Pages

Monday, April 9, 2012

ಅವಳ ಕಾಲ್ ಬರುತ್ತಾ?? - ಭಾಗ ೯





ಮನೆ ತಲುಪಿದಾಗ ೧೧:೩೦ ಆಗಿತ್ತು. ಅಮ್ಮಳ ಹೊರತಾಗಿ ಎಲ್ಲ ಮಲಗಿಬಿಟ್ಟಿದ್ದರು. ಅಮ್ಮ ತತ್ವವಾದ ಪುಸ್ತಕ ಓದುತ್ತಾ ಕುಳಿತ್ತಿದ್ದರು.
ಅಮ್ಮ - ಎಷ್ಟೊತ್ತಿಗೆ ಹೊರಟೆ? ಬಟ್ಟೆ ಬದಲಾಯಿಸಿ ಕೈ ಕಾಲು ತೊಳ್ಕೊ. ತಟ್ಟೆ ಹಾಕ್ತೀನಿ ಊಟಕ್ಕೆ.
ನಾನು - ಅಯ್ಯೋ ಊಟ ಬೇಡಮ್ಮ. ಕಾಫಿ ಕೊಡು ಸಾಕು
ಅಮ್ಮ - ಮಧ್ಯಾನ ಕೂಡ ಊಟ ಮಾಡಿಲ್ಲ, ನಾಳೆ ಎಷ್ಟೋತ್ತಾಗತ್ತೋ ಊಟ? ಏಳು ಏಳು
ನಾನು - ಸರಿ, ಕೈತುತ್ತು ಹಾಕುದ್ರೆ ಮಾಡ್ತೀನಿ
ಅಮ್ಮ - ತಟ್ಟೆ ತೊಳೆದು ಗೋಮ ಹಚ್ಚಬೇಕು ಅಂತ ಊಟನೇ ಬೇಡ ಅಂತ್ಯಲೋ? ಎಷ್ಟು ಸೋಂಬೇರಿ ನೀನು? ನಾಳೆ ಮದ್ವೆ ಆದ್ಮೇಲೂ ಹೀಗೆ ಮಾಡು..ಆಗ ಗೊತ್ತಾಗತ್ತೆ.
ನಾನು - ಅದಕ್ಕೆ ನಂಗೆ ಮದ್ವೆನೆ ಬೇಡ ಅಂದು ಊಟಕ್ಕೆ ಕುಳಿತೆ. ಅಮ್ಮ ಕೈತುತ್ತು ಹಾಕುತ್ತಾ,
ಅಮ್ಮ - ಇನ್ನೆಷ್ಟು ದಿನ ಒಬ್ಬನೇ ಇರ್ತಿಯ? ನಾಳೆ ಬರ್ತಿರೋ ಹುಡುಗಿ ಲಕ್ಷಣವಾಗಿದಾಳೆ.
ನಾನು - ಹ್ಮ್
ಅಮ್ಮ - ಆತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೀಜನಲ್ ಮ್ಯಾನೇಜರ್, ಆಕೆ ಮುಂಚೆ ರೈಲ್ವೇಸ್ ಲೀ ಇದ್ರಂತೆ.. 10 ವರ್ಷದ ಕೆಳಗೆ VRS ತೊಗೊಂಡಿದಾರೆ.
ನಾನು - ಒಹೋಹೋ...ಹಾಗಿದ್ರೆ  ಬ್ಯಾಂಕ್ ಲೋನ್ ಅಪ್ಲಿಕೇಶನ್ ಫಾರ್ಮ್ ಲೀ ಮುಂದಗಡೆ ಬ್ಯಾಂಕ್ ಮ್ಯಾನೇಜರ್ ಸೈನ್ ಅವರ್ದೇ, ಹಿಂದೆ ಶೂರಿಟಿ ಸೈನು ಅವರ್ದೇ.. ಹಾಹಾ..  ಮತ್ತೆ ಫ್ರೀ ಆಗಿ ಟಿಕೆಟ್ ಸಿಗತ್ತೆ ಅನ್ನೋದಾದ್ರೆ ಇನ್ಮೇಲೆ ರೈಲ್ ಲೇ ಓಡಾಡೋ ಅಭ್ಯಾಸ ಮಾಡ್ಕೊತೀನಿ... ಉಹಾಹ...
ಅಮ್ಮ - ಯೇಹ್.. ಎಲ್ಲದಕ್ಕೂ ತಮಾಷೆ ಮಾಡ್ಬೇಡ. ಹುಡುಗಿ BE E&C  ಮಾಡಿ ಲಂಡನ್ನಿನ ಯಾವುದೋ ಯೂನಿವರ್ಸಿಟೀ ಇಂದ  MBA ಮಾಡಿಡಾಳಂತೆ.
ನಾನು - ಅಬಾಬ.. PhD ಯಾಕೆ ಮಾಡಿಲ್ವನ್ತೆ?
ಅಮ್ಮ - ಆಸೆ ಇದ್ಯಂತೆ.. ನೀ ಮಾಡ್ಸು.
ನಾನು - ಈ ಹುಡುಗಿ ಜಾತ್ಕ ಫೋಟೋ ಎಲ್ಲ ಯಾವಾಗ ಬಂತು? ನಂಗೇನೂ ತಿಳಿಸಲೇ ಇಲ್ಲ?
ಅಮ್ಮ - ಯಾವುದೋ ಕೆಲಸದ ನಿಮಿತ್ತ ಆತ ಮೊನ್ನೆ ಗುರುವಾರ ದೇವರಾಯನದುರ್ಗಕ್ಕೆ ಬಂದಿದ್ದರಂತೆ. ಆಗಲೇ ನಂ ಮನೆಗೆ ಬಂದು ಜಾತಕ ಫೋಟೋ ಕೊಟ್ಟಿದ್ದರು.. ಹಾಗೆ ನಿನ್ನ ಜಾತಕ ಫೋಟೋ ತೆಗೆದುಕೊಂಡು ಹೋಗಿದ್ದರು. ನಿನ್ನೆ ಸಂಜೆ ಆಚಾರ್ಯರು ಮನೆಗೆ ಬಂದಿದ್ದರು.. ನಿಮ್ಮಿಬ್ಬರ ಜಾತಕ ಚೆನ್ನಾಗಿ ಕೂಡಿ ಬರುತ್ತೆ,32 ಗುಣಗಳು ಕೂಡತ್ತೆ ನಿಮ್ಮ ಮಗನಿಗೆ ಇದೇ ಹೆಣ್ಣೇ ನಿಶ್ಚಯ ಆಗೋದು.  ಬೇರೆ ಮಾತೆ ಇಲ್ಲ ಅಂತ ಹೇಳುದ್ರು. ಆವ್ರು ಹಾಗೆ ಹೇಳಿ ಇನ್ನೂ ಹೊರಟೆ ಇರಲ್ಲಿಲ್ಲ. ಆಗಲೇ ಆತ ಫೋನ್ ಮಾಡಿ ನಿಮ್ಮ ಹುಡುಗನ ಜಾತಕ ಕೂಡಿ ಬಂದಿದೆ. ಹುಡುಗನು ಲಕ್ಷಣವಾಗಿದ್ದಾನೆ. ಯಾವಾಗ ಬರ್‍ತೀರಿ ನೋಡೋದಿಕ್ಕೆ ಅಂತ ಕೇಳಿದರು. ನಿಮ್ಮಪ್ಪ, ನಾವು ಹೋಗುವುದು ಬೇಡ, ಅವರೇ ಇಲ್ಲಿಗೆ ಬರಲಿ.. ನೂರು ವರ್ಷ ಹಳೆಯದಾದ ನಮ್ಮ ಮನೆ ಮಠವನ್ನು ಅವರೇ ಮೊದಲು ನೋಡಲಿ.. ಆವ್ರು ಒಪ್ಪಿದ ಮೇಲೆ ನಾವು ಅಲ್ಲಿಗೆ ಹೋಗೋಣ ಅಂದ್ರು. ಹಾಗಾಗೆ ಆವ್ರು ನಾಳೆ ಇಲ್ಲಿಗೆ ಬರ್ತಿರದು.

ಆಯ್ತಮ್ಮ ನಾ ಮಲುಗ್ತಿನಿ, ಬೆಳ್ಗೆ ಬೇಗನೆ ಎಬ್ಬಿಸಬೇಡಿ.. ನಾನ್ ನಿದ್ದೆ ಮಾಡ್ಬೇಕು ಅಂತ ರೂಮಿಗೆ ಹೋದೆ. ಅಮ್ಮ ಕರೆದು ಅಲ್ಲೇ ಟೀವೀ ಮೇಲೆ ಹುಡುಗಿ ಫೋಟೋ ಜಾತಕ ಇದೆ ನೋಡು ಅಂದ್ರು. ಅಯ್ಯೋ.. ಆ ಜಾತಕದಲ್ಲಿ ನಾನ್ ಏನಮ್ಮಾ ನೋಡಲಿ.. 10-12 ಮನೆ ಲೀ ಎಲ್ಲ ಗ್ರಹಗಳು
ಕೂತಿರತ್ತೆ. ಖಾಲಿ ಇರೋ 1-2 ಮನೆಗೆ ನೀವ್‌ಗಳೆಲ್ಲ ಸೇರಿ ನಮ್‍ನ ದೂಕ್ಬಿಡ್ತೀರಾ. ಖಾಲಿ ಮನೆ ಅಕ್ಕ ಪಕ್ಕಾ ರಾಹು ಕೇತುಗಳಿದ್ರಂತು ನಮ್ಮ ಪಾಡು ಗೋವಿಂದ ಗೋವಿಂದಾ......ಅನ್ನುತ್ತಿದ್ದೆ.. ನಾಳೆ ಅವ್ರೆದ್ರುಗೆಲ್ಲ ಇದೆ ತರ ಮಾತಾಡ್ಬೇಡ ಅನ್ನುತ್ತಾ ಕೈಗೆ ಹುಡುಗಿಯ ಫೋಟೋ ಕೊಟ್ಟು ಮಲ್ಗೊದಿಕ್ಕೆ ಹೊರಟರು. ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ಹೇಳ್ಬಿಡ್ಬೇಕಮ್ಮ ಆಮೇಲೆ ಮದ್ವೆ ಆದ್ಮೇಲ್ ಹೆಚ್ಚು ಕಮ್ಮಿ ಆಗ್ಬಾರ್ದು.. ಇನ್ನೂ ಏನೇನೋ ಹೇಳುತ್ತಾ ರೂಮಿಗೆ ಎಂಟ್ರೀ ಕೊಟ್ಟೆ.

ಲೈಟೂ ಫ್ಯಾನು ಹಾಕಿ ಮಂಚದ ಮೇಲೆ ಹಾಗೆ ಉರುಳುತ್ತಾ ಹುಡುಗಿಯ ಫೋಟೋ ನೋಡಿದೆ. ಏನಾಶ್ಚರ್ಯ! ಅಷ್ಟು ಸುಂದರವಾದ ಹುಡುಗಿ ನನ್ನನ್ನು ನೋಡುವುದಕ್ಕೆ ಬರುತ್ತಿದ್ದಾಳೆ ಅಂದರೆ... ನನ್ನ ಕಣ್ಣುಗಳನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಸುರಸುಂದರಾಂಗಿ. ಅವಳ ಅಂಗಸೌಷ್ಟವ ವರ್ಣಿಸಲು ಮಾತೆ ಹೊರಡಲ್ಲಿಲ್ಲ. ಟೆಲಿಪ್ರಭು ಅಣ್ಣನ ಸೌಂದರ್ಯ ಹೇಗಿರಬೇಕಂದ್ರೆ.. ಚುಟುಕು ನೆನಪಾಯಿತು
ನಡುವಿಗೆ ಕಚಗುಳಿಯಿಡುವಷ್ಟು ಉದ್ದ ಕೂದಲು
ಒಂದೇ ಕೈಯಲ್ಲಿ ಬಳಸಿ ಹಿಡೀಬಹುದಾದ ಬಳಕುವ ನಡು
ಆ ನಡುವ ಸುತ್ತಿ ಕೈಮೇಲೆ ಜರಿದಿರುವ ಸೀರೆ ಸೆರಗು
ನಡೆದರೆ ಗೆಜ್ಜೆ ಬಳೆಗಳ ಘಲ್ ಘಲ್ ಸದ್ದು........

ಈ ಕವನ ಅವಳ ನೋಡೇ ಬರೆದಿರುವನೇನೋ ಅನಿಸಿತು. ಅಷ್ಟು ರೂಪಸಿ. ಒಂದು ಸಾಮಾನ್ಯ ಸಿಲ್ಕ್ ಸೀರೆಯಲ್ಲೇ ಹಾಗೆ ವಿಜೃಂಬಿಸುತ್ತಿದ್ದಳು.

ಸಂಜೆ ನಾಕಕ್ಕೆ ಅವರು ಬಂದಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅದು ಇದು ಅಂತ ಮಾತಾಡುತ್ತಾ ಕುಳಿತ್ತಿದ್ದರು. ನಾನು ಮಹಡಿಯ ಮೆಟ್ಟಿಲ ಮೇಲೆ ಕೂತಿದ್ದೆ. ಅವಳು ನನ್ನೆದುರಿಗೆ ಚೇರ್ ಮೇಲೆ ಕೂತಿದ್ದಳು. ತೀರಾ ಸಿಂಪಲ್ ಆಗಿದ್ದ ಅವರ ಅಪ್ಪ ಅಮ್ಮ ಅಜ್ಜಿ ತಾತ ಚಿಕ್ಕಮ್ಮ
ಅವಳು ಎಲ್ಲರೂ ಇನ್ನೂ ತೀರಾ ಸಿಂಪಲ್ ಆಗಿದ್ದ ನನ್ನ ಅಪ್ಪ ಅಮ್ಮ ಅಣ್ಣ ಅತ್ತಿಗೆ ಅಕ್ಕ ಎಲ್ಲರಿಗೂ ಹಿಡಿಸಿಬಿಟ್ಟಿದ್ದರು. ಒಲಗ ಊದಿಸಿ ಬಿಡೋದೇ ಅನ್ನೋ ಮಾತಿನ ತನಕ ನಾನು ಸುಮ್ಮನೇ ಇದ್ದೆ. ಆಗಲೇ ಅವರ ತಾತ ನೋಡಪ್ಪ ಈಗಿನ ಕಾಲದಾವ್ರು ಅದೇನೋ ಮಾತಾಡ್ಬೇಕು ಅಂತಾರೆ.. ನೀನು .. ಹಾಗೇನೂ ಇಲ್ಲ ತಾತ..ಕ್ಯಾಷುವಲ್ ಆಗಿ ಮಾತಾಡೋಣ ಬನ್ನಿ ಅಂತ ಅವಳನ್ನ ಕರೆದೆ. ಅವಳು ಸ್ವಲ್ಪ ನಾಚಿಕೆಯಿಂದಲೇ ಎದ್ದು ಬಂದಳು.

ನಾನು - ನಾ ನಿಮ್ಮನ್ನ ಒಂದೇ ಪ್ರಶ್ನೆ ಕೇಳ್ತೀನಿ.
ಅವಳು - ಮುಸಿ ನಗುತ್ತಾ.. ಹೂ. ಕೇಳಿ.
ನಾನು - ನೀವು ನನಗಿಂತ ಹೆಚ್ಚಿಗೆ ಓದಿದ್ದೀರಾ. ನನಗಿಂತ ಏನಿಲ್ಲವೆಂದರೂ ಒಂದೂವರೆ ಪಟ್ಟು ಹೆಚ್ಚಿಗೆ ಸಂಬಳ ಪಡಿತೀರಾ.. ನೋಡಲು ಇಷ್ಟು ಚೆನ್ನಾಗಿದ್ದೀರಾ?
ಅಂದರೂ ತೀರದಲ್ಲಿ ತೀರಾ ಸಾಮಾನ್ಯವಾಗಿರುವ ನನ್ನನ್ನ ನೋಡಲು ಬಂದಿದ್ದೀರ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ?
ಅವಳು - ನನ್ನ ಓದು ನನ್ನ ಸಂಬಳ ನನ್ನ ರೂಪ - ಮೂರರ ಬಗ್ಗೆಯೂ ನಾ ಎಂದೂ ಜಾಸ್ತಿ ಮಹತ್ವ ಕೊಟ್ಟಿಲ್ಲ. ನಾವು ಎಸ್ಟ್ ಓದೀದೀವಿ ಅನ್ನೋಕ್ಕಿಂತ ಎಸ್ಟ್ ತಿಳ್ಕೊಂಡಿದೀವಿ ಅನ್ನೋದು ಮುಖ್ಯ. ಇನ್ನ ದುಡ್ಡು -ರೂಪ, ಇವೆರಡು ಇವತ್ ಇರತ್ತೆ ನಾಳೆ ಹೋಗತ್ತೆ. ಆದರೆ ನಿಮ್ಮ ಈ ಸಿಂಪ್ಲಿಸಿಟೀ, ಸೆನ್ಸ್ ಆಫ್ ಹ್ಯೂಮರ್, ನಿಮ್ಮಲ್ಲಿರುವ ಕವಿ, ಎಲ್ಲರೊಂದಿಗೂ ಹೊಂದುಕೊಂಡು ಹೋಗುವ ನಿಮ್ಮ ಗುಣ, ನಿಮ್ಮ ಮನೆಯವರ ಆಚಾರ-ವಿಚಾರ, ನಿಮ್ಮ ಮನೆಯ ರಾಯರ ವೃಂದಾವನ - ಇವೆಲ್ಲ ಶಾಶ್ವತ.. ಏನನ್ನು ಯಾವುದನ್ನು ಮನಸಲ್ಲಿಟ್ಟುಕೊಳ್ಳದೇ ಎಲ್ಲವನ್ನು ಹೇಳಿಕೊಂಡು ಬಿಡುವ ನಿಮ್ಮ ಗುಣ ಹಿಡಿಸಿಬಿಟ್ಟಿತು. ಕೆಲವೊಂದು ವಿಚಾರದಲ್ಲಿ ನೀವು ತೋರುವ ಮೊಂಡುತನ ಹಾಗೂ ಕೆಲವೊಮ್ಮೆ ಬೇಕಂತಲೇ ಮಾಡುವ ಸೋಂಬೇರಿತನವೂ ನನಗೆ ಇಷ್ಟ.
ಇಷ್ಟೇ ಹೇಳಿದ್ದರೆ ನಾನು ಚಿಕಿತನಾಗುತ್ತಿರಲ್ಲಿಲ್ಲ.. ಆಕೆ ಹೇಳಿದ ಕಡೆ ವಾಕ್ಯ ನನ್ನನ್ನು ಬೆಚ್ಚಿ ಬೀಳಿಸಿತು.. ನಾನು ಗರ ಬಡಿದವನಂತೆ ಅಲ್ಲೇ ನಿಂತುಬಿಟ್ಟೆ. ಅವಳು ಒಂದು ಚೀಟಿಯಲ್ಲಿ " ೯೮೮**-*೦೭೧೧, ಇದು ನನ್ನ ಮೊಬೈಲ್ ನಂಬರ್, ಮತ್ತೆ  ನನ್ನ ಭೇಟಿ ಮಾಡಬೇಕೆನಿಸಿದರೆ " ಅಂತ ಬರೆದು ನನ್ನ ಕೈಗಿತ್ತು ಆಚೆ ಹೋಗಿಬಿಟ್ಟಳು.

ನಮಗೆ ನಿಮ್ಮ ಸಂಬಂಧ ಹಿಡಿಸಿದೆ, ನಮ್ಮ ಹುಡುಗಿಯೂ ಒಪ್ಪಿದ್ದಾಳೆ ಆದಷ್ಟು ಬೇಗ ನಿಮ್ಮ ನಿರ್ಧಾರ ತಿಳಿಸಿ ಅಂತ ಹೇಳಿ ಅವರು ಹೊರಟುಹೋದರು. ಮನೆಯಲ್ಲಿ ಎಲ್ಲರಿಗೂ ಒಂದು ರೀತಿಯ ಸಂಭ್ರಮ. ಅಮ್ಮ ಅಕ್ಕ ಅಂತೂ ಹುಡುಗಿಯ ಗುಣ ಗಾನ ಮಾಡುತ್ತಿದ್ದರು. ಏನಪ್ಪಾ ನಿನಗೆ ಒಪ್ಪಿಗೆಯ? ಅಪ್ಪ ಪ್ರಶ್ನಿಸಿದರು. ಅಣ್ಣ, ನನಗೆ 2 ದಿನ ಟೈಮ್ ಕೊಡಿ.. ಆ ಹುಡುಗಿ ಹತ್ತಿರ ಮಾತಾಡಿ ಹೇಳುತ್ತೇನೆ ಅಂದೆ. ಅಮ್ಮ ಕೈ ಚಾಚಿ ಏನೋ ಹೇಳಲು ಬಂದರೂ, ಸರಿ ಆಗಲಿ ಹಾಗೆ ಮಾಡು ಅಂತ ಅಣ್ಣ ಅನ್ನುತ್ತಿದ್ದಂತೆ ಸುಮ್ಮನಾಗಿಬಿಟ್ಟರು.

ನಾನು ಅವಳ ಫೋಟೋ ಬ್ಯಾಗಲ್ಲಿರಿಸಿ ತಿಂಡಿ ತಿಂದು ಬೆಂಗಳೂರಿನ ಬಸ್ಸು ಹತ್ತಿದೆ. ಸಂಯುಕ್ತಳ ಮನೆಯಲ್ಲಿ ಕೀ ಪಡೆದು ಮನೆ ಸೇರಿದಾಗ ೧೧:೩೦ ಆಗಿತ್ತು. ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗಿದ್ದರೂ ಅದಾವುದು ನನಗೆ ತಿಳಿಯಲ್ಲಿಲ್ಲ....ಅವಳ ಫೋಟೋ ಹಿಡಿದು ಹಾಸಿಗೆಯ ಮೇಲೆ ಉರುಳಿದೆ..ಅವಳು ಹೇಳಿದ ಕಡೆ ವಾಕ್ಯ ಮತ್ತೆ ಮತ್ತೆ ನನ್ನ ಕಿವಿಯಲ್ಲಿ ಗುಯ್‌ಗುಡುತ್ತಿತ್ತು ಹಳೆ ಚಲನಚಿತ್ರಗಳಲ್ಲಿ ಒಂದೇ ವಾಕ್ಯ ನಾಕಾರು ಬಾರಿ ಪ್ರತಿಧ್ವನಿಸುವ ಹಾಗೆ...

ಅಮೋದಿನಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ಕಡೆ ವಾಕ್ಯ "ವಿಮಲ ಸಂಯುಕ್ತರಿಗಿಂತ ನಿಮ್ಮ ಬಗ್ಗೆ ಹೆಚ್ಚಿಗೆ ತಿಳ್ಕೊಂಡಿದೀನಿ, ಸಂಯುಕ್ತಳಿಗಿಂತ ನಿಮ್ಮನ್ನ ಹೆಚ್ಚಿಗೆ ಪ್ರೀತಿಸ್ತೀನಿ, ಅಮಳಲಿಗಿಂತ ಹೆಚ್ಚಾಗಿ ಗೆಳತಿಯಾಗಿ ನಿಮ್ಮ ಜೊತೆಗಿರುವುದೇ ನನ್ನ ಆಸೆ."

ಇನ್ನೆರಡು ದಿನಗಳಲ್ಲಿ, ಕೇವಲ ಎರಡೇ ಎರಡು ದಿನಗಳಲ್ಲಿ ನನ್ನ ಜೀವನದ ಅತ್ಯಂತ ಮಹತ್ವದ್ದಾದ ಹಾಗೂ ಪ್ರಮುಖವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕು. ನೆನೆಸಿಕೊಂಡರೆ ಮೈ ಜುಮ್ಮೆಂದಿತು.

No comments:

Post a Comment