Pages

Friday, March 6, 2015

ಆಟುಕುಗಳು(ಅನುಭವದ ಚುಟುಕುಗಳು) - ೧


ಪದಗಳಲ್ಲಿ ಅಡಗಿದ ಸಿದ್ದಾಂತಗಳ ತಳದ ಮೇಲೆ,
ಅರ್ಥೈಸಿಕೊಳ್ಳುವ ಮನಸುಗಳ ಸವಾರಿ,
ತಮಗೆ ಬೇಕಾದಂತೆ.

ಒಂದೇ ಪದವನ್ನು ಸಾವಿರ ಮನಸುಗಳು
ಸಾವಿರ ರೀತಿಯಲ್ಲಿ ಅರ್ಥೈಸಿಕೊಳ್ಳಬಲ್ಲವು.

ನೈಜತೆಯ ಸಾವು ಇನ್ನೆಲ್ಲೂ ಇಲ್ಲ,
ಅದು ಇರುವುದು ಅರ್ಥೈಸಿಕೊಳ್ಳುವ ಮನದ
ತೀಕ್ಷ್ಣತೆಯ ಬುದ್ದಿವಂತಿಕೆಯಲ್ಲಿ.
                                            *******************************************

Friday, February 27, 2015

ವಿವಾಹ ವಾರ್ಷಿಕೋತ್ಸವ


ಬಾಳೆ೦ಬ ದೋಣಿಯಲಿ ಯಾತ್ರಿಕರು ನಾವು

ತೇಕುತ್ತ ಜೀಕುತ್ತ ಮರೆತಿಹೆವು ನೋವು

ನೋವು೦ಟು ನಲಿವು೦ಟು ಕನಸು ನೂರೆ೦ಟು

ಹಿಡಿದೆಹೆವು ಜೊತೆಯಾಗಿ ಆಸೆಗಳ ಹುಟ್ಟು

ಗಾಳಿಮಳೆಯೇ ಇರಲಿ ಚ೦ಡಮಾರುತ ಬರಲಿ

ನಮ್ಮ ನಾವೆಯು ಎ೦ದೂ ಸಾಗುತ್ತಲಿರಲಿ

ನಿನ್ನ ಧೈರ್ಯದ ಅಭಯ ನನಗೆ ನೀಡಲಿ ಸುಜಯ

ಮೆಟ್ಟಿಲಾಗಲಿ ಅದುವೇ ಸಾಧಿಸಲು ವಿಜಯ

ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿಯುತಲಿ

ಜತೆಗೂಡಿ ಸಾಗಿರುವೆ ನಗುತ ನಲಿಯುತಲಿ

ಜೀವನದಿ ಕಷ್ಟ-ಸುಖ ಬೇವು-ಬೆಲ್ಲದ ತೆರದಿ

ತ೦ದಿಹುದು ಎಲ್ಲ ಬಗೆ ಅನುಭವದ ಸರದಿ

ಬಾಳದೋಣಿಯ ನಾವು ಹತ್ತಿದಾ ದಿನದಿ೦ದ

ಥರ ಥರದ ಅನುಭವವ ಪಡೆದ ಕ್ಷಣದಿ೦ದ

ಕಳೆದಿಹೆವು  ಒಂದು ವರುಷದ ನ೦ಟು

ಎ೦ದೆ೦ದಿಗೂ ಇರಲಿ ಮಧುರ ನೆನಪಿನ ಗ೦ಟು

Saturday, January 10, 2015

ಕೊರೆತ

[ಮೊನ್ನೆ ಊರಿನಲ್ಲಿದ್ದಾಗ ಓದಲು ಬಂದವನು ಅಲ್ಲೇ ನೆಲೆಯೂರಿದ್ದ, ಹಳೆಯ ಗೆಳೆಯ ಬಹಳ ದಿನಗಳಾದ ಮೇಲೆ ಸಿಕ್ಕಿದ್ದ. ಕೊರೆಸಿಕೊಳ್ಳೋ ಆಸಾಮಿ ಸಿಕ್ಕಿದನೆಂದು ಅನಿಸಿತೇನೊ ಅವನಿಗೆ. ನಾನು ಬಕ್ರಾ ಆಗಿದ್ದೆ. ವಿಧಿ ಇಲ್ಲ, ತಪ್ಪಿಸಿಕೊಳ್ಳೋಕು ಆಗಲ್ಲಿಲ್ಲ. ಅದೇ ಕಥೆಯನ್ನು ಹಾಗೆ ಭಟ್ಟಿ ಇಳಿಸಿದರೆ ನಾನು ಕೂಡ ಕೊರೆಯುವ ಆಸಾಮಿಯೆಂದು ನೀವು ತೀರ್ಮಾನಿಸಿಬಿಡುತ್ತೀರಾ ಅಂತ ೧೮-೨೦ ಸಾಲಿನಲ್ಲಿ ಚುಟುಕಾಗಿ ಕುಟುಕಿದ್ದೇನೆ. ಓದಿ , ಓದಿಸಿ ರಿವ್ಯೂಸ್ ಕಳಿಸಿ].
 

ಜೀವನದ ಆಸೆ ಆಕಾಂಕ್ಷೆ ಬದಿಗಿಟ್ಟು ಬಂದೆ ನಾನು ಇಲ್ಲಿ

ಮನೆ ಮಠ ಮರೆತಿದ್ದೆ ಕೆಲಸದ ತಲ್ಲೀನತೆಯಲ್ಲಿ

ಅಕಸ್ಮಾತಾಗಿ ಕಣ್ಣಿಗೆ ಬಿದ್ದಳು ಅಂದು ಕ್ಯಾಂಟೀನಿನಲ್ಲಿ

ಶುರುವಾಯಿತು ನಮ್ಮ ಪ್ರೇಮ ಮೊದಲ ನೋಟದಲ್ಲಿ
 

ಕಾಲ ಕಳೆಯಿತು ಮೂವಿ ಶಾಪಿಂಗ್ ಮಾಲಿನಲ್ಲಿ

ಆ ಹೊತ್ತಿಗೆ ವಿಚಾರ ಬಯಲಾಗಿತ್ತು ಮನೆಯಲ್ಲಿ

 
ಜಾತಿ ಜಾತಕ ಬಹಳ ಮುಖ್ಯವಾಯಿತಲ್ಲಿ

ಎರಡು ಸೇರಿತ್ತು ನನ್ನ ಅದೃಷ್ಟದ ಪಾಲಿನಲ್ಲಿ

ಮದುವೆ ಆಗೇ ಹೋಯಿತು ಮಾಘ ಮಾಸದಲ್ಲಿ

ಹನಿಮೂನ್ ಮುಗಿಯಿತು ಮಲೇಷ್ಯಾ ಪ್ರವಾಸದಲ್ಲಿ

೨ ವರ್ಷ ಕಳೆಯಿತು ಒಂದೇ ಘಳಿಗೆಯಲ್ಲಿ

ಇದ್ದಕ್ಕಿದ್ದಂತೆ ಬಿದ್ದಳು ಅಂದು ತಲೆ ಸುತ್ತಿನಲ್ಲಿ

ಅವಳಿಗೆ ಬೇಕಿರಲ್ಲಿಲ್ಲವೇನೋ ಇಷ್ಟು ಬೇಗ ಮತ್ತೊಂದು ಜೀವ ಸಂಸಾರದಲ್ಲಿ

ಅಂತೂ ಹೋದಳು ತವರಿಗೆ ಹಸಿ ಕೋಪದಲ್ಲಿ

ಅಂದಿನಿಂದ ಶುರುವಾಯಿತು ಜಗಳ ಪ್ರತಿನಿತ್ಯದಲ್ಲಿ

ಮಾತಾಯಿತು ಮಗು ತೆಗೆಸುವ ವಿಚಾರದಲ್ಲಿ

ನಡೆದೇಬಿಟ್ಟರು ಆಸ್ಪತ್ರೆಗೆ ಒಂದು (ಅ)ಶುಭ ಘಳಿಗೆಯಲ್ಲಿ

ಕ್ಯಾಕರಿಸಿ ಉಗಿದು ಕಳಿಸಿದರು ಆಸ್ಪತ್ರೆಯಲ್ಲಿ

ಮುಖ ಸಿಂಡರಿಸಿಕೊಂಡು ಬಂದರು ಬರಿಗೈಯಲ್ಲಿ

ಮತ್ತೆ ನಾನು ಬ್ಯುಸಿಯಾದೆ ಕೆಲಸ ಕಾರ್ಯಗಳಲ್ಲಿ

[ಕೊರೆತ ಸಾಕು, ಹೇಳು ನಿನ್ನ ಸಮಸ್ಯೆ ಏನು?]

ಏನಂತ ಹೇಳಲಿ,

ವಾರವಾಯಿತು ಮುಖ ನೋಡಿ, ಮಾಡಿಲ್ಲ ಅವಳು ಫೋನು

ಎಷ್ಟು ಅಹಂಕಾರ, ಮಾತಾಡೋಲ್ಲ ಅಲ್ಲಿ ಹೋದರೂ ನಾನು

ಪ್ರೀತಿ ವಿರಮಿಸಿದೆ, ವಿಶ್ವಾಸ ಕಳೆದಿದೆ, ನಂಬಿಕೆ ಮರೆಯಾಗಿದೆ

ಅಹಂ ಬೆಳೆದಿದೆ, ಬೆಳೆಯುತ್ತಿದೆ, ಮೆರೆಯುತ್ತಿದೆ.

[ನಿನ್ನ ರಾಶಿ ನಕ್ಷತ್ರ ಯಾವುದು? ನಾನು ವಿಚಾರಿಸಿದೆ

ತಿಳಿದ ಮೇಲೆ ಮತ್ತೆ ಹೇಳಿದೆ

ಹೌದಪ್ಪ, ಇನ್ಮೇಲ್ ಹೀಗೆ, ನಿಂಗೆ ಸಾಡೇ ಸಾತಿ ಶುರುವಾಗಿದೆ]

Wednesday, January 7, 2015

ಹೊಳೆತ - ಮರೆತ

ಭಾನುವಾರ, //೨೦೧೫
ಬರೆಯಲು ಕೂತರೆ ಏನೂ ತೋಚದು
ತಲೆಯಲಿ ಎಲ್ಲೋ ಹಾಗೆ ಉಳಿವುದು ||

ಕೂತರೆ ನಿಂತರೆ ಅದೇ ಆಲೋಚನೆ
ಮಲಗಿದರಂತೂ ಬಿಡದೀ ಯಾತನೆ

ಹಕ್ಕಿಯ ಗಾನಕೆ ಹೊಳೆಯಿತು ಘಕ್ಕನೆ
ಹಿಡಿದೆ ಪೆನ್ನು ಬರೆಯಲು ಥಟ್ಟನೆ

ಖಾಲಿ ಶೀಶಾ ಕೂಗಿದ ಆಗಲೇ
ಬರೆವುದು ಮರೆತೇ ಹೋಯಿತು ಒಮ್ಮೆಲೆ

ಮೌನ ಬಯಸಿ ಪಾರ್ಕಿಗೆ ಹೋದರೆ
ಆಗುವುದು ಪ್ರೇಮಿಗೆ ಬಹಳ ತೊಂದರೆ

ಮನೆಯಲಿ ರಾತ್ರಿ ನಿಶ್ಯಬ್ದದ ಕೋಣೆ
ಆದರೆ ಮನಸ್ಸೆಲ್ಹೋಯ್ತೋ ನಾ ಕಾಣೆ

ಏಕಾಂತದಲ್ಲೂ ಇಲ್ಲ ನೆಮ್ಮದಿ
ಆಗಿದೆ ಮನಸಿಗೆ ನೋವೇ ಇಮ್ಮಡಿ

ಕನವರಿಕೆಯಲೂ ಅದರದೇ ಸದ್ದು
ಕನಸಲಿ ಬೆಚ್ಚಿ ಕೂರುವೆ ಎದ್ದು

ದಿನ ಕಳೆವುದು ಹೀಗೆ ಸುಮ್ಮನೆ
ಬೆಳಗಾದರೆ ಆಫೀಸೇ ಮನೆ

ಬರೆಯಲು ಕೂತರೆ ಏನೂ ತೋಚದು
ತಲೆಯಲಿ ಎಲ್ಲೋ ಹಾಗೆ ಉಳಿವುದು ||

                                                  ********************