Pages

Wednesday, December 12, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯


ಹಾ ಬೃಂದಾ ಹೇಳು .. ಈಗ ಅನ್ಕೊತಾ ಇದ್ದೆ ಯಾಕೋ ಇವಳು ಕರೆ ಮಾಡಲ್ಲಿಲ್ಲವೆಂದು. ನೂರ್ ವರ್ಷ ಆಯಸ್ಸು ನಿಂಗೆ. ಇಷ್ಟೇ ಮಾತಾಡಿದ್ದು ನಾನು ... ಇನ್ನು ಕೊನೆಯವರೆಗೂ ಬೃಂದಾ ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದೆಯಷ್ಟೇ. ಬಹುಶಃ ಬೃಂದಾಳ ಜೊತೆ ಫೋನಿನಲ್ಲಿ ಇಷ್ಟು ಕಡಿಮೆ ಮಾತಾಡಿದ್ದು ಇದೇ ಮೊದಲೇನೋ?


ಪ್ರಿಯಾಳ ಹುಟ್ಟುಹಬ್ಬ ಕ್ಯಾನ್ಸಲ್ ಆಯಿತು. ನೀನು ವಂಡರ್ ಲಾ ಗೆ ಬರಲ್ಲ ಅಂತ ಹೇಳಿದ್ದಕ್ಕೆ ಪ್ರಿಯ ತುಂಬಾ ಬೇಜಾರ್ ಮಾಡ್ಕೊಂಡಿದ್ದಳು. ಅವನು ಬರದ್ದಿದ್ದ ಮೇಲೆ ನಾನು ಬರೋಲ್ಲ ಅಂತ ಹಠ ಮಾಡಿ ವಂಡರ್ ಲಾ ಗೆ ಹೋಗೋದೇ ಬೇಡ ಅಂತ ಡಿಸೈಡ್ ಮಾಡಿದೆವು. ಆಮೇಲೆ ನೀ ಹೇಳಿದಂತೆ ಗಾಂಧೀ ಬಜಾರಿನ ಗೋಕುಲ್ ವೆಜ್ ರೆಸ್ಟೋರೆಂಟ್ ಅಲ್ಲೇ ಟೇಬಲ್ ಬುಕ್ ಮಾಡಿದ್ದೆವು. ಗೋಕುಲ್ ವೆಜ್ ಲಿ ಮಾಡಿದರೆ ನೀನು ಗ್ಯಾರಂಟಿ ಬರ್ತೀನಿ ಅಂತ ಹೇಳಿದ್ದಂತೆ. ಅದಕ್ಕೆ ನಿಂಗೆ ಸರ್ಪ್ರೈಸ್ ಕೊಡೋಣ, ಮುಂಚೆ ಹೇಳೋದು ಬೇಡ ಅಂತ ಪ್ರಿಯನೇ ನಂಗೆ ಹೇಳಿದ್ದಳು. ಆದರೆ ನಾವಂದುಕೊಂಡಂತೆ ಆಗಲ್ಲಿಲ್ಲ.

ನಿಂಗೆ ಗೊತ್ತಾ? ಪ್ರಿಯ ನಿನ್ನ ತುಂಬಾ ಇಷ್ಟ ಪಡ್ತಾಳೆ. ಅದುನ್ನ ಎಷ್ಟೋ ಬಾರಿ ನಿನ್ ಹತ್ರನು ಹೇಳಿದಾಳೆ ಅನ್ಕೋತೀನಿ. ನಿನ್ನ ಫ್ರೆಂಡು ಅಂತಾನು ಗುರುತಿಸದ ಅವನನ್ನು ನೀನು ಪ್ರೀತಿಸುತ್ತೀಯ? ಅಂತ ನಾವುಗಳು ಎಷ್ಟೋ ಬಾರಿ ಬುದ್ದಿ ಹೇಳಿದರೂ ನಮ್ಮ ಮಾತು ಕೇಳುತ್ತಿರಲ್ಲಿಲ್ಲ. ನೀ ಏನೋ ಮೋಡಿ ಮಾಡಿದ್ಯ ಅವಳಿಗೆ? ಎನಿಕ್ಕೆ ನಿಂಗೆ ಅವ್ನು ಅಷ್ಟೊಂದ್ ಇಷ್ಟ ಅಂತ ಕೇಳುದ್ರೆ, ನಂಗೆ ಅವನು ಮಾತಾಡೋ ರೀತಿ ಇಷ್ಟ, ಅವನ straight forwardness ಇಷ್ಟ. ನಿಮಗೆಲ್ಲರಿಗೂ ಗೊತ್ತು ನಾನೆಷ್ಟು ಬದಲಾದೆ ಅವನು ಸಿಕ್ಕ ಮೇಲೆ ಅಂತ ಇನ್ನು ಏನೇನೋ ಹೇಳ್ತಾನೆ ಇರ್ತಾಳೆ. ನಿನ್ನ ಬಗೆಗಿನ ಮಾತೆಂದರೆ ಅವಳಿಗೆಂತದೋ ಹುಮ್ಮಸ್ಸು ಬಂದುಬಿಡುತ್ತದೆ. ಮಾತಾಡಲು ಕಷ್ಟವಾದರೂ ನಿಲ್ಲಿಸೋದಿಲ್ಲ. ಪ್ಲೀಸ್ ನೀನು ಅವಳನ್ನ ಪ್ರೀತಿ ಮಾಡದಿದ್ದರೂ ಪರವಾಗಿಲ್ಲ. ಒಮ್ಮೆ ಅವಳಿಗೆ ನಾನು ನಿನ್ನ ಬೆಸ್ಟ್ ಫ್ರೆಂಡ್ ಆಗಿರ್ತೀನಿ ಅಂತ ಹೇಳೋ. ಆಮೇಲೆ ಕಾಫಿ ಕುಡಿಬೇಕಾದ್ರೆ ಅದೇನೋ ಹೇಳ್ತಿದ್ದಂತಲ? A lot coffee more.. A lot can happen over a coffee .. ಯಾರಾದ್ರು ಕಾಫಿ ಅಂದ್ರೆ ಸಾಕು ಅದುನ್ನ ಹೇಳ್ತಿರ್ತಾಳೆ. ನಿಂಗೆ ಕೈ ಮುಗಿದು ಕೇಳ್ಕೊತೀನಿ .. ಅವಳ ಜೊತೆ ಒಂದು ಕಪ್ ಬೇಡಪ್ಪ ಒಂದು ಸಿಪ್ ಆದ್ರೂ ಕಾಫಿ ಕುಡಿಯೋ ..

ಒಂದು ದಿನ ಅನಿರೀಕ್ಷಿತವಾಗಿ ಅವಳ ದೇಹ ಚಿಕಿತ್ಸೆಗೆ ಸ್ಪಂದಿಸ ತೊಡಗಿತ್ತು. ಅವಳಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗಳು ಸಹ ಆಶ್ಚರ್ಯ ಪಟ್ಟರು. ಈ ಬದಲಾವಣೆಗೆ ಮೂಲ ಕಾರಣ ಹುಡುಕಿದ ಡಾಕ್ಟರ್ ಗಳಿಗೆ ಗೊತ್ತಾದದ್ದು ಅವರು ಚಿಕಿತ್ಸೆಯನ್ನು ಬೆಳಗ್ಗೆ ಹತ್ತರ ಬದಲು ಸಂಜೆ ನಾಕಕ್ಕೆ ಶುರು ಮಾಡಿದ್ದರು. ಮಾರನೆ ದಿನ ಮತ್ತೆ ಬೆಳಗ್ಗೆ ಚಿಕಿತ್ಸೆ ಮಾಡಿದಾಗ ಆ ಬದಲಾವಣೆ ಕಾಣಲ್ಲಿಲ್ಲ. ಮತ್ತೆರಡು ದಿನ ಸಂಜೆ ಚಿಕಿತ್ಸೆ ಮಾಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಡಾಕ್ಟರ್ ಗಳು ಪ್ರಿಯಾಳ ಮನೆಯಲ್ಲಿ ವಿಚಾರಿಸಲಾಗಿ ಆಂಟಿ ಹೇಳಿದ್ದರು : - ಪ್ರಿಯ ಇಂಟರ್ನೆಟ್ ನಲ್ಲಿ ಯಾರದೋ ಜೊತೆ ಚಾಟ್ ಮಾಡುತ್ತಾಳೆ. ಅದಾದ ಮೇಲೆ ಅವಳು ತುಂಬಾ ಖುಷಿಯಾಗಿರುತ್ತಾಳೆ. ನಾವು ಅದಾರೆಂದು ಈವರೆಗೂ ವಿಚಾರಿಸಿಲ್ಲ. ಡಾಕ್ಟರ್ ಗಳು ನೀಡಿದ ಸಲಹೆಯಂತೆ ಪ್ರಿಯಳ ತಂದೆ ತಾಯಿ ಅವಳು ನಿನ್ನ ಜೊತೆ ಚಾಟ್ ಮಾಡೋದನ್ನ ತಡೆಯಲ್ಲಿಲ್ಲ. ಮತ್ತೆ ಮತ್ತೆ ಅವಳಿಗೆ ನಿನ್ನ ಜೊತೆ ಮಾತಾಡಲು, ಚಾಟ್ ಮಾಡಲು ಉತ್ತೇಜಿಸಿದರು. ಹೆತ್ತವರಿಗೆ ಮಗಳ ಆರೋಗ್ಯಕ್ಕಿಂತ ಮುಖ್ಯವಾದದ್ದು ಬೇರೇನಿದೆ??

ನಿಮಗೆ ಕುತೂಹಲವಿದ್ದರೆ ಅದಾರೆಂದು ತಿಳಿದುಕೊಳ್ಳಿ ಎಂದು ಡಾಕ್ಟರ್ ಹೇಳಿದ್ದರು. ಆ ಜವಾಬ್ದಾರಿಯನ್ನು ಅಂಕಲ್ ನನಗೆ ನೀಡಿದ್ದರು. ಹಾಗಾಗಿ ನಾನು ನಿನ್ನ ಜೊತೆ ಪ್ರಿಯಾಳಿಗಿಂತ ಹೆಚ್ಚಿಗೆನೆ ಮಾತಾಡುತ್ತಿದ್ದೆ. ನೀನ್ ಎಷ್ಟು ಚತುರ ಮಾತಿನಲ್ಲಿ .. ಎಲ್ಲ ಪ್ರಶ್ನೆಗಳಿಗೂ ಉಲ್ಟಾ ಉತ್ತರಾನೇ ಕೊಡ್ತಿದ್ದೆ. ಯಾವುದು ಸರಿ ಯಾವುದು ತಪ್ಪು ಎಂದು ಅರ್ಥ ಮಾಡಿಕೊಳ್ಳಲು ಆ ಚಾಟ್ ಹಿಸ್ಟರಿನ ನಾಕು ನಾಕು ಬಾರಿ ಮತ್ತೆ ಮತ್ತೆ ತಿರುವುತ್ತಿದ್ದೆ. ನಿನ್ನ ಬಗ್ಗೆ ಎಳ್ಳಷ್ಟು ವಿಚಾರ ಬಾಯಿಬಿಡಿಸಲು ನನಗೆ ಏಳು ಕೆರೆ ನೀರು ಕುಡಿಸುತ್ತಿದ್ದೆ... ಆಗೆಲ್ಲಾ ನನಗೆ ಪ್ರಿಯಾಳ ಮೇಲೆ ಅಸೂಯೆಯಾಗುತ್ತಿತ್ತು. ನನ್ನ ಪ್ರಿಯಾಳಲ್ಲದೆ ಬೇರ್ಯಾರಾದರೂ ಆ ಜಾಗದಲ್ಲಿದ್ದಿದ್ದರೆ ನಾನು ನಿನ್ನನ್ನು ಬಿಟ್ಟು ಕೊಡುತ್ತಿರಲ್ಲಿಲ್ಲ. ನನ್ನ ವಿಷಯ ಹಾಗಿರಲಿ. ನಿನ್ನ ಜೊತೆ ಮಾತಾಡಿಕೊಂಡು ನಗುಮುಖದಿಂದ ಹಾಸ್ಪಿಟಲ್ ಗೆ ಬರುತ್ತಿದ್ದ ಪ್ರಿಯ ಕಳೆದ ನಾಕಾರು ತಿಂಗಳುಗಳಿಂದ ಬಹಳ ಚೇತರಿಸಿಕೊಂಡುಬಿಟ್ಟಿದ್ದಳು. ಈ ಪ್ರೀತಿ ಎಂತ ಮಾಯೆ ಅಲ್ಲವ? ಸಾಯುತ್ತಿರುವವರನ್ನ ಬದುಕಿಸಿಬಿಡುತ್ತೆ ಬಾಳಿ ಬದುಕಬೇಕಾದವರನ್ನ ಸಾಯಿಸಿಬಿಡುತ್ತೆ.

ಅವಳು ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಇನ್ನಾರು ತಿಂಗಳು ಯಾವುದೇ ಭಯವಿಲ್ಲ. ಆದರೆ ಅವಳಿಗೆ ಕೆಲವೊಂದು ಮಾತ್ರೆಗಳನ್ನು ಬೆಳಗ್ಗೆ ಮಧ್ಯಾನ್ಹ ರಾತ್ರಿ ತಪ್ಪದೆ ಕೊಡಬೇಕು. ತಪ್ಪಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿ ಡಾಕ್ಟರ್ ಗಳು ಅವಳಿಗೆ ಪ್ರತಿದಿನ ಮಾಡುತ್ತಿದ್ದ ಚಿಕಿತ್ಸೆಯನ್ನು ಒಂದು ತಿಂಗಳ ಹಿಂದೆ ನಿಲ್ಲಿಸಿದ್ದರು. ಮೊದ ಮೊದಲು ಮನೆಯಲ್ಲಿ ಕೆಲಸದವರಿಂದ ಹಿಡಿದು ಅವರ ತಾತನ ತನಕ ಎಲ್ಲ ವಿಚಾರಿಸಿಕೊಳ್ಳುವವರೆ.. ಆದರೆ ಅದು ಎಷ್ಟು ದಿನ.. ವಾರ ಹತ್ತು ದಿನ... ಅವಳಿಗೆ ಹೇಗೂ ಅಭ್ಯಾಸವಾಗಿಬಿಟ್ಟಿದೆ ನಾವು ಹೇಳದ್ದಿದ್ದರೂ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುತ್ತಾಳೆ ಅಂದುಕೊಳ್ಳುತ್ತಾ ಒಬ್ಬಬ್ಬರಾಗಿ ಅವಳನ್ನು ವಿಚಾರಿಸೋದೇ ಬಿಟ್ಟುಬಿಟ್ಟರು. ಅದೇ ಸಮಯದಲ್ಲೇ ನಾನು ನಿನ್ನ ಬಗ್ಗೆ ನನಗೆ ತಿಳಿದ್ಡಿದ್ದನ್ನು ಹಾಗು ಪ್ರಿಯ ಇಟ್ಟುಕೊಂಡಿದ್ದ ನಿನ್ನ ಫೋಟೋವನ್ನು ಅವರ ಮನೆಯವರಿಗೆಲ್ಲಾ ತೋರಿಸಿದ್ದೆ. ನಮ್ಮ ಮಗಳನ್ನು ನಮಗೆ ಇನ್ನಷ್ಟು ಕಾಲ ಬದುಕಿಸಿಕೊಟ್ಟ ಪುಣ್ಯಾತ್ಮನಪ್ಪ ನೀನು ಅಂತ ಅವರ ಅಮ್ಮ ನಿನ್ನ ಫೋಟೋಗೆ ಕೈ ಮುಗಿದ್ದಿದ್ದರು. ಇದನ್ನು ನೀನು ಬೇಕಾದರೆ ನಂಬು ಸಾಕಾದರೆ ಬಿಡು. ನನಗೇನೂ ನಷ್ಟ ಇಲ್ಲ.

ಮಾತ್ರೆ ತಿನ್ನಲು ಅಸಹ್ಯ ಪಡುತ್ತಿದ್ದ ಪ್ರಿಯ ಯಾರು ಕೇಳೋಲ್ಲ ಅಂತ ಗೊತ್ತಾದ ದಿನದಿಂದ ಅಂದರೆ ಕಳೆದೊಂದು ತಿಂಗಳಿನಿಂದ ಮಾತ್ರೆ ತೊಗೊಳೋದೇ ನಿಲ್ಲಿಸಿಬಿಟ್ಟಿದ್ದಳು. ಎಂಟು ದಿನದ ಹಿಂದೆ ಅವಳು ಮನೆಯಲ್ಲಿ ಕುಸಿದುಬಿದ್ದಾಗಲೇ ಗೊತ್ತಾದದ್ದು ಅವಳು ಮಾತ್ರೆ ನಿಲ್ಲಿಸಿದ್ದಾಳೆಂಬುದು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದಾಗ, ಅವಳಿಗೆ ಇಲ್ಲಿವರೆಗೂ ಏನಾಗಿಲ್ಲವೆಂದರೆ ಅದೊಂದು ಪವಾಡವೇ ಸರಿ ಎಂದು ಡಾಕ್ಟರ್ ಹೇಳಿದ್ದನ್ನು ನಾನು ಕೇಳಿಸಿಕೊಂಡಾಗ ನನಗನಿಸಿದ್ದು ಅವಳನ್ನು ಉಳಿಸಿದ್ದು ನೀನು.. ನಿನ್ನ ಜೊತೆಗಿನ ಆ ಮಾತುಕತೆ ಅವಳನ್ನು ಮೃತ್ಯುವಿನಿಂದಲೂ ಪಾರು ಮಾಡುತ್ತಿತ್ತು. ಯಾವಾಗ ಅವಳು ನೀನು ವಂಡರ್ ಲಾ ಗೆ ಬರಲ್ಲ ಅಂತ ಸಿಟ್ಟು ಮಾಡಿಕೊಂಡು ನಿನ್ನ ಜೊತೆ ಎರಡು ದಿನ ಮಾತಾಡೋದನ್ನ ಬಿಟ್ಟಳೋ .. ನೋಡು.. ಹೀಗಾಗಿಬಿಟ್ಟಿದೆ.

ನಾನು ಇಷ್ಟು ಹೇಳಿದಮೇಲೆ ಪ್ರಿಯಾಳಿಗೆ ಯಾವುದೋ ದೊಡ್ಡ ಖಾಯಿಲೆಯಿದೆಯೆಂದು ನಿನಗನಿಸಿದ್ಯೋ ಅಥವಾ ಇದು ಕೂಡ ಸುಳ್ಳು ಅಂತ ಅನಿಸ್ತಿದ್ಯೋ? ನಿನಗೇನನಿಸಿದರೂ ಪರವಾಗಿಲ್ಲ......

ಬೃಂದಾ ನೀನು ಕಲ್ಲಿನ ಜೊತೆ ಮಾತಾಡ್ತಿಲ್ಲ. ಯಾರನ್ನು ಯಾವ ಸಮಯದಲ್ಲಿ ನಂಬಬೇಕೆಂಬ ಅಲ್ಪ ಬುದ್ದಿಯನ್ನು ದೇವರು ಕರುಣಿಸಿದ್ದಾನೆ. ಅದೇನು ಹೇಳಬೇಕಂತಿದ್ಯ ಎಲ್ಲವನ್ನು ಹೇಳು. ಇನ್ನು ನನ್ನಿಂದ ಏನನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡ. ನಾನು ನಿನ್ನ ಮಾತನ್ನ ನಂಬ್ತೀನಿ ಬೃಂದಾ..

ಹೌದಾ.. ಎಷ್ಟೋ ದಿನದಿಂದ ನಿನಗೆ ಹೇಳಬೇಕೆಂದುಕೊಂಡಿದ್ದನ್ನ ಈಗ ಹೇಳುತ್ತಿದ್ದೇನೆ. ಸರಿಯಾಗಿ ಕೇಳಿಸಿಕೋ .
Priya is a Cervical Cancer patient !!


No comments:

Post a Comment