Pages

Thursday, April 12, 2012

ಅವಳ ಕಾಲ್ ಬರುತ್ತಾ?? - ಭಾಗ ೧೨

MTR ತಲುಪುತ್ತಲೇ, ಸಂಯುಕ್ತ ಅಮೋದಿನಿಯನ್ನ ಅಪ್ಪಿಕೊಂಡು ಅಕ್ಕ ಎಷ್ಟು ದಿನ ಆಯ್ತು ನಿನ್ನ ನೋಡಿ ಅನ್ನುತ್ತಿರಲು ನಾನು ತಬ್ಬಿಬ್ಬಾಗಿ ಬಿಟ್ಟೆ. ತೀರಾ ಗಲಿಬಿಲಿಯಾದ ನನ್ನನ್ನು ಕುರಿತು ಅಮೋದಿನಿ Yes, I know ಸಂಯುಕ್ತ. ನಾನು ಅವಳು ಕ್ಲಾಸ್ ೧೨ರ ತನಕ ಓದಿದ್ದು ಒಂದೇ ಶಾಲೆಯಲಿ. ಅವಳು ನನಗಿಂತ ೪ ವರ್ಷ ಚಿಕ್ಕವಳು. ಅವರಿಬ್ಬರೂ ಒಬ್ಬರಿಗೊಬ್ಬರು ಪರಿಚಿತರಿರಬಹುದೆಂದು ನಾನು ಊಹಿಸಿದ್ದು ನಿಜವಾಗಿತ್ತು. ನಾವು ೫ನೇ ಮಹಡಿಯಲ್ಲಿದ್ದ MTR ಹೊಟೇಲಿನ ಮೂಲೆ ಟೇಬಲಲಿ ಕೂತೆವು. ಅಮೋದಿನಿ-ಸಂಯುಕ್ತ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ನನಗೆ ಅವರಿಬ್ಬರ ಸ್ನೇಹದ ಬಗ್ಗೆ ಒಬ್ಬರಾದ ಮೇಲೊಬ್ಬರಂತೆ ಬಿಡುವಿಲ್ಲದೇ ಹೇಳತೊಡಗಿದರು. ಅದರ ಒಟ್ಟು ಸಾರಾಂಶ - ಶಾಲಾ ದಿನಗಳಲ್ಲಿ ಇಬ್ಬರೂ ಓದಿನಲಿ ಮುಂದು. ಹಾಗೆಯೇ ಆಟದಲ್ಲಿಯೂ ಕೂಡ. ಶಾಲೆಯಲ್ಲಿರುವ ತನಕ ಜೂನಿಯರ್ ವಿಭಾಗದಲ್ಲಿ ಸಂಯುಕ್ತ ಸೀನಿಯರ್ ವಿಭಾಗದಲ್ಲಿ ಅಮೋದಿನಿ - ಇವರಿಬ್ಬರ ಹೆಸರಿರದ ವಿಜೇತ ಪಟ್ಟಿ ಶಾಲಾ ಇತಿಹಾಸದಲ್ಲೇ ಇಲ್ಲ. ಸ್ಕಾಲರ್‌ಶಿಪ್ ಆಗಲಿ ಅಥವಾ ಯಾವುದೇ ಪ್ರಶಸ್ತಿಯಾಗಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಪಡೆಯುತ್ತಿದ್ದರು. ಇಬ್ಬರೂ ಜೊತೆಯಾಗಿ ತೆಗೆಸಿರೋ ಅದೆಷ್ಟೋ ಫೋಟೋಗಳು ಇಬ್ಬರ ಬಳಿಯೂ ಇದೆ. ಅಮೋದಿನಿಯನ್ನು ಕಂಡರೆ ಸಂಯುಕ್ತಳಿಗೆ ಅಪಾರವಾದ ಗೌರವ. ಸಂಯುಕ್ತಳ ಎಷ್ಟೋ ಸಂದೇಹಗಳಿಗೆ ಅಮೋದಿನಿ ಪರಿಹಾರ ನೀಡಿದ್ದಾಳೆ ಮತ್ತು ಆಟವಾಡುವಾಗ ಸಾಕಷ್ಟು ಟಿಪ್ಸ್ ಕೊಟ್ಟಿದ್ದಾಳೆ. ಅವಳ ಬ್ಯಾಚಿನಲಿ ಸಂಯುಕ್ತ ಮೊದಲಿಗಳೇ ಆದರೂ, ಅಮೋದಿನಿ ಮಾಡಿದ ದಾಖಲೆಗಳನ್ನು ಸಂಯುಕ್ತಳಿಗೆ ಮುರಿಯಲು ಸಾಧ್ಯವಾಗಲೇ ಇಲ್ಲ. ಅದು ಶಾಲೆಯಲ್ಲಿ ಹೈಯೆಸ್ಟ್ ಮಾರ್ಕ್ಸ್ ತೆಗೆದಿರುವುದೇ ಆಗಿರಬಹುದು ಅಥವಾ ಕ್ರೀಡೆಗಳಲ್ಲಿ ದಾಖಲೆ ಮಾಡಿರುವುದೇ ಆಗಿರಬಹುದು. ಹಾಗಾಗಿ ಸಂಯುಕ್ತಳಿಗೆ ಅಮೋದಿನಿ ಈಸ್ ಗ್ರೇಟ್..

ಸುಮಾರು ಒಂದು ಗಂಟೆಗಳ ಕಾಲ ಅವರಿಬ್ಬರ ಮಾತುಕತೆ ನಡೆಯಿತು. ನಾನು ಅದನ್ನು ಎಂಜಾಯ್ ಮಾಡಿದೆ. ಅಷ್ಟರಲ್ಲಾಗಲೇ ಖಾರ ಭಾತ್, ಇಡ್ಲಿ ವಡ, ಮಸಾಲೆ ದೋಸೆ, ಕೇಸರಿಭಾತ್ - ಎಲ್ಲಾ ಒಂದೊಂದು ಪ್ಲೇಟ್ ಖಾಲಿ ಮಾಡಿದ್ದೆವು. ೨ ನಿಮಿಷ ಮೌನ ಆವರಿಸಿತ್ತು. ಒಬ್ಬರ ಮುಖವನ್ನೊಬ್ಬರು ನೋಡುತ್ತಿರುವಾಗಲೇ ಸಂಯುಕ್ತ ನನ್ನ ಕಡೆ ತಿರುಗಿ ಗಂಭೀರ ಧ್ವನಿಯಲ್ಲಿ " ಬೇರೆ ಯಾರನ್ನೇ ನೀನು ಮದುವೆಯಾಗಲು ಹೊರಟಿದ್ದರೂ ನಾನು ಬಿಡುತ್ತಿರಲ್ಲಿಲ್ಲ. ಅಮೋದಿನಿಗೊಸ್ಕರ ನನ್ನ ಪ್ರೀತಿ ತ್ಯಾಗ ಮಾಡುತ್ತಿದ್ದೇನೆಂದರೆ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತಿದೆ. ನಾನು ನಿನ್ನನ್ನು ಪಡೆಯಲೇಬೇಕೆಂಬ ಹಟಕ್ಕೆ ಬಿದ್ದರೂ, ಅಮೋದಿನಿಯನ್ನು ಗೆಲ್ಲಲು ಸಾಧ್ಯವೇ ಇಲ್ಲ. ಅದು ಈಗಾಗಲೇ ಎಷ್ಟೋ ಬಾರಿ ಸಾಬೀತಾಗಿ ಹೋಗಿದೆ. ಆದರೆ ಒಂದು ಮಾತು ನೆನಪಿಟ್ಟುಕೊ. ನನಗೆ ಬೇಕೆನಿಸಿದಾಗ ನಿಮ್ಮ ಮನೆಗೆ ಬರುತ್ತೇನೆ, ಇಷ್ಟ ಬಂದ ಹಾಗೆ ಇರುತ್ತೇನೆ.. ಅದಾವುದಕ್ಕೂ ನೀನು ಅಡ್ಡಿ ಪಡಿಸಬಾರದು. ಅಕ್ಕ ನೀವು ಅಷ್ಟೇ" - ಇಷ್ಟು ಹೇಳಿ ಕರ್ಚಿಪ್ ತೆಗೆದು ಮುಖ ಮುಚ್ಚುಕೊಂಡುಬಿಟ್ಟಳು. ನನಗೂ ಅಮೋದಿನಿಗು ಮಾತೆ ಹೊರಡಲ್ಲಿಲ್ಲ. ಅಮೋದಿನಿ ಸಂಯುಕ್ತಳ ಬಲಗೈಯನ್ನು ತನ್ನ ಎರಡು ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟಿದ್ದಳು. ಅಮೋದಿನಿಯ ಕಣ್ಣು ನೀರಿನಿಂದ ಆವರಿಸಿ, ಅವಳಿಗೆ ಕಣ್ಣು ಬಿಡಲು ಸಾಧ್ಯವಾಗುತ್ತಿರಲ್ಲಿಲ್ಲ.  ನಾನು ಇಬ್ಬರ ಭುಜದ ಮೇಲೂ ಮೆಲ್ಲಗೆ ತಟ್ಟುತ್ತಾ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದೆ.

ಸುಮಾರು ಹೊತ್ತಾದ ಮೇಲೆ ಚೇತರಿಸಿಕೊಂಡ ಸಂಯುಕ್ತ ವಾಚ್ ನೋಡಿಕೊಂಡು ಸಮಯ ೭:೩೦ ಆಗಿದೆ, ನಾನಿನ್ನು ಹೊರಡುತ್ತೇನೆ. ಕೇಶಿ, ಸೀ ಯು ಆಟ್ ಹೋಮ್, ಸೀ ಯು ಅಕ್ಕ ಟೇಕ್ ಕೇರ್ ಮಾಡಿ ಅಂದವಳೇ ನನ್ನ ಮಾತಿಗೂ ಕಾಯದೇ ಎದ್ದು ಹೊರಟೇಹೋದಳು. ಸಂಯುಕ್ತ ಹೋದಮೇಲೆ ನಾನು ಅಮೋದಿನಿ ಮನೆ- ನೆಂಟರು- ಕೆಲಸ - ಅವಳು ಲಂಡನ್ ಯೂನಿವರ್ಸಿಟೀಯಿಂದ ಡಿಸ್ಟೆನ್ಸ್ ಲರ್ನಿಂಗ್ ಸ್ಕೀಮ್ ಲಿ MBA ಮಾಡಲು ಪಟ್ಟ ಸಾಹಸ - ನನ್ನ ವಿದೇಶ ಯಾತ್ರೆ .... ಹೀಗೆ ಇನ್ನೂ ಹಲವಾರು ವಿಷಯಗಳನ್ನು ಸುಮಾರು ಮುಕ್ಕಾಲು ಗಂಟೆ ಮಾತಾಡಿದೆವು. ಸುಮಾರು ೮:೩೦ರ ಹೊತ್ತಿಗೆ ಇಬ್ಬರೂ ಟಾಟಾ ಸೀ ಯು, ಟೇಕ್ ಕೇರ್ ಅಂತ ಹೇಳಿಕೊಳ್ಳುತ್ತಾ ಮನೆಯತ್ತ ಹೊರಡಬೇಕು ಅನ್ನುವಾಗ ಅಮೋದಿನಿ ನನ್ನ ಕೈ ಹಿಡಿದು ಮೆಲ್ಲಗೆ ಅಮುಕುತ್ತಾ " You do not worry about Samyukta. I will manage and take care of her. She will be perfectly alright in few days ". ಅಮೋದಿನಿಗೆ ಥ್ಯಾಂಕ್ ಯು ಸೋ ಮಚ್ ಅಂತ ಹೇಳಿ ಮನೆ ಕಡೆ ಹೊರಟೆ.

S (ಸಂಯುಕ್ತ) ತನ್ನ ಪ್ರೀತಿ ಪ್ರಾರಂಭಿಸಿದಳು ಅಷ್ಟೇ... ಇನ್ನು V (ವಿಮಲ) ಒಂದು ಅಂತರ ಕಾಯ್ದುಕೊಂಡುಬಿಟ್ಟಳು. ಉಳಿದವಳು A (ಅಮೋದಿನಿ).. ಅಮೋದಿನಿಯೆ ಅಂತ್ಯನಾ??


********************************************************************************************************************************

ಮನೆಗೆ ಬಂದಾಗ ೯:೩೦ ಆಗಿತ್ತು. ಆಗಲೇ ಅಣ್ಣನಿಗೆ ಕಾಲ್ ಮಾಡಿ ಅಮೋದಿನಿ ನನಗೆ ಒಪ್ಪಿಗೆ, ನೀವು ಅವರ ಮನೆಯವರಿಗೆ ತಿಳಿಸಿಬಿಡಿ ಅಂತ ಹೇಳಲು ಮನೆ ನಂಬರ್ ಡೈಯಲ್ ಮಾಡಿದವನು, ೨ ದಿನದಲ್ಲಿ ಹೇಳುತ್ತಿನಿ ಅಂದವನು ಈಗಲೇ ಒಪ್ಪಿಗೆ ಕೊಡುತ್ತಿದ್ದಾನೆ.. ಎಷ್ಟು ಆತುರ ನೋಡು ಅಂತ ಮನೆಯಲ್ಲಿ ರೇಗಿಸುತ್ತಾರೆ, ನಾಳೆ  ಬೆಳಗ್ಗೆ ಹೇಳಿದರಾಯಿತು ಅಂತ ಸುಮ್ಮನಾಗಿ ಹಾಸಿಗೆ ಮೇಲೆ ಉರುಳಿದೆ. ಮನಸ್ಸು ನಿರಾಳವಾಗಿತ್ತು.  ನಾವು ಪ್ರೀತಿಸಿದವರಿಗಿಂತ ನಮ್ಮನ್ನು ಪ್ರೀತಿಸಿದವರನ್ನು ಮದುವೆ ಮಾಡಿಕೊಳ್ಳುವುದೇ ಸರಿ ಅನ್ನೋದು ನಾನು ಮೊದಲಿನಿಂದಲೂ ನಂಬಿಕೊಂಡ ಸಿದ್ದಾಂತ. ಸಂಯುಕ್ತ - ಆಮೋದಿನಿ, ಇಬ್ಬರಲ್ಲಿ ನಾನು ಅಮೋದಿನಿಯನ್ನು ಆರಿಸಿದ್ದೆ. ಸಂಯುಕ್ತಳು ಆಮೋದಿನಿ ಈಸ್ ಗ್ರೇಟ್ ಅಂತ ಹೇಳಿದ್ದು ನನ್ನ ನಿರ್ಧಾರವನ್ನು ಅನುಮೋದಿಸಿದಂತೆ ಆಗಿತ್ತು. ಅಮೋದಿನಿಯಂತಹ ಹುಡುಗಿಯನ್ನ ಪಡೆಯಲು ನಾನೆಷ್ಟು ಅದೃಷ್ಟವಂತ.. ನನ್ನ ಖುಷಿಗೆ ಪಾರವೇ ಇರಲ್ಲಿಲ್ಲ.

ಆದರೆ ಆ ಸಂತೋಷ ಬಹಳ ಹೊತ್ತು ಉಳಿಯಲ್ಲಿಲ್ಲ. ಸಮಯ ಸುಮಾರು 10:45 ಇರಬಹುದು. ನನ್ನ ಮೊಬೈಲ್ ರಿಂಗಣಿಸಿತು. ಆಮೋದಿನಿ ಕಾಲ್ ಮಾಡಿದ್ದಳು. ನಾನು ವಾ ಆಮೋದಿನಿ ಅಂದುಕೊಳ್ಳುತ್ತಾ ಹಲೋ ಅಂದೇ. ಆ ಕಡೆ ಆಮೋದಿನಿ ಅಳುತ್ತಿದ್ದಳು.
ನಾನು - ಯಾಕೆ ಆಮೋದಿನಿ ಏನಾಯಿತು?
ಆಮೋದಿನಿ - ನಾನು ಆ ವಿಷಯವನ್ನು ಮನೆಯಲ್ಲಿ ಹೇಳಲೇಬಾರದಿತ್ತು. ತಪ್ಪು ಮಾಡಿಬಿಟ್ಟೆ.... ನಾನು ತಪ್ಪು ಮಾಡಿಬಿಟ್ಟೆ.
ನಾನು - ಯಾವ ವಿಷ್ಯ? ನೀ ಎನ್ ತಪ್ಪು ಮಾಡಿದೆ?
ಆಮೋದಿನಿ -  ..........................................................
ನಾನು - ಹೌದಾ? ಅದೇ ಅವರ ಕಡೆ ನಿರ್ಧಾರ ಅಂತ?
ಆಮೋದಿನಿ - ಹೌದು..ಅದೇ ಕಡೆ ನಿರ್ಧಾರವಂತೆ. ನನ್ನನ್ನು ಒಂದು ಮಾತು ಕೇಳಲ್ಲಿಲ್ಲ. ನಾಳೆನೆ ಅಪ್ಪ ನಿಮ್ಮ ಮನೆಗೆ ಹೋಗ್ತಿದಾರಂತೆ ವಿಷ್ಯ ತಿಳಿಸೋದಿಕ್ಕೆ.
ನಾನು - ಒಹ್..
ಆಮೋದಿನಿ - ನಾ ಎನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ.
ನಾನು - ಆಮೋದಿನಿ, ಈಗ ಏನು ಮಾಡಲು ಸಾಧ್ಯವಿಲ್ಲ. ಬೆಳಗ್ಗೆ ಬೇಗನೆ ಸಿಗೋಣ.. ಕೂಡಿ ಮಾತಾಡಿ ಒಂದು ನಿರ್ಧಾರಕ್ಕೆ ಬರೋಣ.
ಆಮೋದಿನಿ - ಸರಿ.. ಆಯಿತು. ನಾಳೆ ಸಿಗೋಣ. ಗುಡ್ ನೈಟ್.
ನಾನು - ಗುಡ್ ನೈಟ್.

ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಯಿತು. ಮನೆಗೆ ಫೋನ್ ಮಾಡಿ ಈಗಲೆ ವಿಷಯವನ್ನು ತಿಳಿಸಿಬಿಡೋಣ ಅಂದುಕೊಂಡರೂ, ಅವರಾದರೂ ನೆಮ್ಮದಿಯಿಂದ ನಿದ್ದೆ ಮಾಡಲಿ ನಾಳೆ ಹೇಗಿದ್ದರೂ ಆಮೋದಿನಿ ತಂದೆ ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲ ವಿಷಯ ತಿಳೀದೇ ತಿಳಿಯುತ್ತದೆ ಅಂದು ಕೊಂಡು ತಲೆ ಮೇಲೆ ಕೈ ಹೊತ್ತು ಸುಮ್ಮನೇ ಕುಳಿತುಬಿಟ್ಟೆ.
ಅಜ್ಜಿ ಹೇಳಿದ ಮಾತು ನೆನಪಾಯಿತು. ಆಗ ಅಜ್ಜಿ ಎಷ್ಟು ದೈನ್ಯದಿಂದ ಕೇಳಿಕೊಂಡಿದ್ದರು.. ಮಗು ಬೇಡ ಅಂತ.. ನಾನೆಲ್ಲಿ ಕೇಳಿದೆ.. ಹೋಗಿ ಬಂದೆ ಬಿಟ್ಟೆ. ಅಂದು ಅಜ್ಜಿಯ ಮಾತನ್ನು ಕೇಳಿದ್ದರೆ ನನಗಿಂದು ಈ ಸ್ಥಿತಿ ಬರುತ್ತಿರಲ್ಲಿಲ್ಲ.

ಮಾರನೆ ದಿನ ನಾನು ಆಮೋದಿನಿ ಕಾರಂಜಿ ಆಂಜನೇಯನ ದೇವಸ್ಥಾನದಲ್ಲಿ ಬೆಳಗ್ಗೆ 7ಕ್ಕೆ ಭೇಟಿ ಮಾಡಿ ಸುಮಾರು ಹೊತ್ತು ಚರ್ಚಿಸಿದೆವು. ನಾನೇ ದುಡುಕಿಬಿಟ್ಟೆ ಕಣೋ.. ಅಮ್ಮನಿಗೆ ಹೇಳಬಾರದಿತ್ತು.. ಮದುವೆಯಾದ ಮೇಲೆ ತಿಳಿದ್ದಿದ್ದರೆ ಅವರೇನು ಮಾಡುತ್ತಿದ್ದರು? ನಿನ್ನೆ ರಾತ್ರಿ ನನ್ನ ಒಂದು ಮಾತು ಕೇಳಲ್ಲಿಲ್ಲ.. ತಾತನ ಮಾತನ್ನು ಅಣ್ಣ ಎಂದೂ ಮೀರೋದಿಲ್ಲ.. ತಾತನದು ಹಟ ಸ್ವಭಾವ.. ಬೇಡ ಎಂದರೆ ಬೇಡ..ಆಮೋದಿನಿಗೇನು ಕಮ್ಮಿ, ಇನ್ನೂ ಒಳ್ಳೇ ಹುಡುಗ ಸಿಗುತ್ತಾನೆ.. ನೀವು ಎಷ್ಟೇ ಬಲವಂತ ಮಾಡಿದರೂ ನಾನು ಇಂಥದ್ದನ್ನೆಲ್ಲ ಒಪ್ಪೋದಿಲ್ಲ ಅಂದುಬಿಟ್ಟರು. ಅಣ್ಣನಿಗೆ ಬಹಳ ಬೇಸರವಾದರೂ ತಾತನಿಗೆ ಎದುರಾಗಿ ನಿಂತು ಈ ಮದುವೆ ಮಾಡಲು ಅವರಿಗೆ ಇಷ್ಟ ಇಲ್ಲ. ಹಾಗಂತ ತಾತನನ್ನ ಒಪ್ಪಿಸುವುದು ಆಗದಂತ ಕೆಲಸ.

ಎಲ್ಲ ವಿಧಿಯಾಟ. ನಾನು ಏನೂ ಮಾತಡಲ್ಲಿಲ್ಲ. ತಂದೆಯ ಮಾತನ್ನು ಮೀರದ ಅಮೋದಿನಿಯ ಅಪ್ಪ ನಮ್ಮಿಬ್ಬರಿಗೂ ಆದರ್ಶವಾಗಿಬಿಟ್ಟಿದ್ದರು. ದೊಡ್ಡವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವಿಬ್ಬರೂ ಬದ್ಡರಾಗಿರೋಣ ಅಂದುಕೊಂಡು ಹೊರಟುಬಿಟ್ಟೆವು.


ಮಾರನೆ ದಿನ ಆಮೋದಿನಿ ತಂದೆ ನಮ್ಮ ಮನೆಯಲ್ಲಿ ಹೇಳಿದ್ದಿಷ್ಟು:

ನನಗೆ ಈ ಮಾತನ್ನು ಹೇಳಲು ತುಂಬಾ ಬೇಸರವಾಗುತ್ತಿದೆ. ನಮಗೆ ಈ ಸಂಬಂಧ ಬೇಡ.. ನೀವು ಬೇಕಂತಲೇ ಆ ವಿಚಾರವನ್ನು ತಿಳಿಸಲ್ಲಿಲ್ಲವೋ ಅಥವಾ ಆ ವಿಷ್ಯ ಪ್ರಸ್ತಾಪಕ್ಕೆ ಬರಲ್ಲಿಲ್ಲವೋ ಅದರ ಚರ್ಚೆ ಬೇಡ. ತೀರಾ ಸಂಪ್ರದಾಯಸ್ಥರಾದ ನಮ್ಮ ತಂದೆಗೆ ನಿಮ್ಮ ಮಗ ಎಲ್ಲ ರೀತಿಯಿಂದ ಹಿಡಿಸಿದ್ದ.. ಆದರೆ ಇದೊಂದು ವಿಚಾರದ ಹೊರತಾಗಿ..ನಿಮ್ಮ ಮಗ ವಿದೇಶಕ್ಕೆ ಹೋಗಿ ಬಂದಿರುವ ವಿಚಾರ ನಮಗೆ ನಿನ್ನೆಯಷ್ಟೇ ನಿಮ್ಮ ಮಗನ ಮುಖಾಂತರ ತಿಳಿಯಿತು. ನನ್ನ ಅಭ್ಯಂತರ ಏನೂ ಇಲ್ಲ.. ಆದರೆ ಇಳಿ ವಯಸ್ಸಿನ್ನಲ್ಲಿರುವ  ನನ್ನ ತಂದೆಯನ್ನು ಎದುರು ಹಾಕಿಕೊಂಡು ಮಗಳ ಮದುವೆ ಮಾಡಲು
ನನಗೆ ಸುತಾರಾಂ ಇಷ್ಟವಿಲ್ಲ. ನಡೆದ್ದದ್ದೆಲ್ಲ ಒಂದು ಕಹಿ ಘಟನೆಯಂತ ಮರೆತು ಬಿಡಿ. ದಯಮಾಡಿ ನಮ್ಮನ್ನು ಕ್ಷಮಿಸಿ.

ಅಣ್ಣ ಫೋನ್ ಮಾಡಿ ವಿಷಯ ತಿಳಿಸಿದರು. ಹೋಗಲಿ ಬಿಡಣ್ಣ.. ಏನ್ ಮಾಡೋಕೆ ಆಗತ್ತೆ.. ಎಲ್ಲ ನಾವ್ ಅಂದುಕೊಂಡಂಗೇ ಆಗೋದಿಲ್ಲ. ರಾಯರೆ ಮುಂದೆ ದಾರಿ ತೋರುತ್ತಾರೆ. ನೀವು ಬೇಜಾರು ಮಾಡಿಕೊಬೇಡಿ ಅಂತ ಕಟ್ ಮಾಡಿದೆ.

FM ಆನ್ ಮಾಡಿದೆ.

ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ..  ಮರಳಿ ಕೊಡುವೆಯ ತಿರುಗಿ ಗೆಳತಿ  ಬರುವೆಯಾ.. ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು... ಸ್ವಪ್ನದ ಸೆರೆಮನೆಗೆ ತೆರಳಿದೆ ಒಲವಿಂದು ನಗುವ ಕಂಗಳಲಿ ಮಿಂಚಿದೆ ಹನಿಯೊಂದೂ.. ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ..
ಮರಳಿ ಕೊಡುವೆಯ ತಿರುಗಿ ಗೆಳತಿ  ಬರುವೆಯಾ..... ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು... ಪದಗಳ ಬರೆಯದಲೆ ಪತ್ರವು ಮುಗಿದಾಗ ನೆನಪಿನ ಜಾತ್ರೆಯಲಿ ತಬ್ಬಲಿ ಅನುರಾಗ.. ಎದೆಯ ಗೂಡಿನಲ್ಲಿ ಬೆಳಗುವ ಪ್ರೇಮದ ಹಣತೆಯ ಸುತ್ತಾ ಕಪ್ಪು ಕವಿದಿದೆ.. ಕುರುಡು ಕನಸು ಮಲಗಿದೆ.....


ಯಾವುದೋ ಪುಸ್ತಕದಲ್ಲಿ ಓದಿದ ಕೆಳಗಿನ ಸಾಲು ನೆನಪಾಯಿತು.

You will not get what you love but what you are !

Wednesday, April 11, 2012

ಅವಳ ಕಾಲ್ ಬರುತ್ತಾ?? - ಭಾಗ ೧೧




ಸಮಯ ಬೆಳಗ್ಗೆ ೧೦:೩೦ ಆಗಿತ್ತು. ಮನೆ ಕಡೆ ತಿರುಗಿ ಬರಲು ITPL ಬಸ್ ಸ್ಟಾಪಲಿ ಮತ್ತೊಂದು 500c ಹತ್ತಿದೆ. ಮನಸ್ಸನ್ನು ವಿಮಲಳ ಕಡೆಯಿಂದ ಡೈವರ್ಟ್ ಮಾಡುವ ಪ್ರಯತ್ನದಲ್ಲಿರುವಾಗಲೇ ಕಂಡಕ್ಟರ್ ಬಂದು ಟಿಕೆಟ್ ಟಿಕೆಟ್ ಅಂದ. ನಾನು ಬೆಳಗ್ಗೆ ಕೊಂಡಿದ್ದ ಪಾಸನ್ನು ತೋರಿಸಿದೆ. ಎಲ್ಲಾರೂ ಪಾಸ್ ತೋರಿಸಿದರೆ ನಮ್ಮ ಗತಿ ಏನು ಅಂತ ಅವನು ಗೊಣಗುತ್ತಿರುವಾಗಲೇ ಬರೆದ್ದದ್ದು ಕಂಡಕ್ಟರ್ ಅಣ್ಣನ ಅಳಲು ಎಂಬ ಈ ಚಿಕ್ಕ ಚುಟುಕು.

ಈ ಬಸ್ಸಿಗೆ ಹತ್ತುವುದಿಲ್ಲ ಬೇರೆ ಯಾವ ಮಾಸು
ಇಲ್ಲಿ ಕಾಣುವುದು ಬರೀ ಐಟಿ ಕೂಸು
ತೋರಿಸಿದರೆ ಎಲ್ಲ ಮಂತ್ಲೀ / ಡೈಲೀ ಪಾಸು
ನಮಗೆಲ್ಲಿಂದ ಬರಬೇಕು ಕಾಸು
ಟಾರ್ಗೆಟ್ ಮೀಟ್ ಮಾಡದ್ದಿದ್ದ್ರೆ ಬಾಸು
ತೊಗೋತಾರೆ ನಮಗೆ ಕ್ಲಾಸು
ಮಾಡ್ತಾರೆ ಸಂಬಳದಲ್ಲಿ ಲಾಸು

ಜೋರಾಗಿ ಏಸೀ ಆನ್ ಮಾಡಿಕೊಂಡು ಸೀಟಿಗೆ ಒರಗಿ ಕಣ್ಣು ಮುಚ್ಚಿ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದೆ. ರಾತ್ರಿಯೆಲ್ಲ ನಿದ್ದೆ ಇಲ್ಲದ್ದಕ್ಕೋ ಏನೋ ಹಾಗೆ ಒಂದು ಜಂಪ್ ಹತ್ತಿಬಿಟ್ಟಿತು. ಎಚ್ಚರವಾದಾಗ ಬಸ್ ಇನ್ನೂ ಮಾರತಹಳ್ಳಿ ಬ್ರಿಡ್ಜ್ ಬಳಿ ಟ್ರಾಫಿಕಲಿ ತೆವಳುತ್ತಾ ಸಾಗುತ್ತಿತ್ತು. ಪೇಪರ್ ಪೆನ್ ತೆಗೆದು ವಾಹನ ದಟ್ಟಣೆ ಅನ್ನೋ ಈ ಚುಟುಕನ್ನ ಬರೆದ್ದದ್ದು ಆಗಲೇ.

ಬೆಂಗಳೂರಲ್ಲಿ ಸಿಕ್ಕಾಪಟ್ಟೆ ವಾಹನ ದಟ್ಟಣೆ
ಕಾರಣ? ಕೇಳಿದರೆ ಯಾರು ಬೇಕಾದರೂ ಹೇಳುತ್ತಾರೆ ತಟ್ಟನೆ
೧) ಪ್ರಗತಿಯೇ ಕಾಣದೆ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳು
೨) ನಾಕೆಂಟು ಮಂದಿ ಕೂರುವ ಕಾರಲ್ಲಿ ಹೋಗುತಾರೆ ಒಬ್ಬಿಬ್ಬರು
ಇದಕ್ಕೆಲ್ಲ ಪರಿಹಾರ ???? ಇದೆ.
ಕೆಲಸ ಬೇಗ ಪೂರೈಸಲು ಗುತ್ತಿಗೆದಾರರಿಗೆ ಸರಕಾರ ಹೊರಡಿಸಬೇಕು ಕಟ್ಟಪ್ಪಣೆ
ಕಾರ್ ಪೂಲಿಂಗ್ ನಂತಹ ಯೋಜನೆಗಳಿಗೆ ಸರಕಾರ ಹಾಕಬೇಕು ಮಣೆ
ಆಗ ನಾವು ಬೇಗ ಸೇರಬಹುದು ನಮ್ಮ ಕೋಣೆ

ಬನಶಂಕರಿ ಬಸ್ ಸ್ಟಾಪ್ ತಲುಪಿದಾಗ ಸಮಯ ಮಧ್ಯಾನ್ಹ ೧:೦೦ ಗಂಟೆ ಆಗಿತ್ತು. ವಿಮಲ ಕೊಟ್ಟ ೨ ಪುಟಾಣಿ ದೋಸೆ ಬಿಟ್ಟರೆ ಬೇರೇನೂ ತಿಂದಿರಲ್ಲಿಲ್ಲ. ಆಟೋ ಹತ್ತಿ BDA Complex ಎದುರಿಗಿರುವ SLV ಸ್ವಾದಿಷ್ಟ ತಲುಪಿದೆ. ಒಂದು ಸೌತ್ ಇಂಡಿಯನ್ ಮೀಲ್ಸ್ - ೬೫ ರೂ ಕೊಟ್ಟು ಊಟ ಮುಗಿಸಿ ಮತ್ತೆ ಆಟೋ ಹಿಡಿದು ಮನೆ ತಲುಪಿದೆ. ಸಮಯ ೧:೪೫. ಸಂಯುಕ್ತಳನ್ನು ಭೇಟಿಯಾಗಲು ಇನ್ನೂ ೧:೧೫ ತಾಸು ಇದೆ. ಹಾಗೆಂದುಕೊಳ್ಳುತ್ತಲೇ ಹಾಸಿಗೆ ಮೇಲೆ ಉರುಳಿದೆ. ಮೂರಕ್ಕೆ ಸಂಯುಕ್ತ ಬಂದು ತಲೆ ಮೇಲೆ ಕೈಯಾಡಿಸಿ ಎಬ್ಬಿಸಿದಾಗಲೇ ಎಚ್ಚರವಾದದ್ದು. ಸಂಯುಕ್ತಳಿಗೆ ನಿನ್ನ ಗಾಡಿ ತೆಗೀ ಹೋಗು ನಾನೀಗ ಬಂದೆ ಎನ್ನುತ್ತಾ ಬಚ್ಚಲು ಮನೆಗೆ ಹೋದೆ. ಬೇಗ ಬೇಗ ಮುಖ ತೊಳೆದು ರೆಡೀ ಆಗಿ ಅಮೋದಿನಿಯ ಫೋಟೋನ ಜೇಬಿಗಿಳಿಸಿ ಮನೆ ಬೀಗ ಹಾಕಿ ಸರ ಸರ ಹೆಜ್ಜೆ ಹಾಕಿದೆ. ನಾನು ಆಚೆ ಬರುತ್ತಿದ್ದಂತೆ ಸಂಯುಕ್ತ ಕೈನಿ ಸ್ಟಾರ್ಟ್ ಮಾಡಿ ಆಕ್ಸೀಲಾರೇಟೊರ್ ತಿರುವಿದಳು. ಗಾಂಧಿ ಬಜ಼ಾರ್ CCD ಬಳಿ ಕೈನಿ ಪಾರ್ಕ್ ಮಾಡಿ ನಾವಿಬ್ಬರೂ ಮೂಲೆಯಲ್ಲಿದ್ದ ಸೋಫಾದ ಮೇಲೆ ಆಸೀನರಾದಾಗ ಚಿಕ್ ಮುಳ್ಳು ೩ರ ಮೇಲೂ ದೊಡ್ ಮುಳ್ಳು ೪ರ ಮೇಲೂ ಇತ್ತು.

ಏನೋ ಮಾತಾಡಬೇಕು ಅಂತ ಕರ್ಕೊಂಡು ಬಂದು ಸುಮ್ಮನೇ ಕೂತಿದ್ಯಲೊ? ನಿನ್ ಮದುವೆ ವಿಚಾರ ತಾನೇ? ಅಂತ ಸಂಯುಕ್ತ ಮಾತು ಶುರು ಮಾಡಿದಳು. ನಿನ್ನನ್ನು ಇನ್ನುಮುಂದೆ ಗೂಗಲ್ ಡಾರ್ಲಿಂಗ್ ಅಂತ ಕರಿತೀನಿ ಅಂತ ಹಾಸ್ಯ ಮಾಡಿದೆ. ಯಾಕೆ ಹಾಗ್ ಕರಿತ್ಯ? ಇನ್ನೆನೆ ಮತ್ತೆ, ನಾ ಹೇಳಬೇಕೆಂದುಕೊಂಡಿದ್ದನ್ನ ನೀನೆ ಊಹೆ ಮಾಡಿಬಿಡುತ್ತೀಯಲ್ಲ? ಅದಕ್ಕೆ ಎಂದೆ. ಹ ಹ ಹ.. ಕರಕ್ಟ್.. ನೀ ಅದೇ ವಿಷ್ಯ ಮಾತಾಡಕ್ ತಾನೇ ಕರ್ದಿರದು. ನೀ ಏನಂತಾನ ಕರ್ಕೊ.. ಜೊತೆಯಲ್ಲಿ ಡಾರ್ಲಿಂಗ್ ಅನ್ನು ಅಷ್ಟೇ ಸಾಕು ಅಂದ್ಲು.  ನಾವು ಹೀಗೆ ಮಾತಾಡುತ್ತಿರುವಾಗಲೇ ವೇಟರ್ ಬಂದು ಪಕ್ಕ ನಿಂತಿದ್ದ. ಟು Cafe Latte Regular - ಆರ್ಡರ್ ಮಾಡಿದೆ. ನೀ ಯಾವಾಗ್ಲೂ ಅದೇ ಆರ್ಡರ್ ಮಾಡ್‌ತ್ಯ? ಹೋಗೊ.. Any reason? ಅಂದ್ಲು. ಅಲ್ಲೇ ಬಿದ್ದಿದ್ದ ಮೆನು ತೆಗೆದು Cafe Latte Regular ಮುಂದಿದ್ದ A light milky coffee and a shot of espresso with steamed milk - the recipe for happiness ಅನ್ನೋ ವಾಕ್ಯ ತೋರಿಸಿದೆ. ಒಹ್ ರೆಸಿಪ್ ಫಾರ್ ಹ್ಯಾಪಿನೆಸ್ಸ - ಅಂತ ಹ್ಯಾಪಿನೆಸ್ಸ್ ಸಮಾಚಾರ ಏನೋ? ಬೇಗ ಹೇಳೋ.. ಆಯ್ತು. ಅದುನ್ನ ಹೇಳೋದಿಕ್ಕೆ ನಿನ್ನ ಕರ್ಕೊಂಡು ಬಂದಿರದು. ನೀನು ಸ್ವಲ್ಪ ಸಮಾಧಾನವಾಗಿರಬೇಕು. ನಾ ಹೇಳೊದನ್ನೆಲ್ಲ ಸರಿಯಾಗಿ ಕೇಳಿಸಿಕೊಳ್ಳಬೇಕು , ಮಧ್ಯೆ ಮಧ್ಯೆ ಬಾಯಿ ಹಾಕಬಾರದು ಅಂದೆ. ಹೂ ಅನ್ನುತ್ತಾ ತಲೆಯಾಡಿಸಿದಳು.

ಸಂಯುಕ್ತ ನೀನು ವಿಮಲಳ ಫೋಟೋ ನೋಡಿದ್ದಿಯ.. ನಾನು ಆಕೆಯನ್ನು ಇವತ್ತಿನ ಬೆಳಗ್ಗೆ ೮ರ ತನಕವೂ ಪ್ರೀತಿಸುತ್ತಿದ್ದೆ. ಆದರೆ ಈಗ ಪ್ರೀತಿಸುತ್ತಿಲ್ಲ. ನೀನು ಅವಳನ್ನು ಪ್ರೀತಿಸುತ್ತಿಲ್ಲ ಅನ್ನೋದು ಕೇಳಿ ಖುಷಿಯಾಗುತ್ತಿದೆಯಾದರೂ, ಎಲ್ಲಾ ಒಗಟಿನ ತರ ಮಾತಾಡಬೇಡ, ಸರಿಯಾಗಿ ಬಿಡಿಸಿ ಹೇಳು ಅಂತ ಬಾಯಿ ಹಾಕಿದಳು. ನಾ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿದೆಯಷ್ಟೇ... ಸರಿ ಸರಿ ಇನ್ನೊಂದ್ ಸತಿ ಮಾತಾಡಲ್ಲ ಅಂದು ಕೈ ಕಟ್ಟಿ ಬಾಯಿಮೇಲೆ ಬೆರಳಿಟ್ಟುಕೊಂಡಳು. ನನ್ನ- ಅಮಲಳ - ವಿಮಲಳ ಬಗ್ಗೆ ಎಲ್ಲವನ್ನು ವಿವರಿಸಿ ಅವಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದೆ. ನಾನು ಮುಗಿಸುವವರೆಗೂ ಮಧ್ಯದಲ್ಲಿ ಲೊಚಗುಟ್ಟುವುದು, ಛೇ ಪಾಪ ಛೇ ಅಂತ ಅನ್ನುತ್ತಾ ಕೂತಿದ್ದಳು. ಹಾಗಾದರೆ ನೀನು ವಿಮಲಳನ್ನ ಮದುವೆಯಾಗೊಲ್ಲ... ನನ್ನ ಪ್ರೀತಿ ತುಂಬಾ ಸ್ಟ್ರಾಂಗ್ ಮರಿ.. cheers -  the recipe for happiness ಅನ್ನುತ್ತಾ ಲೋಟಕ್ಕೆ ಲೋಟ ತಾಕಿಸಿ ಒಂದು ಗುಟುಕು ಹೀರಿ ಯಾವುದೋ ಯುದ್ಧ ಗೆದ್ದು ಬಂದವಳಂತೆ ನಿಟ್ಟುಸಿರುಬಿಟ್ಟಳು.

ಆಗಲೇ ನಾನು ಜೇಬಿನಲ್ಲಿದ್ದ ಅಮೋದಿನಿಯ ಫೋಟೋ ತೆಗೆದು ಸಂಯುಕ್ತಳಿಗೆ ಕೊಟ್ಟೆ. ಫೋಟೋ ನೋಡಿದ ತಕ್ಷಣ ಇವಳಾ... ಅನ್ನಲು ಹೋದವಳು, ಯಾಕೋ ತಡವರಿಸಿ ಎಂಜಲು ನುಂಗುತ್ತಾ ಯಾರಿದು? ಅಂತ ಹುಬ್ಬುಗಂಟಿಕ್ಕಿ ಕೇಳಿದಳು. ಅವಳ ಮುಖದಲ್ಲಾದ ಬದಲಾವಣೆ ಗಮನಿಸಿದ ನನಗೆ, ಸಂಯುಕ್ತಳಿಗೆ ಆಮೋದಿನಿ ಗೊತ್ತಾ?? ಅನ್ನೋ ಪ್ರಶ್ನೆ ಒಂದು ಕ್ಷಣ ಕಾಡಿತಾದರೂ, ಇವಳು ಆಮೋದಿನಿ, ನಾನು ಮದುವೆಯಾಗಲಿರುವ ಹುಡುಗಿ. ಹೇಗಿದಾಳೆ?  ಸಂಯುಕ್ತಳಿಗೆ ಏನು ಹೇಳಬೇಕೋ ತೋಚಲ್ಲಿಲ್ಲ... ನನ್ನ ಮುಖವನ್ನೊಮ್ಮೆ ಅಮೋದಿನಿಯ ಫೋಟೋವನ್ನೊಮ್ಮೆ - ಹೀಗೆ ೪-೫ ಬಾರಿ ನೋಡುತ್ತಾ ಸುಮ್ಮನೇ ಕುಳಿತುಬಿಟ್ಟಳು. ಎಷ್ಟೋ ಹೊತ್ತಾದರೂ ತಾಯಿಯ ಹಾಲು ಕುಡಿಯಲು ಬರದ ಕರುವನ್ನು ನೆನೆಸಿಕೊಂಡು ಆಕಳು ಪಡುವ ಮೂಕವೇದನೆಯಂತಿತ್ತು ಅವಳ ಆ ಸ್ಥಿತಿ. ಯಾಕೆ ಸಂಯುಕ್ತ.. ಏನು ಮಾತಾಡುತ್ತಿಲ್ಲ? ಅಮೋದಿನಿ ಚೆನ್ನಾಗಿಲ್ಲವಾ? ನಾನೇ ಮತ್ತೆ ಕೇಳಿದೆ. ಹಾಂ ಹಾಂ ಸೂಪರಗಿದಾಳೆ.. ಅಪ್ಸರೆ ತರ ಇದಾಳೆ.. ತರ ಏನು ಅಪ್ಸರೆ ಹಾಗೆ ಇದಾಳೆ ಅಂತ ಗದ್ಗದಿತ ಧ್ವನಿಯಲ್ಲಿ ಹೇಳಿದಳು.

ನಾನು ಪದೇ ಪದೇ ವಾಚ್ ನೋಡಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ ಸಂಯುಕ್ತ - ಯಾಕೋ ಎಲ್ಲಿಗೆ ಹೋಗಬೇಕು? ಟೈಮ್ ಆಗ್ತಿದ್ಯಾ? ಅಂತ ಕೇಳಿದಳು. ಹೌದು.. ಆರಕ್ಕೆ MTR ನಲಿ ಅಮೋದಿನಿನ ಮೀಟ್ ಮಾಡಬೇಕು ಅಂದೆ. ವ್ಹಾಟ್? ಅಂತ ಕಣ್ಣರಳಿಸಿ, ನಾನು ನಿನ್ನ ಜೊತೆ ಅಮೋದಿನಿನ ಮೀಟ್ ಮಾಡಲು ಬರುತ್ತೇನೆ ಅಂತ ದ೦ಬಾಲು ಬಿದ್ದಳು. ನಾನು ಎಷ್ಟೇ ಹೇಳಿದರೂ ಕೇಳದೇ, ನನ್ನ ಮೊಬೈಲ್ ಕಿತ್ತುಕೊಂಡು ಅಮೋದಿನಿಗೆ ಡೈಯಲ್ ಮಾಡಿ, ಹಲೋ.. ಒಂದು ನಿಮಿಷ ಎಂದು ಹೇಳಿ ಮೊಬೈಲ್ ನನ್ನ ಕೈಗೆ ಕೊಟ್ಟಳು. ಸಂಯುಕ್ತ ನನ್ನ ಜೊತೆ ಬರಲು ಹಟ ಮಾಡುತ್ತಿರುವ ವಿಚಾರ ಹೇಳುತ್ತಿದ್ದಂತೆ, ಹೇ ಅವಳನ್ನು ಕರೆದುಕೊಂಡು ಬನ್ನಿ, ನಾನು ಅವಳ ಜೊತೆಯೂ ಮಾತಾಡಬೇಕು. ಎಷ್ಟು ದಿ..... ೬ ಗಂಟೆಗೆ ಬರ್ತೀರಲ್ವಾ? ಅಂದಳು. ನಾನು ಏನು? ಅನ್ನುತ್ತಿರುವಾಗಲೇ ಅವಳು ಮತ್ತೊಮ್ಮೆ ಜೋರಾಗಿ ೬ ಗಂಟೆಗೆ ಬರ್ತೀರಲ್ವಾ? ಸೀ ಯೂ ಅಂತ ಕಟ್ ಮಾಡಿದಳು. ಅವಳಿಗೂ ಇವಳು ಗೊತ್ತಾ? ಅನುಮಾನದ ಸಣ್ಣ ಎಳೆ ತಲೆ ಹೊಕ್ಕಿತಾದರೂ, ಇನ್ನೊಂದು ಗಂಟೆಯಲಿ ಎಲ್ಲಾ ತಿಳಿದುಬಿಡತ್ತೆ ಅಂತ ಸುಮ್ಮನಾಗಿಬಿಟ್ಟೆ. ಸಮಯ ೫:೧೫ ಆಗಿತ್ತು. ಮನೆಗೆ ಫೋನ್ ಮಾಡಿ ಅಮ್ಮ ನಾ ಇವತ್ತು ಸ್ವಲ್ಪ ಲೇಟ್ ಆಗತ್ತೆ ಬರದು ಅಂತ ಹೇಳಿ, MTR ಕಡೆ ಹೊರಡೋಣವೆ? ಅಂತ ನನ್ನ ಮುಖ ನೋಡಿದಳು.

ವಾಚ್ ನೋಡಿಕೊಂಡು ಅವಳ ಬ್ಯಾಗಲ್ಲಿದ್ದ ಕೈನಿಯ ಕೀ ಎತ್ತಿಕೊಂಡು ಕೌಂಟರಲಿ ಬಿಲ್ ಪೇ ಮಾಡಿ ಹೊರಬಂದೆ. ಸಂಯುಕ್ತ ನನ್ನನ್ನು ಹಿಂಬಾಲಿಸಿದಳು. ಗಾಡಿ ಸ್ಟಾರ್ಟ್ ಮಾಡುತ್ತಿದ್ದಂತೆ ಸಂಯುಕ್ತ ಹಿಂದೆ ಕೂತು ನಡಿ ಅಂದೊಡನೆ  ಕೈನಿಯನ್ನು ಕೆ ಆರ್ ರೋಡ್ ಕಡೆ ತಿರುಗಿಸಿದೆ. ಟಾಟಾ ಸಿಲ್ಕ್ ಫೋರಂ ಹತ್ತಿರ ಸಿಗ್ನಲಲಿ ರೈಟ್ ಟರ್ನ್ ಮಾಡುತ್ತಿರಬೇಕಾದರೆ ಸಂಯುಕ್ತಳಿಗೆ ಏನನ್ನಿಸಿತೋ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳುವ ಧ್ವನಿಯಲಿ  ಹಾಡತೊಡಗಿದಳು.....

ಅರಳುತಿರು ಜೀವದ ಗೆಳೆಯ ... ಸ್ನೇಹದ ಸಿಂಚನದಲ್ಲಿ .... ಬಾಡದಿರು ಸ್ನೇಹದ ಹೂವೆ.... ಪ್ರೇಮದ ಬಂಧನದಲ್ಲಿ .... ಮನಸಲ್ಲೇ ಇರಲಿ ಭಾವನೆ .... ಮಿಡಿಯುತಿರಲಿ ಮೌನವೀಣೆ ...  ಹೀಗೆ ಸುಮ್ಮನೆ ...
ಅರಳುತಿರು ಜೀವದ ಗೆಳೆಯ
.........................................

ಮಾತಿಗೆ ಮೀರಿದ ..... ಭಾವದ ಸೆಳೆತವೆ ಸುಂದರ .... ನಲುಮೆಯು ತುಂಬಿದ .... ಮನಸಿಗೆ ಬಾರದು ಬೇಸರ ... ಬಾಳ ದಾರಿಯಲಿ ಬೇರೆ ಆದರು ... ಚಂದಿರ ಬರುವನು ನನ್ನ ಜೊತೆ ....  ಕಾಣುವೆನು ಅವನಲಿ ನಿನ್ನನೇ ... ಇರಲಿ ಗೆಳೆಯ ಈ ಅನುಬಂಧ .... ಹೀಗೇ ಸುಮ್ಮನೆ ...

ಅರಳುತಿರು ಜೀವದ ಗೆಳೆಯ.

ಹಾಡು ಮುಗಿಯುವ ಹೊತ್ತಿಗೆ ಸಂಯುಕ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

Tuesday, April 10, 2012

ಅವಳ ಕಾಲ್ ಬರುತ್ತಾ?? - ಭಾಗ ೧೦

ಎಡಕ್ಕೆ ಬಲಕ್ಕೆ ಎಷ್ಟು ಹೊತ್ತು ಹೊರಲಾಡಿದರೂ ನಿದ್ದೆ ಸುಳಿಯಲ್ಲಿಲ್ಲ. ದಿಂಬಿನ ಕೆಳಗಿಟ್ಟಿದ್ದ ಅಮೋದಿನಿಯ ಫೋಟೋ ತೆಗೆದು, ಶೆಲ್ಫ್ ನಲ್ಲಿದ್ದ ಖಾಲಿ ಫ್ರೆಮಲಿ ಹಾಕಿ ಟೇಬಲ್ ಮೇಲಿಡಲು ತಂದೆ. ನನಗೊಂದು ಅಚ್ಚರಿ ಕಾದಿತ್ತು. ಟೇಬಲ್ ಮೇಲಿದ್ದ ವಿಮಲಳ ಫೋಟೋದ ಎಡ ಭಾಗಕ್ಕೆ ಕಪ್ಪು ಬಣ್ಣದ ಫ್ರೆಂನಲ್ಲಿದ್ದ ಸಂಯುಕ್ತಳ ಫೋಟೋ ಕಾಣಿಸಿತು. ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆ. ಅದು ಸಂಯುಕ್ತಳದೇ.. ಎತ್ನಿಕ್ ಡೇ ದಿನದಂದು ಸಂಜೆ, ನಾನೇ ತೆಗೆದಿದ್ದ ಫೋಟೋ ಅದು. ವಿಮಲಳ ಫೋಟೋ ಪಕ್ಕಕ್ಕೆ ಸರಿಸಿ ತನ್ನ ಫೋಟೋ ಇಟ್ಟು ಹೋಗಿದ್ದಾಳೆ. ಅವರಿಬ್ಬರ ಫೋಟೋವನ್ನು ಪಕ್ಕಕ್ಕೆ ಸರಿಸಿ ಕೈಲಿದ್ದ ಅಮೋದಿನಿಯ ಫೋಟೋವನ್ನು ಮಧ್ಯದಲ್ಲಿರಿಸಿದೆ.

S (ಸಂಯುಕ್ತ) A (ಅಮೋದಿನಿ)  V (ವಿಮಲ) -----> ಕೋಲೆ ಬಸವನ ತರ ತಲೆಯಾಡಿಸುತ್ತಾ ಮೂವರ ಫೋಟೋವನ್ನು ನೋಡುತ್ತಿದ್ದೆ. ಗುಂಡು ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ದ ಆವರಿಸಿತ್ತು. ಬೆಕಮ್ ಅಂಕಲ್ ಮನೆಯ ಗಡಿಯಾರ ಡಣ್ ಡಣ್ ಅಂತ ೨ ಬಾರಿ ಸದ್ದು ಮಾಡಿದಾಗಲೇ, ಇನ್ನು ಇವರುಗಳನ್ನು ಹೀಗೆ ನೋಡುತ್ತಿದ್ದರೆ, ಅವರ ಕಣ್ಣುಗಳಿಂದಲೇ ನನ್ನನ್ನು ಕುಕ್ಕಿ ಬಿಡುತ್ತಾರೆ ಅನಿಸಿ, ಚಾಪೆ ದಿಂಬು ತೆಗೆದುಕೊಂಡು ಟೆರಸ್ಗೆ ಓಡಿದೆ. ಸಾವಿರಾರು ನಕ್ಷತ್ರಗಳಿದ್ದ ಆಕಾಶವನ್ನೇ ದಿಟ್ಟಿಸುತ್ತಾ ಮಲಗಿದೆ. ಅಂಬರದಲ್ಲಿ ತಾರಾಮೇಳ.. ಎಣಿಸೋ ಜಾಣ ಯಾರು ಇಲ್ಲ... ಬೀಸುವ ಗಾಳಿ ಕಾಣುವುದಿಲ್ಲ.. ಹರಿಯುವ ನೀರಿಗೆ ಕೊನೆಯೇ ಇಲ್ಲ.... ಸುಮಾರು ವರ್ಷಗಳ ಕೆಳಗೆ ಉದಯ ಟೀವಿಯಲ್ಲಿ ಬರುತ್ತಿದ್ದ ಅಂಬಿಕಾ ಧಾರಾವಾಹಿಯ ಹಾಡು ನೆನಪಾಯಿತು.

ತಲೆಯಲ್ಲಿ ಸಾವಿರಾರು ಹುಳಗಳು ಓಡಾಡುತ್ತಿದ್ದ ಹಾಗನಿಸುತ್ತಿತ್ತು. ಬೆಳಗಿನ ಜಾವ ಐದರ ಹೊತ್ತಿಗೆ,  ಈ ೨ ಕೆಲಸಗಳನ್ನು ಇಂದೇ ಮಾಡಬೇಕು ಅಂತ ನಿರ್ಧರಿಸಿದೆ.
೧. ವಿಮಲ ನನ್ನನ್ನು ಇಷ್ಟಪಡುತ್ತಿದ್ದಾಳಾ ಇಲ್ಲವಾ? - ತಿಳಿದುಕೊಳ್ಳಬೇಕು. ಆದರೆ ಹೇಗೆ? ನಾ ಊಹಿಸಿದ್ದು ನಿಜವಾದರೆ ಅವಳಿಂದು ನನಗೆ ಸಿಗುತ್ತಾಳೆ.
೨. ಸಂಯುಕ್ತಳನ್ನ ನನ್ನ ಬಿಟ್ಟು ಹೋಗುವುದಕ್ಕೆ ಒಪ್ಪಿಸಬೇಕು - ಹೇಗೆ?
ಎರಡನ್ನು ಮನಸಿನಲ್ಲೇ ಹೇಳಿಕೊಳ್ಳುತ್ತಾ ಟೆರೆಸ್ ಯಿಂದ ಇಳಿಯುತ್ತಿದ್ದಂತೆ ಎದುರು ಮನೆಯ ಸಂಯುಕ್ತ ರೂಮಿನ ಲೈಟ್ ಆನ್ ಆಯಿತು.

ಬೇಗ ಬೇಗ ಸ್ನಾನ-ಸಂಧ್ಯಾದಿಗಳನ್ನು ಮುಗಿಸಿ ಕಾಫಿ ಹೀರುತ್ತಾ ಲ್ಯಾಪ್‌ಟಾಪ್ ಆನ್ ಮಾಡಿದೆ. ಮ್ಯಾನೇಜರ್ ಸಾಹೆಬ್ರುಗೆ ನಾ ಇನ್ನೆರಡು ದಿನ ಆಫೀಸಿಗೆ ಬರಲು ಆಗೋದಿಲ್ಲ ಅಂತ ಈಮೇಲ್ ಕಳುಹಿಸಿದೆ. ಸಂಯುಕ್ತಳಿಗೆ ಗುಡ್ ಮಾರ್ನಿಂಗ್ ಮೆಸೇಜ್ ಜೊತೆ,  make yourself free by noon 3, i want to discuss something important with you, will take u to CCD gandhi bazaar ಅಂತ ಟೈಪಿಸಿ ಕಳುಹಿಸಿದೆ. ಮರುಕ್ಷಣದಲ್ಲೇ VGM, k fine ಅಂತ ರಿಪ್ಲೈ ಮಾಡಿದ್ದಳು. Hi, GM. If u r free lets meet today. Decide time & venue ಅಮೋದಿನಿಗೆ ಕಳಿಸಿದೆ. ಐದು ನಿಮಿಷದಲ್ಲಿ GM. Evening 6 (sharp) @ MTR JP Nagar ರಿಪ್ಲೈ ಬಂತು. ಇಬ್ಬರು ಹುಡುಗಿಯರ ಭೇಟಿ confirm ಆಯಿತು. ನಾನಂದುಕೊಂಡಂತೆ ವಿಮಲಳೂ ಇಂದು ಸಿಕ್ಕಿಬಿಟ್ಟರೆ.. ನಾನಂದುಕೊಂಡಿದ್ದು ನಿಜವಾಗಿತ್ತು. ವಿಮಲ ನನಗೆ 500c ಬಸ್ಸಲ್ಲಿ ಸಿಕ್ಕಿದಳು. ಆಫೀಸಿಗೆ ಗೆಳತಿಯರ ಜೊತೆ ಕಾರ್ ಪೂಲ್ ಮಾಡುವ ವಿಮಲ, ಸೋಮವಾರ ಬೆಳಗ್ಗೆ ಹಾಗೂ ಶುಕ್ರವಾರ ಸಂಜೆ ಬಸ್ ಅಥವಾ ಆಟೋ ಹಿಡಿಯುತ್ತಾಳೆ. ಯಾಕೆಂದರೆ ಶುಕ್ರವಾರ ಆಫೀಸಿಂದ ನೇರವಾಗಿ ಊರಿಗೆ ತೆರಳುವ ಗೆಳತಿಯರು ಸೋಮವಾರ ಊರಿನಿಂದ ನೇರವಾಗಿ ಆಫೀಸಿಗೆ ಬರುತ್ತಾರೆ. ಹಾಗಾಗಿ ವಿಮಲಳಿಗೆ ಬಸ್ ಅಥವಾ ಆಟೊನೆ ಗತಿ. ನನ್ನ ನೋಡಿ ಕೊಂಚ ಮುಜುಗರಗೊಂಡಂತೆ ಕಂಡರೂ ಕ್ಷಣದಲ್ಲಿಯೇ ಸ್ಮೈಲ್ ಮಾಡುತ್ತಾ ಪಕ್ಕ ಕೂತುಕೊಳ್ಳೋದಿಕ್ಕೆ ಕೈ ಸಂಜ್ಞೆ ಮಾಡಿ ಕರೆದಳು. ಆ ಸ್ಮೈಲಿಗೆ ಅಲ್ಲವೇ ನಾನು ಮನಸೋತಿದ್ದಿದು.

ನಾನು - ಹಾಯ್ ವಿಮಲ.. ಹೇಗಿದ್ಯಾ? ಏನಿವತ್ತು ಬಸ್ಸು? ಆಯ್ತಾ ತಿಂಡಿ?
ವಿಮಲ - ಹಾಯ್ ನಾನು ಫೈನ್. ನೀನು? ಇವತ್ತು ಸೋಮವಾರ ಅದಕ್ಕೆ ಬಸ್ಸು.. ತಿಂಡಿ ಆಯ್ತು.. ದೋಸೆ. ನೀನ್ ಎನ್ ತಿಂದೆ?
ನಾನು - ನಾನು ಅಷ್ಟೇ ಆರಾಮ್. ತಿಂಡಿ ಇನ್ನು ಆಗಿಲ್ಲ. ನೀನು ಸಿಕ್ಕಿದ್ದು ಒಳ್ಳೆಯದೇ ಆಯಿತು. ನಿನ್ನ ಜೊತೆ ಸ್ವಲ್ಪ ಮಾತಾಡಬೇಕಿತ್ತು.
ವಿಮಲ - ಓಹ್.. ಹೌದಾ? ಏನ್ ಅಂತ ವಿಷ್ಯ? ಸ್ವಲ್ಪ ಏನು, ಜಾಸ್ತಿನೇ ಮಾತಾಡು.. ಇನ್ನೂ ೨:೩೦ ಗಂಟೆ ಇದೇ ಬಸ್ಸಲ್ಲಿ ಇಲ್ಲೇ ಕೂತಿರ್ತೀವಿ ಇಬ್ರುನು.
ನಾನು - ನೇರವಾಗೇ ವಿಷ್ಯಕ್ಕೆ ಬರ್ತೀನಿ. ನನ್ನ ಎರಡು ಪ್ರಶ್ನೆಗಳಿಗೆ ಯಾವ ಮುಚ್ಚು ಮರೆ ಇಲ್ಲದೇ ಉತ್ತರ ಕೊಡು.. ಅಷ್ಟು ಸಾಕು.
೧. ನನ್ನ-ಅಮಲಳ ಬಗ್ಗೆ ನಿನ್ನ ತಿಳುವಳಿಕೆ ಏನು? ನಮ್ಮಿಬ್ಬರ ಸಂಬಂಧ ಎಂತದ್ದು ಅಂತ ನೀ ಅರ್ಥ ಮಾಡಿಕೊಂಡಿರುವೆ?
೨. ಅಂದು ನಾನು ನಿಮ್ಮನೆಗೆ ಬಂದು ಕೇಳಿದಾಗ, ನನಗೆ ನಿನ್ನ ಮೇಲೆ ಅಂತಾ ಯಾವುದೇ ಭಾವನೆಗಳು ಇಲ್ಲವೆಂದು ಹೇಳಿದವಳು, ಅಮ್ಮನ ಹಳೆ ನಂಬರಿಂದ ನನ್ನನ್ನು ಸಂಪರ್ಕಿಸಲು ಯಾಕೆ ಪ್ರಯತ್ನಪಟ್ಟೇ?

ವಿಮಲ ಬ್ಯಾಗಿನಿಂದ ತಿಂಡಿಯ ಡಬ್ಬಿ ತೆಗೆದು ನನ್ನ ಕೈಲಿಡುತ್ತಾ ತಿನ್ನು ಎಂಬಂತೆ ತಲೆಯಾಡಿಸಿದಳು. ಮುಂದಿನ ಮುಕ್ಕಾಲು ಗಂಟೆ ಅವಳ ಮಾತಿನ ಸಾರಾಂಶ ಇಂತಿದೆ - ನಾನು-ಅಮಲ ಮೊದಲಿನಿಂದಲೂ ಇಷ್ಟ ಪಡುತ್ತಿದ್ದೆವು. ಆದರೆ ಒಬ್ಬರಿಗೊಬ್ಬರು ಹೇಳಿಕೊಂಡಿರಲ್ಲಿಲ್ಲ. ರಹಸ್ಯ ವಿಚಾರ ಬಯಲಾದ ಕಾರಣದಿಂದ ನಾನು ಅವರ ಮನೆಗೆ ಹೋಗುವುದು ನಿಲ್ಲಿಸಿದ ಮೇಲೂ ನಾವಿಬ್ಬರು ರಾಮಾಂಜನೇಯ ಗುಡ್ಡದಲ್ಲಿ ಆಗಾಗ ಭೇಟಿಯಾಗುತ್ತಿದ್ದುದು ವಿಮಲಳಿಗೆ ತಿಳಿದಿದೆ. ನಾವು ೨ ವರ್ಷ ಮಾತಾಡೇ ಇಲ್ಲ ಅನ್ನೋದನ್ನು ವಿಮಲ ನಂಬಲು ತಯಾರಿಲ್ಲ. ಒಡನಾಟ ಕಮ್ಮಿಯಾಗಿತ್ತು ಅಷ್ಟೇ. ಅದೇ ಸಮಯದಲ್ಲೇ ನನ್ನನ್ನು ತುಂಬಾ ಮಿಸ್ ಮಾಡ್ಕೋತಿದ್ದ ಅಮಲಳಿಗೆ ಅಜಯ್ ಸಿಕ್ಕಿದ್ದು. ಪ್ರತಿದಿನ ಸಿಗುತ್ತಿದ್ದ ಅಜಯ್ ಅಮಲಳಿಗೆ ನನಗಿಂತಲೂ ಹತ್ತಿರವಾಗಿಬಿಟ್ಟ. ಅಮಲ ಬೇರೆ ಜಾತಿಯವನಾದ ಆಜಯನ ಪ್ರೀತಿಸಲು ಶುರು ಮಾಡಿದ ದಿನದಿಂದಲೂ ನನಗೆ ಆ ವಿಚಾರ ತಿಳಿದಿತ್ತು. ನಾನು ಮನಸ್ಸು ಮಾಡಿದ್ದರೆ ಅಮಲಳ ಮದುವೆಯ ಸಲುವಾಗಿ ಅವರ ಮನೆಯಲ್ಲಿ ನಡೆದ ದೊಡ್ಡ ರಾದ್ದಂತ ತಪ್ಪಿಸಬಹುದಿತ್ತು. ಬೇರೆ ಯಾರ ಮಾತನ್ನು ಕೇಳದ ಅಮಲ ಖಂಡಿತ ನನ್ನ ಮಾತನ್ನು ಮೀರುತ್ತಿರಲ್ಲಿಲ್ಲ. ನಾನು ಬೇರೇನು ಮಾಡದ್ದಿದ್ದರೂ, ಕಲಾಳಿಗೆ ಅಮಲ-ಆಜಯರ ಬಗ್ಗೆ ಒಂದು ಮಾತು ಹೇಳಿದ್ದರೂ ಸಾಕಿದ್ದಿತು. ಕಲಾ ಎಚ್ಚರಿಕೆ ವಹಿಸಿಬಿಡುತ್ತಿದ್ದಳು. ಎಲ್ಲಾ ವಿಚಾರ ತಿಳಿದ್ದಿದ್ದರೂ ನಾನು ಬೇಕಂತಲೇ ಮೌನ ವಹಿಸಿದ್ದೆ. ನಾನು ಅಂದು ಒಂದು ಮಾತಾಡಿದ್ದರೆ, ಇಂದು ಅವರ ಅಜ್ಜ-ಅಜ್ಜಿ ಅವರಲ್ಲೇ ಉಳಿದಿರುತ್ತಿದ್ದರು ಹಾಗೂ ನೆಂಟರಿಷ್ಟರು ಅವರ ಮನೆ ಹೆಣ್ಣು ಮಗಳು ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಳು ಎಂದು ಅವರನ್ನು ಅವಮಾನಿಸುತ್ತಿರಲ್ಲಿಲ್ಲ. ಹಾಗೆಯೇ ಮೊದಲಿನಂತೆಯೇ ಅವರ ಮನೆಗೆ ನೆಂಟರಿಷ್ಟರು ಬಂದು ಹೋಗುತ್ತಿದ್ದರು. ಇಷ್ಟಕ್ಕೆಲ್ಲಾ ಕಾರಣ ನಾನೇ. ಇನ್ನು ಆ ಹಳೆ ನಂಬರಿಂದ ಕಾಲ್ ಮಾಡಿದ್ದು ವಿಮಲ ತನ್ನ ವಿಕೃತವಾದ ಆಸೆಯೊಂದನ್ನ ತೀರಿಸಿಕೊಳ್ಳಲು. ಮನುಷ್ಯನಿಗೆ ತೀರಾ ಅಪ್ರಿಯವಾದುದನ್ನ ಅವನಿಗೆ ತುಂಬಾ ಇಷ್ಟವಾಗುವುದರ ಜೊತೆ ನೀಡುವುದು. ಹಾಗೆ ಮಾಡಿ ಮನುಷ್ಯ ಇನ್ನೆಂದೂ ಮೇಲೇಳದಂತೆ ಅವನ ಆತ್ಮಬಲವನ್ನೇ ಕುಗ್ಗಿಸಿಬಿಡುವ ತಂತ್ರ ಅದು. ಆ ನಂಬರ್ ನನಗಿಷ್ಟ ಹಾಗೂ ನನಗೆ ಅಪ್ರಿಯವಾದದ್ದು ತಾನಾರೊ ಬೇರೆಯವನನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಳುವುದು. ತಾನು ಬೇರೆಯವನನ್ನ ಪ್ರೀತಿಸುತ್ತಿದ್ದೀನಿ ಅಂತ ನನಗಿಷ್ಟವಾದ ನಂಬರಿಂದ ಹೇಳುವುದು. ಅದೆಂಥಾ ವಿಕೃತ ಆಸೆ!

Past is past, moreover ನೀನು ಅಂದುಕೊಂಡಿರುವುದೆಲ್ಲಾ ನಿಜವಲ್ಲ ಅಂತ ಅವಳಿಗೆ ಸ್ಪಷ್ಟೀಕರಣ ನೀಡಬೇಕೆನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಕ್ಕಿಲ್ಲ ಅಂತ ತಿಳಿದು ಸುಮ್ಮನಾಗಿಬಿಟ್ಟೆ. ಇಷ್ಟೆಲ್ಲಾ ಅಪಾರ್ಥ ಮಾಡಿಕೊಂಡಿರುವ ವಿಮಲಳನ್ನು ನನ್ನವಳನ್ನಾಗಿ ಮಾಡಿಕೊಳ್ಳುವ ವಾಂಛೆಯೇ ನನ್ನಲ್ಲಿ ಉಳಿಯಲ್ಲಿಲ್ಲ. ಯಾಕೆಂದರೆ ಅವಳು ಈಗಾಗಲೇ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಸಾವಿರಾರು ಅಲೆಗಳು ಒಟ್ಟಿಗೆ ನನ್ನ ಮೇಲೆ ಅಪ್ಪಳಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅವಳ ಕಾಲ್ ಬರಲಿ ಎಂದು ಹಪಹಪಿಸುತ್ತಿದ್ದ ನಾನು ಇನ್ನೆಂದೂ ಅವಳ ಕಾಲ್ ಬರದಿರಲಿ ದೇವರೇ ಎಂದು ಪ್ರಾರ್ಥಿಸಿದೆ.

ನಾನು ಯಾವಾಗಲೂ SA ಬರೆದು V ಬರೆಯುವ ಮುನ್ನ ಒಂದು space ಬಿಡುತ್ತಿದ್ದೆ. ಆದರೆ ಅದೇ ಅಂತರವನ್ನು ವಿಮಲ ತನ್ನ ಜೀವನದ್ದುದ್ದಕ್ಕೂ ಕಾಯ್ದುಕೊಂಡು ಬಿಡಲು ನಿರ್ಧರಿಸಿಬಿಡುತ್ತಾಳೆ ಅಂತ ಎಂದೂ ಕನಸಿನಲ್ಲಿಯೂ ಊಹಿಸಿರಲ್ಲಿಲ್ಲ.

ಇನ್ನು ಮುಗಿದಿಲ್ಲ!

Monday, April 9, 2012

ಅವಳ ಕಾಲ್ ಬರುತ್ತಾ?? - ಭಾಗ ೯





ಮನೆ ತಲುಪಿದಾಗ ೧೧:೩೦ ಆಗಿತ್ತು. ಅಮ್ಮಳ ಹೊರತಾಗಿ ಎಲ್ಲ ಮಲಗಿಬಿಟ್ಟಿದ್ದರು. ಅಮ್ಮ ತತ್ವವಾದ ಪುಸ್ತಕ ಓದುತ್ತಾ ಕುಳಿತ್ತಿದ್ದರು.
ಅಮ್ಮ - ಎಷ್ಟೊತ್ತಿಗೆ ಹೊರಟೆ? ಬಟ್ಟೆ ಬದಲಾಯಿಸಿ ಕೈ ಕಾಲು ತೊಳ್ಕೊ. ತಟ್ಟೆ ಹಾಕ್ತೀನಿ ಊಟಕ್ಕೆ.
ನಾನು - ಅಯ್ಯೋ ಊಟ ಬೇಡಮ್ಮ. ಕಾಫಿ ಕೊಡು ಸಾಕು
ಅಮ್ಮ - ಮಧ್ಯಾನ ಕೂಡ ಊಟ ಮಾಡಿಲ್ಲ, ನಾಳೆ ಎಷ್ಟೋತ್ತಾಗತ್ತೋ ಊಟ? ಏಳು ಏಳು
ನಾನು - ಸರಿ, ಕೈತುತ್ತು ಹಾಕುದ್ರೆ ಮಾಡ್ತೀನಿ
ಅಮ್ಮ - ತಟ್ಟೆ ತೊಳೆದು ಗೋಮ ಹಚ್ಚಬೇಕು ಅಂತ ಊಟನೇ ಬೇಡ ಅಂತ್ಯಲೋ? ಎಷ್ಟು ಸೋಂಬೇರಿ ನೀನು? ನಾಳೆ ಮದ್ವೆ ಆದ್ಮೇಲೂ ಹೀಗೆ ಮಾಡು..ಆಗ ಗೊತ್ತಾಗತ್ತೆ.
ನಾನು - ಅದಕ್ಕೆ ನಂಗೆ ಮದ್ವೆನೆ ಬೇಡ ಅಂದು ಊಟಕ್ಕೆ ಕುಳಿತೆ. ಅಮ್ಮ ಕೈತುತ್ತು ಹಾಕುತ್ತಾ,
ಅಮ್ಮ - ಇನ್ನೆಷ್ಟು ದಿನ ಒಬ್ಬನೇ ಇರ್ತಿಯ? ನಾಳೆ ಬರ್ತಿರೋ ಹುಡುಗಿ ಲಕ್ಷಣವಾಗಿದಾಳೆ.
ನಾನು - ಹ್ಮ್
ಅಮ್ಮ - ಆತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೀಜನಲ್ ಮ್ಯಾನೇಜರ್, ಆಕೆ ಮುಂಚೆ ರೈಲ್ವೇಸ್ ಲೀ ಇದ್ರಂತೆ.. 10 ವರ್ಷದ ಕೆಳಗೆ VRS ತೊಗೊಂಡಿದಾರೆ.
ನಾನು - ಒಹೋಹೋ...ಹಾಗಿದ್ರೆ  ಬ್ಯಾಂಕ್ ಲೋನ್ ಅಪ್ಲಿಕೇಶನ್ ಫಾರ್ಮ್ ಲೀ ಮುಂದಗಡೆ ಬ್ಯಾಂಕ್ ಮ್ಯಾನೇಜರ್ ಸೈನ್ ಅವರ್ದೇ, ಹಿಂದೆ ಶೂರಿಟಿ ಸೈನು ಅವರ್ದೇ.. ಹಾಹಾ..  ಮತ್ತೆ ಫ್ರೀ ಆಗಿ ಟಿಕೆಟ್ ಸಿಗತ್ತೆ ಅನ್ನೋದಾದ್ರೆ ಇನ್ಮೇಲೆ ರೈಲ್ ಲೇ ಓಡಾಡೋ ಅಭ್ಯಾಸ ಮಾಡ್ಕೊತೀನಿ... ಉಹಾಹ...
ಅಮ್ಮ - ಯೇಹ್.. ಎಲ್ಲದಕ್ಕೂ ತಮಾಷೆ ಮಾಡ್ಬೇಡ. ಹುಡುಗಿ BE E&C  ಮಾಡಿ ಲಂಡನ್ನಿನ ಯಾವುದೋ ಯೂನಿವರ್ಸಿಟೀ ಇಂದ  MBA ಮಾಡಿಡಾಳಂತೆ.
ನಾನು - ಅಬಾಬ.. PhD ಯಾಕೆ ಮಾಡಿಲ್ವನ್ತೆ?
ಅಮ್ಮ - ಆಸೆ ಇದ್ಯಂತೆ.. ನೀ ಮಾಡ್ಸು.
ನಾನು - ಈ ಹುಡುಗಿ ಜಾತ್ಕ ಫೋಟೋ ಎಲ್ಲ ಯಾವಾಗ ಬಂತು? ನಂಗೇನೂ ತಿಳಿಸಲೇ ಇಲ್ಲ?
ಅಮ್ಮ - ಯಾವುದೋ ಕೆಲಸದ ನಿಮಿತ್ತ ಆತ ಮೊನ್ನೆ ಗುರುವಾರ ದೇವರಾಯನದುರ್ಗಕ್ಕೆ ಬಂದಿದ್ದರಂತೆ. ಆಗಲೇ ನಂ ಮನೆಗೆ ಬಂದು ಜಾತಕ ಫೋಟೋ ಕೊಟ್ಟಿದ್ದರು.. ಹಾಗೆ ನಿನ್ನ ಜಾತಕ ಫೋಟೋ ತೆಗೆದುಕೊಂಡು ಹೋಗಿದ್ದರು. ನಿನ್ನೆ ಸಂಜೆ ಆಚಾರ್ಯರು ಮನೆಗೆ ಬಂದಿದ್ದರು.. ನಿಮ್ಮಿಬ್ಬರ ಜಾತಕ ಚೆನ್ನಾಗಿ ಕೂಡಿ ಬರುತ್ತೆ,32 ಗುಣಗಳು ಕೂಡತ್ತೆ ನಿಮ್ಮ ಮಗನಿಗೆ ಇದೇ ಹೆಣ್ಣೇ ನಿಶ್ಚಯ ಆಗೋದು.  ಬೇರೆ ಮಾತೆ ಇಲ್ಲ ಅಂತ ಹೇಳುದ್ರು. ಆವ್ರು ಹಾಗೆ ಹೇಳಿ ಇನ್ನೂ ಹೊರಟೆ ಇರಲ್ಲಿಲ್ಲ. ಆಗಲೇ ಆತ ಫೋನ್ ಮಾಡಿ ನಿಮ್ಮ ಹುಡುಗನ ಜಾತಕ ಕೂಡಿ ಬಂದಿದೆ. ಹುಡುಗನು ಲಕ್ಷಣವಾಗಿದ್ದಾನೆ. ಯಾವಾಗ ಬರ್‍ತೀರಿ ನೋಡೋದಿಕ್ಕೆ ಅಂತ ಕೇಳಿದರು. ನಿಮ್ಮಪ್ಪ, ನಾವು ಹೋಗುವುದು ಬೇಡ, ಅವರೇ ಇಲ್ಲಿಗೆ ಬರಲಿ.. ನೂರು ವರ್ಷ ಹಳೆಯದಾದ ನಮ್ಮ ಮನೆ ಮಠವನ್ನು ಅವರೇ ಮೊದಲು ನೋಡಲಿ.. ಆವ್ರು ಒಪ್ಪಿದ ಮೇಲೆ ನಾವು ಅಲ್ಲಿಗೆ ಹೋಗೋಣ ಅಂದ್ರು. ಹಾಗಾಗೆ ಆವ್ರು ನಾಳೆ ಇಲ್ಲಿಗೆ ಬರ್ತಿರದು.

ಆಯ್ತಮ್ಮ ನಾ ಮಲುಗ್ತಿನಿ, ಬೆಳ್ಗೆ ಬೇಗನೆ ಎಬ್ಬಿಸಬೇಡಿ.. ನಾನ್ ನಿದ್ದೆ ಮಾಡ್ಬೇಕು ಅಂತ ರೂಮಿಗೆ ಹೋದೆ. ಅಮ್ಮ ಕರೆದು ಅಲ್ಲೇ ಟೀವೀ ಮೇಲೆ ಹುಡುಗಿ ಫೋಟೋ ಜಾತಕ ಇದೆ ನೋಡು ಅಂದ್ರು. ಅಯ್ಯೋ.. ಆ ಜಾತಕದಲ್ಲಿ ನಾನ್ ಏನಮ್ಮಾ ನೋಡಲಿ.. 10-12 ಮನೆ ಲೀ ಎಲ್ಲ ಗ್ರಹಗಳು
ಕೂತಿರತ್ತೆ. ಖಾಲಿ ಇರೋ 1-2 ಮನೆಗೆ ನೀವ್‌ಗಳೆಲ್ಲ ಸೇರಿ ನಮ್‍ನ ದೂಕ್ಬಿಡ್ತೀರಾ. ಖಾಲಿ ಮನೆ ಅಕ್ಕ ಪಕ್ಕಾ ರಾಹು ಕೇತುಗಳಿದ್ರಂತು ನಮ್ಮ ಪಾಡು ಗೋವಿಂದ ಗೋವಿಂದಾ......ಅನ್ನುತ್ತಿದ್ದೆ.. ನಾಳೆ ಅವ್ರೆದ್ರುಗೆಲ್ಲ ಇದೆ ತರ ಮಾತಾಡ್ಬೇಡ ಅನ್ನುತ್ತಾ ಕೈಗೆ ಹುಡುಗಿಯ ಫೋಟೋ ಕೊಟ್ಟು ಮಲ್ಗೊದಿಕ್ಕೆ ಹೊರಟರು. ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ಹೇಳ್ಬಿಡ್ಬೇಕಮ್ಮ ಆಮೇಲೆ ಮದ್ವೆ ಆದ್ಮೇಲ್ ಹೆಚ್ಚು ಕಮ್ಮಿ ಆಗ್ಬಾರ್ದು.. ಇನ್ನೂ ಏನೇನೋ ಹೇಳುತ್ತಾ ರೂಮಿಗೆ ಎಂಟ್ರೀ ಕೊಟ್ಟೆ.

ಲೈಟೂ ಫ್ಯಾನು ಹಾಕಿ ಮಂಚದ ಮೇಲೆ ಹಾಗೆ ಉರುಳುತ್ತಾ ಹುಡುಗಿಯ ಫೋಟೋ ನೋಡಿದೆ. ಏನಾಶ್ಚರ್ಯ! ಅಷ್ಟು ಸುಂದರವಾದ ಹುಡುಗಿ ನನ್ನನ್ನು ನೋಡುವುದಕ್ಕೆ ಬರುತ್ತಿದ್ದಾಳೆ ಅಂದರೆ... ನನ್ನ ಕಣ್ಣುಗಳನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಸುರಸುಂದರಾಂಗಿ. ಅವಳ ಅಂಗಸೌಷ್ಟವ ವರ್ಣಿಸಲು ಮಾತೆ ಹೊರಡಲ್ಲಿಲ್ಲ. ಟೆಲಿಪ್ರಭು ಅಣ್ಣನ ಸೌಂದರ್ಯ ಹೇಗಿರಬೇಕಂದ್ರೆ.. ಚುಟುಕು ನೆನಪಾಯಿತು
ನಡುವಿಗೆ ಕಚಗುಳಿಯಿಡುವಷ್ಟು ಉದ್ದ ಕೂದಲು
ಒಂದೇ ಕೈಯಲ್ಲಿ ಬಳಸಿ ಹಿಡೀಬಹುದಾದ ಬಳಕುವ ನಡು
ಆ ನಡುವ ಸುತ್ತಿ ಕೈಮೇಲೆ ಜರಿದಿರುವ ಸೀರೆ ಸೆರಗು
ನಡೆದರೆ ಗೆಜ್ಜೆ ಬಳೆಗಳ ಘಲ್ ಘಲ್ ಸದ್ದು........

ಈ ಕವನ ಅವಳ ನೋಡೇ ಬರೆದಿರುವನೇನೋ ಅನಿಸಿತು. ಅಷ್ಟು ರೂಪಸಿ. ಒಂದು ಸಾಮಾನ್ಯ ಸಿಲ್ಕ್ ಸೀರೆಯಲ್ಲೇ ಹಾಗೆ ವಿಜೃಂಬಿಸುತ್ತಿದ್ದಳು.

ಸಂಜೆ ನಾಕಕ್ಕೆ ಅವರು ಬಂದಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅದು ಇದು ಅಂತ ಮಾತಾಡುತ್ತಾ ಕುಳಿತ್ತಿದ್ದರು. ನಾನು ಮಹಡಿಯ ಮೆಟ್ಟಿಲ ಮೇಲೆ ಕೂತಿದ್ದೆ. ಅವಳು ನನ್ನೆದುರಿಗೆ ಚೇರ್ ಮೇಲೆ ಕೂತಿದ್ದಳು. ತೀರಾ ಸಿಂಪಲ್ ಆಗಿದ್ದ ಅವರ ಅಪ್ಪ ಅಮ್ಮ ಅಜ್ಜಿ ತಾತ ಚಿಕ್ಕಮ್ಮ
ಅವಳು ಎಲ್ಲರೂ ಇನ್ನೂ ತೀರಾ ಸಿಂಪಲ್ ಆಗಿದ್ದ ನನ್ನ ಅಪ್ಪ ಅಮ್ಮ ಅಣ್ಣ ಅತ್ತಿಗೆ ಅಕ್ಕ ಎಲ್ಲರಿಗೂ ಹಿಡಿಸಿಬಿಟ್ಟಿದ್ದರು. ಒಲಗ ಊದಿಸಿ ಬಿಡೋದೇ ಅನ್ನೋ ಮಾತಿನ ತನಕ ನಾನು ಸುಮ್ಮನೇ ಇದ್ದೆ. ಆಗಲೇ ಅವರ ತಾತ ನೋಡಪ್ಪ ಈಗಿನ ಕಾಲದಾವ್ರು ಅದೇನೋ ಮಾತಾಡ್ಬೇಕು ಅಂತಾರೆ.. ನೀನು .. ಹಾಗೇನೂ ಇಲ್ಲ ತಾತ..ಕ್ಯಾಷುವಲ್ ಆಗಿ ಮಾತಾಡೋಣ ಬನ್ನಿ ಅಂತ ಅವಳನ್ನ ಕರೆದೆ. ಅವಳು ಸ್ವಲ್ಪ ನಾಚಿಕೆಯಿಂದಲೇ ಎದ್ದು ಬಂದಳು.

ನಾನು - ನಾ ನಿಮ್ಮನ್ನ ಒಂದೇ ಪ್ರಶ್ನೆ ಕೇಳ್ತೀನಿ.
ಅವಳು - ಮುಸಿ ನಗುತ್ತಾ.. ಹೂ. ಕೇಳಿ.
ನಾನು - ನೀವು ನನಗಿಂತ ಹೆಚ್ಚಿಗೆ ಓದಿದ್ದೀರಾ. ನನಗಿಂತ ಏನಿಲ್ಲವೆಂದರೂ ಒಂದೂವರೆ ಪಟ್ಟು ಹೆಚ್ಚಿಗೆ ಸಂಬಳ ಪಡಿತೀರಾ.. ನೋಡಲು ಇಷ್ಟು ಚೆನ್ನಾಗಿದ್ದೀರಾ?
ಅಂದರೂ ತೀರದಲ್ಲಿ ತೀರಾ ಸಾಮಾನ್ಯವಾಗಿರುವ ನನ್ನನ್ನ ನೋಡಲು ಬಂದಿದ್ದೀರ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ?
ಅವಳು - ನನ್ನ ಓದು ನನ್ನ ಸಂಬಳ ನನ್ನ ರೂಪ - ಮೂರರ ಬಗ್ಗೆಯೂ ನಾ ಎಂದೂ ಜಾಸ್ತಿ ಮಹತ್ವ ಕೊಟ್ಟಿಲ್ಲ. ನಾವು ಎಸ್ಟ್ ಓದೀದೀವಿ ಅನ್ನೋಕ್ಕಿಂತ ಎಸ್ಟ್ ತಿಳ್ಕೊಂಡಿದೀವಿ ಅನ್ನೋದು ಮುಖ್ಯ. ಇನ್ನ ದುಡ್ಡು -ರೂಪ, ಇವೆರಡು ಇವತ್ ಇರತ್ತೆ ನಾಳೆ ಹೋಗತ್ತೆ. ಆದರೆ ನಿಮ್ಮ ಈ ಸಿಂಪ್ಲಿಸಿಟೀ, ಸೆನ್ಸ್ ಆಫ್ ಹ್ಯೂಮರ್, ನಿಮ್ಮಲ್ಲಿರುವ ಕವಿ, ಎಲ್ಲರೊಂದಿಗೂ ಹೊಂದುಕೊಂಡು ಹೋಗುವ ನಿಮ್ಮ ಗುಣ, ನಿಮ್ಮ ಮನೆಯವರ ಆಚಾರ-ವಿಚಾರ, ನಿಮ್ಮ ಮನೆಯ ರಾಯರ ವೃಂದಾವನ - ಇವೆಲ್ಲ ಶಾಶ್ವತ.. ಏನನ್ನು ಯಾವುದನ್ನು ಮನಸಲ್ಲಿಟ್ಟುಕೊಳ್ಳದೇ ಎಲ್ಲವನ್ನು ಹೇಳಿಕೊಂಡು ಬಿಡುವ ನಿಮ್ಮ ಗುಣ ಹಿಡಿಸಿಬಿಟ್ಟಿತು. ಕೆಲವೊಂದು ವಿಚಾರದಲ್ಲಿ ನೀವು ತೋರುವ ಮೊಂಡುತನ ಹಾಗೂ ಕೆಲವೊಮ್ಮೆ ಬೇಕಂತಲೇ ಮಾಡುವ ಸೋಂಬೇರಿತನವೂ ನನಗೆ ಇಷ್ಟ.
ಇಷ್ಟೇ ಹೇಳಿದ್ದರೆ ನಾನು ಚಿಕಿತನಾಗುತ್ತಿರಲ್ಲಿಲ್ಲ.. ಆಕೆ ಹೇಳಿದ ಕಡೆ ವಾಕ್ಯ ನನ್ನನ್ನು ಬೆಚ್ಚಿ ಬೀಳಿಸಿತು.. ನಾನು ಗರ ಬಡಿದವನಂತೆ ಅಲ್ಲೇ ನಿಂತುಬಿಟ್ಟೆ. ಅವಳು ಒಂದು ಚೀಟಿಯಲ್ಲಿ " ೯೮೮**-*೦೭೧೧, ಇದು ನನ್ನ ಮೊಬೈಲ್ ನಂಬರ್, ಮತ್ತೆ  ನನ್ನ ಭೇಟಿ ಮಾಡಬೇಕೆನಿಸಿದರೆ " ಅಂತ ಬರೆದು ನನ್ನ ಕೈಗಿತ್ತು ಆಚೆ ಹೋಗಿಬಿಟ್ಟಳು.

ನಮಗೆ ನಿಮ್ಮ ಸಂಬಂಧ ಹಿಡಿಸಿದೆ, ನಮ್ಮ ಹುಡುಗಿಯೂ ಒಪ್ಪಿದ್ದಾಳೆ ಆದಷ್ಟು ಬೇಗ ನಿಮ್ಮ ನಿರ್ಧಾರ ತಿಳಿಸಿ ಅಂತ ಹೇಳಿ ಅವರು ಹೊರಟುಹೋದರು. ಮನೆಯಲ್ಲಿ ಎಲ್ಲರಿಗೂ ಒಂದು ರೀತಿಯ ಸಂಭ್ರಮ. ಅಮ್ಮ ಅಕ್ಕ ಅಂತೂ ಹುಡುಗಿಯ ಗುಣ ಗಾನ ಮಾಡುತ್ತಿದ್ದರು. ಏನಪ್ಪಾ ನಿನಗೆ ಒಪ್ಪಿಗೆಯ? ಅಪ್ಪ ಪ್ರಶ್ನಿಸಿದರು. ಅಣ್ಣ, ನನಗೆ 2 ದಿನ ಟೈಮ್ ಕೊಡಿ.. ಆ ಹುಡುಗಿ ಹತ್ತಿರ ಮಾತಾಡಿ ಹೇಳುತ್ತೇನೆ ಅಂದೆ. ಅಮ್ಮ ಕೈ ಚಾಚಿ ಏನೋ ಹೇಳಲು ಬಂದರೂ, ಸರಿ ಆಗಲಿ ಹಾಗೆ ಮಾಡು ಅಂತ ಅಣ್ಣ ಅನ್ನುತ್ತಿದ್ದಂತೆ ಸುಮ್ಮನಾಗಿಬಿಟ್ಟರು.

ನಾನು ಅವಳ ಫೋಟೋ ಬ್ಯಾಗಲ್ಲಿರಿಸಿ ತಿಂಡಿ ತಿಂದು ಬೆಂಗಳೂರಿನ ಬಸ್ಸು ಹತ್ತಿದೆ. ಸಂಯುಕ್ತಳ ಮನೆಯಲ್ಲಿ ಕೀ ಪಡೆದು ಮನೆ ಸೇರಿದಾಗ ೧೧:೩೦ ಆಗಿತ್ತು. ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗಿದ್ದರೂ ಅದಾವುದು ನನಗೆ ತಿಳಿಯಲ್ಲಿಲ್ಲ....ಅವಳ ಫೋಟೋ ಹಿಡಿದು ಹಾಸಿಗೆಯ ಮೇಲೆ ಉರುಳಿದೆ..ಅವಳು ಹೇಳಿದ ಕಡೆ ವಾಕ್ಯ ಮತ್ತೆ ಮತ್ತೆ ನನ್ನ ಕಿವಿಯಲ್ಲಿ ಗುಯ್‌ಗುಡುತ್ತಿತ್ತು ಹಳೆ ಚಲನಚಿತ್ರಗಳಲ್ಲಿ ಒಂದೇ ವಾಕ್ಯ ನಾಕಾರು ಬಾರಿ ಪ್ರತಿಧ್ವನಿಸುವ ಹಾಗೆ...

ಅಮೋದಿನಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ಕಡೆ ವಾಕ್ಯ "ವಿಮಲ ಸಂಯುಕ್ತರಿಗಿಂತ ನಿಮ್ಮ ಬಗ್ಗೆ ಹೆಚ್ಚಿಗೆ ತಿಳ್ಕೊಂಡಿದೀನಿ, ಸಂಯುಕ್ತಳಿಗಿಂತ ನಿಮ್ಮನ್ನ ಹೆಚ್ಚಿಗೆ ಪ್ರೀತಿಸ್ತೀನಿ, ಅಮಳಲಿಗಿಂತ ಹೆಚ್ಚಾಗಿ ಗೆಳತಿಯಾಗಿ ನಿಮ್ಮ ಜೊತೆಗಿರುವುದೇ ನನ್ನ ಆಸೆ."

ಇನ್ನೆರಡು ದಿನಗಳಲ್ಲಿ, ಕೇವಲ ಎರಡೇ ಎರಡು ದಿನಗಳಲ್ಲಿ ನನ್ನ ಜೀವನದ ಅತ್ಯಂತ ಮಹತ್ವದ್ದಾದ ಹಾಗೂ ಪ್ರಮುಖವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕು. ನೆನೆಸಿಕೊಂಡರೆ ಮೈ ಜುಮ್ಮೆಂದಿತು.

Friday, April 6, 2012

ಅವಳ ಕಾಲ್ ಬರುತ್ತಾ?? - ಭಾಗ ೮

ಸಂಬಂಧದಲ್ಲಿ ನಾನು ಅಮಲಳಿಗೆ ಸೋದರಮಾವನಾಗಿದ್ದರೂ ವಯಸ್ಸಿನಲ್ಲಿ ಅವಳು ನನಗಿಂತ ಕೇವಲ ೨೯೦ ದಿನ ಚಿಕ್ಕವಳು. ಹಾಗಾಗಿ ಓದಿನಲಿ ನಾನು ಯಾವಾಗಲು ಒಂದು ಕ್ಲಾಸ್ ಮುಂದೆ. ಒಂದನೇ ಕ್ಲಾಸ್‌ನಿಂದ ಹಿಡಿದು ತೀರಾ ಇಂಜಿನಿಯರಿಂಗ್ ಆರನೇ ಸೆಮಿಸ್ಟರ್ ತನಕ ಅವಳಿಗೆ ನಾ ಬರೆದುಕೊಂಡಿರುತ್ತಿದ್ದ ನೋಟ್ಸ್ ಗಳೇ ಆಗಬೇಕು, ನಾ ಉಪಯೋಗಿಸುತ್ತಿದ್ದ ಟೆಕ್ಸ್ಟ್ ಬುಕ್ಕೆ ಬೇಕು. ನಾನು ಕ್ಲಾಸಿನ ಒಂದನೇ ದಿನದಿಂದ ಎಗ್ಸಾಮ್ ಹಿಂದಿನ ದಿನದ ತನಕ ಪ್ರ್ಯಾಕ್ಟೀಸ್ ಮಾಡಿರುತ್ತಿದ್ದ ರಫ್ ಶೀಟ್‌ಗಳು ಸಹ ಅವಳಿಗೆ ಸೇರಬೇಕು. ರಿಸಲ್ಟ್ ಬಂದ ಮಾರನೆ ದಿನವೇ ಅಮ್ಮ ಕಲಾಳನ್ನೊ ಅಥವಾ ತಾತ ರಾಮ ರಾಯರನ್ನೋ ಜೊತೆ ಮಾಡಿಕೊಂಡು ನನ್ನ ಊರಿಗೆ ಬಂದುಬಿಡುತ್ತಿದ್ದಳು. ಹಾಗೆ ಬಂದ ದಿನ ಅವಳು ಮಾಡುತ್ತಿದ್ದ ಮೊದಲ ಕೆಲಸವೆಂದರೆ, ನನ್ನ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಇಸ್ಕೊಂಡು ತನ್ನ ಈ ಸಲದ ಮಾರ್ಕ್ಸ್ ಕಾರ್ಡ್ ಜೊತೆಗೆ ಕಂಪೇರ್ ಮಾಡಿಕೊಳ್ಳುತ್ತಿದ್ದುದು. ಸೈನ್ಸ್ ಅಲ್ಲಿ ನೀನ್ ಜಾಸ್ತಿ ತೆಗ್ದಿದ್ದೆ ಅಲ್ವಾ? ನೆಕ್ಸ್ಟ್ ಇಯರ್ ನಿನ್ನ ಸೋಲ್ಸೆ ಸೋಲುಸ್ತೀನಿ ನೋಡ್ತಿರು ಅಂತ ಪ್ರತಿಸಲವೂ ಒಂದೊಂದು ಸಬ್ಜೆಕ್ಟ್ ಮೇಲೆ ಪಣ ತೊಡುತ್ತಿದ್ದಳು, ಹಾಗೆ ಹೆಚ್ಚು ಪಡೆಯುತ್ತಿದ್ದಳೂ ಕೂಡ.

ಹಾಗೆ ಒಂದನೇ ತರಗತಿಯಿಂದ ಹಿಡಿದು ಇಂಜಿನಿಯರಿಂಗ್ ೪ ನೇ ಸೆಮಿಸ್ಟರ್ ತನಕವೂ ಅವಳು ಕನ್ನಡ / ಸಂಸ್ಕೃತ ಮತ್ತು ಮ್ಯಾತಮ್ಯಾಟಿಕ್ಸ್  ಸಬ್ಜೆಕ್ಟ್‌ಗಳಲ್ಲಿ ನನ್ನನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ. ಹಾಗೆ ನನಗೂ ಕೂಡ ಅವಳನ್ನು ಇಂಗ್ಲೀಷ್ ನಲಿ ಸೋಲಿಸಲು ಸಾಧ್ಯವಾಗಲೇ ಇಲ್ಲ. ಊರಲ್ಲಿ ಅವಳ ಎರಡನೆ ದಿನದ ಕೆಲ್ಸವೆಂದರೆ ನನ್ನ ಕ್ಲಾಸ್ ವರ್ಕ್, ಹೋಮ್ ವರ್ಕ್, ಟೆಕ್ಸ್ಟ್ ಬುಕ್ , ರಫ್ ವರ್ಕ್ ಮಾಡಿರುತ್ತಿದ್ದ ಶೀಟ್‌ಗಳು ಎಲ್ಲವನ್ನು ಪ್ರತ್ಯೇಕಿಸಿ ಎಲ್ಲದಕ್ಕೂ ಹುರಿ ಕಟ್ಟಿ ತಾನು ತಂದಿರುತ್ತಿದ್ದ ದೊಡ್ಡ ಬ್ಯಾಗಿಗೆ ತುಂಬುವುದು. ಅವಳು ಹಾಗೆ ಮಾಡುವಾಗಲ್ಲೆಲ್ಲ ನೀನು ಹಳೇ ಕಬ್ಬಿಣ ಖಾಲಿ ಶೀಷ ಹಾಲಿನ್ ಕವರ್ ನ್ಯೂಸ್ ಪೇಪರ್ ಅಂತ ಯಾಕೆ ಒಂದ್ ಸೈಕಲ್ ಹಾಕೊಂಡ್ ಹೋಗ್ ಬಾರ್ದು? ಎಷ್ಟ್ ಚೆನ್ನಾಗ್ ಪ್ಯಾಕ್ ಮಾಡ್‌ತ್ಯ? ಅಂತ ನಾನು ರೇಗಿಸುತ್ತಿದ್ದೆ. ನೀನು ನಂ ಜೊತೆ ಗಾಡಿ ದೂಕೊಂಡು ಬರೋದಾದರೆ ನಾನ್ ಅದಿಕ್ಕು ರೆಡಿ ಅಂತ ತಿರುಗುಬಾಣ ಹಾಕ್ತಿದ್ಲು.

ಮೂರನೇ ದಿನ ಊಟ ಮಾಡಿ ಸಂಜೆ ೪-೫ರ ಹೊತ್ತಿಗೆ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಬಿಡುವುದು. ಅಲ್ಲಿಗೆ ನೀನು ಮಾತ್ರ ನಮ್ಮನೇಲಿ ಮೂರು ದಿನ ಇರೋದಿಲ್ಲ ಅವ್ನ ನಿಮ್ಮನೆಗೆ ೩೦ ದಿನ ಕರ್ಕೊಂಡು ಹೋಗ್ತಿಯ ಅಂತ ನನ್ನಮ್ಮ ಅಮಲಳಿಗೆ ಅನ್ನೋ ಹಾಗಿಲ್ಲ. ನಾನು ಬೆಂಗಳೂರಿಗೆ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದದ್ದಾದರೂ ಸದಾ ಇರುತ್ತಿದ್ದುದು ಕಲಾಳ ಮನೆಯಲ್ಲೇ. ಆಗಿನಿಂದಲೂ ಕಲಾಳಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸ. ಹಾಗೆ ಪ್ರತಿ ವರುಷ ನಾನು ಏಪ್ರಿಲ್ ೧೩ಕ್ಕೆ ಬೆಂಗಳೂರಿಗೆ ಬಂದರೆ ಮತ್ತೆ ಊರಿಗೆ ವಾಪಸಾಗುತ್ತಿದ್ದುದು ಮೇ ತಿಂಗಳ ಕೊನೆಯ ವಾರದಲ್ಲೇ. ಒಂದನೇ ತರಗತಿಯಿಂದ ನನ್ನ ಸೆಕೆಂಡ್ ಪಿ ಯು ಸಿ ಬೇಸಿಗೆ ರಜದ ತನಕ ಇದೇ ರೀತಿ ನಡೆಯುತ್ತಿತ್ತು. ಆದರೆ ಮೂರನೇ ಕ್ಲಾಸ್ ಬೇಸಿಗೆ ರಜದಲ್ಲಿ ಅವಳೆ ನಮ್ಮೂರಿಗೆ ಬಂದು ಬಿಟ್ಟಿದ್ದಳು. ನನಗೆ ಆ ವರುಷ ಉಪನಯನ ಆಗಿತ್ತು. ಮನೆಯಲ್ಲೇ ಸಂಧ್ಯಾವಂದನೆ ಕಲಿಯುತ್ತಿದ್ದ ನನ್ನನ್ನು ಅಮ್ಮ ಆ ವರುಷ ಬೆಂಗಳೂರಿಗೆ ಕಳಿಸಿರಲ್ಲಿಲ್ಲ.

ದೊಡ್ಡಮ್ಮನ ಮನೆಗೂ ಕಲಾಳ ಮನೆಗೂ ೫ ನಿಮಿಷದ ನಡಿಗೆ. ಬೆಳಗ್ಗೆ ಹಾಲು ನ್ಯೂಸ್ ಪೇಪರಿಂದ ಹಿಡಿದು ಇಬ್ಬರ ಮನೆಗೂ ಬೇಕಾದ ಸಣ್ಣ ಪುಟ್ಟ ದಿನಸಿ ಸಾಮಾನು ಎಲ್ಲಾ ತರುತ್ತಿದ್ದುದು ನಾನು ಅಮಲಳೆ. ಊಟ ತಿಂಡಿ ಅವಳು ಹಾಲು ನಾನು ಕಾಫಿ ಎಲ್ಲಾ ಜೊತೆಯಲ್ಲೇ ಆಗಬೇಕು. ಬಿಸಿನೆಸ್, ಚೌಕ-ಬಾರ, ಸ್ನೇಕ್ ಅಂಡ್ ಲ್ಯಾಡರ್, ಲೂಡೋ, ಊನೋ ಕಾರ್ಡ್ಸ್, ಚೆಸ್, ಕೇರೊಮ್, ಬುಕ್ ಕ್ರಿಕೆಟ್.. ಒಂದ ಎರಡ.. ಎಲ್ಲಾ ಆಟ ಆಡುತ್ತಿದ್ದೆವು.  ಮಧ್ಯಾನ್ಹ ೩ಕ್ಕೆ ನಾನು ಬಸ್ ಸ್ಟ್ಯಾಂಡ್ ರಸ್ತೆಯಲಿ ಗೆಳೆಯರೊಡನೆ ಕ್ರಿಕೆಟ್ ಆಡಲು ಹೋದರೆ ಅಮಲಳು ಮನೆ ಕಾಂಪೌಂಡಿನಲಿ ನಿಂತು ನಾನು ಬ್ಯಾಟ್ / ಬೋಲ್ ಮಾಡುತ್ತಿದ್ದ ಪ್ರತಿ ಬಾಲಿಗು ಚಪ್ಪಾಳೆ ತಟ್ಟುತ್ತಾ, ಮಧ್ಯೆ ಮಧ್ಯೆ ನೀರೋ ಪಾನಕಾವೋ ತಂದು ಕೊಡುತ್ತಿದ್ದಳು. ೫:೩೦ಕ್ಕೆ ನಾನು ಆಟ ನಿಲ್ಲಿಸಿ ಬರದ್ದಿದ್ದರೆ ಬೀದಿಯಲ್ಲೇ ರಂಪ ಮಾಡುತ್ತಿದ್ದಳು. ಮನೆಗೆ ಬಂದು ಮುಖ ತೊಳೆದು ಹಾಲು / ಕಾಫಿ ಕುಡಿದು ನಾವು ಕೈ-ಕೈ ಹಿಡಿದು ನಡೆದುಕೊಂಡು ಪ್ರತಿದಿನ ತಪ್ಪದೇ ಹೋಗುತ್ತಿದ್ದುದು ಅದೇ ರಾಮಾಂಜನೇಯ ಗುಡ್ಡಕ್ಕೆ.

ನಾವು ಬೆಳೆದಂತೆಲ್ಲ ನಮ್ಮ ಆಟ ಪಾಠಗಳು ಬದಲಾದವು. ಆಟಕ್ಕಿಂತ ಪಾಠಕ್ಕೆ ಗಮನ ಹರಿಯಿತು. ಮನೆಯಲ್ಲೇ ಬಹಳ ಹೊತ್ತು ಮ್ಯಾತ್ಸ್ ಲೆಕ್ಕನೊ, ಸೈನ್ಸ್ ನ ಯಾವುದೋ ಎಕ್ಸ್‌ಪೆರಿಮೆಂಟ್ ಬಗೆನೊ, ಇಂಗ್ಲೀಶ್ ಗ್ರಾಮರ್, ಹಳೆಗನ್ನಡ ಗದ್ಯ ಪದ್ಯವೋ - ಒಬ್ಬರಿಗೊಬ್ಬರು ಹೇಳಿ ಕೊಡುವುದು / ಕೇಳುವುದು ಮಾಡುತ್ತಿದ್ದೆವು. ತೀರಾ ಬೇಜಾರಾದಾಗ ನ್ಯೂಸ್ ಪೇಪರ್ ಲೀ ಬರುತ್ತಿದ್ದ ಪದಬಂಧ ಬಿಡಿಸುತ್ತಿದ್ದೆವು. ಅವಳು ಹೈ-ಸ್ಕೂಲ್ ಗೆ ಬಂದಾಗ ಕೊಡಿಸಿದ್ದ ಲೇಡೀ ಬರ್ಡ್ ಸೈಕಲಲಿ ಅವಳನ್ನು ಕೂಡಿಸಿಕೊಂಡು ಇಡೀ ಬಸವನಗುಡಿ ತಿರುಗಿದ್ದೆ. ನಮಗಿಂತ ೫ ವರ್ಷ ಕಿರಿಯಳಾದ ವಿಮಲ ನಮ್ಮ ಜೊತೆ ಎಂದೂ ಯಾವ ಆಟ-ಪಾಠದಲ್ಲೂ ಭಾಗಿಯಾಗುತ್ತಿರಲ್ಲಿಲ್ಲ. ಅವಳ ಗೆಳತಿಯರ ಬಳಗವೇ ಬೇರೆ ಇತ್ತು.

ನಮ್ಮಿಬ್ಬರ ಕಡೆಯ ಬೇಸಿಗೆಯಲಿ ನಂದು ಎರಡನೆ ಪಿ ಯು ಸಿ ಎಗ್ಸಾಮ್ ಮುಗಿದು ಸಿ ಇ ಟಿ ಗೆ ತಯಾರಾಗುತ್ತಿದ್ದೆ. ಅಮಲಳು ಎರಡನೆ ಪಿ ಯು ಸಿ ಗೆ   ಟ್ಯೂಷನ್ ಸೇರಿದ್ದಳು. ಟ್ಯೂಷನ್ ಗೆ ಹೋಗಲು ಅನುಕೂಲವಾಗಲೆಂದೇ ಅವಳಿಗೆ ಹೋಂಡ ಅಕ್ಟಿವ ತೆಗಿಸಿಕೊಟ್ಟಿದ್ದರು. ಅದೇ ಗಾಡಿಯಲಿ ಸಾಯಂಕಾಲದ ಒಂದು ರೌಂಡ್ ಬಿಟ್ಟರೆ ಇಬ್ಬರೂ ಮನೆಯಿಂದ ಕದಲುತ್ತಿರಲ್ಲಿಲ್ಲ. ಪ್ರತಿ ದಿನ ಒಂದೊಂದು ಜಾಗ. ಫೋರಂ ಮಾಲ್, ಗರುಡ ಮಾಲ್, ಕಬ್ಬನ್ ಪಾರ್ಕ್, ಎಂ ಜಿ ರೋಡ್, ಕಮರ್ಷಿಯಲ್ ಸ್ಟ್ರೀಟ್, ಲಾಲ್ ಬಾಗ್, ಬ್ಯೂಗಲ್ ರಾಕ್ ಪಾರ್ಕ್, ಗಾಂಧಿ ಬಜ಼ಾರ್, ಅವಳ ಕಾಲೇಜ್ .... ಹೀಗೆ ಬೆಂಗಳೂರಲ್ಲಿ ಅವಳಿಗೆ ಗೊತ್ತಿದ್ದ ಜಾಗವನ್ನೆಲ್ಲ ನನಗೆ ಪರಿಚಯ ಮಾಡಿಸಿದ್ದು ಅಮಲಳೆ. ನಾನು ನಿಮಾನ್ಸ್ ಆಸ್ಪತ್ರೆ ನೋಡಬೇಕು ಕಣೇ ಅಂದಾಗ ನೀನೇನು ಹುಚ್ಚನಾ? ಅಂತ ಅಲ್ಲೀಗೂ ಕರೆದುಕೊಂಡು ಹೋಗಿ ತೊರಿಸಿದ್ದಳು. ಐ ಟಿ ಪಿ ಎಲ್ ಗೆ ಕರೆದುಕೊಂಡು ಹೋಗಿ ಇಲ್ಲೇ ಸಾಫ್ಟ್‌ವೇರ್ ಕಂಪನೀಗಳು ಇರೋದು. ಸಾವಿರಾರು ರೂಪಾಯಿಗಳ ಸಂಬಳ ನೀಡುವ ಕಂಪನಿಗಳು ಇವು. ನೀನು ಇಂಜಿನಿಯರಿಂಗ್ ಮುಗಿಸಿದ ಮೇಲೆ ಇಲ್ಲೇ ಕೆಲಸಕ್ಕೆ ಬರಬೇಕು ಅಂತ ದೊಡ್ಡದೊಂದು ಬಿಲ್ಡಿಂಗ್ ತೋರಿಸಿ ಐ ಟಿ ಕಂಪನಿಗಳ ಮೇಲೆ ನನಗೆ ಆಸೆ ಹುಟ್ಟಿಸಿದ್ದೆ ಅವಳು. ನಾವು ಹೀಗೆ ಗಾಡಿಯಲ್ಲಿ ಹೋಗುವಾಗಲ್ಲೆಲ್ಲ ವಿಮಲ ತಾನು ಬರುತ್ತಿನಿ ಅಂತ ಹಟ ಮಾಡುತ್ತಿದ್ದಳು. ನನ್ನನ್ನು ಅಕ್ಕ ಯಾವತ್ತೂ ಎಲ್ಲಿಗೂ ಕರಕೊಂಡು ಹೋಗಲ್ಲ, ಅವ್ನ ಮಾತ್ರ ಕರ್ಕೊಂಡು ಹೋಗ್ತಾಳೆ ಅಂತ ಅಳುತ್ತಿದ್ದಳು. ಅವಳ ಕಣ್ತಪ್ಪಿಸಿ ನಾನು-ಅಮಲ ಎಸ್ಕೇಪ್ ಆಗುತ್ತಿದ್ದೆವು.

ಅವರ ಮನೆಯ ಯಾವುದೋ ರಹಸ್ಯ ವಿಚಾರವನ್ನ ನಾನು ಬಯಲು ಮಾಡಿಬಿಟ್ಟೆ ಅದರಿಂದ ಅವರು ಬಹಳ ಮುಜುಗರ ಅನುಭವಿಸಬೇಕಾಯಿತು ಅನ್ನೋ ಕಾರಣಕ್ಕೆ ಕಲಾ ನನ್ನನ್ನು ದ್ವೇಷಿಸಲು ಶುರುಮಾಡಿಬಿಟ್ಟಳು. ನೆಂಟರಿಷ್ಟರ ಬಳಿ ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಳು. ನೀನಿನ್ನ ಅವರ ಮನೆಗೆ ಹೋಗಕೂಡದು ಅಂತ ಅಮ್ಮ ಹೇಳಿಬಿಟ್ಟರು. ಅಸಲಿಗೆ ಆ ರಹಸ್ಯ ವಿಚಾರ ನನಗೆ ಅಮಲಳ ಮುಖಾಂತರ ಗೊತ್ತಿದ್ದರೂ ನಾನು ನನ್ನಮ್ಮನ ಬಳಿಯೂ ಹೇಳಿರಲ್ಲಿಲ್ಲ. ಅಮಲಳ ಚಿಕ್ಕಪ್ಪ ಕುತಂತ್ರ ಮಾಡಿ ನನ್ನನ್ನು ಬಲಿಪಶು ಮಾಡಿದ್ದರು. ಆ ವಿಚಾರ ಅಮಲಳಿಗೂ ತಿಳಿದಿತ್ತು. ನನ್ನದೇನೂ ತಪ್ಪಿಲ್ಲ ಅಮಲ - ನಾ ನಿಮ್ಮನೆಗೆ ಬಂದು ಕಲಾಳಿಗೆ ಎಲ್ಲಾ ವಿಚಾರ ತಿಳಿಸುತ್ತಿನೀ ಅಂತ ಅಮಲಳಿಗೆ ಮೈಲ್ ಮಾಡಿದೆ. ಅದಿಕ್ಕವಳು amma is so angry on you that if you come here she will kill you. please please do not come home. but come to bangalore i want to meet you soon. ಅಂತ ರಿಪ್ಲೈ ಮಾಡಿದ್ದಳು. ಆಗಿನಿಂದಲೇ ಶುರುವಾದದ್ದು ನಮ್ಮಿಬ್ಬರ ರಹಸ್ಯ ಭೇಟಿ. ಭೇಟಿಯಾಗುತ್ತಿದ್ದುದು ಅದೇ ರಾಮಾಂಜನೇಯ ಗುಡ್ಡದಲ್ಲಿ. ಸುಮಾರು ನಾಕು ವರ್ಷಗಳ ಕಾಲ ನಾನು ಅವ್ರ ಮನೆಗೆ ಹೋಗಲೇ ಇಲ್ಲ. ನಾವು ಹೀಗೆ ರಹಸ್ಯವಾಗಿ ಭೇಟಿಯಾಗುತ್ತಿದ್ದುದು ವಿಮಲಳಿಗೆ ಗೊತ್ತಿತ್ತಾ??

ಮೊದಲ್ಲೆಲ್ಲ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಈಮೇಲ್ ಕಳಿಸಿಕೊಳ್ಳುತ್ತಿದ್ದೆವು. ಸೆಮಿಸ್ಟರ್ ಶುರುವಾಗುವ ಮುನ್ನ ಟೆಕ್ಸ್ಟ್ ಬುಕ್ ಗಳನ್ನು ಕೊಳ್ಳಲು ಬೆಂಗಳೂರಿಗೆ ಬಂದಾಗ ಅವಳನ್ನು ಭೇಟಿಯಾಗುತ್ತಿದ್ದೆ. ಹಾಗೆ ಭೇಟಿಯಾದಾಗಲ್ಲೆಲ್ಲ ಕಲಾಳಿಗೆ ನನ್ನ ಮೇಲಿನ ಕೋಪ ಆರಿದೆಯಾ? ವಿಚಾರಿಸಿಕೊಳ್ಳುತ್ತಿದ್ದೆ. ಕಾಲೇಜು - ಪುಸ್ತಕ - ಫ್ರೆಂಡ್ಸು - ಗಾಸಿಪ್ ಅದು ಇದು ಮಾತಾಡಿ ಸಂಜೆ ಹೊತ್ತಿಗೆ ನಾನು ಊರಿಗೆ ಬಂದು ಬಿಡುತ್ತಿದ್ದೆ. ಬರಬರುತ್ತ ಭೇಟಿಯಾಗುವುದು ತಪ್ಪಿ ಹೋಯಿತು ಈಮೇಲ್ ಕೂಡ ನಿಂತು ಹೋಯಿತು. ಸುಮಾರು ೨ ವರ್ಷಗಳ ಕಾಲ ನಾವಿಬ್ಬರೂ ಮಾತಾಡೆ ಇರಲ್ಲಿಲ್ಲ !!

ಮತ್ತೆ ನಾನು ಅವರ ಮನೆಗೆ ಹೋದದ್ದು ನಾಕು ವರ್ಷದ ನಂತರ ನನ್ನ ಇಂಜಿನಿಯರಿಂಗ್ ಮುಗಿದು ಕೆಲಸ ಸಿಕ್ಕ ಖುಷಿಗೆ ಸ್ವೀಟ್ಸ್ ಕೊಡಲು. ಆ ವೇಳೆಗೆ ಕಲಾಳಿಗೆ ನನ್ನ ಮೇಲಿದ್ದ ಕೋಪ ತಣ್ಣಗಾಗಿಬಿಟ್ಟಿತ್ತು ಮತ್ತು ನನ್ನ ತಪ್ಪೇನೂ ಇರಲ್ಲಿಲ್ಲ ಎನ್ನುವ ಅರಿವೂ ಆಗಿತ್ತು. ಹಾಗಾಗೆ ಕಲಾ ನನ್ನನ್ನು ಕುರಿತು - ಎಂಥ ಒಳ್ಳೇ ಕೂಸು ನೀನು, ಅನ್ಯಾಯವಾಗಿ ನಿನಗೆ ಬೈದುಬಿಟ್ಟೆ. ಇನ್ನು ಮುಂದೆ ನಾ ಆ ರೀತಿ ಮಾಡೋಲ್ಲ. ನೀನು ಮುಂಚೆ ಹೇಗೆ ನಮ್ಮನೆಗೆ ಬರುತ್ತಿದ್ದೋ ಹಾಗೆ ಇನ್ಮುಂದೇನು ಬರಬೇಕು. ಈಗಂತೂ ಕೆಲಸ ಸಿಕ್ಕಿದೆ. ಬೆಂಗಳೂರಲ್ಲೇ ಇರ್ತೀಯಾ, ವಾರಕ್ಕೊಮ್ಮೆಯಾದರೂ ನಮ್ಮನೆಗೆ ಬರಲೇಬೇಕು ಅಂತ ಹೇಳಿದ್ದಳು. ಇದಾದ ಮೇಲೆ ನಾನು ಮತ್ತೆ ಅವರ ಮನೆಗೆ ಆಗಾಗ ಹೋಗಲು ಶುರುಮಾಡಿದ್ದು.

ಅಷ್ಟರಲ್ಲಾಗಲೇ ಅಮಲ ಕ್ಲಾಸ್ ಮೇಟ್ ಒಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆ ವಿಚಾರವಾಗಿ ನನ್ನ ಬಳಿ ಅವಳು ಏನೂ ಹೇಳಿಕೊಂಡಿರದ್ದಿದ್ದರೂ ಚೂರು ಪಾರು ವಿಷಯ ನಂಗೂ ತಿಳಿದಿತ್ತು. ಅವರ ಮನೆಯಲ್ಲಿ ಮದುವೆಗೆ ವಿರೋಧವಿದ್ದರೂ ಹಟಮಾಡಿ ಆ ಹುಡುಗ ಅಜಯ್ ನನ್ನೇ ಮದುವೆ ಮಾಡಿಕೊಂಡಿದ್ದಳು.
ಅಜಯ್ ಲಂಡನ್ನಿಗೆ ಹೋಗಿ ೩ ತಿಂಗಳಾದ ಮೇಲೆ ಅಮಲ ಲಂಡನ್ನಿಗೆ ಹೊರಟಿದ್ದಳು. ಬೆಂಗಳೂರಿನ ಏರ್‌ಪೋರ್ಟ್ ಗೆ ಅಮಲಳನ್ನು ಬೀಳ್ಕೊಡಲು ಹೋಗಿದ್ದವನು ನಾನೊಬ್ಬನೇ. ಅದೇ ನಮ್ಮಿಬ್ಬರ ಕಡೆಯ ಭೇಟಿ.

ಲಾಸ್ಟ್ ಸ್ಟಾಪ್ ಇಳಿರಿ ಇಳಿರಿ ಅಂತ ಕಂಡಕ್ಟರ್ ಕೂಗಿದಾಗಲೆ ಎಚ್ಚರವಾದದ್ದು.  ಸಮಯ ೧೧:೧೫. ಬಸ್ ಇಳಿದು ೧.೫ ಕಿ ಮೀ ದೂರ ಇರುವ ಮನೆಗೆ ನಡೆಯುತ್ತಲೇ ಸಾಗಿದೆ.

ಇನ್ನು ಮೂರು ತಿಂಗಳಲ್ಲಿ ಅಮಲ ವಾಪಸ್ಸು ಬರುತ್ತಿದ್ದಾಳೆ.

Thursday, April 5, 2012

ಅವಳ ಕಾಲ್ ಬರುತ್ತಾ?? - ಭಾಗ ೭


ಸಮಯ ೮:೩೦ ಆಗಿತ್ತು. ಹೀಗೆ ಕುಳಿತ್ತಿದ್ದರೆ ಊರಿಗೆ ತಲುಪುವುದು ಲೇಟ್ ಆಗತ್ತೆ ಅಂದುಕೊಂಡು, ಅಕ್ಕ ಹೇಳಿದ ಆ ಹೊಸಾ ಬಟ್ಟೆಯನ್ನು ಆಫೀಸ್ ನ ಲ್ಯಾಪ್‌ಟಾಪ್ ಬ್ಯಾಗಿನಲ್ಲಿರಿಸಿ zಇಪ್ ಎಳೆದೆ. ದೇವರಿಗೆ ಕೈ ಮುಗಿದು ಮನೆಗೆ ಬೀಗ ಹಾಕಿ ಸಂಯುಕ್ತಾಳ ಮನೆ ಕಡೆ ನಡೆದೆ. ಭಾರತ-ಆಸ್ಟ್ರೇಲಿಯ ಮೊದಲ T20 ಮ್ಯಾಚನು ಅಂಕಲ್ ತದೇಕಚಿತ್ತದಿಂದ ನೋಡುತ್ತಿದ್ದರು. ನಾನು ಬಾಗಿಲ ಬಳಿ ಹೋಗುತ್ತಿದ್ದಂತೆ ಒಹೋಹೋ ಇಂಜಿನಿಯರ್ ಸಾಹೇಬ್ರು ಅಪರೂಪ ಆಗ್ಬಿಟ್ರಿ, ಬರ್ಬೇಕು ಬರ್ಬೇಕು ಅಂತ ಒಳಕರೆದು, ಪುಟಿ ಯಾರ್ ಬಂದಿದಾರೆ ನೋಡು ಅಂತ ಸಂಯುಕ್ತಳನ್ನು ಕರೆದರು. ಅಡುಗೆ ಮನೆಯಲ್ಲಿದ್ದ ಆಂಟೀ ಕೂಡ ಹೊರಬಂದು ಬಾಪ್ಪ ಒಳಗೆ ಅಂದರು. ನಾ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನಿಸಿ ಒಳ ಹೋಗಿ ಸೋಫಾ ಮೇಲೆ ಕೂತೆ. ರೂಮಿನಲ್ಲಿ ಓದುತ್ತಾ ಕೂತಿದ್ದ ಸಂಯುಕ್ತ ಕೈಯಲ್ಲಿದ್ದ ಬುಕ್ ಅನ್ನು ಹಿಡಿದೆ ನನ್ನ ಪಕ್ಕ ಬಂದು ಆನಿಸಿದಳು.

ಭಾರತ ಪಂದ್ಯ ಸೋತಿತ್ತು.  ....... presentation cermony on the other side of this break ಅಂತ ಬಡಬಡಿಸಿ ರವಿ ಶಾಸ್ತ್ರಿ ಹೊರಟ. ಅಂಕಲ್ ತಡ್ಯಪ್ಪ, ಕಾಲು ತೊಳೆದು ಬರ್ತೀನಿ ಅಂತ ಎದ್ದು ಬಚ್ಚಲು ಮನೆಗೆ ಹೋದರು. ಆಂಟೀ ನಾನ್ ಊರಿಗೆ ಹೋರ್ಟಿದೀನಿ, ಮನೆ ಬೀಗ ಕೊಟ್ಟು ಹೋಗೋಣ ಅಂತ ಬಂದೆ, ತೊಗೊಳಿ ಎಂದು ಬಲಗೈ ಚಾಚಿ ಅರ್ಧ ಎದ್ದೆ. ನಾನ್ ಪಕ್ದಲ್ಲೆ ಕೂತಿದೀನಿ ಇಲ್ಲೇ ಕೊಡು ಅಂತ ನನ್ನ ಎಡಗೈ ಎಳೆದ ಸಂಯುಕ್ತ ನನ್ನನ್ನ ಸೋಫಾ ಮೇಲೆ ಬೀಳಿಸಿ ಬಲಗೈಲಿದ್ದ ಕೀನ ಕಿತ್ತುಕೊಂಡಳು. ಅಯ್ಯೋ ಗೂಬೆ ಏನೇ ಅರ್ಜೆಂಟ್ ನಿಂಗೆ ಇಲ್ಕೊಡು ಅಂತ ಕೇಳಿದ್ದಿದ್ದ್ರೆ ಅವ್ನ್ ಕೊಡ್ತಿರ್ಲ್ಲಿಲ್ವಾ? ಅಂತ ಅವ್ಳಿಗೆ ಬೈದು, ಏನಾಗಿಲ್ಲ ತಾನೇ? ಕೂತ್ಕೋಪಾ, ನಿಂಗ್ ಇಷ್ಟವಾದ ಸಜ್ಜಿಗೆ ಮಾಡಿದೀನಿ, ತಿಂದ್ ಕೊಂಡು ಹೊರಡುವಂತೆ ಅಂತ ಹೇಳಿ ಅಡುಗೆ ಮನೆಗೆ ಹೋದರು. ಜೊತೆಗೆ ಸಂಜೆ ನಾ ಮಾಡಿದ ಚೂಡನೂ ತೊಗೊಂಡ್ ಬಾರಮ್ಮ - ಸಂಯುಕ್ತ ಅಮ್ಮನಿಗೆ ಆರ್ಡರ್ ಮಾಡಿದಳು.

ಟೀವೀಯಲಿ ಸ್ಕೋರ್ ಕಾರ್ಡ್,ಬೌಂಡರೀಸ್, ಸಿಕ್ಸರ್ಸ್, ಫಾಲ್ ಆಫ್ ವಿಕೆಟ್ಸ್ ಎಲ್ಲಾ ತೋರಿಸಿ ಪ್ರೆಸೆಂಟೇಶನ್ ಸೆರ್ಮನಿ ಶುರು ಮಾಡಿದರು. anchorman ಹೋಲ್ಡಿಂಗ್ ನ ನೋಡಿ ಅಂಕಲ್ ಮೈಕೆಲ್ ಹೋಲ್ಡಿಂಗ್ ಈಸ್ ಹೋಲ್ಡಿಂಗ್ ದ ಮೈಕ್ ಅಂದರು. ಕೆಳಗಿನ ಕವನಕೆ ಅದೇ ಸ್ಪೂರ್ತಿಯಾಯಿತು. ಸಂಯುಕ್ತ ತಂದಿದ್ದ ಬುಕ್ಕಲಿ ಒಂದು ಹಾಳೆ ಕಿತ್ತು ಬರೆಯತೊಡಗಿದೆ.

ಒಂದೇ ಬೌಂಡರಿಗೆ ಪೆವಿಲಿಯನ್ ಸೇರಿದ ವೀರೇಂದ್ರ ಸೆಹ್ವಾಗ್
ಭರವಸೆ ಮೂಡಿಸಿದ್ದ ಕೊಹ್ಲಿ ವಿಕೆಟ್ ಕಿತ್ತಿದ ಬ್ರಾಡ್ ಹಾಗ್
'ಗಂಭೀರ'ವಾಗಿ ಬ್ಯಾಟ್ ಮಾಡದ ಗೌತಮ
ಭಾರತದ 'ಹಿತ'ಕಾಯದ ರೋಹಿತ್ ಶರಮ
ಕ್ರಿಶ್ಚಿಯಾನ ಎಸೆತಕ್ಕೆ ಬೋಲ್ಡ್ ಆದ ರೈನ
ಕಡೆ ಓವೆರಲಿ ತಿಣುಕಾಡಿದ ಅಶ್ವಿನ
ಟೆಸ್ಟ್ ಇನ್ನಿಂಗ್ಸ್ ಆಡಿದ ನಾಯಕ ಮಹೇಂದ್ರ
ಎನಿಕ್ಕೂ ಪ್ರಯೋಜನವಾಗದ ರವೀಂದ್ರ
ಆಲ್ ರೌಂಡ್ ಆಟ ಪ್ರದರ್ಶಿಸಿದ ಹಸ್ಸಿ
ಬಳಿದನು ಭಾರತದ ಮುಖಕ್ಕೆ ಮಸಿ
ಕೊನೆಗೂ ಏರಲಾಗಲ್ಲಿಲ್ಲ ವಾಡ್ ಪೇರಿಸಿದ ರನ್ ಗೋಡೆ
ವರುಣನ ಕೃಪೆಗೂ ಪಾತ್ರವಾಗದ ಭಾರತೀಯ ಪಡೆ
ವಿಜಯಲಕ್ಷ್ಮೀ ಒಲಿದಳು ಬೈಲಿಯ ಆಸೀಫ್ಸ್ ಕಡೆ
ಕ್ರಿಕೆಟ್ ಗೆ ಎಳ್ಳು ನೀರು ಬಿಟ್ಟು, ಊರಿಗೆ ನೀ ನಡೆ

ಬರೆಯುತ್ತಿರುವಾಗಲೇ ಇಣುಕಿ ಇಣುಕಿ ನೋಡುತ್ತಿದ್ದ ಸಂಯುಕ್ತ, ನಾನು ಲೇಖನಿ ಟೇಬಲ್ ಮೇಲಿಡುತ್ತಿದ್ದಂತೆ, ನನ್ನ ಕೈಲಿದ್ದ ಹಾಳೆಯನ್ನು ಕಿತ್ತುಕೊಂಡು ಒಂದೇ ಬೌಂಡರಿಗೆ ಪೆವಿಲಿಯನ್ ......... ಜೋರಾಗಿ ಓದಲು ಶುರು ಮಾಡಿದಳು. ಪ್ರತಿ ಲೈನಿನ ಕೊನೆಯಲ್ಲೂ ಅವರು ವಾಹ್ ವಾಹ್ ಅನ್ನುತ್ತಿದ್ದರೆ, ನಾನು ಆಂಟೀ ಕೊಟ್ಟಿದ್ದ ಘಮಘಮಿಸುತ್ತಿದ್ದ ತುಪ್ಪ ತೇಲುತ್ತಿದ್ದ ಬಿಸಿ ಬಿಸಿ ಸಜ್ಜಿಗೆಯನ್ನು ಉಫ್ ಉಫ್ ಎಂದು ಆರಿಸುತ್ತಾ ತಿನ್ನುತ್ತಿದ್ದೆ. ಸ್ಪೂನ್ ಕಿತ್ಕೊಂಡು ಸಂಯುಕ್ತನು ಸ್ವಲ್ಪ ಸಜ್ಜಿಗೆ ತಿಂದು ರೂಮಿಗೆ ಹೋಗಿ ಬಾಗಿಲು ಸರಿಸಿಕೊಂಡಳು. ನಾನು ಕೈ ತೊಳೆದು, ನೀರು ಕುಡಿದು, ಆಂಟೀ ಕೊಟ್ಟ ಚೂಡ ಅವಲಕ್ಕಿಯ ಕವರನ್ನು ಬ್ಯಾಗಿಗೆ ಸೇರಿಸಿದೆ. ಸರಿ ಆಂಟೀ, ಅಂಕಲ್ ನಾನಿನ್ನು ಹೊರಡುತ್ತೀನಿ, ನಾಳೆ ಸಂಜೆ ಬಂದ್ಬಿಡ್ತೀನಿ. ಸೀ ಯು ಕಣೇ ಸಂಯುಕ್ತ ಅಂತ ಹೇಳಿ ಬಾಗಿಲಿನ ಕಡೆಗೆ ನಡೆದೆ.
ನೈಟಿಯಲ್ಲಿದ್ದ ಸಂಯುಕ್ತ ಲೈಟ್ ಬ್ಲೂ ಜೀನ್ಸ್ ಕಪ್ಪು ಟಾಪ್ ಧರಿಸಿ ರೂಮಿನ ವಾಸ್ಕಲ್ ಮೊಳೆಗೆ ಸಿಕ್ಕಿಸಿದ್ದ ಕೈನಿಯ ಕೀ ತೆಗೆದುಕೊಂಡು ನಡಿ ಮೆಜೆಸ್ಟಿಕ್ ಗೆ ಡ್ರಾಪ್ ಮಾಡ್ತೀನಿ  ಅಂತ ಹಿಂದೆನೆ ಬಂದ್ಲು. ಆ ಸಮಯದಲ್ಲಿ ಬಸ್ಸಿಗೆ ಕಾಯುವುದು ಅಥವಾ ಆಟೋದವನ ಜೊತೆ ಜಗಳ ಕಾಯಲು ನನಗೂ ಮನಸಿರಲ್ಲಿಲ್ಲ. ಆದರೂ ವಾಚ್ ನೋಡಿಕೊಂಡು ಆಗಲೇ ೯ ಗಂಟೆ, ನೀನ್ ಬರೋದು ಬೇಡ ಅಂದೆ. ೯ ಆಗಿದೆ ನಿಂಗ್ ಲೇಟ್ ಆಗತ್ತೆ ಅಂತಾನೆ ನಾನ್ ಡ್ರಾಪ್ ಮಾಡಕ್ ಬರ್ತಿರದು ಸುಮ್ನೇ ನಡಿ ಅಂದು, ಅಪ್ಪ ಅಮ್ಮ ಹೋಗ್ಬರ್‌ತೀನಿ ಅಂತ, ನನ್ನ ಕೈ ಹಿಡಿದು ಎಳೆದುಕೊಂಡು ಆಚೆ ಬಂದಳು. ನಿಧಾನ ಕಣೇ ಹುಷಾರಪ್ಪ ಅಂತ ಆಂಟೀ ಹೇಳ್ತಿದ್ರೆ, ಶಾಂತಲ ಹತ್ರ ಸಿಗ್ನಲ್ ಇದ್ಯಲ ಅಲ್ಲಿ ಬಿಡು, ತೀರಾ ಮೆಜೆಸ್ಟಿಕ್ ಬಸ್ ಸ್ಟಾಪ್ ಒಳಗೆ ಹೋದರೆ ಟ್ರ್ಯಾಫಿಕ್ ಜಾಮ್ ಇರತ್ತೆ ಅಂತ ಅಂಕಲ್ ಹೇಳಿದ್ರು. ಹೂ ಸರಿ ಸರಿ ಆಯ್ತು ಅಂತ ಇಬ್ಬರೂ ಮೆಟ್ಟಿಲಿಳಿದು  ಕೈನಿ ಏರಿದೆವು. ಅವಳು ಓಡಿಸುತ್ತಿದ್ದರೆ ನಾನು ಮಧ್ಯೆ ಬ್ಯಾಗ್ ಇಟ್ಟು ಹಿಂದೆ ಕೂತೆ.
ರೋಡ್ ಕ್ರಾಸ್ ಮಾಡೋವರೆಗೂ ಸುಮ್ಮನಿದ್ದ ಸಂಯುಕ್ತ ನಿನ್ನ ಬ್ಯಾಗ್ ಚುಚ್ತಾ ಇದೆ, ತೆಗ್ದು ಹಿಂದೆ ನೇತಾಕೊ ಅಂತ ದಬಾಯಿಸಿದಳು. ಸರಿ ಆಯ್ತು ಕಿರುಚ್ಬೇಡ ಅಂತ ನಾನು ಬ್ಯಾಗ್ ತೆಗೆದು ಹಿಂದೆ ತಗ್ಲಾಕೊಂಡೆ. ಬ್ಯಾಗ್ ತೆಗೆದ ಕೂಡಲೇ ಸರಿಗೆ ಕೂತುಕೊಳ್ಳುವ ನೆಪದಲ್ಲಿ ಸಂಯುಕ್ತ ಹಿಂದೆ ಸರಿದು ಅರ್ಧಕ್ಕಿಂತ ಹೆಚ್ಚಿನ ಸೀಟನ್ನು ಆವರಿಸಿದಳು.
ಕೈನಿ ಆಶ್ರಮ ಬಿಟ್ಟು ಚಾಮರಾಜಪೇಟೆ ಕಡೆ ಸಾಗುತ್ತಿತ್ತು. ಗಾಳಿಗೆ ಹರಿಬಿಟ್ಟ ಅವಳ ತಲೆಗೂದಲು ನನ್ನ ಮುಖಕ್ಕೆ ಕಚಗುಳಿ ಇಡುತ್ತಿತ್ತು. ಕೂದಲನ್ನು ಪಕ್ಕಕ್ಕೆ ಸರಿಸಿ ಅವಳ ಕಿವಿ ಹತ್ತಿರ ಮುಖ ಇಟ್ಟು ಯಾವ ಶಾಂಪೂನೇ ಕೂದ್ಲು ಘಮ ಘಮ ಅನ್ತಿದೆ ಅಂತ ವ್ಯಂಗ್ಯಮಾಡಿದೆ. ಆ.. ಯಾವ್ ಶಾಂಪೂ ಆದ್ರೆ ನಿಂಗೇನೂ.. ಸುಮ್ನೇ ಹಿಡ್ಕೊಂಡು ಕೂತ್ಕೋ ಅಂತ ಜೋರು ಮಾಡಿದಳು. ತಡಿ ಮಾಡ್ತೀನಿ ನಿಂಗೆ ಅಂತ ನನ್ನ ಕೈಗಳನ್ನು ಅವಳ ಸೊಂಟದ ಸುತ್ತಾ ಬಳಸಿ, ಮುಖವನ್ನು ಅವಳ ಭುಜದ ಮೇಲಿಟ್ಟೇ. ದಟ್ಸ್ ಲೈಕ್ ಎ ಗುಡ್ ಬಾಯ್ ಅಂದ್ಲು. ೨ ನಿಮಿಷ ಸುಮ್ಮನಿದ್ದು ನಿಂಗೆ ಏನೋ ಹೇಳಲ? ಅಂದೆ. ಹೂ ಧಾರಾಳವಾಗಿ ಹೇಳು ಅಂತ ಭುಜ ಎಗರಿಸಿದಳು. ನನ್ನ ಮೆಜೆಸ್ಟಿಕ್ ಗೆ ಡ್ರಾಪ್ ಮಾಡಲು ಯಾಕೆ ಬಂದೆ? ಕೇಳಿದೆ.
ಅಯ್ಯೋ.. ತೂ ನಿನ್ನ.. ಏನೋ ಹೇಳ್ತೀಯ ಅಂತ ನಾನ್ ಖುಷಿ ಪಡ್ತಿದ್ರೆ ಪೆದ್ ಪೆದ್ದಾಗಿ ಏನೋ ಪ್ರಶ್ನೆ ಮಾಡ್‌ತ್ಯ? ನಂಗ್ ಮಾಡಕ್ ಬೇರೆ ಕ್ಯಾಮೇ ಇರ್ಲ್ಲಿಲ್ಲ ನೋಡು ಅದಕ್ಕೆ ಬಂದೆ ಅಂದವಳೇ ಗಾಡಿ ನಿಲ್ಲಿಸಿ ನನ್ನನ್ನು ಕೆಳಗಿಳಿಸಿ ಬ್ಯಾಗ್ ತಾನು ನೇತಾಕಿಕೊಂಡು ಓಡಿಸು ಗಾಡಿ ಅಂತ ಹಿಂದೆ ಕೂತಳು. ಎಂಥ ಹುಡುಗಿ ಸಹವಾಸ ಅಯ್ತಲ ತಂದೆ ಅಂತ ಗೊಣಗುತ್ತಾ ಕೈನಿಯ ಆಕ್ಸೀಲಾರೇಟೊರ್ ತಿರುವಿದೆ. ಸಂಯುಕ್ತ ನನ್ನನ್ನು ಬಿಗಿಯಾಗಿ ಅಪ್ಪಿ ಹಿಡಿದು ಮುಖವನ್ನು ಬೆನ್ನಿಗೆ ಆನಿಸಿ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ... ಅಂತ ಮೆಲ್ಲಗೆ ಹಾಡಲು ಶುರು ಮಾಡಿದಳು.
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ? ಅನ್ನೋ ಸಾಲನ್ನು ಬೇಕು ಅಂತಲೇ ನನ್ನ ಕಿವಿ ಬಳಿ ಬಂದು ಜೋರಾಗಿ ಹೇಳುತ್ತಿದ್ದಳು.
ಶಾಂತಲ ಸಿಗ್ನಲ್ ಹತ್ತಿರ ಕೈನಿ ನಿಲ್ಲಿಸಿದೆ. ಆದರೆ ಅವಳು ಬ್ಯಾಗ್ ಕೊಡಲು ಒಪ್ಪಲ್ಲಿಲ್ಲ. ತಾನೇ ಗಾಡಿ ಡ್ರೈವ್ ಮಾಡುತ್ತಾ ಮೆಜೆಸ್ಟಿಕ್ ಒಳಗೆ ಬಂದಳು. ಗಾಡಿ ಪಾರ್ಕ್ ಮಾಡಿ, ನಂದಿನಿ ಹಾಲಿನ ಬೂತಲ್ಲಿ ಎರಡು ಫ್ಲೇವರ್ಡ್ ಮಿಲ್ಕ್ ಕೊಂಡು ನನ್ನ ಕೈ ಹಿಡಿದು ಪ್ಲಾಟ್ ಫಾರ್ಮ್ ತನಕ ಜೊತೆ ಬಂದಳು. ೯:೨೦ ಆಯ್ತು ನೀನ್ ಹೋಗು, ಮನೆ ಸೇರಿದಮೇಲೆ ಮೆಸೇಜ್ ಮಾಡು ಅಂದ್ರೆ, ನನ್ನ ಬಸ್ ಹೊರಡುವ ತನಕವೂ ಅಲ್ಲೇ ನಿಂತಿದ್ದು, ಬಸ್ ನಂಬರ್ ನೋಟ್ ಮಾಡಿಕೊಂಡು, ಇವತ್ತು ಕಾಲೇ ಮಾಡ್ತೀನಿ, ನಿನ್ ಜೊತೆ ಮಾತಡ್ ಬೇಕು ಅಂತ ಹೇಳಿ ಮುಖ ಚಿಕ್ಕದು ಮಾಡಿಕೊಂಡು ಹೊರಟಳು.

ಟಿಕೆಟ್ ಪಡೆದು ನಿಟ್ಟುಸಿರು ಬಿಡುತ್ತಾ ಕೂತಿದ್ದೆ. ಬಸ್ ಇನ್ನೂ ರಾಜಾಜಿ ನಗರದ ಎಂಟ್ರೆನ್ಸನ ಸಿಗ್ನಲ್ನಲಿ ನಿಂತಿತ್ತು. ಆಗಲೇ ಸಂಯುಕ್ತ ಕಾಲ್ ಮಾಡಿ ನಾನು ಸೇಫಾಗಿ ಮನೆ ಸೇರಿದೆ ನೀನ್ ಎಲ್ಲಿದ್ಯಾ? ಅಂದಳು. ಗುಡ್, ಥ್ಯಾಂಕ್ಸ್ ಸಂಯುಕ್ತ. ನನ್ನದೊಂದು ರಿಕ್ವೆಸ್ಟ್.. ನಾನು ಈಗ ನಿನ್ ಜೊತೆ ಮಾತಾಡೋ ಮನಸ್ಥಿತಿಲಿ ಇಲ್ಲ. ಪ್ಲೀಸ್ ಬೇಜಾರ್ ಮಾಡ್ಕೊಬೇಡ. ನಾಳೆ ಮಾತಾಡೋಣ ಅಂದೆ. ಅಯ್ಯೋ ಹುಚ್ಚ ಬಸ್ಸಲ್ಲಿ ನಿಂಗೆ ಬೇಜಾರ್ ಆಗತ್ತೆ ಅಂತ ಫೋನ್ ಮಾಡ್ತೀನಿ ಮಾತಾಡೋಣ ಅಂದೆ ಅಷ್ಟೇ. ಈಗ ನಾನು ನಿನ್ ಹತ್ರ ಮಾತಾಡೋ ಅಂತ ವಿಚಾರ ಏನೂ ಇಲ್ಲ. ಆರಾಮಾಗಿ ಹೋಗು. ಊರಿಗೆ ಸೇರಿದ ಮೇಲೆ ಮೆಸೇಜ್ ಮಾಡು. ಕಾಲ್ ಮಾಡಿ ನನ್ನ ಎಬ್ಸುದ್ರೆ ಊರಿಗ್ ಬಂದ ಮೇಲೆ ಜಾಡ್ಸಿ ಒದಿತೀನಿ ಅಂತ ಕಿಲ ಕಿಲ ನಕ್ಕು ಟೇಕ್ ಕೇರ್ ಅಂದಳು. ನಾನೂ ಗುಡ್ ನೈಟ್ ಟೇಕ್ ಕೇರ್ ಅಂದು ಕಾಲ್ ಕಟ್ ಮಾಡಿದೆ. ಬಸ್ ವೇಗವಾಗಿ ಚಲಿಸುತ್ತಿತ್ತು ಸೀಟಿಗೆ ತಲೆಯನ್ನು ಒರಗಿಸಿ ಕೂತೆ. ಕಣ್ಣು ಮುಚ್ಚುತ್ತಿದ್ದಂತೆ ಮನಃಪಟಲದಿಂದ ಸಂಯುಕ್ತ ಸರಿದು ಹೋದಳು.

ಕಿಟಕಿಯಿಂದ ಬರುತ್ತಿದ್ದ ತಂಪಾದ ಗಾಳಿಗೆ ಶರ್ಟಿನ ಕಾಲರ್ ಪಟ ಪಟ ಅಂತ ಹೊಡೆದುಕೊಳ್ಳುತ್ತಿತ್ತು. ನನ್ನ-ಅಮಲಳ ಸಂಬಂಧವನ್ನು ವಿಮಲ ಅಪಾರ್ಥ ಮಾಡಿಕೊಂಡಿದ್ದಾಳ? ನಾವು ಜೊತೆಯಾಗಿರುವವರೆಗೂ ನಮ್ಮಿಬ್ಬರಲ್ಲಿ ಕೇವಲ ಆಕರ್ಷಣೆ ಇತ್ತೇ ಹೊರತು ಪ್ರೀತಿಯ ಸುಳಿವೂ ಕೂಡ ಇರಲ್ಲಿಲ್ಲ. ನಾವು ಯಾವತ್ತಿಗೂ ಒಬ್ಬರಿಗೊಬ್ಬರು ಐ ಲವ್ ಯು ಅಂತ ಹೇಳಿಕೊಂಡಿರಲ್ಲಿಲ್ಲ. ನಾನು-ಅಮಲ ಕೇವಲ ಗೆಳೆಯರು ಅಷ್ಟೇ ಅನ್ನೋ ಸತ್ಯ ವಿಮಲಳಿಗೆ ಮನವರಕೆಯಾಗಬೇಕು ಹಾಗೂ ವಿಮಲ ಅದನ್ನು ಒಪ್ಪಬೇಕು. ಹಾಗಾದರೆ ಮಾತ್ರ ವಿಮಲ ನನ್ನ ಬಾಳ ಸಂಗಾತಿಯಾಗಿ ಬರಲು ಸಾಧ್ಯ. ಮನದಲ್ಲಿ ಏನೋ ಲೆಕ್ಕಾಚಾರ ಮಾಡಿ ಕಣ್ಣು ಮುಚ್ಚಿದೆ. ಬಸ್ಸು ದಾಸರಹಳ್ಳಿ ದಾಟಿ ನೆಲಮಂಗಲದ ಕಡೆ ಓಡುತ್ತಿತ್ತು.
ಆದರೆ ಮನಸ್ಸು ಸುಮಾರು ವರ್ಷಗಳ ಹಿಂದೆ ನಡೆದ ನನ್ನ-ಅಮಲಳ ನೆನಪುಗಳನ್ನು ಮೆಲಕು ಹಾಕುತ್ತಿತ್ತು.

Wednesday, April 4, 2012

ಅವಳ ಕಾಲ್ ಬರುತ್ತಾ?? - ಭಾಗ ೬


ಬಸ್ ಸ್ಟ್ಯಾಂಡಿನ ರೋಡಿನಲಿ ಮಹಾ ತಿಮಿರ. ಸ್ಟ್ರೀಟ್ ಲೈಟ್ ಗಳು ಆರಿದ್ದವು. ರೋಡು ತೀರಾ ಡೌನ್ ಇದ್ದದ್ದರಿಂದ ಬೈಕ್ ನ ಏಕ್ಸಿಲ್ಯಾರೆಟರ್ ಕಡಿಮೆ ಮಾಡಿ ಹೆಡ್ ಲೈಟ್ ನೇರ ಮಾಡಿದೆ. ಅವಳ ಮನೆ ಪಕ್ಕದ ಓಣಿಯಲಿ ಬೈಕನ್ನು ಪಾರ್ಕ್ ಮಾಡಿ ಮತ್ತೆ ಮುಖ್ಯ ರಸ್ತೆಯಲ್ಲಿ ಅವಳ ಮನೆಯತ್ತ ಹೆಜ್ಜೆ ಹಾಕಿದೆ. ನಾನಂದುಕೊಂಡದ್ದು ನಿಜವಾಗಿತ್ತು. ಮನೆಯ ಹೊರಗಡೆಯ ದೀಪ ಹಾಕಿಕೊಂಡು ಅವರು ಮೂರೂ ಜನ ಬಾಲ್ಕನಿಯಲ್ಲಿ ನಿಂತಿದ್ದುದ್ದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಅವಳು ಗ್ರಿಲ್ ಮೇಲೆ ಮೊಣಕೈ ಊರಿ ತನ್ನ ಬೊಗಸೆಯಲ್ಲಿ ಮುಖವನ್ನು ತಂಪಾದ ಗಾಳಿಗೆ ಒಡ್ಡಿ ಬಗ್ಗಿ ನಿಂತಿದ್ದಳು. ಕತ್ತಲಿನಲಿ ನಡೆಯುತ್ತಿರುವ ನನ್ನನ್ನು ಆ ನೂರಾರು ಜನ ಓಡಾಡುತ್ತಿರುವ ಬಸ್ ಸ್ಟ್ಯಾಂಡ್ ರಸ್ತೆಯಲಿ ಅವಳು ಗುರುತಿಸುವುದು ಕಷ್ಟ ಅಂತ ನಾನು ಊಹಿಸಿದ್ದು ತಪ್ಪಾಗಿತ್ತು. ಅವರ ಮನೆಗೆ ಇನ್ನೆರಡೇ ಹೆಜ್ಜೆ. ಬೀದಿ ಬೀಪ ಹತ್ತಿಬಿಟ್ಟಿತು. ತಕ್ಷಣ ನಾನು ತಲೆಯೆತ್ತಿ ಬಾಲ್ಕನಿ ಕಡೆ ನೋಡಿದೆ. ಅವಳಾಗಲೇ ಬಾಗಿಲಿನ ಕಡೆ ಹೋಗುತ್ತಿದ್ದಳು. ಅವಳಮ್ಮ ಲೇ ಎಲ್ಲೋ ಹೋಗ್ತಿದ್ಯಾ? ನಮ್ಮನೆಗೆ ಬಂದೆ ತಾನೇ? ಬಾ ಒಳಗಡೆ ಅಂತ ಮಹಡಿಯ ಕಡೆ ಕೈ ತೋರಿಸುತ್ತಾ ಹೇಳಿದರು.

ನಾನು ಮಹಡಿ ಹತ್ತಿ ಹೋದೆ. ಕಲಾ ನನ್ನನ್ನು ಒಳ ಬರ ಹೇಳಿ ಅಡುಗೆ ಮನೆ ಕಡೆ ಹೋದಳು. ಅಲ್ಲೇ ಕೂತು ಲ್ಯಾಪ್‌ಟಾಪ್ ಇಟ್ಟುಕೊಂಡು ಏನೋ ಕುಟ್ಟುತ್ತಿದ್ದ ಅವಳಪ್ಪನಿಗೆ ಎನ್ ಅಂಕಲ್, ಆರಾಮ? ಕೆಲ್ಸಾ ಜೋರು ಅನ್ಸುತ್ತೆ? ಅಂದೆ. ಹೂ ನಪ್ಪ, ನೀ ನಡಿ ಒಳಗೆ, ನಾನು ಇನ್ನೊಂದರ್ಧ ಗಂಟೆಲಿ ಬಂದ್ಬಿಡ್ತೀನಿ, ಸ್ವಲ್ಪ ಕೆಲ್ಸಾ ಇದೆ ಅಂತ ಮತ್ತೆ ಲ್ಯಾಪ್‌ಟಾಪ್ ಕುಟ್ಟಲು ಶುರು ಮಾಡಿದರು. ನಾನು ವರಾ೦ಡದೊಳಗೆ ಕಾಲಿಡುತ್ತಿದ್ದಂತೆ, ಹಾಲಿನಲ್ಲಿದ್ದ ವಿಮಲ ರೂಮು ಸೇರಿ ಬಾಗಿಲು ಮುಂದೆ ಮಾಡಿಕೊಂಡುಬಿಟ್ಟಳು. ನೀರಿನ ಲೋಟವನ್ನು ಕೊಡುತ್ತಾ ಕಲಾ ಎಲ್ಲಾರೂ ಕ್ಷೇಮಾನ? ಊರಿಗ್ ಹೋಗ್ಲೀಲ್ಲ್ವಾ? ಅಂದಳು. ಹೂ ಕಲಾ ಎಲ್ಲಾ ಆರಾಮು, ಊರಿಗ್ ಈಗ ಹೋಗ್‌ಬೇಕು ಅಮ್ಮ ಫೋನ್ ಮಾಡಿದ್ರು ಅಂದೆ.

 ಖಾಲಿ ಲೋಟವನ್ನು ಟೀಪಾಯಿ ಮೇಲಿಡುತ್ತಿದ್ದವನಿಗೆ, ಟೀಪಾಯಿಯ ಮತ್ತೊಂದು ಬದಿಯಲ್ಲಿದ್ದ ೨ ಮೊಬೈಲ್ ಫೋನ್ ಕಾಣಿಸಿತು. ಒಂದು ಸ್ಯಾಂಸಂಗ್ ಕಾರ್ಬೀ... ವಿಮಲಳದು. ಮತ್ತೊಂದು  ನೋಕಿಯಾ ೧೧೦೦ ಹಳೇ ಮೊಬೈಲ್. ನಾನು ಆ ಮೊಬೈಲ್ ನೇ ನೋಡುತ್ತಿರುವುದನ್ನು ಗಮನಿಸಿದ ಕಲಾ, ನೋಡೋ ಅದೆಲ್ಲೋ ಬಿದ್ದಿದ್ದ ಮೊಬೈಲ್ ನ ೨-೩ ದಿನದಿಂದ ಹುಡುಕಿ ತೆಗ್ದಿಟ್ಟಿದ್ದಾಳೆ ಅಂದ್ಲು. ನಾನು ಓಹ್ ಹೌದಾ? ಯಾಕಂತೆ?. ಅಯ್ಯೋ ನಂಗೂ ಗೊತ್ತಿಲ್ಲಪ್ಪ, ನಿನ್ನೆ ಮತ್ ಇವತ್ತು ಬೆಳಗ್ಗೆ ಎಲ್ಲ ಅದೇನೋ ಸಿಮ್ ಆಕ್ಟಿವೇಶನ್ ಅಂತ ಬೇರೆ ಓಡಾಡ್ತಿದ್ಲು.

ಅವೆಲ್ಲವನ್ನೂ ಅವನಿಗೆ ಯಾಕ್ ಹೇಳ್ತಿದ್ಯಾ? ಅಂತ ಬಾಗಿಲಿನ ಹಿಂದೆ ನಿಂತೆ ಕೈಯಲ್ಲೇ ಸಂಜ್ಞೆ ಮಾಡುತ್ತಿದ್ದ ಅವಳನ್ನ ನಾನು ನೋಡಿಬಿಟ್ಟೆ. ನನಗೆ ಖಾತ್ರಿಯಾಗಿಹೋಯಿತು. ಆ ಹಳೇ ಬಿ ಎಸ್ ಎನ್ ಎಲ್ ಸಿಮ್ ನ ಆಕ್ಟೀವೇಟ್ ಮಾಡಿಸಿ ನನಗೆ ಕಾಲ್ ಮಾಡಿ ಸ್ವಿಚ್ ಆಫ್ ಮಾಡಿಟ್ಟಿದ್ದಾಳೆ. ಇಷ್ಟು ಸುಲಭವಾಗಿ ಅದು ಖಾತ್ರಿಯಾಗುತ್ತೆ ಅಂತ ನಾ ಕನ್ಸಲ್ಲು ಅಂದ್ಕೊಂಡಿರ್ಲ್ಲಿಲ್ಲ. ಕಲಾಳಿಗೆ ಏನು ಅರ್ಥವಾಯಿತೋ ಗೊತ್ತಿಲ್ಲ, ನನ್ನ ಕಡೆ ತಿರುಗಿ ನಗುತ್ತಾ, ಯೆ ವಿಮೂ, ಬಾರೆ ಆಚೆ, ಏನೇ ಮಾಡ್ತೀದ್ಯಾ? ಅದೇನ್ ಹುಡ್ಗೀರೋ ಸದಾ ಬಾಗ್ಲಾಕೊಂಡು ಆ ರೂಮಲ್ಲಿ ಏನು ಮಾಡ್ತೀರೋ? ಅಂತ ಅವಳನ್ನು ಆಚೆ ಕರೆದಳು.
ನಾ ಏನೋ ಮಾಡ್ತಾ ಇದೀನಿ, ಆಮೇಲ್ ಬರ್ತೀನಿ ಅಂತ ಶಾಂತವಾಗೇ ವಿಮು ಹೇಳುದ್ರೆ, ಕಲಾ ನನ್ನತ್ತ ತಿರುಗಿ ಇನ್ನೆನ್ ಕೆಲ್ಸಾ, ಉಗುರಿಗೆ ಬಣ್ಣ ಬಳ್ಕೊನ್ಡೊ, ಕೈಗೆ ಗೊರಂಟೀ ಹಾಕೊಂಡು ಕೂತಿರ್ತಾಳೆ, ಮತ್ತೇನೋ ಸಮಾಚಾರ ಅಂದಳು.

ಆಗಲೇ ಈ ಸಣ್ಣ ಕವನ ಬರೆದದ್ದು -

ನಿನ್ನನ್ನು ನೋಡಲೆಂದೇ ನಾನು ಬಂದೆ
ನಿಮ್ಮ ಮನೆ ಮುಂದೆ
ನೀ ನಿಲ್ಲಲೇ ಇಲ್ಲ ಬಾಲ್ಕನಿ ಮುಂದೆ
ನಾ ಬಿಡದೆ, ನಿಮ್ಮನೆಯೊಳಗೆ ಬಂದೆ
ನೀ ಅಡಗಿದೆ ರೂಮು ಬಾಗಿಲಿನ ಹಿಂದೆ
ಕೂಗಿ ಕರೆದರು ಬರಲ್ಲಿಲ್ಲ ನನ್ನ ಮುಂದೆ
ಬಿಜ಼ಿ ಎಂದು ನಾಟಕ ಮಾಡಿದೆ ನೀ ಬೇಕೆಂದೆ

ಸಮಾಚಾರ ಏನೂ ಇಲ್ಲ ಕಣೇ. ಇಲ್ಲೇ ಕೆನರಾ ಬ್ಯಾಂಕ್ ಎ ಟಿ ಎಂ ಗೆ ಬಂದಿದ್ದೆ. ಹಾಗೆ ನಿಮ್ ಮನೆಗೆ ಬಂದೆ ಅಷ್ಟೇ. ನಾನು ಹೊರಡುತ್ತೀನಿ. ಊರಿಗೆ ಹೋಗಬೇಕು ಅಂದೆ. ಕುಕ್ಕರ್ ಕೂಲ್ ಆಗ್ತಿದೆ, ಊಟ ಮಾಡಿ ಹೊರಡು ಅನ್ನುತ್ತಿದ್ರೆ ನಾ ಇಲ್ಲಮ್ಮ ಲೇಟ್ ಆಗ್ಬಿಡತ್ತೆ ನಾ ಹೊರ್ಟೆ ಅಂತ ಸೊಫಾಯಿಂದ ಮೇಲೆದ್ದೆ. ಒಂದು ನಿಮಿಷ ಇರೋ, ಮೈಸೂರ್ ಪಾಕ್ ಕೊಡ್ತೀನಿ, ಕೂತಿರು ಅಂದು ಈಸೀ ಚೈರಿಂದ ಎದ್ದಳು. ನಾನು ಅಮೂ ಹೇಗಿದಾಳೆ? ಫೋನ್ ಮಾಡಿದ್ಲಾ? ಅಂತ ಕೇಳುತ್ತಿದ್ದಂತೆ ಲ್ಯಾಂಡ್ ಲೈನ್ ರಿಂಗ್ ಆಯಿತು. ಅಡುಗೆ ಮನೆ ಕಡೆ ಹೊರಟಿದ್ದ ಕಲಾ, ನೋಡೋ ಅಮೂನೆ ಅನ್ಸತ್ತೆ ಮಾತಾಡ್ತಿರು ನಾ ಈಗ ಬಂದೆ ಅಂತ ಒಳಹೋದಳು.

ಫೋನೆತ್ತಿ ಹಲೋ ಅಂದೆ ಅಷ್ಟೇ. ಆ ಕಡೆ ಧ್ವನಿ ಹೇ ಕೇಶಿ, ನೀನ್ ರಿಸೀವ್ ಮಾಡ್‌ತ್ಯ ಅಂತ ಎಕ್ಸ್‌ಪೆಕ್ಟ್ ಮಾಡಿರ್ಲ್ಲಿಲ್ಲ. ಹೇಗಿದ್ಯೋ? ತುಂಬಾ ದಿನ ಆಯ್ತು ನಿನ್ ಜೊತೆ ಮಾತಾಡಿ. ಮೂರು ತಿಂಗಳ ಹಿಂದೆ ಡಾರ್ಟ್ ಫೋರ್ಡ್ ನ ಯಾವುದೋ ಮೂಲೆಯಲ್ಲಿದ್ದ ಒಂದು ಪೆಟ್ರೋಲ್ ಬಂಕಿಂದ ನಿಂಗೆ ಕಾಲ್ ಮಾಡಿದ್ದೆ. ಅವತ್ತು ರೋಡ್ ಮಿಸ್ ಆಗಿ ಡಾರ್ಟ್ ಫೋರ್ಡ್ ನ ಯಾವುದೋ ಮೂಲೆ ತಲುಪಿಬಿಟ್ಟಿದ್ದೆ. ಅಜಯ್ ಗೆ ಕಾಲ್ ಮಾಡೋಣ ಅಂದ್ರೆ ಮೊಬೈಲ್ ಮನೆಯಲ್ಲೇ ಮರೆತು ಬಂದಿದ್ದೆ. ನಿನ್ನದೊಂದು ನಂಬರ್ ಬಿಟ್ಟು ಇವತ್ತಿನವರೆಗೂ ನನಗೆ ಬೇರೆ ಯಾರ ನಂಬರ್ರು ತಲೆಯಲ್ಲಿ ಉಳಿದಿಲ್ಲ. ಅಲ್ಲೇ ಇದ್ದ ಪೆಟ್ರೋಲ್ ಬಂಕಿಗೆ ಬಂದು ನಿನಗೆ ಡೈಯಲ್ ಮಾಡಿ ಅಜಯ್ ನಂಬರ್ ಇಸ್ಕೊಂಡಿದ್ದೆ. ಜ್ಞಾಪಕ ಇದೆಯಾ? ಅಂತ ಬಡಬಡನೆ ಒಂದೇ ಉಸಿರಿಗೆ ಹೇಳಿದಳು. ಹೌದು, ಜ್ಞಾಪಕ ಇದೆ. ನಾ ಸೂಪರ್, ನೀ ಹೇಗಿದ್ಯಾ? ಅಜಯ್ ಹೇಗಿದಾನೆ? ಅಂದೆ. ನಾವು ಫೈನ್ ಒಂದು ಗುಡ್ ನ್ಯೂಸ್. Ajay got promotion & we are coming back to India in 3 months ಅಂದ್ಲು. ನಾನು ವಾಹ್ ಸೂಪರ್, congrats ಹೇಳು ಅಜಯ್ ಗೆ ಅಂದೆ. ಮನೇಲಿ ಯಾರು ಇಲ್ವೇನೋ? ಎಲ್ಲಾ ಏನ್ ಮಾಡ್ತೀದಾರೆ? ಅಮ್ಮನಿಗೆ ಕೊಡು ಅಂದ್ಲು. ಎಲ್ಲರೂ ಮನೇಲೆ ಇದಾರೆ, ನಿಮ್ಮಪ್ಪ ಬಾಲ್ಕನಿಲಿ, ನಿನ್ ತಂಗಿ ರೂಮಲ್ಲಿ ನಿಮ್ ಅಮ್ಮ...ಬಂದ್ಲು ಕೊಡ್ತೀನಿ ಬೈ, ಟೇಕ್ ಕೇರ್ ಅಂತ ಹೇಳಿ ಕಲಾಗೆ ರಿಸೀವರ್ ಕೊಟ್ಟು, ಅವಳ ಕೈಲಿದ್ದ ಮೈಸೂರ್ ಪಾಕ್ ಬಾಕ್ಸ್ ಇಸ್ಕೊಂಡು, ಸರಿ ನಾ ಬರ್ತೀನಿ ಅಂತ ಹೊರಟೆ. ಕಲಾ ತಲೆಯಾಡಿಸುತ್ತಾ ಟಾಟಾ ಮಾಡಿದಳು.

ಸಮಯ ೮:೧೫ ಆಗಿತ್ತು. ಮನೆಗೆ ಬಂದವನೇ ಕೆಂಚಿಗೆ ಕಾಲ್ ಮಾಡಿದೆ. ಏನೋ ಇಷ್ಟೋತ್ತಾದ್ರೂ ಹೋರ್ಟಿಲ್ವಾ? ಹಾಗಿದ್ರೆ ನಾವ್ಯಾರೂ ಊಟಕ್ ಕಾಯಲ್ಲ. ಮತ್ತೆ ಹುಡುಗಿ ಮಾತ್ರ ತುಂಬಾ ಲಕ್ಷಣವಾಗಿದಾಳೆ ನಿಂಗೆ ಹೇಳಿ ಮಾಡಿಸಿದ ಜೋಡಿ ಅಂದ್ಲು. ನಾ ಬೆಚ್ಚಿ ಬಿದ್ದೆ, ಯಾವ ಹುಡುಗಿ? ಏನ್ ವಿಷ್ಯ? ಅಂದೆ. ಯಾಕೋ ಅಮ್ಮ ಏನು ಹೇಳಿಲ್ವಾ? ನಾಳೆ ಹುಡುಗಿ ಮನೆ ಕಡೆಯವರು ಬರ್ತಿದಾರೆ. ಅದಕ್ಕೆ ನಿಂಗೆ ಊರಿಗ್ ಬಾ ಅಂತ ಫೋನ್ ಮಾಡಿದ್ದು. ಬರ್ತಾ ಮೊನ್ನೆ ದೀಪಾವಳಿಗೆ ತೊಗೊಂಡ ಹೊಸ ಬಟ್ಟೆ ನ ಬ್ಯಾಗ್ಲಿ ಇಟ್ಕೊಳೋದು ಮರೀಬೇಡ, ಇಡ್ಲಾ ಅಂತ ಕಟ್ ಮಾಡಿದಳು.

ಓ ಮೈ ಗಾಡ್.. ಏನ್ ಆಗ್ತಿದೆ ನನ್ ಲೈಫಲಿ? ಶೂ ಕೂಡ ಬಿಚ್ಚದೆ ಬಾಗಿಲಿಗೇ ಚೇರ್ ಎಳೆದುಕೊಂಡು ಮೊಬೈಲ್ ತಿರುಗಿಸುತ್ತಾ ಉಸ್ಸಪ್ಪ ಅಂತ ಕೂತೆ. ಮೊಬೈಲ್ ವೈಬ್ರೇಟಾಯಿತು. ವನ್ ಮೆಸೇಜ್ ರಿಸೀವ್ಡ್ - ವಿಮು. ರೀಡ್ ಬಟನ್ ಅಮುಕಿದವನಿಗೆ ಅಚ್ಚರಿ ಕಾದಿತ್ತು. Get lost ಅಂತ ಓದಿ ನಗು ತಡೆಯಲಾಗಲ್ಲಿಲ್ಲ. ಏಳು ವರ್ಷಗಳ ಕೆಳಗೆ ನಾನು-ಅಮು ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದೆವಾ?? ನನ್ನನ್ನು ಅಮಲಳನ್ನು ಸೇರಿಸಿ ಬೇರಾರಿಗೂ ಅಂತ ಅನುಮಾನ  ಇರಲ್ಲಿಲ್ಲ.
ಆದರೆ ಒಬ್ಬ ವಿಮಲಳ ಹೊರತಾಗಿ!

Tuesday, April 3, 2012

ಅವಳ ಕಾಲ್ ಬರುತ್ತಾ?? - ಭಾಗ ೫

ರಾಮಾಂಜನೇಯನ ಗುಡ್ಡ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದುರೇ ಇರುವ ಒಂದು ಗುಡ್ಡ. ೪೦-೫೦ ಮೆಟ್ಟಿಲುಗಳನ್ನು ಹತ್ತಿದರೆ ಅದೊಂದು ಸುಂದರವಾದ ಪ್ರಕೃತಿಯ ತಾಣ. ಸುಮಾರು ೮ ಅಡಿ ಎತ್ತರದ ಆಂಜನೇಯನ ಕಲ್ಲಿನ ಮೂರ್ತಿ ಅಲ್ಲಿನ ವಿಶೇಷ. ಸಂಜೆಯಾಯಿತೆಂದರೆ ಅಲ್ಲಿಗೆ ಈಗ ಹುಟ್ಟಿದ ಮಗುವಿನಿಂದ ಹಿಡಿದು ಈಗಲೋ ಆಗಲೋ ಎನ್ನುತ್ತಿರುವ ಮುದುಕರ ತನಕ ಎಲ್ಲರೂ ಜಮಾಯಿಸಿ ಬಿಟ್ಟಿರುತ್ತಾರೆ. ವಾಕಿಂಗ್ ಮಾಡುವವರು, ಹರಟೆ ಹೊಡೆಯುವವರು, ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿ ಕುಳಿತಿರುವ ಪ್ರೇಮಿಗಳು, ಕೈ ಕೈ ಹಿಡಿದು ಒಬ್ಬರಿಗೆ ಇನ್ನೊಬ್ಬರು ಆಸರೆಯಾಗಿ ನಡೆಯುತ್ತಿರುವ ಅಜ್ಜ-ಅಜ್ಜಿ, ಪುಟ್ಟ ಮಗುವನ್ನು ಅನತಿ ದೂರದಲ್ಲಿ ನಿಂತು ಬಾ ಬಾ ಅಂತ ಕರೆಯುತ್ತಿರುವ ಅಮ್ಮ, ಹುಡುಗೀರನ್ನು ನೋಡಲೆಂದೇ ಬಂದ ಪಡ್ಡೆ ಹುಡುಗರು, ಪ್ರೀತಿಯಲ್ಲಿ ಸೋತ NJಗಳು... ಹೀಗೆ ಎಲ್ಲಾ ತರಹದ ಜನರೂ ಅಲ್ಲಿ ಕಾಣ ಸಿಗುತ್ತಾರೆ.

ಗುಡ್ಡ ಸಾಕಷ್ಟು ಬದಲಾಗಿಬಿಟ್ಟಿದೆ. ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಆ ಬದಲಾವಣೆಗಳನ್ನು ಗಮನಿಸಲೂ ಅವಕಾಶ ಮಾಡಿಕೊಡದೆ ಮನಸ್ಸು ಆ ನಂಬರ್ನ ಬಗ್ಗೆಯೇ ಚಿಂತಿಸುತ್ತಿತ್ತು. ಮೆಟ್ಟಿಲುಗಳನ್ನು ಹತ್ತಿ ಕಾಲು ತೊಳೆದು ಆಂಜನೇಯನಿಗೊಂದು ನಮಸ್ಕಾರ ಹಾಕಿ ಹೊರಬಂದೆ. ೭ ವರ್ಷದ ಕೆಳಗೆ ನಾನೊಬ್ಬನೇ ಬರುವ ಮೊದಲು ಆ ಕಲ್ಲು ಬಂಡೆಯ ಮೇಲೆ ನಾನು-ಅಮಲ ಅದೆಷ್ಟು ಬಾರಿ ಕೂತಿದ್ದೆವೋ? ಅದೇ ಕಲ್ಲು ಬಂಡೆಯ ಮೇಲೆ ಆಸೀನನಾದೆ. ಜೇಬಿಗೆ ಕೈ ಹಾಕಿ ಪರ್ಸ್ ನಲ್ಲಿದ್ದ ಆ ಪುಟ್ಟ ಪುಸ್ತಕವನ್ನು ಹೊರತೆಗೆದೆ.

ನಾನು ಮೊಬೈಲ್ ಕೊಳ್ಳುವ ಮುಂಚೆ ಎಲ್ಲರ ನಂಬರ್ ಬರೆದಿಟ್ಟುಕೊಳ್ಳುತ್ತಿದ್ದ ಚಿಕ್ಕ ಡೈರಿ ಅದು. ಲೆಟರ್ K ಇರುವ ಪೇಜ್ ಗೆ ಚಕ ಚಕ ತಿರುವಿದೆ. ಹೌದು..ಅದೇ ನಂಬರ್.. ಕಲಾ - ೯೪***-***೩೪. ನನಗೆ ಕಾಲ್ ಬಂದಿದ್ದ ನಂಬರ್ರೇ. ನಾಕು ವರ್ಷದ ಕೆಳಗೆ ಅವಳಮ್ಮ ಹೊಸ ನಂಬರ್ ತೆಗೆದುಕೊಂಡಿದ್ದರು. ಅದಕ್ಕೂ ಮುಂಚೆ ಅವರು ಇದೇ ನಂಬರ್ ಉಪಯೋಗಿಸುತ್ತಿದ್ದುದು. ಯಾಕೋ ಈ ಬಿ ಎಸ್ ಎನ್ ಎಲ್ ಸಾಕಾಯಿತು ಕಣೋ, ಅದಕ್ಕೆ ಏರ್ ಟೆಲ್ ನ ಹೊಸ ನಂಬರ್ ತೆಗೆದುಕೊಂಡೆ ಅಂತ ಅವಳಮ್ಮ ನನಗೆ ಹೇಳಿದ್ದಿದ್ದು ನೆನಪಾಯಿತು. ಆಗ ನಾನು ಹೌದಾ? ಹಾಗಾದರೆ ಪ್ಲೀಸ್ ಆ ಸಿಮ್ ನನಗೆ ಕೊಟ್ಟು ಬಿಡಿ ಅಂತ ಕೇಳಿದಾಗ, ಅವಳೇ ತಾನೇ, ಬೇಡಮ್ಮ ಈ ನಂಬರ್ ನನಗಿಷ್ಟ ಆಗಿದೆ, ನಾನೇ ಇಟ್ಕೋತೀನಿ ಅಂದಿದ್ದವಳು. ನನ್ನ ಬರ್ತ್ ಡೇ ಇರೋ ನಂಬರ್ ಅವಳಿಗೆ ಇಷ್ಟವಂತೆ. ಒಳಗೊಳಗೆ ಖುಷಿಪಟ್ಟಿದ್ದೆ ಅಂದು ನಾನು.

 ಕಾಲ್ ಬಂದಿದ್ದುದು ನನ್ನ ಮಾಸ್ಟರ್ ಸಿಮ್ ಗೆ. ಅಂದರೆ ಅದು ಆಫೀಸ್ ನಂಬರ್. ಅವಳ ಅಮ್ಮ ಅಪ್ಪ ಅಂತೂ ಆ ನಂಬರಿಗೆ ಕಾಲ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ನನ್ನ ಆ ನಂಬರ್ ಗೊತ್ತೇ ಇರಲ್ಲಿಲ್ಲ. ಇನ್ನು ಅಮಲ. ಅಮಲಳು ಮಾಡಲು ಸಾಧ್ಯವೇ ಇಲ್ಲ, ಯಾಕೆಂದರೆ ಅವಳು ಗಂಡನನ್ನು ಸೇರಲು ಲಂಡನ್ನಿಗೆ ಹೋಗಿ ವರ್ಷವಾಯಿತು ಮತ್ತು ನನ್ನ ಆಫೀಸ್ ನಂಬರ್ ಅಮಲಳಿಗೂ ಗೊತ್ತಿಲ್ಲ. ಅಂದು ಅವರ ಮನೆಯಿಂದ ಬಂದ ರಾತ್ರಿ ನನ್ನ ನಂಬರ್ ಇಟ್ಟುಕೊಂಡಿರು ಅಂತ ನಾನೇ ಅವಳಿಗೆ ಮೆಸೇಜ್ ಮಾಡಿದ್ದು ನೆನಪಾಯಿತು. ಹಾಗಾದರೆ....ಹಾಗಾದರೆ ಅವಳಲ್ಲದೇ ಬೇರಾರೂ ಕಾಲ್ ಮಾಡಿರಲು ಸಾಧ್ಯವಿಲ್ಲ. ಕಳ್ಳಿ ತನ್ನ ನಂಬರಿಂದ ಮಾಡದೇ ಅಮ್ಮನ ಹಳೆ ಸಿಮ್ ಯಿಂದ ಕಾಲ್ ಮಾಡಿದಾಳೆ.

ಹಾಗೆ ಕಾಲ್ ಮಾಡಿ ಸ್ವಿಚ್ ಆಫ್ ಮಾಡಿದಾಳೆ. ಆ ನಂಬರ್ ಸ್ವಿಚ್ ಆಫ್ ಆಗಿದ್ದರೇನು? ಅವಳ ನಂಬರ್ ಗೆ ಕಾಲ್ ಮಾಡುವ ಅಂತ vi ಅಂತ ಟೈಪಿಸಿದೆ. ಇನ್ನೇನು ಕಾಲ್ ಬಟನ್ ಒತ್ತಬೇಕು ಮಿಂಚಿನಂತೆ ತಲೆಯಲ್ಲಿ ಏನೋ ಹೊಳೆಯಿತು. ನನಗೆ ಅವಳಮ್ಮನ  ಹಳೇ ನಂಬರ್ ಜ್ಞಾಪಕದಲ್ಲಿರುವುದಿಲ್ಲ ಅಂದುಕೊಂಡು, ನನ್ನನ್ನು ಆಟವಾಡಿಸಲು ಅಥವಾ ಯಾಮಾರಿಸಲು ಆ ನಂಬರಿಂದ ಅವಳು ಕಾಲ್ ಮಾಡಿದ್ದರೇ??  ಈಗ ನಾನು ಅವಳಿಗೆ ಕಾಲ್ ಮಾಡಿಬಿಟ್ಟರೆ, ನನಗೆ ಅವಳಮ್ಮನ ಹಳೇ ನಂಬರ್ ಜ್ಞಾಪಕವಿರುವುದು ಅವಳಿಗೆ ಖಾತ್ರಿಯಾಗಿಬಿಡುತ್ತೆ. ಇನ್ನೆಂದೂ ಅವಳು ಆ ನಂಬರಿಂದ ನನಗೆ ಕಾಲ್ ಮಾಡುವುದಿಲ್ಲ. ಅಂದರೆ ಆಟ ಶುರುವಾಗುವ ಮುನ್ನವೇ ನಾನೇ ಫುಲ್ ಸ್ಟಾಪ್ ಇಟ್ಟ ಹಾಗಾಗ್ಬಿಡತ್ತೆ. ಈಗ ನಾನು ಅವಳಿಗೆ ಕಾಲ್ ಮಾಡದಿರುವುದೇ ಸರಿ ಅಂತ ತೀರ್ಮಾನಿಸಿದೆ.

ಗಂಟೆ ಸಂಜೆ ಏಳಾಗಿತ್ತು, ಶನಿವಾರ ಬೇರೆ..  ಗುಡ್ಡದಲ್ಲಿ ಜನರ ಜಾತ್ರೆ. ಇನ್ನು ಆ ಗಜಿ-ಬಿಜಿಯಲ್ಲಿ ಕೂಡುವುದು ಸಾಧ್ಯವೇ ಇಲ್ಲ ಅನಿಸಿತು. ಸರ ಸರ ಮೆಟ್ಟಿಲಿಳಿದು ಮ್ಯಾಕ್ಸ್ ೧೦೦ ಅನ್ನು ಶಿವಾಸ್ ಚಾಟ್ಸ್ ಕಡೆಗೆ ತಿರುಗಿಸಿದೆ. ಆಕಾಶ ನೋಡುತ್ತಾ ಮಸಾಲೇಪುರಿ ತಿನ್ನುತ್ತಿದ್ದವನಿಗೆ ಎದುರಿನಿಂದ ಹೆಣ್ಣು ಧ್ವನಿ ಹಾಯ್ ಎಂದಿತು. ಯಾರಪ್ಪ ಇವಳು ಎಂದು ಅನುಮಾನಿಸುತ್ತಲೇ ಹಾಯ್ ಅಂದೆ. ನಾನುರೀ ಗೊತ್ತಾಗಲ್ಲಿಲ್ಲವಾ?? ನೀವು ನಿಮ್ಮ ಫ್ರೆಂಡೂ... ಫಾಲೋ ಮಾಡಿದ್ರಲ?? ಅಂದಳು. ಅವಳೆ ಅಲ್ಲವಾ? ಸುಮಾರು ಎಂಟು ತಿಂಗಳ ಹಿಂದೆ ಗೆಳೆಯ ಅಚ್ಚಿಯ ಬಲವಂತಕ್ಕೆ ನಾನು ನನ್ನ ಬೈಕ್ ಲಿ ಅವನನ್ನ ಕೂಡಿಸಿಕೊಂಡು ಇವಳನ್ನು ಫಾಲೋ ಮಾಡ್ಕೊಂಡ್ ಹೋಗಿದ್ದಿದ್ದು. ಅವತ್ತು ಬೆಣ್ಣೆ ಗೋವಿಂದಪ್ಪನ ಛತ್ರದ ಹತ್ತಿರ ಅವಳನ್ನು ನಿಲ್ಲಿಸಿ ಅಚ್ಯುತನಿಗಿಂತ ಹೆಚ್ಚಾಗಿ ನಾನೇ ಅವಳನ್ನು ಮಾತಾಡಿಸಿದ್ದೆ. ಒಹೋ.. ಅದೇ ಮಹಾಲಕ್ಷ್ಮಿ. ಏನ್ರೀ ಆರಾಮ ಅಂದೆ. ಹೂ ರೀ.. ಏನ್ ಇತ್ತೀಚೆಗೆ ಪತ್ತೇನೆ ಇಲ್ಲ ಅಂದ್ಲು. ಹಾಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟಿದ್ದಿನೀ ಅಂತ ತಲೆ ಕೂದಲ ಮೇಲೆ ಕೈಯಾಡಿಸಿದೆ. ಹಾಗಿದ್ರೆ ನಿಮ್ ಕಥೆ ಮುಗೀತು ರೀ ಅಂದ್ಲು. ಸರಿ ಯಾವತ್ತಿದ್ರು ಮುಗ್ಯದೆ, ನಾ ಬರ್ಲಾ ಅಂತ ಗಾಡಿ ತೆಗೆದೆ.

ಸಮಯ ೭:೧೫. ಅವರ ಅಪ್ಪ ಆಫೀಸ್‌ನಿಂದ ಬಂದು ಬಾಲ್ಕನಿಯಲ್ಲಿ ಕಾಫಿ ಹೀರುತ್ತಾ ಕೂತಿಕೊಳ್ಳುವ ಸಮಯ. ಅದೇ ಹೊತ್ತಿಗೆ ಅವಳು ಅವಳಮ್ಮ ಇಬ್ಬರೂ ಕೂಡ ಹೊರಬಂದು ಸಾಮಾನ್ಯವಾಗಿ ಬಾಲ್ಕನಿಯಲ್ಲಿ ನಿಂತಿರುತ್ತಾರೆ. ಇಂದು ನನ್ನ ಅದೃಷ್ಟ ಪರೀಕ್ಷೆ ನಡೆಯಲಿ ಅಂತ ಗಾಡಿಯನ್ನ ಬಸ್ ಸ್ಟ್ಯಾಂಡ್ ಕಡೆ ತಿರುಗಿಸಿದೆ. ನಾನೊಂದು ಪತ್ತೇದಾರಿ ಕೆಲಸಕ್ಕೆ ಹೋಗುತ್ತಿರುವೆನೇ?? ಆ ಕ್ಷಣದಲ್ಲಿ ನನಗೂ ತಿಳಿದಿರಲ್ಲಿಲ್ಲ.

Monday, April 2, 2012

ಅವಳ ಕಾಲ್ ಬರುತ್ತಾ?? - ಭಾಗ ೪

ಹರನ ಹಾರನ ಆಹಾರನ ಸುತನ ಸ್ವಾಮಿಯ ಕಡುವೈರಿಯ ಅನುಜನ ಪ್ರೇಯಸಿಯು ನನಗೆ ಒಲಿದುಬಿಟ್ಟಿದ್ದಳು. (ಹರ - ಶಿವ, ಶಿವನ ಹಾರ - ಹಾವು, ಹಾವಿನ ಆಹಾರ - ಗಾಳಿ, ವಾಯು, ವಾಯುಸುತ - ಆಂಜನೇಯ, ಆಂಜನೇಯನ ಸ್ವಾಮಿ - ರಾಮ, ರಾಮನ ಕಡುವೈರಿ - ರಾವಣ, ರಾವಣನ ಅನುಜ - ಕುಂಭಕರ್ಣ, ಕುಂಭಕರ್ಣನ ಪ್ರೇಯಸಿ - ನಿದ್ರಾದೇವಿ). ಹೊಟ್ಟೆ ಚುರುಗುಟ್ಟಿದಾಗಲೇ ಎಚ್ಚರವಾದ್ದದ್ದು. ಟೈಟನ್ ಗೋಡೆ ಗಡಿಯಾರದಲ್ಲಿ ಚಿಕ್ ಮುಳ್ಳು ಐದರ ಮೇಲೂ ದೋಡ್ ಮುಳ್ಳು ೧೧-೧೨ರ ಮಧ್ಯೆ ನಿಂತಿದ್ದನ್ನು ಕಣ್ಣು ಪೂರ್ತಿ ತೆರೆಯದೇ ನೋಡಿದೆ. ಹತ್ತು ತಾಸುಗಳ ದೀರ್ಘನಿದ್ದೆ. ಹಾಗೆ ಏಳಲು ಅರ್ಧ ಎದ್ದವನು ಮತ್ತೆ ಮಲಗಿ ಬಲ ಮಗ್ಗುಲಿಗೆ ತಿರುಗಿ ಎದ್ದು ಕೂತೆ.  ಮೈ ಕೈ ಮುರಿದು ಕಣ್ಣುಜ್ಜಿಕೊಂಡು ನಿಧಾನವಾಗಿ ಕಣ್ಣು ಬಿಟ್ಟೆ.

ಟೇಬಲ್ ಮೇಲಿಟ್ಟಿದ್ದ ಅವಳ ನಗುಮೊಗದ ಫೋಟೋ ನನ್ನನ್ನೇ ನೀರೀಕ್ಷಿಸುತ್ತಿರುವಂತೆ ಗುಡ್ ಈವ್ನಿಂಗ್ ಅಂದಿತು. ಟೇಬಲ್ ಗೆ ಗಲ್ಲ ಆನಿಸಿ ನಿನ್ನ ಈ ಫೋಟೋ ನನ್ನ ಬಳಿ ಬಂದದ್ದಾದರೂ ಹೇಗೆ ನಿನಗೆ ಗೊತ್ತೇನೆ? ಅಂದೆ. ಒಬ್ಬನೇ ಮಾತಾಡಿಕೊಳ್ಳುತ್ತಿದ್ದೇನೆ, ನನಗೇನು ಹುಚ್ಚು ಹಿಡಿದಿದೆಯೇ ಅನಿಸಿತು. ತಕ್ಷಣ ಮೊಬೈಲ್  ನೆನಪಾಗಿ ದಿಂಬಿನ ಕೆಳಗಿದ್ದ ಮೊಬೈಲ್ ನ ತೆಗೆದು ನೋಡಿದೆ. ಮಾಸ್ಟರ್ ಸಿಮ್: ೭ ಮಿಸ್ಡ್ ಕಾಲ್ಸ್ ಅನ್ನೋ ಟೆಕ್ಸ್ಟ್ ಮೊಬೈಲ್ ನ ಆ ಮೂಲೆಯಿಂದ ಈ ಮೂಲೆಗೆ ಓಡುತ್ತಿತ್ತು. ಏಳರಲ್ಲಿ ಒಂದಾದರೂ ಅವಳದಾ??

ಮಿಸ್ಡ್ ಕಾಲ್ಸ್ ಲಿಸ್ಟ್ ಓಪನ್ ಮಾಡಿದೆ. ೩ ಕಾಲ್ಸ್ ಅಮ್ಮ ಮಾಡಿದ್ದಳು. ೨:೦೦PM ೨:೦೫PM ೪:೩೦PM. ಅಮ್ಮ ಕಾಲ್ ಮಾಡಿದಾಗ ನಾನು ರಿಸೀವ್ ಮಾಡದ್ದಿದ್ದರೆ ನಾನೇ ಫೋನ್ ಮಾಡುವರೆಗೂ ಮತ್ತೊಮ್ಮೆ ಮಾಡುವುದಿಲ್ಲ. ಮಗ ಏನೋ ಕಡಿದು ಕಟ್ಟೆ ಹಾಕುತ್ತಿದ್ದಾನೆಂದೆ ಅಮ್ಮನ ನಂಬಿಕೆ. ತಕ್ಕ ಮಟ್ಟಿಗೆ ಅದು ನಿಜವಾದರೂ ಸದಾ ನಾನೇನು ಅಮ್ಮ ಎಣಿಸಿದಷ್ಟು ಬ್ಯುಸಿ ಇರುವುದಿಲ್ಲ.  ಅಂತದರಲ್ಲಿ ಇಂದು ಅಮ್ಮ ೩ ಬಾರಿ ಮಾಡಿದ್ದಾಳೆ ಅಂದರೆ?ತಕ್ಷಣ ಅಮ್ಮನಿಗೆ ಕಾಲ್ ಮಾಡಿದೆ. ರಾಘವೇಂದ್ರ ಗುರು ರಾಜರ ಸೇವಿಸಿರೋ ಸೌಖ್ಯದಿ ಜೀವಿಸಿರೋ ರಾಘವೇಂದ್ರ ಗುರು....  ರಾಯರೆ ಎಲ್ಲಾ ಕ್ಷೇಮ ತಾನೇ?

ಅಮ್ಮ ಕಾಲ್ ರಿಸೀವ್ ಮಾಡಿದಳು. ಏನಮ್ಮಾ ಸಮಾಚಾರ ಅಂದೆ. ೪ ದಿನ ಏನೋ ಕೆಲ್ಸಾ ಇದೆ, ಶನಿವಾರ ಬೆಳಗ್ಗೆನೆ ಊರಿಗೆ ಬರ್ತೀನಿ ಅಂದಿದ್ದಲೊ? ಮಧ್ಯಾನ್ಹವಾದ್ರೂ ಬರ್ಲಿಲ್ವಲ? ಊಟಕ್ಕೆ ಕಾಯ್ತಾ ಇದ್ದೆ. ಗಂಟೆ ೨ ಆದ್ರೂ ನೀನ್ ಬರ್ದೇ ಇದದ್ದು ನೋಡಿ ೨ ಸಲಿ ಕಾಲ್ ಮಾಡಿದೆ. ಯಾಕೋ ನಂಗೂ ಊಟನೆ ಸೇರ್ಲ್ಲಿಲ್ಲ. ನಿಂದು ಊಟ ಆಯ್ತಾ? ಎನ್ ಮಾಡ್ತಿದ್ದಿ? ಅಮ್ಮ ಒಂದೇ ಉಸಿರಿಗೆ ಎಲ್ಲ ಹೇಳಿಬಿಟ್ಟಳು. ನಾನು ಇಲ್ಲ ಹೂ ಅಂತ ತಡವರಿಸಿದೆ. ನಂಗೋತ್ತು ನೀನು ಊಟ ಮಾಡಿಲ್ಲ, ಹೋಗು, ಏನಾದ್ರೂ ತಿಂದು ಮತ್ತೆ ಕಾಲ್ ಮಾಡು ಅಂದ್ಲು. ೪:೩೦ಕ್ಕೆ ಯಾಕ್ ಮಾಡಿದ್ದೆ? ಅಂದೆ. ಊಟ ಮಾಡಿ ಕಾಲ್ ಮಾಡು ಹೇಳ್ತೀನಿ, ನನಗೂ ಪುರಾಣಕ್ಕೆ ಹೊತ್ತಾಯಿತು. ಹಾ ನೆನಪಿರಲಿ ಇವತ್ತು ರಾತ್ರಿ ಬಸ್ ಗೆ ಹೊರಟು ಬಾ ಅಂದು ಇಟ್ಟೆಬಿಟ್ಟಳು.  ನಾನಿಲ್ಲಿ ಊಟ ಮಾಡದೇ ಇರೋಕು ಅಲ್ಲಿ ಅಮ್ಮನಿಗೆ ಊಟ ಸೇರದೇ ಇರೋಕು?? ಈ ತಾಯಿ ಮಕ್ಕಳ ಸಂಬಂಧ ಒಂಥರ ಸಿಗ್ನಲ್ ಲೆಸ್ ಕಮ್ಯೂನಿಕೇಶನ್ ಅನಿಸಿತು. ಅಂತಹ ಸಂಬಂಧ ಭಗವಂತನೊಬ್ಬನಿಂದಲೇ ಸೃಷ್ಟಿಸಲು ಸಾಧ್ಯ.

ಮತ್ತೊಮ್ಮೆ ಮಿಸ್ಡ್ ಕಾಲ್ಸ್ ಲಿಸ್ಟ್ ತೆರೆದೆ. ೨ ಕಾಲ್ಸ್ ಊರಿಂದ ಬರಬೇಕಿದ್ದ ಗೆಳೆಯ ಮಾಡಿದ್ದ. ಹೌದಲ್ಲವಾ? ಇಷ್ಟೊತ್ತಿಗಾಗಲೇ ಅವನು ಬಂದಿರಬೇಕಿತ್ತು. ಇರಲಿ ಅವನಿಗೆ ಆಮೇಲೆ ಕಾಲ್ ಮಾಡಿದರಾಯಿತು ಅನಿಸಿ ಉಳಿದ ೨ ನಂಬರ್ ಚೆಕ್ ಮಾಡಿದೆ. ಒಂದು ನಂಬರ್ ೩ ವಾರದಿಂದ ಲೈಫ್ ಇನ್ಷೂರೆನ್ಸ್ ಮಾಡಿಸಿಕೊ ಅಂತ ದಂಬಾಲು ಬಿದ್ದಿದ್ದ ಯಾಸ್ಮೀದು. ಅವಳ ಮಧುರವಾದ ಧ್ವನಿಗೆ ಮನಸೋತು ಶನಿವಾರ ಕಾಲ್ ಮಾಡು ಎಲ್ಲಾದರೂ ಸಿಕ್ಕಿ ಮಾತಾಡೋಣ ಅಂತ ನಾನೇ ಹೇಳಿದ್ದೆ. ಆ ಇನ್ನೊಂದು ನಂಬರ್ರೇ ನನ್ನನ್ನು ಬೆಚ್ಚಿ ಬೀಳಿಸಿದ್ದು. ೯೪೮೧೦-೩೪೪೩೪. ಮತ್ತೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಹೌದು.. ಅದೇ ನಂಬರ್.
ತಕ್ಷಣ ಡೈಯಲ್ ಮಾಡಿದೆ. the mobile number u r trying to connect is currently switched off. please try again after sometime ನೀವು ಡೈಯಲ್ ಮಾಡಿದ ನಂಬರ್.......... ಪೂರ್ತಿ ಕೇಳಿಸಿಕೊಂಡೆ.

ಹಸಿವೆ ತಾಳಲಾರದೇ ಬೇಗ ಬೇಗ ಮುಖ ತೊಳೆದು ರೆಡೀ ಆಗಿ ನನ್ನ ಮ್ಯಾಕ್ಸ್೧೦೦ ಬೈಕ್ ಏರಿದೆ. ತಲೆಯಲ್ಲಿ ಹುಳ, ಆ ನಂಬರಿಂದ ಯಾರು ಕಾಲ್ ಮಾಡಿರಬಹುದು? ಬೈಕ್ ಬಂದು ನ.ರಾ ಕಾಲೋನಿಯ ಹೋಟೆಲ್ ದ್ವಾರಕ ಮುಂದೆ ನಿಂತಿತು. ಒಂದು ಪ್ಲೇಟ್ ಬಿಸಿ ಬಿಸಿ ಬೆಣ್ಣೆ ಖಾಲಿ ದೋಸೆ ತಿಂದು, ಪಕ್ಕದಲ್ಲೇ ಇದ್ದ ಹಟ್ಟಿ ಕಾಫಿಲಿ ಒಂದು ಕಾಫಿ ಹೀರಿದೆ. ಗಂಟೆ ೫:೪೫. ಗೆಳೆಯನಿಗೆ ಕಾಲ್ ಮಾಡಿದೆ. ದೇಸಿ ಗರ್ಲ್ ಆ ದೇಸಿ ಗರ್ಲ್ ಗರ್ಲ್ ..ರ್ಲ್ ರ್ಲ್....ಆ ಕಡೆ ಧ್ವನಿ, ಮಗ ಏನೋ ಕೆಲಸ ಇದ್ಯೋ, ನಾನು ಸೋಮವಾರ ಬೆಳಗ್ಗೆ ಬರ್ತೀನಿ. ರಿಸೆಪ್ಶನ್ ಲಿ ಸೌಂದರ್ಯಾ ಅವ್ನ್ ಯಾಕ್ ಬರ್ಲ್ಲಿಲ್ಲ ಅಂದ್ರೆ  ಏನೋ ಒಂದು ಓಳು ಬಿಡು ಅಂದ. ಲೊ ಅಂತ ನಾನ್ ಏನೋ ಹೇಳಲು ಹೊರಟರೆ ಅವನು ನಿಂಗ್ ಓಳ್ ಬಿಡಡು ಹೇಳ್ಕೊಡ್ಬೇಕಾ?? ಏನೋ ಒಂದ್ ಹೇಳೋ ಅಂತ ಫೊನಿಟ್ಟ. ಅಬ್ಬಾ.. ಇವತ್ತು ಇವ್ನ್ ಊರಿಗೆ ಬರ್ತಿಲ್ಲ. ಮನಸ್ಸಿಗೆ ಅರ್ಧ ನಿರಾಳವಾಯಿತು. ಅವನಿಗೆ ಹೆದರೆ ತಾನೇ ನಿದ್ದೆ ಮಾಡಿದ್ದು, ಮನಸ್ಸಲ್ಲೇ ಅವನಿಗೊಂದು ಥ್ಯಾಂಕ್ಸ್ ಅಂದೆ.

ಬೈಕ್ ಮನೆ ಕಡೆ ತಿರುಗಿಸಿದೆ. ಬರುವಾಗ ದಾರಿಯಲಿ ಒಂದು ಚಿಕ್ಕ ಬೊಕ್ಕೆ ತೆಗೆದುಕೊಂಡೆ. ಗೇಟ್ ಆಚೆಯೇ ಬೈಕ್ ನಿಲ್ಲಿಸಿದೆ. ನಾನು ಗೇಟ್ ಸರಿಸಿ ಮನೆ ಕಡೆ ನಡೆದಂತೆ ಸಂಯುಕ್ತ ಗೊತ್ತಾಗದಂತೆ ನನ್ನ ಹಿಂಬಾಲಿಸಿದಳು. ಮನೆ ಬೀಗ ತೆರೆದು ಲೈಟ್ ಆನ್ ಮಾಡಿದೆ. ಕೈಯಲ್ಲಿದ್ದ ಕ್ಯಾಮರಾವನ್ನು ಟೀವೀ ಪಕ್ಕ ಇಟ್ಟು ಒಂದು ಕೈಯಲ್ಲಿ ತಾನುಟ್ಟಿದ್ದ ಗಿಣಿ ಹಸಿರು ಬಣ್ಣದ ಮೈಸೂರ್ ಸಿಲ್ಕ್ ಸೀರೆಯ ಸೆರಗನ್ನು ಎತ್ತಿ ಹಿಡಿದು ಮತ್ತೊಂದು ಕೈಯನ್ನು ಸೊಂಟದ ಮೇಲೆ ಇಟ್ಟು ನನ್ನ ಕಡೆ ತಿರುಗಿ ಹೇಗೀದೀನಿ?? ಅಂತ ಹುಬ್ಬೇರಿಸಿದಳು. ನೋಡುವುದಕ್ಕೆ ಒಳ್ಳೇ ಅಪ್ಸರೆ ತರ ಕಾಣ್ತಿದ್ಲು. ಇಂಥ ಚೆಂದ ಹುಡುಗಿ ನನ್ ಹಿಂದೆ ಬಿದ್ದಿದ್ರೂನೂ ನಾ ಯಾಕೆ ಅವಳ ಹಿಂದೆ ಹೋಗ್ತಿದೀನಿ? ಅನಿಸಿತು.  ಕೈಯಲ್ಲಿದ್ದ ಬೊಕ್ಕೆಯನ್ನು ಟೇಬಲ್ ಮೇಲಿಡುತ್ತಾ ಲೇ ಏನೇ ಇದು ನಿನ್ನವತಾರ? ಯಾರೇ ಉಡ್ಸಿದ್ದು ನಿಂಗೆ ಸೀರೆ? ಅಂದೆ. ಕಾಲೇಜಲ್ಲಿ ಇವತ್ತು ಎತ್ನೀಕ್ ಡೇ ಇತ್ತು. ಅಮ್ಮ ಉಡ್ಸಿದ್ದು ಸೀರೆ. ಚೆನ್ನಾಗ್ ಕಾಣ್ತಿದೀನೋ ಇಲ್ವೋ ಹೇಳೋ? ಅಂತ ಬೇಡುವ ಧ್ವನಿಯಲ್ಲಿ ಕೇಳಿದಳು. ಆಹಾ ಏನ್ ಚೆನ್ನಾಗಿದ್ಯೋ ಏನೋ? ಲೈಟ್ ಕಂಬಕ್ಕೆ ಸೀರೆ ಉಡ್ಸಿದ ಹಾಗೆ ಇದೆ ನಿಂಗೇನ್ ಬೇರೆ ಕೆಲ್ಸಾ ಇಲ್ವಾ? ಹೋಗೆ ಹೋಗೆ ಅಂದು ಬೈಕ್ ಕೀ ಇಡಲು ಟೀವೀ ಕಡೆ ನಡೆದೆ. ಸಂಯುಕ್ತಾಳ ಮುಖ ಚಿಕ್ಕದಾಗಿತ್ತು, ಟೇಬಲ್ ಮೇಲಿಟ್ಟಿದ್ದ ಬೊಕ್ಕೆಯನ್ನೊಮ್ಮೆ ದುರುಗುಟ್ಟಿ, ನನ್ನನ್ನೇ ನೋಡುತ್ತಾ ಅವಳು ಬಾಗಿಲಿನ ಕಡೆ ಸಾಗಿದಳು . ತೀರಾ ಅವಳು ಬಾಗಿಲು ದಾಟುವ ಮುನ್ನ ನಾನೇ ಕರೆದು ಅಯ್ಯೋ ಹುಚ್ಚಿ ನಾನು ನಿನ್ನನ್ನು ರೇಗಿಸುತ್ತಿದ್ದೇಯಷ್ಟೇ. ನಿನಗೆ ಈ ಸೀರೆ ತುಂಬಾ ಚೆನ್ನಾಗಿ ಒಪ್ಪುತ್ತೆ. ಬಾ ಇಲ್ಲಿ ಅಂತ ಕರೆದು ಬೊಕ್ಕೆಯಿಂದ ಒಂದು ಗುಲಾಬಿಯನ್ನು ಕಿತ್ತು ದಿಸ್ ಈಸ್ ಫಾರ್ ಸ್ವೀಟ್ ಗರ್ಲ್ ಸಂಯುಕ್ತಾ ಅಂತ ಅವಳ ಕೈಗಿತ್ತೆ. ಸಂಯುಕ್ತಾಳ ಖುಷಿಗೆ ಪಾರವೇ ಇರಲ್ಲಿಲ್ಲ. ಗುಲಾಬಿಯನ್ನು ತನ್ನ ಉದ್ದ ಜಡೆಯ ಮಧ್ಯದಲ್ಲಿ ಸಿಕ್ಕಿಸಿ ಟೀವೀ ಪಕ್ಕ ಇಟ್ಟಿದ್ದ ಕ್ಯಾಮರಾ ತೆಗೆದು ನನ್ನ ಕೈಗಿಡುತ್ತಾ ಫೋಟೋ ಪೋಸ್ ಕೊಡುತ್ತಾ ನಿಂತಳು. ಸ್ಮೈಲ್ ಅಂದು ಅವಳದ್ದೊಂದು ಚೆಂದ ಫೋಟೋ ಕ್ಲಿಕ್ಕಿಸಿ ಕ್ಯಾಮರ ವಾಪಸ್ ಕೊಟ್ಟು ನಡಿ ಮನೆ ಕಡೆಗೆ ಅಂದೆ.

ಕರಿ ಬಣ್ಣದ ಪ್ಯೂಮ ಶೂಸಿನ ಲೇಸ್ ಕಟ್ಟುತ್ತಿದ್ದೆ. ಇದ್ದಕ್ಕಿದ್ದಂತೆ ಏನೋ ನೆನಪಾಗಿ ರೂಮಿಗೆ ಓಡಿದೆ. ನನ್ನ ಪರ್ಸನಲ್ ಡಾಕ್ಯುಮೆಂಟ್ಸ್ ಇಡುತ್ತಿದ್ದ ಬ್ಯಾಗನ್ನು ತೆರೆದು ಆ ಹಳೆ ಚಿಕ್ಕ ಪುಸ್ತಕಕ್ಕೆ ತಡಕಾಡಿದೆ. ಕೊನೆಗೂ ಸಿಕ್ಕಿತು. ಅದನ್ನು ಪರ್ಸಿನೊಳಗೆ ಸೇರಿಸಿ, ಮತ್ತೊಂದು ಶೂ ಏರಿಸಿ ಮನೆ ಬೀಗ ಹಾಕಿ ಬೊಕ್ಕೆಯನ್ನು ಹಿಡಿದು ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಕಡೆ ಗಾಡಿ ತಿರುಗಿಸಿದೆ. ಸೌಂದರ್ಯಾಗೆ ಬೊಕ್ಕೆ ಕೊಟ್ಟು ವಿಶ್ ಮಾಡಿ ಹೊರ ಬಂದು ನೇರವಾಗಿ ರಾಮಾಂಜನೇಯ ಗುಡ್ಡ ಹತ್ತಿದೆ. ಕಡೆಯ ಬಾರಿ ನಾನು ಅಲ್ಲಿಗೆ ಹೋದದ್ದು ೭ ವರ್ಷಗಳ ಕೆಳಗೆ. ಆಗಲೂ ಒಬ್ಬನೇ. ಈಗಲೂ ಒಬ್ಬನೇ. ಮನಸಲ್ಲಿ ಅವಳು ಆ ನಂಬರಿಂದ ಮತ್ತೆ ಕಾಲ್ ಮಾಡುವಳಾ?? ಯೋಚಿಸುತ್ತಿದ್ದೆ.