ಮಡಿ ಪದವನ್ನು ಇ೦ದು ತಪ್ಪಾಗಿ ಅರ್ಥೈಸಿಕೊಂಡಿರುವವರೆ ಹೆಚ್ಚು. ಬಹಳ ಜನ ಮಡಿಯಂದರೆ ತಿಳಿದುಕೊಂಡಿರುವುದು ತಲೆ ಮೇಲಿಂದ ಮೂರು ಬಿಂದಿಗೆ ತಣ್ಣೀರು ಸುರಿದುಕೊಳ್ಳುವುದು ಅಥವ ರೇಶಿಮೆ ಮಗುಟ/ಸೀರೆ ಉಡುವುದು ಅಥವ ಒದ್ದೆಯಾದ, ಅತಿ ಕೊಳೆಯಾದ, ಸಣ್ಣ ಪಂಚೆ (ಮಡಿ ಪಂಚೆಯಂತಲೇ ಇದಕ್ಕೆ ಹೆಸರು) ಉಡುವುದು. ಕೆಲವರ ಪ್ರಕಾರ ಕೊಳೆ ಜಾಸ್ತಿಯಿದ್ದಷ್ಟು ಮಡಿ ಜಾಸ್ತಿ. ಮಡಿಯನ್ನು ಹೀಗೆಲ್ಲಾ ಸಾಧಿಸುವುದಾಗಿದ್ದರೆ, ಕೇವಲ ಮಡಿಯಿಂದಲೇ ದೊರಕುವ ಮೋಕ್ಷವನ್ನು ಎಲ್ಲರೂ ತಮ್ಮದಾಗಿಸಿಕೊಳ್ಳುತ್ತಿದ್ದರು. ಮಡಿ ಶಬ್ದದ ಬಳಕೆಯ ಕೆಲವು ವಾಕ್ಯಗಳು ಹೀಗಿವೆ ೧. ಅವರು ತುಂಬಾ ಮಡಿ ಮಾಡುತ್ತಾರೆ ೨. ಆಕೆ ಮಡಿ ಹೆಂಗಸು ೩. ಆ ಮಠದಲ್ಲಿ ಮಡಿ ಮೈಲಿಗೆ ಸರಿ ಇಲ್ಲವಂತೆ. ಹೀಗೆ ಮಡಿ ಶಬ್ದವನ್ನು ದೇಹದ ಜೊತೆ ಬಳಸಿ ಮಾತಾಡುವವರನ್ನು ಕಂಡಾಗ ನಗು ಬರುತ್ತದೆ.
ಮಡಿಯನ್ನುವುದು ಮನಸ್ಸಿಗೆ ಸಂಬಧಪಟ್ಟಿದ್ದು. ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳುವುದೇ ಮಡಿ. ಅಂದರೆ ಸದಾ ನಮ್ಮ ಮನಸ್ಸನ್ನು ಭಗವಂತನಲ್ಲಿ ಕೇಂದ್ರೀಕರಿಸುವುದು. ಮನಸ್ಸಿನಲ್ಲಿ ಬೇರೇನನ್ನೂ ಆಲೋಚಿಸದೆ ಸರ್ವೋತ್ತಮನಾದ ಭಗವಂತನನ್ನು ಧ್ಯಾನಿಸುವುದೇ ಮಡಿ. ಮನಸ್ಸಿನಲ್ಲಿ ನೂರೆಂಟು ಮತ್ಸರ ತುಂಬಿಕೊಂಡು ಮೂರಲ್ಲ ಮೂವತ್ತು ಬಿಂದಿಗೆ ನೀರು ಸುರಿದುಕೊಂಡರೂ ಅಥವ ಉದ್ದ ಕುಂಕುಮ ಧರಿಸಿ ಕಚ್ಚೆ ಹಾಕಿ ರೇಶಿಮೆ ಸೀರೆ ಉಟ್ಟರೂ ಮಡಿ ಆಗೊಲ್ಲ. ದಾಸರೆ ಹೇಳಿರುವಂತೆ ಮನ ಶುದ್ದಿ ಇಲ್ಲದವಗೆ ಮಂತ್ರದ ಫಲವೇನು ತನು ಶುದ್ದಿ ಇಲ್ಲದವಗೆ ತೀರ್ಥದ ಫಲವೇನು? ದೇವರ ಮನೆಯಲ್ಲಿ ಕುಳಿತು ಯಾವುದೋ ಲೌಕಿಕ ವಿಚಾರ ಚಿಂತಿಸುತ್ತಾ ಸಹಸ್ರನಾಮ ಪಠಿಸಿದರೆ ಏನೂ ಫಲವಿಲ್ಲ. ಸಮಯ ವ್ಯರ್ಥವಷ್ಟೆ.
ಎಲ್ಲೇ ಇರು ಹೇಗೆ ಇರು ಸದಾ ಮನಸ್ಸಿನಲ್ಲಿ ಭಗವಂತನನ್ನು ತುಂಬಿಕೊಂಡಿರು. ಆಗಲೇ ನೀನು ಮಡಿ.