ರೂ ತಿಂದು ಮತ್ತೆ ಕಾಲ್ ಮಾಡು ಅಂದ್ಲು. ೪:೩೦ಕ್ಕೆ ಯಾಕ್ ಮಾಡಿದ್ದೆ? ಅಂದೆ. ಊಟ ಮಾಡಿ ಕಾಲ್ ಮಾಡು ಹೇಳ್ತೀನಿ, ನನಗೂ ಪುರಾಣಕ್ಕೆ ಹೊತ್ತಾಯಿತು. ಹಾ ನೆನಪಿರಲಿ ಇವತ್ತು ರಾತ್ರಿ ಬಸ್ ಗೆ ಹೊರಟು ಬಾ ಅಂದು ಇಟ್ಟೆಬಿಟ್ಟಳು.  ನಾನಿಲ್ಲಿ ಊಟ ಮಾಡದೇ ಇರೋಕು ಅಲ್ಲಿ ಅಮ್ಮನಿಗೆ ಊಟ ಸೇರದೇ ಇರೋಕು?? ಈ ತಾಯಿ ಮಕ್ಕಳ ಸಂಬಂಧ ಒಂಥರ ಸಿಗ್ನಲ್ ಲೆಸ್ ಕಮ್ಯೂನಿಕೇಶನ್ ಅನಿಸಿತು. ಅಂತಹ ಸಂಬಂಧ ಭಗವಂತನೊಬ್ಬನಿಂದಲೇ ಸೃಷ್ಟಿಸಲು ಸಾಧ್ಯ.

ಮತ್ತೊಮ್ಮೆ ಮಿಸ್ಡ್ ಕಾಲ್ಸ್ ಲಿಸ್ಟ್ ತೆರೆದೆ. ೨ ಕಾಲ್ಸ್ ಊರಿಂದ ಬರಬೇಕಿದ್ದ ಗೆಳೆಯ ಮಾಡಿದ್ದ. ಹೌದಲ್ಲವಾ? ಇಷ್ಟೊತ್ತಿಗಾಗಲೇ ಅವನು ಬಂದಿರಬೇಕಿತ್ತು. ಇರಲಿ ಅವನಿಗೆ ಆಮೇಲೆ ಕಾಲ್ ಮಾಡಿದರಾಯಿತು ಅನಿಸಿ ಉಳಿದ ೨ ನಂಬರ್ ಚೆಕ್ ಮಾಡಿದೆ. ಒಂದು ನಂಬರ್ ೩ ವಾರದಿಂದ ಲೈಫ್ ಇನ್ಷೂರೆನ್ಸ್ ಮಾಡಿಸಿಕೊ ಅಂತ ದಂಬಾಲು ಬಿದ್ದಿದ್ದ ಯಾಸ್ಮೀದು. ಅವಳ ಮಧುರವಾದ ಧ್ವನಿಗೆ ಮನಸೋತು ಶನಿವಾರ ಕಾಲ್ ಮಾಡು ಎಲ್ಲಾದರೂ ಸಿಕ್ಕಿ ಮಾತಾಡೋಣ ಅಂತ ನಾನೇ ಹೇಳಿದ್ದೆ. ಆ ಇನ್ನೊಂದು ನಂಬರ್ರೇ ನನ್ನನ್ನು ಬೆಚ್ಚಿ ಬೀಳಿಸಿದ್ದು. ೯೪೮೧೦-೩೪೪೩೪. ಮತ್ತೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಹೌದು.. ಅದೇ ನಂಬರ್.
ತಕ್ಷಣ ಡೈಯಲ್ ಮಾಡಿದೆ. the mobile number u r trying to connect is currently switched off. please try again after sometime ನೀವು ಡೈಯಲ್ ಮಾಡಿದ ನಂಬರ್.......... ಪೂರ್ತಿ ಕೇಳಿಸಿಕೊಂಡೆ.

ಹಸಿವೆ ತಾಳಲಾರದೇ ಬೇಗ ಬೇಗ ಮುಖ ತೊಳೆದು ರೆಡೀ ಆಗಿ ನನ್ನ ಮ್ಯಾಕ್ಸ್೧೦೦ ಬೈಕ್ ಏರಿದೆ. ತಲೆಯಲ್ಲಿ ಹುಳ, ಆ ನಂಬರಿಂದ ಯಾರು ಕಾಲ್ ಮಾಡಿರಬಹುದು? ಬೈಕ್ ಬಂದು ನ.ರಾ ಕಾಲೋನಿಯ ಹೋಟೆಲ್ ದ್ವಾರಕ ಮುಂದೆ ನಿಂತಿತು. ಒಂದು ಪ್ಲೇಟ್ ಬಿಸಿ ಬಿಸಿ ಬೆಣ್ಣೆ ಖಾಲಿ ದೋಸೆ ತಿಂದು, ಪಕ್ಕದಲ್ಲೇ ಇದ್ದ ಹಟ್ಟಿ ಕಾಫಿಲಿ ಒಂದು ಕಾಫಿ ಹೀರಿದೆ. ಗಂಟೆ ೫:೪೫. ಗೆಳೆಯನಿಗೆ ಕಾಲ್ ಮಾಡಿದೆ. ದೇಸಿ ಗರ್ಲ್ ಆ ದೇಸಿ ಗರ್ಲ್ ಗರ್ಲ್ ..ರ್ಲ್ ರ್ಲ್....ಆ ಕಡೆ ಧ್ವನಿ, ಮಗ ಏನೋ ಕೆಲಸ ಇದ್ಯೋ, ನಾನು ಸೋಮವಾರ ಬೆಳಗ್ಗೆ ಬರ್ತೀನಿ. ರಿಸೆಪ್ಶನ್ ಲಿ ಸೌಂದರ್ಯಾ ಅವ್ನ್ ಯಾಕ್ ಬರ್ಲ್ಲಿಲ್ಲ ಅಂದ್ರೆ  ಏನೋ ಒಂದು ಓಳು ಬಿಡು ಅಂದ. ಲೊ ಅಂತ ನಾನ್ ಏನೋ ಹೇಳಲು ಹೊರಟರೆ ಅವನು ನಿಂಗ್ ಓಳ್ ಬಿಡಡು ಹೇಳ್ಕೊಡ್ಬೇಕಾ?? ಏನೋ ಒಂದ್ ಹೇಳೋ ಅಂತ ಫೊನಿಟ್ಟ. ಅಬ್ಬಾ.. ಇವತ್ತು ಇವ್ನ್ ಊರಿಗೆ ಬರ್ತಿಲ್ಲ. ಮನಸ್ಸಿಗೆ ಅರ್ಧ ನಿರಾಳವಾಯಿತು. ಅವನಿಗೆ ಹೆದರೆ ತಾನೇ ನಿದ್ದೆ ಮಾಡಿದ್ದು, ಮನಸ್ಸಲ್ಲೇ ಅವನಿಗೊಂದು ಥ್ಯಾಂಕ್ಸ್ ಅಂದೆ.

ಬೈಕ್ ಮನೆ ಕಡೆ ತಿರುಗಿಸಿದೆ. ಬರುವಾಗ ದಾರಿಯಲಿ ಒಂದು ಚಿಕ್ಕ ಬೊಕ್ಕೆ ತೆಗೆದುಕೊಂಡೆ. ಗೇಟ್ ಆಚೆಯೇ ಬೈಕ್ ನಿಲ್ಲಿಸಿದೆ. ನಾನು ಗೇಟ್ ಸರಿಸಿ ಮನೆ ಕಡೆ ನಡೆದಂತೆ ಸಂಯುಕ್ತ ಗೊತ್ತಾಗದಂತೆ ನನ್ನ ಹಿಂಬಾಲಿಸಿದಳು. ಮನೆ ಬೀಗ ತೆರೆದು ಲೈಟ್ ಆನ್ ಮಾಡಿದೆ. ಕೈಯಲ್ಲಿದ್ದ ಕ್ಯಾಮರಾವನ್ನು ಟೀವೀ ಪಕ್ಕ ಇಟ್ಟು ಒಂದು ಕೈಯಲ್ಲಿ ತಾನುಟ್ಟಿದ್ದ ಗಿಣಿ ಹಸಿರು ಬಣ್ಣದ ಮೈಸೂರ್ ಸಿಲ್ಕ್ ಸೀರೆಯ ಸೆರಗನ್ನು ಎತ್ತಿ ಹಿಡಿದು ಮತ್ತೊಂದು ಕೈಯನ್ನು ಸೊಂಟದ ಮೇಲೆ ಇಟ್ಟು ನನ್ನ ಕಡೆ ತಿರುಗಿ ಹೇಗೀದೀನಿ?? ಅಂತ ಹುಬ್ಬೇರಿಸಿದಳು. ನೋಡುವುದಕ್ಕೆ ಒಳ್ಳೇ ಅಪ್ಸರೆ ತರ ಕಾಣ್ತಿದ್ಲು. ಇಂಥ ಚೆಂದ ಹುಡುಗಿ ನನ್ ಹಿಂದೆ ಬಿದ್ದಿದ್ರೂನೂ ನಾ ಯಾಕೆ ಅವಳ ಹಿಂದೆ ಹೋಗ್ತಿದೀನಿ? ಅನಿಸಿತು.  ಕೈಯಲ್ಲಿದ್ದ ಬೊಕ್ಕೆಯನ್ನು ಟೇಬಲ್ ಮೇಲಿಡುತ್ತಾ ಲೇ ಏನೇ ಇದು ನಿನ್ನವತಾರ? ಯಾರೇ ಉಡ್ಸಿದ್ದು ನಿಂಗೆ ಸೀರೆ? ಅಂದೆ. ಕಾಲೇಜಲ್ಲಿ ಇವತ್ತು ಎತ್ನೀಕ್ ಡೇ ಇತ್ತು. ಅಮ್ಮ ಉಡ್ಸಿದ್ದು ಸೀರೆ. ಚೆನ್ನಾಗ್ ಕಾಣ್ತಿದೀನೋ ಇಲ್ವೋ ಹೇಳೋ? ಅಂತ ಬೇಡುವ ಧ್ವನಿಯಲ್ಲಿ ಕೇಳಿದಳು. ಆಹಾ ಏನ್ ಚೆನ್ನಾಗಿದ್ಯೋ ಏನೋ? ಲೈಟ್ ಕಂಬಕ್ಕೆ ಸೀರೆ ಉಡ್ಸಿದ ಹಾಗೆ ಇದೆ ನಿಂಗೇನ್ ಬೇರೆ ಕೆಲ್ಸಾ ಇಲ್ವಾ? ಹೋಗೆ ಹೋಗೆ ಅಂದು ಬೈಕ್ ಕೀ ಇಡಲು ಟೀವೀ ಕಡೆ ನಡೆದೆ. ಸಂಯುಕ್ತಾಳ ಮುಖ ಚಿಕ್ಕದಾಗಿತ್ತು, ಟೇಬಲ್ ಮೇಲಿಟ್ಟಿದ್ದ ಬೊಕ್ಕೆಯನ್ನೊಮ್ಮೆ ದುರುಗುಟ್ಟಿ, ನನ್ನನ್ನೇ ನೋಡುತ್ತಾ ಅವಳು ಬಾಗಿಲಿನ ಕಡೆ ಸಾಗಿದಳು . ತೀರಾ ಅವಳು ಬಾಗಿಲು ದಾಟುವ ಮುನ್ನ ನಾನೇ ಕರೆದು ಅಯ್ಯೋ ಹುಚ್ಚಿ ನಾನು ನಿನ್ನನ್ನು ರೇಗಿಸುತ್ತಿದ್ದೇಯಷ್ಟೇ. ನಿನಗೆ ಈ ಸೀರೆ ತುಂಬಾ ಚೆನ್ನಾಗಿ ಒಪ್ಪುತ್ತೆ. ಬಾ ಇಲ್ಲಿ ಅಂತ ಕರೆದು ಬೊಕ್ಕೆಯಿಂದ ಒಂದು ಗುಲಾಬಿಯನ್ನು ಕಿತ್ತು ದಿಸ್ ಈಸ್ ಫಾರ್ ಸ್ವೀಟ್ ಗರ್ಲ್ ಸಂಯುಕ್ತಾ ಅಂತ ಅವಳ ಕೈಗಿತ್ತೆ. ಸಂಯುಕ್ತಾಳ ಖುಷಿಗೆ ಪಾರವೇ ಇರಲ್ಲಿಲ್ಲ. ಗುಲಾಬಿಯನ್ನು ತನ್ನ ಉದ್ದ ಜಡೆಯ ಮಧ್ಯದಲ್ಲಿ ಸಿಕ್ಕಿಸಿ ಟೀವೀ ಪಕ್ಕ ಇಟ್ಟಿದ್ದ ಕ್ಯಾಮರಾ ತೆಗೆದು ನನ್ನ ಕೈಗಿಡುತ್ತಾ ಫೋಟೋ ಪೋಸ್ ಕೊಡುತ್ತಾ ನಿಂತಳು. ಸ್ಮೈಲ್ ಅಂದು ಅವಳದ್ದೊಂದು ಚೆಂದ ಫೋಟೋ ಕ್ಲಿಕ್ಕಿಸಿ ಕ್ಯಾಮರ ವಾಪಸ್ ಕೊಟ್ಟು ನಡಿ ಮನೆ ಕಡೆಗೆ ಅಂದೆ.

ಕರಿ ಬಣ್ಣದ ಪ್ಯೂಮ ಶೂಸಿನ ಲೇಸ್ ಕಟ್ಟುತ್ತಿದ್ದೆ. ಇದ್ದಕ್ಕಿದ್ದಂತೆ ಏನೋ ನೆನಪಾಗಿ ರೂಮಿಗೆ ಓಡಿದೆ. ನನ್ನ ಪರ್ಸನಲ್ ಡಾಕ್ಯುಮೆಂಟ್ಸ್ ಇಡುತ್ತಿದ್ದ ಬ್ಯಾಗನ್ನು ತೆರೆದು ಆ ಹಳೆ ಚಿಕ್ಕ ಪುಸ್ತಕಕ್ಕೆ ತಡಕಾಡಿದೆ. ಕೊನೆಗೂ ಸಿಕ್ಕಿತು. ಅದನ್ನು ಪರ್ಸಿನೊಳಗೆ ಸೇರಿಸಿ, ಮತ್ತೊಂದು ಶೂ ಏರಿಸಿ ಮನೆ ಬೀಗ ಹಾಕಿ ಬೊಕ್ಕೆಯನ್ನು ಹಿಡಿದು ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಕಡೆ ಗಾಡಿ ತಿರುಗಿಸಿದೆ. ಸೌಂದರ್ಯಾಗೆ ಬೊಕ್ಕೆ ಕೊಟ್ಟು ವಿಶ್ ಮಾಡಿ ಹೊರ ಬಂದು ನೇರವಾಗಿ ರಾಮಾಂಜನೇಯ ಗುಡ್ಡ ಹತ್ತಿದೆ. ಕಡೆಯ ಬಾರಿ ನಾನು ಅಲ್ಲಿಗೆ ಹೋದದ್ದು ೭ ವರ್ಷಗಳ ಕೆಳಗೆ. ಆಗಲೂ ಒಬ್ಬನೇ. ಈಗಲೂ ಒಬ್ಬನೇ. ಮನಸಲ್ಲಿ ಅವಳು ಆ ನಂಬರಿಂದ ಮತ್ತೆ ಕಾಲ್ ಮಾಡುವಳಾ?? ಯೋಚಿಸುತ್ತಿದ್ದೆ.


No comments:

Post a Comment