ಇತ್ತೀಚಿನ ದಿನಗಳಲ್ಲಿ ನಾನು ಮುಜುಗರಕ್ಕೊಳಗಾಗುತ್ತಿರುವುದು ಈ ' ಚಿಲ್ಲರೆ ' ವಿಷಯಕ್ಕೆ. ಹಾಲಿನವ, ನ್ಯೂಸ್ ಪೇಪರಿನವ, ತರಕಾರಿಯವಳು, ಹೂವಿನವಳು, ಆಟೋದವ, ಸಿಟಿ ಬಸ್ಸಿನ ಕಂಡಕ್ಟರ್, ಕಿರಾಣಿ ಅಂಗಡಿಯವ, ಮೆಡಿಕಲ್ ಸ್ಟೋರಿನವ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಾನು ದಿನನಿತ್ಯ ವ್ಯವಹರಿಸುವ ಎಲ್ಲರೂ ಒಂದಿಲ್ಲೊಂದು ನೆಪವೊಡ್ಡಿ ಚಿಲ್ಲರೆ ಕೊಡಲು ಸತಾಯಿಸುತ್ತಾರೆ. ಚೂರು ದಬಾಯಿಸಿದರೂ ಹಣ ವಾಪಸ್ ಮಾಡಿ ಮಾಲು ಹಿಂತಿರುಗಿಸುವಂತೆ ತುಸು ಜೋರಾಗೆ ಅರಚುತ್ತಾರೆ. ಇನ್ನು ಕೆಲವರು ನಯವಾಗೆ ಏನ್ ಸರ್ ಎಂಟಾಣಿ ಒಂದ್ ರೂಪಾಯಿ ಚೇಂಜ್ ಕೇಳ್ತೀರಾ? ನಾಳೆ ನೀವೇ ಒಂದ್ ರೂಪಾಯಿ ಬಿಟ್ ಕೊಡಿ ಅಂತಾರೆ. ಅವರಿಗೆ ಗೊತ್ತು ಖಂಡಿತ ನಾವು ನಾಳೇನೂ ಬರೋ ಮಕ್ಳಲ್ಲ ಅಂತ. ಅಕಸ್ಮಾತ್ ಬಂದರೂ ನೀವಾ? ನಿನ್ನೆನ? ಅಂತ ತಲೆ ಕೆರೆದುಕೊಳ್ಳುತ್ತಾ ಹೋಗ್ಲಿ ಕೊಡಿ ಅಂತ ದುಡ್ಡು ಇಸ್ಕೊಳ್ಳುತ್ತಾ ತು ಈ ಜನ ಒಂದ್ ರೂಪಾಯಿಗೆ ಏನೆಲ್ಲಾ ವೇಷ ಬದಲಿಸುತ್ತಾರೆ ಅಂತ ಗೊಣಗಿಕೊಳ್ಳುತ್ತಾರೆ. ನಿಜವಾಗಿ ವೇಷ ಬದಲಿಸುವವರು ನೀವು ಅಂತ ಹೇಳಬೇಕು ಅನ್ನೋಷ್ಟರಲ್ಲಿ ಅವರ ಹತ್ತಿರ ಎಂತ ಮಾತು ಕೆಲಸ ನೋಡ್ಕೋ ಅಂತ ಒಳ ಮನಸ್ಸು ಎಚ್ಚರಿಸುತ್ತದೆ.
ಇನ್ನು ಕೆಲವರು ಚಿಲ್ಲರೆ ಇದ್ದರೂ ಕೊಡದೆ ಅದರ ಬದಲಾಗಿ ಚಾಕಲೇಟು ಪೆಪ್ಪರಮೆಂಟು ನೀಡುತ್ತಾರೆ. ಇದು ಎಲ್ಲಿ ತನಕ ಎಂದರೆ ಹೆದ್ದಾರಿಯಲ್ಲಿ ರಸ್ತೆ ನಿರ್ವಹಣೆಗಾಗಿ (ನಿಜವಾಗಿ ಮಾಡುತ್ತಾರ? ಅಂತ ಕೇಳಬೇಡಿ) ಹತ್ತಾರು ವರ್ಷದಿಂದ ಸುಂಕ ವಸೂಲು ಮಾಡುತ್ತಿರುವ ಟೋಲ್ ಕಂಪನಿಯವರು ಚಿಲ್ಲರೆ ಬದಲು ಚಾಕೊಲೇಟು ನೀಡುತ್ತಾರೆ. ಮೊನ್ನೆ ಹಾಗೆ ಆಯಿತು. ಊರಿಗೆ ಹೊರಟಿದ್ದ ನಾನು ಅಂದೇ ವಾಪಸಾಗುವುದು ಖಚಿತವಾಗಿರದ ಕಾರಣ ಟೋಲ್ ನಲ್ಲಿ ೨ ವೇ ಬದಲು ೧ ವೇ ಚೀಟಿ ಕೊಂಡೆ. ಯಥಾಪ್ರಕಾರ ಒಂದು ರೂಪಾಯಿಯ ಬದಲು ಚಾಕೊಲೇಟು ಸಿಕ್ಕಿತು. ಕಾರಣಾಂತರದಿಂದ ಅಂದೇ ರಾತ್ರಿ ಹೊರಟ ನಾನು, ಮನೆಯಿಂದ ಸರಿಯಾದ ಚಿಲ್ಲರೆ ಹೊಂದಿಸಿಕೊಂಡು ಬಂದಿದ್ದರೂ ಟೋಲ್ ನಲಿ ಅವನಿಗೆ ಒಂದು ರೂಪಾಯಿ ಕಡಿಮೆ ನೀಡಿ ಆವ ಕೇಳಿದಾಗ ಚಿಲ್ಲರೆ ಇಲ್ಲ ತೊಗೊಳಿ ನೀವು ಕೊಟ್ಟ ಚಾಕೊಲೇಟು ಎಂದು ಹಿಂತಿರುಗಿಸಲು ಹೋದರೆ ಅವ ತೊಗೊಂಡಿದ್ದರೆ ಸರಿ, ಅವೆಲ್ಲ ಆಗಲ್ಲ ಸರ್ ಬಂಧ ನೆ ಕೊಡಿ ನಾನು ಚಿಲ್ಲರೆ ಕೊಡುತ್ತೇನೆ ಎಂದ... ಅಷ್ಟರಲ್ಲಾಗಲೇ ಹಿಂದಿನಿಂದ ಹಾರನ್ ಶಬ್ದ ಮೊಳಗುತ್ತಿತ್ತು. ಹಾಳಾಗಿ ಹೋಗು ಅಂದು ನೋಡೋಣ ಏನು ಮಾಡುತ್ತಾನೆ ಅಂತ ಮನಸಿನಲಿ ಅಂದುಕೊಳ್ಳುತ್ತಾ ಹತ್ತು ರೂ ನೋಟು ಕೊಟ್ಟೆ. ಒಂಬತ್ತು ರೂ ಕೊಡಬೇಕಾದ ಕಡೆ ೨ ರೂಪಾಯಿಯ ೪ ಕಾಯಿನ್ ಕೊಟ್ಟು ಮತ್ತೆ ಒಂದು ಚಾಕೊಲೇಟು ಕೊಟ್ಟ... ನನಗೆ ರೇಗಿ ಹೋಯಿತು. ನಾನು ದುಡ್ಡು ವಾಪಸ್ಸು ಮಾಡಿ ಒಂಬತ್ತು ರೂ ಕೊಡು ಎಂದೇ. ಏನ್ ಸರ್ ನಿಮ್ದು ಸರಿಯಾದ ಚಿಲ್ಲರೆ ಕೊಡಿ ಇಲ್ಲ ಅಂದ್ರೆ ಅದ್ ತೊಗೊಂಡು ಹೋಗಿ ಹಿಂದೆ ಸಾಕಷ್ಟು ಗಾಡಿ ನಿಂತಿದೆ. ಒಂದ್ ರೂಪಾಯಿಗೆ ತಗಾದೆ ತೆಗೀಬೇಡಿ ಅಂತ ಇನ್ನು ಏನೇನೋ ಗೊಣಗುತ್ತಲೇ ಇದ್ದ... ನಾನು ಬಿಡಲ್ಲಿಲ್ಲ. ಗಾಡಿಯಿಂದ ಇಳಿದು
ಅವನ ಹತ್ತಿರ ಜಗಳಕ್ಕೆ ನಿಂತೆ. ಹಿಂದಿನಿಂದ ಕೆಲ ಟ್ರಕ್ ಡ್ರೈವರುಗಳು, ಕ್ಯಾಬ್ ಡ್ರೈವರುಗಳು ಇಳಿದು ಬಂದರು. ಕೆಲವರು ನನ್ನ ಪರ ಮಾತಾಡಿದರೆ ಕೆಲವರು ಅವನ ಜೊತೆ ಸೇರಿದರು. ಬರೋಬ್ಬರಿ ಹತ್ತು ನಿಮಿಷ ಮಾತಿನ ಚಕಮಕಿ ನಡೆಯಿತು. ಕಡೆಗೆ ನಾನೇ ಒಳಗಡೆ ಅಡಗಿಸಿಟ್ಟಿದ್ದ ಒಂದು ರೂಪಾಯಿ ಕೊಟ್ಟು ಹತ್ತರ ನೋಟು ವಾಪಸ್ಸು ಪಡೆದೆ. ಈ ಕೆಲಸ ಮೊದಲೇ ಮಾಡಬಾರದಿತ್ತಾ? ಅಂತ ಜನ ಎಲ್ಲ ನನಗೆ ನೇರವಾಗಿ ಅಲ್ಲದ್ದಿದ್ದರೂ ಹಿಂದಿನಿಂದ ಬೈಗುಳದ ಸುರಿಮಳೆಗೈದರು. ಒಳಗೆ ಬಂದು ಕೂಡುವಷ್ಟರಲ್ಲೇ ಯೋ ತೆಗ್ಯಯ್ಯೋ ನಿನ್ ಗಾಡಿನ ಅಂತ ಕೂಗುತ್ತಿದ್ದುದು ಕೇಳಿಸಿದರೂ ಕೇಳಿಸದವನ ಹಾಗೆ ಹೊರಟೆ. ಐದು ನಿಮಿಷದ ಬಳಿಕ ಹೆಂಡತಿ ಸೊಂಟಕ್ಕೆ ತಿವಿಯುತ್ತಾ ನಿಮ್ಗೆ ಇದು ಬೇಕಿತ್ತಾ? ಏನೋ ಬದಲಾವಣೆ ತರ್ತೀನಿ ಅಂತ ಕೊಚ್ಕೋತೀರ.. ಅದೆಲ್ಲ ನನ್ ಮುಂದೆ ಮಾತಾಡಕ್ಕೆ ಸರಿ ಅಷ್ಟೇ.. ಸುಮ್ನೆ ಇಂತದ್ದಿಕ್ಕೆಲ್ಲ ಇನ್ಮೇಲೆ ಸಮಯ ಹಾಳ್ ಮಾಡಬೇಡಿ ಅಂತ ಇನ್ನು ಏನೇನೋ ಉಪದೇಶದ ಸರಮಾಲೆ ಪೋಣಿಸಿದಳು.
ಈ ಘಟನೆ ನಡೆದ ಮಾರನೆ ದಿನವೇ ನನ್ನ ಗಾಡಿ ಕೈಕೊಟ್ಟು ಆಫೀಸಿಗೆ ಆಟೋ ಏರಬೇಕಾಯಿತು. ಅಷ್ಟ್ ದೂರಾನ ಸಾರ್, ಬರೋವಾಗ ಖಾಲಿ ಬರಬೇಕು.. ಮೀಟರ್ ಮೇಲೆ ಹತ್ತು ರೂ ಕೊಟ್ರೆ ಬರ್ತೀನಿ ಅನ್ನೋರೆ ಎಲ್ಲರೂ.. ನಾನು ಕಾದೆ ಕಾದೆ.. ಯಾವನೂ ಬರಲೋಪ್ಪಲ್ಲಿಲ್ಲ. ಯಾವನೋ ಒಬ್ಬ ಬರಲೊಪ್ಪಿದರೂ ನಾನು ಮೀಟರ್ ಅನ್ನು ಅನುಮಾನಿಸಿದ್ದಕ್ಕೆ ರೋಷಗೊಂಡು ಹೌದು ಸಾರ್ ಮೀಟರ್ ಟ್ಯಾಂಪರಿಂಗ್ ಮಾಡಿಸಿದ್ದೇನೆ ಯಾರಿಗೆ ಬೇಕಾದರೂ ದೂರು ನೀಡಿ ನನ್ನ ಲೈಸೆನ್ಸ್ ನಂಬರ್ ಬೇಕಾ? ಗಾಡಿ ಡೀಟೈಲ್ಸ್ ಬೇಕಾ? ತೊಗೋಳಿ ನನ್ನ ಮೊಬೈಲ್ ನಂಬರ್ ಅಂತ ಕೂಗಾಡಿದ. ಕೊರಳಿನಲ್ಲಿ ನೇತಾಡುತ್ತಿದ್ದ ಕಂಪನಿ ID ಕಾರ್ಡ್ ದಿಟ್ಟಿಸುತ್ತಾ ಸಾವಿರಾರು ರೂಪಾಯಿ ಸಂಬಳ ತೊಗೋತಾರೆ. ಹತ್ತು ರೂಪಾಯಿ ಜಾಸ್ತಿ ಕೊಡಕ್ಕೆ ನೂರೆಂಟು ಮಾತಾಡ್ತಾರೆ ಇವ್ರೆನ್ ಬಾಳ ಸಾಚ ಅಂತ ಇನ್ನು ಏನೇನೋ ಕೆಟ್ಟ ಕೊಳಕ ಮಾತುಗಳನ್ನ ಅಂದು ನಾನು ಮಧ್ಯದ ಬೆರಳು ತೋರಿಸಿದ ಮೇಲೆ ಗಾಡಿ ಶುರುಮಾಡಿ ತಿಂದೇ ಬಿಡುವನಂತೆ ದೊಡ್ಡದಾಗಿ ಕಣ್ಣು ಬಿಡುತ್ತಾ ತಿರುಗಿ ತಿರುಗಿ ನೋಡುತ್ತಾ ಹೊರಟ. ಅಷ್ಟರಲ್ಲಿ ನಮ್ಮ ಟೆಕಿಗಳ ವಾಹನ ಬಂದಿತು. ಇಡೀ ಬೆಂಗಳೂರಿನ ದರ್ಶನ ಭಾಗ್ಯ ಪಡೆದು ಎದ್ದಿದ್ದೇನೋ ಇವತ್ತು ಅಂದುಕೊಳ್ಳುತ್ತಾ ವೋಲ್ವೋ ಬಸ್ಸನ್ನೇರಿ ಕೂತು ಆಫೀಸಿನ ಒಳ ತೂರಿದಾಗ ಸಹೋದ್ಯೋಗಿಗಳು ಮಧ್ಯಾನ್ಹದ ಊಟಕ್ಕೆ ತೆರಳಲು ತಯಾರಿ ನಡೆಸುತ್ತಿದ್ದರು.
ಮತ್ತೊಂದು ದಿನ ಚುರುಮುರಿ ತಿನ್ನುತ್ತಾ ಗೆಳೆಯನ ಜೊತೆ ಇದೆ ವಿಷಯವಾಗಿ ಹರಟುತ್ತಿರಬೇಕಾದರೆ, ನಾವು ಆಡುವುದನ್ನು ತನ್ನ ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳುತ್ತಿದ್ದ ಚುರುಮುರಿ ಗಾಡಿಯವನು, ಸಾರ್ ಹೋದವಾರದಿಂದ ನಾನು ಚಾಕೊಲೆಟ್ ಪ್ಯಾಕೆಟ್ ತಂದು ಇಟ್ಟುಕೊಳ್ಳುತ್ತಿದ್ದೇನೆ ಸಾರ್. ಅದು ಒಂದು ರೀತಿಯ ಬಿಸಿನೆಸ್ ಅಂದ. ನಾನು ಸಾವಧಾನದಿಂದ ಅದು ಹೇಗೆ ಮಾರಾಯ? ನೀನಾದರೂ ಚಾಕೊಲೆಟಿಗೆ ದುಡ್ಡು ಕೊಟ್ಟೆ ತರಬೇಕಲ್ಲ ಅಂದೇ. ಅಲ್ಲೇ ಸಾರ್ ಇರೋದು ನಾವು ಹತ್ತಾರು ಪ್ಯಾಕೆಟ್ ತೊಗೊಳೋದ್ರಿಂದ, ನೂರರ ಒಂದು ಪ್ಯಾಕೆಟಿಗೆ ನಮಗೆ ಕೇವಲ ೪೫ ರೂ ಬೀಳತ್ತೆ ಅಂದ. ನಾನು ನಡುವೆ ಬಾಯಿ ಹಾಕಿ, ಅಂದರೆ ನೀವು ನಮಗೆ ಒಂದು ಚಾಕೊಲೆಟ್ ಕೊಟ್ಟಿದ್ದರ ಜೊತೆಗೆ ೫೫ ಪೈಸೆ ನಾಮ ಹಾಕುತ್ತೀರಾ ಅಲ್ಲವಾ? ಅಂದೆ. ಗಣಿತದಲ್ಲಿ ನೂರಕ್ಕೆ ನೂರಾ ಸಾರ್ ನಿಮಗೆ ಅಂದ?. ಬರೀ ಇಷ್ಟೇ ಗಣಿತವಾಗಿದ್ದರೆ ನಮ್ಮ ಕರ್ನಾಟಕದಲ್ಲಿನ ರಸ್ತೆಯಲ್ಲಿರುವ ಪ್ರತಿ ಗುಂಡಿಯಲ್ಲೂ ಒಬ್ಬೊಬ್ಬ ಗಣಿತಜ್ಞನಿರುತ್ತಿದ್ದ ಲೇ ಅಂದೆ.. ಆಮೇಲೆ ನಮ್ಮ ಹರಟೆ ಹಳಿ ತಪ್ಪಿ ರಸ್ತೆ ರಾಜಕೀಯ ಮಹಾರಾಜ ಎಲ್ಲೆಲ್ಲೊ ತಿರುಗಾಡಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಅವನು ಚಿಲ್ಲರೆ ಕೊಡುವಾಗಿನ ಸಮಯಕ್ಕೆ ಅದೇ ವಿಷಯಕ್ಕೆ ಬಂತು. ೬ ರೂಪಾಯಿ ಕೊಡಬೇಕಾದವ ೫ ರ ಕಾಯಿನ್ ಜೊತೆ ಚಾಕೊಲೆಟ್ ತೆಗೆಯಲು ಡಬ್ಬಿಗೆ ಕೈ ಹಾಕಿದವ ನನ್ನ ಕಡೆಗೊಮ್ಮೆ ವಿಕೃತ ನಗೆ ಬೀರುತ್ತಾ ಡಬ್ಬಿಯನ್ನು ಹಾಗೆ ಬಿಟ್ಟು ೧ ರೂಪಾಯಿ ಕಾಯಿನಿಗಾಗಿ ತಡಕಾಡಿದವನಂತೆ ಮಾಡಿ ಕಡೆಗೂ ೬ ರೂಪಾಯಿ ಸರಿಯಾದ ಚಿಲ್ಲರೆ ಕೊಟ್ಟ.
ಅವತ್ತೊಂದಿನ ಸಂಜೆ ಹೆಂಡತಿಯೊಡನೆ ವಾಕಿಂಗ್ ಹೋದಾಗ ವಾಪಸಾಗುವಾಗ ತರಕಾರಿಕೊಳ್ಳಲು ಹೋದೆವು. ನನ್ನವಳು ಮುಟ್ಟಿ ಮುಟ್ಟಿ ಅದು ಬೇಡ ಇದು ಬೇಡ ಅಂತ, ಏನಮ್ಮ ಎಲ್ಲಾ ತರಕಾರಿಗಳು ಒಣಕಲಾಗಿದೆ ಎನ್ನಲು, ಏನ್ಮಾಡೋದು ಅಮ್ಮೊರೆ ಮಳೆನೆ ಇಲ್ಲ ರೈಟ್ ಜಾಸ್ತಿ ಆಗದೆ ಅಂದಳು. ತೂಗಿ ಅಳೆದು ನನ್ನವಳು ಕೊಂಡ ತರಕಾರಿಯ ಒಟ್ಟು ಮೊತ್ತ ೪೬ ಆದಾಗ ನಾನು ೫೦ರ ನೋಟು ಕೊಟ್ಟು ಚಿಲ್ಲರೆಗಾಗಿ ಕೈ ಮಾಡಿ ನಿಂತೆ. ೧ ನಿಮಿಷ ತನ್ನ ಎಲೆಅಡಿಕೆ ಚೀಲದಂತಿದ್ದ ದುಡ್ಡಿನ ಚೀಲದಲ್ಲಿ ಕೈಯಾಡಿಸಿದ ಅವಳು ಅಣ್ಣೊರೆ ಚಿಲ್ಲರೆ ಇಲ್ಲ ೪ ಕ್ಕೆ ಕೊತ್ತಂಬರಿ ಸೊಪ್ಪು ಕೊಡ್ಲ ಅಂದಳು. ಅಲ್ಲಮ್ಮ ಎಂಟಾಗಿದೆ ಇನ್ನೇನ್ ವ್ಯಾಪಾರ ಮುಗ್ಸೋ ಹೊತ್ತು ಚಿಲ್ರೆ ಇಲ್ಲ ಅಂದ್ರೆ ಹೆಂಗೆ? ಅಂದೆ. ಅಷ್ಟರಲ್ಲಾಗಲೇ ನನ್ನವಳು ೫ ರೂ ಹೇಳಿದ್ದ ಕೊತ್ತಂಬರಿಯ ಕಟ್ಟನ್ನು ಬ್ಯಾಗಿಗೆ ಹಾಕೊಳ್ಳುತ್ತಾ ಒಂದು ರೂ ಕೊಡುವಂತೆ ನನಗೆ ತಿವಿದಳು. ತರಕಾರಿಯವಳ ಮುಂದೆ ಮರ್ಯಾದೆ ಕಳ್ಕೊಳೋದು ಬೇಡ ಅನ್ಕೊತ ಮುಚ್ಕೊಂಡು ೧ ರೂ ಕೊಟ್ಟು ಮನೆಕಡೆ ನಡೆದೆ.
ಚಿಲ್ಲರೆ ವಿಷಯಕ್ಕೆ ಪೂರಕವಾಗಿ ಬರುವ ಮತ್ತೊಂದು ವಿಷಯ ಬಸ್ ಸ್ಟಾಂಡಿನ ಅಂಗಡಿಗಳಲ್ಲಿ MRP ಕಿಂತ ಜಾಸ್ತಿ ಬೆಲೆಗೆ ಮಾರಾಟ ಮಾಡುವುದು. ಮೊನ್ನೆ ಊರಿಗೆ ಹೋಗುವಾಗ ತೀರ ಹಸಿದಿದ್ದರಿಂದ ಏನಾದರೂ ಕೊಳ್ಳೋಣವೆಂದು ಮೆಜೆಸ್ಟಿಕ್ ನ ಮೂಲೆಯಲ್ಲಿರುವ ಅಂಗಡಿಗೆ ಹೊಕ್ಕರೆ ಎಲ್ಲ ಐಟಂಗಳಿಗೂ ೨ ಅಥವಾ ೩ ರೂ ಹೆಚ್ಚಾಗಿ ಹೇಳಿದ. MRP ಬೆಲೆಯೇ ಜಾಸ್ತಿ ಅದರ ಮೇಲೆ ಮತ್ತೆ ಅವನಿಗ್ಯಾಕೆ ಹೆಚ್ಚು ಕೊಡಬೇಕೆಂದು ವಾಪಸಾದೆ. ಮತ್ತೆ ಏನೋ ಹೊಳೆದಂತಾಗಿ MTR ನ ಬಾದಾಮ್ ಮಿಲ್ಕ್ ಕೊಡು ಅಂದರೆ ಅವ, ಅದು ಮೂವತ್ತೈದು ರೂಪಾಯಿ ಅಂದ. ಅಲ್ಲವೋ ಅದು ೩೦ ರೂಪಾಯಿಯದು ಅಲ್ಲವಾ? ಅಂದರೆ ಬೇಕಾದರೆ ತೊಗೊಳಿ ಇಲ್ಲವಾದರೆ ಬಿಡಿ ಅಂದವನೇ ಹಾಲಿನ ಪುಟಾಣಿ ಕ್ಯಾನನ್ನ ಫ್ರಿಜ್ಜಿನೊಳಗೆ ಇಟ್ಟೆಬಿಟ್ಟ. ಎಲಾ ಇವನ ನಿಮಗೆ ಹೇಳೋರು ಕೇಳೋರು ಇಲ್ಲವೇನೋ, ಗ್ರಾಹಕರ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು ಇದರ ಸಲುವಾಗಿ ಅಂದುಕೊಂಡು ಬಸ್ಸನ್ನೇರಿದೆ. ಆದರೆ ಇನ್ನು ಅರ್ಜಿ ಸಲ್ಲಿಸದಿರಲಿ, ಅದನ್ನು ಕೊಂಡು ಬಂದಿಲ್ಲ ಅಥವಾ ಅದರ ವಿಷಯವಾಗಿ ಮಾಹಿತಿಯೂ ಕಲೆ ಹಾಕಿಲ್ಲ. ನಮ್ಮಂಥ ಬೇಜವಾಬ್ದಾರಿ (ಅ)ನಾಗರೀಕರಿಂದಲೇ ನಮಗಿಂತ ಪರಿಸ್ಥಿತಿ ಬಂದೊದಗಿರುವುದು ಅಲ್ಲವೇ?
ಇಷ್ಟೆಲ್ಲಾ ಆದಮೇಲೆ ಸ್ವಲ್ಪ ಎಚ್ಚೆತ್ತ ನಾನು, ಜೇಬಿನಲ್ಲಿ ಸದಾ ಚಿಲ್ಲರೆ ಇಟ್ಟುಕೊಂಡೇ ಮನೆಯಿಂದ ಕಾಲ್ತೆಗೆಯುತ್ತಿದ್ದೆ. ಆದರೂ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಸಾಮಾನು ಕೊಂಡಾಗ ಎಂಟಾಣೆ ಒಂದ್ ರೂಪಾಯಿ ಕೈ ತಪ್ಪುತ್ತಿತ್ತು. ಆಗೆಲ್ಲ ಮನಸಿನಲ್ಲೇ ಕೊರಗುತ್ತಾ ಸಮಯ ಬಂದರೆ ಇವರ್ಗೆಲ್ಲ ಸರಿಯಾಗಿ ಮಾಡಬೇಕು ಅಂತ ತವಕಿಸುತ್ತಿದ್ದೆ. ಆ ಸೌಭಾಗ್ಯ ಇಷ್ಟು ಬೇಗ ಬರತ್ತೆ ಅಂತ ನಾನಂದುಕೊಂಡಿರಲ್ಲಿಲ್ಲ.
ಮೊನ್ನೆ ಊರಿಂದ ವಾಪಸಾಗುವಾಗ ಮೆಜೆಸ್ಟಿಕ್ ಕಡೆಯಿಂದ ನಮ್ಮ ಮನೆಗೆ ಬರಲು ಸಿಟಿ ಬಸ್ಸನ್ನೇರಿದೆ. ೧೪ ರೂ ಟಿಕೆಟ್ ಬೆಲೆ. ನಾನು ೫೦ ರ ನೋಟಿನ ಮೇಲೆ ೪ ರೂ ಚಿಲ್ಲರೆ ಕೊಟ್ಟೆ. ಡ್ರೈವರ್ ಕಂ ಕಂಡಕ್ಟರ್ ಇದ್ದವ ಸಾರ್ ಚಿಲ್ಲರೆ ಇದೆ, ಆದ್ರೆ ರಶ್ ಇರೋದ್ರಿಂದ ಇಳಿಬೇಕಾದರೆ ತೊಗೊಳಿ ಅಂದು ಚೀಟಿ ಹಿಂದೆ ಏನೋ ಗೀಚಿ ಕೊಟ್ಟ. ಹಿಂದಿದ್ದವರು ಆಯ್ತಲ ಮುಂದೆ ನಡೀರಿ ಅಂತಿದ್ದರೆ ಕೆಲವರು ನನ್ನನ್ನು ದೂಕಿಕೊಂಡೆ ಮುನ್ನುಗ್ಗುತ್ತಿದ್ದರು. ಡ್ರೈವರು ಎಲ್ಲಾ ಚೀಟಿ ತೊಗೊಂಡೆ ಒಳಹೋಗಿ ಎಂದು ಅರಚುತ್ತಿದ್ದ. ಕೆಲವರು ಸೀಟು ಹಿಡಿದು ಬರ್ತೀವಿ ತಡ್ಯಯ್ಯ ನಾವೇನ್ ಎಲ್ಲು ಹೋಗಲ್ಲ ಅನ್ನುತ್ತಾ ಒಳಗಡೆ ತೂರುತ್ತಿದ್ದರು. ಅಂತು ನಾನೊಂದು ಸೀಟು ಹಿಡಿದು, ಕೂತು ಸಾವರಿಸಿಕೊಂಡು ಚೀಟಿ ತಿರುಗಿಸಿದರೆ ೯೦ ಅಂತ ಬರೆದಿತ್ತು. ಅರೆ ನಾನು ಕೊಟ್ಟದ್ದು ೫೪, ಟಿಕೆಟ್ ೧೪ ಆದರೆ ೪೦ ವಾಪಸ್ ಬರಬೇಕು. ಆದರೆ ಡ್ರೈವರ್ ನಾನು ೧೦೦ ಕೊಟ್ಟೆನೆಂದು ಭಾವಿಸಿ ೯೦ ಎಂದು ಬರೆದಿದ್ದ. ನನಗೆ ವಿಚಿತ್ರವಾದ ಸಂತೋಷವಾಯಿತು ಜೊತೆಗೆ ಮನಸ್ಸು ಆಳವಾದ ಆಲೋಚನೆಯಲ್ಲಿ ಮುಳುಗಿತು. ಈಗ ಅವನಿಗೆ ೫೦ ರೂ ವಾಪಸ್ಸು ಕೊಟ್ಟು ಹೀರೋ ಆಗಲೋ ಅಥವಾ ಸುಮ್ನೆ ಜೇಬಿಗಿಳಿಸಿಕೊಂಡು ಖುಷಿಪಡಲೋ? ಏನೂ ತೋಚದಾಯಿತು. ಅಷ್ಟರಲ್ಲಿ ಸಾಮಾನ್ಯ ಪ್ರಜ್ಞೆ ಜಾಗೃತವಾಗಿ ಮಗನೆ ಅವ ನಿನಗೆ ಮೊದಲು ೯೦ ಕೊಡಲಿ ಆಮೇಲೆ ಯೋಚಿಸುವಂತೆ ಅಂದಿತು. ನನಗೂ ಅದೇ ಖರೆ ಅನಿಸಿತು. ಯಾಕೆಂದರೆ ಡ್ರೈವರ ಸಾರ್ ನೀವು ಕೊಟ್ಟಿದ್ದು ೫೪ ನೆ ನಾನು ಅವಸರದಲ್ಲಿ ೯೦ ಅಂತ ಬರೆದ್ದಿದ್ದೆ ಅಂದುಬಿಟ್ಟರೆ? ಅಲ್ಲವ ಅನಿಸಿ ನೋಡೋಣ ಅಂತ ಸುಮ್ಮನೆ ಕೂತೆ. ನನ್ನ ನಿಲ್ದಾಣಕ್ಕೂ ಹಿಂದಿನ ನಿಲ್ದಾಣದಲ್ಲೇ ಡ್ರೈವರಿನ ಹಿಂದೆ ಹೋಗಿ ನಿಂತು ಚೀಟಿ ತೋರಿಸಿದೆ ಅವ ೯೦ ರೂ ನೀಡಿದ. ನಾನು ಎಣಿಸಿಕೊಳ್ಳುತ್ತಾ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಎದುರಿಗೆ ದೊಡ್ಡದಾಗಿ ರಾರಾಜಿಸುತ್ತಿದ್ದ ೩-೪ ರಾಜಕಾರಣಿಗಳ ಕಟೌಟ್ ಕಂಡಿತು. ರಾಜಕಾರಣಿಗಳು ಬೇರೆಯವರ ಮೇಲೆ ಕೈ ಇಟ್ಟು ಎಂಜಿಲು ತಿನ್ನೋ ಕಂತ್ರಿ ನಾಯಿಗಳು ಅಂತ ಸಾರಿ ಸಾರಿ ಹೇಳುತ್ತಿದ್ದ ನನಗೆ, ನಾನು ಅವರಾಗೆ ಮಾಡ ಹೊರಟಿದೀನಲ ಅನಿಸಿಬಿಟ್ಟಿತು. ತಕ್ಷಣ ಡ್ರೈವರಿಗೆ ೫೦ ರೂ ವಾಪಸು ಮಾಡಿ ನಾನು ಕೊಟ್ಟಿದ್ದು ೫೪ ನೀವು ೪೦ ಕೊಟ್ಟರೆ ಸಾಕು ಅಂತ ಹೇಳಿ ಹಿಂತಿರುಗಿಯೂ ನೋಡದೆ ಸರ ಸರ ಇಳಿದು ಮನೆ ಕಡೆ ಹೆಜ್ಜೆ ಹಾಕಿದೆ.
ನಡೆದದ್ದನ್ನು ಹೆಂಡತಿಗೆ ಹೇಳಿದೆ. ಅವಳು ಖುಷಿಯಾಗಿ ನೈತಿಕತೆಯ ಪಾಠ ಶುರು ಮಾಡಿಬಿಟ್ಟಳು.
No comments:
Post a Comment