Pages

Sunday, December 9, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭


ಅದಾದ ನಂತರ ೭ ದಿನ ಅನ್ನೋನ್ ಚಾಟಿಗೆ ಬರಲ್ಲಿಲ್ಲ. ಆ ೭ ದಿನಗಳೂ ನಾನು ಗಂಟೆಗೊಂದು ಸಾಲಿ "ನೀವು  ಪ್ರಯತ್ನಿಸುತ್ತಿರುವ ದೂರವಾಣಿ ಸಂಖ್ಯೆ ಸ್ವಿಚ್ ಆಫ್ ಆಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎನ್ನುವ ರೆಕಾರ್ಡೆಡ್ ಧ್ವನಿ ಕೇಳುತ್ತಿದ್ದೆ. ಇದರ ಪರಿಣಾಮವೋ ಏನೋ ಎಂಬಂತೆ ಗೆಳೆಯರ ಹತ್ತಿರ ಮಾತಾಡುವಾಗ ಒಂದೆರಡು ಬಾರಿ ನೀವು ಅಂದು ಇವನಿಗೆ ಏನೋ ಆಗಿದೆ ಅಂತಲೂ ಅನಿಸಿಕೊಂಡೆ. ಎಲ್ಲರು ರೇಗಿಸಿದಂತೆ ನಾನು ಅವಳನ್ನು ಮಿಸ್ ಮಾಡ್ಕೊತಿದಿನ? ಅನಿಸುತ್ತಿತ್ತು. ಆದರೆ ಯಾವತ್ತೂ ನೋಡಿಲ್ಲದ ಅವಳನ್ನು ಮಿಸ್ ಮಾಡ್ಕೋತಿದೀನಿ ಅಂತ ಒಪ್ಕೊಳೋ ಮನಸ್ಸು ಬರಲ್ಲಿಲ್ಲ. ಇನ್ನೆರಡು ದಿನ ಎಲ್ಲ ಸರಿಹೋಗಿಬಿಡುತ್ತದೆ ಅವಳ್ಯಾರೋ ಗೊತ್ತಿಲ್ಲದವಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ನನಗೆ ನಾನೇ ಸಾರಿ ಸಾರಿ ಹೇಳಿಕೊಳ್ಳುತ್ತಿದ್ದೆ.

ಅವಳು ತನ್ನ ಹುಟ್ಟುಹಬ್ಬಕ್ಕೆ ಬರಬೇಕೆಂದು ವಾರ ಮುಂಚಿತವಾಗಿ ಪ್ರತಿದಿನ ಚಾಟಿನಲ್ಲಿ ಹೇಳುತ್ತಿದ್ದಳು. ಮತ್ತೆ ಪ್ರತಿ ಬಾರಿ ಕರೆ ಮಾಡಿದಾಗಲೂ ಆಹ್ವಾನ ನೀಡುತ್ತಿದ್ದಳು. ನೀನು ಬರದ್ದಿದ್ದರೆ ನಾನು ಕೇಕ್ ಕಟ್ ಮಾಡೋಲ್ಲ ಅಂದಿದ್ದಳು. ಪ್ರತಿ ಬಾರಿ ಅವಳು ಕರೆದಾಗಲೂ ನಾನು - ನಾನ್ಯಾಕೆ ನಿನ್ನ ಹುಟ್ಟುಹಬ್ಬಕ್ಕೆ ಬರಬೇಕು? ನೀನ್ಯಾರೋ ನಂಗೊತ್ತಿಲ್ಲ ... ನಾನಂತೂ ಈ ಜನ್ಮದಲ್ಲಿ ನಿನ್ನ ಫ್ರೆಂಡ್ ಆಗೋಕೆ ಸಾಧ್ಯವಿಲ್ಲ ಅಂತ ದಬಾಯಿಸುತ್ತಿದ್ದೆ. ಈಗ ಅವಳು ಹೇಳುತ್ತಿದ್ದ ಹುಟ್ಟುಹಬ್ಬದ ಭಾನುವಾರ ಬಂದಿದೆ. ಆದರೆ ಅವಳೇ ಪತ್ತೆ ಇಲ್ಲ. ಹೋಗಲಿ ಅವರ ಮನೆಗೆ ಹೋಗೋಣ ಅಂದರೆ ಅವಳ ಮನೆ ವಿಳಾಸವಾಗಲಿ, ಅವಳ ಆಫಿಸ್ ವಿಳಾಸವಾಗಲಿ ನನ್ನ ಬಳಿ ಇಲ್ಲ. ನಾನು ಕೇಳಿದ್ದರೆ ಅವಳು ಕೊಡುತ್ತಿದ್ದಳೆನೋ ? ಆದರೆ ನಾನ್ಯಾವತ್ತು ಅವಳನ್ನು ನಂಬಲೇ ಇಲ್ಲ. ಇದ್ದಿದೊಂದು ಮೊಬೈಲ್ ನಂಬರ್. ಈಗ ಅದು ಸ್ವಿಚ್ ಆಫ್ ಆಗಿದೆ.ಇನ್ನ ಅವಳಾಗೇ ನನ್ನನ್ನು ಸಂಪರ್ಕಿಸಬೇಕು. ಅಲ್ಲಿವರೆಗೂ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತೆ.

ಪ್ರತಿದಿನ ಅವಳ ಜೊತೆ ಚಾಟ್ ಮಾಡುವಾಗ  ಮಧ್ಯದಲ್ಲಿ ನಾನು ಕಾಫಿಗೆಂದು ಹೋಗುತ್ತಿದ್ದೆ. ಮರಳಿ ಬಂದಾಗ ನನಗಿಲ್ಲವಾ ಕಾಫಿ? ಅನ್ನುತ್ತಿದ್ದಳು. ಆಗೆಲ್ಲ ನಾನು ಕಾವ್ ಕಾವ್ ಹೋಗೆಲೇ ಅನ್ನುತ್ತಿದ್ದೆ. ಅದಕ್ಕವಳು ನನ್ನ ಕೆಫೆ ಕಾಫಿ ಡೇ ಗೆ ಕರ್ಕೊಂಡು ಹೋಗೋ ಅನ್ನುತ್ತಿದ್ದಳು. A lot can happen over coffee ಈಗಾಗಿರೋದೆ ಸಾಕು ಇನ್ನ ನಿನ್ನ ಅಲ್ಲಿಗ್ ಬೇರೆ ಕರ್ಕೊಂಡು ಹೋಗಬೇಕಾ? ಅದು ಅಲ್ದೆ ನನ್ನ ಮೀಟ್ ಮಾಡಕ್ಕೆ ಬರ್ದೆರೋ ನೀನು ಇನ್ನು ಕಾಫಿಗ್ ಬರ್ತ್ಯ? ಸುಮ್ನೆ ರೂಟ್ ನೋಡ್ಕೊಂಡು ರೈಟ್ ಹೇಳ್ತಾಯಿರಮ್ಮ ಅಂತ ಕಿಚಾಯಿಸುತ್ತಿದ್ದೆ. ಈಗ ಅವಳ ಜೊತೆ ಕಾಫಿ ಕುಡಿಬೇಕು ಅನಿಸುತಿದೆ ಆದರೆ ಅವಳೇ ಕಾಣೆಯಾಗಿದ್ದಾಳೆ. ಎದುರುಗಿದ್ದಾಗ ಯಾವುದನ್ನು ನಿರ್ಲಕ್ಷ್ಯ ಮಾಡುತ್ತೀವೋ ಅದೇ ನಮಗೊಂದು ದಿನ ಬಹಳ ಅವಶ್ಯಕವಾಗಿ ಬೇಕಾಗಿರತ್ತೆ. ನಾನು ಈ ಅನ್ನೋನ್ ಅನ್ನು ಈ ಪರಿ ಹಚ್ಚಿಕೊಂಡಿದ್ದೇನೆಂದು ಗೊತ್ತಿರಲ್ಲಿಲ್ಲ. ಈಗ ಗೊತ್ತಾದರೂ ಗೊತ್ತಾಗಿಸಿಕೊಳ್ಳದಿರುವುದಕ್ಕೆ ಮನಸ್ಸು ನೂರು ಕಾರಣ ಹೇಳುತ್ತಿತ್ತು.

ಹೀಗೆ ಒಮ್ಮೆ ಚಾಟ್ ಮಾಡ್ಬೇಕಾದ್ರೆ ಹೇಯ್ ನೀನ್ ಎಷ್ಟ್ ಚೆನ್ನಾಗಿದ್ಯ ಈ ಫೋಟೋದಲ್ಲಿ ಗೊತ್ತಾ?ನಾನು ನಿನ್ನ ಆಲ್ಬಮ್ಸ್ ನೋಡ್ತಾ ಇದ್ದೀನಿ ... ನಿನಿಗ್ ಗೊತ್ತಾ ನಾನ್ ನಿನ್ನೆ ನೀನ್  ಆ ಸ್ಕೈ ಬ್ಲೂ ಕಲರ್ ಶರ್ಟ್ ಹಾಕೊಂಡ್ ತೆಗುಸ್ಕೊಂಡಿರೋ  ಫೋಟೋನ ಪ್ರಿಂಟ್ ಮಾಡುಸ್ಕೊಂಡೆ. ಆಮೇಲೆ ಗೊತ್ತಿಲ್ದೆರೋರ್ ಹತ್ತಿರ ನಾನ್ ಚಾಟ್ ಮಾಡ್ತಿರೋದಕ್ಕೆ ನಾಳೆ ಏನಾದರೂ ಹೆಚ್ಚುಕಮ್ಮಿ ಆದರೆ ನನ್ ಭವಿಷ್ಯದ ಗತಿ ಏನು ಅಂತ ನೀನು ಎಷ್ಟ್ ಕೇರ್ ಮಾಡಿದ್ದಿ ? ಜ್ಞಾಪಕ ಇದೆಯಾ? ಅಂತ ಏನೇನೋ ಕೇಳಿದ್ದಳು. ಮತ್ತೊಂದು ಬಾರಿ ನಾನೀಗ ನಿನ್ನ ಫೋಟೋ ಇಟ್ಕೊಂಡಿದೀನಿ .. Potassium Iodine Double Sulphur ಅಂದ್ರೆ ಏನು ಹೇಳು ನೋಡೋಣ ಅಂದಾಗ ನಾನು ಲೇ ಬಿತ್ರಿ ನನ್ ಹತ್ರಾನೆ ಗಿಮಿಕ್ಕ, ಅದು KISS ಅಂತ ಹೇಳಿದ್ದೆ. ಅದಕ್ಕವಳು ನಾನೀಗ ಅದುನ್ನೇ ನಿನಗೆ ಮೀನ್ಸ್ ನಿನ್ನ ಫೋಟೋಗೆ ಕೊಟ್ಟೆ ಅಂದಳು. ನೀನೆಲ್ಲೋ ದೊಡ್ ಲೂಸು ಮೊದಲು ನಿಮ್ಹಾನ್ಸ್ ಗೆ ಸೇರ್ಕೊಹೋಗು. ನಂಗ್ ಯಾವಾಗ್ ತಗ್ಲಾಕೊಂಡೆ ನೀನು .. ತು ಪೀಡೆ ಅಂತ ಬೈದುಬಿಟ್ಟಿದ್ದೆ .

ಈ ಬೃಂದಾ ಆದರು ಎಲ್ಲಿ ಹಾಳಾಗಿಹೋದಳು? ಅದೊಂದು ದಿನ ಅನ್ನೋನ್ ಇವಳ ಪರಿಚಯ ಮಾಡಿಕೊಟ್ಟ ದಿನದಿಂದ ನಾನು ಅನ್ನೋನ್ನೊಂದಿಗೆ ಚಾಟಿಗೆ ಶುರು ಹಚ್ಚಿ ಐದ್ಹತ್ತು ನಿಮಿಷಕ್ಕೆ ಹಾಯ್ ಅನ್ನುತ್ತಾ ಅವಳ ಜೊತೆ ಸ್ಪರ್ಧೆಗೆ ಇಳಿದವಳಂತೆ ನನ್ನೊಂದಿಗೆ ಚಾಟ್ ಮಾಡಲು ಶುರುಮಾಡುತ್ತಿದ್ದ ಬೃಂದಾ ಎಲ್ಲಿ ಹೋದಳು? ನಾನು ಅನ್ನೋನ್ ಜೊತೆ ಮಾಡಿರುವ ಪ್ರತಿ ಸಂಭಾಷಣೆಯೂ ಬೃಂದಾಳಿಗೆ ಗೊತ್ತು. ಎಷ್ಟೋ ಬಾರಿ ನಾನು ಈ ಅನ್ನೋನ್ ಚಾಟ್ ವಿಂಡೋದಲ್ಲಿ ಟೈಪಿಸಿದ್ದನ್ನೇ ಕಾಪಿ ಮಾಡಿ ಬೃಂದಾಳ ಚಾಟ್ ವಿಂಡೋಲಿ ಪೇಸ್ಟ್ ಮಾಡಿದೀನಿ. ಬೃಂದಾಳ ಚಾಟಿನಲಿ ಮ್ಯಚುರಿಟಿ ಇರುತ್ತಿತ್ತು. ಹೇಳುವುದನ್ನು ಖಡಕ್ಕಾಗಿ ಹೇಳಿಬಿಡುತ್ತಿದ್ದಳು. ಅನ್ನೋನಿಗೆ ಕಾಲೆಳೆದಷ್ಟು ಸುಲಭವಾಗಿ ಬೃಂದಾಳಿಗೆ ರೇಗಿಸಲಾಗುತ್ತಿರಲ್ಲಿಲ್ಲ. ಎಷ್ಟೋ ದಿನ ನಾನು ಅನ್ನೋನ್ಗಿಂತ ಹೆಚ್ಚಾಗಿ ಬೃಂದಾಳ ಜೊತೇನೆ ಹೆಚ್ಚು ಚಾಟ್ ಮಾಡಿದ್ದೇನೆ. ಕೆಲವೊಂದು ಬಾರಿ  ಬೃಂದಾಳೆ - ಎಷ್ಟು ಸಾರಿನೊ ಅವಳು ನಿನಗೆ ನೋ ರಿಪ್ಲೈ ಅಂತ ಕಳಿಸೋದು.. ಬೇಜಾರ್ ಮಾಡ್ಕೊತಾಳೆ .. ಅವಳೊಂದಿಗೂ ಮಾತನಾಡು ಅಂತ ಹೇಳುತ್ತಾ ಲಾಗ್ ಆಫ್ ಆಗುತ್ತಿದ್ದಳು. ಅನ್ನೋನ್ ಕಾಲ್ ಮಾಡಿದಾಗ ಅವಳು ಮಾತಾಡಿ ಮುಗಿಸಿದ ಮೇಲೆ ಅವಳ ಹತ್ತಿರ ಮೊಬೈಲ್ ಇಸ್ಕೊಂಡು ನನ್ನ ಬಳಿ ಹರಟುತ್ತಿದ್ದ ಬೃಂದಾ ಇಂದಿಗೂ ಅವಳ ಮೊಬೈಲ್ ನಂಬರ್ ನನಗೆ ಕೊಟ್ಟಿಲ್ಲ.

ಈಗ ಇವಳೂ ಪತ್ತೆ ಇಲ್ಲ ಅಂದರೆ? ಅವರಿಬ್ಬರೂ ಮಾತಾಡಿಕೊಂಡು ನನ್ನ ಬಕ್ರ ಮಾಡಿಬಿಟ್ಟರ?  ಧ್ವನಿಯಲ್ಲಿ ಅಷ್ಟೇನೂ ವ್ಯತ್ಯಾಸವಿರದ ಅವರಿಬ್ಬರೂ ಒಬ್ಬರೆನಾ? ಇವರಿಗೆ ಆಟವಾಡಲು ನಾನೇ ಬೇಕಿತ್ತಾ? ನನ್ನ ಮಾತಿಗೆ ಮಾರುಹೊಗುತ್ತಿದ್ದ ಎಷ್ಟು ಹುಡುಗಿಯರಿಗೆ ನಾನು ಚೆಳ್ಳೆಹಣ್ಣು ತಿನ್ನಿಸಿಲ್ಲ? ಅದರ ಪ್ರತಿಫಲಾನ ಇದು? ಛೆ ಛೆ ನೋ ಚಾನ್ಸ್.. ನಾನು ಎಷ್ಟು ಎಚ್ಚರದಿಂದಿದ್ದೇನೆ ಅಷ್ಟು ಸುಲಭವಾಗಿ ಅವರು ನನ್ನನ್ನು ಮೋಸಗೊಳಿಸಲು ಸಾಧ್ಯವೇ ಇಲ್ಲ. ಎಲ್ಲೋ ಏನೋ ಎಡವಟ್ಟಾಗಿದೆ.

ಎಂಟನೆ ದಿನಕ್ಕೆ ಸರಿಯಾಗಿ ಅನ್ನೋನ್ ಲಾಗ್ ಇನ್ ಆಗಿದ್ದಳು .

No comments:

Post a Comment