Pages

Tuesday, April 3, 2012

ಅವಳ ಕಾಲ್ ಬರುತ್ತಾ?? - ಭಾಗ ೫

ರಾಮಾಂಜನೇಯನ ಗುಡ್ಡ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದುರೇ ಇರುವ ಒಂದು ಗುಡ್ಡ. ೪೦-೫೦ ಮೆಟ್ಟಿಲುಗಳನ್ನು ಹತ್ತಿದರೆ ಅದೊಂದು ಸುಂದರವಾದ ಪ್ರಕೃತಿಯ ತಾಣ. ಸುಮಾರು ೮ ಅಡಿ ಎತ್ತರದ ಆಂಜನೇಯನ ಕಲ್ಲಿನ ಮೂರ್ತಿ ಅಲ್ಲಿನ ವಿಶೇಷ. ಸಂಜೆಯಾಯಿತೆಂದರೆ ಅಲ್ಲಿಗೆ ಈಗ ಹುಟ್ಟಿದ ಮಗುವಿನಿಂದ ಹಿಡಿದು ಈಗಲೋ ಆಗಲೋ ಎನ್ನುತ್ತಿರುವ ಮುದುಕರ ತನಕ ಎಲ್ಲರೂ ಜಮಾಯಿಸಿ ಬಿಟ್ಟಿರುತ್ತಾರೆ. ವಾಕಿಂಗ್ ಮಾಡುವವರು, ಹರಟೆ ಹೊಡೆಯುವವರು, ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿ ಕುಳಿತಿರುವ ಪ್ರೇಮಿಗಳು, ಕೈ ಕೈ ಹಿಡಿದು ಒಬ್ಬರಿಗೆ ಇನ್ನೊಬ್ಬರು ಆಸರೆಯಾಗಿ ನಡೆಯುತ್ತಿರುವ ಅಜ್ಜ-ಅಜ್ಜಿ, ಪುಟ್ಟ ಮಗುವನ್ನು ಅನತಿ ದೂರದಲ್ಲಿ ನಿಂತು ಬಾ ಬಾ ಅಂತ ಕರೆಯುತ್ತಿರುವ ಅಮ್ಮ, ಹುಡುಗೀರನ್ನು ನೋಡಲೆಂದೇ ಬಂದ ಪಡ್ಡೆ ಹುಡುಗರು, ಪ್ರೀತಿಯಲ್ಲಿ ಸೋತ NJಗಳು... ಹೀಗೆ ಎಲ್ಲಾ ತರಹದ ಜನರೂ ಅಲ್ಲಿ ಕಾಣ ಸಿಗುತ್ತಾರೆ.

ಗುಡ್ಡ ಸಾಕಷ್ಟು ಬದಲಾಗಿಬಿಟ್ಟಿದೆ. ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಆ ಬದಲಾವಣೆಗಳನ್ನು ಗಮನಿಸಲೂ ಅವಕಾಶ ಮಾಡಿಕೊಡದೆ ಮನಸ್ಸು ಆ ನಂಬರ್ನ ಬಗ್ಗೆಯೇ ಚಿಂತಿಸುತ್ತಿತ್ತು. ಮೆಟ್ಟಿಲುಗಳನ್ನು ಹತ್ತಿ ಕಾಲು ತೊಳೆದು ಆಂಜನೇಯನಿಗೊಂದು ನಮಸ್ಕಾರ ಹಾಕಿ ಹೊರಬಂದೆ. ೭ ವರ್ಷದ ಕೆಳಗೆ ನಾನೊಬ್ಬನೇ ಬರುವ ಮೊದಲು ಆ ಕಲ್ಲು ಬಂಡೆಯ ಮೇಲೆ ನಾನು-ಅಮಲ ಅದೆಷ್ಟು ಬಾರಿ ಕೂತಿದ್ದೆವೋ? ಅದೇ ಕಲ್ಲು ಬಂಡೆಯ ಮೇಲೆ ಆಸೀನನಾದೆ. ಜೇಬಿಗೆ ಕೈ ಹಾಕಿ ಪರ್ಸ್ ನಲ್ಲಿದ್ದ ಆ ಪುಟ್ಟ ಪುಸ್ತಕವನ್ನು ಹೊರತೆಗೆದೆ.

ನಾನು ಮೊಬೈಲ್ ಕೊಳ್ಳುವ ಮುಂಚೆ ಎಲ್ಲರ ನಂಬರ್ ಬರೆದಿಟ್ಟುಕೊಳ್ಳುತ್ತಿದ್ದ ಚಿಕ್ಕ ಡೈರಿ ಅದು. ಲೆಟರ್ K ಇರುವ ಪೇಜ್ ಗೆ ಚಕ ಚಕ ತಿರುವಿದೆ. ಹೌದು..ಅದೇ ನಂಬರ್.. ಕಲಾ - ೯೪***-***೩೪. ನನಗೆ ಕಾಲ್ ಬಂದಿದ್ದ ನಂಬರ್ರೇ. ನಾಕು ವರ್ಷದ ಕೆಳಗೆ ಅವಳಮ್ಮ ಹೊಸ ನಂಬರ್ ತೆಗೆದುಕೊಂಡಿದ್ದರು. ಅದಕ್ಕೂ ಮುಂಚೆ ಅವರು ಇದೇ ನಂಬರ್ ಉಪಯೋಗಿಸುತ್ತಿದ್ದುದು. ಯಾಕೋ ಈ ಬಿ ಎಸ್ ಎನ್ ಎಲ್ ಸಾಕಾಯಿತು ಕಣೋ, ಅದಕ್ಕೆ ಏರ್ ಟೆಲ್ ನ ಹೊಸ ನಂಬರ್ ತೆಗೆದುಕೊಂಡೆ ಅಂತ ಅವಳಮ್ಮ ನನಗೆ ಹೇಳಿದ್ದಿದ್ದು ನೆನಪಾಯಿತು. ಆಗ ನಾನು ಹೌದಾ? ಹಾಗಾದರೆ ಪ್ಲೀಸ್ ಆ ಸಿಮ್ ನನಗೆ ಕೊಟ್ಟು ಬಿಡಿ ಅಂತ ಕೇಳಿದಾಗ, ಅವಳೇ ತಾನೇ, ಬೇಡಮ್ಮ ಈ ನಂಬರ್ ನನಗಿಷ್ಟ ಆಗಿದೆ, ನಾನೇ ಇಟ್ಕೋತೀನಿ ಅಂದಿದ್ದವಳು. ನನ್ನ ಬರ್ತ್ ಡೇ ಇರೋ ನಂಬರ್ ಅವಳಿಗೆ ಇಷ್ಟವಂತೆ. ಒಳಗೊಳಗೆ ಖುಷಿಪಟ್ಟಿದ್ದೆ ಅಂದು ನಾನು.

 ಕಾಲ್ ಬಂದಿದ್ದುದು ನನ್ನ ಮಾಸ್ಟರ್ ಸಿಮ್ ಗೆ. ಅಂದರೆ ಅದು ಆಫೀಸ್ ನಂಬರ್. ಅವಳ ಅಮ್ಮ ಅಪ್ಪ ಅಂತೂ ಆ ನಂಬರಿಗೆ ಕಾಲ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ನನ್ನ ಆ ನಂಬರ್ ಗೊತ್ತೇ ಇರಲ್ಲಿಲ್ಲ. ಇನ್ನು ಅಮಲ. ಅಮಲಳು ಮಾಡಲು ಸಾಧ್ಯವೇ ಇಲ್ಲ, ಯಾಕೆಂದರೆ ಅವಳು ಗಂಡನನ್ನು ಸೇರಲು ಲಂಡನ್ನಿಗೆ ಹೋಗಿ ವರ್ಷವಾಯಿತು ಮತ್ತು ನನ್ನ ಆಫೀಸ್ ನಂಬರ್ ಅಮಲಳಿಗೂ ಗೊತ್ತಿಲ್ಲ. ಅಂದು ಅವರ ಮನೆಯಿಂದ ಬಂದ ರಾತ್ರಿ ನನ್ನ ನಂಬರ್ ಇಟ್ಟುಕೊಂಡಿರು ಅಂತ ನಾನೇ ಅವಳಿಗೆ ಮೆಸೇಜ್ ಮಾಡಿದ್ದು ನೆನಪಾಯಿತು. ಹಾಗಾದರೆ....ಹಾಗಾದರೆ ಅವಳಲ್ಲದೇ ಬೇರಾರೂ ಕಾಲ್ ಮಾಡಿರಲು ಸಾಧ್ಯವಿಲ್ಲ. ಕಳ್ಳಿ ತನ್ನ ನಂಬರಿಂದ ಮಾಡದೇ ಅಮ್ಮನ ಹಳೆ ಸಿಮ್ ಯಿಂದ ಕಾಲ್ ಮಾಡಿದಾಳೆ.

ಹಾಗೆ ಕಾಲ್ ಮಾಡಿ ಸ್ವಿಚ್ ಆಫ್ ಮಾಡಿದಾಳೆ. ಆ ನಂಬರ್ ಸ್ವಿಚ್ ಆಫ್ ಆಗಿದ್ದರೇನು? ಅವಳ ನಂಬರ್ ಗೆ ಕಾಲ್ ಮಾಡುವ ಅಂತ vi ಅಂತ ಟೈಪಿಸಿದೆ. ಇನ್ನೇನು ಕಾಲ್ ಬಟನ್ ಒತ್ತಬೇಕು ಮಿಂಚಿನಂತೆ ತಲೆಯಲ್ಲಿ ಏನೋ ಹೊಳೆಯಿತು. ನನಗೆ ಅವಳಮ್ಮನ  ಹಳೇ ನಂಬರ್ ಜ್ಞಾಪಕದಲ್ಲಿರುವುದಿಲ್ಲ ಅಂದುಕೊಂಡು, ನನ್ನನ್ನು ಆಟವಾಡಿಸಲು ಅಥವಾ ಯಾಮಾರಿಸಲು ಆ ನಂಬರಿಂದ ಅವಳು ಕಾಲ್ ಮಾಡಿದ್ದರೇ??  ಈಗ ನಾನು ಅವಳಿಗೆ ಕಾಲ್ ಮಾಡಿಬಿಟ್ಟರೆ, ನನಗೆ ಅವಳಮ್ಮನ ಹಳೇ ನಂಬರ್ ಜ್ಞಾಪಕವಿರುವುದು ಅವಳಿಗೆ ಖಾತ್ರಿಯಾಗಿಬಿಡುತ್ತೆ. ಇನ್ನೆಂದೂ ಅವಳು ಆ ನಂಬರಿಂದ ನನಗೆ ಕಾಲ್ ಮಾಡುವುದಿಲ್ಲ. ಅಂದರೆ ಆಟ ಶುರುವಾಗುವ ಮುನ್ನವೇ ನಾನೇ ಫುಲ್ ಸ್ಟಾಪ್ ಇಟ್ಟ ಹಾಗಾಗ್ಬಿಡತ್ತೆ. ಈಗ ನಾನು ಅವಳಿಗೆ ಕಾಲ್ ಮಾಡದಿರುವುದೇ ಸರಿ ಅಂತ ತೀರ್ಮಾನಿಸಿದೆ.

ಗಂಟೆ ಸಂಜೆ ಏಳಾಗಿತ್ತು, ಶನಿವಾರ ಬೇರೆ..  ಗುಡ್ಡದಲ್ಲಿ ಜನರ ಜಾತ್ರೆ. ಇನ್ನು ಆ ಗಜಿ-ಬಿಜಿಯಲ್ಲಿ ಕೂಡುವುದು ಸಾಧ್ಯವೇ ಇಲ್ಲ ಅನಿಸಿತು. ಸರ ಸರ ಮೆಟ್ಟಿಲಿಳಿದು ಮ್ಯಾಕ್ಸ್ ೧೦೦ ಅನ್ನು ಶಿವಾಸ್ ಚಾಟ್ಸ್ ಕಡೆಗೆ ತಿರುಗಿಸಿದೆ. ಆಕಾಶ ನೋಡುತ್ತಾ ಮಸಾಲೇಪುರಿ ತಿನ್ನುತ್ತಿದ್ದವನಿಗೆ ಎದುರಿನಿಂದ ಹೆಣ್ಣು ಧ್ವನಿ ಹಾಯ್ ಎಂದಿತು. ಯಾರಪ್ಪ ಇವಳು ಎಂದು ಅನುಮಾನಿಸುತ್ತಲೇ ಹಾಯ್ ಅಂದೆ. ನಾನುರೀ ಗೊತ್ತಾಗಲ್ಲಿಲ್ಲವಾ?? ನೀವು ನಿಮ್ಮ ಫ್ರೆಂಡೂ... ಫಾಲೋ ಮಾಡಿದ್ರಲ?? ಅಂದಳು. ಅವಳೆ ಅಲ್ಲವಾ? ಸುಮಾರು ಎಂಟು ತಿಂಗಳ ಹಿಂದೆ ಗೆಳೆಯ ಅಚ್ಚಿಯ ಬಲವಂತಕ್ಕೆ ನಾನು ನನ್ನ ಬೈಕ್ ಲಿ ಅವನನ್ನ ಕೂಡಿಸಿಕೊಂಡು ಇವಳನ್ನು ಫಾಲೋ ಮಾಡ್ಕೊಂಡ್ ಹೋಗಿದ್ದಿದ್ದು. ಅವತ್ತು ಬೆಣ್ಣೆ ಗೋವಿಂದಪ್ಪನ ಛತ್ರದ ಹತ್ತಿರ ಅವಳನ್ನು ನಿಲ್ಲಿಸಿ ಅಚ್ಯುತನಿಗಿಂತ ಹೆಚ್ಚಾಗಿ ನಾನೇ ಅವಳನ್ನು ಮಾತಾಡಿಸಿದ್ದೆ. ಒಹೋ.. ಅದೇ ಮಹಾಲಕ್ಷ್ಮಿ. ಏನ್ರೀ ಆರಾಮ ಅಂದೆ. ಹೂ ರೀ.. ಏನ್ ಇತ್ತೀಚೆಗೆ ಪತ್ತೇನೆ ಇಲ್ಲ ಅಂದ್ಲು. ಹಾಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟಿದ್ದಿನೀ ಅಂತ ತಲೆ ಕೂದಲ ಮೇಲೆ ಕೈಯಾಡಿಸಿದೆ. ಹಾಗಿದ್ರೆ ನಿಮ್ ಕಥೆ ಮುಗೀತು ರೀ ಅಂದ್ಲು. ಸರಿ ಯಾವತ್ತಿದ್ರು ಮುಗ್ಯದೆ, ನಾ ಬರ್ಲಾ ಅಂತ ಗಾಡಿ ತೆಗೆದೆ.

ಸಮಯ ೭:೧೫. ಅವರ ಅಪ್ಪ ಆಫೀಸ್‌ನಿಂದ ಬಂದು ಬಾಲ್ಕನಿಯಲ್ಲಿ ಕಾಫಿ ಹೀರುತ್ತಾ ಕೂತಿಕೊಳ್ಳುವ ಸಮಯ. ಅದೇ ಹೊತ್ತಿಗೆ ಅವಳು ಅವಳಮ್ಮ ಇಬ್ಬರೂ ಕೂಡ ಹೊರಬಂದು ಸಾಮಾನ್ಯವಾಗಿ ಬಾಲ್ಕನಿಯಲ್ಲಿ ನಿಂತಿರುತ್ತಾರೆ. ಇಂದು ನನ್ನ ಅದೃಷ್ಟ ಪರೀಕ್ಷೆ ನಡೆಯಲಿ ಅಂತ ಗಾಡಿಯನ್ನ ಬಸ್ ಸ್ಟ್ಯಾಂಡ್ ಕಡೆ ತಿರುಗಿಸಿದೆ. ನಾನೊಂದು ಪತ್ತೇದಾರಿ ಕೆಲಸಕ್ಕೆ ಹೋಗುತ್ತಿರುವೆನೇ?? ಆ ಕ್ಷಣದಲ್ಲಿ ನನಗೂ ತಿಳಿದಿರಲ್ಲಿಲ್ಲ.

No comments:

Post a Comment