Pages

Saturday, January 10, 2015

ಕೊರೆತ

[ಮೊನ್ನೆ ಊರಿನಲ್ಲಿದ್ದಾಗ ಓದಲು ಬಂದವನು ಅಲ್ಲೇ ನೆಲೆಯೂರಿದ್ದ, ಹಳೆಯ ಗೆಳೆಯ ಬಹಳ ದಿನಗಳಾದ ಮೇಲೆ ಸಿಕ್ಕಿದ್ದ. ಕೊರೆಸಿಕೊಳ್ಳೋ ಆಸಾಮಿ ಸಿಕ್ಕಿದನೆಂದು ಅನಿಸಿತೇನೊ ಅವನಿಗೆ. ನಾನು ಬಕ್ರಾ ಆಗಿದ್ದೆ. ವಿಧಿ ಇಲ್ಲ, ತಪ್ಪಿಸಿಕೊಳ್ಳೋಕು ಆಗಲ್ಲಿಲ್ಲ. ಅದೇ ಕಥೆಯನ್ನು ಹಾಗೆ ಭಟ್ಟಿ ಇಳಿಸಿದರೆ ನಾನು ಕೂಡ ಕೊರೆಯುವ ಆಸಾಮಿಯೆಂದು ನೀವು ತೀರ್ಮಾನಿಸಿಬಿಡುತ್ತೀರಾ ಅಂತ ೧೮-೨೦ ಸಾಲಿನಲ್ಲಿ ಚುಟುಕಾಗಿ ಕುಟುಕಿದ್ದೇನೆ. ಓದಿ , ಓದಿಸಿ ರಿವ್ಯೂಸ್ ಕಳಿಸಿ].
 

ಜೀವನದ ಆಸೆ ಆಕಾಂಕ್ಷೆ ಬದಿಗಿಟ್ಟು ಬಂದೆ ನಾನು ಇಲ್ಲಿ

ಮನೆ ಮಠ ಮರೆತಿದ್ದೆ ಕೆಲಸದ ತಲ್ಲೀನತೆಯಲ್ಲಿ

ಅಕಸ್ಮಾತಾಗಿ ಕಣ್ಣಿಗೆ ಬಿದ್ದಳು ಅಂದು ಕ್ಯಾಂಟೀನಿನಲ್ಲಿ

ಶುರುವಾಯಿತು ನಮ್ಮ ಪ್ರೇಮ ಮೊದಲ ನೋಟದಲ್ಲಿ
 

ಕಾಲ ಕಳೆಯಿತು ಮೂವಿ ಶಾಪಿಂಗ್ ಮಾಲಿನಲ್ಲಿ

ಆ ಹೊತ್ತಿಗೆ ವಿಚಾರ ಬಯಲಾಗಿತ್ತು ಮನೆಯಲ್ಲಿ

 
ಜಾತಿ ಜಾತಕ ಬಹಳ ಮುಖ್ಯವಾಯಿತಲ್ಲಿ

ಎರಡು ಸೇರಿತ್ತು ನನ್ನ ಅದೃಷ್ಟದ ಪಾಲಿನಲ್ಲಿ

ಮದುವೆ ಆಗೇ ಹೋಯಿತು ಮಾಘ ಮಾಸದಲ್ಲಿ

ಹನಿಮೂನ್ ಮುಗಿಯಿತು ಮಲೇಷ್ಯಾ ಪ್ರವಾಸದಲ್ಲಿ

೨ ವರ್ಷ ಕಳೆಯಿತು ಒಂದೇ ಘಳಿಗೆಯಲ್ಲಿ

ಇದ್ದಕ್ಕಿದ್ದಂತೆ ಬಿದ್ದಳು ಅಂದು ತಲೆ ಸುತ್ತಿನಲ್ಲಿ

ಅವಳಿಗೆ ಬೇಕಿರಲ್ಲಿಲ್ಲವೇನೋ ಇಷ್ಟು ಬೇಗ ಮತ್ತೊಂದು ಜೀವ ಸಂಸಾರದಲ್ಲಿ

ಅಂತೂ ಹೋದಳು ತವರಿಗೆ ಹಸಿ ಕೋಪದಲ್ಲಿ

ಅಂದಿನಿಂದ ಶುರುವಾಯಿತು ಜಗಳ ಪ್ರತಿನಿತ್ಯದಲ್ಲಿ

ಮಾತಾಯಿತು ಮಗು ತೆಗೆಸುವ ವಿಚಾರದಲ್ಲಿ

ನಡೆದೇಬಿಟ್ಟರು ಆಸ್ಪತ್ರೆಗೆ ಒಂದು (ಅ)ಶುಭ ಘಳಿಗೆಯಲ್ಲಿ

ಕ್ಯಾಕರಿಸಿ ಉಗಿದು ಕಳಿಸಿದರು ಆಸ್ಪತ್ರೆಯಲ್ಲಿ

ಮುಖ ಸಿಂಡರಿಸಿಕೊಂಡು ಬಂದರು ಬರಿಗೈಯಲ್ಲಿ

ಮತ್ತೆ ನಾನು ಬ್ಯುಸಿಯಾದೆ ಕೆಲಸ ಕಾರ್ಯಗಳಲ್ಲಿ

[ಕೊರೆತ ಸಾಕು, ಹೇಳು ನಿನ್ನ ಸಮಸ್ಯೆ ಏನು?]

ಏನಂತ ಹೇಳಲಿ,

ವಾರವಾಯಿತು ಮುಖ ನೋಡಿ, ಮಾಡಿಲ್ಲ ಅವಳು ಫೋನು

ಎಷ್ಟು ಅಹಂಕಾರ, ಮಾತಾಡೋಲ್ಲ ಅಲ್ಲಿ ಹೋದರೂ ನಾನು

ಪ್ರೀತಿ ವಿರಮಿಸಿದೆ, ವಿಶ್ವಾಸ ಕಳೆದಿದೆ, ನಂಬಿಕೆ ಮರೆಯಾಗಿದೆ

ಅಹಂ ಬೆಳೆದಿದೆ, ಬೆಳೆಯುತ್ತಿದೆ, ಮೆರೆಯುತ್ತಿದೆ.

[ನಿನ್ನ ರಾಶಿ ನಕ್ಷತ್ರ ಯಾವುದು? ನಾನು ವಿಚಾರಿಸಿದೆ

ತಿಳಿದ ಮೇಲೆ ಮತ್ತೆ ಹೇಳಿದೆ

ಹೌದಪ್ಪ, ಇನ್ಮೇಲ್ ಹೀಗೆ, ನಿಂಗೆ ಸಾಡೇ ಸಾತಿ ಶುರುವಾಗಿದೆ]

Wednesday, January 7, 2015

ಹೊಳೆತ - ಮರೆತ

ಭಾನುವಾರ, ೪/೧/೨೦೧೫
ಬರೆಯಲು ಕೂತರೆ ಏನೂ ತೋಚದು
ತಲೆಯಲಿ ಎಲ್ಲೋ ಹಾಗೆ ಉಳಿವುದು ||

ಕೂತರೆ ನಿಂತರೆ ಅದೇ ಆಲೋಚನೆ
ಮಲಗಿದರಂತೂ ಬಿಡದೀ ಯಾತನೆ

ಹಕ್ಕಿಯ ಗಾನಕೆ ಹೊಳೆಯಿತು ಘಕ್ಕನೆ
ಹಿಡಿದೆ ಪೆನ್ನು ಬರೆಯಲು ಥಟ್ಟನೆ

ಖಾಲಿ ಶೀಶಾ ಕೂಗಿದ ಆಗಲೇ
ಬರೆವುದು ಮರೆತೇ ಹೋಯಿತು ಒಮ್ಮೆಲೆ

ಮೌನ ಬಯಸಿ ಪಾರ್ಕಿಗೆ ಹೋದರೆ
ಆಗುವುದು ಪ್ರೇಮಿಗೆ ಬಹಳ ತೊಂದರೆ

ಮನೆಯಲಿ ರಾತ್ರಿ ನಿಶ್ಯಬ್ದದ ಕೋಣೆ
ಆದರೆ ಮನಸ್ಸೆಲ್ಹೋಯ್ತೋ ನಾ ಕಾಣೆ

ಏಕಾಂತದಲ್ಲೂ ಇಲ್ಲ ನೆಮ್ಮದಿ
ಆಗಿದೆ ಮನಸಿಗೆ ನೋವೇ ಇಮ್ಮಡಿ

ಕನವರಿಕೆಯಲೂ ಅದರದೇ ಸದ್ದು
ಕನಸಲಿ ಬೆಚ್ಚಿ ಕೂರುವೆ ಎದ್ದು

ದಿನ ಕಳೆವುದು ಹೀಗೆ ಸುಮ್ಮನೆ
ಬೆಳಗಾದರೆ ಆಫೀಸೇ ಮನೆ

ಬರೆಯಲು ಕೂತರೆ ಏನೂ ತೋಚದು
ತಲೆಯಲಿ ಎಲ್ಲೋ ಹಾಗೆ ಉಳಿವುದು ||

                                                  ********************

Wednesday, May 7, 2014

ಪಾಪ ಪ್ರಜ್ಞೆ

ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ.  ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. ಮೊದಲ ಏಳು ಭಾಗಗಳ ಕೊಂಡಿ ಕೆಳಗೆ ನೀಡಿರುವೆ.
೧. ಮೊದಲಿಗೆ "ಬೇಲಿ" : http://ittigecement.blogspot.in/2014/04/blog-post.html
೨. ನಂತರ "ದಣಪೆ" : http://dinakarmoger.blogspot.in/2014/04/blog-post_14.html
೩. ಅದಾದ ಮೇಲೆ "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
೪. ಆಮೇಲೆ "ಮಿತಿ " :http://www.bilimugilu.blogspot.in/2014/04/blog-post_24.html
೫. ಮುಂದುವರೆದು "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
೬. ಆನಂತರ "ಕದಡಿದ ಕಡಲು" :http://kanasukangalathumbaa.blogspot.in/2014/04/blog-post.html
೭. ಮತ್ತೆ "ಒಳ ಕಂಬಿ" :http://chinmaysbhat.blogspot.in/2014/04/blog-post_27.html

***********************************************************************************

ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

ನಿಮಗೆ ಗೊತ್ತಿದೆಯೆಂದು ನನಗೆ ಗೊತ್ತಿಲ್ಲ .. ಹಾಗಾಗಿ ಹೇಳುತ್ತಿದ್ದೇನೆ / ಬರೆಯುತ್ತಿದ್ದೇನೆ. 
+++++++++++++++++++++++++++++++++++++++++++++++++++++++++++++++++++++++++

ಹಾಸಿಗೆ ಮೇಲೆ ಅಡಿಯಿಂದ ಮುಡಿವರೆಗೂ ಪಾರದರ್ಶಕವಾದ ಹೊದಿಗೆಯನ್ನು ಮುಸುಕೆಳೆದು ಕೊಠಡಿಯ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದೆ. ನನ್ನವರು ಕೊಠಡಿಯ ಬಾಗಿಲ ಬಳಿ ಬಂದವರು ನನ್ನ ಕಡೆಗೊಮ್ಮೆ ದಿಟ್ಟಿಸಿ ನೋಡಿ ಅಡುಗೆಮನೆಯತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಮನೆ ಮಾಡಿದ್ದ ಸಂಶಯಗಳೆಲ್ಲ ಹೊತ್ತಿ ಉರಿದು ಪರಾಕಾಷ್ಠೆ ತಲುಪಿ ಇದೀಗ ಶಾಂತವಾಗುತ್ತಿತ್ತು. ಚಿಕ್ಕಂದಿನಲ್ಲಿ ವಠಾರದ ಮಂದಿಯೆಲ್ಲ ಸೇರಿ ನಡೆಸುತ್ತಿದ್ದ ಕಾಮದಹನದ ದೃಶ್ಯ ನೆನಪಾಗುತ್ತಿತ್ತು. ಒಂದು ಹಂತದಲ್ಲಿ ಆತ್ಮಹತ್ಯೆಗೆ (ದೇಹ ಹತ್ಯೆ! ಆತ್ಮಕ್ಕೆ ಸಾವಿಲ್ಲವೆಂಬುದು ನನ್ನ ನಂಬಿಕೆ )  ತಯಾರಾಗಿದ್ದ ನನ್ನನ್ನು ಆ ಬೆಂಕಿಯ ಜ್ವಾಲೆ ಬಲಿ ತೆಗೆದುಕೊಳ್ಳಲ್ಲಿಲ್ಲ ! ಸದ್ಯ ಬಚಾವಾದೆ. ಇಲ್ಲವಾದಲ್ಲಿ ಎಂಥ ಅನಾಹುತ ಸಂಭವಿಸಿಬಿಡುತ್ತಿತ್ತು ? ಎರಡು ವರ್ಷದ ನನ್ನ ವಿಜಿ ತಾಯಿ ಇಲ್ಲದ ತಬ್ಬಲಿಯಾಗುತ್ತಿದ್ದ. ನನ್ನ ಎಷ್ಟೊಂದು ಪ್ರೀತಿಸುವ ಇವರೋ ಇಷ್ಟು ಚಿಕ್ಕ ವಯಸ್ಸಲ್ಲಿ ನನ್ನನ್ನು ಕಳೆದುಕೊಂಡು ಹೇಗೆ ತಾನೇ ಬದುಕಿರುತ್ತಿದ್ದರು?

 ಛೆ ನಾನೆಂಥ ಪಾಪಿ! ಒಮ್ಮೆಯಾದರೂ ನನ್ನ ಗಂಡನ ಬಗ್ಗೆ ಒಳ್ಳೆಯದು ಯೋಚಿಸಲೇ ಇಲ್ಲ. ಅವರು ಹೀಗೆ ಮಾಡಿರಲಿಕ್ಕಿಲ್ಲ ಎಂದು ಒಂದು ಬಾರಿಯಾದರೂ ಅನ್ನಿಸಲೇ ಇಲ್ಲ... ನಾನಿದ್ದ ಪರಿಸ್ಥಿತಿಯೆ ಅವರದು ಕೂಡ ... ಆ ಹುಡುಗನ ಜೊತೆ ನಾನು ಎಷ್ಟು ಎಲ್ಲೆ ಮೀರಿ ನಡೆದಿದ್ದೇನೋ ಅಷ್ಟೇ ನನ್ನವರು ಮೈತ್ರಿಯ ಜೊತೆ ನಡೆದುಕೊಂಡಿದ್ದರು. ಇಲ್ಲ ಅದಕ್ಕಿಂತ ಕಡಿಮೆಯೇ... ಆ ಸಂದರ್ಭದಲ್ಲಿ ನಾನೇನು ತಪ್ಪು ಮಾಡಿಲ್ಲ ಸಹಜವಾಗೇ ವರ್ತಿಸಿದ್ದೇನೆ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡಿರಲ್ಲಿಲ್ಲವೇ? ಅದೇ ರೀತಿ ಅವರ ವಿಷಯದಲ್ಲಿ ಯಾಕೆ ನಾನು ಯೋಚಿಸದೆ ದುಡುಕಿಬಿಟ್ಟೆ? ನನ್ನ ಹಾಗೆ ಮತ್ತೊಬ್ಬರೂ ಕೂಡ ಎಂದು ತಿಳಿಯದ ಈ ನನ್ನ ಮನುಷ್ಯ ಬುದ್ದಿಗೆ ಧಿಕ್ಕಾರವಿರಲಿ.

ಕೊಠಡಿಯ ದೀಪ ಹೊತ್ತಿತು. ಕಪ್ ಅಂಡ್ ಸಾಸರ್ ಲಿ ಬೈಟು ಸ್ಟ್ರಾಂಗ್ ಕಾಫಿ ಹಿಡಿದು ನನ್ನವರು ಪಕ್ಕ ಬಂದು ಕೂತರು. ನಾನು ಬೇಕಂತಲೇ ಕಣ್ಣು ಮುಚ್ಚಿದೆ. ಅವರನ್ನು ನೋಡಲು ಧೈರ್ಯ ಸಾಕಾಗಲಿಲ್ಲ. ಕಾಫಿಯನ್ನು ಟೇಬಲ್ ಮೇಲಿಟ್ಟು ನಿಧಾನವಾಗಿ ಮುಸುಕೆಳೆದು ನಯವಾಗಿ ತಲೆ ಸವರುತ್ತಾ ಏಳು, ಕಾಫಿ ಕುಡಿ ತಲೆ ನೋವು ಸರಿಯಾಗುತ್ತೆ ಅಂದರು. ಎದ್ದು ಕೂತು ತಲೆ ತಗ್ಗಿಸಿ ಕಾಫಿ ಕಪ್ಪಿಗೆ ಕೈ ಚಾಚಿದೆ. ನನ್ನವರು ಕಾಫಿ ಕಪ್ ನೀಡುತ್ತಾ ಗಲ್ಲವನ್ನು ಮೇಲೆತ್ತಿ A LOT can happen over a cup of coffee ಅನ್ನುತ್ತಾ ತಾವು ಹೀರಲು ಶುರು ಮಾಡಿದರು. ಈಗೇಕೆ ಹೀಗೆ ಹೇಳುತ್ತಿದ್ದಾರೆ? ಇವರಿಗೆ ಎಲ್ಲ ತಿಳಿದುಬಿಟ್ಟಿತಾ? ನನ್ನ ನೀಚ ಬುದ್ದಿ ಇವರ ಅರಿವಿಗೆ ಬಂದುಬಿಟ್ಟಿತೇ ? ಹಾಗೇನಾದರೂ ಆಗಿದ್ದಲ್ಲಿ ಅವರ ಮುಂದೆ ನಾನು ತೀರ ಚಿಕ್ಕವಳಾಗಿ ಬಿಡುತ್ತೇನೆ ಅಂದುಕೊಳ್ಳುತ್ತಲೇ ಅವರ ಮುಖ ನೋಡಿದೆ. ಅವರ ಜೊತೆ ಮದುವೆಗೂ ಮುಂಚೆ ಮೊದಲ ಬಾರಿ Cafe Coffee Dayಗೆ ಹೋಗಿದ್ದು ನೆನಪಾಗಿ, ಅಂದು ಇದ್ದ ಮುಗ್ಧತೆಯೇ ಇಂದು ಅವರ ಮುಖದಲ್ಲಿ ಕಂಡು, ಕಳ್ಳರ ಮನಸ್ಸು ಹುಳ್ಳುಳ್ಳುಗೆ ಅನಿಸಿತು. 
ನನ್ನವರು ಎಂದಿನಂತೆ ಕಣ್ಣು ಮುಚ್ಚಿ ಕಪ್ಪಿನ ಆಚೀಚೆ ಉಫ್ ಉಫ್ ಎನ್ನುತ್ತಾ ಸೊರ್  ಸೊರ್ ಎಂದು ಶಬ್ದ ಮಾಡುತ್ತಾ ಕಾಫಿ ಕುಡಿಯುತ್ತಿದ್ದರು. 

ಮನೆಯಲ್ಲಿ ಮೌನ ಆವರಿಸಿತ್ತು. ಮನಸ್ಸಿನಲ್ಲಿ ನೂರಾರು ಈಟಿಗಳು ಒಟ್ಟಿಗೆ ತಿವಿದಂತೆ ಭಾಸವಾಗುತ್ತಿತ್ತು. ಕಾಫಿ ಕಪ್ಪನ್ನು ಪಕ್ಕದಲ್ಲಿಟ್ಟು ನನ್ನನ್ನು ತೊಡೆ ಮೇಲೆ ಮಲಗಿಸಿಕೊಂಡು ಏನಾಯಿತು ಚಿನ್ನಾ? ಊಟ ಕೂಡ ಮಾಡಿಲ್ಲ, ಅಮ್ಮನ ಮನೆಯಿಂದ ಪಾಪುನ ಕರೆದುಕೊಂಡು ಬಂದಿಲ್ಲ.. ಏನಾಗಿದೆ ನಿನಗೆ ಇವತ್ತು? ಯಾಕೋ ಒಂಥರಾ ಇದ್ಯಲ? ಇವರ ಪ್ರಶ್ನೆಗಳು ನನ್ನನ್ನು ವಿಚಾರಣೆಗೆ ಒಳಪಡಿಸಿದಂತೆ ಅಣಕಿಸುತ್ತಿದ್ದವು .. ಆದರೆ ಅವರು ಮಾತ್ರ ನಿರ್ವಿಕಾರವಾಗಿ, ನನ್ನ ಮೇಲೆ ಅತೀವ ಕಾಳಜಿಯಿಂದ ಸಹಜವಾಗಿಯೇ ಆ ಪ್ರಶ್ನೆಗಳನ್ನು ಕೇಳುತ್ತಿದ್ದರು.. ನ.. ನನಗೇನೂ ಆಗಿಲ್ಲ ಸ್ವಲ್ಪ ತಲೆ ನೋವಿತ್ತು ಪಾಪು ಗಲಾಟೆಯಿಂದ ನಿನ್ನೆ ರಾತ್ರಿ ನಿದ್ದೆ ಮಾಡಿರಲ್ಲಿಲ್ಲವಲ್ಲ ಅದಕ್ಕೆ ನಿದ್ದೆ ಹತ್ತಿ ಬಿಟ್ಟಿತ್ತು .. ಬನ್ನಿ ಊಟ ಮಾಡೋಣ ಎಂದು ಎದ್ದು ಹೋದೆ. ನನ್ನನ್ನು ನನಗಿಂತಲೂ ಹೆಚ್ಚಾಗಿ ಬಲ್ಲ ಇವರು, ಹೆಚ್ಚು ಕೆದುಕದೆ, ಆಯಿತು ನಡೆ ಊಟ ಮಾಡುವ.. ಆಮೇಲೆ ಒಂದು ರೌಂಡ್ ವಾಕಿಂಗ್ ಹೋಗಿ ಪಾಪುನ ಕರೆದುಕೊಂಡು ಬರುವ ಎಂದು ಅಡುಗೆ ಮನೆ ಕಡೆ ನನ್ನ ಹಿಂದೆ ಬಂದರು. 

ಮಧ್ಯಾನ್ಹ  ಆಫೀಸಿನಲ್ಲಿ ಊಟಕ್ಕೆ ಹೊರಗೆ ಹೋಗೋಣ ಎಂದಾಗ ರಾತ್ರಿ ಹೋಗೋಣ ಎಂದಿದ್ದರಿಂದ ಇವರು ಕ್ಯಾಂಟೀನ್ ನಲ್ಲಿ ೨ ಚಪಾತಿ ತಿಂದು ಮಧ್ಯಾನ್ಹದ ಊಟ ಮುಗಿಸಿದ್ದರಂತೆ.. ಮನೆಯಲ್ಲಿ ನಾನು ಬೆಳಗ್ಗೆ ಮಾಡಿದ್ದ ಸಾರನ್ನೇ ಬಹಳ ರುಚಿಯಾಗಿದೆಯೆಂದು ಹೊಗಳುತ್ತಿದ್ದರು. ನನ್ನನ್ನು ಪಾಪ ಪ್ರಜ್ಞೆ ಅತಿಯಾಗಿ ಕಾಡುತ್ತಿತ್ತು. ನನ್ನ ಬಗ್ಗೆ ಅವರು ಒಂದೊಂದು ಮಾತು ಆಡಿದಾಗಲು ಅದು ಮತ್ತಷ್ಟು ಹೆಚ್ಚುತ್ತಿತ್ತು. ಇವರಿಗೆ ಎಲ್ಲವನ್ನು ಹೇಳಿಬಿಡಬೇಕು, ಆಗಲೇ ನನಗೆ ಸಮಾಧಾನ. ಆದರೆ  ಎಲ್ಲಿಂದ ಶುರು ಮಾಡುವುದು... ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವನು ನನ್ನನ್ನು ನಾಚಿಸುತ್ತಿದ್ದುದ್ದ , ಪ್ರವಾಸ ಹೋದಾಗ ಬಸ್ಸು ಮಿಸ್ಸಾಗಿ ಒಟ್ಟಿಗೆ ರಾತ್ರಿ ಪ್ರಯಾಣ ಮಾಡಿದ್ದ ಅಥವಾ ಒಮ್ಮೊಮ್ಮೆ ನಾನು ನಾಚಿ ನೀರಾದಾಗ ಮನಸ್ಸು ಅವನನ್ನು ಹಂಬಲಿಸುತ್ತಿದ್ದುದ , ಅಥವಾ ಮೊನ್ನೆ ಅವನ ಮನೆಗೆ ಹೋದಾಗ ನಡೆದ ಘಟನೆಯ ?? ಎಲ್ಲಿಂದ ಅಂತ ಹೇಳಲಿ ? ಸಿಡಿಲು ಗುಡುಗು ಮಿಂಚಿಗೆ ಭಯ ಪಡುತ್ತಿದ್ದ ನನಗೆ ಮಳೆ ಬಂದಾಗ ಅಲ್ಲೇ ಅವರ ಮನೆಯಲ್ಲೇ ಇರು ಎಂದು ಇವರು ಹೇಳಿದಾಗ, ಅವರಿಗಿದ್ದ ಆ ನಂಬಿಕೆ ಇಂದು ಬೆಳಗ್ಗೆ ಅವರು ಮೈತ್ರಿ ಜೊತೆ ಇದ್ದಾಗ ನನಗ್ಯಾಕೆ ಬರಲ್ಲಿಲ್ಲ.. ಥೂ ನನ್ನ ಸಂಕುಚಿತ ಮನಸ್ಸೇ :( 

ಗೋಮ ಹಚ್ಚಿ ಒರೆಸಿ , ಮನೆಗೆ ಬೇಗ ಹಾಕಿ ಗೇಟಿನ ಬಳಿ ನಿಂತಿದ್ದ ಇವರ ಹತ್ತಿರ ಹೋಗಿ ನಡೆಯಿರಿ ಹೋಗೋಣ ಎಂದೆ. ಇವರು ನನ್ನ ಕೈ ಹಿಡಿದು ಹೆಜ್ಜೆ ಹಾಕಿದರು. ಐದ್ಹತ್ತು ನಿಮಿಷ ನಾನು ಏನಾದರೂ ಹೇಳುವಿನೇನೋ? ಎಂದು ಕಾದಿರಬೇಕು. ನಾನು ಏನೂ ಮಾತಾಡದಿದ್ದಾಗ ಎಂದಿನಂತೆ ಇವರು ಲೋಕಾಭಿರಾಮ ಶುರು ಮಾಡಿದರು. ಇವತ್ತು ದಿನಪತ್ರಿಕೆ ಓದುದ್ಯ? ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗಿದ್ದ ನನಗೆ ದಿನಪತ್ರಿಕೆ ಓದುವುದಕ್ಕೆ ಸಮಯವಾದರೂ ಎಲ್ಲಿತ್ತು? ಇಲ್ಲ ಓದಿಲ್ಲ ಎಂದು ತಲೆಯಾಡಿಸಿದೆ. ಸರಿ ಬಿಡು ಓದುವುದಕ್ಕೆ ಅದರಲ್ಲಾದರೂ ಏನಿರತ್ತೆ? ಬರೀ ಕೊಲೆ ಅತ್ಯಾಚಾರ ಮೋಸ ವಂಚನೆ ದಗಲ್ ಬಾಜಿ ಇಂತದೆ ಸುದ್ದಿಗಳು. ಅದನ್ನು ಓದಿದರೆಷ್ಟು ಬಿಟ್ಟರೆಷ್ಟು ?? ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ೧೬ ರಿಂದ ೨೦  ವಯಸ್ಸಿನವರು. ಈಗಿನ ಜನಾಂಗಕ್ಕೆ ಪಾಪ ಪ್ರಜ್ಞೆ ಅನ್ನೋದೇ ಇಲ್ಲ. ನೈತಿಕತೆ ಎಂದರೇನು ಅನ್ನುವ ಕಾಲ. ಧರ್ಮಾಧರ್ಮಗಳ ವಿವೇಚನೆ ಇಲ್ಲದೆ ಜನರು ಬದುಕುತ್ತಿದ್ದಾರೆ. ನ್ಯಾಯ ನೀತಿ ಪ್ರಾಮಾಣಿಕತೆಗಳು ಮಾಯವಾಗಿವೆ. ಹಾಗೆ ನೋಡಿದರೆ ನಮ್ಗುಳಲ್ಲೂ ಪಾಪ ಪುಣ್ಯಗಳ ಭಾವನೆಯಲ್ಲಿ ತೀವ್ರತೆ ಕಡಿಮೆಯಾಗಿದೆ. ................ .................... ..............
ಇವರ ಮಾತಿಗೆ ತಡೆಯೇ ಇಲ್ಲ ನನಗೆ ತಲೆ ಚಿಟ್ಟು ಹಿಡಿದಂತಾಗಿ, ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಸುತ್ತಿ ಬಳಸಿ ನನ್ನ ನೋಯಿಸಬೇಡಿ ಅಂತ ಹೇಳಬೇಕೆನಿಸಿತು. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ಕೊಂಡ್ರನ್ತೆ .. ಹಾಗಾಗಿತ್ತು ನನಗೆ. ಅವರು ಯಾವತ್ತು ನನಗೆ ನೋವಾಗುವ ರೀತಿ ಮಾತಾಡಿಲ್ಲ.. ಇದೆಲ್ಲ ನನ್ನನ್ನು ಕಾಡುತ್ತಿರುವ ಪಾಪ ಪ್ರಜ್ಞೆ.

ಅಮ್ಮನ ಮನೆ ತಲುಪಿದಾಗ ಗಂಟೆ ಹನ್ನೊಂದಾಗಿತ್ತು. ವಿಜಿ ಆಗಲೇ ಮಲಗಿಯಾಗಿತ್ತು. ಇಲ್ಲೇ ಮಲಗಿರಲಿ ಪರವಾಗಿಲ್ಲ ಅವನನ್ನು ನಾಳೆ ಕರೆದುಕೊಂಡಿ ಹೋಗಿ ಅಂದರು ಅಮ್ಮ. ಅಪ್ಪ ಬಂದು ಏನು ಅಳಿಯಂದಿರೆ, ಹೆಂಡತಿಯನ್ನು ಕೆಲಸಕ್ಕೆ ಹಚ್ಚಿದಿರ.. ಇನ್ನು ಮುಂದೆ ದುಡಿಮೆ ಜೋರು ಅಂತ ನಕ್ಕರು. ಎರಡು ನಿಮಿಷ ಕ್ಷೇಮ ಸಮಾಚಾರ ವಿಚಾರಿಸಿ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದೆವು. ಮನೆ ಕಡೆ ಬರುವಾಗಲೂ ನಾನು ಹೆಚ್ಚು ಮಾತಾಡಲ್ಲಿಲ್ಲ.. ಅವರೇ ಆಫೀಸಿನ ಕೆಲ ವಿಚಾರಗಳ ಸೂಕ್ಷ್ಮತೆಯನ್ನು ನನಗೆ ವಿವರಿಸುತ್ತಿದ್ದರು. ಆದರೆ ಮನಸ್ಸು ಮಾತ್ರ ನನ್ನ ತಪ್ಪಿನ ಭಿನ್ನಹಕ್ಕೆ ಹಾತೊರೆಯುತ್ತಿತ್ತು. ಒಮ್ಮೆಲೆಗೆ ಸಂಪೂರ್ಣ ತಪ್ಪು ನನ್ನದೇ ಎಂದು ಒಪ್ಪಿಕೊಳ್ಳಲು ಅಹಂಕಾರ ಅಡ್ಡ ಬಂದಿತ್ತು. ಪಶ್ಚಾತ್ತಾಪಪಟ್ಟು ಪಾಪ ಪ್ರಜ್ಞೆಯನ್ನು ಹೋಗಲಾಡಿಸಿಕೊಳ್ಳಲು ಚಡಪಡಿಸುತ್ತಿದ್ದ ಮನಸ್ಸು ಈಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡಿದಿತ್ತು .. ಇವರೇನು ದೇವರಿಗಿಂತ ಮಿಗಿಲೇ ? ಇಷ್ಟಾದರೂ ನಾನು ಮಾಡಿರುವ ತಪ್ಪಾದರೂ ಏನು ?? ಮನಸ್ಸೆಂಬ ಮರ್ಕಟ ಅಹಂಕಾರದ ಬಲೆಯಲ್ಲಿ ಸಿಕ್ಕಿ ನರಳುತ್ತಿತ್ತು.
*******

Friday, April 18, 2014

ಚುನಾವಣಾ Mix

ಇಲ್ಲಿ ಮುಗುದಿದೆ ೨೦೧೪ರ ಲೋಕಸಭಾ Election
ಕೆಲವೆಡೆ ಮತದಾರಿರಿಗಂತೂ ಭಾರಿ Collection!
ಮತದಾರ ಮಾಡಿರುವನೆ ಕ್ರಿಮಿನಲ್ ಅಭ್ಯರ್ಥಿಗಳ Rejection?
Right Candidate ಆದರೆ ಸಾಕು Selection!
ಆಗಬೇಕಿದೆ ಮತದಾರ-ಅಭ್ಯರ್ಥಿಗೆ ಒಳ್ಳೆ Connection
ನಿಜವಾಗುವುದೇ ಮೀಡಿಯಾಗಳ exit poll Projection?

***

ನವ ಮತದಾರ ಬಂದಿದ್ದ ಹಾಕಲು ಓಟ -
ನಿಲ್ಲಿಸಿ ತನ್ನ ಬೇಸಿಗೆ ರಜೆಯ ಆಟೋಟ
ಮತದಾನಕ್ಕು ಮುನ್ನ ಅಭ್ಯರ್ಥಿ ಕೊಟ್ಟಿದ್ದ ನೋಟು ಖೋಟ -
ಬೇಸತ್ತ ನವ ಮತದಾರ ಒತ್ತಿದ್ದ ನೋಟ

***

ನರೇಂದ್ರ ಮೋದಿ ವಿವಾಹಿತ -
ಮಾತ್ರಕ್ಕೆ ಕಾಣಿಸಿಕೊಳ್ಳಬೇಕೆ? ಪತ್ನಿ ಸಹಿತ
ಚಿಕ್ಕ ವಯಸ್ಸಲ್ಲಿ ಮದುವೆಯಾದದ್ದು ಆ ಕಾಲಕ್ಕೆ ವಿಹಿತ
ಆದರೆ ಹೆಂಡತಿಯ ಜೊತೆ ಸಂಸಾರ ಬಿಟ್ಟಿದ್ದು ಅಹಿತ
ಇದೇ ವಿಷಯವಾಗಿ ವಿರೋಧಿಗಳ ಮಾತು ಆಗಲಿ ಮಿತ
ಏನೇ ಆದರೂ ಮೋದಿಗೆ ನಮ್ಮ ಮತ
ಪ್ರಾರ್ಥಿಸೋಣ ನಾವು -
ಪ್ರಧಾನಿಯಾಗುವ ವೇಳೆಗಾದರೂ ಅವರು ಬರಲಿ ಕುಟುಂಬ ಸಮೇತ

***

ಮೋದಿ ಎನ್ಕೌಂಟರ್ CM -
ಅಂದ ಚಿದಂಬರಂ ಮೂರ್ಖ FM
ಮೋದಿ  ನರಹಂತಕ CM -
ಅಂದ ಸಿದ್ದು ಪೆಕ್ರು DCM (ದರಿದ್ರದ್ CM)
ಮೋದಿ ವಿನಾಶದ CM -
ಅಂದ ಉಮಾಭಾರತಿ ಮಧ್ಯಪ್ರದೇಶದ ಮಾಜಿ CM
ಮೋದಿ ಬರೀ ಬ್ರಾಂಡ್ CM -
ಅಂದ ಜಯಲಲಿತಾ ತಮಿಳುನಾಡು CM
ಮೋದಿ ಖಾತೆ ತೆರೆಯದ CM -
ಅಂದ ಚಾಂಡಿ ಕೇರಳದ CM
ಪಂಚ್: ಮುಚ್ಕೊಂಡಿರೋನ್ ಒಬ್ನೆ - ನಮ್ ದೇಶದ್ PM

***

Tuesday, January 7, 2014

ಜೋಚುಟುಕುಗಳು - ೫

ಬಿಜೆಪಿ-ಕೆಜೆಪಿ

ಬಿಜೆಪಿಯಲ್ಲಿ ಕೆಜೆಪಿ ವಿಲೀನ
ಮಾಡಿಸುವುದರಲ್ಲಿ ನಾಯಕರು ತಲ್ಲೀನ
ಕೇಳಿದರೆ -
ನೀವು ಮಾಡುತ್ತಿರುವುದು ಸರೀನಾ?
ಆಗುವುದಿಲ್ಲವೇ ರಾಜ್ಯ ಬಿಜೆಪಿ ಮತ್ತೆ ಮಲಿನ?
ಉತ್ತರಿಸುವರು -
ತಡೆದು ನೋಡಿ ಸ್ವಲ್ಪ ದಿನ
ಬಿಜೆಪಿ ಕಡೆ ವಾಲುವುದು ಜನರ ಮನ
ಪಂಚ್: ಹೀಗೆ ಆದ್ರೆ ರಾಜ್ಯ ಬಿಜೆಪಿ ಆಗುವುದು ಪಂಚಭೂತಗಳಲ್ಲಿ ಲೀನ!!

ಸಂಪುಟ ವಿಸ್ತರಣೆ 

ನಡೆದಿದೆ ಸದ್ದಿಲ್ಲದೇ ರಾಜ್ಯ ಸಂಪುಟದ ವಿಸ್ತರಣೆ
ಡಿಕೆಶಿಗೆ ರೋಷನ್ ಬೇಗಿಗೆ ಹಾಕಿದಾರೆ ಮಣೆ
ಸ್ವೀಕರಿಸಿದ್ದಾರೆ ಪ್ರಮಾಣ, ಮಾಡಿ ದೇವರ ಮೇಲೆ ಆಣೆ
ಡಿಕೆಶಿಗೆ ಇತ್ತೇನೋ ಸೂತಕ ನಾ ಕಾಣೆ
ಪಂಚ್:ಏನೂ ಮಾಡಲಾಗದ ಸಿದ್ದು ಚಚ್ಕೊತಿದಾರೆ ಹಣೆ !!
(ಡಿಕೆಶಿಗೆ ಪಿತೃವಿಯೋಗ ಎಂಬ ಸುದ್ದಿ ಹಿಂದಿನ ದಿನಪತ್ರಿಕೆಯಲ್ಲಿ ಬಂದಿತ್ತು! ಒಂದೋ ಸುದ್ದಿ ಸುಳ್ಳಾಗಿರಬೇಕು ಅಥವಾ ..... ನೀವೇ ಊಹಿಸಿಕೊಳ್ಳಿ! )
*******

Saturday, January 4, 2014

ಆಮ್ ಆದ್ಮಿಯ ಕೇಜ್ರೀ


ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಚುನಾವಣೆಗೂ ಮುನ್ನ 'ಕೈ' ಪಕ್ಷ ಭ್ರಷ್ಟ
ಚುನಾವಣೆ ನಂತರ 'ಕೈ'ಹಿಡಿದ ದುಷ್ಟ !

ಚುನಾವಣೆಗೂ ಮುನ್ನ 'ಶೀಲ' ಮೇಲಿಟ್ಟಿದ್ದ ಒಂದು ಅಕ್ಷಿ
ಚುನಾವಣೆ ನಂತರ ಕೇಳುವನು 'ಒದಗಿಸಿ ದಾಖಲೆ, ಸಾಕ್ಷಿ!

ಚುನಾವಣೆಗೂ ಮುನ್ನ ಸರ್ಕಾರಿ ಬಂಗಲೆ ಭದ್ರತೆಯ ನಿರಾಕರಣೆ
ಚುನಾವಣೆ ನಂತರ ಬೇಕಿವನಿಗೆ ಮನೆ, ಇರಬೇಕು ಐದು ಕೋಣೆ!

ಕುಟುಂಬವೊಂದಕ್ಕೆ ೭೦೦ ಲೀಟರ್ ನೀರು ಸಾಕೆ?
ಇದಕಾಗಿ ಅವಿಭಕ್ತ ಕುಟುಂಬ ಬಿಡಿಯಾಗಬೇಕೆ ?
ಅಥವಾ 'ಒಂದೇ' ಮನೆಗೆ ಹತ್ತಾರು ಮೀಟರ್ ಅಳವಡಿಸಿಕೊಳ್ಳಬೇಕೇ?!

ಶೇಕಡ ೫೦ರಷ್ಟು ಕಡಿತ ವಿದ್ಯುತ್ ದರದಲಿ
ಕಮಾಲೇನು ನಡೆಸಿಲ್ಲ, ಜನ ಅರ್ಥ ಮಾಡಿಕೊಳ್ಳಲಿ
ಎಷ್ಟೋ ವರ್ಷದಿಂದಿದೆ ಇನ್ನು ಕಡಿಮೆ ದರ ಗೋವಾ ರಾಜ್ಯದಲಿ !

ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಪಂಚ್: ಕಾಂಗ್ರೆಸಿನ ಕುತಂತ್ರ ರಾಜಕೀಯಕ್ಕೆ ಸಾಕ್ಷಿ, ಆಮ್ ಆದ್ಮಿ ಪಕ್ಷ
ನಡೆಯೋಲ್ಲ ಇವರ ಆಟ ಕಳೆದರೆ ಹತ್ತು ಪಕ್ಷ (೧೦ ಪಕ್ಷ = ೫ ತಿಂಗಳು)
ಚುನಾಯಿಸಿ ನೀವು ಭಾರತೀಯ ಜನತಾ ಪಕ್ಷ !
*******

Friday, January 3, 2014

ನನ್ನ ಪ್ರಚಲಿತ!


ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು

ಕೆಲಸವಿಲ್ಲ ಕಾರ್ಯವಿಲ್ಲ
ಹೊರ ಹೋಗಲು ಮನಸಿಲ್ಲ
ದಿನಪತ್ರಿಕೆ ಓದೋದು ಮುಗಿಯಲ್ಲ
ಟೀವಿ ನೋಡೋದು ನಿಲ್ಲಲ್ಲ

ಊಟಕ್ಕೇನು ಚಿಂತೆ ಇಲ್ಲ
ನಿದ್ದೇಗೇನೂ ಬರ ಇಲ್ಲ
ಕಾಫಿಗಂತೂ ತಕರಾರ್ ಇಲ್ಲ
ಚಾಟ್ಸ್ ಗಳು ಏನ್ ಕಮ್ಮಿ ಇಲ್ಲ

ಪೂಜೆ ಇಲ್ಲ ಪುರಸ್ಕಾರ ಇಲ್ಲ
ದೇವರಿಲ್ಲ ಬ್ರಾಹ್ಮಣರಿಲ್ಲ
ಮಠ ಮಾನ್ಯದ್ ದಿಕ್ಕು ತೋಚ್ತಿಲ್ಲ
ಯಾಕೋ ಜೀವನ ಹಿಂಗಾಯ್ತಲ್ಲ

ಮಾತು ಬೇಡ ಕಥೆಯೂ ಬೇಡ
ಮೊಬೈಲು ಜಾಸ್ತಿ ನೋಡುದು ಬೇಡ
ಹೊರಜಗತ್ತಿನ ಅರಿವು ಬೇಡ
ದಿನದಿಂದ ದಿನಕ್ಕೆ ಆಗು ಮೂಢ

ಅನಿಸಿಕೆಗಳಿಗೆ ಬೆಲೆ ಇಲ್ಲ
ವಿಚಾರಗಳಂತೂ ತಿಳಿದೇ ಇಲ್ಲ
ಆಂಗ್ಲವಂತೂ ಬರೋದೇ ಇಲ್ಲ
ಹೇಳಿದ್ ಯಾವ್ದು ನೆನಪೇ ಇರೋಲ್ಲ

ಮಾತಾಡಿದರೆ ನೂರು ತಪ್ಪು
ಆಡದಿದ್ದರೆ ಒಂದೇ ತಪ್ಪು
ಹೇಳಿದ್ದೆಲ್ಲಾ ನೀನು ಒಪ್ಪು
ಇಲ್ದೆ ಇದ್ರೆ ಆಗು ಬೆಪ್ಪು

ಹೇಳುವುದನ್ನು ಸರಿಯಾಗಿ ಕಲುತ್ಕೊ
ಕೇಳಿದ್ದನ್ನು ಸರಿಯಾಗಿ ತಿಳುದ್ಕೊ
ಮಾಡುವುದನ್ನು ಎಲ್ರಿಗೂ ಹೇಳ್ಕೋ
ಮನ್ಸಿನ್ ಮಾತು ಒಳಗೇ ಇಟ್ಕೋ

ಬಿಟ್ಟುಬಿಡು ಎಲ್ಲಾ ಹಠ
ಇಟ್ಕೋಬೇಡ ಯಾವುದೇ ಚಟ
ಕೆಲ್ಸಾ ಮಾಡು ಪಟ ಪಟ
ಅದೇ ಜೀವನದ ಪಾಠ

ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು  

Tuesday, December 31, 2013

ಜೋಚುಟುಕುಗಳು - ೪

ಜನವರಿ ಒಂದು
ಕುಣಿದು ಕುಪ್ಪಳಿಸದಿರಿ ಹಾದಿ ಬೀದಿಯಲಿ ಹೊಸ(?) ವರುಷದಿ
ಸೇವಿಸದಿರಿ ಮದ್ಯ ಮಾಂಸ ಕೇಕು ಪಿಜ್ಜಾ ಮಧ್ಯರಾತ್ರಿಯಲಿ
ಪಾಶ್ಚಿಮಾತ್ಯರ ಹೊಸವರ್ಷಕ್ಕಿಲ್ಲ ಯಾವುದೇ ತಳಹದಿ
ಉಳಿಸಿ ಬೆಳೆಸಿ ಭಾರತೀಯ ಸಂಸ್ಕೃತಿಯ ಸದಾಕಾಲದಲಿ
ಭಾರತೀಯರಿಗೆಲ್ಲ ಹೊಸವರ್ಷದ ಆರಂಭ ಯುಗಾದಿ

ತಾಮಸ ಕಾಲದಲ್ಲಿ ಯಾವುದೇ ಆರಂಭವಿಲ್ಲ ತಿಳಿದಿರಲಿ
ಅರುಣೋದಯಕ್ಕೆ ದಿನದ ಬದಲಾವಣೆ ನೆನಪಿರಲಿ
ಬಿಟ್ಟು ಹೋಗಬೇಡಿ ಹಿರಿಯರು ಹಾಕಿಕೊಟ್ಟ ಹಾದಿ
ನೀವಾಗಬೇಡಿ ಈ ಆಚರಣೆ ವಿರೋಧಿಗೆ ಪ್ರತಿವಾದಿ
ಪಂಚ್: ರಾತ್ರಿ ಆರಾಮಾಗಿ ಮಲಗಿ ಸಿಹಿಗನಸಿನಲಿ ತೇಲಿ 

ಶಾಸಕರ ವಿದೇಶ ಪ್ರವಾಸ
ಬಡಿದಿದೆ ಬರ ೯೦ಕ್ಕೂ ಹೆಚ್ಚು ತಾಲ್ಲೂಕುಗಳಿಗೆ
ಪ್ರಯಾಣ ಹೊರಟಿದ್ದಾರೆ ನಮ್ಮ ಶಾಸಕರು ವಿದೇಶಗಳಿಗೆ
ಕಿವಿಗೊಡದೆ ರಾಜ್ಯಪಾಲರ ಮಾತುಗಳಿಗೆ
ಅವರ್ಯಾಕೆ ತೆರಳಬಾರದು ಸ್ವಕ್ಷೇತ್ರಗಳಿಗೆ
ಸ್ಪಂದಿಸಬಾರದು ಜನರ ನೋವು ನಲಿವುಗಳಿಗೆ
ಬರದೇ ಸರಿಯಾದ ಬುದ್ದಿ ನಮ್ಮ ಜನಗಳಿಗೆ
ಓಟು ಕೊಟ್ಟರೆ ಇಂತಾ ಖದೀಮರುಗಳಿಗೆ
ಮತ್ತೂ ತುಂಬುವುದು ತೆರಿಗೆ ಹಣ ಅವರ ಜೇಬುಗಳಿಗೆ
ಪಂಚ್: 'ಕೈ'ಲಿದ್ದರೆ ಅಧಿಕಾರದ ಚುಕ್ಕಾಣಿ, ಖಜಾನೆ ಖಾಲಿಯಾಗಿ ತುಂಬುವುದು 'ಕೈ'ಯಲ್ಲಿರುವ ಜೋಳಿಗೆ!

ನ ಮೋ
ಕೋರ್ಟು ನೀಡಿದೆ ಮೋದಿಗೆ ಕ್ಲೀನ್ Chit
ಕೋಮು ಗಲಭೆ ದೋಷಾರೋಪಣೆಗಳಿಂದ ಮೋದಿ Exit
ಜಾಕಿಯ ಮತ್ತೆ ಸಲ್ಲಿಸಲಿದ್ದಾರಂತೆ Affidavit
ಇದರಿಂದಾಯಿತು ಮೋದಿ ಜನಪ್ರಿಯತೆ ಮತ್ತಷ್ಟು Hit
ಮೋದಿ ನಿರಪರಾಧಿಯೆಂದು ಕಾಂಗ್ರೆಸ್ ಮಾಡಿಕೊಳ್ಳಲಿ Admit

ಮೋದಿ ದ್ವೇಷಿಗಳು ಗುಜರಾತ್ ಗೆ ನೀಡಿ Visit
ಮತ್ತೂ ನಡೆಸಿರಿ ಯಾವುದೇ ಸರ್ಕಾರಿ ಕಚೇರಿ Audit
ಮೋದಿ ಮಾಡಿಸಿಲ್ಲ ಸರ್ಕಾರಿ ಪತ್ರಗಳ Edit
ಪಂಚ್: ಮೋದಿಯೊಬ್ಬರೆ ಪ್ರಧಾನಮಂತ್ರಿ ಪದವಿಗೆ Fit
*******

Saturday, December 28, 2013

ವಂದ ನಗಳು


ವಂದ (ವಂದನ)ಳೊಂದಿಗೆ ಹತ್ತಿದ್ದೆ ಬಸ್ಸು, ಊರಿಗೆ ಹೋಗಲು
ನೊಂದಜೀವಿಯಾಗಿದ್ದ ಅವಳು ಬಹಳ ಬೇಸರಿಸಿಕೊಂಡಿದ್ದಳು
ಮಾತಾದಡಿಸಿದಷ್ಟು  ಹೆಚ್ಚಾಗಿತ್ತು ಬಿಕ್ಕಿನ ಅಳು
ಕೇಳಿ ಸಾಕಾಗಿತ್ತು ನನಗೂ ಅವಳ ಗೋಳು
ಒಮ್ಮೆ ನಗಿಸಿದರೆ ಚೂರು ಸರಿಹೋದಾಳು -
ಎಂದೆಣಿಸಿ ತಡಕಾಡಿದೆ, ಜೋಕೊಂದು ಹೇಳಲು
ಆಗ ಕಂಡಿದ್ದೆ ರಾಜಹಂಸದಲ್ಲಿ ಬರೆದಿದ್ದ "ವಂದನಗಳು"
ಅದ ತೋರಿಸಿದಾಗ ಅವಳು ನಿಜವಾಗಿ ನಕ್ಕಳು

ಪಂಚ್ : ಅತ್ತ ಕನ್ನಡದ ಕೊಲೆ
            ಇತ್ತ ನಗುವಿನ ಅಲೆ
ನನಗಾಗಿತ್ತು ಸಂಕಟ ಸಂತೋಷ ಒಮ್ಮೆಲೆ
*******

Wednesday, December 25, 2013

ದೆಹಲಿ ರಾಜಕೀಯ


ಅಂದು: ಡಿ. ೦೮, ೨೦೧೩
'ಹರ್ಷ' ವರ್ಧಿಸಿದರೂ ಪೂರ್ತಿಯಾಗಿ ಅರಳದ ಕಮಲ
ತೊಳೆದರೂ ಪೂರ್ತಿ ಅಂಟು (ಎಂಟು!) ಹೋಗದ 'ಕೈ'ಗಂಟಿದ್ದ ಮಲ
'ಪೊರಕೆ'ಗಳು ಸಾಕಾಗಲ್ಲಿಲ್ಲ ಸ್ವಚ್ಛಗೊಳಿಸಲು ರಾಜಧಾನಿಯ ನೆಲ
ಕೈ, ಕಮಲದ ಹಂಗು ಬೇಡೆಂದ ಕೇಜ್ರೀವಾಲ!

ಇಂದು: ಡಿ. ೨೫, ೨೦೧೩
ದೆಹಲಿಯಲ್ಲಿ ವಾತಾವರಣ ಆಗಿತ್ತು ಬಹಳ ಶೀತಲ
ಅಧಿಕಾರದ ಬಿಸಿ ಏರಿಸಿಕೊಳ್ಳಲು AAP ಕೆಡಿಸಿಕೊಂಡಿತು ತನ್ನ ಕುಲ
'ಕೈ'ಯಲ್ಲಿ ಪೊರಕೆ ಹಿಡಿಸಲು ಸಫಲಳಾದಳು ಗೋಮುಖದ 'ಶೀಲ'
ಸಿದ್ದಗೊಳ್ಳುತ್ತಿದೆ 'ಅರವಿಂದ'ನ ಪ್ರಮಾಣಕ್ಕೆ ರಾಮ'ಲೀಲ'

ಪಂಚ್: ಮತದಾರರೇ, 
ಹೋಗಲಾಡಿಸಿ ನಿಮ್ಮ ಚಿತ್ತ ಚಂಚಲ
AAPಗೆ ಮತ ನೀಡಬೇಡಿ ಬರುವ ಸಲ (ಲೋಕಸಭೆ ಚುನಾವಣೆ)
ಎಲ್ಲೆಲ್ಲೂ ಅರಳಲಿ (Mission 272+) ಕಮಲ
'Modi'fy ಆದಾಗ ಭಾರತವಾಗುವುದು ಕೋಮಲ!
******* 

Tuesday, December 24, 2013

ಜೋಚುಟುಕುಗಳು - ೩


ಮೊಬೈಲ್ ಬಿಲ್ಲು

ಬಾರಿಸಿತ್ತು ನಮ್ಮ -
ಮನೆ ಕಾಲಿಂಗ್ ಬೆಲ್ಲು
ಬಂತು ಇವಳ ಮೊದಲ -
ಮೊಬೈಲ್ ಬಿಲ್ಲು
ತುಂಬಿತ್ತು ಅದರಲಿ -
ನಂ ನಂಬರ್ರೇ ಫುಲ್ಲು
ಒಳಗೊಳಗೆ ಹ್ಯಾಪಿ -
ಆಗಿತ್ತು ನಂ ದಿಲ್ಲು
ಮಾರನೆ ದಿನವೇ -
ಹೋದೆ ಕಟ್ಟಲು ಬಿಲ್ಲು
ದಾರಿಯಲ್ಲಿ ಬಿದ್ದೆ -
ಎಡವಿ ಪಾಯದ ಕಲ್ಲು
ದೇವರ ದಯೆ ಮುರಿಲ್ಲಿಲ್ಲ -
ಯಾವುದೇ ಹಲ್ಲು
ಪರ್ವಾಗಿಲ್ಲ, ಏನಾಗಿಲ್ಲ ಅನ್ಕೊತ -
ಹೋಗಿ ಸಾಲಿನಲಿ ನಿಲ್ಲು
ಮುಂದಿದ್ದವ ಹೊಡೆಯುತ್ತಿದ್ದ ಗಬ್ಬುನಾತ -
ಕುಡಿದಿದ್ದ ಅನ್ಸತ್ತೆ ಆಯಿಲ್ಲು
ಒಟ್ನಲ್ಲಿ ಬಿಲ್ ಕಟ್ಟಿ ಮನೆಗ್ -
ಬರೋಷ್ಟರಲ್ಲಿ ಆಗಿದ್ದೆ ನಾ ಡಲ್ಲು !!


(ವೋಲ್ವೋ ಬಸ್ ನಲ್ಲಿ ಪಕ್ಕ ಕೂತು ಮಾತನಾಡಿಸಲು ಅಂಜುತ್ತಿದ್ದ ಹುಡುಗನ ಬಗ್ಗೆ ಗೆಳತಿ! ಹೇಳಿದಾಗ ಬರೆದದ್ದು )

ಪಕ್ದಲ್ ಕೂತಿರೋ ಚೆಲ್ವ
ಯಾಕೋ ಮಾತಾಡುಸ್ತಿಲ್ಲ ಅಲ್ವ?
ನೀನೆ ಕೇಳು, ತಿಂತ್ಯ ಹಲ್ವ?
ಅಂದ್ರೆ ಅವ, ಕೊಡು ಮೆಲ್ವ (ಮೆಲ್ಲುವ)
ಆಗ ತೋರ್ಸು ನಿನ್ ಗಲ್ವ (ಗಲ್ಲವ)
ಯಾರ್ಗು ಕಾಣ್ಸೋಲ್ಲ, ಅದು ವೋಲ್ವ !!

10:50PM - 9:15PM = ??

ನಾನಂದೆ ನೂರು ಮಿನಿಟು
ಅವಳಂದಳು ತೊಂಬತೈದು ಮಿನಿಟು
ಶುರುವಾಯಿತು ನನ್ನದೊಂದು ಚುಟುಕು
ಲೆಕ್ಕದಲಿ ನಾ ಬಹಳ ವೀಕು
ಆಗಿರ್ಲ್ಲಿಲ್ಲ question paper ಲೀಕು
supervisor ಆಗಿದ್ದವ ಟಾಕು-ಠೀಕು
ಹಾಗಾಗಿ ಆಗಿದ್ದೆ exam hallನಲ್ಲಿ  ಲಾಕು
ಎಲ್ಲಾ ಗೊತ್ತಿರೋನ್ ತರ ಕೊಡ್ತಿದ್ದೆ ಪೋಸು, ಆದ್ರೆ ಅದು ಬರೀ ಫೇಕು
result ಬಂದಾಗ ಆಗಿದ್ದೆ ನಾ ಬಾರಿ ಜೋಕು
ಅಮೇಲ್ supplementary ಬರ್ದ್ ತೊಗೊಂಡೆ passing ಮಾರ್ಕು !!

ಪಂಚ್ : ನಂದ್ copy ಮಾಡಿದವ್ನ್ ಪಡ್ದಿದ್ದ Rank-u :P
                                               
*******

Wednesday, December 18, 2013

ಸುಧಾಮಂಗಳ

ಪೇಜಾವರ ವಿಶ್ವೇಶತೀರ್ಥ ಶ್ರೀಗಳ
ಮೂವತ್ತೆರಡನೇ ಸುಧಾ ಮಂಗಳ
ನಡೆದದ್ದು ವಿದ್ಯಾಪೀಠದ ಅಂಗಳ
ನೆರೆದಿತ್ತು ಜಾತ್ರೆಯ ಜನ ಜಂಗುಳ(ಳಿ)
ನಡೆದಿತ್ತು ಪರೀಕ್ಷೆ ವಿದ್ಯಾರ್ಥಿಗಳ
ಎಲ್ಲೆಲ್ಲೂ ಪಸರಿತ್ತು ನ್ಯಾಯಸುಧೆಯ ಪರಿಮಳ
ಜೊತೆಗೆ ಸಾಗಿತ್ತು ತತ್ವಜ್ಞಾನ ಸಮ್ಮೇಳ(ನ) -
ಮತ್ತು ಜನ್ಮಶತಮಾನೋತ್ಸವ ವಿದ್ಯಾಮಾನ್ಯ ಶ್ರೀಗಳ
ಶ್ರೀಗಳ ಇಚ್ಚೆಯಂತೆ ಮಾಡಿದರು ನಾರಾಯಣ ಮಂತ್ರದ ಜಪಗಳ
(ಇದರಿಂದಾಯಿತು ಕಲಿಗೆ ಉಪಟಳ!)
ಹಾಡಿ ಹೊಗಳಿದರು ವಿದ್ಯಾಮಾನ್ಯ ಗುರುಗಳ
ವರ್ಣಿಸಲಾಗದ ಆನಂದ-ಭಾಗವಹಿಸಿದವರೇ ಧನ್ಯ-ಇನ್ನಷ್ಟು ನಡೆಯಲಿ ಇಂಥ ಸುಧಾಮಂಗಳ!!




Friday, December 13, 2013

'ಹರಿ'ದ ಮನಸಿನ ವಿಚಾರ ಧಾರೆ


ಯಾರ್ಗೆ ಎಷ್ಟು ಅರ್ಥ ಆಗತ್ತೋ ಯಾರಿಗೂ ಗೊತ್ತಿಲ್ಲ!

ಮನಸ್ಸಿಗೆ ಅನ್ನಿಸಿದ್ದನ್ನು ಶೇಕಡ ೧೦೦ ರಷ್ಟು ಕಾರ್ಯಗತ ಮಾಡುವವನೇ ಮಹಾತ್ಮ . 

ಯಾವ ಕೆಲಸವೇ ಆದರೂ ಇಷ್ಟವಿಲ್ಲದೇ ಬಿಟ್ಟು ಹೋಗುವುದಕ್ಕೂ ಹೆದರಿ ಬಿಟ್ಟು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲವೇ? 

ಹೆಚ್ಚು ಮಾತು ಕಡಿಮೆ ಕೆಲಸ - ಮಾಡಿದರೆ ಆಗುವೆ ನೀ ಕಸ! 

ಯಾರಿಗೆ ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಇರುವುದೋ ಆ ಕೆಲಸ ಅವರೇ ಮಾಡಿದರೆ ಉತ್ತಮ. 

ಹಣ ಸಂಪಾದನೆ ಜೀವನೋಪಾಯಕ್ಕೇ ಹೊರತು, ಹಣ ಸಂಪಾದನಯೇ ಜೀವನವಲ್ಲ! ಈ ಸತ್ಯದ ಅರಿವು ನನಗೆ ಇಷ್ಟು ಬೇಗ ಆದದ್ದು ಸಂತೋಷದ ವಿಷಯವಾದರೂ ಅದು ವಿಪರ್ಯಾಸವೇ ಸರಿ. 

ಪರರಿಗೆ ಪರಿಚಯಿಸಿಕೊಡುವುದಕ್ಕೇ (ನಿನಗೆ ಬೇಡವಾಗಿದ್ದರೂ) ಹೆಸರು ಖ್ಯಾತಿ ಹೊಂದಿರು. 

ಅಹಂಕಾರ ಸ್ವಾಭಿಮಾನ - ಎರಡೂ ಬಿಟ್ಟಿರು!

ನೌಕರಿಯಲ್ಲಿ ಪದೋನ್ನತಿ ಪಡೆದರೆ ಪಾರ್ಟಿ.. ಆಧ್ಯಾತ್ಮಿಕದಲ್ಲಿ ಪದೋನ್ನತಿ (ಆಚಾರ್ಯರ ಒಂದು ಗ್ರಂಥದ ಮಂಗಳ ಮಾಡಿದರೆ) ಪಡೆದರೆ ಜೀವನ ಪಲ್ಟಿ! [ಜೀವ ನ ಸಾಧನೆಗಿಂತ ಜೀವ ನ ಸಂಪಾದನೆಯೇ ಅತಿ ಮುಖ್ಯ! ಆಲ್ವಾ? ]

ಜನರು ಪ್ರೀತಿಸುವುದು ನಿನ್ನ ಸ್ವಭಾವವನ್ನಲ್ಲ! ಅವರು ಪ್ರೀತಿಸುವುದು ಜ್ಞಾನ ಸಂಪತ್ತು ಅಥವಾ ವಿತ್ತ ಸಂಪತ್ತು. ನಿನ್ನಲ್ಲಿರುವ ಜ್ಞಾನದಿಂದ ವಿತ್ತ ಆರ್ಜನೆಯಾಗುತ್ತಿದ್ದರೆ ಮಾತ್ರವೇ ಆ ಜ್ಞಾನಕ್ಕೆ ಬೆಲೆ. ಹಾಗಾಗಿ ಹೆಚ್ಚಾಗಿ ಜನ ನಿನ್ನ ಮೆಚ್ಚುವುದು ನಿನ್ನಲ್ಲಿರುವ ವಿತ್ತ ಸಂಪತ್ತಿನ ಸಲುವಾಗಿಯೇ!

ಮನಸ್ಸು ಒಳ್ಳೆಯ ದಾರಿಯನ್ನು ತೋರುತ್ತದೆ ಹಾಗೆಯೇ ಕೆಟ್ಟ ದಾರಿಯನ್ನು ತೋರುತ್ತದೆ. ಒಳ್ಳೆ ಕಡೆ ಹೋಗೋದಕ್ಕೆ ಪ್ರಚೋದನೆಯನ್ನು ಕೊಡುತ್ತದೆ. ಆದರೆ ಸನ್ಮಾರ್ಗದಲ್ಲಿ ನಡೆಯಲು ಹಾತೊರೆದಾಗ, ಸುತ್ತಲಿನ ಬಂಧು ಮಿತ್ರರ ಕೈಯಲ್ಲಿ ಉಪದೇಶವೆಂಬ ಹಗ್ಗ ಕೊಟ್ಟು ನಿನ್ನನ್ನು ಹಿಂದಕ್ಕೆ ಎಳೆಸುತ್ತದೆ. 

ನಿನ್ನ ಬದುಕು ನಿನ್ನದಲ್ಲ, ಪರರದು - ಇದೇ ಇಂದಿನ ದಿನದ ಪರೋಪಕಾರಾರ್ಥಮಿದಂ ಶರೀರಂ!

ಗೂಡಲ್ಲಿ ಚೇಳಿದೆ, ಕೈ ಇಟ್ಟಲ್ಲಿ ಅದು ಕಚ್ಚುತ್ತದೆ ಎಂದು ಗೊತ್ತಿದ್ದರೂ ಮತ್ತೊಬ್ಬರ ಸಂತೋಷಕ್ಕಾಗಿ ಗೂಡಲ್ಲಿ ಕೈಯಿಟ್ಟು ಚೇಳು ಬಳಿ ಕುಟುಕಿಸಿಕೊಳ್ಳುವುದು ಮೂರ್ಖತನದ ಪರಮಾವಧಿಯಾದರೂ, ಅದೇ ಇಂದಿನ ಜೀವನ ಶೈಲಿ!! ಕಚ್ಚಿಸಿಕೊಂಡವ ಬಾಗುಂದಿ ಎಂದೇ ಹೇಳಬೇಕು! 

ಧರಿಸುವ ವಸ್ತ್ರ ಇರುವ ಜಾಗ ಬರುವ ಹಣ ಹುಟ್ಟುವ ಮಗು - ಸದಾ ಇದೇ ಚಿಂತೆ! ಇನ್ನೇಷ್ಟು ಜನ್ಮವೋ ಇದರಿಂದ ಹೊರಬರಲು??

ಎಲ್ಲವನ್ನೂ ಬಿಟ್ಟು ಹೋಗುವುದಕ್ಕೆ ಮಹಾಪರ್ವದ ವಿದ್ಯಾಧರನೊಬ್ಬನಿಂದಲೇ ಸಾಧ್ಯ![ಅದು ಧಾರಾವಾಹಿಯಲ್ಲಿ ಮಾತ್ರ]. 

ಜಾತಿ ಯಾವುದಾದರೇನು ರಾಶಿ ಬಲು ಮುಖ್ಯ!

ಕಾಲಿಗೆ ಬಿದ್ದಾದರೂ ಸರಿ ಕೆಲಸ ಗಿಟ್ಟಿಸುಕೋ - ಇಷ್ಟವಿದೆಯೋ ಇಲ್ಲವೋ ಕೇಳುವವರ್ಯಾರು ?

ತಂದೆ ತಾಯಿಯರ ವಚನವನ್ನು ಎಂದಿಗೂ ಕೇಳದೇ ಇರಬೇಡ. ಆ ಸಮಯಕ್ಕೆ ಅದು ನಿನಗೆ ಸರಿ ಕಂಡು ಬರದಿದ್ದರೂ ಭವಿಷ್ಯದಲ್ಲೊಂದು ದಿನ [ನನಗೆ ಸರಿಯಾಗಿ ಏಳು ವರ್ಷ ಬೇಕಾಯಿತು] ಅದು ಹೇಗೆ ಸರಿ ಎಂಬುದು ನಿನಗೆ ಅರ್ಥವಾಗುತ್ತದೆ! 

'Dell'ಲ್ಲಿಯಲ್ಲಿ ಅತಂತ್ರ ಸ್ಥಿತಿ!

(೧). ಯಸ್ಯಾಸ್ತಿ ವಿತ್ತಂ ಸ ನರಃ ಸ ಕುಲೀನಃ ..... (೨)..... ಆಯೆ ದುಃಖಮ್ ವ್ಯಯೇ ದುಃಖಮ್ ಧಿಕ್ ಅರ್ಥಃ ಕಷ್ಟಸಂಶ್ರಯಃ (೩) ಗಾಳಿ ಬಂದ ಕಡೆ ತೂರಿಕೋ 

ರಾಜ್ಯಪಾಲರಿಗಿರುವ ಬುದ್ದಿ ಹಂಸರಾಜರುಗಳಿಗೇಕಿಲ್ಲ ?

Last but not least,
ಜೀವನದ ಒಂದು ಘಟ್ಟದಲ್ಲಿ ನೀನು ಪರಾವಲಂಬಿ ಅರ್ಥಾತ್ ನಿನ್ನ ಯಾವ ಸ್ವಂತ ನಿರ್ಧಾರಕ್ಕೂ ಬೆಲೆಯಿರುವುದಿಲ್ಲ. [ಒಂದರ್ಥದಲ್ಲಿ ಇಡೀ ಜೀವನವೇ ಪರಾವಲಂಬನ - ಆ ಪರ ವ್ಯಕ್ತಿ ಭಗವಂತನಾಗಬೇಕೆಂಬುದೇ ನನ್ನಾಶಯ]

ಈಗ ಮತ್ತೊಮ್ಮೆ ಮೊದಲನೇ ವಾಕ್ಯ ಓದಿ !!

*******

Sunday, September 8, 2013

ಜೋಚುಟುಕುಗಳು - ೨

ಏನಿಲ್ಲ - ಗೊತ್ತಿಲ್ಲ

ಇವಳಿಗೆ ಏನು ಹೇಳೆಂದರೂ - ಏನಿಲ್ಲ
ಏನು ಕೇಳಿದರೂ - ಗೊತ್ತಿಲ್ಲ
ಇವಳನ್ನ ಕಟ್ಟಿಕೊಂಡು ನನಗೆ -
ಏಗೊದು ತಪ್ಪಿದ್ದಲ್ಲ :D

ಸಿಂಗಾರ 

ನನ್ನವಳು ಮಾಡ್ಕೊತಿದ್ಲು ಸಿಂಗಾರ
ಕರೆದೆ - ಬಾರೆ ಇಲ್ಲಿ ಮುದ್ದು ಬಂಗಾರ
(ಮನಸಿನಲಿ ಅನ್ಕೊತ )
ಎಷ್ಟ್ ಪೌಡರ್ ಬಳ್ಕೊಂಡ್ರು ನಿನ್ ಬಣ್ಣ ಅಂಗಾರ :P

ಬಾಳು - ಗೋಳು

ಸುಂದರವಾಗಿತ್ತು ನನ್ನ ಬಾಳು
ಅಂಟಿಸಿಕೊಂಡಿರಲ್ಲಿಲ್ಲ ಯಾವುದೇ ಗೀಳು
ಅವಳನ್ನು ಮದುವೆಯಾಗಿ ಆದೆ ಹಾಳು
ಈಗ ನಾನೇ ನಮ್ಮನೆ ಆಳು
ಆಗಿದೆ ಜೀವನ ಪೂರ್ತಿ ಗೋಳು !!

ಹೈಕು - ಲೈಕು

ದಿನಬೆಳಗಾದರೆ ಪೆಟ್ರೋಲ್ ಪ್ರೈಸಲಿ ಹೈಕು
ಆಗುತ್ತಿದ್ದರೆ ಓಡಿಸುವುದು ಹೇಗೆ ಕಾರು/ಬೈಕು
ಆದರೂ ಯಾಕೋ ಜನ ಮಾಡುತ್ತಿಲ್ಲ ಸ್ಟ್ರೈಕು
ಪ್ರತಿಭಟನಕಾರರು ಹಿಡಿಯುತ್ತಿಲ್ಲ ಮೈಕು
ಹೈಕು ಆಗುತ್ತಿರುವುದು ಸ್ಟ್ರೈಕು ಆಗದಿರುವುದು ನನಗಾಗುತ್ತಿಲ್ಲ ಲೈಕು !!

ಚಿನ್ನ - ಗುನ್ನ

(ಬೀದಿಯಲ್ಲಿ ಬುಗುರಿ ಬಿಡುತ್ತಿದ್ದ ಹುಡುಗ ಎದುರು ಮನೆ ಹುಡುಗಿಯನ್ನು ಕಂಡು)
ಚಿನ್ನ.....
ಅಂತ ಕರೆಯಲೇ ನಿನ್ನ!
ಆಕೆ: ಕೊಡ್ಲ ನಿನ್ ಬುಗ್ರೀಲೆ ಒಂದ್ ಗುನ್ನ !

ಆಚಾರ

ಆಕೆ: ನಿಮುಗ್ ಗೊತ್ತಿಲ್ಲ ಸುಮ್ನಿರಿ,.. ಅವ್ರ ಮನೇಲಿ ತುಂಬಾ ಆಚಾರ
ಈಕೆ : ಅಯ್ಯೋ ನಂಗ್ ಗೊತ್ತಿಲ್ವೇನು, ನೀವ್ ಸುಮ್ನಿರಿ,..  ತಿಳ್ಕೊಂಡಿಲ್ಲ ಅವ್ರು ಯಾವ್ದೇ ವಿಚಾರ
ನಾನಂದೆ : ನೀವಿಬ್ರು ಮಾಡ್ತಿರೋದು ಅನಾಚಾರ, ದುರಾಚಾರ  !! :P
ಇಬ್ಬರು ಒಟ್ಟಾಗಿ : ಕೆಟ್ಟಿದ್ಯ ನಿಂಗ್ ಗ್ರಹಚಾರ?
ನಂಗ್ ಯಾಕ್ ಬೇಕು ಅನ್ಕೊತ - ಅಲ್ಲಿಂದ ಕಾಲ್ಕಿತ್ತು ಹೊರಟೆ ನಾ ಸಂಚಾರ :D


****************************** 

Thursday, August 15, 2013

ಮೊದಲ ಭೇಟಿ


ಇಂದು ಬೇಗ ಮುಗಿಸಿ ಬಂದೆ ಡ್ಯೂಟಿ
ಆಗಲು ಅವಳನು ಮೊದಲನೇ ಭೇಟಿ
ಹಿರಿಯರು ವಿಧಿಸಿದ್ದ ನಿಯಮ ದಾಟಿ

ನೋಡಿರಲ್ಲಿಲ್ಲ ಅವಳು ಬೆಂಗಳೂರು ಪ್ಯಾಟಿ
ಹಿಗ್ಗಿದಳು ನೋಡಿ ಜಯನಗರದ ಬ್ಯೂಟಿ
ಅಂದಳು, ನಮ್ಮ MTR ಐಸ್ ಕ್ರೀಂಗೆ ಇಲ್ಲ ಸಾಟಿ
ಆಗಲೇ ತಿಳಿಸಿದೆ ಹಳೇ ಹುಡುಗಿಯರ ಐಡೆಂಟಿಟಿ
ಜೋರು ಮಳೆಯಲಿ ಇಬ್ಬರು ನೆಂದಿದ್ದು ಗ್ಯಾರಂಟಿ

ಬಲವಂತಕ್ಕೂ ತಿನ್ನಲ್ಲಿಲ್ಲ ನಮ್ಮನೆ ರೋಟಿ
ಮನೆಗೆ ಡ್ರಾಪ್ ಮಾಡುವಾಗ ಕಾರಿನವನಿಗಿರಲ್ಲಿಲ್ಲ ಹತೋಟಿ
ದೇವರ ದಯೆ, ಆಗಲ್ಲಿಲ್ಲ ಯಾವುದೇ ಆಕ್ಸಿಡೆಂಟಿ
ಲೇಟಾದರೂ ಮನೆಯಲಿ ಬೈಯಲ್ಲಿಲ್ಲ ಆಂಟಿ
ಹೊರಡುವಾಗ ಜಾರಿ ಬಿದ್ದೆ, ಸದ್ಯ ಮುರಿಯಲ್ಲಿಲ್ಲ ಬೋಟಿ

ಇಷ್ಟು ದಿನ ಆಗಿದ್ದೆ ನಾ ಒಂಟಿ
ಹಳ್ಳಕ್ಕೆ ಬೀಳ್ತಾಯಿದೀನಿ ಆಗುತ್ತಾ ಜಂಟಿ

Monday, July 29, 2013

(B)ಬದಲಾವಣೆ ತರಲು (J)ಜನರಿಗೊಂದು ಕುಟುಕಿನ (P)ಪದಮಾಲೆ


ನಿದ್ದೆ ಇಲ್ಲದೆ ದೇಶದ ಬಗ್ಗೆ ಚಿಂತಿಸುವ ನನ್ನಂತ(?) ಕೋಟ್ಯಾಂತರ ಜನರ (B)ಬೆಳಗಿನ (J)ಜಾವದ ಕುಟುಕಿನ (P)ಪದಮಾಲೆಯಿದು. ಆ ಕೋಟಿಯಲ್ಲಿ ನೀವು ಒಬ್ಬರಾ? 

- ಆಗಿದ್ದರೆ ಇದನ್ನು ನಿಮ್ಮ ಫೇಸ್ ಬುಕ್ ಗೋಡೆ ಮೇಲೆ ಹಚ್ಚಿಕೊಳ್ಳಿ / ಹಂಚಿಕೊಳ್ಳಿ, ಯಾಕೆಂದರೆ ಓದಿದ ಮೇಲೆ ನಿಮಗೆಷ್ಟು ಖುಷಿ ಆಗುವುದೆಂಬ ಅರಿವು ನನಗಿದೆ, ಆ ಖುಷಿ ನಿಮ್ಮಂತ ಇನ್ನು ನೂರಾರು, ಸಾವಿರಾರು ಜನರಿಗೂ ಸಿಗಲಿ. 

- ಆಗಿರದ್ದಿದ್ದಲ್ಲಿ ಇನ್ನು ಮುಂದಾದರೂ ಈ ಬಗ್ಗೆ ಎಚ್ಚರವಹಿಸಿ, ಯಾಕೆಂದರೆ ದೇಶದ ಭವಿಷ್ಯವೇ ನಮ್ಮ ಭವಿಷ್ಯ.                                                 **********

ಕಾಂಗ್ರೆ(S), (S)ಪಿ, ಬಿ(S)ಪಿ, ತೃಣಮೂಲ ಕಾಂಗ್ರೆ(S), ಜೆಡಿ(S) - ಇವರೆಲ್ಲಾ (Se)ಕ್ಯುಲಾರ್ ಗಳು, ಜಾತ್ಯಾತೀತರು. 
ಹೌದುರೀ.. ರಾಜಕಾರಣದಲ್ಲಿ ಇವರುಗಳೇ 'ಜಾತಿ'ಯನ್ನು 'ಅತಿ'ಯಾಗಿ 'ತರು'ವವರು.

ಅದಕ್ಕೆ ನಿಮಗೆಲ್ಲ ನನ್ನದೊಂದು ಕಿವಿಮಾತು:

(B)ಬಿಟ್ಟುಬಿಡಿ (J)ಜಾತಿ (P)ಪದ
ಆಗತ್ತೆ ಆಗ ನಿಜ
(B)ಭಾರತದ (J)ಜನನ (P)ಪುನಃ
ಮತ್ತು ಆಗತ್ತೆ
(B)ಬದಲಾವಣೆ (J)ಜೊತೆಗೆ (P)ಪುನರ್ನಿರ್ಮಾಣ
ನಮಗ್ಯಾಕ್ರಿ ಬೇಕು ಈ
(B)ಬೀದಿ (J)ಜಗಳದ (P)ಪಾಡು
ಎಂದು ನೀವು 'ಕೈ'ಕೊಟ್ಟರೆ
'ಕಾಂ'ಜಿಪೀಂಜಿ, ಅಯೋಗ್ಯರಿಗೆ ಅ'ಗ್ರೇಸ'ರರು, ('S'o)ಗಲಾಡಿ ('P'o)ರ್ಕಿ ಜನರು, ('B'i)ಕನಾಸಿ, ('S'o)ಮಾರಿ  ('P'i)ಳ್ಳೆಗಳು, ತಮ್ಮ 'ಎಡ'ಗೈಯಲ್ಲಿ (ಅಂಡು ತೊಳೆಯುವ ಕೈ ಎಂದು ಹೇಳಿದರೆ ನಮ್ಮ ಜನಕ್ಕೆ ಹೆಚ್ಹು ಅರ್ಥವಾದೀತು) ನಮ್ಮನ್ನು (ದೇಶದ ಜನರನ್ನು) ಬೀದಿಯಲ್ಲಿ ಬುಗುರಿ ಆಡಿಸಿದ ಹಾಗೆ ತಿರುಗಿಸುವುದು ಶತಃಸಿದ್ದ, ಭಾರತಮಾತೆಯ ಮೇಲಾಣೆ.

ಅರ್ಥವಾಗದವರು ಒಂದು ಬಾರಿ 'ನಮೋ' ನಮಃ ಅನ್ನಿ
ಮತ್ತು ಕಾದು ನೋಡಿ
ನರರಿಗೆ ಇಂದ್ರ, ದಾಮೋದರನಿಗೆ ದಾಸ ಮಾಡುವ ಮೋಡಿ

ಇನ್ನು ಅರ್ಥವಾಗದವರು ನಿಮ್ಮ 'ಕೈ' 'ಕಟ್' ಮಾಡ್ಕೊಂಡು ಬಾಯ್ಮೆಲ್ ಬೆರ್ಳ್ ಇಟ್ಕೊಂಡು, ಮತದಾನದ ದಿನ ಮನೆಲೇ ಮೂಲೆಲಿ ಕೂತಿರಿ, ನಿಮ್ ವೋಟಿಂದ ಯಾವನೂ 'ಉದ್ದಾ'ರ ಆಗೋದು ಬೇಡ.
                                                *******************

Tuesday, July 9, 2013

ಜೋಚುಟುಕುಗಳು - ೧

ಜೋಕಿನ ಚುಟುಕು - ಜೋಚುಟುಕು :) 
*************************

ನಾನೊಬ್ಬ ಆಶು ಕವಿ
ಬಡ್ಕೊಬೇಕು
ಅವ್ಳಿಗೆ ಕೇಳೋಲ್ಲ ಕಿವಿ

**********************

Ac ಬಾಯ್ ಗೆ Bc ಮುಟ್ಟಿಸಬೇಕಾದ್ರೆ  Cc ಲಿ ಮ್ಯಾನೇಜರ್ ಗೆ ಕಾಪಿ ಮಾಡಿ, ಆಗ ಅವ್ನು Dc ಶಾಕ್ ಹೊಡೆದವನ ತರ Ec ಸರ್ ಅಂತ ಬಂದು Ac ಸರಿ ಮಾಡಿ ಹೋಗ್ತಾನೆ.

**********************

ಚಾಟ್ ಲಿ ಹುಡುಗಿಗೆ ಹಾಕುತ್ತಿದ್ದೆ ಕಾಳು
ನಾನಿಲ್ಲದಾಗ
ಗೆಳೆಯ ಬಂದು ಮಾಡಿದ ಹಾಳು

**********************

ಗೊಂಬೆಗಳ ಲವ್ವು
ಸಿಂಪಲ್ಲಾಗ್ ಒಂದ್ ಲವ್ವು
ಕೃಷ್ಣನ ಲವ್ವು
ಬಂದರೂ ಸರಿ ಸಾಟಿಯಾಗಲ್ಲಿಲ್ಲ
ಜಗ್ಗೇಶನ ಡವ್ವು (ಗೆ)

**********************

ತಿನ್ಬೇಡ ಕಮ್ಮಿ ನೆಲಗಡಳೆಯ
ಜಾಸ್ತಿ ತಿನ್ನು ಗೋಡಂಬಿ ದ್ರಾಕ್ಷಿಯ
ನೋಡ್ದೆ ಇರ್ಬೇಡ ಫಿಲ್ಮ್ ಲೂಸಿಯ

***********************

ಗೋರಿ ಮೇಲೊಂದು ಗೋರಿ
ಮಾಡಲು ನಡೆಸಿದರು ತಯಾರಿ
ಶುರುವಾಯಿತು ಕಾಮಗಾರಿ
ಒಳಗಿಂದ ಎದ್ದ ಒಬ್ಬ ಅಘೋರಿ
ಕ್ಷಣದಲ್ಲಿ ಎಲ್ರೂ ಪರಾರಿ

************************

ನಾನಂದೆ, ಏ ಹುಡುಗಿ ಕಣ್ಣೀರು ಹಾಕಬೇಡ
ಕೇಳಲ್ಲಿಲ್ಲ ಅವಳು ಸುರಿಸಿದಳು ಬಡ(ಳ) ಬಡ(ಳ)
ತಮಿಳುನಾಡಿನವಳು ತಂದಳು ಖಾಲಿ ಕೊಡ

*************************


ಮೊಬೈಲಿಗೆ ಸಿಗಲ್ಲಿಲ್ಲ ಟವರ್
ಹುಡುಗಿಗೆ ಸಿಗಲಿಲ್ಲ ಲವರ್
ಹುಡುಗ ಈಗ ಬೆಟರ್

*************************

ಕನ್ನಡ ಫಿಲ್ಮ್ ಬರ್ತಿದೆ ಹೆಸ್ರು ಗಾಲಿ
ಅದಕ್ಕಿದೆ
ಅಶ್ಲೀಲ ಸಂಭಾಷಣೆಯ ಖಯಾಲಿ
ಯಾಕೆ ಹೀಗೆ ಅಂದರೆ
ಹೇಳುತ್ತಾರೆ ಈಗ ಇದು ಮಾಮೂಲಿ

************************

ಐವತ್ತಾದ ಮೇಲೂ ಶಿವಣ್ಣ ಆಗಿದ್ದ ರೆಡಿ
ಮಾಡಲು ಕಡ್ಡಿಪುಡಿ
ರಂಗಾಯಣ ರಘು ಮಾಡಿದ ಮೋಡಿ
ಸೂರಿ ಕೈ ಸುಟ್ಕೋಳ್ಳಿಲ್ಲ ಈ ಫಿಲ್ಮ್ ಮಾಡಿ

**************************

ನಿತೀಶ್ ಮಾಡಿದ ಆಲಕ್ಷ್ಯ
ಬಾಂಬ್ ಯಿಂದ ನಡುಗಿತು ಬುದ್ದ ಗಯ
ಕೇಕೆ ಹಾಕಿದ ದಿಗ್ವಿಜಯ
ಕಾಂಗ್ರೆಸ್ಸಿಗೆ ಕಾದಿದೆ ಅಪಜಯ

**************************

Sunday, July 7, 2013

ಶನಿವಾರದ ಸಂಜೆ

ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕಡೆ ನಮ್ಮ ಸವಾರಿ ಸಾಗಿತ್ತು. ಶಂಕರ ಮಠದ ಹತ್ತಿರ ಯಾರನ್ನೊ ನೋಡಬೇಕಿದ್ದರಿಂದ ಮೊದಲು ಅಲ್ಲಿಗೆ ಹೋಗಿ ಆ ಕೆಲಸ ಮುಗಿಸಿ ಜೀಬಿ ಕಡೆ ಬರುತ್ತಿದ್ದೆ. ಸಿಗ್ನಲ್ ನಲ್ಲಿ ಕೆಂಪು ಬಣ್ಣದಲ್ಲಿ ಕಡಿಮೆಯಾಗುತ್ತಿರುವ ಎಣಿಕೆಯ ಸಂಖ್ಯೆಯನ್ನು ನೋಡುತ್ತಾ ಎಂದೋ ಓದಿದ್ದ ಮೈಕ್ರೊಕಂಟ್ರೊಲರ್ನ ಕೌಂಟರ್ ಪ್ರೊಗ್ರಾಮ್ ನೆನಪಿಸಿಕೊಳ್ಳುತ್ತಿದ್ದೆ. ಹಿಂದಿನಿಂದ ಭುಜಕ್ಕೆ ಗುದ್ದಿದ ಇವಳು ಆಕಾಶಕ್ಕೆ ಮುಖಮಾಡಿ ರೀ ಮಳೆ ಬರೊ ಹಾಗಿದೆ, ನಡೀರಿ ಮನೆಗ್ ಹೋಗಣ ಅಂದ್ಲು. ಜೀಮ್ಮೆ (GM) ಜೊತೆಗಿರುವಾಗ ಮಳೆ ಯಾವ ಲೆಕ್ಕ ಸುಮ್ಕೆ ಕೂರಮ್ಮಿ ಅಂದು ಹಸಿರು ದೀಪ ನೋಡಿ ಸೆಲ್ಪ್ ಸ್ಟಾರ್ಟ್ ಬಟನ್ ಅದುಮಿದೆ.
 
ಜೀ ಎಮ್ ಅಂದರೆ ಏನೆಂದು ಯೋಚಿಸುತ್ತಿದ್ದಿರಾ? (G)ಗುಡ್ (M)ಮಾರ್ನಿಂಗ್ ಅಂತು ಖಂಡಿತ ಅಲ್ಲ. ಜೀ ಎಮ್ ಅನ್ನುವುದು ಇವಳಿಗೆ ನಾನಿಟ್ಟಿರುವ ಹೆಸರು. ಜೀ ಎಮ್ ಗೆ ಬಹಳಷ್ಟು ಅಬ್ರಿವೇಷನ್ ಗಳಿದೆ, ಅದರಲ್ಲಿ ಕೆಲವೊಂದಿಷ್ಟು ಇಲ್ಲಿದೆ.
೧. (G)ಜೆನರಲ್ (M)ಮ್ಯಾನೆಜರ್ - ಇವಳೆ ನಮ್ಮನೆಗೆ
೨. (G)ಗುಂಡೂರಾಯರ (M)ಮಗಳು
೩. (G)ಗುಣವಂತೆ (M)ಮಡಿವಂತೆ
೪. (G)ಗೋಲ್ಡ್ (M)ಮನಿ - ನನ್ನ ಚಿನ್ನ ಬಂಗಾರ ಆಸ್ತಿ ಅಂತಸ್ತು ಐಶ್ವರ್ಯ ಎಲ್ಲಾ ಇವಳೆ
೫. (G)ಗಾಳಹಾಕಿ (M)ಮನೆಗ್ ಕರೆತಂದವಳು - ಇದು (ಅಪ)ಅರ್ಥ ಆಗಿದ್ರೆ ಮುಂದಿನ ವಾಕ್ಯ ಓದಬೇಡಿ. ಅರ್ಥ ಆಗದವರಿಗೆ - ಹಾಗಂದ್ರೆ ತಾಳಿಕಟ್ಟಿ ಮನೆ ತುಂಬಿಸಿಕೊಂಡವಳು :P 
ಇನ್ನು ಏನೆನೋ ಇದೆ, ಅದೆಲ್ಲ ಇಲ್ಲಿ ಬೇಡ. ಜೀ ಎಮ್ ಅಂತಂದುಬಿಟ್ಟರೆ ಇವಳು ಉಬ್ಬಿ ಹೋಗುತ್ತಾಳೆ, ಆಗಲೇ ಅಲ್ಲವಾ ನನ್ನ ಕೆಲಸಗಳು ಕ್ಷಣ ಮಾತ್ರದಲ್ಲಿ ಆಗುವುದು. ನಿಮಗೊಂದು ಗೊತ್ತಾ? ನಿಜ ಹೇಳ್ತಿದೀನಿ ಅಸಲಿಗೆ ಜೀ ಎಮ್ ಎಂದರೆ ಇದ್ಯಾವುದೂ ಅಲ್ಲ !!

ಹಾಗಿದ್ರೆ ಜೀ ಎಮ್ ಅಂದ್ರೆ ಏನಿರಬಹುದೆಂದು ಜಾಸ್ತಿ ಊಹಿಸಬೇಡಿ, ನಾನೇ ಹೇಳುತ್ತೇನೆ. ಜೀ ಎಮ್ ಅಂದರೆ (G)ಗುಡುಗು (M)ಮಿಂಚು ! ಯಾಕೆಂದರೆ ಇವಳು ಮನೆಯಲ್ಲಿ ಮತ್ತು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದಲ್ಲಿ ಒಂದೋ ಗುಡುಗುತ್ತಿರುತ್ತಾಳೆ (ಚರ್ಚೆ, ವಾದ-ವಿವಾದ, ಪರ-ವಿರೋಧ, ಮಾತುಕಥೆ, ಹರಿಕಥೆ, ಪುರಾಣ) ಇಲ್ಲ ಮಿಂಚುತ್ತಿರುತ್ತಾಳೆ (ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎಲ್ಲರೂ ನನ್ನ ಬಳಿ ಬಂದು ಎನ್ರಿ ನಿಮ್ಮೊರು ಮಿಂಚಿಂಗೋ ಮಿಂಚಿಂಗು ಅಂತ ಹೇಳೋರೆ). ಈ ಅಬ್ರಿವೇಷನ್ ನಿಮ್ಮಲ್ಲೆ ಇಟ್ಕೊಳಿ, ಇವಳು ಸಿಕ್ಕಾಗ ಅಪ್ಪಿ ತಪ್ಪಿ ಬಾಯ್ ಬಿಟ್ಬಿಟೀರ, ಗೊತ್ತಾದ್ರೆ ಇವಳು ನನ್ನ (G)ಗುಡಿಸಲು (M)ಮನೆ ಸೇರಿಸೋದು ಗ್ಯಾರಂಟೀ. 

ವಿಷಯಾಂತರಕ್ಕೆ ಕ್ಷಮೆ ಇರಲಿ, ಸಿಗ್ನಲ್ ಲೈಟ್ ಗ್ರೀನ್ ಆದಂಗೆ ನಾನು ಸೀದಾ ಹೋದೆ. ಹಾಗೆ ಮಾಡದೆ ಬಲಕ್ಕೆ ತಿರುಗಿದ್ದರೆ ಮಳೆ ಬರುತ್ತಿರಲ್ಲಿಲ್ಲವೇನೋ? ಸಿಗ್ನಲ್ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಮಳೆ ಶುರುವಾಯಿತು. ಹತ್ತು ಸೆಕೆಂಡ್ ಗಳಲ್ಲೆ ಮಳೆ ಜೋರಾಗಿ ಗಾಡಿ ನಿಲ್ಲಿಸಿದೆ. ನಮಗೆ ಆಸರೆ ನೀಡಿದ್ದು ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ, ಇವಳೊ ಉರಿದು ಬೀಳುತ್ತಿದ್ದಳು. ಕಾರಣ ಸರ್ಕಾರದ್ದು ಅಂದರೆ ಇವಳಿಗೆ ಆಗಲ್ಲ, ಎರಡನೆಯದು ಹೆಣ್ಮಕ್ಕಳ ಶಾಲೆ, ನಾನು ಅತ್ತ ಕಡೆ ಸುಳಿಯಲೂ ಕೂಡದು ಎಂಬುದು ಇವಳ ಆಜ್ಞೆ. ನಾನು ಸುತ್ತೊದು ಬರೀ ಡಿಗ್ರೀ ಕಾಲೇಜಿನ ಮುಂದಷ್ಟೇ ಅಂತ ಹೇಳಿ ಆ ಕಡೆ ತಿರುಗಿದರೆ ಇವಳು ಮೂಲೆಲಿದ್ದ ಬೆಂಚಿನ ಮೇಲೇ ಆಸೀನಳಾಗಿದ್ದಳು. ಸದ್ಯ ನಾನು ಹೇಳಿದ್ದು ಕೇಳಿಸಿಲ್ಲ ಅಂತ ಮನಸಲ್ಲೆ ಮಂಡಿಗೆ ತಿನ್ನುತ್ತಾ ಅತ್ತ ನಡೆದರೆ ಇವಳ ವರಸೆ ಬದಲಾಗಿಬಿಟ್ಟಿತ್ತು. ರೀ ಐಸ್ ಕ್ರೀಮ್ ತಂದ್ಕೊಡ್ರಿ ಅಂದ್ಲು. ಅರೆಘಳಿಗೆ ದಪ್ಪ ಮಳೆಹನಿ ದಿಟ್ಟಿಸಿ ನೋಡುತ್ತಿದ್ದ ನನಗೆ, ರೀ ಹೋಗ್ರಿ ಏನಾಗಲ್ಲ ಅಂತ ದಬಾಯಿಸಿದಳು. ಅಂತೂ ಮಳೇಲಿ ನೆಂದು ಇವಳ ಐಸ್ ಕ್ರೀಮ್ ಆಸೆ ಪೂರೈಸಿದೆ. ಅರ್ಧ ಗಂಟೆ ಕಳೆದ ಮೇಲೆ ಮಳೆ ನಿಂತಿತು. ಶುರುವಾಯಿತು ನೋಡಿ ಇವಳ ಶಾಪಿಂಗು. ಕಾಲ್ ವರುಸ್ಕೊಳೊ ಕಾರ್ಪೆಟ್ ಯಿಂದ ಹಿಡಿದು ಇವಳು ತಲೆಗ್ ಹಾಕೊಳೊ ಕ್ಲಿಪ್ ತನಕ ಎಲ್ಲಾ ಕೊಂಡಳು. ನಾನು ರೈಲ್ವೇ ಸ್ಟೇಷನ್ನಿನ ಕೂಲಿ ತರ ಮೂರು ಕವರ್ ಚೀಲ ಹಿಡಿದು ಇವಳ ಹಿಂದೆ ಹಿಂದೆ ಹೋಗುತ್ತಿದ್ದೆ. ಅಂತೂ ಎಲ್ಲಾ ಮುಗಿದು (ನನ್ನ ಪರ್ಸಲ್ಲಿದ್ದ ದುಡ್ಡು ಸೇರಿ) ಮನೆ ಸೇರಿದಾಗ ರಾತ್ರಿ ಒಂಬತ್ತಾಗಿತ್ತು. ಊಟ ಮಾಡಿ ಮಲಗಿದೆವು. 

ರಾತ್ರಿ ನಿದ್ದೆ ಹತ್ತಿದ್ದು ಗೊತ್ತಿಲ್ಲ ಆದರೆ ಬೆಳಗ್ಗೆ ಏಳಲು ಸಾಧ್ಯವಾಗುತ್ತಿಲ್ಲ ನನಗೆ, ಮೂಗು ಕಟ್ಟಿ ಉಸಿರಾಡಲು ಕಷ್ಟವಾಗುತ್ತಿದೆ. ತಲೆ ಸಿಡಿಯುತ್ತಿದೆ, ಜ್ವರ ಸುಡುತ್ತಿದೆ. ಇವಳು ತಲೆಗೊಂದು ಒದ್ದೆ ಬಟ್ಟೆ ಸುತ್ತಿ, ನಮ್ಮನೆ ಪಕ್ಕದಲ್ಲೇ ಇದ್ದ ಪ್ರಾಕ್ಟೀಸ್ ಡಾಕ್ಟರ್ ಪರಿಣಿತಳನ್ನ ಕರೆಸಿದಳು. ಪರಿಣಿತ ಬರೋಷ್ಟರಲ್ಲಿ ಇವಳು ಅಮ್ಮಗೆ ಕರೆ ಮಾಡಿ ನೋಡಿ ಅತ್ತೆ ಐಸ್ ಕ್ರೀಂ ತಿಂದಿದ್ದು ನಾನು ಆದ್ರೆ ಇವರು ಮಲ್ಕೊಬಿಟ್ಟಿದ್ದಾರೆ ಅಂತಿದ್ದಳು. ನಾನು ಹು ಐಸ್ ಕ್ರೀಂ ತಿಂದಿದ್ದು ಅವ್ಳು ಮಳೆಲಿ ನೆಂದಿದ್ದು ನಾನು ಅಂತ ಹೇಳಕ್ಕೆ ಫೋನ್ ಇಸ್ಕೊಲೋಷ್ಟರಲ್ಲಿ ಡಾಕ್ಟರು ಬಂದು ನನ್ನ ನೋಡಿ ಇಂಜೆಕ್ಷನ್ ಕೊಡಬೇಕಾದರೆ ನಾನು ಆ ಆ ಆ ನೋವು ಎಂದು ಚೀರುತ್ತಾ ಎದ್ದು ಕೂತೆ.

ನಾನು ಕೂಗಿದ ಸದ್ದಿಗೆ ಅಕ್ಕ ಏನಾಯ್ತೊ ಅಂತ ಬಂದಳು. ಏನಿಲ್ಲಕ್ಕ ಭಯಾನಕ ಕನಸು ಅಂದೆ, ಗುರುಗಳ್ ಆರಾಧನೆ ಅಂತ ರಾಯರ ಮಠದಲ್ಲಿ ಸರಿಯಾಗಿ ಬಾರಿಸಿ ಬಂದು ಮಲಗಿದರೆ ಮಧ್ಯಾನ್ಹನೂ ಕನಸು ಬೀಳತ್ತೆ ಬೆಳಗ್ಗೆನೂ ಬೀಳತ್ತೆ ಎದ್ದು ಮುಖ ತೊಳ್ಕೊ ಕಾಫಿ ಕೊಡ್ತೀನಿ ಅಂತ ಬೈದು ಅಡುಗೆ ಮನೆಗೆ ಹೋದಳು.

ನಾನು ಮುಖ ತೊಳೆದು ಕಾಫಿ ಕುಡಿದು ಕನಸು ನಿಜವಾದರೆಂಬ ಭಯದಿಂದ ಗಾಡಿ ತೆಗೆಯದೆ 3E ಬಸ್ ಹತ್ತಿ ನಾರ್ತ್ ರೋಡಲ್ಲಿ ಇಳಿದೆ. ಸ್ವಲ್ಪ ಹಿಂದೆ ಬಂದು ಸಿಗ್ನಲ್ ದಾಟಿ ಜೀಬಿ ಕಡೆ ಹೆಜ್ಜೆ ಹಾಕಿದೆ ಮಳೆ ಶುರುವಾಯಿತು. ಮಳೆ ಜೋರಾಗುತ್ತಲೆ ನಾನು ಆಸರಿಸಿದ್ದು ಅದೇ ಸರ್ಕಾರಿ ಹೆಣ್ಮಕ್ಕಳ ಮಾದರಿ ಪ್ರೌಢಶಾಲೆಯ ಸಜ್ಜ. ಸುಮಾರು ಹೊತ್ತು ಟೆಂಪಲ್ ರನ್ ಆಡಿದೆ, ಅದು ಬೇಜಾರಾಗಿ ಕನಸನ್ನು ನೆನೆದು ಬೆಚ್ಚಿಬೀಳುವಾಗಲೇ ಮಳೆ ನಿಂತಿತ್ತು. ನನ್ನ ಗೃತ್ಸಮದನಿಗೆ ಹೊಸ ಇಯರ್ ಫೋನ್ ಕೊಳ್ಳಲು ಇಡೀ ಜೀಬಿ ಸುತ್ತಿದರೂ ಎಲ್ಲೂ ಒರಿಜಿನಲ್ ಸಿಗಲ್ಲಿಲ್ಲ, ನೀವು ಸರ್ವೀಸ್ ಸೆಂಟರ್ ಗೆ ಹೋಗಿ ಅಲ್ಲಿ ಸಿಗಬಹುದೆಂದು ೩-೪ ಅಂಗಡಿಯಲ್ಲಿ ಹೇಳಿದರು, ಗಾಡಿಯಿರಲ್ಲಿಲ್ಲ ಸಜ್ಜನ್ ರಾವ್ ಸರ್ಕಲ್ ತನಕ ನಡೆಯಲು ಮನಸಾಗಲ್ಲಿಲ್ಲ. A2B (ಆಡ್ಯಾರ್ ಆನಂದ ಭವನ) ತನಕ ಬಂದು ನನ್ನಿಷ್ಟವಾದ ಬೇಳೆ ಹೋಳಿಗೆಗೆ ತುಪ್ಪ ಹಾಕಿಸಿಕೊಂದು ಬಾದಾಮಿ ಹಾಲು ಸೇರಿಸಿ, ಕೆನರಾ ಬ್ಯಾಂಕ್ ಕಟ್ಟೆ ಮೇಲೆ ಕುಳಿತು ಬಿಸಿ ಬಿಸಿ ಹೋಳಿಗೆ ಸೇವಿಸಿದೆ. ತಿನ್ನುವಾಗ ಹಿಂದೆ ನಾವೆಲ್ಲಾ ಗೆಳೆಯರು ಅಲ್ಲಿ ದಿನಾ ಸೇರಿ ಗುಲ್ಲೆಬ್ಬಿಸುತ್ತಿದ್ದುದು ನೆನಪಾಗಿ ಕೊಂಚ ಬೇಜಾರಾದರೂ, ಕೆಲ ನಿಮಿಷದಲ್ಲೆ ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಖುಷಿಯಾಗಿದ್ದಾರೆ ಅನಿಸಿ ಮನಸಿಗೆ ಸಮಾಧಾನವಾಯಿತು. ಶನಿವಾರವಾದ್ದರಿಂದ ಕಾರಂಜಿ ದೇವಸ್ಥಾನಕ್ಕೆ ತೆರಳಿ ಹನುಮಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ದೇವರಿಗೆ ಅರ್ಚಿನೆ ಮಾಡಿಸಿ "ಓ ದೇವರೇ ಜೀವನ ಇದೇ ತರ ಇರ್ಲಿ" ಅಂತ ಬೇಡಿಕೊಳ್ಳುತ್ತಿರುವಾಗಲೇ ನಾನು ಹಿಂದೆ ಬರೆದಿದ್ದ "ಜೀವನ" ಚುಟುಕು ನೆನಪಾಗಿಬಿಟ್ಟಿತು. 


ಶ್ರೀ ರಾಮನು ನನ್ನ ಬೇಡಿಕೆಗೆ ಅಸ್ತು ಅಂದಂತಾಗಿ ನಾನು ಆ ತರ ಬೇಡ ದೇವ್ರೆ ಅಂತ ಮತ್ತೊಮ್ಮೆ ಕರೆಕ್ಟ್ ವರ್ಶನ್ ಅಪ್ಲಿಕೇಶನ್ ನ ದೇವರಿಗೆ ಸಲ್ಲಿಸಿ ಮನೆ ಕಡೆ ಹೋಗಲು ಬಸ್ ಹಿಡಿಯಲು ಗಣೇಶ ಭವನ ಬಸ್ ಸ್ಟಾಪ್ ಗೆ ಬಂದು ನಿಂತೆ. ಪರಿಚಯವಿದ್ದ ಮೆಡಿಕಲ್ ಶಾಪಿನವನಿಗೆ ಹಲೊ ಅನ್ನೊಷ್ಟರಲ್ಲಿ 43E ನಂಬರ್ ಬಸ್ ಬಂದಾಗ, ಹತ್ತಿದೆ. ಕನಸಲ್ಲಿ ಅಷ್ಟೋಂದು ಶಾಪಿಂಗ್ ಮಾಡಿದ್ದು ಜ್ಞಾಪಕ ಬಂದು, ಬಾಟ ಶೋ ರೂಂ ಬಳಿ ಇಳಿದು, ಒಂದು ಜೊತೆ ಚಪ್ಪಲಿ ಖರೀದಿಸಿ ಮನೆ ಕಡೆ ಹೆಜ್ಜೆ ಹಾಕಿದೆ. ಬಾಗಿಲಲ್ಲಿರುವಾಗಲೆ ಅಕ್ಕ ನನ್ನ ಡೀಟೈಲ್ಸ್ ಫೋನಲ್ಲಿ ಹೇಳುತ್ತಿದ್ದಿದು ಕೇಳಿಸಿತು. 
                                  **************************************

Thursday, July 4, 2013

ಫೇರ್ ವೆಲು


ಕೊಲೀಗ್ ನ ಫೇರ್ ವೆಲು
ಇಸ್ಕಾನು ಶ್ರೀಕೃಷ್ಣ ಟೆಂಪಲು
ಹೈಯರ್ ಟೇಸ್ಟ್ ಹೋಟೆಲು
ಅಲ್ಲೇ ಮಧ್ಯಾನ್ಹದ ಮೀಲು
ಆಮೇಲೆ ಒರಾಯನ್ ಮಾಲು
ಮಾಡಲು ಹೋದೆವು ಬೌಲು
ಅಲ್ಲಿತ್ತು ಬರೀ ತೂತಿದ್ದ ಬಾಲು
ಕೆಲವರು ಕುಡಿದರು ಆಲ್ಕೊಹಾಲು
ಮಳೆಯಲಿ ಮನೆ ಸೇರುವುದೇ ಆಗಿತ್ತು ಎಲ್ಲರ ಗೋಲು
ಮತ್ತೆ ಮನೆಯಲಿ ಅದೇ ಮಾಮೂಲು
ಆಗಿತ್ತು ನಿದ್ದೆ ತಾನಾಗೆ ಚಾಲು
                                       ********************


Monday, July 1, 2013

'ಗುಟ್ 'ಕಾ ಕಥೆ


೩೧ / ೦೫ / ೨೦೧೩

ಬಾಗ್ಮನೆ ತಂತ್ರಜ್ಞಾನ ಉದ್ಯಾನದ ಕಟ್ಟ ಕಡೆಯ ಕಟ್ಟಡದ ಎರಡನೇ ಮಹಡಿಯಲ್ಲಿ, ದ್ವಾರದಿಂದ ಸೀದಾ ಹೋದರೆ ಮೂರನೇ ಚೌಕದ  ಮೂಲೆಯಲ್ಲಿ ಕೂತಿದ್ದ ರಶ್ಮಿ ಇದ್ದಕ್ಕಿದ್ದ ಹಾಗೆ ಎದ್ದು ಮಹಡಿಯ ಮೆಟ್ಟಿಲ ಕಡೆ ಓಡಿದಳು. ಒಂದೇ ಸಮನೆ ಏದುಸಿರು ಬಿಡುತ್ತಾ ಮೆಟ್ಟಿಲುಗಳನ್ನು ಏರಿದ ರಶ್ಮಿ ಕಾವಲುಗಾರನ ತಡೆಯನ್ನು/ಅಪ್ಪಣೆಯನ್ನು ಮೀರಿ ಬಂದು ನಿಂತಿದ್ದು, ಹನ್ನೆರಡನೆ ಮಹಡಿಯ ಮೇಲಿರುವ ತಾರಸಿಯಲ್ಲಿ. ಪಶ್ಚಿಮದ ಆಗಸದಲ್ಲಿ ಸೂರ್ಯ ಇನ್ನೊಂದು ಕ್ಷಣದಲ್ಲಿ ಮುಳುಗಲಿದ್ದ. ಆಗಲೇ ಅವಳ ಮೊಬೈಲ್ ರಿಂಗಣಿಸಿತು. ಹತ್ತು ನಿಮಿಷದ ಕೆಳಗೆ ಕರೆ ಮಾಡಿದ್ದ ಆಕೆಯ ಗೆಳತಿ ಸೀಮಾ ಫೋನಿನಲ್ಲಿ ಏನು ಉಸುರಿದಳೋ? ಎರಡು ಸೆಕೆಂಡು ರಶ್ಮಿ ಕೈ ಕಟ್ಟಿ ತಲೆ ತಗ್ಗಿಸಿ ನಿಂತಿದ್ದಳು. ಅವಳು ಮತ್ತೆ ತಲೆ ಮೇಲೆತ್ತಿದಾಗ ಆಗಸದಲ್ಲಿ ಸೂರ್ಯ ಇರಲ್ಲಿಲ್ಲ, ಅದಾಗ ಉದಯಿಸುತ್ತಿದ್ದ ಚಂದ್ರ ತನ್ನನ್ನು ಕದ್ದು ನೋಡುತ್ತಿದ್ದಾನೇನೋ ಅನಿಸಿ ರಶ್ಮಿಯ ಮುಖ ಕಪ್ಪಿಟ್ಟಿತ್ತು. ತನ್ನನ್ನು ಕಾಡುತ್ತಿರುವ ಅಪರಾಧಿ ಪ್ರಜ್ಞೆಯಿಂದ ಮುಕ್ತಿಯಾಗಲು ನಡೆದಿರುವುದೆಲ್ಲವನ್ನು ಶಶಿಗೆ ಹೇಳಿಬಿಡಬೇಕೆಂದು ತೀರ್ಮಾನಿಸಿ ಕೆಳಗಿಳಿದು ಬಂದಳು.

                                                      *********************************

ನಾನು ರಶ್ಮಿ. ಹುಟ್ಟಿದ್ದು ಬೆಳೆದದ್ದು ಚಿನಾ ಹಳ್ಳಿಯ ಯಾವುದೋ ಒಂದು ಕುಗ್ರಾಮ. ಸುತ್ತ ಹತ್ತಾರು ಹಳ್ಳಿಗಳಿಗೆಲ್ಲ ಸೇರಿ ಇದ್ದಿದ್ದು ಒಂದೇ ಶಾಲೆ ಕಾಲೇಜು. ಎರಡು ಅಕ್ಕ ಪಕ್ಕದಲ್ಲೇ ಇತ್ತು. ನನ್ನ ಮನೆಗೂ ಶಾಲೆಗೂ ೨ ಕಿಮೀ ಅಂತರ. ನಾನು ಶಾಲೆಗೇ ಹೋಗಲು ಶುರು ಮಾಡಿದಾಗಿನಿಂದಲೂ ನನ್ನನ್ನು ಸೈಕಲ್ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದುದು ನನ್ನ ಪಕ್ಕದ ಮನೆಯ, ಅದೇ ಶಾಲೆಯ ನನಗಿಂತಲೂ ೨ ವರ್ಷ ಹಿರಿಯನಾದ ರವಿಕುಮಾರ. ನನ್ನ SSLCವರೆಗೂ ನಮ್ಮ ಸೈಕಲ್ ಮೆರವಣಿಗೆ ಸಾಗಿತು, ಆಮೇಲೆ ರವಿಕುಮಾರ ಡಿಗ್ರಿ ಕಾಲೇಜಿಗೆ ಅಂತ ಪಟ್ಟಣ ಸೇರಿದ. ಆದರೆ ಅಷ್ಟರಲ್ಲಾಗಲೇ ನಾವು ಪರಸ್ಪರ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೆವು. ನಾನು ಪಿಯುಸಿ ಓದುವಾಗ ಪಟ್ಟಣದಿಂದ ರವಿಕುಮಾರ ಬಂದಾಗಲೆಲ್ಲ, ನಾವಿಬ್ಬರೂ  ಕದ್ದು ಮುಚ್ಚಿ  ಭೇಟಿ ಮಾಡುತ್ತಿದ್ದೆವು. ಎರಡು ವರ್ಷ ಕಳೆದ್ದದ್ದೆ ಗೊತ್ತಾಗಲ್ಲಿಲ್ಲ. ಹೇಗೋ ಮಾಡಿ ಪಿಯುಸಿ ಪರೀಕ್ಷೆಯಲ್ಲಿ ನಾನು ಪಾಸಾಗಿದ್ದೆ. ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತೀನಿ ಎಂದು ಹಠ ಮಾಡಿದಾಗ, ನನ್ನ ರವಿಯ ಕಳ್ಳಾಟ-ಚೆಲ್ಲಾಟ ಕಂಡಿದ್ದ ನಮ್ಮಿಬ್ಬರ ಮನೆಯವರೂ, ನಮಗೆ ಮದುವೆ ಮಾಡಿಬಿಟ್ಟರು. ಆಗ ನನಗೆ ೧೮ ರವಿಗೆ ೨೦ ವಯಸ್ಸು.

ರವಿಕುಮಾರನ ಹೆಂಡತಿಯಾಗಿ ಮೊದಲ ಬಾರಿ ನಾನು ಪಟ್ಟಣಕ್ಕೆ ಕಾಲಿಟ್ಟಿದ್ದು ೨೦೦೫ರಲ್ಲಿ.  ಮಾವ ತೀರಿದ್ದ ಒಬ್ಬರೇ ವಾಸವಾಗಿದ್ದ ರವಿಯ ಸೋದರತ್ತೆ ಮನೆಯಲ್ಲಿ ನಾನು ಸಂಸಾರ ಮಾಡಲು ಶುರುಮಾಡಿದ್ದೆ. ಡಿಗ್ರಿ ಪಾಸಾದರೆ ಸಾಕು, ಲಂಚ ಕೊಟ್ಟು ಯಾವುದಾದರೂ ಸರ್ಕಾರಿ ಕೆಲಸಕ್ಕೆ ತಗಲಾಕೊಳದು ಅಷ್ಟೇ ಅಂತ ರವಿ ತೀರ್ಮಾನಿಸಿ ವರ್ಷಗಳೇ ಆಗಿದ್ದವು. ಹತ್ತು ಲಕ್ಷದವರೆಗೂ ಲಂಚ ಕೊಡಲು ಅವರಪ್ಪ ಕೂಡ ಹೂ ಅಂದಿದ್ದರು. ಹಾಗಾಗಿ ರವಿ ಮೂವೈತ್ತೈದಕ್ಕಿಂತ ಹೆಚ್ಚಿಗೆ ಪಡೆದವನೇ ಅಲ್ಲ.

ರವಿ ಡಿಗ್ರಿ ಪಾಸಾದ, ಅವನಂದುಕೊಂಡಂತೆ ೮ ಲಕ್ಷಕ್ಕೆ ಸರ್ಕಾರಿ ಕೆಲಸದ ಡೀಲ್ ಸಿಕ್ಕಿತು. ಡೀಲ್ ಕೊಡಿಸಿದವರ ಕಂಡಿಶನ್ ಇತ್ತು. ಅದು ಒಂದು ವರ್ಷ ಕಾಯುವುದು. ಒಂದೇ ವರ್ಷ ತಾನೇ ಹೇಗೋ ಕಳೆದು ಹೋಗತ್ತೆ ಅಂತ ರವಿ ಅಪ್ಪ ಒಪ್ಪಿದ್ದರು.  ಸರದಿ ಪ್ರಕಾರ  ಒಂದು ವರ್ಷವಾದಮೇಲೆ ನಿನಗೆ ಆರ್ಡರ್ ಕಳಿಸುತ್ತೇವೆ, ಆಗ ಬಂದು ಸೇರಿಕೋ ಎಂದು ಹೇಳಿ ಡೀಲ್ ಕೊಡಿಸಿದವರು ಕಳಿಸಿದ್ದರು, ಮತ್ತು ಆಗಾಗ ಕರೆ ಮಾಡಿ ಹೆಚ್ಚು ಹಣ ಕೊಟ್ಟರೆ ಮಾತ್ರ ಬೇಗ ಕೊಡಿಸೋಕೆ  ಸಾಧ್ಯ ಎಂದು ಇಪ್ಪತೈದು ಐವತ್ತು ಸಾವಿರ ತೊಗೊತಿದ್ದರು.

ಒಂದು ವರ್ಷ ಕಳೆಯುತ್ತಾ ಬಂದಿತ್ತು. ಇನ್ನೇನು ರವಿ ಸರ್ಕಾರಿ ಕೆಲಸಕ್ಕೆ ಸೇರುವನು ಎಂದು ಅವರಪ್ಪ ಹಳ್ಳಿಲಿ ಬಾಡೂಟ ಹಾಕಿಸಿದ್ದರು. ದುರಾದೃಷ್ಟ, ವರ್ಷ ತುಂಬೋಕೆ ಒಂದು ವಾರವಿದೆ ಅನ್ನೋವಾಗ ಡೀಲ್ ಕೊಡಿಸಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ, ಅವನ ಏಜೆಂಟ್ ತಲೆಮರೆಸಿಕೊಂಡಿದ್ದ. ಹತ್ತು ಲಕ್ಷ ಕೈತಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ರವಿ ಅಪ್ಪ ಹೃದಯಾಘಾತದಿಂದ ಸತ್ತರು. ರವಿ ಅಪ್ಪ ಮಾಡಿದ್ದ ಸಾಲ ತೀರಿಸಲು ಹಳ್ಳಿಲ್ಲಿದ್ದ ಹೊಲ ಗದ್ದೆ ಮನೆ ಎಲ್ಲ ಮಾರಬೇಕಾಯಿತು. ಬರಿಗೈಯಲ್ಲಿ ಅಮ್ಮನ್ನನ್ನು ಕರಕೊಂಡು ಪಟ್ಟಣ್ಣಕ್ಕೆ ಬಂದ.

ಮತ್ತೆ ಒಂದು ವರ್ಷ ರವಿ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಸುತ್ತಾಡಿದ, ಸಿಕ್ಕ ಸಣ್ಣ ಪುಟ್ಟ ಕೆಲಸ ನೆಟ್ಟಗೆ ಮಾಡದೆ ಆಚೆ ದಬ್ಬಿಸಿಕೊಂಡು ವಾಪಸಾದ. ಮನೆಯಲ್ಲಿ ಯಾರ ಮಾತು ಕೇಳುತ್ತಿರಲ್ಲಿಲ್ಲ. ನಾನು ಕೊನೆ ವರ್ಷ ಡಿಗ್ರಿಲಿದ್ದೆ ಜೊತೆಗೆ ಸೀಮಾಳ ಸಲಹೆಯಂತೆ ಕಂಪ್ಯೂಟರ್ ಕೋರ್ಸ್ ಮಾಡ್ತಿದ್ದೆ. ಹಾಗಾಗಿ ರವಿ ಬಗ್ಗೆ ಹೆಚ್ಚಾಗಿ ಗಮನ ಹರಿಸಲು ಸಾಧ್ಯವಾಗಲ್ಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನನಗೆ ಅವನ ಮೇಲೆ ಪ್ರೀತಿಯೇ ಇರಲ್ಲಿಲ್ಲ. ಪ್ರೀತಿ ಎಂದರೇನು ಅಂತಲೇ ತಿಳಿಯದ ವಯಸ್ಸಲ್ಲಿ ಬರೀ ಆಕರ್ಷಣೆಗೆ ಒಳಗಾಗಿ ಅವನನ್ನು ಮದುವೆಯಾಗಿದ್ದೆ.

ನಾನು ಡಿಗ್ರಿ ಪಾಸಾದ ಕೂಡಲೇ ಕಂಪ್ಯೂಟರ್ ಕಲಿತಿದ್ದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಹತ್ತು ಸಾವಿರ ರೂಪಾಯಿ ಸಂಬಳ. ರವಿ ಸಂತೋಷಪಡುವ ಬದಲು ಅಸೂಯೆ ಪಟ್ಟ. ಸಣ್ಣ ಪುಟ್ಟ ವಿಷಯಗಳಿಗೂ ನನ್ನನ್ನು ಪ್ರಶ್ನಿಸುತ್ತಿದ್ದ ಮತ್ತು ಅನುಮಾನಿಸುತ್ತಿದ್ದ. ಮೂರು ವರ್ಷಗಳ ಕಾಲ ಅವನ್ನನ್ನು ಸಹಿಸಿದೆ. ಅದೇ ಸಮಯದಲ್ಲಿ ರವಿ ಅಮ್ಮ ಮತ್ತೆ ಸೋದರತ್ತೆ ಸತ್ತಿದ್ದರು. ಯಾವಾಗಲೂ ಜಗಳದಲ್ಲಿ ನನ್ನ ಪರವಾಗಿ ನಿಲ್ಲುತ್ತಿದ್ದ ಅವರಿಬ್ಬರೂ ಈಗಿಲ್ಲ. ಹಾಗಾಗಿ ಮನೆಯಲ್ಲಿ ನನ್ನ ಗೋಳು ಕೇಳೋರಿಲ್ಲದೆ ಆಯಿತು. ಒಂದೊಂದು ಪೈಸಕ್ಕೂ ರವಿ ನನ್ನ ಜೀವ ಹಿಂಡುತ್ತಿದ್ದ.


೩೧ / ೦೫ / ೨೦೧೧

ನನಗಾಗ ೨೪. ರವಿಯ ಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಮತ್ತು ಅವನ ಆರೋಗ್ಯ ತೀರ ಹದಗೆಟ್ಟಿತ್ತು. ಅವನನ್ನು ಕಂಡರೆ ಅಸಹ್ಯವಾಗಿ ವಾಕರಿಕೆ ಬರುತ್ತಿತ್ತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಅವನಿಗೆ ವಿವಾಹ ವಿಚ್ಚೇದನ ನೀಡಲು ತೀರ್ಮಾನಿಸಿ ಅರ್ಜಿ ಸಲ್ಲಿಸಿದೆ. ಕೋರ್ಟಿನಲ್ಲಿ ತೀರ್ಪು ನನ್ನ ಪರ ಬಂದು ನಾನು ರವಿಗೆ ವಿಚ್ಚೇದನ ನೀಡಿದ್ದು ಮೂವತ್ತೊಂದು  ಮೇ ಎರಡು ಸಾವಿರದ ಹನ್ನೊಂದು.

ಸ್ವ ಇಚ್ಚೆಯಿಂದ ದಾದಿ ಕೆಲಸಕ್ಕೆ ಸೇರಿದ್ದ ಸೀಮಾ, ರವಿಯನ್ನು ನೋಡಿಕೊಳ್ಳಲು ಒಪ್ಪಿಕೊಂಡಳು. ತಿಂಗಳಿಗೆ ಐದು ಸಾವಿರ ಕೊಡುತ್ತಿದ್ದೆ ಅವಳಿಗೆ. ಆಗಷ್ಟೇ ನನಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಮೂವತ್ತೆರಡು ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ಸೀಮಾಳಿಗೆ, ಕೂರಲು ಏಳಲು ಮತ್ತೊಬ್ಬರ ಸಹಾಯ ಬೇಕಿದ್ದ ರವಿಯ ಪೂರ್ತಿ ಜವಾಬ್ದಾರಿ ವಹಿಸಿ  ನಾನು ಬೆಂಗಳೂರಿಗೆ ಬಂದು ಬಿಟ್ಟೆ.


೩೧ / ೦೫ / ೨೦೧೩

ಇಲ್ಲಿ ಕೆಲಸಕ್ಕೆ ಸೇರಿ ೨ ವರ್ಷವಾಯಿತು. ನನ್ನ ಜೊತೆ ಅತಿ ಸಲುಗೆ ಬೆಳೆಸಿಕೊಂಡಿರೋ ಶಶಿಗೆ ನಾನು ಹೇಳಿರೋದು ಕೇವಲ ನನ್ನ ಊರು ಮತ್ತು ನಾನೊಬ್ಬ ಅನಾಥೆ ಅವಿವಾಹಿತೆ  ಎಂದಷ್ಟೇ. ಇವತ್ತು ರವಿ ಸತ್ತಿದ್ದಾನೆ. ಈಗಲಾದರೂ ಎಲ್ಲಾ ವಿಷಯಗಳನ್ನು ಶಶಿಗೆ ಹೇಳಲೇಬೇಕು. ನಾನು ಬರುತ್ತೇನೆ.

                                              *******************************

ಹೇಳೋದಾದ್ರೆ ಪೂರ್ತಿ ಹೇಳು, ನಿನ್ನ ಮನಸ್ಸಿಗೆ ಸಮಾಧಾನವಾಗತ್ತೆ ಅಂತ ನಾನು ಕೇಳ್ತಾ ಇದ್ದೀನಿ, ಅದು ಅಲ್ದೆ ತಲೆಲ್ ಹುಳ ಬಿಟ್ಕೊಳಕ್ಕೆ ನನ್ ಕಥೆಗಳೇ ನಂಗೆ ಬೇಜಾನ್ ಇದೆ ಎಂದು ನಾನು ರಶ್ಮಿಗೆ ದಬಾಯಿಸಿದೆ.

ರಶ್ಮಿ ಮತ್ತೆ ಶುರು ಮಾಡಿದಳು... ರವಿ ಸತ್ತಿದ್ದು ಕ್ಯಾನ್ಸರ್ ಖಾಯಿಲೆಯಿಂದ. ಕ್ಯಾನ್ಸರ್ ಗೆ ಕಾರಣ ಆವ ನಾಕನೇ ಕ್ಲಾಸಿಂದಾನೆ ತಿನ್ನಲು ಶುರು ಮಾಡಿದ್ದ ಗುಟ್ಕಾ ಮತ್ತು ಹತ್ತನೇ ಕ್ಲಾಸಿಂದ ಶುರು ಮಾಡಿದ್ದ ಸಿಗರೇಟ್. ನಮ್ಮ ಮದುವೆಯಾದದ್ದು ೩೧ / ೦೩ / ೨೦೦೫. ಆ ದಿನ ಪಟ್ಟಣದ ಅವನ ಗೆಳೆಯರು ಮದುವೆಗೆ ವಿಶ್ ಮಾಡುವಾಗ ಹ್ಯಾಪಿ ಮ್ಯಾರೀಡ್ ಲೈಫ್ ಜೊತೆಗೆ ಹ್ಯಾಪಿ ಟೊಬ್ಯಾಕೊ ಡೇ ಮಗ ಅಂದಿದ್ದರು. ಅದೇನೆಂದು ನನಗಾಗ ಅರ್ಥ ಆಗಿರಲ್ಲಿಲ್ಲ. ಹತ್ತನೇ ಕ್ಲಾಸಲ್ಲಿ ಅವನು ಸಿಗರೇಟ್ ಸೇದುತ್ತಿದ್ದರೆ  ಸ್ವಲ್ಪ ದೂರದಲ್ಲಿ ಅವನಿಗೆ ಕಾಣದ ಹಾಗೆ ನಿಂತು ನನ್ನ ಗೆಳತಿಯರಿಗೆ ನಾನೇ ತೋರಿಸುತ್ತಿದ್ದೆ ನೋಡ್ರೆ ನಮ್ಮವರು ಹೇಗೆ ಹೊಗೆ ಬಿಡ್ತಾರೆ ಅಂತ.. ಆದ್ರೆ ಅದೇ ಅವನಿಗೆ ಹೊಗೆ ಹಾಕತ್ತೆ ಅಂತ ನನಗೆ ಗೊತ್ತಾದ ದಿನದಿಂದಲೂ ಅವನನ್ನು ಆ ಚಟದಿಂದ ದೂರಮಾಡಲು ಇನ್ನಿಲ್ಲದ ಪ್ರಯತ್ನಪಟ್ಟೆ. ನನ್ನ ಪ್ರಯತ್ನ ಸಫಲವಾಗಲ್ಲಿಲ್ಲ ಅವನು ಸತ್ತೇ ಹೋದ, ಈಗ ನನ್ನ ಪಾಲಿಗೆ ಉಳಿದಿರೋದು ಶಶಿ ಒಬ್ಬನೇ, ಅವನಿಗೆ ನಾನು ಎಲ್ಲವನ್ನು ಹೇಳಲೇ ಬೇಕು, ಬರ್ತೀನಿ ಎಂದು ನಡೆದೇ ಬಿಟ್ಟಳು.

೩೧ ಮೇ ೨೦೧೩ ರವಿ ಸತ್ತಿರೋದೆ ಒಂದು ವಿಶೇಷಾನ ಅಂತ ನೀವು ಯೋಚಿಸುತ್ತಿದ್ದರೆ, ಅಷ್ಟೇ ಅಲ್ಲ. ಕರ್ನಾಟಕ ಸರ್ಕಾರ ಅಂದಿನಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದೆ.

ಇಲ್ಲಿಗೆ ರಶ್ಮಿ ಹೇಳಿದ ಅವಳ  'ಗುಟ್ 'ಕಾ ಕಥೆ ಮತ್ತು ರವಿಯ ಗುಟ್ಕಾ ಕಥೆ ಮುಗಿಯಿತು. ಬರೆದದ್ದಕ್ಕೆ ನನಗೂ ಓದಿದ್ದಕ್ಕೆ ನಿಮಗೂ ಆಕೆ ಧನ್ಯವಾದ ತಿಳಿಸಿದ್ದಾಳೆ.

                                                     *****************************