Pages

Wednesday, May 7, 2014

ಪಾಪ ಪ್ರಜ್ಞೆ

ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ.  ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. ಮೊದಲ ಏಳು ಭಾಗಗಳ ಕೊಂಡಿ ಕೆಳಗೆ ನೀಡಿರುವೆ.
೧. ಮೊದಲಿಗೆ "ಬೇಲಿ" : http://ittigecement.blogspot.in/2014/04/blog-post.html
೨. ನಂತರ "ದಣಪೆ" : http://dinakarmoger.blogspot.in/2014/04/blog-post_14.html
೩. ಅದಾದ ಮೇಲೆ "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
೪. ಆಮೇಲೆ "ಮಿತಿ " :http://www.bilimugilu.blogspot.in/2014/04/blog-post_24.html
೫. ಮುಂದುವರೆದು "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
೬. ಆನಂತರ "ಕದಡಿದ ಕಡಲು" :http://kanasukangalathumbaa.blogspot.in/2014/04/blog-post.html
೭. ಮತ್ತೆ "ಒಳ ಕಂಬಿ" :http://chinmaysbhat.blogspot.in/2014/04/blog-post_27.html

***********************************************************************************

ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

ನಿಮಗೆ ಗೊತ್ತಿದೆಯೆಂದು ನನಗೆ ಗೊತ್ತಿಲ್ಲ .. ಹಾಗಾಗಿ ಹೇಳುತ್ತಿದ್ದೇನೆ / ಬರೆಯುತ್ತಿದ್ದೇನೆ. 
+++++++++++++++++++++++++++++++++++++++++++++++++++++++++++++++++++++++++

ಹಾಸಿಗೆ ಮೇಲೆ ಅಡಿಯಿಂದ ಮುಡಿವರೆಗೂ ಪಾರದರ್ಶಕವಾದ ಹೊದಿಗೆಯನ್ನು ಮುಸುಕೆಳೆದು ಕೊಠಡಿಯ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದೆ. ನನ್ನವರು ಕೊಠಡಿಯ ಬಾಗಿಲ ಬಳಿ ಬಂದವರು ನನ್ನ ಕಡೆಗೊಮ್ಮೆ ದಿಟ್ಟಿಸಿ ನೋಡಿ ಅಡುಗೆಮನೆಯತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಮನೆ ಮಾಡಿದ್ದ ಸಂಶಯಗಳೆಲ್ಲ ಹೊತ್ತಿ ಉರಿದು ಪರಾಕಾಷ್ಠೆ ತಲುಪಿ ಇದೀಗ ಶಾಂತವಾಗುತ್ತಿತ್ತು. ಚಿಕ್ಕಂದಿನಲ್ಲಿ ವಠಾರದ ಮಂದಿಯೆಲ್ಲ ಸೇರಿ ನಡೆಸುತ್ತಿದ್ದ ಕಾಮದಹನದ ದೃಶ್ಯ ನೆನಪಾಗುತ್ತಿತ್ತು. ಒಂದು ಹಂತದಲ್ಲಿ ಆತ್ಮಹತ್ಯೆಗೆ (ದೇಹ ಹತ್ಯೆ! ಆತ್ಮಕ್ಕೆ ಸಾವಿಲ್ಲವೆಂಬುದು ನನ್ನ ನಂಬಿಕೆ )  ತಯಾರಾಗಿದ್ದ ನನ್ನನ್ನು ಆ ಬೆಂಕಿಯ ಜ್ವಾಲೆ ಬಲಿ ತೆಗೆದುಕೊಳ್ಳಲ್ಲಿಲ್ಲ ! ಸದ್ಯ ಬಚಾವಾದೆ. ಇಲ್ಲವಾದಲ್ಲಿ ಎಂಥ ಅನಾಹುತ ಸಂಭವಿಸಿಬಿಡುತ್ತಿತ್ತು ? ಎರಡು ವರ್ಷದ ನನ್ನ ವಿಜಿ ತಾಯಿ ಇಲ್ಲದ ತಬ್ಬಲಿಯಾಗುತ್ತಿದ್ದ. ನನ್ನ ಎಷ್ಟೊಂದು ಪ್ರೀತಿಸುವ ಇವರೋ ಇಷ್ಟು ಚಿಕ್ಕ ವಯಸ್ಸಲ್ಲಿ ನನ್ನನ್ನು ಕಳೆದುಕೊಂಡು ಹೇಗೆ ತಾನೇ ಬದುಕಿರುತ್ತಿದ್ದರು?

 ಛೆ ನಾನೆಂಥ ಪಾಪಿ! ಒಮ್ಮೆಯಾದರೂ ನನ್ನ ಗಂಡನ ಬಗ್ಗೆ ಒಳ್ಳೆಯದು ಯೋಚಿಸಲೇ ಇಲ್ಲ. ಅವರು ಹೀಗೆ ಮಾಡಿರಲಿಕ್ಕಿಲ್ಲ ಎಂದು ಒಂದು ಬಾರಿಯಾದರೂ ಅನ್ನಿಸಲೇ ಇಲ್ಲ... ನಾನಿದ್ದ ಪರಿಸ್ಥಿತಿಯೆ ಅವರದು ಕೂಡ ... ಆ ಹುಡುಗನ ಜೊತೆ ನಾನು ಎಷ್ಟು ಎಲ್ಲೆ ಮೀರಿ ನಡೆದಿದ್ದೇನೋ ಅಷ್ಟೇ ನನ್ನವರು ಮೈತ್ರಿಯ ಜೊತೆ ನಡೆದುಕೊಂಡಿದ್ದರು. ಇಲ್ಲ ಅದಕ್ಕಿಂತ ಕಡಿಮೆಯೇ... ಆ ಸಂದರ್ಭದಲ್ಲಿ ನಾನೇನು ತಪ್ಪು ಮಾಡಿಲ್ಲ ಸಹಜವಾಗೇ ವರ್ತಿಸಿದ್ದೇನೆ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡಿರಲ್ಲಿಲ್ಲವೇ? ಅದೇ ರೀತಿ ಅವರ ವಿಷಯದಲ್ಲಿ ಯಾಕೆ ನಾನು ಯೋಚಿಸದೆ ದುಡುಕಿಬಿಟ್ಟೆ? ನನ್ನ ಹಾಗೆ ಮತ್ತೊಬ್ಬರೂ ಕೂಡ ಎಂದು ತಿಳಿಯದ ಈ ನನ್ನ ಮನುಷ್ಯ ಬುದ್ದಿಗೆ ಧಿಕ್ಕಾರವಿರಲಿ.

ಕೊಠಡಿಯ ದೀಪ ಹೊತ್ತಿತು. ಕಪ್ ಅಂಡ್ ಸಾಸರ್ ಲಿ ಬೈಟು ಸ್ಟ್ರಾಂಗ್ ಕಾಫಿ ಹಿಡಿದು ನನ್ನವರು ಪಕ್ಕ ಬಂದು ಕೂತರು. ನಾನು ಬೇಕಂತಲೇ ಕಣ್ಣು ಮುಚ್ಚಿದೆ. ಅವರನ್ನು ನೋಡಲು ಧೈರ್ಯ ಸಾಕಾಗಲಿಲ್ಲ. ಕಾಫಿಯನ್ನು ಟೇಬಲ್ ಮೇಲಿಟ್ಟು ನಿಧಾನವಾಗಿ ಮುಸುಕೆಳೆದು ನಯವಾಗಿ ತಲೆ ಸವರುತ್ತಾ ಏಳು, ಕಾಫಿ ಕುಡಿ ತಲೆ ನೋವು ಸರಿಯಾಗುತ್ತೆ ಅಂದರು. ಎದ್ದು ಕೂತು ತಲೆ ತಗ್ಗಿಸಿ ಕಾಫಿ ಕಪ್ಪಿಗೆ ಕೈ ಚಾಚಿದೆ. ನನ್ನವರು ಕಾಫಿ ಕಪ್ ನೀಡುತ್ತಾ ಗಲ್ಲವನ್ನು ಮೇಲೆತ್ತಿ A LOT can happen over a cup of coffee ಅನ್ನುತ್ತಾ ತಾವು ಹೀರಲು ಶುರು ಮಾಡಿದರು. ಈಗೇಕೆ ಹೀಗೆ ಹೇಳುತ್ತಿದ್ದಾರೆ? ಇವರಿಗೆ ಎಲ್ಲ ತಿಳಿದುಬಿಟ್ಟಿತಾ? ನನ್ನ ನೀಚ ಬುದ್ದಿ ಇವರ ಅರಿವಿಗೆ ಬಂದುಬಿಟ್ಟಿತೇ ? ಹಾಗೇನಾದರೂ ಆಗಿದ್ದಲ್ಲಿ ಅವರ ಮುಂದೆ ನಾನು ತೀರ ಚಿಕ್ಕವಳಾಗಿ ಬಿಡುತ್ತೇನೆ ಅಂದುಕೊಳ್ಳುತ್ತಲೇ ಅವರ ಮುಖ ನೋಡಿದೆ. ಅವರ ಜೊತೆ ಮದುವೆಗೂ ಮುಂಚೆ ಮೊದಲ ಬಾರಿ Cafe Coffee Dayಗೆ ಹೋಗಿದ್ದು ನೆನಪಾಗಿ, ಅಂದು ಇದ್ದ ಮುಗ್ಧತೆಯೇ ಇಂದು ಅವರ ಮುಖದಲ್ಲಿ ಕಂಡು, ಕಳ್ಳರ ಮನಸ್ಸು ಹುಳ್ಳುಳ್ಳುಗೆ ಅನಿಸಿತು. 
ನನ್ನವರು ಎಂದಿನಂತೆ ಕಣ್ಣು ಮುಚ್ಚಿ ಕಪ್ಪಿನ ಆಚೀಚೆ ಉಫ್ ಉಫ್ ಎನ್ನುತ್ತಾ ಸೊರ್  ಸೊರ್ ಎಂದು ಶಬ್ದ ಮಾಡುತ್ತಾ ಕಾಫಿ ಕುಡಿಯುತ್ತಿದ್ದರು. 

ಮನೆಯಲ್ಲಿ ಮೌನ ಆವರಿಸಿತ್ತು. ಮನಸ್ಸಿನಲ್ಲಿ ನೂರಾರು ಈಟಿಗಳು ಒಟ್ಟಿಗೆ ತಿವಿದಂತೆ ಭಾಸವಾಗುತ್ತಿತ್ತು. ಕಾಫಿ ಕಪ್ಪನ್ನು ಪಕ್ಕದಲ್ಲಿಟ್ಟು ನನ್ನನ್ನು ತೊಡೆ ಮೇಲೆ ಮಲಗಿಸಿಕೊಂಡು ಏನಾಯಿತು ಚಿನ್ನಾ? ಊಟ ಕೂಡ ಮಾಡಿಲ್ಲ, ಅಮ್ಮನ ಮನೆಯಿಂದ ಪಾಪುನ ಕರೆದುಕೊಂಡು ಬಂದಿಲ್ಲ.. ಏನಾಗಿದೆ ನಿನಗೆ ಇವತ್ತು? ಯಾಕೋ ಒಂಥರಾ ಇದ್ಯಲ? ಇವರ ಪ್ರಶ್ನೆಗಳು ನನ್ನನ್ನು ವಿಚಾರಣೆಗೆ ಒಳಪಡಿಸಿದಂತೆ ಅಣಕಿಸುತ್ತಿದ್ದವು .. ಆದರೆ ಅವರು ಮಾತ್ರ ನಿರ್ವಿಕಾರವಾಗಿ, ನನ್ನ ಮೇಲೆ ಅತೀವ ಕಾಳಜಿಯಿಂದ ಸಹಜವಾಗಿಯೇ ಆ ಪ್ರಶ್ನೆಗಳನ್ನು ಕೇಳುತ್ತಿದ್ದರು.. ನ.. ನನಗೇನೂ ಆಗಿಲ್ಲ ಸ್ವಲ್ಪ ತಲೆ ನೋವಿತ್ತು ಪಾಪು ಗಲಾಟೆಯಿಂದ ನಿನ್ನೆ ರಾತ್ರಿ ನಿದ್ದೆ ಮಾಡಿರಲ್ಲಿಲ್ಲವಲ್ಲ ಅದಕ್ಕೆ ನಿದ್ದೆ ಹತ್ತಿ ಬಿಟ್ಟಿತ್ತು .. ಬನ್ನಿ ಊಟ ಮಾಡೋಣ ಎಂದು ಎದ್ದು ಹೋದೆ. ನನ್ನನ್ನು ನನಗಿಂತಲೂ ಹೆಚ್ಚಾಗಿ ಬಲ್ಲ ಇವರು, ಹೆಚ್ಚು ಕೆದುಕದೆ, ಆಯಿತು ನಡೆ ಊಟ ಮಾಡುವ.. ಆಮೇಲೆ ಒಂದು ರೌಂಡ್ ವಾಕಿಂಗ್ ಹೋಗಿ ಪಾಪುನ ಕರೆದುಕೊಂಡು ಬರುವ ಎಂದು ಅಡುಗೆ ಮನೆ ಕಡೆ ನನ್ನ ಹಿಂದೆ ಬಂದರು. 

ಮಧ್ಯಾನ್ಹ  ಆಫೀಸಿನಲ್ಲಿ ಊಟಕ್ಕೆ ಹೊರಗೆ ಹೋಗೋಣ ಎಂದಾಗ ರಾತ್ರಿ ಹೋಗೋಣ ಎಂದಿದ್ದರಿಂದ ಇವರು ಕ್ಯಾಂಟೀನ್ ನಲ್ಲಿ ೨ ಚಪಾತಿ ತಿಂದು ಮಧ್ಯಾನ್ಹದ ಊಟ ಮುಗಿಸಿದ್ದರಂತೆ.. ಮನೆಯಲ್ಲಿ ನಾನು ಬೆಳಗ್ಗೆ ಮಾಡಿದ್ದ ಸಾರನ್ನೇ ಬಹಳ ರುಚಿಯಾಗಿದೆಯೆಂದು ಹೊಗಳುತ್ತಿದ್ದರು. ನನ್ನನ್ನು ಪಾಪ ಪ್ರಜ್ಞೆ ಅತಿಯಾಗಿ ಕಾಡುತ್ತಿತ್ತು. ನನ್ನ ಬಗ್ಗೆ ಅವರು ಒಂದೊಂದು ಮಾತು ಆಡಿದಾಗಲು ಅದು ಮತ್ತಷ್ಟು ಹೆಚ್ಚುತ್ತಿತ್ತು. ಇವರಿಗೆ ಎಲ್ಲವನ್ನು ಹೇಳಿಬಿಡಬೇಕು, ಆಗಲೇ ನನಗೆ ಸಮಾಧಾನ. ಆದರೆ  ಎಲ್ಲಿಂದ ಶುರು ಮಾಡುವುದು... ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವನು ನನ್ನನ್ನು ನಾಚಿಸುತ್ತಿದ್ದುದ್ದ , ಪ್ರವಾಸ ಹೋದಾಗ ಬಸ್ಸು ಮಿಸ್ಸಾಗಿ ಒಟ್ಟಿಗೆ ರಾತ್ರಿ ಪ್ರಯಾಣ ಮಾಡಿದ್ದ ಅಥವಾ ಒಮ್ಮೊಮ್ಮೆ ನಾನು ನಾಚಿ ನೀರಾದಾಗ ಮನಸ್ಸು ಅವನನ್ನು ಹಂಬಲಿಸುತ್ತಿದ್ದುದ , ಅಥವಾ ಮೊನ್ನೆ ಅವನ ಮನೆಗೆ ಹೋದಾಗ ನಡೆದ ಘಟನೆಯ ?? ಎಲ್ಲಿಂದ ಅಂತ ಹೇಳಲಿ ? ಸಿಡಿಲು ಗುಡುಗು ಮಿಂಚಿಗೆ ಭಯ ಪಡುತ್ತಿದ್ದ ನನಗೆ ಮಳೆ ಬಂದಾಗ ಅಲ್ಲೇ ಅವರ ಮನೆಯಲ್ಲೇ ಇರು ಎಂದು ಇವರು ಹೇಳಿದಾಗ, ಅವರಿಗಿದ್ದ ಆ ನಂಬಿಕೆ ಇಂದು ಬೆಳಗ್ಗೆ ಅವರು ಮೈತ್ರಿ ಜೊತೆ ಇದ್ದಾಗ ನನಗ್ಯಾಕೆ ಬರಲ್ಲಿಲ್ಲ.. ಥೂ ನನ್ನ ಸಂಕುಚಿತ ಮನಸ್ಸೇ :( 

ಗೋಮ ಹಚ್ಚಿ ಒರೆಸಿ , ಮನೆಗೆ ಬೇಗ ಹಾಕಿ ಗೇಟಿನ ಬಳಿ ನಿಂತಿದ್ದ ಇವರ ಹತ್ತಿರ ಹೋಗಿ ನಡೆಯಿರಿ ಹೋಗೋಣ ಎಂದೆ. ಇವರು ನನ್ನ ಕೈ ಹಿಡಿದು ಹೆಜ್ಜೆ ಹಾಕಿದರು. ಐದ್ಹತ್ತು ನಿಮಿಷ ನಾನು ಏನಾದರೂ ಹೇಳುವಿನೇನೋ? ಎಂದು ಕಾದಿರಬೇಕು. ನಾನು ಏನೂ ಮಾತಾಡದಿದ್ದಾಗ ಎಂದಿನಂತೆ ಇವರು ಲೋಕಾಭಿರಾಮ ಶುರು ಮಾಡಿದರು. ಇವತ್ತು ದಿನಪತ್ರಿಕೆ ಓದುದ್ಯ? ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗಿದ್ದ ನನಗೆ ದಿನಪತ್ರಿಕೆ ಓದುವುದಕ್ಕೆ ಸಮಯವಾದರೂ ಎಲ್ಲಿತ್ತು? ಇಲ್ಲ ಓದಿಲ್ಲ ಎಂದು ತಲೆಯಾಡಿಸಿದೆ. ಸರಿ ಬಿಡು ಓದುವುದಕ್ಕೆ ಅದರಲ್ಲಾದರೂ ಏನಿರತ್ತೆ? ಬರೀ ಕೊಲೆ ಅತ್ಯಾಚಾರ ಮೋಸ ವಂಚನೆ ದಗಲ್ ಬಾಜಿ ಇಂತದೆ ಸುದ್ದಿಗಳು. ಅದನ್ನು ಓದಿದರೆಷ್ಟು ಬಿಟ್ಟರೆಷ್ಟು ?? ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ೧೬ ರಿಂದ ೨೦  ವಯಸ್ಸಿನವರು. ಈಗಿನ ಜನಾಂಗಕ್ಕೆ ಪಾಪ ಪ್ರಜ್ಞೆ ಅನ್ನೋದೇ ಇಲ್ಲ. ನೈತಿಕತೆ ಎಂದರೇನು ಅನ್ನುವ ಕಾಲ. ಧರ್ಮಾಧರ್ಮಗಳ ವಿವೇಚನೆ ಇಲ್ಲದೆ ಜನರು ಬದುಕುತ್ತಿದ್ದಾರೆ. ನ್ಯಾಯ ನೀತಿ ಪ್ರಾಮಾಣಿಕತೆಗಳು ಮಾಯವಾಗಿವೆ. ಹಾಗೆ ನೋಡಿದರೆ ನಮ್ಗುಳಲ್ಲೂ ಪಾಪ ಪುಣ್ಯಗಳ ಭಾವನೆಯಲ್ಲಿ ತೀವ್ರತೆ ಕಡಿಮೆಯಾಗಿದೆ. ................ .................... ..............
ಇವರ ಮಾತಿಗೆ ತಡೆಯೇ ಇಲ್ಲ ನನಗೆ ತಲೆ ಚಿಟ್ಟು ಹಿಡಿದಂತಾಗಿ, ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಸುತ್ತಿ ಬಳಸಿ ನನ್ನ ನೋಯಿಸಬೇಡಿ ಅಂತ ಹೇಳಬೇಕೆನಿಸಿತು. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ಕೊಂಡ್ರನ್ತೆ .. ಹಾಗಾಗಿತ್ತು ನನಗೆ. ಅವರು ಯಾವತ್ತು ನನಗೆ ನೋವಾಗುವ ರೀತಿ ಮಾತಾಡಿಲ್ಲ.. ಇದೆಲ್ಲ ನನ್ನನ್ನು ಕಾಡುತ್ತಿರುವ ಪಾಪ ಪ್ರಜ್ಞೆ.

ಅಮ್ಮನ ಮನೆ ತಲುಪಿದಾಗ ಗಂಟೆ ಹನ್ನೊಂದಾಗಿತ್ತು. ವಿಜಿ ಆಗಲೇ ಮಲಗಿಯಾಗಿತ್ತು. ಇಲ್ಲೇ ಮಲಗಿರಲಿ ಪರವಾಗಿಲ್ಲ ಅವನನ್ನು ನಾಳೆ ಕರೆದುಕೊಂಡಿ ಹೋಗಿ ಅಂದರು ಅಮ್ಮ. ಅಪ್ಪ ಬಂದು ಏನು ಅಳಿಯಂದಿರೆ, ಹೆಂಡತಿಯನ್ನು ಕೆಲಸಕ್ಕೆ ಹಚ್ಚಿದಿರ.. ಇನ್ನು ಮುಂದೆ ದುಡಿಮೆ ಜೋರು ಅಂತ ನಕ್ಕರು. ಎರಡು ನಿಮಿಷ ಕ್ಷೇಮ ಸಮಾಚಾರ ವಿಚಾರಿಸಿ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದೆವು. ಮನೆ ಕಡೆ ಬರುವಾಗಲೂ ನಾನು ಹೆಚ್ಚು ಮಾತಾಡಲ್ಲಿಲ್ಲ.. ಅವರೇ ಆಫೀಸಿನ ಕೆಲ ವಿಚಾರಗಳ ಸೂಕ್ಷ್ಮತೆಯನ್ನು ನನಗೆ ವಿವರಿಸುತ್ತಿದ್ದರು. ಆದರೆ ಮನಸ್ಸು ಮಾತ್ರ ನನ್ನ ತಪ್ಪಿನ ಭಿನ್ನಹಕ್ಕೆ ಹಾತೊರೆಯುತ್ತಿತ್ತು. ಒಮ್ಮೆಲೆಗೆ ಸಂಪೂರ್ಣ ತಪ್ಪು ನನ್ನದೇ ಎಂದು ಒಪ್ಪಿಕೊಳ್ಳಲು ಅಹಂಕಾರ ಅಡ್ಡ ಬಂದಿತ್ತು. ಪಶ್ಚಾತ್ತಾಪಪಟ್ಟು ಪಾಪ ಪ್ರಜ್ಞೆಯನ್ನು ಹೋಗಲಾಡಿಸಿಕೊಳ್ಳಲು ಚಡಪಡಿಸುತ್ತಿದ್ದ ಮನಸ್ಸು ಈಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡಿದಿತ್ತು .. ಇವರೇನು ದೇವರಿಗಿಂತ ಮಿಗಿಲೇ ? ಇಷ್ಟಾದರೂ ನಾನು ಮಾಡಿರುವ ತಪ್ಪಾದರೂ ಏನು ?? ಮನಸ್ಸೆಂಬ ಮರ್ಕಟ ಅಹಂಕಾರದ ಬಲೆಯಲ್ಲಿ ಸಿಕ್ಕಿ ನರಳುತ್ತಿತ್ತು.
*******

Friday, April 18, 2014

ಚುನಾವಣಾ Mix

ಇಲ್ಲಿ ಮುಗುದಿದೆ ೨೦೧೪ರ ಲೋಕಸಭಾ Election
ಕೆಲವೆಡೆ ಮತದಾರಿರಿಗಂತೂ ಭಾರಿ Collection!
ಮತದಾರ ಮಾಡಿರುವನೆ ಕ್ರಿಮಿನಲ್ ಅಭ್ಯರ್ಥಿಗಳ Rejection?
Right Candidate ಆದರೆ ಸಾಕು Selection!
ಆಗಬೇಕಿದೆ ಮತದಾರ-ಅಭ್ಯರ್ಥಿಗೆ ಒಳ್ಳೆ Connection
ನಿಜವಾಗುವುದೇ ಮೀಡಿಯಾಗಳ exit poll Projection?

***

ನವ ಮತದಾರ ಬಂದಿದ್ದ ಹಾಕಲು ಓಟ -
ನಿಲ್ಲಿಸಿ ತನ್ನ ಬೇಸಿಗೆ ರಜೆಯ ಆಟೋಟ
ಮತದಾನಕ್ಕು ಮುನ್ನ ಅಭ್ಯರ್ಥಿ ಕೊಟ್ಟಿದ್ದ ನೋಟು ಖೋಟ -
ಬೇಸತ್ತ ನವ ಮತದಾರ ಒತ್ತಿದ್ದ ನೋಟ

***

ನರೇಂದ್ರ ಮೋದಿ ವಿವಾಹಿತ -
ಮಾತ್ರಕ್ಕೆ ಕಾಣಿಸಿಕೊಳ್ಳಬೇಕೆ? ಪತ್ನಿ ಸಹಿತ
ಚಿಕ್ಕ ವಯಸ್ಸಲ್ಲಿ ಮದುವೆಯಾದದ್ದು ಆ ಕಾಲಕ್ಕೆ ವಿಹಿತ
ಆದರೆ ಹೆಂಡತಿಯ ಜೊತೆ ಸಂಸಾರ ಬಿಟ್ಟಿದ್ದು ಅಹಿತ
ಇದೇ ವಿಷಯವಾಗಿ ವಿರೋಧಿಗಳ ಮಾತು ಆಗಲಿ ಮಿತ
ಏನೇ ಆದರೂ ಮೋದಿಗೆ ನಮ್ಮ ಮತ
ಪ್ರಾರ್ಥಿಸೋಣ ನಾವು -
ಪ್ರಧಾನಿಯಾಗುವ ವೇಳೆಗಾದರೂ ಅವರು ಬರಲಿ ಕುಟುಂಬ ಸಮೇತ

***

ಮೋದಿ ಎನ್ಕೌಂಟರ್ CM -
ಅಂದ ಚಿದಂಬರಂ ಮೂರ್ಖ FM
ಮೋದಿ  ನರಹಂತಕ CM -
ಅಂದ ಸಿದ್ದು ಪೆಕ್ರು DCM (ದರಿದ್ರದ್ CM)
ಮೋದಿ ವಿನಾಶದ CM -
ಅಂದ ಉಮಾಭಾರತಿ ಮಧ್ಯಪ್ರದೇಶದ ಮಾಜಿ CM
ಮೋದಿ ಬರೀ ಬ್ರಾಂಡ್ CM -
ಅಂದ ಜಯಲಲಿತಾ ತಮಿಳುನಾಡು CM
ಮೋದಿ ಖಾತೆ ತೆರೆಯದ CM -
ಅಂದ ಚಾಂಡಿ ಕೇರಳದ CM
ಪಂಚ್: ಮುಚ್ಕೊಂಡಿರೋನ್ ಒಬ್ನೆ - ನಮ್ ದೇಶದ್ PM

***

Tuesday, January 7, 2014

ಜೋಚುಟುಕುಗಳು - ೫

ಬಿಜೆಪಿ-ಕೆಜೆಪಿ

ಬಿಜೆಪಿಯಲ್ಲಿ ಕೆಜೆಪಿ ವಿಲೀನ
ಮಾಡಿಸುವುದರಲ್ಲಿ ನಾಯಕರು ತಲ್ಲೀನ
ಕೇಳಿದರೆ -
ನೀವು ಮಾಡುತ್ತಿರುವುದು ಸರೀನಾ?
ಆಗುವುದಿಲ್ಲವೇ ರಾಜ್ಯ ಬಿಜೆಪಿ ಮತ್ತೆ ಮಲಿನ?
ಉತ್ತರಿಸುವರು -
ತಡೆದು ನೋಡಿ ಸ್ವಲ್ಪ ದಿನ
ಬಿಜೆಪಿ ಕಡೆ ವಾಲುವುದು ಜನರ ಮನ
ಪಂಚ್: ಹೀಗೆ ಆದ್ರೆ ರಾಜ್ಯ ಬಿಜೆಪಿ ಆಗುವುದು ಪಂಚಭೂತಗಳಲ್ಲಿ ಲೀನ!!

ಸಂಪುಟ ವಿಸ್ತರಣೆ 

ನಡೆದಿದೆ ಸದ್ದಿಲ್ಲದೇ ರಾಜ್ಯ ಸಂಪುಟದ ವಿಸ್ತರಣೆ
ಡಿಕೆಶಿಗೆ ರೋಷನ್ ಬೇಗಿಗೆ ಹಾಕಿದಾರೆ ಮಣೆ
ಸ್ವೀಕರಿಸಿದ್ದಾರೆ ಪ್ರಮಾಣ, ಮಾಡಿ ದೇವರ ಮೇಲೆ ಆಣೆ
ಡಿಕೆಶಿಗೆ ಇತ್ತೇನೋ ಸೂತಕ ನಾ ಕಾಣೆ
ಪಂಚ್:ಏನೂ ಮಾಡಲಾಗದ ಸಿದ್ದು ಚಚ್ಕೊತಿದಾರೆ ಹಣೆ !!
(ಡಿಕೆಶಿಗೆ ಪಿತೃವಿಯೋಗ ಎಂಬ ಸುದ್ದಿ ಹಿಂದಿನ ದಿನಪತ್ರಿಕೆಯಲ್ಲಿ ಬಂದಿತ್ತು! ಒಂದೋ ಸುದ್ದಿ ಸುಳ್ಳಾಗಿರಬೇಕು ಅಥವಾ ..... ನೀವೇ ಊಹಿಸಿಕೊಳ್ಳಿ! )
*******

Saturday, January 4, 2014

ಆಮ್ ಆದ್ಮಿಯ ಕೇಜ್ರೀ


ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಚುನಾವಣೆಗೂ ಮುನ್ನ 'ಕೈ' ಪಕ್ಷ ಭ್ರಷ್ಟ
ಚುನಾವಣೆ ನಂತರ 'ಕೈ'ಹಿಡಿದ ದುಷ್ಟ !

ಚುನಾವಣೆಗೂ ಮುನ್ನ 'ಶೀಲ' ಮೇಲಿಟ್ಟಿದ್ದ ಒಂದು ಅಕ್ಷಿ
ಚುನಾವಣೆ ನಂತರ ಕೇಳುವನು 'ಒದಗಿಸಿ ದಾಖಲೆ, ಸಾಕ್ಷಿ!

ಚುನಾವಣೆಗೂ ಮುನ್ನ ಸರ್ಕಾರಿ ಬಂಗಲೆ ಭದ್ರತೆಯ ನಿರಾಕರಣೆ
ಚುನಾವಣೆ ನಂತರ ಬೇಕಿವನಿಗೆ ಮನೆ, ಇರಬೇಕು ಐದು ಕೋಣೆ!

ಕುಟುಂಬವೊಂದಕ್ಕೆ ೭೦೦ ಲೀಟರ್ ನೀರು ಸಾಕೆ?
ಇದಕಾಗಿ ಅವಿಭಕ್ತ ಕುಟುಂಬ ಬಿಡಿಯಾಗಬೇಕೆ ?
ಅಥವಾ 'ಒಂದೇ' ಮನೆಗೆ ಹತ್ತಾರು ಮೀಟರ್ ಅಳವಡಿಸಿಕೊಳ್ಳಬೇಕೇ?!

ಶೇಕಡ ೫೦ರಷ್ಟು ಕಡಿತ ವಿದ್ಯುತ್ ದರದಲಿ
ಕಮಾಲೇನು ನಡೆಸಿಲ್ಲ, ಜನ ಅರ್ಥ ಮಾಡಿಕೊಳ್ಳಲಿ
ಎಷ್ಟೋ ವರ್ಷದಿಂದಿದೆ ಇನ್ನು ಕಡಿಮೆ ದರ ಗೋವಾ ರಾಜ್ಯದಲಿ !

ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಪಂಚ್: ಕಾಂಗ್ರೆಸಿನ ಕುತಂತ್ರ ರಾಜಕೀಯಕ್ಕೆ ಸಾಕ್ಷಿ, ಆಮ್ ಆದ್ಮಿ ಪಕ್ಷ
ನಡೆಯೋಲ್ಲ ಇವರ ಆಟ ಕಳೆದರೆ ಹತ್ತು ಪಕ್ಷ (೧೦ ಪಕ್ಷ = ೫ ತಿಂಗಳು)
ಚುನಾಯಿಸಿ ನೀವು ಭಾರತೀಯ ಜನತಾ ಪಕ್ಷ !
*******

Friday, January 3, 2014

ನನ್ನ ಪ್ರಚಲಿತ!


ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು

ಕೆಲಸವಿಲ್ಲ ಕಾರ್ಯವಿಲ್ಲ
ಹೊರ ಹೋಗಲು ಮನಸಿಲ್ಲ
ದಿನಪತ್ರಿಕೆ ಓದೋದು ಮುಗಿಯಲ್ಲ
ಟೀವಿ ನೋಡೋದು ನಿಲ್ಲಲ್ಲ

ಊಟಕ್ಕೇನು ಚಿಂತೆ ಇಲ್ಲ
ನಿದ್ದೇಗೇನೂ ಬರ ಇಲ್ಲ
ಕಾಫಿಗಂತೂ ತಕರಾರ್ ಇಲ್ಲ
ಚಾಟ್ಸ್ ಗಳು ಏನ್ ಕಮ್ಮಿ ಇಲ್ಲ

ಪೂಜೆ ಇಲ್ಲ ಪುರಸ್ಕಾರ ಇಲ್ಲ
ದೇವರಿಲ್ಲ ಬ್ರಾಹ್ಮಣರಿಲ್ಲ
ಮಠ ಮಾನ್ಯದ್ ದಿಕ್ಕು ತೋಚ್ತಿಲ್ಲ
ಯಾಕೋ ಜೀವನ ಹಿಂಗಾಯ್ತಲ್ಲ

ಮಾತು ಬೇಡ ಕಥೆಯೂ ಬೇಡ
ಮೊಬೈಲು ಜಾಸ್ತಿ ನೋಡುದು ಬೇಡ
ಹೊರಜಗತ್ತಿನ ಅರಿವು ಬೇಡ
ದಿನದಿಂದ ದಿನಕ್ಕೆ ಆಗು ಮೂಢ

ಅನಿಸಿಕೆಗಳಿಗೆ ಬೆಲೆ ಇಲ್ಲ
ವಿಚಾರಗಳಂತೂ ತಿಳಿದೇ ಇಲ್ಲ
ಆಂಗ್ಲವಂತೂ ಬರೋದೇ ಇಲ್ಲ
ಹೇಳಿದ್ ಯಾವ್ದು ನೆನಪೇ ಇರೋಲ್ಲ

ಮಾತಾಡಿದರೆ ನೂರು ತಪ್ಪು
ಆಡದಿದ್ದರೆ ಒಂದೇ ತಪ್ಪು
ಹೇಳಿದ್ದೆಲ್ಲಾ ನೀನು ಒಪ್ಪು
ಇಲ್ದೆ ಇದ್ರೆ ಆಗು ಬೆಪ್ಪು

ಹೇಳುವುದನ್ನು ಸರಿಯಾಗಿ ಕಲುತ್ಕೊ
ಕೇಳಿದ್ದನ್ನು ಸರಿಯಾಗಿ ತಿಳುದ್ಕೊ
ಮಾಡುವುದನ್ನು ಎಲ್ರಿಗೂ ಹೇಳ್ಕೋ
ಮನ್ಸಿನ್ ಮಾತು ಒಳಗೇ ಇಟ್ಕೋ

ಬಿಟ್ಟುಬಿಡು ಎಲ್ಲಾ ಹಠ
ಇಟ್ಕೋಬೇಡ ಯಾವುದೇ ಚಟ
ಕೆಲ್ಸಾ ಮಾಡು ಪಟ ಪಟ
ಅದೇ ಜೀವನದ ಪಾಠ

ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು