Pages

Friday, April 6, 2012

ಅವಳ ಕಾಲ್ ಬರುತ್ತಾ?? - ಭಾಗ ೮

ಸಂಬಂಧದಲ್ಲಿ ನಾನು ಅಮಲಳಿಗೆ ಸೋದರಮಾವನಾಗಿದ್ದರೂ ವಯಸ್ಸಿನಲ್ಲಿ ಅವಳು ನನಗಿಂತ ಕೇವಲ ೨೯೦ ದಿನ ಚಿಕ್ಕವಳು. ಹಾಗಾಗಿ ಓದಿನಲಿ ನಾನು ಯಾವಾಗಲು ಒಂದು ಕ್ಲಾಸ್ ಮುಂದೆ. ಒಂದನೇ ಕ್ಲಾಸ್‌ನಿಂದ ಹಿಡಿದು ತೀರಾ ಇಂಜಿನಿಯರಿಂಗ್ ಆರನೇ ಸೆಮಿಸ್ಟರ್ ತನಕ ಅವಳಿಗೆ ನಾ ಬರೆದುಕೊಂಡಿರುತ್ತಿದ್ದ ನೋಟ್ಸ್ ಗಳೇ ಆಗಬೇಕು, ನಾ ಉಪಯೋಗಿಸುತ್ತಿದ್ದ ಟೆಕ್ಸ್ಟ್ ಬುಕ್ಕೆ ಬೇಕು. ನಾನು ಕ್ಲಾಸಿನ ಒಂದನೇ ದಿನದಿಂದ ಎಗ್ಸಾಮ್ ಹಿಂದಿನ ದಿನದ ತನಕ ಪ್ರ್ಯಾಕ್ಟೀಸ್ ಮಾಡಿರುತ್ತಿದ್ದ ರಫ್ ಶೀಟ್‌ಗಳು ಸಹ ಅವಳಿಗೆ ಸೇರಬೇಕು. ರಿಸಲ್ಟ್ ಬಂದ ಮಾರನೆ ದಿನವೇ ಅಮ್ಮ ಕಲಾಳನ್ನೊ ಅಥವಾ ತಾತ ರಾಮ ರಾಯರನ್ನೋ ಜೊತೆ ಮಾಡಿಕೊಂಡು ನನ್ನ ಊರಿಗೆ ಬಂದುಬಿಡುತ್ತಿದ್ದಳು. ಹಾಗೆ ಬಂದ ದಿನ ಅವಳು ಮಾಡುತ್ತಿದ್ದ ಮೊದಲ ಕೆಲಸವೆಂದರೆ, ನನ್ನ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಇಸ್ಕೊಂಡು ತನ್ನ ಈ ಸಲದ ಮಾರ್ಕ್ಸ್ ಕಾರ್ಡ್ ಜೊತೆಗೆ ಕಂಪೇರ್ ಮಾಡಿಕೊಳ್ಳುತ್ತಿದ್ದುದು. ಸೈನ್ಸ್ ಅಲ್ಲಿ ನೀನ್ ಜಾಸ್ತಿ ತೆಗ್ದಿದ್ದೆ ಅಲ್ವಾ? ನೆಕ್ಸ್ಟ್ ಇಯರ್ ನಿನ್ನ ಸೋಲ್ಸೆ ಸೋಲುಸ್ತೀನಿ ನೋಡ್ತಿರು ಅಂತ ಪ್ರತಿಸಲವೂ ಒಂದೊಂದು ಸಬ್ಜೆಕ್ಟ್ ಮೇಲೆ ಪಣ ತೊಡುತ್ತಿದ್ದಳು, ಹಾಗೆ ಹೆಚ್ಚು ಪಡೆಯುತ್ತಿದ್ದಳೂ ಕೂಡ.

ಹಾಗೆ ಒಂದನೇ ತರಗತಿಯಿಂದ ಹಿಡಿದು ಇಂಜಿನಿಯರಿಂಗ್ ೪ ನೇ ಸೆಮಿಸ್ಟರ್ ತನಕವೂ ಅವಳು ಕನ್ನಡ / ಸಂಸ್ಕೃತ ಮತ್ತು ಮ್ಯಾತಮ್ಯಾಟಿಕ್ಸ್  ಸಬ್ಜೆಕ್ಟ್‌ಗಳಲ್ಲಿ ನನ್ನನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ. ಹಾಗೆ ನನಗೂ ಕೂಡ ಅವಳನ್ನು ಇಂಗ್ಲೀಷ್ ನಲಿ ಸೋಲಿಸಲು ಸಾಧ್ಯವಾಗಲೇ ಇಲ್ಲ. ಊರಲ್ಲಿ ಅವಳ ಎರಡನೆ ದಿನದ ಕೆಲ್ಸವೆಂದರೆ ನನ್ನ ಕ್ಲಾಸ್ ವರ್ಕ್, ಹೋಮ್ ವರ್ಕ್, ಟೆಕ್ಸ್ಟ್ ಬುಕ್ , ರಫ್ ವರ್ಕ್ ಮಾಡಿರುತ್ತಿದ್ದ ಶೀಟ್‌ಗಳು ಎಲ್ಲವನ್ನು ಪ್ರತ್ಯೇಕಿಸಿ ಎಲ್ಲದಕ್ಕೂ ಹುರಿ ಕಟ್ಟಿ ತಾನು ತಂದಿರುತ್ತಿದ್ದ ದೊಡ್ಡ ಬ್ಯಾಗಿಗೆ ತುಂಬುವುದು. ಅವಳು ಹಾಗೆ ಮಾಡುವಾಗಲ್ಲೆಲ್ಲ ನೀನು ಹಳೇ ಕಬ್ಬಿಣ ಖಾಲಿ ಶೀಷ ಹಾಲಿನ್ ಕವರ್ ನ್ಯೂಸ್ ಪೇಪರ್ ಅಂತ ಯಾಕೆ ಒಂದ್ ಸೈಕಲ್ ಹಾಕೊಂಡ್ ಹೋಗ್ ಬಾರ್ದು? ಎಷ್ಟ್ ಚೆನ್ನಾಗ್ ಪ್ಯಾಕ್ ಮಾಡ್‌ತ್ಯ? ಅಂತ ನಾನು ರೇಗಿಸುತ್ತಿದ್ದೆ. ನೀನು ನಂ ಜೊತೆ ಗಾಡಿ ದೂಕೊಂಡು ಬರೋದಾದರೆ ನಾನ್ ಅದಿಕ್ಕು ರೆಡಿ ಅಂತ ತಿರುಗುಬಾಣ ಹಾಕ್ತಿದ್ಲು.

ಮೂರನೇ ದಿನ ಊಟ ಮಾಡಿ ಸಂಜೆ ೪-೫ರ ಹೊತ್ತಿಗೆ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಬಿಡುವುದು. ಅಲ್ಲಿಗೆ ನೀನು ಮಾತ್ರ ನಮ್ಮನೇಲಿ ಮೂರು ದಿನ ಇರೋದಿಲ್ಲ ಅವ್ನ ನಿಮ್ಮನೆಗೆ ೩೦ ದಿನ ಕರ್ಕೊಂಡು ಹೋಗ್ತಿಯ ಅಂತ ನನ್ನಮ್ಮ ಅಮಲಳಿಗೆ ಅನ್ನೋ ಹಾಗಿಲ್ಲ. ನಾನು ಬೆಂಗಳೂರಿಗೆ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದದ್ದಾದರೂ ಸದಾ ಇರುತ್ತಿದ್ದುದು ಕಲಾಳ ಮನೆಯಲ್ಲೇ. ಆಗಿನಿಂದಲೂ ಕಲಾಳಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸ. ಹಾಗೆ ಪ್ರತಿ ವರುಷ ನಾನು ಏಪ್ರಿಲ್ ೧೩ಕ್ಕೆ ಬೆಂಗಳೂರಿಗೆ ಬಂದರೆ ಮತ್ತೆ ಊರಿಗೆ ವಾಪಸಾಗುತ್ತಿದ್ದುದು ಮೇ ತಿಂಗಳ ಕೊನೆಯ ವಾರದಲ್ಲೇ. ಒಂದನೇ ತರಗತಿಯಿಂದ ನನ್ನ ಸೆಕೆಂಡ್ ಪಿ ಯು ಸಿ ಬೇಸಿಗೆ ರಜದ ತನಕ ಇದೇ ರೀತಿ ನಡೆಯುತ್ತಿತ್ತು. ಆದರೆ ಮೂರನೇ ಕ್ಲಾಸ್ ಬೇಸಿಗೆ ರಜದಲ್ಲಿ ಅವಳೆ ನಮ್ಮೂರಿಗೆ ಬಂದು ಬಿಟ್ಟಿದ್ದಳು. ನನಗೆ ಆ ವರುಷ ಉಪನಯನ ಆಗಿತ್ತು. ಮನೆಯಲ್ಲೇ ಸಂಧ್ಯಾವಂದನೆ ಕಲಿಯುತ್ತಿದ್ದ ನನ್ನನ್ನು ಅಮ್ಮ ಆ ವರುಷ ಬೆಂಗಳೂರಿಗೆ ಕಳಿಸಿರಲ್ಲಿಲ್ಲ.

ದೊಡ್ಡಮ್ಮನ ಮನೆಗೂ ಕಲಾಳ ಮನೆಗೂ ೫ ನಿಮಿಷದ ನಡಿಗೆ. ಬೆಳಗ್ಗೆ ಹಾಲು ನ್ಯೂಸ್ ಪೇಪರಿಂದ ಹಿಡಿದು ಇಬ್ಬರ ಮನೆಗೂ ಬೇಕಾದ ಸಣ್ಣ ಪುಟ್ಟ ದಿನಸಿ ಸಾಮಾನು ಎಲ್ಲಾ ತರುತ್ತಿದ್ದುದು ನಾನು ಅಮಲಳೆ. ಊಟ ತಿಂಡಿ ಅವಳು ಹಾಲು ನಾನು ಕಾಫಿ ಎಲ್ಲಾ ಜೊತೆಯಲ್ಲೇ ಆಗಬೇಕು. ಬಿಸಿನೆಸ್, ಚೌಕ-ಬಾರ, ಸ್ನೇಕ್ ಅಂಡ್ ಲ್ಯಾಡರ್, ಲೂಡೋ, ಊನೋ ಕಾರ್ಡ್ಸ್, ಚೆಸ್, ಕೇರೊಮ್, ಬುಕ್ ಕ್ರಿಕೆಟ್.. ಒಂದ ಎರಡ.. ಎಲ್ಲಾ ಆಟ ಆಡುತ್ತಿದ್ದೆವು.  ಮಧ್ಯಾನ್ಹ ೩ಕ್ಕೆ ನಾನು ಬಸ್ ಸ್ಟ್ಯಾಂಡ್ ರಸ್ತೆಯಲಿ ಗೆಳೆಯರೊಡನೆ ಕ್ರಿಕೆಟ್ ಆಡಲು ಹೋದರೆ ಅಮಲಳು ಮನೆ ಕಾಂಪೌಂಡಿನಲಿ ನಿಂತು ನಾನು ಬ್ಯಾಟ್ / ಬೋಲ್ ಮಾಡುತ್ತಿದ್ದ ಪ್ರತಿ ಬಾಲಿಗು ಚಪ್ಪಾಳೆ ತಟ್ಟುತ್ತಾ, ಮಧ್ಯೆ ಮಧ್ಯೆ ನೀರೋ ಪಾನಕಾವೋ ತಂದು ಕೊಡುತ್ತಿದ್ದಳು. ೫:೩೦ಕ್ಕೆ ನಾನು ಆಟ ನಿಲ್ಲಿಸಿ ಬರದ್ದಿದ್ದರೆ ಬೀದಿಯಲ್ಲೇ ರಂಪ ಮಾಡುತ್ತಿದ್ದಳು. ಮನೆಗೆ ಬಂದು ಮುಖ ತೊಳೆದು ಹಾಲು / ಕಾಫಿ ಕುಡಿದು ನಾವು ಕೈ-ಕೈ ಹಿಡಿದು ನಡೆದುಕೊಂಡು ಪ್ರತಿದಿನ ತಪ್ಪದೇ ಹೋಗುತ್ತಿದ್ದುದು ಅದೇ ರಾಮಾಂಜನೇಯ ಗುಡ್ಡಕ್ಕೆ.

ನಾವು ಬೆಳೆದಂತೆಲ್ಲ ನಮ್ಮ ಆಟ ಪಾಠಗಳು ಬದಲಾದವು. ಆಟಕ್ಕಿಂತ ಪಾಠಕ್ಕೆ ಗಮನ ಹರಿಯಿತು. ಮನೆಯಲ್ಲೇ ಬಹಳ ಹೊತ್ತು ಮ್ಯಾತ್ಸ್ ಲೆಕ್ಕನೊ, ಸೈನ್ಸ್ ನ ಯಾವುದೋ ಎಕ್ಸ್‌ಪೆರಿಮೆಂಟ್ ಬಗೆನೊ, ಇಂಗ್ಲೀಶ್ ಗ್ರಾಮರ್, ಹಳೆಗನ್ನಡ ಗದ್ಯ ಪದ್ಯವೋ - ಒಬ್ಬರಿಗೊಬ್ಬರು ಹೇಳಿ ಕೊಡುವುದು / ಕೇಳುವುದು ಮಾಡುತ್ತಿದ್ದೆವು. ತೀರಾ ಬೇಜಾರಾದಾಗ ನ್ಯೂಸ್ ಪೇಪರ್ ಲೀ ಬರುತ್ತಿದ್ದ ಪದಬಂಧ ಬಿಡಿಸುತ್ತಿದ್ದೆವು. ಅವಳು ಹೈ-ಸ್ಕೂಲ್ ಗೆ ಬಂದಾಗ ಕೊಡಿಸಿದ್ದ ಲೇಡೀ ಬರ್ಡ್ ಸೈಕಲಲಿ ಅವಳನ್ನು ಕೂಡಿಸಿಕೊಂಡು ಇಡೀ ಬಸವನಗುಡಿ ತಿರುಗಿದ್ದೆ. ನಮಗಿಂತ ೫ ವರ್ಷ ಕಿರಿಯಳಾದ ವಿಮಲ ನಮ್ಮ ಜೊತೆ ಎಂದೂ ಯಾವ ಆಟ-ಪಾಠದಲ್ಲೂ ಭಾಗಿಯಾಗುತ್ತಿರಲ್ಲಿಲ್ಲ. ಅವಳ ಗೆಳತಿಯರ ಬಳಗವೇ ಬೇರೆ ಇತ್ತು.

ನಮ್ಮಿಬ್ಬರ ಕಡೆಯ ಬೇಸಿಗೆಯಲಿ ನಂದು ಎರಡನೆ ಪಿ ಯು ಸಿ ಎಗ್ಸಾಮ್ ಮುಗಿದು ಸಿ ಇ ಟಿ ಗೆ ತಯಾರಾಗುತ್ತಿದ್ದೆ. ಅಮಲಳು ಎರಡನೆ ಪಿ ಯು ಸಿ ಗೆ   ಟ್ಯೂಷನ್ ಸೇರಿದ್ದಳು. ಟ್ಯೂಷನ್ ಗೆ ಹೋಗಲು ಅನುಕೂಲವಾಗಲೆಂದೇ ಅವಳಿಗೆ ಹೋಂಡ ಅಕ್ಟಿವ ತೆಗಿಸಿಕೊಟ್ಟಿದ್ದರು. ಅದೇ ಗಾಡಿಯಲಿ ಸಾಯಂಕಾಲದ ಒಂದು ರೌಂಡ್ ಬಿಟ್ಟರೆ ಇಬ್ಬರೂ ಮನೆಯಿಂದ ಕದಲುತ್ತಿರಲ್ಲಿಲ್ಲ. ಪ್ರತಿ ದಿನ ಒಂದೊಂದು ಜಾಗ. ಫೋರಂ ಮಾಲ್, ಗರುಡ ಮಾಲ್, ಕಬ್ಬನ್ ಪಾರ್ಕ್, ಎಂ ಜಿ ರೋಡ್, ಕಮರ್ಷಿಯಲ್ ಸ್ಟ್ರೀಟ್, ಲಾಲ್ ಬಾಗ್, ಬ್ಯೂಗಲ್ ರಾಕ್ ಪಾರ್ಕ್, ಗಾಂಧಿ ಬಜ಼ಾರ್, ಅವಳ ಕಾಲೇಜ್ .... ಹೀಗೆ ಬೆಂಗಳೂರಲ್ಲಿ ಅವಳಿಗೆ ಗೊತ್ತಿದ್ದ ಜಾಗವನ್ನೆಲ್ಲ ನನಗೆ ಪರಿಚಯ ಮಾಡಿಸಿದ್ದು ಅಮಲಳೆ. ನಾನು ನಿಮಾನ್ಸ್ ಆಸ್ಪತ್ರೆ ನೋಡಬೇಕು ಕಣೇ ಅಂದಾಗ ನೀನೇನು ಹುಚ್ಚನಾ? ಅಂತ ಅಲ್ಲೀಗೂ ಕರೆದುಕೊಂಡು ಹೋಗಿ ತೊರಿಸಿದ್ದಳು. ಐ ಟಿ ಪಿ ಎಲ್ ಗೆ ಕರೆದುಕೊಂಡು ಹೋಗಿ ಇಲ್ಲೇ ಸಾಫ್ಟ್‌ವೇರ್ ಕಂಪನೀಗಳು ಇರೋದು. ಸಾವಿರಾರು ರೂಪಾಯಿಗಳ ಸಂಬಳ ನೀಡುವ ಕಂಪನಿಗಳು ಇವು. ನೀನು ಇಂಜಿನಿಯರಿಂಗ್ ಮುಗಿಸಿದ ಮೇಲೆ ಇಲ್ಲೇ ಕೆಲಸಕ್ಕೆ ಬರಬೇಕು ಅಂತ ದೊಡ್ಡದೊಂದು ಬಿಲ್ಡಿಂಗ್ ತೋರಿಸಿ ಐ ಟಿ ಕಂಪನಿಗಳ ಮೇಲೆ ನನಗೆ ಆಸೆ ಹುಟ್ಟಿಸಿದ್ದೆ ಅವಳು. ನಾವು ಹೀಗೆ ಗಾಡಿಯಲ್ಲಿ ಹೋಗುವಾಗಲ್ಲೆಲ್ಲ ವಿಮಲ ತಾನು ಬರುತ್ತಿನಿ ಅಂತ ಹಟ ಮಾಡುತ್ತಿದ್ದಳು. ನನ್ನನ್ನು ಅಕ್ಕ ಯಾವತ್ತೂ ಎಲ್ಲಿಗೂ ಕರಕೊಂಡು ಹೋಗಲ್ಲ, ಅವ್ನ ಮಾತ್ರ ಕರ್ಕೊಂಡು ಹೋಗ್ತಾಳೆ ಅಂತ ಅಳುತ್ತಿದ್ದಳು. ಅವಳ ಕಣ್ತಪ್ಪಿಸಿ ನಾನು-ಅಮಲ ಎಸ್ಕೇಪ್ ಆಗುತ್ತಿದ್ದೆವು.

ಅವರ ಮನೆಯ ಯಾವುದೋ ರಹಸ್ಯ ವಿಚಾರವನ್ನ ನಾನು ಬಯಲು ಮಾಡಿಬಿಟ್ಟೆ ಅದರಿಂದ ಅವರು ಬಹಳ ಮುಜುಗರ ಅನುಭವಿಸಬೇಕಾಯಿತು ಅನ್ನೋ ಕಾರಣಕ್ಕೆ ಕಲಾ ನನ್ನನ್ನು ದ್ವೇಷಿಸಲು ಶುರುಮಾಡಿಬಿಟ್ಟಳು. ನೆಂಟರಿಷ್ಟರ ಬಳಿ ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಳು. ನೀನಿನ್ನ ಅವರ ಮನೆಗೆ ಹೋಗಕೂಡದು ಅಂತ ಅಮ್ಮ ಹೇಳಿಬಿಟ್ಟರು. ಅಸಲಿಗೆ ಆ ರಹಸ್ಯ ವಿಚಾರ ನನಗೆ ಅಮಲಳ ಮುಖಾಂತರ ಗೊತ್ತಿದ್ದರೂ ನಾನು ನನ್ನಮ್ಮನ ಬಳಿಯೂ ಹೇಳಿರಲ್ಲಿಲ್ಲ. ಅಮಲಳ ಚಿಕ್ಕಪ್ಪ ಕುತಂತ್ರ ಮಾಡಿ ನನ್ನನ್ನು ಬಲಿಪಶು ಮಾಡಿದ್ದರು. ಆ ವಿಚಾರ ಅಮಲಳಿಗೂ ತಿಳಿದಿತ್ತು. ನನ್ನದೇನೂ ತಪ್ಪಿಲ್ಲ ಅಮಲ - ನಾ ನಿಮ್ಮನೆಗೆ ಬಂದು ಕಲಾಳಿಗೆ ಎಲ್ಲಾ ವಿಚಾರ ತಿಳಿಸುತ್ತಿನೀ ಅಂತ ಅಮಲಳಿಗೆ ಮೈಲ್ ಮಾಡಿದೆ. ಅದಿಕ್ಕವಳು amma is so angry on you that if you come here she will kill you. please please do not come home. but come to bangalore i want to meet you soon. ಅಂತ ರಿಪ್ಲೈ ಮಾಡಿದ್ದಳು. ಆಗಿನಿಂದಲೇ ಶುರುವಾದದ್ದು ನಮ್ಮಿಬ್ಬರ ರಹಸ್ಯ ಭೇಟಿ. ಭೇಟಿಯಾಗುತ್ತಿದ್ದುದು ಅದೇ ರಾಮಾಂಜನೇಯ ಗುಡ್ಡದಲ್ಲಿ. ಸುಮಾರು ನಾಕು ವರ್ಷಗಳ ಕಾಲ ನಾನು ಅವ್ರ ಮನೆಗೆ ಹೋಗಲೇ ಇಲ್ಲ. ನಾವು ಹೀಗೆ ರಹಸ್ಯವಾಗಿ ಭೇಟಿಯಾಗುತ್ತಿದ್ದುದು ವಿಮಲಳಿಗೆ ಗೊತ್ತಿತ್ತಾ??

ಮೊದಲ್ಲೆಲ್ಲ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಈಮೇಲ್ ಕಳಿಸಿಕೊಳ್ಳುತ್ತಿದ್ದೆವು. ಸೆಮಿಸ್ಟರ್ ಶುರುವಾಗುವ ಮುನ್ನ ಟೆಕ್ಸ್ಟ್ ಬುಕ್ ಗಳನ್ನು ಕೊಳ್ಳಲು ಬೆಂಗಳೂರಿಗೆ ಬಂದಾಗ ಅವಳನ್ನು ಭೇಟಿಯಾಗುತ್ತಿದ್ದೆ. ಹಾಗೆ ಭೇಟಿಯಾದಾಗಲ್ಲೆಲ್ಲ ಕಲಾಳಿಗೆ ನನ್ನ ಮೇಲಿನ ಕೋಪ ಆರಿದೆಯಾ? ವಿಚಾರಿಸಿಕೊಳ್ಳುತ್ತಿದ್ದೆ. ಕಾಲೇಜು - ಪುಸ್ತಕ - ಫ್ರೆಂಡ್ಸು - ಗಾಸಿಪ್ ಅದು ಇದು ಮಾತಾಡಿ ಸಂಜೆ ಹೊತ್ತಿಗೆ ನಾನು ಊರಿಗೆ ಬಂದು ಬಿಡುತ್ತಿದ್ದೆ. ಬರಬರುತ್ತ ಭೇಟಿಯಾಗುವುದು ತಪ್ಪಿ ಹೋಯಿತು ಈಮೇಲ್ ಕೂಡ ನಿಂತು ಹೋಯಿತು. ಸುಮಾರು ೨ ವರ್ಷಗಳ ಕಾಲ ನಾವಿಬ್ಬರೂ ಮಾತಾಡೆ ಇರಲ್ಲಿಲ್ಲ !!

ಮತ್ತೆ ನಾನು ಅವರ ಮನೆಗೆ ಹೋದದ್ದು ನಾಕು ವರ್ಷದ ನಂತರ ನನ್ನ ಇಂಜಿನಿಯರಿಂಗ್ ಮುಗಿದು ಕೆಲಸ ಸಿಕ್ಕ ಖುಷಿಗೆ ಸ್ವೀಟ್ಸ್ ಕೊಡಲು. ಆ ವೇಳೆಗೆ ಕಲಾಳಿಗೆ ನನ್ನ ಮೇಲಿದ್ದ ಕೋಪ ತಣ್ಣಗಾಗಿಬಿಟ್ಟಿತ್ತು ಮತ್ತು ನನ್ನ ತಪ್ಪೇನೂ ಇರಲ್ಲಿಲ್ಲ ಎನ್ನುವ ಅರಿವೂ ಆಗಿತ್ತು. ಹಾಗಾಗೆ ಕಲಾ ನನ್ನನ್ನು ಕುರಿತು - ಎಂಥ ಒಳ್ಳೇ ಕೂಸು ನೀನು, ಅನ್ಯಾಯವಾಗಿ ನಿನಗೆ ಬೈದುಬಿಟ್ಟೆ. ಇನ್ನು ಮುಂದೆ ನಾ ಆ ರೀತಿ ಮಾಡೋಲ್ಲ. ನೀನು ಮುಂಚೆ ಹೇಗೆ ನಮ್ಮನೆಗೆ ಬರುತ್ತಿದ್ದೋ ಹಾಗೆ ಇನ್ಮುಂದೇನು ಬರಬೇಕು. ಈಗಂತೂ ಕೆಲಸ ಸಿಕ್ಕಿದೆ. ಬೆಂಗಳೂರಲ್ಲೇ ಇರ್ತೀಯಾ, ವಾರಕ್ಕೊಮ್ಮೆಯಾದರೂ ನಮ್ಮನೆಗೆ ಬರಲೇಬೇಕು ಅಂತ ಹೇಳಿದ್ದಳು. ಇದಾದ ಮೇಲೆ ನಾನು ಮತ್ತೆ ಅವರ ಮನೆಗೆ ಆಗಾಗ ಹೋಗಲು ಶುರುಮಾಡಿದ್ದು.

ಅಷ್ಟರಲ್ಲಾಗಲೇ ಅಮಲ ಕ್ಲಾಸ್ ಮೇಟ್ ಒಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆ ವಿಚಾರವಾಗಿ ನನ್ನ ಬಳಿ ಅವಳು ಏನೂ ಹೇಳಿಕೊಂಡಿರದ್ದಿದ್ದರೂ ಚೂರು ಪಾರು ವಿಷಯ ನಂಗೂ ತಿಳಿದಿತ್ತು. ಅವರ ಮನೆಯಲ್ಲಿ ಮದುವೆಗೆ ವಿರೋಧವಿದ್ದರೂ ಹಟಮಾಡಿ ಆ ಹುಡುಗ ಅಜಯ್ ನನ್ನೇ ಮದುವೆ ಮಾಡಿಕೊಂಡಿದ್ದಳು.
ಅಜಯ್ ಲಂಡನ್ನಿಗೆ ಹೋಗಿ ೩ ತಿಂಗಳಾದ ಮೇಲೆ ಅಮಲ ಲಂಡನ್ನಿಗೆ ಹೊರಟಿದ್ದಳು. ಬೆಂಗಳೂರಿನ ಏರ್‌ಪೋರ್ಟ್ ಗೆ ಅಮಲಳನ್ನು ಬೀಳ್ಕೊಡಲು ಹೋಗಿದ್ದವನು ನಾನೊಬ್ಬನೇ. ಅದೇ ನಮ್ಮಿಬ್ಬರ ಕಡೆಯ ಭೇಟಿ.

ಲಾಸ್ಟ್ ಸ್ಟಾಪ್ ಇಳಿರಿ ಇಳಿರಿ ಅಂತ ಕಂಡಕ್ಟರ್ ಕೂಗಿದಾಗಲೆ ಎಚ್ಚರವಾದದ್ದು.  ಸಮಯ ೧೧:೧೫. ಬಸ್ ಇಳಿದು ೧.೫ ಕಿ ಮೀ ದೂರ ಇರುವ ಮನೆಗೆ ನಡೆಯುತ್ತಲೇ ಸಾಗಿದೆ.

ಇನ್ನು ಮೂರು ತಿಂಗಳಲ್ಲಿ ಅಮಲ ವಾಪಸ್ಸು ಬರುತ್ತಿದ್ದಾಳೆ.

No comments:

Post a Comment