Pages

Monday, December 3, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨


ತಲೆ ಆಡಿಸುತ್ತಾ ಆಡಿಸುತ್ತಾ SJR ಕಾಲೇಜ್ ಸಿಗ್ನಲ್ ಬಳಿ ಜೋರಾಗಿ ಕ್ರಮಿಸುತ್ತಿದ್ದೆ. ಹಾಗೆ ನುಗ್ಗುತ್ತಿದ್ದಾಗ ಯಾವುದೊ ಹುಡುಗಿ ಕೈ ಅಡ್ಡ ಹಿಡಿದಳು. ಆಗಲೇ ನಾನು ಎಚ್ಚರಗೊಂಡಿದ್ದು. ಗಾಡಿ ನಿಲ್ಲಿಸಿದಾಕ್ಷಣ ಏರಲು ಬಂದ ಹುಡುಗಿಯನ್ನು ತಡೆದು ಬೃಂದಾನ ನೀವು? ಅಂದೆ. ಹು ನಾನೇ ಬೃಂದಾ ನಡಿ ಈಗ ಎಂದು ತಲೆ ಚಚ್ಚಿಕೊಳ್ಳುತ್ತಾ ಹಿಂದೆ ಕೂತಳು. ಬೃಂದಾಳ  ಜೊತೆ ದಿನಗಟ್ಟಲೆ ಹರಟಿದ್ದರೂ (ಚಾಟಿನಲ್ಲೂ ಫೋನಿನಲ್ಲೂ) ನಾನು ಆಗಲೇ ಅವಳನ್ನು ಮೊದಲ ಬಾರಿ ನೋಡಿದ್ದು.

೫ ಅಡಿ ೬ ಇಂಚಿರಬಹುದಾದ ಕಾಯ. ಬಳಕುವ ಸೊಂಟ, ದೇಹಕ್ಕೆ ಒಪ್ಪುವ ತಬ್ಬು ಉಬ್ಬುಗಳು. ತೀಕ್ಷ್ಣವಾದ ನೀಲಿ ಕಣ್ಣುಗಳು. ಇಷ್ಟು ನೋಡುವಷ್ಟರಲ್ಲಿ ಅವಳು ಹಿಂದೆ ಕೂತುಬಿಟ್ಟಳು. ನೀನಾ ಈಗ ನನ್ನನ್ನು ನೀವು ಅಂದಿದ್ದು ಅಂತ ಪ್ರಶ್ನಿಸಿ ಸಿಗ್ನಲ್ ನಲ್ಲಿ ಬಲಕ್ಕೆ ತಿರುಗಿಸುವಂತೆ ಹೇಳಿದಳು. ಗಾಡಿ ಬಲಕ್ಕೆ ತಿರುಗಿಸಿ ಮೌನವಾಗಿ ಮುನ್ನಡೆಸುತ್ತಿದ್ದೆ. ಯಾಕೋ ಹುಡ್ಗ ತುಂಬಾ ಸೈಲೆಂಟ್ ಆಗ್ಬಿಟ್ಟಿರೋ ಹಾಗಿದೆ ಏನ್ ವಿಷ್ಯ ಅಂದ್ಲು ಬೃಂದಾ. ನಾನು ಏನೂ ಇಲ್ಲವೆಂಬಂತೆ ಸುಮ್ಮನೆ ತಲೆಯಾಡಿಸಿದೆ. ಏನೇ ಟ್ರಾಫಿಕ್ ಇಲ್ಲದಿದ್ದರೂ ಕೇವಲ ಹತ್ತು ನಿಮಿಷದಲ್ಲಿ ಹನುಮಂತ ನಗರದಿಂದ ರಾಜಾಜಿ ನಗರಕ್ಕೆ ಬಂದಿದ್ಯ ಅಂದ್ರೆ ಪ್ರಿಯಾಳನ್ನು ನೋಡೋ ತವಕ ನಿನಗೆಷ್ಟಿದೆ ಗೊತ್ತಾಗ್ತಿದೆ ಅಂತ ಕಿಚಾಯಿಸುತ್ತಾ ಭುಜಕ್ಕೆ ಜಿಗುಟಿದಳು.

ಸುಗುಣ ಡಯಾಗ್ನೋಷ್ಟಿಕ್ಸ್ ಬಳಿ ಬಂದೊಡನೆ ಮುಂದೆ ಬರುವ ಬಲ ತಿರುವಿನಲ್ಲಿ ಹೋಗಲು ಸೂಚಿಸಿದಳು. ಬಲ ತಿರುಗಿ ಸ್ವಲ್ಪ ಚಲಿಸಿ ಎಡ ತಿರುಗಿ ಮತ್ತೆ ಬಲ ತಿರುಗಿದಾಗ ಗಾಡಿ ವಿಶಾಲವಾದ ಬಂಗಲೆಯ ಮುಂದೆ ನಿಂತಿತ್ತು. ಬಂಗ್ಲೆಯ ಕಾಂಪೌಂಡ್ ಗೇಟಿನ ಎರಡು ಬದಿಯಲ್ಲಿ ಬಂದೂಕು ಹಿಡಿದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ನಿಂತಿದ್ದರು. ಗಾಡಿ ಇಳಿದು ಅತ್ತಿತ್ತ ನೋಡುತ್ತಿದ್ದ ನನ್ನನ್ನ ಆಗಲೇ ನಾಕಾರು ಹೆಜ್ಜೆ ಮುಂದೆ ಹೋಗಿದ್ದ ಬೃಂದಾ ತಿರುಗಿ ಬಂದು ಕೈ ಹಿಡಿದು ಬಂಗಲೆ ಕಡೆಗೆ ಎಳೆದೊಯ್ದಳು. ಬೃಂದಾಳನ್ನು ನೋಡುತ್ತಲೇ ಸಲ್ಯೂಟ್ ಹೊಡೆದ ಸೆಕ್ಯೂರಿಟಿ ಗಾರ್ಡ್ ಗಳು ನನ್ನನ್ನೇ ತಲೆಯಿಂದ ಕಾಲಿನವರೆಗೂ ದಿಟ್ಟಿಸಿ ನೋಡುತ್ತಿದ್ದರು. ಬೃಂದಾ ಅವರಿಗೆ ಏನೋ ಹೇಳಿದ ತಕ್ಷಣ ಅವರಿಬ್ಬರೂ ನನಗೂ ಸಲ್ಯೂಟ್ ಮಾಡಿದರು. ನಾನು ಅವರಿಗೆ ತಿರುಗಿ ಸಲ್ಯೂಟ್ ಮಾಡಲು ಕೈ ಎತ್ತಿದಾಕ್ಷಣ ಬೃಂದಾ ನನ್ನ ಕೈ ಹಿಡಿದು ಓಹ್  ನೀನ್ ಏನ್ ಚಿಕ್ ಮಗುನಾ ಸದಾ ಕೈ ಹಿಡ್ಕೊಂಡಿರಕ್ಕೆ ಅಂತ ಎಳೆದುಕೊಂಡು ನಡೆದಳು. ನಾನು ನನ್ನ ಕೈ ಬಿಡಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಯಿತು.

ಲಾನ್ ದಾಟಿ ಬಂಗಲೆಯ ಒಳಕ್ಕೆ ಬಂದರೂ ಯಾವ ನರಪಿಳ್ಳೆನೂ ಕಾಣಲ್ಲಿಲ್ಲ. ಬೃಂದಾಳೂ ಗಾಬರಿಗೊಂಡಂತೆ ಕಂಡುಬಂದರೂ ಅದನ್ನು ತೋರ್ಪಡಿಸದೆ ನನ್ನನ್ನು ಅಲ್ಲೇ ಸೋಫಾ ಮೇಲೆ ಕೂಡಿಸಿ ಒಳ ಹೋದಳು. ಎರಡು ನಿಮಿಷವಾದರೂ ಅವಳು ಬರದ್ದಿದ್ದನ್ನು ನೋಡಿ ನಾನು ಅವಳೋದ ದಾರಿಯಲ್ಲೇ ನಡೆದೆ. ಅಡುಗೆ ಮನೆಯ ಬಾಗಿಲಿನ ಹತ್ತಿರ ಬೃಂದಾ ನಡು ವಯಸ್ಸಿನ ಮಹಿಳೆಯೊಂದಿಗೆ ಮಾತಾಡುತ್ತಿದ್ದುದು ಕಾಣಿಸಿದರೂ ಏನು ಮಾತಾಡುತ್ತಿದ್ದರೋ  ಗೊತ್ತಾಗಲ್ಲಿಲ್ಲ. ಇನ್ನೂ ಹತ್ತಿರ ಹೋದಾಗ ಏರ್ಪೋರ್ಟ್ ಅಂತ ಹೇಳಿದ್ದು ಮಾತ್ರ ಕೇಳಿಸಿತು. ಬೃಂದಾ ಆ ಹೆಂಗಸಿಗೆ ಏನೋ ಹೇಳಿ ಅಡುಗೆ ಮನೆಯಿಂದ ಆಚೆ ಬಂದಳು. ನಡೆ ಹೋಗೋಣ ಅನ್ನುತ್ತಾ ಮಹಡಿಯ ಮೇಲಿನ ಒಂದು ಕೋಣೆ ಕಡೆ ಕೈ ತೋರಿಸುತ್ತಾ ನೋಡೋ ಅದೇ .... ಅಂತ ಏನೋ ಹೇಳಲು ಹೊರಟವಳು ಈಗ ಬೇಡ ಆಮೇಲೆ ಹೇಳ್ತೀನಿ ಇಲ್ಲ ನಿಂಗೆ ಗೊತ್ತಾಗತ್ತೆ ಬಿಡು ಎಂದಳು.
ನಡು ಮನೆಗೆ ಬಂದಾಗ ವ್ಯಾನಟಿ ಬ್ಯಾಗಿಂದ ಐದುನೂರರ ನೋಟು ತೆಗೆದು ನನ್ನ ಕೈಲಿಡುತ್ತಾ ಗಾಡಿಗೆ ಹತ್ತಿರದಲ್ಲಿ ಎಲ್ಲಿಯಾದರೂ ಪೆಟ್ರೋಲ್ ತುಂಬಿಸಿಕೊ ಈಗ ಏರ್ಪೋರ್ಟ್ ಗೆ ಹೋಗಬೇಕು ಎಂದಳು.

ನಾನು ತಟಸ್ಥನಾಗಿ ನಿನಗೇನೂ ತಲೆ ಕೆಟ್ಟಿದ್ಯ? ಅಲ್ಲಿ ತನಕ ಗಾಡಿ ಓಡಿಸಲು ಈಗ ನನ್ನಿಂದ ಸಾಧ್ಯ ಇಲ್ಲ. ಏನ್ ಅಂದ್ಕೊಡಿದ್ಯ
ನನ್ನ .... ಹೇಯ್ ಚಿಲ್ ಮ್ಯಾನ್ .. ಡೋಂಟ್ ವರಿ... ಓಡಿಸೋದಿಕ್ಕೆ ಆಗೋಲ್ಲ ಅಷ್ಟೆ ತಾನೇ? ಎಂದವಳೇ ಯಾರಿಗೋ ಡಯಲ್ ಮಾಡಿ ಸಾರಿ ಅಂಕಲ್ ಸ್ವಲ್ಪ ಲೇಟ್ ಆಯಿತು ಏನ್ ಮಾಡೋದು ಈಗ ಅಂತ ಕೇಳುತ್ತಿದ್ದಳು. ಆ ಕಡೆ ಧ್ವನಿ ಕೇಳಿಸಲ್ಲಿಲ್ಲ. ಬೃಂದಾ ಪ್ರಶ್ನಾರ್ಥಕವಾಗಿ ಮುಖಮಾಡಿ ಮ್ಯಾಟಿನ? ಅಂಕಲ್  ನೀವ್ ತೊಗೊಂಡು ಹೋಗಿಲ್ವಾ? ಅಂದಳು.
ಆ ಕಡೆ ಧ್ವನಿ ಕೇಳಿಸಿಕೊಳ್ಳಲು ಬೃಂದಾಳ ಕಿವಿಗೆ ನನ್ನ ಕಿವಿ ತಾಗಿಸಿದೆ.. ಇಲ್ಲ ನಾವು ಫಾರ್ಚಿಲಿ ಹೊರಟಿದ್ದೀವಿ. ಡ್ರೈವರ್ ರಂಗಣ್ಣನಿಗೆ ಹೇಳ್ತೀನಿ. ಇನ್ನ ಹತ್ತ್ ನಿಮಿಷಕ್ಕೆ ಅಲ್ಲಿರ್ತಾನೆ. ನೀವು ಮ್ಯಾಟಿಲೇ  ಬನ್ನಿ. ಓಕೆ ಥ್ಯಾಂಕ್ಯು ಅಂಕಲ್ ಅಂದ ಬೃಂದಾ ನನ್ನ ಕೆನ್ನೆ ಹಿಂಡುತ್ತಾ  Benz ಕಾರ್ ಏರಲು ಸಿದ್ದರಾಗಿ ಗುರುಗಳೇ ಎಂದು ಹಾಸ್ಯ ಮಾಡಿದಳು.

ಸೋಫಾ ಮೇಲೆ ಕುಳಿತು ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದೆ. ಗೋಡೆಗೆ ನೇತಾಗಿದ್ದ ಡಿಜಿಟಲ್ ಗಡಿಯಾರ ಕೆ೦ಪು ಬಣ್ಣದಲ್ಲಿ ೪:೪೦ ತೋರಿಸುತ್ತಿತ್ತು. ಎರಡು ನಿಮಿಷದಲ್ಲೇ ಘಮ ಘಮ ಪರಿಮಳ ಬೀರುತ್ತಿರುವ ಫಿಲ್ಟೆರ್ ಕಾಫಿ ಬ೦ತು. ಒ೦ದು ಗುಟುಕು ಕಾಫಿ ಹೀರುತ್ತಿದ್ದ೦ತೆ ಮನಸಿಗೆ ಆಹ್ಲಾದದ ಜೊತೆಗೆ ಹಿ೦ದೆ೦ದೊ ನನ್ನ ಮೊಬೈಲಿಗೆ ಉದ್ದ ನ೦ಬರಿನಿ೦ದ ಬ೦ದಿದ್ದ ಕರೆಯೊ೦ದರ ನೆನೆಪು ಬ೦ದ೦ತೆ ಭಾಸವಾಯಿತು. ಮಿ೦ಚು ಹುಳದ ಮಿ೦ಚಿನ೦ತೆ ಬಡಿದು ಹೊರಟೋದ ಆ ವಿಷಯವನ್ನು ಕಣ್ಣು ಮುಚ್ಚಿ ನೆನಪಿಸಿಕೊಳ್ಳವ ನನ್ನ ಶತಾಯ ಗತಾಯ ಪ್ರಯತ್ನಕ್ಕೆ ಬೃ೦ದಾ ಅಡ್ಡಿಪಡಿಸಿದಳು. ಏ ಕಣ್ಣು ಬಿಡೊ.. ಕಾಫಿ ಕಪ್ ಕೈಲಿ ಹಿಡಿದು ನಿದ್ದೆನಾ? ನೋಡಿಲ್ಲಿ ಅ೦ತ ತಲೆ ಸವರುತ್ತಾ ಎದುರಿಗೆ ನಿ೦ತಿದ್ದ ೩-೪ ಜನರ ಪರಿಚಯ ಮಾಡಿಸಿದಳು. ಅವರೆಲ್ಲಾ ಆ ಬ೦ಗಲೆಯ ಕೆಲಸದಾಳುಗಳು. ನೀವುಗಳು ಕೂಡ ಕಾಫಿ ಕುಡಿಯಿರಿ ಎ೦ದು ಹೇಳಿದೆ. ಅವರೆಲ್ಲಾ ತಲೆ ತಗ್ಗಿಸಿಕೊ೦ಡು ಒಬ್ಬಬ್ಬರೆ ಜಾಗ ಖಾಲಿ ಮಾಡಿದರು. 

ನನಗೇನೋ ವಿಚಿತ್ರವೆನಿಸಿತು. ಕಾಫಿ ಕಪ್ ಟೀಪಾಯಿ ಮೇಲಿಟ್ಟು ಎದ್ದು ನಿ೦ತೆ. ಅತ್ತ ಕಡೆ ಹೋಗುತ್ತಿದ್ದ ಅಡುಗೆ ಕೆಲಸದವಳು ಇದ್ದಕ್ಕಿದ್ದ೦ತೆ ತಿರುಗಿ ಓಡಿಬ೦ದು ನನ್ನ ಕಾಲು ಹಿಡಿದುಬಿಟ್ಟಳು. ನಾನು ಗಾಬರಿಗೊ೦ಡು ಭಯಗ್ರಸ್ತನಾಗಿ ಬಿಡಿ ಬಿಡಿ ಅ೦ತ ನನ್ನ ಕಾಲನ್ನು ಬಿಡಿಸಿಕೊ೦ಡು ಬೃ೦ದಾಳ ಹಿ೦ದೆ ಸರಿದು ಅವಳನ್ನು ಗಟ್ಟಿಯಾಗಿ ಹಿಡಿದು ನಿ೦ತುಬಿಟ್ಟೆ. ಆ ಕೆಲಸದವಳು ನನಗೆ ಏನೋ ಹೇಳಲು ಬಯಸುತ್ತಿದ್ದಳು ಆದರೆ ಆಕೆಗೆ ಮಾತು ಹೊರಡುತ್ತಿರಲ್ಲಿಲ್ಲ ಅಷ್ಟರಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಬ೦ದು ಕಾರ್ ಬ೦ದಿದೆ ಎ೦ಬ ಸ೦ದೇಶ ಕೊಟ್ಟ. ನಾನು ಆ ಕೆಲಸದವಳ ಬಲಗೈಯನ್ನು ನನ್ನ ಕೈಗಳಲ್ಲಿ ಹಿಡಿದು ತಲೆಬಾಗಿ ನಮಸ್ಕರಿಸಿದವನ೦ತೆ ಮಾಡಿದೆ. ಆಕೆ ತನ್ನ ಕೈ ಹಿ೦ದಕ್ಕೆ ಪಡೆದು ಓಡಿಬಿಟ್ಟಳು. ಬೃ೦ದಾ ನನ್ನನ್ನು ಬಾಗಿಲಿನ ಕಡೆ ತಿರುಗಿಸಿ ಎಡಗೈ ಹೆಗಲ ಮೇಲೆ ಹಾಕಿ ಬಲಗೈಯಿ೦ದ ಎದೆಯ ಮೇಲೆ ಸವರುತ್ತಾ ನಡಿ ಹೊರಡೋಣ ಎನ್ನುತ್ತಾ ಕರೆದೊಯ್ದಳು. ಹೊರಗಡೆ ಬ೦ದ ತಕ್ಷಣ ಸೆಕ್ಯುರಿಟಿ ಗಾರ್ಡ್ ಗಳು ಸೆಲ್ಯುಟ್ ಮಾಡುತ್ತಿದ್ದರೂ ನನ್ನ ಲಕ್ಷ್ಯವೆಲ್ಲ ಎದುರಿಗೆ ನಿಲ್ಲಿಸಿದ್ದ ಕಾರಿನ ಮೇಲಿತ್ತು.

ಅದು ನನ್ನ ಕನಸಿನ ಕಾರಾದ ಮೆರ್ಸಿಡಿಸ್ ಬೆಂಜ್ ನ M - ಕ್ಲಾಸ್ 4Matic SUV. ಆ ಕಾರಿಗೆ ಕನಿಷ್ಠವೆಂದರೂ ೭೦ ಲಕ್ಷ ರೂ. ಸಮೀಪ ಬರುತ್ತಿದ್ದಂತೆ ಡ್ರೈವರ್ ಕಾರಿನ ಬಾಗಿಲು ತೆಗೆದನು. ಒಳಗೆ ಕೂರುತ್ತಿದ್ದಂತೆ ಮೈಯಲ್ಲಿ ವಿದ್ಯುತ್ತಿನ ಸಂಚಾರವಾದಂತಾಯಿತು. ಇಷ್ಟು ದುಬಾರಿ ಬೆಲೆಯ ಕಾರನ್ನು ನನ್ನ ಜೀವಮಾನದಲ್ಲೇ ಕೊಳ್ಳಲು ಸಾಧ್ಯವಿಲ್ಲ ಎನಿಸಿದ ತಕ್ಷಣವೇ ಕಾಲು ಮೇಲೆ ಕಾಲು ಹಾಕಿ ರಾಜನ ಹಾಗೆ ಕೂತು ಕಾರು ನನ್ನದೇ ಏನೋ ಎಂಬಂತೆ ಬೀಗುತ್ತಿದ್ದೆ. ಬೃಂದಾ ಒಳ ಬಂದು ಮಹಾರಾಜರ ಪಕ್ಕ ರಾಣಿಗೂ ಸ್ವಲ್ಪ ಜಾಗ ಬಿಡಿ ಎನ್ನುತ್ತಾ ನನ್ನನ್ನು ಪಕ್ಕಕ್ಕೆ ತಳ್ಳಿ ಆಸೀನಳಾದಳು. ಅದು ಇದು ಲೋಕಾಭಿರಾಮ ಮಾತಿಂದ ತಿಳಿದದ್ದು ಬೃಂದಾ ಈಗ ಸುಗುಣದಲ್ಲೇ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕಾರು ಮೇಖ್ರಿ ಸರ್ಕಲ್ ಬಳಿ ಧಾವಿಸುತ್ತಿತ್ತು. ಬೃಂದಾಳ ಹೆಗಲಿಗೆ ತಲೆ ಇಟ್ಟು ಮಲಗಿದೆ. ರಂಗಣ್ಣ ಇನ್ನು ಟೈಮ್ ಇದ್ಯಲ, ಗಾಡಿ ನಿಧಾನಕ್ಕೆ ಓಡ್ಸಿ ಸಾಹೇಬರು ಮಲ್ಗಿದಾರೆ ಅಂತ ಡ್ರೈವರ್ ಗೆ ಸೂಚಿಸಿದಳು ಬೃಂದಾ. ನಿದ್ದೆ ಬರ್ತಿದ್ಯೇನೋ, ಬಾ ಇಲ್ಲಿ ಮಲಕ್ಕೋ ಎಂದು ನನ್ನ ತಲೆಯನ್ನು ಅವಳ ತೊಡೆಮೇಲೆ ಹಾಕಿ ಹಣೆಗೆ ಮೆಲ್ಲನೆ ತಟ್ಟಿದಳು. ಮನದ ಗಡಿಯಾರ ಹಿಂದಕ್ಕೆ ಓಡಿತ್ತು.
                          ***********************************************
 

No comments:

Post a Comment