ನಿನ್ನ ಮೇಲಿನ ನನ್ನ ಪ್ರೇಮದ ಪರಿ
ಬಾನಿನ ಚಂದಿರ ಭುವಿಯಲ್ಲಿ ಕಾಣುವ ತರ
ಹುಣ್ಣಿಮೆಯವರೆಗೂ ಒಂದೊಂದೇ ಕಲೆ -
ಯಂತೆ ಹಿಗ್ಗುತ್ತಾ ಹೋದರೆ
ಆ ನಂತರ ಕುಗ್ಗುತ್ತಾ ಹೋಗಿ
ಅಮಾವಾಸ್ಯೆಗೆ ನೀನಾರೆಂಬುದೆ ಮರೆವೆ
ಮತ್ತೆ ಯಾವುದೋ ಘಳಿಗೆ ನಿನ್ನ
ನೆನಪಾಗಿ, ನಿನಗಾಗಿ ನಿರೀಕ್ಷಿಸುವೆ ಮರಳು -
ಗಾಡು ಮಳೆಗೆ ಹಂಬಲಿಸಿದಂತೆ
ನೀ ಬಾರದೆನ್ನುವ ಅರಿ -
ವಾಗಿದ್ದರೂ ಕಾಯುವೆ ಕಳೆದ
ಸಮಯ ಮರಳುವ ಹಾಗೆ
ಕನಸಿನಲಿ ಕಾಡುವುದ ಬಿಟ್ಟು ನೀ
ಮನಸು ಮಾಡಬಾರದೇಕೆ? ಒಂದು
ಸತ್ಯ ಸಂಕಲ್ಪದಂತೆ
ನಿನ್ನ ಒಲಿಸಲೇನು ಮಾಡಬೇಕು ಹೇಳೇ
ನಾ ಮಾಡುವೆ ಅದನು ಚಾಚೂ -
ತಪ್ಪದೆ ಒಂದು ವ್ರತದಂತೆ
ಅಂದು ನೀನಾಡಿದ ಮಾತು ನನ್ನನು
ಸುಡುತಿದೆ ಇನ್ನೂ ಕಾಡ್ಗಿಚ್ಚಿನ
ಹಾಗೆ ಹಬ್ಬುತಾ ಸಾಗಿದೆ ಈ ದೇಹಕ -
ರಗುವ ಮುಂಚೆ ನೀನಾರಿಸು
ಆ ಬೆಂಕಿಯನು ಇರುಳು-
ಕಳೆದು ಸೂರ್ಯ ಉದಯಿಸಿದಂತೆ
ಮತ್ತೆ ರವಿ ಹುಟ್ಟಿ ಬೆಳಕಾಗಲು ನಾ
ಮರೆಯುವೆ ನಿನ್ನ ಕೆಲಸದ ಮಧ್ಯದಲಿ
ಸ್ವಂತ ನೆರಳಿನ ಹಾಗೆ
ಸಂಜೆಯಾಯಿತೆಂದರೆ ಪುನಃ ನೀ
ಬಂದು ಸೇರುವೆ ನನ್ನ ಮನದಲಿ ಹಕ್ಕಿ -
ಗೂಡು ಸೇರಿದ ಹಾಗೆ
ಕೊನೆಯದಾಗಿ
ಹೆಚ್ಚೇನು ಹೇಳೆನು ನಿನ್ನ ಪ್ರೀತಿಗೆ ಹುಚ್ಹ -
ನಾ ಅದ ಎಚ್ಚೆತ್ತು ನೀ ಬಾರೆ ಕಟ್ಟೋಣ
ಹೊಚ್ಚ ಹೊಸ ಬಾಳೊಂದ ಜೊತೆಯಾಗಿ
ನಮ್ಮಿಚ್ಚೆಯಂತೆ ಬದುಕೋಣ ಸ್ವಚ್ಚಂದವಾಗಿ
ಅಚ್ಚ ಕನ್ನಡನಾಡಲಿ ಉಚ್ಚ ನಡೆನುಡಿಯಲಿ
ಸೂಚನೆ :- ಸಂಜೆಯಿಂದ ಬೆಳಗ್ಗೆಗೆ ಶುಕ್ಲ ಮತ್ತೆ ಬೆಳಗ್ಗೆಯಿಂದ ಸಂಜೆಗೆ ಕೃಷ್ಣ ಎಂಬ ಭಾವದಲ್ಲಿ ಓದಿದರೆ ಹೆಚ್ಚು ಸಮಂಜಸವಾದೀತು.
No comments:
Post a Comment