Pages

Wednesday, April 4, 2012

ಅವಳ ಕಾಲ್ ಬರುತ್ತಾ?? - ಭಾಗ ೬


ಬಸ್ ಸ್ಟ್ಯಾಂಡಿನ ರೋಡಿನಲಿ ಮಹಾ ತಿಮಿರ. ಸ್ಟ್ರೀಟ್ ಲೈಟ್ ಗಳು ಆರಿದ್ದವು. ರೋಡು ತೀರಾ ಡೌನ್ ಇದ್ದದ್ದರಿಂದ ಬೈಕ್ ನ ಏಕ್ಸಿಲ್ಯಾರೆಟರ್ ಕಡಿಮೆ ಮಾಡಿ ಹೆಡ್ ಲೈಟ್ ನೇರ ಮಾಡಿದೆ. ಅವಳ ಮನೆ ಪಕ್ಕದ ಓಣಿಯಲಿ ಬೈಕನ್ನು ಪಾರ್ಕ್ ಮಾಡಿ ಮತ್ತೆ ಮುಖ್ಯ ರಸ್ತೆಯಲ್ಲಿ ಅವಳ ಮನೆಯತ್ತ ಹೆಜ್ಜೆ ಹಾಕಿದೆ. ನಾನಂದುಕೊಂಡದ್ದು ನಿಜವಾಗಿತ್ತು. ಮನೆಯ ಹೊರಗಡೆಯ ದೀಪ ಹಾಕಿಕೊಂಡು ಅವರು ಮೂರೂ ಜನ ಬಾಲ್ಕನಿಯಲ್ಲಿ ನಿಂತಿದ್ದುದ್ದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಅವಳು ಗ್ರಿಲ್ ಮೇಲೆ ಮೊಣಕೈ ಊರಿ ತನ್ನ ಬೊಗಸೆಯಲ್ಲಿ ಮುಖವನ್ನು ತಂಪಾದ ಗಾಳಿಗೆ ಒಡ್ಡಿ ಬಗ್ಗಿ ನಿಂತಿದ್ದಳು. ಕತ್ತಲಿನಲಿ ನಡೆಯುತ್ತಿರುವ ನನ್ನನ್ನು ಆ ನೂರಾರು ಜನ ಓಡಾಡುತ್ತಿರುವ ಬಸ್ ಸ್ಟ್ಯಾಂಡ್ ರಸ್ತೆಯಲಿ ಅವಳು ಗುರುತಿಸುವುದು ಕಷ್ಟ ಅಂತ ನಾನು ಊಹಿಸಿದ್ದು ತಪ್ಪಾಗಿತ್ತು. ಅವರ ಮನೆಗೆ ಇನ್ನೆರಡೇ ಹೆಜ್ಜೆ. ಬೀದಿ ಬೀಪ ಹತ್ತಿಬಿಟ್ಟಿತು. ತಕ್ಷಣ ನಾನು ತಲೆಯೆತ್ತಿ ಬಾಲ್ಕನಿ ಕಡೆ ನೋಡಿದೆ. ಅವಳಾಗಲೇ ಬಾಗಿಲಿನ ಕಡೆ ಹೋಗುತ್ತಿದ್ದಳು. ಅವಳಮ್ಮ ಲೇ ಎಲ್ಲೋ ಹೋಗ್ತಿದ್ಯಾ? ನಮ್ಮನೆಗೆ ಬಂದೆ ತಾನೇ? ಬಾ ಒಳಗಡೆ ಅಂತ ಮಹಡಿಯ ಕಡೆ ಕೈ ತೋರಿಸುತ್ತಾ ಹೇಳಿದರು.

ನಾನು ಮಹಡಿ ಹತ್ತಿ ಹೋದೆ. ಕಲಾ ನನ್ನನ್ನು ಒಳ ಬರ ಹೇಳಿ ಅಡುಗೆ ಮನೆ ಕಡೆ ಹೋದಳು. ಅಲ್ಲೇ ಕೂತು ಲ್ಯಾಪ್‌ಟಾಪ್ ಇಟ್ಟುಕೊಂಡು ಏನೋ ಕುಟ್ಟುತ್ತಿದ್ದ ಅವಳಪ್ಪನಿಗೆ ಎನ್ ಅಂಕಲ್, ಆರಾಮ? ಕೆಲ್ಸಾ ಜೋರು ಅನ್ಸುತ್ತೆ? ಅಂದೆ. ಹೂ ನಪ್ಪ, ನೀ ನಡಿ ಒಳಗೆ, ನಾನು ಇನ್ನೊಂದರ್ಧ ಗಂಟೆಲಿ ಬಂದ್ಬಿಡ್ತೀನಿ, ಸ್ವಲ್ಪ ಕೆಲ್ಸಾ ಇದೆ ಅಂತ ಮತ್ತೆ ಲ್ಯಾಪ್‌ಟಾಪ್ ಕುಟ್ಟಲು ಶುರು ಮಾಡಿದರು. ನಾನು ವರಾ೦ಡದೊಳಗೆ ಕಾಲಿಡುತ್ತಿದ್ದಂತೆ, ಹಾಲಿನಲ್ಲಿದ್ದ ವಿಮಲ ರೂಮು ಸೇರಿ ಬಾಗಿಲು ಮುಂದೆ ಮಾಡಿಕೊಂಡುಬಿಟ್ಟಳು. ನೀರಿನ ಲೋಟವನ್ನು ಕೊಡುತ್ತಾ ಕಲಾ ಎಲ್ಲಾರೂ ಕ್ಷೇಮಾನ? ಊರಿಗ್ ಹೋಗ್ಲೀಲ್ಲ್ವಾ? ಅಂದಳು. ಹೂ ಕಲಾ ಎಲ್ಲಾ ಆರಾಮು, ಊರಿಗ್ ಈಗ ಹೋಗ್‌ಬೇಕು ಅಮ್ಮ ಫೋನ್ ಮಾಡಿದ್ರು ಅಂದೆ.

 ಖಾಲಿ ಲೋಟವನ್ನು ಟೀಪಾಯಿ ಮೇಲಿಡುತ್ತಿದ್ದವನಿಗೆ, ಟೀಪಾಯಿಯ ಮತ್ತೊಂದು ಬದಿಯಲ್ಲಿದ್ದ ೨ ಮೊಬೈಲ್ ಫೋನ್ ಕಾಣಿಸಿತು. ಒಂದು ಸ್ಯಾಂಸಂಗ್ ಕಾರ್ಬೀ... ವಿಮಲಳದು. ಮತ್ತೊಂದು  ನೋಕಿಯಾ ೧೧೦೦ ಹಳೇ ಮೊಬೈಲ್. ನಾನು ಆ ಮೊಬೈಲ್ ನೇ ನೋಡುತ್ತಿರುವುದನ್ನು ಗಮನಿಸಿದ ಕಲಾ, ನೋಡೋ ಅದೆಲ್ಲೋ ಬಿದ್ದಿದ್ದ ಮೊಬೈಲ್ ನ ೨-೩ ದಿನದಿಂದ ಹುಡುಕಿ ತೆಗ್ದಿಟ್ಟಿದ್ದಾಳೆ ಅಂದ್ಲು. ನಾನು ಓಹ್ ಹೌದಾ? ಯಾಕಂತೆ?. ಅಯ್ಯೋ ನಂಗೂ ಗೊತ್ತಿಲ್ಲಪ್ಪ, ನಿನ್ನೆ ಮತ್ ಇವತ್ತು ಬೆಳಗ್ಗೆ ಎಲ್ಲ ಅದೇನೋ ಸಿಮ್ ಆಕ್ಟಿವೇಶನ್ ಅಂತ ಬೇರೆ ಓಡಾಡ್ತಿದ್ಲು.

ಅವೆಲ್ಲವನ್ನೂ ಅವನಿಗೆ ಯಾಕ್ ಹೇಳ್ತಿದ್ಯಾ? ಅಂತ ಬಾಗಿಲಿನ ಹಿಂದೆ ನಿಂತೆ ಕೈಯಲ್ಲೇ ಸಂಜ್ಞೆ ಮಾಡುತ್ತಿದ್ದ ಅವಳನ್ನ ನಾನು ನೋಡಿಬಿಟ್ಟೆ. ನನಗೆ ಖಾತ್ರಿಯಾಗಿಹೋಯಿತು. ಆ ಹಳೇ ಬಿ ಎಸ್ ಎನ್ ಎಲ್ ಸಿಮ್ ನ ಆಕ್ಟೀವೇಟ್ ಮಾಡಿಸಿ ನನಗೆ ಕಾಲ್ ಮಾಡಿ ಸ್ವಿಚ್ ಆಫ್ ಮಾಡಿಟ್ಟಿದ್ದಾಳೆ. ಇಷ್ಟು ಸುಲಭವಾಗಿ ಅದು ಖಾತ್ರಿಯಾಗುತ್ತೆ ಅಂತ ನಾ ಕನ್ಸಲ್ಲು ಅಂದ್ಕೊಂಡಿರ್ಲ್ಲಿಲ್ಲ. ಕಲಾಳಿಗೆ ಏನು ಅರ್ಥವಾಯಿತೋ ಗೊತ್ತಿಲ್ಲ, ನನ್ನ ಕಡೆ ತಿರುಗಿ ನಗುತ್ತಾ, ಯೆ ವಿಮೂ, ಬಾರೆ ಆಚೆ, ಏನೇ ಮಾಡ್ತೀದ್ಯಾ? ಅದೇನ್ ಹುಡ್ಗೀರೋ ಸದಾ ಬಾಗ್ಲಾಕೊಂಡು ಆ ರೂಮಲ್ಲಿ ಏನು ಮಾಡ್ತೀರೋ? ಅಂತ ಅವಳನ್ನು ಆಚೆ ಕರೆದಳು.
ನಾ ಏನೋ ಮಾಡ್ತಾ ಇದೀನಿ, ಆಮೇಲ್ ಬರ್ತೀನಿ ಅಂತ ಶಾಂತವಾಗೇ ವಿಮು ಹೇಳುದ್ರೆ, ಕಲಾ ನನ್ನತ್ತ ತಿರುಗಿ ಇನ್ನೆನ್ ಕೆಲ್ಸಾ, ಉಗುರಿಗೆ ಬಣ್ಣ ಬಳ್ಕೊನ್ಡೊ, ಕೈಗೆ ಗೊರಂಟೀ ಹಾಕೊಂಡು ಕೂತಿರ್ತಾಳೆ, ಮತ್ತೇನೋ ಸಮಾಚಾರ ಅಂದಳು.

ಆಗಲೇ ಈ ಸಣ್ಣ ಕವನ ಬರೆದದ್ದು -

ನಿನ್ನನ್ನು ನೋಡಲೆಂದೇ ನಾನು ಬಂದೆ
ನಿಮ್ಮ ಮನೆ ಮುಂದೆ
ನೀ ನಿಲ್ಲಲೇ ಇಲ್ಲ ಬಾಲ್ಕನಿ ಮುಂದೆ
ನಾ ಬಿಡದೆ, ನಿಮ್ಮನೆಯೊಳಗೆ ಬಂದೆ
ನೀ ಅಡಗಿದೆ ರೂಮು ಬಾಗಿಲಿನ ಹಿಂದೆ
ಕೂಗಿ ಕರೆದರು ಬರಲ್ಲಿಲ್ಲ ನನ್ನ ಮುಂದೆ
ಬಿಜ಼ಿ ಎಂದು ನಾಟಕ ಮಾಡಿದೆ ನೀ ಬೇಕೆಂದೆ

ಸಮಾಚಾರ ಏನೂ ಇಲ್ಲ ಕಣೇ. ಇಲ್ಲೇ ಕೆನರಾ ಬ್ಯಾಂಕ್ ಎ ಟಿ ಎಂ ಗೆ ಬಂದಿದ್ದೆ. ಹಾಗೆ ನಿಮ್ ಮನೆಗೆ ಬಂದೆ ಅಷ್ಟೇ. ನಾನು ಹೊರಡುತ್ತೀನಿ. ಊರಿಗೆ ಹೋಗಬೇಕು ಅಂದೆ. ಕುಕ್ಕರ್ ಕೂಲ್ ಆಗ್ತಿದೆ, ಊಟ ಮಾಡಿ ಹೊರಡು ಅನ್ನುತ್ತಿದ್ರೆ ನಾ ಇಲ್ಲಮ್ಮ ಲೇಟ್ ಆಗ್ಬಿಡತ್ತೆ ನಾ ಹೊರ್ಟೆ ಅಂತ ಸೊಫಾಯಿಂದ ಮೇಲೆದ್ದೆ. ಒಂದು ನಿಮಿಷ ಇರೋ, ಮೈಸೂರ್ ಪಾಕ್ ಕೊಡ್ತೀನಿ, ಕೂತಿರು ಅಂದು ಈಸೀ ಚೈರಿಂದ ಎದ್ದಳು. ನಾನು ಅಮೂ ಹೇಗಿದಾಳೆ? ಫೋನ್ ಮಾಡಿದ್ಲಾ? ಅಂತ ಕೇಳುತ್ತಿದ್ದಂತೆ ಲ್ಯಾಂಡ್ ಲೈನ್ ರಿಂಗ್ ಆಯಿತು. ಅಡುಗೆ ಮನೆ ಕಡೆ ಹೊರಟಿದ್ದ ಕಲಾ, ನೋಡೋ ಅಮೂನೆ ಅನ್ಸತ್ತೆ ಮಾತಾಡ್ತಿರು ನಾ ಈಗ ಬಂದೆ ಅಂತ ಒಳಹೋದಳು.

ಫೋನೆತ್ತಿ ಹಲೋ ಅಂದೆ ಅಷ್ಟೇ. ಆ ಕಡೆ ಧ್ವನಿ ಹೇ ಕೇಶಿ, ನೀನ್ ರಿಸೀವ್ ಮಾಡ್‌ತ್ಯ ಅಂತ ಎಕ್ಸ್‌ಪೆಕ್ಟ್ ಮಾಡಿರ್ಲ್ಲಿಲ್ಲ. ಹೇಗಿದ್ಯೋ? ತುಂಬಾ ದಿನ ಆಯ್ತು ನಿನ್ ಜೊತೆ ಮಾತಾಡಿ. ಮೂರು ತಿಂಗಳ ಹಿಂದೆ ಡಾರ್ಟ್ ಫೋರ್ಡ್ ನ ಯಾವುದೋ ಮೂಲೆಯಲ್ಲಿದ್ದ ಒಂದು ಪೆಟ್ರೋಲ್ ಬಂಕಿಂದ ನಿಂಗೆ ಕಾಲ್ ಮಾಡಿದ್ದೆ. ಅವತ್ತು ರೋಡ್ ಮಿಸ್ ಆಗಿ ಡಾರ್ಟ್ ಫೋರ್ಡ್ ನ ಯಾವುದೋ ಮೂಲೆ ತಲುಪಿಬಿಟ್ಟಿದ್ದೆ. ಅಜಯ್ ಗೆ ಕಾಲ್ ಮಾಡೋಣ ಅಂದ್ರೆ ಮೊಬೈಲ್ ಮನೆಯಲ್ಲೇ ಮರೆತು ಬಂದಿದ್ದೆ. ನಿನ್ನದೊಂದು ನಂಬರ್ ಬಿಟ್ಟು ಇವತ್ತಿನವರೆಗೂ ನನಗೆ ಬೇರೆ ಯಾರ ನಂಬರ್ರು ತಲೆಯಲ್ಲಿ ಉಳಿದಿಲ್ಲ. ಅಲ್ಲೇ ಇದ್ದ ಪೆಟ್ರೋಲ್ ಬಂಕಿಗೆ ಬಂದು ನಿನಗೆ ಡೈಯಲ್ ಮಾಡಿ ಅಜಯ್ ನಂಬರ್ ಇಸ್ಕೊಂಡಿದ್ದೆ. ಜ್ಞಾಪಕ ಇದೆಯಾ? ಅಂತ ಬಡಬಡನೆ ಒಂದೇ ಉಸಿರಿಗೆ ಹೇಳಿದಳು. ಹೌದು, ಜ್ಞಾಪಕ ಇದೆ. ನಾ ಸೂಪರ್, ನೀ ಹೇಗಿದ್ಯಾ? ಅಜಯ್ ಹೇಗಿದಾನೆ? ಅಂದೆ. ನಾವು ಫೈನ್ ಒಂದು ಗುಡ್ ನ್ಯೂಸ್. Ajay got promotion & we are coming back to India in 3 months ಅಂದ್ಲು. ನಾನು ವಾಹ್ ಸೂಪರ್, congrats ಹೇಳು ಅಜಯ್ ಗೆ ಅಂದೆ. ಮನೇಲಿ ಯಾರು ಇಲ್ವೇನೋ? ಎಲ್ಲಾ ಏನ್ ಮಾಡ್ತೀದಾರೆ? ಅಮ್ಮನಿಗೆ ಕೊಡು ಅಂದ್ಲು. ಎಲ್ಲರೂ ಮನೇಲೆ ಇದಾರೆ, ನಿಮ್ಮಪ್ಪ ಬಾಲ್ಕನಿಲಿ, ನಿನ್ ತಂಗಿ ರೂಮಲ್ಲಿ ನಿಮ್ ಅಮ್ಮ...ಬಂದ್ಲು ಕೊಡ್ತೀನಿ ಬೈ, ಟೇಕ್ ಕೇರ್ ಅಂತ ಹೇಳಿ ಕಲಾಗೆ ರಿಸೀವರ್ ಕೊಟ್ಟು, ಅವಳ ಕೈಲಿದ್ದ ಮೈಸೂರ್ ಪಾಕ್ ಬಾಕ್ಸ್ ಇಸ್ಕೊಂಡು, ಸರಿ ನಾ ಬರ್ತೀನಿ ಅಂತ ಹೊರಟೆ. ಕಲಾ ತಲೆಯಾಡಿಸುತ್ತಾ ಟಾಟಾ ಮಾಡಿದಳು.

ಸಮಯ ೮:೧೫ ಆಗಿತ್ತು. ಮನೆಗೆ ಬಂದವನೇ ಕೆಂಚಿಗೆ ಕಾಲ್ ಮಾಡಿದೆ. ಏನೋ ಇಷ್ಟೋತ್ತಾದ್ರೂ ಹೋರ್ಟಿಲ್ವಾ? ಹಾಗಿದ್ರೆ ನಾವ್ಯಾರೂ ಊಟಕ್ ಕಾಯಲ್ಲ. ಮತ್ತೆ ಹುಡುಗಿ ಮಾತ್ರ ತುಂಬಾ ಲಕ್ಷಣವಾಗಿದಾಳೆ ನಿಂಗೆ ಹೇಳಿ ಮಾಡಿಸಿದ ಜೋಡಿ ಅಂದ್ಲು. ನಾ ಬೆಚ್ಚಿ ಬಿದ್ದೆ, ಯಾವ ಹುಡುಗಿ? ಏನ್ ವಿಷ್ಯ? ಅಂದೆ. ಯಾಕೋ ಅಮ್ಮ ಏನು ಹೇಳಿಲ್ವಾ? ನಾಳೆ ಹುಡುಗಿ ಮನೆ ಕಡೆಯವರು ಬರ್ತಿದಾರೆ. ಅದಕ್ಕೆ ನಿಂಗೆ ಊರಿಗ್ ಬಾ ಅಂತ ಫೋನ್ ಮಾಡಿದ್ದು. ಬರ್ತಾ ಮೊನ್ನೆ ದೀಪಾವಳಿಗೆ ತೊಗೊಂಡ ಹೊಸ ಬಟ್ಟೆ ನ ಬ್ಯಾಗ್ಲಿ ಇಟ್ಕೊಳೋದು ಮರೀಬೇಡ, ಇಡ್ಲಾ ಅಂತ ಕಟ್ ಮಾಡಿದಳು.

ಓ ಮೈ ಗಾಡ್.. ಏನ್ ಆಗ್ತಿದೆ ನನ್ ಲೈಫಲಿ? ಶೂ ಕೂಡ ಬಿಚ್ಚದೆ ಬಾಗಿಲಿಗೇ ಚೇರ್ ಎಳೆದುಕೊಂಡು ಮೊಬೈಲ್ ತಿರುಗಿಸುತ್ತಾ ಉಸ್ಸಪ್ಪ ಅಂತ ಕೂತೆ. ಮೊಬೈಲ್ ವೈಬ್ರೇಟಾಯಿತು. ವನ್ ಮೆಸೇಜ್ ರಿಸೀವ್ಡ್ - ವಿಮು. ರೀಡ್ ಬಟನ್ ಅಮುಕಿದವನಿಗೆ ಅಚ್ಚರಿ ಕಾದಿತ್ತು. Get lost ಅಂತ ಓದಿ ನಗು ತಡೆಯಲಾಗಲ್ಲಿಲ್ಲ. ಏಳು ವರ್ಷಗಳ ಕೆಳಗೆ ನಾನು-ಅಮು ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದೆವಾ?? ನನ್ನನ್ನು ಅಮಲಳನ್ನು ಸೇರಿಸಿ ಬೇರಾರಿಗೂ ಅಂತ ಅನುಮಾನ  ಇರಲ್ಲಿಲ್ಲ.
ಆದರೆ ಒಬ್ಬ ವಿಮಲಳ ಹೊರತಾಗಿ!

No comments:

Post a Comment