Pages

Tuesday, April 10, 2012

ಅವಳ ಕಾಲ್ ಬರುತ್ತಾ?? - ಭಾಗ ೧೦

ಎಡಕ್ಕೆ ಬಲಕ್ಕೆ ಎಷ್ಟು ಹೊತ್ತು ಹೊರಲಾಡಿದರೂ ನಿದ್ದೆ ಸುಳಿಯಲ್ಲಿಲ್ಲ. ದಿಂಬಿನ ಕೆಳಗಿಟ್ಟಿದ್ದ ಅಮೋದಿನಿಯ ಫೋಟೋ ತೆಗೆದು, ಶೆಲ್ಫ್ ನಲ್ಲಿದ್ದ ಖಾಲಿ ಫ್ರೆಮಲಿ ಹಾಕಿ ಟೇಬಲ್ ಮೇಲಿಡಲು ತಂದೆ. ನನಗೊಂದು ಅಚ್ಚರಿ ಕಾದಿತ್ತು. ಟೇಬಲ್ ಮೇಲಿದ್ದ ವಿಮಲಳ ಫೋಟೋದ ಎಡ ಭಾಗಕ್ಕೆ ಕಪ್ಪು ಬಣ್ಣದ ಫ್ರೆಂನಲ್ಲಿದ್ದ ಸಂಯುಕ್ತಳ ಫೋಟೋ ಕಾಣಿಸಿತು. ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆ. ಅದು ಸಂಯುಕ್ತಳದೇ.. ಎತ್ನಿಕ್ ಡೇ ದಿನದಂದು ಸಂಜೆ, ನಾನೇ ತೆಗೆದಿದ್ದ ಫೋಟೋ ಅದು. ವಿಮಲಳ ಫೋಟೋ ಪಕ್ಕಕ್ಕೆ ಸರಿಸಿ ತನ್ನ ಫೋಟೋ ಇಟ್ಟು ಹೋಗಿದ್ದಾಳೆ. ಅವರಿಬ್ಬರ ಫೋಟೋವನ್ನು ಪಕ್ಕಕ್ಕೆ ಸರಿಸಿ ಕೈಲಿದ್ದ ಅಮೋದಿನಿಯ ಫೋಟೋವನ್ನು ಮಧ್ಯದಲ್ಲಿರಿಸಿದೆ.

S (ಸಂಯುಕ್ತ) A (ಅಮೋದಿನಿ)  V (ವಿಮಲ) -----> ಕೋಲೆ ಬಸವನ ತರ ತಲೆಯಾಡಿಸುತ್ತಾ ಮೂವರ ಫೋಟೋವನ್ನು ನೋಡುತ್ತಿದ್ದೆ. ಗುಂಡು ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ದ ಆವರಿಸಿತ್ತು. ಬೆಕಮ್ ಅಂಕಲ್ ಮನೆಯ ಗಡಿಯಾರ ಡಣ್ ಡಣ್ ಅಂತ ೨ ಬಾರಿ ಸದ್ದು ಮಾಡಿದಾಗಲೇ, ಇನ್ನು ಇವರುಗಳನ್ನು ಹೀಗೆ ನೋಡುತ್ತಿದ್ದರೆ, ಅವರ ಕಣ್ಣುಗಳಿಂದಲೇ ನನ್ನನ್ನು ಕುಕ್ಕಿ ಬಿಡುತ್ತಾರೆ ಅನಿಸಿ, ಚಾಪೆ ದಿಂಬು ತೆಗೆದುಕೊಂಡು ಟೆರಸ್ಗೆ ಓಡಿದೆ. ಸಾವಿರಾರು ನಕ್ಷತ್ರಗಳಿದ್ದ ಆಕಾಶವನ್ನೇ ದಿಟ್ಟಿಸುತ್ತಾ ಮಲಗಿದೆ. ಅಂಬರದಲ್ಲಿ ತಾರಾಮೇಳ.. ಎಣಿಸೋ ಜಾಣ ಯಾರು ಇಲ್ಲ... ಬೀಸುವ ಗಾಳಿ ಕಾಣುವುದಿಲ್ಲ.. ಹರಿಯುವ ನೀರಿಗೆ ಕೊನೆಯೇ ಇಲ್ಲ.... ಸುಮಾರು ವರ್ಷಗಳ ಕೆಳಗೆ ಉದಯ ಟೀವಿಯಲ್ಲಿ ಬರುತ್ತಿದ್ದ ಅಂಬಿಕಾ ಧಾರಾವಾಹಿಯ ಹಾಡು ನೆನಪಾಯಿತು.

ತಲೆಯಲ್ಲಿ ಸಾವಿರಾರು ಹುಳಗಳು ಓಡಾಡುತ್ತಿದ್ದ ಹಾಗನಿಸುತ್ತಿತ್ತು. ಬೆಳಗಿನ ಜಾವ ಐದರ ಹೊತ್ತಿಗೆ,  ಈ ೨ ಕೆಲಸಗಳನ್ನು ಇಂದೇ ಮಾಡಬೇಕು ಅಂತ ನಿರ್ಧರಿಸಿದೆ.
೧. ವಿಮಲ ನನ್ನನ್ನು ಇಷ್ಟಪಡುತ್ತಿದ್ದಾಳಾ ಇಲ್ಲವಾ? - ತಿಳಿದುಕೊಳ್ಳಬೇಕು. ಆದರೆ ಹೇಗೆ? ನಾ ಊಹಿಸಿದ್ದು ನಿಜವಾದರೆ ಅವಳಿಂದು ನನಗೆ ಸಿಗುತ್ತಾಳೆ.
೨. ಸಂಯುಕ್ತಳನ್ನ ನನ್ನ ಬಿಟ್ಟು ಹೋಗುವುದಕ್ಕೆ ಒಪ್ಪಿಸಬೇಕು - ಹೇಗೆ?
ಎರಡನ್ನು ಮನಸಿನಲ್ಲೇ ಹೇಳಿಕೊಳ್ಳುತ್ತಾ ಟೆರೆಸ್ ಯಿಂದ ಇಳಿಯುತ್ತಿದ್ದಂತೆ ಎದುರು ಮನೆಯ ಸಂಯುಕ್ತ ರೂಮಿನ ಲೈಟ್ ಆನ್ ಆಯಿತು.

ಬೇಗ ಬೇಗ ಸ್ನಾನ-ಸಂಧ್ಯಾದಿಗಳನ್ನು ಮುಗಿಸಿ ಕಾಫಿ ಹೀರುತ್ತಾ ಲ್ಯಾಪ್‌ಟಾಪ್ ಆನ್ ಮಾಡಿದೆ. ಮ್ಯಾನೇಜರ್ ಸಾಹೆಬ್ರುಗೆ ನಾ ಇನ್ನೆರಡು ದಿನ ಆಫೀಸಿಗೆ ಬರಲು ಆಗೋದಿಲ್ಲ ಅಂತ ಈಮೇಲ್ ಕಳುಹಿಸಿದೆ. ಸಂಯುಕ್ತಳಿಗೆ ಗುಡ್ ಮಾರ್ನಿಂಗ್ ಮೆಸೇಜ್ ಜೊತೆ,  make yourself free by noon 3, i want to discuss something important with you, will take u to CCD gandhi bazaar ಅಂತ ಟೈಪಿಸಿ ಕಳುಹಿಸಿದೆ. ಮರುಕ್ಷಣದಲ್ಲೇ VGM, k fine ಅಂತ ರಿಪ್ಲೈ ಮಾಡಿದ್ದಳು. Hi, GM. If u r free lets meet today. Decide time & venue ಅಮೋದಿನಿಗೆ ಕಳಿಸಿದೆ. ಐದು ನಿಮಿಷದಲ್ಲಿ GM. Evening 6 (sharp) @ MTR JP Nagar ರಿಪ್ಲೈ ಬಂತು. ಇಬ್ಬರು ಹುಡುಗಿಯರ ಭೇಟಿ confirm ಆಯಿತು. ನಾನಂದುಕೊಂಡಂತೆ ವಿಮಲಳೂ ಇಂದು ಸಿಕ್ಕಿಬಿಟ್ಟರೆ.. ನಾನಂದುಕೊಂಡಿದ್ದು ನಿಜವಾಗಿತ್ತು. ವಿಮಲ ನನಗೆ 500c ಬಸ್ಸಲ್ಲಿ ಸಿಕ್ಕಿದಳು. ಆಫೀಸಿಗೆ ಗೆಳತಿಯರ ಜೊತೆ ಕಾರ್ ಪೂಲ್ ಮಾಡುವ ವಿಮಲ, ಸೋಮವಾರ ಬೆಳಗ್ಗೆ ಹಾಗೂ ಶುಕ್ರವಾರ ಸಂಜೆ ಬಸ್ ಅಥವಾ ಆಟೋ ಹಿಡಿಯುತ್ತಾಳೆ. ಯಾಕೆಂದರೆ ಶುಕ್ರವಾರ ಆಫೀಸಿಂದ ನೇರವಾಗಿ ಊರಿಗೆ ತೆರಳುವ ಗೆಳತಿಯರು ಸೋಮವಾರ ಊರಿನಿಂದ ನೇರವಾಗಿ ಆಫೀಸಿಗೆ ಬರುತ್ತಾರೆ. ಹಾಗಾಗಿ ವಿಮಲಳಿಗೆ ಬಸ್ ಅಥವಾ ಆಟೊನೆ ಗತಿ. ನನ್ನ ನೋಡಿ ಕೊಂಚ ಮುಜುಗರಗೊಂಡಂತೆ ಕಂಡರೂ ಕ್ಷಣದಲ್ಲಿಯೇ ಸ್ಮೈಲ್ ಮಾಡುತ್ತಾ ಪಕ್ಕ ಕೂತುಕೊಳ್ಳೋದಿಕ್ಕೆ ಕೈ ಸಂಜ್ಞೆ ಮಾಡಿ ಕರೆದಳು. ಆ ಸ್ಮೈಲಿಗೆ ಅಲ್ಲವೇ ನಾನು ಮನಸೋತಿದ್ದಿದು.

ನಾನು - ಹಾಯ್ ವಿಮಲ.. ಹೇಗಿದ್ಯಾ? ಏನಿವತ್ತು ಬಸ್ಸು? ಆಯ್ತಾ ತಿಂಡಿ?
ವಿಮಲ - ಹಾಯ್ ನಾನು ಫೈನ್. ನೀನು? ಇವತ್ತು ಸೋಮವಾರ ಅದಕ್ಕೆ ಬಸ್ಸು.. ತಿಂಡಿ ಆಯ್ತು.. ದೋಸೆ. ನೀನ್ ಎನ್ ತಿಂದೆ?
ನಾನು - ನಾನು ಅಷ್ಟೇ ಆರಾಮ್. ತಿಂಡಿ ಇನ್ನು ಆಗಿಲ್ಲ. ನೀನು ಸಿಕ್ಕಿದ್ದು ಒಳ್ಳೆಯದೇ ಆಯಿತು. ನಿನ್ನ ಜೊತೆ ಸ್ವಲ್ಪ ಮಾತಾಡಬೇಕಿತ್ತು.
ವಿಮಲ - ಓಹ್.. ಹೌದಾ? ಏನ್ ಅಂತ ವಿಷ್ಯ? ಸ್ವಲ್ಪ ಏನು, ಜಾಸ್ತಿನೇ ಮಾತಾಡು.. ಇನ್ನೂ ೨:೩೦ ಗಂಟೆ ಇದೇ ಬಸ್ಸಲ್ಲಿ ಇಲ್ಲೇ ಕೂತಿರ್ತೀವಿ ಇಬ್ರುನು.
ನಾನು - ನೇರವಾಗೇ ವಿಷ್ಯಕ್ಕೆ ಬರ್ತೀನಿ. ನನ್ನ ಎರಡು ಪ್ರಶ್ನೆಗಳಿಗೆ ಯಾವ ಮುಚ್ಚು ಮರೆ ಇಲ್ಲದೇ ಉತ್ತರ ಕೊಡು.. ಅಷ್ಟು ಸಾಕು.
೧. ನನ್ನ-ಅಮಲಳ ಬಗ್ಗೆ ನಿನ್ನ ತಿಳುವಳಿಕೆ ಏನು? ನಮ್ಮಿಬ್ಬರ ಸಂಬಂಧ ಎಂತದ್ದು ಅಂತ ನೀ ಅರ್ಥ ಮಾಡಿಕೊಂಡಿರುವೆ?
೨. ಅಂದು ನಾನು ನಿಮ್ಮನೆಗೆ ಬಂದು ಕೇಳಿದಾಗ, ನನಗೆ ನಿನ್ನ ಮೇಲೆ ಅಂತಾ ಯಾವುದೇ ಭಾವನೆಗಳು ಇಲ್ಲವೆಂದು ಹೇಳಿದವಳು, ಅಮ್ಮನ ಹಳೆ ನಂಬರಿಂದ ನನ್ನನ್ನು ಸಂಪರ್ಕಿಸಲು ಯಾಕೆ ಪ್ರಯತ್ನಪಟ್ಟೇ?

ವಿಮಲ ಬ್ಯಾಗಿನಿಂದ ತಿಂಡಿಯ ಡಬ್ಬಿ ತೆಗೆದು ನನ್ನ ಕೈಲಿಡುತ್ತಾ ತಿನ್ನು ಎಂಬಂತೆ ತಲೆಯಾಡಿಸಿದಳು. ಮುಂದಿನ ಮುಕ್ಕಾಲು ಗಂಟೆ ಅವಳ ಮಾತಿನ ಸಾರಾಂಶ ಇಂತಿದೆ - ನಾನು-ಅಮಲ ಮೊದಲಿನಿಂದಲೂ ಇಷ್ಟ ಪಡುತ್ತಿದ್ದೆವು. ಆದರೆ ಒಬ್ಬರಿಗೊಬ್ಬರು ಹೇಳಿಕೊಂಡಿರಲ್ಲಿಲ್ಲ. ರಹಸ್ಯ ವಿಚಾರ ಬಯಲಾದ ಕಾರಣದಿಂದ ನಾನು ಅವರ ಮನೆಗೆ ಹೋಗುವುದು ನಿಲ್ಲಿಸಿದ ಮೇಲೂ ನಾವಿಬ್ಬರು ರಾಮಾಂಜನೇಯ ಗುಡ್ಡದಲ್ಲಿ ಆಗಾಗ ಭೇಟಿಯಾಗುತ್ತಿದ್ದುದು ವಿಮಲಳಿಗೆ ತಿಳಿದಿದೆ. ನಾವು ೨ ವರ್ಷ ಮಾತಾಡೇ ಇಲ್ಲ ಅನ್ನೋದನ್ನು ವಿಮಲ ನಂಬಲು ತಯಾರಿಲ್ಲ. ಒಡನಾಟ ಕಮ್ಮಿಯಾಗಿತ್ತು ಅಷ್ಟೇ. ಅದೇ ಸಮಯದಲ್ಲೇ ನನ್ನನ್ನು ತುಂಬಾ ಮಿಸ್ ಮಾಡ್ಕೋತಿದ್ದ ಅಮಲಳಿಗೆ ಅಜಯ್ ಸಿಕ್ಕಿದ್ದು. ಪ್ರತಿದಿನ ಸಿಗುತ್ತಿದ್ದ ಅಜಯ್ ಅಮಲಳಿಗೆ ನನಗಿಂತಲೂ ಹತ್ತಿರವಾಗಿಬಿಟ್ಟ. ಅಮಲ ಬೇರೆ ಜಾತಿಯವನಾದ ಆಜಯನ ಪ್ರೀತಿಸಲು ಶುರು ಮಾಡಿದ ದಿನದಿಂದಲೂ ನನಗೆ ಆ ವಿಚಾರ ತಿಳಿದಿತ್ತು. ನಾನು ಮನಸ್ಸು ಮಾಡಿದ್ದರೆ ಅಮಲಳ ಮದುವೆಯ ಸಲುವಾಗಿ ಅವರ ಮನೆಯಲ್ಲಿ ನಡೆದ ದೊಡ್ಡ ರಾದ್ದಂತ ತಪ್ಪಿಸಬಹುದಿತ್ತು. ಬೇರೆ ಯಾರ ಮಾತನ್ನು ಕೇಳದ ಅಮಲ ಖಂಡಿತ ನನ್ನ ಮಾತನ್ನು ಮೀರುತ್ತಿರಲ್ಲಿಲ್ಲ. ನಾನು ಬೇರೇನು ಮಾಡದ್ದಿದ್ದರೂ, ಕಲಾಳಿಗೆ ಅಮಲ-ಆಜಯರ ಬಗ್ಗೆ ಒಂದು ಮಾತು ಹೇಳಿದ್ದರೂ ಸಾಕಿದ್ದಿತು. ಕಲಾ ಎಚ್ಚರಿಕೆ ವಹಿಸಿಬಿಡುತ್ತಿದ್ದಳು. ಎಲ್ಲಾ ವಿಚಾರ ತಿಳಿದ್ದಿದ್ದರೂ ನಾನು ಬೇಕಂತಲೇ ಮೌನ ವಹಿಸಿದ್ದೆ. ನಾನು ಅಂದು ಒಂದು ಮಾತಾಡಿದ್ದರೆ, ಇಂದು ಅವರ ಅಜ್ಜ-ಅಜ್ಜಿ ಅವರಲ್ಲೇ ಉಳಿದಿರುತ್ತಿದ್ದರು ಹಾಗೂ ನೆಂಟರಿಷ್ಟರು ಅವರ ಮನೆ ಹೆಣ್ಣು ಮಗಳು ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಳು ಎಂದು ಅವರನ್ನು ಅವಮಾನಿಸುತ್ತಿರಲ್ಲಿಲ್ಲ. ಹಾಗೆಯೇ ಮೊದಲಿನಂತೆಯೇ ಅವರ ಮನೆಗೆ ನೆಂಟರಿಷ್ಟರು ಬಂದು ಹೋಗುತ್ತಿದ್ದರು. ಇಷ್ಟಕ್ಕೆಲ್ಲಾ ಕಾರಣ ನಾನೇ. ಇನ್ನು ಆ ಹಳೆ ನಂಬರಿಂದ ಕಾಲ್ ಮಾಡಿದ್ದು ವಿಮಲ ತನ್ನ ವಿಕೃತವಾದ ಆಸೆಯೊಂದನ್ನ ತೀರಿಸಿಕೊಳ್ಳಲು. ಮನುಷ್ಯನಿಗೆ ತೀರಾ ಅಪ್ರಿಯವಾದುದನ್ನ ಅವನಿಗೆ ತುಂಬಾ ಇಷ್ಟವಾಗುವುದರ ಜೊತೆ ನೀಡುವುದು. ಹಾಗೆ ಮಾಡಿ ಮನುಷ್ಯ ಇನ್ನೆಂದೂ ಮೇಲೇಳದಂತೆ ಅವನ ಆತ್ಮಬಲವನ್ನೇ ಕುಗ್ಗಿಸಿಬಿಡುವ ತಂತ್ರ ಅದು. ಆ ನಂಬರ್ ನನಗಿಷ್ಟ ಹಾಗೂ ನನಗೆ ಅಪ್ರಿಯವಾದದ್ದು ತಾನಾರೊ ಬೇರೆಯವನನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಳುವುದು. ತಾನು ಬೇರೆಯವನನ್ನ ಪ್ರೀತಿಸುತ್ತಿದ್ದೀನಿ ಅಂತ ನನಗಿಷ್ಟವಾದ ನಂಬರಿಂದ ಹೇಳುವುದು. ಅದೆಂಥಾ ವಿಕೃತ ಆಸೆ!

Past is past, moreover ನೀನು ಅಂದುಕೊಂಡಿರುವುದೆಲ್ಲಾ ನಿಜವಲ್ಲ ಅಂತ ಅವಳಿಗೆ ಸ್ಪಷ್ಟೀಕರಣ ನೀಡಬೇಕೆನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಕ್ಕಿಲ್ಲ ಅಂತ ತಿಳಿದು ಸುಮ್ಮನಾಗಿಬಿಟ್ಟೆ. ಇಷ್ಟೆಲ್ಲಾ ಅಪಾರ್ಥ ಮಾಡಿಕೊಂಡಿರುವ ವಿಮಲಳನ್ನು ನನ್ನವಳನ್ನಾಗಿ ಮಾಡಿಕೊಳ್ಳುವ ವಾಂಛೆಯೇ ನನ್ನಲ್ಲಿ ಉಳಿಯಲ್ಲಿಲ್ಲ. ಯಾಕೆಂದರೆ ಅವಳು ಈಗಾಗಲೇ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಸಾವಿರಾರು ಅಲೆಗಳು ಒಟ್ಟಿಗೆ ನನ್ನ ಮೇಲೆ ಅಪ್ಪಳಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅವಳ ಕಾಲ್ ಬರಲಿ ಎಂದು ಹಪಹಪಿಸುತ್ತಿದ್ದ ನಾನು ಇನ್ನೆಂದೂ ಅವಳ ಕಾಲ್ ಬರದಿರಲಿ ದೇವರೇ ಎಂದು ಪ್ರಾರ್ಥಿಸಿದೆ.

ನಾನು ಯಾವಾಗಲೂ SA ಬರೆದು V ಬರೆಯುವ ಮುನ್ನ ಒಂದು space ಬಿಡುತ್ತಿದ್ದೆ. ಆದರೆ ಅದೇ ಅಂತರವನ್ನು ವಿಮಲ ತನ್ನ ಜೀವನದ್ದುದ್ದಕ್ಕೂ ಕಾಯ್ದುಕೊಂಡು ಬಿಡಲು ನಿರ್ಧರಿಸಿಬಿಡುತ್ತಾಳೆ ಅಂತ ಎಂದೂ ಕನಸಿನಲ್ಲಿಯೂ ಊಹಿಸಿರಲ್ಲಿಲ್ಲ.

ಇನ್ನು ಮುಗಿದಿಲ್ಲ!

No comments:

Post a Comment