Pages

Wednesday, April 11, 2012

ಅವಳ ಕಾಲ್ ಬರುತ್ತಾ?? - ಭಾಗ ೧೧




ಸಮಯ ಬೆಳಗ್ಗೆ ೧೦:೩೦ ಆಗಿತ್ತು. ಮನೆ ಕಡೆ ತಿರುಗಿ ಬರಲು ITPL ಬಸ್ ಸ್ಟಾಪಲಿ ಮತ್ತೊಂದು 500c ಹತ್ತಿದೆ. ಮನಸ್ಸನ್ನು ವಿಮಲಳ ಕಡೆಯಿಂದ ಡೈವರ್ಟ್ ಮಾಡುವ ಪ್ರಯತ್ನದಲ್ಲಿರುವಾಗಲೇ ಕಂಡಕ್ಟರ್ ಬಂದು ಟಿಕೆಟ್ ಟಿಕೆಟ್ ಅಂದ. ನಾನು ಬೆಳಗ್ಗೆ ಕೊಂಡಿದ್ದ ಪಾಸನ್ನು ತೋರಿಸಿದೆ. ಎಲ್ಲಾರೂ ಪಾಸ್ ತೋರಿಸಿದರೆ ನಮ್ಮ ಗತಿ ಏನು ಅಂತ ಅವನು ಗೊಣಗುತ್ತಿರುವಾಗಲೇ ಬರೆದ್ದದ್ದು ಕಂಡಕ್ಟರ್ ಅಣ್ಣನ ಅಳಲು ಎಂಬ ಈ ಚಿಕ್ಕ ಚುಟುಕು.

ಈ ಬಸ್ಸಿಗೆ ಹತ್ತುವುದಿಲ್ಲ ಬೇರೆ ಯಾವ ಮಾಸು
ಇಲ್ಲಿ ಕಾಣುವುದು ಬರೀ ಐಟಿ ಕೂಸು
ತೋರಿಸಿದರೆ ಎಲ್ಲ ಮಂತ್ಲೀ / ಡೈಲೀ ಪಾಸು
ನಮಗೆಲ್ಲಿಂದ ಬರಬೇಕು ಕಾಸು
ಟಾರ್ಗೆಟ್ ಮೀಟ್ ಮಾಡದ್ದಿದ್ದ್ರೆ ಬಾಸು
ತೊಗೋತಾರೆ ನಮಗೆ ಕ್ಲಾಸು
ಮಾಡ್ತಾರೆ ಸಂಬಳದಲ್ಲಿ ಲಾಸು

ಜೋರಾಗಿ ಏಸೀ ಆನ್ ಮಾಡಿಕೊಂಡು ಸೀಟಿಗೆ ಒರಗಿ ಕಣ್ಣು ಮುಚ್ಚಿ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದೆ. ರಾತ್ರಿಯೆಲ್ಲ ನಿದ್ದೆ ಇಲ್ಲದ್ದಕ್ಕೋ ಏನೋ ಹಾಗೆ ಒಂದು ಜಂಪ್ ಹತ್ತಿಬಿಟ್ಟಿತು. ಎಚ್ಚರವಾದಾಗ ಬಸ್ ಇನ್ನೂ ಮಾರತಹಳ್ಳಿ ಬ್ರಿಡ್ಜ್ ಬಳಿ ಟ್ರಾಫಿಕಲಿ ತೆವಳುತ್ತಾ ಸಾಗುತ್ತಿತ್ತು. ಪೇಪರ್ ಪೆನ್ ತೆಗೆದು ವಾಹನ ದಟ್ಟಣೆ ಅನ್ನೋ ಈ ಚುಟುಕನ್ನ ಬರೆದ್ದದ್ದು ಆಗಲೇ.

ಬೆಂಗಳೂರಲ್ಲಿ ಸಿಕ್ಕಾಪಟ್ಟೆ ವಾಹನ ದಟ್ಟಣೆ
ಕಾರಣ? ಕೇಳಿದರೆ ಯಾರು ಬೇಕಾದರೂ ಹೇಳುತ್ತಾರೆ ತಟ್ಟನೆ
೧) ಪ್ರಗತಿಯೇ ಕಾಣದೆ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳು
೨) ನಾಕೆಂಟು ಮಂದಿ ಕೂರುವ ಕಾರಲ್ಲಿ ಹೋಗುತಾರೆ ಒಬ್ಬಿಬ್ಬರು
ಇದಕ್ಕೆಲ್ಲ ಪರಿಹಾರ ???? ಇದೆ.
ಕೆಲಸ ಬೇಗ ಪೂರೈಸಲು ಗುತ್ತಿಗೆದಾರರಿಗೆ ಸರಕಾರ ಹೊರಡಿಸಬೇಕು ಕಟ್ಟಪ್ಪಣೆ
ಕಾರ್ ಪೂಲಿಂಗ್ ನಂತಹ ಯೋಜನೆಗಳಿಗೆ ಸರಕಾರ ಹಾಕಬೇಕು ಮಣೆ
ಆಗ ನಾವು ಬೇಗ ಸೇರಬಹುದು ನಮ್ಮ ಕೋಣೆ

ಬನಶಂಕರಿ ಬಸ್ ಸ್ಟಾಪ್ ತಲುಪಿದಾಗ ಸಮಯ ಮಧ್ಯಾನ್ಹ ೧:೦೦ ಗಂಟೆ ಆಗಿತ್ತು. ವಿಮಲ ಕೊಟ್ಟ ೨ ಪುಟಾಣಿ ದೋಸೆ ಬಿಟ್ಟರೆ ಬೇರೇನೂ ತಿಂದಿರಲ್ಲಿಲ್ಲ. ಆಟೋ ಹತ್ತಿ BDA Complex ಎದುರಿಗಿರುವ SLV ಸ್ವಾದಿಷ್ಟ ತಲುಪಿದೆ. ಒಂದು ಸೌತ್ ಇಂಡಿಯನ್ ಮೀಲ್ಸ್ - ೬೫ ರೂ ಕೊಟ್ಟು ಊಟ ಮುಗಿಸಿ ಮತ್ತೆ ಆಟೋ ಹಿಡಿದು ಮನೆ ತಲುಪಿದೆ. ಸಮಯ ೧:೪೫. ಸಂಯುಕ್ತಳನ್ನು ಭೇಟಿಯಾಗಲು ಇನ್ನೂ ೧:೧೫ ತಾಸು ಇದೆ. ಹಾಗೆಂದುಕೊಳ್ಳುತ್ತಲೇ ಹಾಸಿಗೆ ಮೇಲೆ ಉರುಳಿದೆ. ಮೂರಕ್ಕೆ ಸಂಯುಕ್ತ ಬಂದು ತಲೆ ಮೇಲೆ ಕೈಯಾಡಿಸಿ ಎಬ್ಬಿಸಿದಾಗಲೇ ಎಚ್ಚರವಾದದ್ದು. ಸಂಯುಕ್ತಳಿಗೆ ನಿನ್ನ ಗಾಡಿ ತೆಗೀ ಹೋಗು ನಾನೀಗ ಬಂದೆ ಎನ್ನುತ್ತಾ ಬಚ್ಚಲು ಮನೆಗೆ ಹೋದೆ. ಬೇಗ ಬೇಗ ಮುಖ ತೊಳೆದು ರೆಡೀ ಆಗಿ ಅಮೋದಿನಿಯ ಫೋಟೋನ ಜೇಬಿಗಿಳಿಸಿ ಮನೆ ಬೀಗ ಹಾಕಿ ಸರ ಸರ ಹೆಜ್ಜೆ ಹಾಕಿದೆ. ನಾನು ಆಚೆ ಬರುತ್ತಿದ್ದಂತೆ ಸಂಯುಕ್ತ ಕೈನಿ ಸ್ಟಾರ್ಟ್ ಮಾಡಿ ಆಕ್ಸೀಲಾರೇಟೊರ್ ತಿರುವಿದಳು. ಗಾಂಧಿ ಬಜ಼ಾರ್ CCD ಬಳಿ ಕೈನಿ ಪಾರ್ಕ್ ಮಾಡಿ ನಾವಿಬ್ಬರೂ ಮೂಲೆಯಲ್ಲಿದ್ದ ಸೋಫಾದ ಮೇಲೆ ಆಸೀನರಾದಾಗ ಚಿಕ್ ಮುಳ್ಳು ೩ರ ಮೇಲೂ ದೊಡ್ ಮುಳ್ಳು ೪ರ ಮೇಲೂ ಇತ್ತು.

ಏನೋ ಮಾತಾಡಬೇಕು ಅಂತ ಕರ್ಕೊಂಡು ಬಂದು ಸುಮ್ಮನೇ ಕೂತಿದ್ಯಲೊ? ನಿನ್ ಮದುವೆ ವಿಚಾರ ತಾನೇ? ಅಂತ ಸಂಯುಕ್ತ ಮಾತು ಶುರು ಮಾಡಿದಳು. ನಿನ್ನನ್ನು ಇನ್ನುಮುಂದೆ ಗೂಗಲ್ ಡಾರ್ಲಿಂಗ್ ಅಂತ ಕರಿತೀನಿ ಅಂತ ಹಾಸ್ಯ ಮಾಡಿದೆ. ಯಾಕೆ ಹಾಗ್ ಕರಿತ್ಯ? ಇನ್ನೆನೆ ಮತ್ತೆ, ನಾ ಹೇಳಬೇಕೆಂದುಕೊಂಡಿದ್ದನ್ನ ನೀನೆ ಊಹೆ ಮಾಡಿಬಿಡುತ್ತೀಯಲ್ಲ? ಅದಕ್ಕೆ ಎಂದೆ. ಹ ಹ ಹ.. ಕರಕ್ಟ್.. ನೀ ಅದೇ ವಿಷ್ಯ ಮಾತಾಡಕ್ ತಾನೇ ಕರ್ದಿರದು. ನೀ ಏನಂತಾನ ಕರ್ಕೊ.. ಜೊತೆಯಲ್ಲಿ ಡಾರ್ಲಿಂಗ್ ಅನ್ನು ಅಷ್ಟೇ ಸಾಕು ಅಂದ್ಲು.  ನಾವು ಹೀಗೆ ಮಾತಾಡುತ್ತಿರುವಾಗಲೇ ವೇಟರ್ ಬಂದು ಪಕ್ಕ ನಿಂತಿದ್ದ. ಟು Cafe Latte Regular - ಆರ್ಡರ್ ಮಾಡಿದೆ. ನೀ ಯಾವಾಗ್ಲೂ ಅದೇ ಆರ್ಡರ್ ಮಾಡ್‌ತ್ಯ? ಹೋಗೊ.. Any reason? ಅಂದ್ಲು. ಅಲ್ಲೇ ಬಿದ್ದಿದ್ದ ಮೆನು ತೆಗೆದು Cafe Latte Regular ಮುಂದಿದ್ದ A light milky coffee and a shot of espresso with steamed milk - the recipe for happiness ಅನ್ನೋ ವಾಕ್ಯ ತೋರಿಸಿದೆ. ಒಹ್ ರೆಸಿಪ್ ಫಾರ್ ಹ್ಯಾಪಿನೆಸ್ಸ - ಅಂತ ಹ್ಯಾಪಿನೆಸ್ಸ್ ಸಮಾಚಾರ ಏನೋ? ಬೇಗ ಹೇಳೋ.. ಆಯ್ತು. ಅದುನ್ನ ಹೇಳೋದಿಕ್ಕೆ ನಿನ್ನ ಕರ್ಕೊಂಡು ಬಂದಿರದು. ನೀನು ಸ್ವಲ್ಪ ಸಮಾಧಾನವಾಗಿರಬೇಕು. ನಾ ಹೇಳೊದನ್ನೆಲ್ಲ ಸರಿಯಾಗಿ ಕೇಳಿಸಿಕೊಳ್ಳಬೇಕು , ಮಧ್ಯೆ ಮಧ್ಯೆ ಬಾಯಿ ಹಾಕಬಾರದು ಅಂದೆ. ಹೂ ಅನ್ನುತ್ತಾ ತಲೆಯಾಡಿಸಿದಳು.

ಸಂಯುಕ್ತ ನೀನು ವಿಮಲಳ ಫೋಟೋ ನೋಡಿದ್ದಿಯ.. ನಾನು ಆಕೆಯನ್ನು ಇವತ್ತಿನ ಬೆಳಗ್ಗೆ ೮ರ ತನಕವೂ ಪ್ರೀತಿಸುತ್ತಿದ್ದೆ. ಆದರೆ ಈಗ ಪ್ರೀತಿಸುತ್ತಿಲ್ಲ. ನೀನು ಅವಳನ್ನು ಪ್ರೀತಿಸುತ್ತಿಲ್ಲ ಅನ್ನೋದು ಕೇಳಿ ಖುಷಿಯಾಗುತ್ತಿದೆಯಾದರೂ, ಎಲ್ಲಾ ಒಗಟಿನ ತರ ಮಾತಾಡಬೇಡ, ಸರಿಯಾಗಿ ಬಿಡಿಸಿ ಹೇಳು ಅಂತ ಬಾಯಿ ಹಾಕಿದಳು. ನಾ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿದೆಯಷ್ಟೇ... ಸರಿ ಸರಿ ಇನ್ನೊಂದ್ ಸತಿ ಮಾತಾಡಲ್ಲ ಅಂದು ಕೈ ಕಟ್ಟಿ ಬಾಯಿಮೇಲೆ ಬೆರಳಿಟ್ಟುಕೊಂಡಳು. ನನ್ನ- ಅಮಲಳ - ವಿಮಲಳ ಬಗ್ಗೆ ಎಲ್ಲವನ್ನು ವಿವರಿಸಿ ಅವಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದೆ. ನಾನು ಮುಗಿಸುವವರೆಗೂ ಮಧ್ಯದಲ್ಲಿ ಲೊಚಗುಟ್ಟುವುದು, ಛೇ ಪಾಪ ಛೇ ಅಂತ ಅನ್ನುತ್ತಾ ಕೂತಿದ್ದಳು. ಹಾಗಾದರೆ ನೀನು ವಿಮಲಳನ್ನ ಮದುವೆಯಾಗೊಲ್ಲ... ನನ್ನ ಪ್ರೀತಿ ತುಂಬಾ ಸ್ಟ್ರಾಂಗ್ ಮರಿ.. cheers -  the recipe for happiness ಅನ್ನುತ್ತಾ ಲೋಟಕ್ಕೆ ಲೋಟ ತಾಕಿಸಿ ಒಂದು ಗುಟುಕು ಹೀರಿ ಯಾವುದೋ ಯುದ್ಧ ಗೆದ್ದು ಬಂದವಳಂತೆ ನಿಟ್ಟುಸಿರುಬಿಟ್ಟಳು.

ಆಗಲೇ ನಾನು ಜೇಬಿನಲ್ಲಿದ್ದ ಅಮೋದಿನಿಯ ಫೋಟೋ ತೆಗೆದು ಸಂಯುಕ್ತಳಿಗೆ ಕೊಟ್ಟೆ. ಫೋಟೋ ನೋಡಿದ ತಕ್ಷಣ ಇವಳಾ... ಅನ್ನಲು ಹೋದವಳು, ಯಾಕೋ ತಡವರಿಸಿ ಎಂಜಲು ನುಂಗುತ್ತಾ ಯಾರಿದು? ಅಂತ ಹುಬ್ಬುಗಂಟಿಕ್ಕಿ ಕೇಳಿದಳು. ಅವಳ ಮುಖದಲ್ಲಾದ ಬದಲಾವಣೆ ಗಮನಿಸಿದ ನನಗೆ, ಸಂಯುಕ್ತಳಿಗೆ ಆಮೋದಿನಿ ಗೊತ್ತಾ?? ಅನ್ನೋ ಪ್ರಶ್ನೆ ಒಂದು ಕ್ಷಣ ಕಾಡಿತಾದರೂ, ಇವಳು ಆಮೋದಿನಿ, ನಾನು ಮದುವೆಯಾಗಲಿರುವ ಹುಡುಗಿ. ಹೇಗಿದಾಳೆ?  ಸಂಯುಕ್ತಳಿಗೆ ಏನು ಹೇಳಬೇಕೋ ತೋಚಲ್ಲಿಲ್ಲ... ನನ್ನ ಮುಖವನ್ನೊಮ್ಮೆ ಅಮೋದಿನಿಯ ಫೋಟೋವನ್ನೊಮ್ಮೆ - ಹೀಗೆ ೪-೫ ಬಾರಿ ನೋಡುತ್ತಾ ಸುಮ್ಮನೇ ಕುಳಿತುಬಿಟ್ಟಳು. ಎಷ್ಟೋ ಹೊತ್ತಾದರೂ ತಾಯಿಯ ಹಾಲು ಕುಡಿಯಲು ಬರದ ಕರುವನ್ನು ನೆನೆಸಿಕೊಂಡು ಆಕಳು ಪಡುವ ಮೂಕವೇದನೆಯಂತಿತ್ತು ಅವಳ ಆ ಸ್ಥಿತಿ. ಯಾಕೆ ಸಂಯುಕ್ತ.. ಏನು ಮಾತಾಡುತ್ತಿಲ್ಲ? ಅಮೋದಿನಿ ಚೆನ್ನಾಗಿಲ್ಲವಾ? ನಾನೇ ಮತ್ತೆ ಕೇಳಿದೆ. ಹಾಂ ಹಾಂ ಸೂಪರಗಿದಾಳೆ.. ಅಪ್ಸರೆ ತರ ಇದಾಳೆ.. ತರ ಏನು ಅಪ್ಸರೆ ಹಾಗೆ ಇದಾಳೆ ಅಂತ ಗದ್ಗದಿತ ಧ್ವನಿಯಲ್ಲಿ ಹೇಳಿದಳು.

ನಾನು ಪದೇ ಪದೇ ವಾಚ್ ನೋಡಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ ಸಂಯುಕ್ತ - ಯಾಕೋ ಎಲ್ಲಿಗೆ ಹೋಗಬೇಕು? ಟೈಮ್ ಆಗ್ತಿದ್ಯಾ? ಅಂತ ಕೇಳಿದಳು. ಹೌದು.. ಆರಕ್ಕೆ MTR ನಲಿ ಅಮೋದಿನಿನ ಮೀಟ್ ಮಾಡಬೇಕು ಅಂದೆ. ವ್ಹಾಟ್? ಅಂತ ಕಣ್ಣರಳಿಸಿ, ನಾನು ನಿನ್ನ ಜೊತೆ ಅಮೋದಿನಿನ ಮೀಟ್ ಮಾಡಲು ಬರುತ್ತೇನೆ ಅಂತ ದ೦ಬಾಲು ಬಿದ್ದಳು. ನಾನು ಎಷ್ಟೇ ಹೇಳಿದರೂ ಕೇಳದೇ, ನನ್ನ ಮೊಬೈಲ್ ಕಿತ್ತುಕೊಂಡು ಅಮೋದಿನಿಗೆ ಡೈಯಲ್ ಮಾಡಿ, ಹಲೋ.. ಒಂದು ನಿಮಿಷ ಎಂದು ಹೇಳಿ ಮೊಬೈಲ್ ನನ್ನ ಕೈಗೆ ಕೊಟ್ಟಳು. ಸಂಯುಕ್ತ ನನ್ನ ಜೊತೆ ಬರಲು ಹಟ ಮಾಡುತ್ತಿರುವ ವಿಚಾರ ಹೇಳುತ್ತಿದ್ದಂತೆ, ಹೇ ಅವಳನ್ನು ಕರೆದುಕೊಂಡು ಬನ್ನಿ, ನಾನು ಅವಳ ಜೊತೆಯೂ ಮಾತಾಡಬೇಕು. ಎಷ್ಟು ದಿ..... ೬ ಗಂಟೆಗೆ ಬರ್ತೀರಲ್ವಾ? ಅಂದಳು. ನಾನು ಏನು? ಅನ್ನುತ್ತಿರುವಾಗಲೇ ಅವಳು ಮತ್ತೊಮ್ಮೆ ಜೋರಾಗಿ ೬ ಗಂಟೆಗೆ ಬರ್ತೀರಲ್ವಾ? ಸೀ ಯೂ ಅಂತ ಕಟ್ ಮಾಡಿದಳು. ಅವಳಿಗೂ ಇವಳು ಗೊತ್ತಾ? ಅನುಮಾನದ ಸಣ್ಣ ಎಳೆ ತಲೆ ಹೊಕ್ಕಿತಾದರೂ, ಇನ್ನೊಂದು ಗಂಟೆಯಲಿ ಎಲ್ಲಾ ತಿಳಿದುಬಿಡತ್ತೆ ಅಂತ ಸುಮ್ಮನಾಗಿಬಿಟ್ಟೆ. ಸಮಯ ೫:೧೫ ಆಗಿತ್ತು. ಮನೆಗೆ ಫೋನ್ ಮಾಡಿ ಅಮ್ಮ ನಾ ಇವತ್ತು ಸ್ವಲ್ಪ ಲೇಟ್ ಆಗತ್ತೆ ಬರದು ಅಂತ ಹೇಳಿ, MTR ಕಡೆ ಹೊರಡೋಣವೆ? ಅಂತ ನನ್ನ ಮುಖ ನೋಡಿದಳು.

ವಾಚ್ ನೋಡಿಕೊಂಡು ಅವಳ ಬ್ಯಾಗಲ್ಲಿದ್ದ ಕೈನಿಯ ಕೀ ಎತ್ತಿಕೊಂಡು ಕೌಂಟರಲಿ ಬಿಲ್ ಪೇ ಮಾಡಿ ಹೊರಬಂದೆ. ಸಂಯುಕ್ತ ನನ್ನನ್ನು ಹಿಂಬಾಲಿಸಿದಳು. ಗಾಡಿ ಸ್ಟಾರ್ಟ್ ಮಾಡುತ್ತಿದ್ದಂತೆ ಸಂಯುಕ್ತ ಹಿಂದೆ ಕೂತು ನಡಿ ಅಂದೊಡನೆ  ಕೈನಿಯನ್ನು ಕೆ ಆರ್ ರೋಡ್ ಕಡೆ ತಿರುಗಿಸಿದೆ. ಟಾಟಾ ಸಿಲ್ಕ್ ಫೋರಂ ಹತ್ತಿರ ಸಿಗ್ನಲಲಿ ರೈಟ್ ಟರ್ನ್ ಮಾಡುತ್ತಿರಬೇಕಾದರೆ ಸಂಯುಕ್ತಳಿಗೆ ಏನನ್ನಿಸಿತೋ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳುವ ಧ್ವನಿಯಲಿ  ಹಾಡತೊಡಗಿದಳು.....

ಅರಳುತಿರು ಜೀವದ ಗೆಳೆಯ ... ಸ್ನೇಹದ ಸಿಂಚನದಲ್ಲಿ .... ಬಾಡದಿರು ಸ್ನೇಹದ ಹೂವೆ.... ಪ್ರೇಮದ ಬಂಧನದಲ್ಲಿ .... ಮನಸಲ್ಲೇ ಇರಲಿ ಭಾವನೆ .... ಮಿಡಿಯುತಿರಲಿ ಮೌನವೀಣೆ ...  ಹೀಗೆ ಸುಮ್ಮನೆ ...
ಅರಳುತಿರು ಜೀವದ ಗೆಳೆಯ
.........................................

ಮಾತಿಗೆ ಮೀರಿದ ..... ಭಾವದ ಸೆಳೆತವೆ ಸುಂದರ .... ನಲುಮೆಯು ತುಂಬಿದ .... ಮನಸಿಗೆ ಬಾರದು ಬೇಸರ ... ಬಾಳ ದಾರಿಯಲಿ ಬೇರೆ ಆದರು ... ಚಂದಿರ ಬರುವನು ನನ್ನ ಜೊತೆ ....  ಕಾಣುವೆನು ಅವನಲಿ ನಿನ್ನನೇ ... ಇರಲಿ ಗೆಳೆಯ ಈ ಅನುಬಂಧ .... ಹೀಗೇ ಸುಮ್ಮನೆ ...

ಅರಳುತಿರು ಜೀವದ ಗೆಳೆಯ.

ಹಾಡು ಮುಗಿಯುವ ಹೊತ್ತಿಗೆ ಸಂಯುಕ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

No comments:

Post a Comment